ಸಾಂಪ್ರದಾಯಿಕ ಹಾವಸೆಯನ್ನು ಕಿತ್ತೆಸೆದ -ಸ್ತ್ರೀ ವಾದಿ -ಕಮಲಾದಾಸ: ನಾಗರೇಖಾ ಗಾಂವಕರ

“You turn me into a bird of stone
A granite dove,
You build round me a shabby drawing room
And stroke my face absentmindedly while you read”

ಇದು ಕಮಲಾದಾಸರ ‘The Stone age’ ಕವಿತೆಯಲ್ಲಿನ ಸಾಲುಗಳು. ಈ ಕವಿತೆಗೂ ಪಾಕಿಸ್ತಾನಿ ಕವಯತ್ರಿ Kishwar Naheed’ರ ‘ Iam not that Woman’ ಕವಿತೆಗೂ ಸಾಮ್ಯತೆ ಇದೆ.ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿಯನ್ನು ಬಣ್ಣಿಸುವ ಕಮಲಾದಾಸ ಪುರುಷನ ದೌರ್ಜನ್ಯವನ್ನು ಖಂಡಿಸುತ್ತಾರೆ. ಸಾಂಪ್ರದಾಯಿಕ, ಪಟ್ಟಭದ್ರ, ಸಂಕುಚಿತ ಮನೋಭಾವದ, ಪುರುಷ ಪ್ರಾತಿನಿಧ್ಯ ಇತ್ಯಾದಿ ಹಿನ್ನೆಲೆ ಹೊಂದಿರುವ ಭಾರತದಂತಹ ವ್ಯವಸ್ಥೆಗೆ ಕೆಲವು ವಿಚಾರಗಳಲ್ಲಿ ಆಧುನಿಕತೆ ಜೀರ್ಣಿಸಿಕೊಳ್ಳಲಾಗದ ಸಂಗತಿ.ಹಾಗೆಂದು ಆಧುನಿಕತೆ ಎಂದರೆ ಸ್ವೇಚ್ಛೆಯಿಂದ ಬದುಕುವುದು ಎಂದಲ್ಲ.ಇನ್ನು ಹೆಣ್ಣಿನ ವಿಷಯಕ್ಕೆ ಬಂದರೆ ಹೆಣ್ಣು ಸೋಷಿಯಲ್ಲಾಗಿ ವ್ಯವಸ್ಥೆಗೆ ತೆರೆದುಕೊಂಡರೆ ಅದನ್ನು ತಪ್ಪೆಂದು ಸಾಂಪ್ರದಾಯಿಕರು ಭಾವಿಸುವುದು, ಸ್ರ್ತೀವಾದಿಗಳು ಅದನ್ನು ಸಮಕಾಲೀನ ಜಗತ್ತಿನ ವಾಸ್ತವತೆ ಎಂದು ಸಮರ್ಥಿಸುವುದು ಸಾಮಾನ್ಯ.

ಕಮಲಾದಾಸರ ‘Introduction’ಕವಿತೆ ಅಪೂರ್ವ ನಿರೂಪಣೆ ಎಂದೇ ಹೇಳಬೇಕು. ಅದು ವಿವರಣಾತ್ಮಕ ಕವನವಲ್ಲ. ಯಾವುದೇ ಒಂದು ಘಟನೆಗೆ ಸೀಮಿತವಲ್ಲ. ಬದಲಿಗೆ ಸಂಕೀರ್ಣವಾದ ವಿವರಗಳನ್ನು ನೀಡುತ್ತ ಹೋಗುತ್ತದೆ. ಮಲಬಾರಿನ ಕಪ್ಪು ಹೆಣ್ಣಿನ ಪರಿಚಯದೊಂದಿಗೆ ಕವನ ಪುಟಿಯುತ್ತದೆ.ಆಕೆಗೆ ಮೂರು ಭಾಷೆಗಳು ಗೊತ್ತು. ಎರಡರಲ್ಲಿ ಬರೆಯಬಲ್ಲಳು.ಆದರೆ ಕನಸು ಕಾಣಲು ಮಾತ್ರ ಒಂದೇ ಒಂದು ಭಾಷೆಯಲ್ಲಿ ಆಕೆಗೆ ಸಾಧ್ಯ. ಇಂಗ್ಲೀಷ ಆಕೆಯ ಮಾತೃಭಾಷೆಯಲ್ಲ. ಆದರೆ ಕಾಗೆಗೆ ಕೂಗಲು, ಸಿಂಗಕ್ಕೆ ಗರ್ಜಿಸಲು ಬರುವಷ್ಟೇ ಸರಳವಾಗಿ ಆಕೆ ಇಂಗ್ಲೀಷನಲ್ಲಿ ಬರೆಯಬಲ್ಲಳು. ಅದಕ್ಕೆಂದೆ ಆಕೆ ಹೇಳುತ್ತಾಳೆ. “The language I speak/ Becomes mine”

