ಸವಿ ನೆನಪುಗಳ ಪ್ರಥಮ ಮಿಲನಗಳ ಮೀರುವುದ್ಹೇಗೆ: ಷಡಕ್ಷರಿ ತರಬೇನಹಳ್ಳಿ


ಶಾಲೆಯ ಮೆಟ್ಟಿಲು ತುಳಿದ ಮೊದಲ ದಿನ ಇನ್ನೂ ನೆನಪಿದೆ. ನನ್ನನ್ನು ತನ್ನ ಬುಜದ ಮೇಲೊತ್ತು ಜೇಬು ತುಂಬಾ ಚಾಕಲೇಟು ತುಂಬಿಕೊಂಡು ಶಾಲೆಗೆ ಬಿಡುವ ಮುನ್ನ ನನ್ನ ಸೋದರ ಮಾವ ಹೇಳಿದ ಮಾತು ಮರೆಯದಂತೆ ನೆನಪಿದೆ. “ಸಾರ್ ನಮ್ಮುಡುಗನಿಗೆ ಯಾವ ಕಾರಣಕ್ಕೂ ಹೊಡೆಯಬೇಡಿ. ಅವನು ಮನೆಗೆ ಹೋಗಲು ಹಠ ಹಿಡಿದರೆ ತಗೊಳ್ಳೀ ಈ ಚಾಕಲೇಟ್ ಅವನಿಗೆ ಕೊಡಿ. ಆಯ್ತೇನೋ ಬಾಬು, ನೀನು ಹೇಳಿದಂತೆಯೇ ಇವರಿಗೆ ಹೇಳಿದ್ದೀನಿ. ಸರೀನಾ ಇವತ್ತಿನಿಂದ ನೀನು ಬೆಳಗೆಲ್ಲಾ ಇಲ್ಲೇ ಇರಬೇಕು ಗೊತ್ತಾಯ್ತಾ? ಆಗಲಿ ಎಂದು ತಲೆಯಾಡಿಸಿದ ನನ್ನನ್ನು ಮಾವನು ನೆಲಕ್ಕಿಳಿಸಿದ್ದೇ ತಡ, ನಾನು ನಾಗಾಲೋಟದಿಂದ ಓಡಿ ಮನೆ ಸೇರಿದ್ದೆ. ಆ ಓಟ ನಾನು ಈಗಲೂ ಓಡುವ ಮುನ್ನ ಒಮ್ಮೆ ನೆನಪಿಸದೇ ಇರಲು ಹೇಗೆ ಸಾಧ್ಯ?

****

ಬುದ್ದಿ ಬೆಳೆದಂತೆ ಶಾಲೆ ನನಗೆ ಇಷ್ಟವಾಗ ತೊಡಗಿತ್ತು. ಶಾಲೆಯಲ್ಲಿ ಚೆನ್ನಾಗಿ ಓದುತ್ತಾ, ಎಲ್ಲರನ್ನೂ ಇಷ್ಟಪಡುವ ನಾನು ಸಹಜವಾಗಿ ಗುರುಗಳ ಪ್ರೀತಿಗೆ ಪಾತ್ರನಾಗಿ ಮಾನಿಟರ್ ಆಗಿದ್ದೆ.  ಗುರುಗಳು ಬೇರೆ ಕೆಲಸದಲ್ಲಿ ತೊಡಗಿಕೊಂಡಾಗ ನನ್ನ ಸಹಪಾಠಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿರುತ್ತಿತ್ತು. ಗಲಾಟೆ ಮಾಡಿದವರ ಹೆಸರು ಕಪ್ಪು ಹಲಗೆಯ ಮೇಲೆ ಬರೆಯುವ ಜವಾಬ್ದಾರಿ ನನಗಿದ್ದ ಕಾರಣಕ್ಕೆ ಗೆಳೆಯ/ಗೆಳತಿಯರೂ ನನಗೆ ಇನ್ನೂ ಹೆಚ್ಚು ಹೆಚ್ಚು ಪ್ರೀತಿ ವ್ಯಕ್ತಪಡಿಸುವುದರ ಪೈಪೋಟಿಗಿಳಿದಿದ್ದರು. 