ಮುಂದಿನ ಹಂತದಲ್ಲಿ ಕವಿಯತ್ರಿಯ ಪ್ರಾಯ ಸಹಜವಾದ ದೈಹಿಕ ಬೆಳವಣಿಗೆಗಳು ಆಕೆಯ ಮುಗ್ಧತೆಯ ಸ್ಥಾನವನ್ನು ಹೆಣ್ತನದ ಅನುಭವಗಳು ಆಕ್ರಮಿಸಿಕೊಳ್ಳತೊಡಗುತ್ತವೆ ಎನ್ನುವಲ್ಲಿ ಯಾವ ಭಿಡೆಯಿಲ್ಲದೇ ವ್ಯಕ್ತಗೊಳಿಸುವ ಪರಿ ಅನನ್ಯ.ಆದರೆ ಆಕೆ ಹೆಣ್ಣಾಗಿ ಅದರ ಇತಿಮಿತಿಗಳು ಅನಾನುಕುಲತೆಗಳಿಂದ ಹೊರಬರುವ ಪ್ರಯತ್ನದಲ್ಲಿದ್ದಾಗಲೇ ಆಕೆಗೆ ಮನೆವಾಳ್ತೆಯ ಗೃಹಿಣಿ ಪಟ್ಟ ಕಟ್ಟಿ ಸ್ನೇಹಿತರು ಸಂಬಂಧಿಗಳು ಹರ್ಷಿಸುತ್ತಾರೆ. ಆದರೆ ಆಕೆಯಲ್ಲಿ ಗುಪ್ತಗಾಮಿನಿಯಾಗಿರುವ’ ‘Tomboy’ ವ್ಯಕ್ತಿತ್ವದಿಂದ ಆಕೆ ತನ್ನ ದೈಹಿಕ ಚರ್ಯೆಗಳನ್ನು ಹುಡುಗನೊಂದಿಗೆ ಹೋಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಎಲ್ಲೋ ಒಂದೆಡೆ ಕೀಳಿರಿಮೆ ಆಕೆಗೆ ಕಾಡುತ್ತದೆ.ಹೆಣ್ಣು ಎಂಬ ಕಾರಣಕ್ಕೆ ಸಮಾಜ ವಿಧಿಸುವ ಲಿಂಗಾಧಾರಿತ ಕಟ್ಟಳೆಗಳು ಮದುವೆ ಎಂಬ ಬಂಧನದಿಂದ ಒದಗಿ ಬರುವ stereotyped ಸಹವರ್ತಿ ಗೃಹಿಣಿ ಪಾತ್ರವನ್ನು ಆಡಲು ಆಕೆ ಧಿಕ್ಕರಿಸುತ್ತಾಳೆ. ಭಾರತೀಯ ಪರಂಪರೆಯಲ್ಲಿ ಮದುವೆ ಪಾಶ್ಚಾತ್ಯರಂತೆ ಒಂದು ಒಪ್ಪಂದವಲ್ಲ. ಬದಲಿಗೆ ಅನುಬಂಧವೆನ್ನುತ್ತದೆ ನಮ್ಮ ಸಂಸ್ಕøತಿ. ಆದರೆ ಈ ಸಂಸ್ಕøತಿಯ ಹೆಸರಿನಲ್ಲಿ ಸ್ತ್ರೀಯ ಯೋಗ್ಯತೆ,ಅರ್ಹತೆಗಳು ಧಮನಿಸಲ್ಪಡುತ್ತವೆ.ಅದನ್ನು ಕಠೋರವಾಗಿ ವಿರೋಧಿಸುವ ಕವನ ಇದಾಗಿದೆ. ‘Substitute’ಕವನದಲ್ಲಿ ಸ್ತ್ರೀ ಪುರುಷರಸಮಾಗಮ ನೈಸರ್ಗಿಕ ವಾಂಛೆ. ಸ್ತ್ರೀ ಪುರುಷನ ನಡುವಿನ ಹಿತಕರವಾದ ಬಂಧ ಲೈಂಗಿಕ ಸಂಪರ್ಕಕ್ಕೆ ದಾರಿಯಾಗುತ್ತದೆ. ಹೀಗಿದ್ದರೂ ಬದುಕು ಯಾಂತ್ರಿಕ ಏಕತಾನತೆಯ ಅನುಭವಗಳ ಯಾತ್ರೆ ಎಂಬುದನ್ನು ಕವನಿಸಿದ್ದಾರೆ.