ಅದೇ ಕಾರಣಕ್ಕೋ ಅಥವಾ ಅವನು ನನ್ನನ್ನು ತುಂಬಾ ಹಚ್ಚಿಕೊಂಡಿದ್ದಕ್ಕೋ ನಮ್ಮೂರಿನ ಗುಡ್ಡದಿಂದ ಬರುತ್ತಿದ್ದ ನಾಯಕನೆಂಬ ಗೆಳೆಯ ಅವನ ಬ್ಯಾಗಿನ ತುಂಬಾ ನನಗಾಗಿ ಗುಡ್ಡದ ಹಣ್ಣು ತರುತ್ತಿದ್ದ. ಆ ಹಣ್ಣುಗಳನ್ನು ಶಬರಿಯ  ರಾಮನ ಮೀಸಲಿನಂತೆ ನನಗೇ ಅರ್ಪಿಸುತ್ತಿದ್ದ. ಮೊನ್ನೆ ಪೊನ್ ಮಾಡಿದ್ದ, “ನಮ್ಮದೇ ಜಿಲ್ಲೆಗೆ ಜಿಲ್ಲಾ ಮ್ಯಾಜಿಸ್ಟರೇಟ್ ಆದೆ ಕಣಯ್ಯಾ, ನಿನಗೇ ನನ್ನ ಮೊದಲ ಸಂತೊಷದ ಕರೆ. ಅವಳಿಗಿನ್ನೂ ಪೋನ್ ಮಾಡಿಲ್ಲಾ ಆಮೇಲೆ ಎಲ್ಲಾ ವಿವರವಾಗಿ ಮಾಡ್ತಿನಿ ಆಯ್ತಾ? ಓಕೆ, ಬೈ” ಎಂದ ನಮ್ಮಿಬ್ಬರ ಬಾಲ್ಯದ ಗೆಳೆತನದ ಸಾಕ್ಷಿಗಲ್ಲಿನಂತಿರುವ ನಾಯಕನ ಅದೇ ನೈಜ ಪ್ರೀತಿಯ ಸೊಗಡಿನ ಹಣ್ಣುಗಳ ರುಚಿಯ ಹೇಗೆ ಮರೆಯಲಿ. 

****

ನನ್ನ ಸುತ್ತಮುತ್ತ ಬೆಳಗು ಸಂಜೆಯಾದರೆ  ಲಾಠಿ ತಿರುವುತ್ತಾ ಪಾಠ ಹೇಳಿಕೊಡುತ್ತೀವಿ ನಮ್ಮ ಜೊತೆ ಸೇರು ಎಂದು ಕೆಲವರು ಅರ್ದಂಬರ್ಧ ಇದ್ದು ಯಾವಾಗಲೂ ನಿಗುರಿ ನಿಂತ ಇಸ್ತರೀ ಮಾಡಿದ ಚಡ್ಡಿ ಧರಿಸಿ ನಮ್ಮೂರಿಗೆ ಬಂದಿದ್ದರು. ಭಾರತೀಯರಾದವರೆಲ್ಲರೂ ನಮ್ಮ ಜೊತೆ ಸೇರಬೇಕು ಎಂದು ತಲೆಸವರಿ ನಮ್ಮಪ್ಪನ ಒಪ್ಪಿಸಿ ಅವರ ಸಂಘಕ್ಕೆ ಸೇರಿಸಿಕೊಂಡಿದ್ದರು. ನಾನೂ ಒಂದು ದಿನವೂ ತಪ್ಪದೇ ಅವರು ಹೇಳಿಕೊಟ್ಟಿದ್ದನ್ನೆಲ್ಲಾ ಫಟಿಸುತ್ತಿದ್ದೆ ಮತ್ತು ತಪ್ಪದೇ ಪಾಲಿಸುತ್ತಿದ್ದೆ. ಆದರೆ ಆಗಲೇ ಮೀಸೆ ಮೂಡಿದ್ದ ನನಗೆ ಸಾಬರ ಹುಡುಗಿ ಶಮ್ಮಿ ತುಂಬಾ ಇಷ್ಟವಾಗಿದ್ದಳು. ಮದುವೆಯಾಗುವುದಾದರೆ ಅವಳನ್ನೇ ಎಂಬ ಕನಸು ಕಂಡಿದ್ದೆ. 

ಅವಳೂ ದಿನಾಲೂ ಅವಳ 12 ಜನ ಅಣ್ಣಂದಿರ ಕಣ್ಣು ತಪ್ಪಿಸಿ, ನನ್ನನ್ನು ನೋಡಲೋಸುಗವೇ ಅದೇ ಸಂಘಟನೆಯ ತರಬೇತಿಯ ಗ್ರೌಂಡಿನ ಬಳಿಗೆ ಕೈಪಂಪಿನ ಸಿಹಿ ನೀರು ತರಲು ಬರುತ್ತಿದ್ದುದು ನೆನಪಿದೆ.  ನಮ್ಮಿಬ್ಬರ ಕಣ್ಣು ಸಂಧಿಸುವುದನ್ನು ಗಮನಿಸಿದ ಆ ಗುರುವೆನಿಸಿಕೊಂಡಿದ್ದವ ನನಗೆ ಹೇಳಿಕೊಟ್ಟ ಮಾತು ಕೇಳದ ನಾನು, ಅವನನ್ನು ಅಪ್ಪನ ಸಹಕಾರದಿಂದ ಊರು ಬಿಡಿಸುವಂತೆ ಮಾಡಿತ್ತು. ಆ ಅಧಮ ನನ್ನ ಪ್ರೀತಿಯ ಕೊಲೆಗೆ ಪಣತೊಟ್ಟವನಂತೆ ಆ ಸಾಬರ ಕುಟುಂಬವೇ ನಮ್ಮೂರು ಬಿಟ್ಟು ಅವರ ತವರು ಕೇರಳಕ್ಕೆ ಹೋಗುವಂತೆ ಮಾಡಿದ್ದನ್ನು ನಾನು ಹೇಗೆ ಮರೆಯಲಿ. ಅವಳ ಕಪ್ಪು ಬುರ್ಕಾದ ಹಿಂದಿನ ಸುಂದರ ನಯನದ ಮೊನಚಾದ ಕಣ್ಣೋಟದ ಇಂದಿಗೂ ಚುಚ್ಚುವ ನೆನಪುಗಳನ್ನೂ.

****

ನನ್ನ ಮನೆಯ ಮುಂದಿನ ಲಲಿತಕ್ಕ ನಾನು ಬೆಲ್ಲ ತಿನ್ನೋ ಚಟದ ಬಗ್ಗೆ ಅಮ್ಮನಿಂದ ಕೇಳಿ ತಿಳಿದಿದ್ದಳು. ನನಗಾಗಿ ಅವಳು ಮದುವೆಯಾಗಿ ಹೋಗೋತನಕ ಒಂದು ದಿನವೂ ತಪ್ಪದೇ ಬೆಲ್ಲ ಕೊಟ್ಟಿದ್ದಳು. ಅದಕ್ಕಾಗಿ ಅವಳು ದಿನವೂ ಪೂಜಿಸುತ್ತಿದ್ದ ದೇವರಿಗೆ ನೈವೇದ್ಯಕ್ಕಿಡುವ ಬೇರೆ ಫಲಗಳಿಗೆ ಬದಲಾಗಿ ನನಗಾಗಿ ಅಂಗಡಿಯಿಂದ ಬೆಲ್ಲ ತರಿಸಿದ್ದಳು. ಪೂಜೆ ಮಾಡಿ ಮುಗಿದ ತಕ್ಷಣ ನನ್ನನ್ನು ಕರೆದು ಎಲ್ಲರ ಕಣ್ಣು ತಪ್ಪಿಸಿ ಬಾಯಲ್ಲಿ ಬೆಲ್ಲ ತುರುಕಿ ಓಡಲು ಹೇಳುತ್ತಿದ್ದುದನ್ನು ಮರೆಯಲಿ ಹೇಗೆ. ಅವಳು ಮದುವೆಯಾದ ಕೊನೆ ದಿನ ನನಗೆ ಅದೇ ಬೆಲ್ಲದಿಂದಲೇ ಮಾಡಿದ್ದ ಗಟ್ಟಿ ಅಕ್ಕಿ ಪಾಯಸ ಬಡಿಸಿ ಕಣ್ತುಂಬಾ ಕಣ್ಣೀರು ತುಂಬಿಕೊಂಡಿದ್ದನ್ನು ಇನ್ನೂ ಅಳಿಸಲಾಗಿಲ್ಲ.