ಸಾಮರಸ್ಯದ ದಾಂಪತ್ಯದ ಪೋಸು ಕೊಡುತ್ತ ಮುಖವಾಡದ ಬದುಕು ದೂಡುತ್ತ ತನ್ನಲ್ಲೇ ಸಾಯುವ ಪತ್ನಿ ಪಾತ್ರಧಾರಳ ಚಿತ್ರಣ ಅಪೂರ್ವವಾಗಿ ಕಟ್ಟಿಕೊಡುತ್ತಾರೆ ‘Suicide’ಕವನದಲ್ಲಿ. “After my illness” ವಿಶಾಲ ವ್ಯಾಪ್ತಿಯಲ್ಲಿ ಹರಡಿದ ಸಣ್ಣ ಕವನ.ಕವಯತ್ರಿ ತನ್ನ ಅನಾರೋಗ್ಯದ ದಿನಗಳ ಮೆಲಕು ಹಾಕುತ್ತಾಳೆ.ತನ್ನ ಅನಾರೋಗ್ಯದ ದಿನಗಳಲ್ಲಿ ಗಂಡನ ಭಾವನಾತ್ಮಕ ಸ್ಪಂದನೆ ತನ್ನ ದೈಹಿಕ ಅಸಮರ್ಥತೆಯ ನಡುವೆಯೂ ಆತ ತೋರುವ ಆದರ ಪ್ರೀತಿಗೆ ಆಕೆ ಆಶ್ಚರ್ಯ ಪಡುತ್ತಾಳೆ. ಆಕೆಯ ಉನ್ಮತ್ತ ದೇಹದ ಅನುಪಸ್ಥಿತಿಯಲ್ಲಿ ಗಂಡನ ಯೋಚನೆಗಳ ಬಗ್ಗೆ ಚಿಂತಿಸುವ ಆಕೆ ತನ್ನ ದೇಹ ಇನ್ನೂ ಆ ಆಕಾಂಕ್ಷೆಯಿಂದ ಹೊರಬಂದಿಲ್ಲವೇ? ಇದು ಬರೀಯ ದೈಹಿಕ ಪ್ರೀತಿಯೇ? ಅಥವಾ ಆತ್ಮದ ನಿರೀಕ್ಷೆಯೆ? ಎಂಬ ಪ್ರಶ್ನೆಯೊಂದಿಗೆ ಕವನ ಮುಗಿಯುತ್ತದೆ. ದೇಹ ಅಸಮರ್ಥವಾದಾಗಲೂ ಮನಸ್ಸಿನ ವ್ಯಾಪಾರಗಳ ಒಂದು ಅದ್ಬುತ ಅವಲೋಕನದಂತಿದೆ ಕವನ.