****

ಅವಳಿಗೆ ನನ್ನ ಮೇಲೆ ಅದೇಕೋ ಕಾಣೆ ಆ ಹುಚ್ಚು ಪ್ರೀತಿ. ನಾನೆಂದಾದರೂ ನನ್ನ ಕೆಲಸದ ಒತ್ತಡದ ನಿಮಿತ್ತ ಕಾಲೇಜಿಗೆ ಹೋಗದಿದ್ದರೆ, ನನಗಾಗಿ ದ್ವಿಪ್ರತಿ ಬರೆದಿರುತ್ತಿದ್ದಳು. “ಇಂದಾದರೂ ಬರುತ್ತೀಯೋ ಇಲ್ಲವೋ ಎಂಬ ಅನುಮಾನದಲ್ಲೇ ನಿನಗಾಗಿ ನೋಟ್ಸ್ ಬರೆಯಲು ರೆಡಿಯಾಗುತ್ತಿದ್ದೆ ಅಷ್ಟರಲ್ಲಿ ನಿನ್ನ ಗಾಡಿಯ ಸದ್ದು ಕೇಳಿ ಮುಚ್ಚಿಟ್ಟೆ ನೋಡಿಲ್ಲಿ” ಎಂದು ನನಗಾಗಿ ಅವಳು ಬರೆದ ನೋಟ್ಸ್ ತಲುಪಿಸುತ್ತಿದ್ದಳು. ಮನೆಯಲ್ಲಿ ತೆಗೆದು ಓದಲು ಕುಳಿತರೆ ಪುಟದ ಮೊದಲ ಸಾಲೇ ಅವಳ ಹೆಸರು ಮತ್ತು ಅದರ ಜೊತೆ ಸೇರಿರುವ ನನ್ನ ಚೋಟುದ್ದ ಹೆಸರಿನ ಜೋಡಿ ಪದ ಕಣ್ಣು ಸೆಳೆಯುತ್ತಿತ್ತು. 
ಅದನ್ನ ಓದಿದ ಮೇಲೆ ಮುಂದಿನ ಪದಪುಂಜಗಳು ಮಂಜಾಗುತ್ತಿದ್ದವು. ಅದೇ ಜೋಡಿ ಪದದ ಮೇಲೆ ನಾನೂ ಮತ್ತೆ ಮತ್ತೆ ಬೇರೆ ಬಣ್ಣದ ಪೆನ್ನಿನಿಂದ ಸುತ್ತುತ್ತಿದ್ದೆ. ಸುತ್ತಾ ಚಿತ್ರ ಬಿಡಿಸುತ್ತಿದ್ದೆ. ಮತ್ತೆ ನಾಳೆ ಅವಳು ಮರೆಯದೇ ನನ್ನ ನೋಟ್ಸು ತೆಗೆದುಕೊಳ್ಳುತ್ತಿದ್ದಳು. ಮುಂದಿನ ದಿನ  ಅವಳ ಕೈಗೆ ಸಿಕ್ಕ ಅದೇ ಪದ ಮತ್ತಷ್ಟೂ ಬಣ್ಣಗಳೊಂದಿಗೆ ಅವಳ ಲಿಪ್ ಸ್ಟಿಕ್ ಬಣ್ಣದೊಂದಿಗೆ ಹೊಳೆಯುವ ಮಿನುಗಿನ ಅಂಚಿನೊಂದಿಗೆ ಅಲಂಕಾರಗೊಂಡಿರುತ್ತಿತ್ತು. ಒಮ್ಮೊಮ್ಮೆ  ಅವಳ ಸೆಂಟಿನ ಘಮಲು ಆ ಪದದ ಸುತ್ತಮುತ್ತಾ. 