ಪ್ರೇಮ ಕಾಮಗಳ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಹಿಂಜರಿಯುವ ಇಂದಿಗೂ ಮುಜುಗರಕ್ಕೆ ಈಡಾಗುವ ಪ್ರತಿಭೆ, ಸಾಮಥ್ರ್ಯ ಎಲ್ಲವೂ ಇದ್ದಾಗಲೂ ಹೆದರಿಕೂರುವ ಶಿಕ್ಷಿತ ವರ್ಗದ ಮಹಿಳೆಯರು ನಾವು.ಆದರೆ ಕಮಲಾದಾಸರ ಹಲವಾರು ಕವನಗಳು ಪ್ರೇಮ ಕಾಮದ ವಿಷಯವಸ್ತುವನ್ನು ಮೂಲವಾಗಿಟ್ಟುಕೊಂಡೆ ಓದುಗರನ್ನು ಆಕರ್ಷಿಸುತ್ತವೆ. ಅದು ಸ್ತ್ರೀವಾದಿ ದೋರಣೆಯ ಬಹುಜನರ ಆದ್ಯತೆಯ ಕೂಡ. ‘The freaks’, ‘The looking grass’, ‘guno’ ಇತ್ಯಾದಿ ಕವಿತೆಗಳು ಇದರ ಮೇಲೆ ಹೆಣೆಯಲ್ಪಟ್ಟಿವೆ. ‘My grand mother’s house, Nani ಬಾಲ್ಯ ಮತ್ತು ಯೌವನದ ಹೊಸ್ತಿಲಲ್ಲಿ ಆಗುವ ಅನಾಹುತಗಳ ಪರಿಚಯವನ್ನು ಬಿಂಬಿಸಿವೆ. ‘An Introduction’, Someone else’s song’ ಕೌಟಂಬಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ಭಾರತೀಯ ಸ್ತ್ರೀಯ ಪಾತ್ರ, ಜವಾಬ್ದಾರಿಗಳನ್ನು ಪರಿಚಯಿಸುತ್ತವೆ. ಕೌಟಂಬಿಕ ಮತ್ತು ದೈಹಿಕ ದಬ್ಬಾಳಿಕೆಗಳ ವಿರುದ್ಧ ದಂಗೆ ಎದ್ದ ಇವರ 20 ಕ್ಕೂ ಹೆಚ್ಚು ಪುಸ್ತಕಗಳು ಲೈಂಗಿಕ ಬಯಕೆಗಳ ತೀವೃ ತುಡಿತ ಹಾಗೂ ದಾಂಪತ್ಯದ ಬಿರುಕುಗಳ ಮೇಲೆ ರಚಿಸಲ್ಪಟ್ಟಿವೆ. ಕಮಲಾರ ಪುಸ್ತಕಗಳು ಅವರಿಗೆ ಗೌರವದ ಜೊತೆಗೆ ಧಿಕ್ಕಾರವನ್ನೂ ದಕ್ಕಿಸಿಕೊಟ್ಟಿದ್ದವು ಎಂಬುದನ್ನು ಅರಗಿಸಿಕೊಳ್ಳುವುದು ಭಾರತೀಯರಾದ ನಮಗೆ ಅಸಾಧ್ಯವೇನೂ ಅಲ್ಲ.ಸ್ವಂತ ಬದುಕಿನಲ್ಲೂ ಬಂಡಾಯದ ಕಹಳೆಯನ್ನೆ ಊದಿದ ಕಮಲಾದಾಸ ದಾಂಪತ್ಯದ ಹೊರತಾಗಿಯೂ ಸಂಬಂಧಗಳ ಹೊಂದಿದ್ದು ನೈತಿಕತೆ ಕಟ್ಟುಪಾಡುಗಳ ಸಂಸ್ಕøತಿಗೆ ಬಹುದೊಡ್ಡ ಸವಾಲಾಗಿದ್ದರು.

ಹೆಸರಾಂತ ಮಳಿಯಾಳಿ ಕವಿಯತ್ರಿ ಬಾಲಮಣಿ ಅಮ್ಮ ಅವರ ಮಗಳಾದ ಕಮಲಾ ದಾಸ ಕೇರಳದ ತ್ರೀಶೂರ್‍ನಲ್ಲಿ ಮಾರ್ಚ 31, 1934ರಲ್ಲಿ ಜನಿಸಿದರು. 17ನೇ ವಯಸ್ಸಿಗೆ ಸಂಬಂಧಿ ದಾಸರನ್ನು ಮದುವೆಯಾದ ಕಮಲಾರ ದಾಂಪತ್ಯ ಸುಖಕರವಾಗಿರಲಿಲ್ಲ. ಅಪ್ರಬುದ್ಧತೆಯಲ್ಲಿ ತಾಯಿಯಾಗಿ ಕೊನೆಗೆ ಸ್ತ್ರೀ ಸಂವೇದನೆಯ ಕವನಗಳಿಂದಲೇ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವರ್ತುಲವನ್ನು ನಿರ್ಮಿಸಿಕೊಂಡು ಅಂತರಾಷ್ಟ್ರೀಯ ಸೆಲೆಬ್ರೀಟಿಯಾಗಿ ಮಿಂಚದ ಹೆಗ್ಗಳಿಕೆ ಕಮಲಾದಾಸರದು. ಭಾಷೆಯ ಬಳಕೆಯಲ್ಲೂ ವಿಷಯದ ಅಭಿವ್ಯಕ್ತಿಯಲ್ಲೂ ಅದ್ವಿತೀಯ ಮೊನಚುತನ ಕಮಲಾದಾಸರದು. 19ನೇಶತಮಾನಕ್ಕೆ ರೊಮ್ಯಾಂಟಿಕ ಸಂಪ್ರದಾಯಕ್ಕೆ ಭಿನ್ನವಾದ ರೀತಿಯಲ್ಲಿ ಕಾವ್ಯ ಅವರಿಗೆ ಒಲಿದಿತ್ತು. 1999ರಲ್ಲಿ ಇಸ್ಲಾಂಗೆ ಮತಾಂತರಗೊಂಡ ಕಮಲಾದಾಸ 2009 ಮೇ 31ರಂದು ಪುಣಾದಲ್ಲಿ ನಿಧನರಾದರು.

ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x