ಒಮ್ಮೆ ಮನೆಗೆ ಹೋದಾಗ ಅಮ್ಮ ಅವರ ಹೊಸ ಉಂಗುರ ತೋರಿಸಿದರು. ಅದರಲ್ಲಿ “ಪೂರ್ಣ” ಎಂಬ ಅಕ್ಷರಗಳ ಕೆತ್ತನೆ ನನಗೆ ಎದ್ದು ಕಾಣಿಸಿತ್ತು. ನನ್ನ ಕಣ್ಣು ಮಿನುಗಲಾರಂಭಿಸಿದ್ದು ಕಂಡ ಅಮ್ಮ “ನಿನಗೂ ಮಾಡಲು ಆಚಾರಿಗೆ ಹೇಳಿದ್ದೇನೆ. ಅದರಲ್ಲಿ ನಿನ್ನ ಹೆಸರು ಏನೆಂದು ಬರೆಸಲಿ? ಎಂದರು. ಮರುಮಾತಾಡದೇ ತಿಳಿಸಿದ್ದೆ “ಷಡು”. ಮುಂದಿನ ಬಾರಿ ಕಾಲೇಜಿಗೆ ಆ ಉಂಗುರ ಧರಿಸಿ ಹೋದ ದಿನ ಅವಳ ಕಣ್ಣಲ್ಲೂ ಸಾವಿರ ಮಿಂಚು. ನಾನು ನನ್ನ ಬೆರಳು ಅವಳಿಗೆ ತೋರುವ ಮುನ್ನ ನನ್ನ ಕೈ ಹಿಡಿದ ಅವಳ  ಬೆರಳಲ್ಲಿ ಮಿಂಚುತ್ತಿತ್ತು ನಮ್ಮಿಬ್ಬರ ಅದೇ ಜೋಡಿಪದ ಕೆತ್ತಿದ್ದ ಪ್ಲಾಟಿನಮ್ ಉಂಗುರ. ಇದೇ ನಗರದಲ್ಲಿ ಕೇವಲ 80 ಎಕರೆ ಜಾಗ ಹೊಂದಿದ “ಅತೀ ಬಡವನ” ಅರಮನೆಯಂಥ ಮನೆಗೆ ಏಕೈಕ ಮಗಳೆಂಬ ಒಂದೇ ಕಾರಣಕ್ಕೆ, ನನ್ನ ಕುಟುಂಬಕ್ಕೂ ಒಬ್ಬನೇ ಮಗನಾದ ನಾನೇ ಅವಳ ಪ್ರೀತಿ ನಿರಾಕರಿಸಿ ದೂರ ಸರಿದ ನನ್ನದೇ ತಪ್ಪಿನ ಪ್ರಥಮವ ಹೇಗೆ ನೆನೆಯದಿರಲೀ.

**** 

ಅಂದು ನಾವಿಬ್ಬರೂ ಇನ್ನೂ ಅಷ್ಟು ಹತ್ತಿರವಾಗಿರಲೇ ಇಲ್ಲಾ. ನಾವಿಬ್ಬರೂ ನಮ್ಮ ನಮ್ಮ ಸಾಮಾಜಿಕ ಮಾನ ಮರ್ಯಾದೆಗಳಿಗಂಜುವ ಅತೀ ಕೆಟ್ಟ ಜನ ಬಳಸುವ ಹಳಸಲು ಪದಪುಂಜಗಳ ಬಳಕೆಯಲ್ಲೇ ಬಂಧಿಸಲ್ಪಟ್ಟಿದ್ದೆವು. ನನ್ನನ್ನು ನೀನು “ಸರ್” ಎಂದರೆ ನೀನು ನನಗೆ “ಅವರೇ” ಆಗಿದ್ದೆ. ಅಷ್ಟೆಲ್ಲಾ ಮಾತು ಕಥೆ ಚರ್ಚೆ ಕವನ ಕೀಟಲೆ ಎಲ್ಲಾ ಮಾಡುತ್ತಿದ್ದರೂ ಇಬ್ಬರೂ ಸಾಮಾಜಿಕ ಮರ್ಯಾದೆಯ ಪದ ಬಳಕೆಯ ರಾಮನ ತಮ್ಮನ ರೇಖೆಯ ಗಡಿ ದಾಟಿರಲಿಲ್ಲಾ. ಆಗಲೇ ನೋಡು ಬಂದಿತ್ತು ನಿನ್ನ ಪ್ರಥಮ ಮೆಸ್ಸೇಜ್. “ಜಾತ್ರೆಯಲ್ಲಿದ್ದೀನಿ ಕಣೋ ಮಸ್ತ್ ಗಮ್ಮತ್ತು ಗೊತ್ತಾ! ಈ ಪ್ರಥಮ ಪದವೇ ನಮ್ಮಿಬ್ಬರ ನಡುವಿನ ಎಲ್ಲಾ ಗಡಿ ರೇಖೆಗಳನ್ನು ಮುಂದೊಂದು ದಿನ ಗುರುತಿಸಲೂ ಸುಳಿವಿರದಂತೆ ಅಳಿಸಿ ಹಾಕಬಹುದೆಂಬ ಅದ್ಭುತ ಆ ಕ್ಷಣದ ಸತ್ಯವಾಗಿತ್ತು. ಈ ಪದ ಬಳಸಿದ ಮೊದಲ ಮಹಿಳೆ ನೀನಾದೆ. ಅದನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿ  ಅಂದು ಮತ್ತೊಮ್ಮೆ ಪ್ರೀತಿಯೆಂಬ ಮಾಯೆಯೊಬ್ಬಳ ಕಪಾಳ ಮೋಕ್ಷದ ಹೊಡೆತದ ಬಿರುಸಿಗೆ ಸತ್ತು, ಸ್ವರ್ಗವೋ, ನರಕವೋ ಸೇರಿದ ಆತ್ಮಸ್ಥ ಸುಖ ಪುರುಷ ನಾನಾದೆ.

ಹೀಗೆ ಬೆಳೆದ ನಮ್ಮಿಬ್ಬರ ನಡುವಿನ ಕತೆಗಾರ, ಕವಿಯ ನಮ್ಮಾತ್ಮವು ಸಾಮಾಜಿಕವಾಗಿ ಒಂದು ವ್ಯಕ್ತಿತ್ವದ ಗುರುತಿಸುವಿಕೆ ಬಯಸಿತ್ತು. ಆಗಲೂ ಅದರ ಗುರುತಿಸುವಿಕೆಯ, ಬಳಸುವ ಜವಾಬ್ದಾರಿ ನಿನ್ನದೇ ಆಗಿತ್ತು. ನಾನೂ ನೀನು ಹೇಳಿದ್ದಕ್ಕೆಲ್ಲಾ ಚಾಚೂ ತಪ್ಪದೇ ಮಾತೇ ಮರೆತವನಂತೆ ಒಪ್ಪಿದ್ದೆ. ಯಾಕಂದರೆ ನಿನ್ನ ಮಾತೇ ಮುತ್ತು, ಅದರ ಮತ್ತು ಘಮ್ಮತ್ತು ಬಿಟ್ಟರೆ ನನಗೇನು ಗೊತ್ತಿತ್ತು ನೀನೇ ಹೇಳು. ಹಾಗಾಗಿ “ರಿ” ಎಂಬ ನನ್ನನ್ನು, ನನ್ನೊಳಗಿನ ನಮ್ಮಿಬ್ಬರನ್ನು ಗುರುತಿಸಿ ಕರೆಯುವ ಶುಭ ಸಮಾರಂಭ ನಾವಿಬ್ಬರೂ ಇಟ್ಟು ಕೊಂಡಿದ್ದು ನೆನಪಿದೆ. ಅದೂ ನನ್ನ ಜೀವನದ ಪ್ರಥಮವೇ ಆಗಿದ್ದ ಅದರದ್ದೇ ತಪ್ಪಿಗೆ. ಅಂದಿನಿಂದ ನಾನು “ರಿ” ಆದೆ, ಆದರೆ ನೀನು ಆಗಾಗ್ಗೆ ನನ್ನನ್ನು ಉರಿಸಲು “ರೀ” ಎಂದು ಕರೆದಾಗ ಅವಳ ನೆನಪಾಗುತ್ತಿದ್ದುದು ಸುಳ್ಳಲ್ಲಾ!

****

ಮೊನ್ನೆ ತಾನೆ ಮರುಕಳಿಸಿದ ಆ ದಿನದ ನೆನಪಿಗೆ ನಾನು ಮತ್ತೊಂದು ಅತಿಯಾದ ಪ್ರೀತಿಯ ಉಸಿರುಗಟ್ಟಿಸುವ ತಪ್ಪು ಮಾಡಿಬಿಟ್ಟಿದ್ದೆ. ಅದು ನಿನಗೆ ಇಷ್ಟವಿಲ್ಲದ್ದು ಗೊತ್ತಿದ್ದರೂ ನಾನು  ಎಲ್ಲ ಮಿತಿಗಳ ಮೇರೆ ಮೀರಿದ್ದೆ. ನಾನಿರುವುದು ಹಾಗೆಯೇ ಅಲ್ವಾ? ನಿನಗೆ ಗೊತ್ತಿಲ್ಲದ ನನ್ನ ಮುಚ್ಚಿಟ್ಟ ಯಾವ ವಿಷಯವಾದರೂ ಇದ್ದೀತೆ ಈ ಭೂಮಿ ಮೇಲೆ. ನೀನು ಮಾತ್ರಾ ಯಾವಾಗಲೂ “ನಾನು ಹೇಗಿರುವೆನೋ ಹಾಗೇ ಸ್ವೀಕರಿಸು ಗೆಳೆಯಾ, ಒತ್ತಾಯಿಸದಿರು ಎಂದೆಂದಿಗೂ” ಎಂದರೂ ನಮ್ಮಿಬ್ಬರ ನಡುವೆ ಈ ಎಲ್ಲಾ ಗಡಿ, ರೇಖೆಗಳ ಕಟ್ಟು ಇಬ್ಬರೂ ಸಡಿಲಿಸಿದ್ದೇವೆ. ಮೇಲ್ನೋಟಕ್ಕೆ ಇಬ್ಬರೂ  ತಪ್ಪೆಸಗಿದಂತೆ ಕಂಡರೂ ನಾನೇ ಆ ಎಲ್ಲಾ ತಪ್ಪುಗಳ ಜವಾಬ್ದಾರಿ ಹೊರುತ್ತೇನೆ. ಯಾಕೆ ಗೊತ್ತಾ? ನನಗೆ ನೀನು ನಗುತ್ತಾ, ನಿನ್ನ ಇನ್ನುಳಿದ ಕೆಲವೇ ವರ್ಷಗಳ ಬದುಕು ಪೂರಾ ಖುಷಿಯಾಗಿರುವುದು ಮುಖ್ಯವೇ ಹೊರತು ಯಾವತ್ತೋ ಸತ್ತು ಸಮಾಧಿ ಸೇರಿ ಪ್ರೇತಾತ್ಮಗಳೊಂದಿಗೆ ಸುತ್ತುತ್ತಾ ಆತ್ಮಸ್ಥ ಸಂಭಂದ ಬೆಳೆಸಿ ಯಾವತ್ತೂ ಸುಖವಾಗಿರುವ ನನ್ನದಲ್ಲಾ. 

ನಮ್ಮಿಬ್ಬರ ನಡುವೆ ಈ ಸಮಾಜದ ಕೆಟ್ಟ ಕನ್ನಡಿಗಳ ನಿಜ ಪ್ರೀತಿಯ ತಿಂದು ತೇಗುವ ತೀರದ ಹಸಿವು ನೀಗಲು ನಡೆದ ನಮ್ಮಾತ್ಮಗಳ   ನರಬಲಿ, ಶಿಶುಹತ್ಯೆ, ಬ್ರಹ್ಮ ಹತ್ಯಾ ದೋಶವೋ ಏನೋ ಒಂದು ಅಥವಾ ಕಾನೂನಾತ್ಮಕವಾಗಿ ನಡೆದ ಕೊಲೆಯೋ? ನಡೆದೇ ಹೋಯಿತು. ಆಗ ನಮ್ಮಿಬ್ಬರ ನಡುವೆ ನಡೆದ ಪದ ಬಳಕೆಯ  “ಆ ಪದವೂ” ನನ್ನ ಜೀವನದ ಪ್ರಥಮವೇ. ನನ್ನ ಜೀವನದಲ್ಲಿ ಘಟಿಸಿದ ಎಲ್ಲಾ ಪ್ರಥಮಗಳ ಸುಂದರ ಅತಿಸುಂದರ ಅಸುಂದರವಾದದ್ದನ್ನೆಲ್ಲಾ ಮರೆಯದೆ ದಾಖಲಿಸಿಡುವ ನನ್ನ ಹುಟ್ಟು ಚಟಕ್ಕೆ ಆ ಪದ ಕೂಡಾ ಸೇರಿಕೊಂಡುಬಿಡ್ತು. 

ಈಗ “ಅದೇ ಪದ” ನನ್ನ ಫೇಸ್ ಬುಕ್ಕಿನ ಪಾಸ್ ವರ್ಡ್ ಆಗಿ ಮನಸಿನ ಎಲ್ಲ ಎಲ್ಲೆಗಳ ಮೇರೆ ಮೀರಿ ಮೆರೆಯುತ್ತಿದೆ. ಪ್ರತೀ ದಿನ ನಾನು ನಿನ್ನ ನೋಡಲು ಮಾತ್ರವೇ ಇರುವ ಏಕೈಕ ಕಿಟಕಿಯ ದಾರಿಗೆ ನನ್ನ ಬಳಿ ಇರುವ “ಆ ಸುಂದರ ಪದವನ್ನೇ” ಕೀಲಿ ಕೈಯಾಗಿರಿಸಿಕೊಂಡಿದ್ದೇನೆ. ನಮ್ಮಿಬ್ಬರ ಆ ಮಧುರ ನೆನಪಿನ ದಿನಗಳ ಪ್ರತೀ ಕ್ಷಣಗಳನ್ನೂ ಅಮರವಾಗಿಸಿದ ಆ “ಅತಿ ಸುಂದರ” ಪ್ರಥಮ ಪದವ ಹೇಗೆ ಕೈ ಬಿಡಲೀ ತಿಳಿಸಿಕೊಡು ಪ್ಲೀಸ್…. 

ಇಂತೀ ನಿನ್ನ ಪ್ರೀತಿಯ
ಷಡಕ್ಷರಿ ತರಬೇನಹಳ್ಳಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
B.H.A Ravi
B.H.A Ravi
9 years ago

ಸೊಗಸಾಗಿದೆ…ಇಷ್ಟವಾಯ್ತು…

amardeep.p.s.
amardeep.p.s.
9 years ago

ತುಂಬಾ ಇಷ್ಟವಾಯ್ತು ರೀ……. ಅಭಿನಂದನೆಗಳು..

2
0
Would love your thoughts, please comment.x
()
x