ಬೇಸಿಗೆ ಶುರುವಾಗುತ್ತಿದೆ. ಸೆಕೆ, ಬಾಯಾರಿಕೆ ಹೆಚ್ಚಾಗುತ್ತದೆ. ಸೆಕೆ ತಡೆಯಲು ಫ್ಯಾನ್ ಮತ್ತು ಏರ್‌ಕಂಡೀಷನ್‌ಗಳು ಬೇಕು. ಬಾಯಾರಿಕೆ ತಣಿಸಲು ತಂಪು ಪಾನೀಯಗಳ ಹಿಂಡು-ಹಿಂಡು ಅಂತಾರಾಷ್ಟ್ರೀಯ ಕಂಪನಿಗಳು ನಿಂತಿವೆ. ಟಿ.ವಿ.ಗಳಲ್ಲಿ ತುಂಡುಡುಗೆಯ ತರುಣಿಯರು ಮಾದಕವಾಗಿ ಓಲಾಡುತ್ತಾ ನೀವು ನಮ್ಮ ಕಂಪನಿಯ ಪಾನೀಯವನ್ನೇ ಸೇವಿಸಿ ಎಂದು ಜಬರ್‌ದಸ್ತು ಮಾಡುತ್ತಾರೆ. ಮನುಷ್ಯನ ಶಕ್ತಿಯ ಹಸಿವಿಗೆ ಇಡೀ ಭೂಮಂಡಲ ತಲ್ಲಣಿಸುತ್ತಿದೆ. ಪ್ರತ್ಯಕ್ಷವಾಗಿ-ಪರೋಕ್ಷವಾಗಿ ನೂರಾರು ಪ್ರಬೇಧಗಳು ಅಳಿವಿನಂಚಿಗೆ ಬಂದು ನಿಂತಿವೆ. ಅಮೇರಿಕಾದಲ್ಲಿ ಚಳಿಯಿಂದ ಜನ ಅತೀವ ತೊಂದರೆಗೊಳಗಾದರೆ, ಪ್ರಾಣಿ-ಪಕ್ಷಿಗಳು ಪುತು-ಪುತುನೆ ಉದುರಿ ಸಾಯುತ್ತಿವೆ. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅತ್ತ ಆಸ್ಟ್ರೇಲಿಯಾದಲ್ಲಿ ವಿಪರೀತ ಬಿಸಿಯೇರಿಕೆಯಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಆಡಲು ಮತ್ತು ನೋಡಲು ಎರೆಡೂ ಕಷ್ಟಕರವಾಗಿ ಪರಿಣಮಿಸಿವೆ. ಚಳಿ ಮತ್ತು ಬಿಸಿಯಿಂದಾಗಿ ಜೇನು ಹುಟ್ಟುಗಳು ಕಣ್ಮರೆಯಾಗುತ್ತಿವೆ. ಸಮುದ್ರದಲ್ಲಿ ತೈಲ ಸೋರಿಕೆಯಾಗಿ ಡಾಲ್ಫಿನ್‌ಗಳು ಸಾಯುತ್ತಿವೆ. ಸಮುದ್ರಕೊರೆತವನ್ನು ನೈಸರ್ಗಿಕವಾಗಿ ತಡೆಯುತ್ತಿರುವ ಕಪ್ಪೆಚಿಪ್ಪು ಮೀನುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಮುದ್ರಕೊರೆತ ಹೆಚ್ಚಾಗಿ ಭೂಮಿಯ ವಿಸ್ತೀರ್ಣವೇ ಕಡಿಮೆಯಾಗುವ ಅಪಾಯವಿದೆ. ೧ ಲಕ್ಷ ಬಾವಲಿಗಳು ಬಾನಿನಿಂದ ಬಿದ್ದು ಸತ್ತ ಉದಾಹರಣೆ ಅಮೇರಿಕದಲ್ಲಿ ಘಟಿಸಿದೆ.
ಸಮುದ್ರದಲ್ಲಿ ಮತ್ತು ಸಿಹಿನೀರಿನಲ್ಲಿ ಪಾಚಿಗಳು ಬೆಳೆಯುತ್ತವೆ. ಹೆಚ್ಚಿನ ಪ್ರೋಟೀನ್ ಅಂಶ ಹೊಂದಿರುವ ಈ ಪಾಚಿಗಳು ಸಮುದ್ರವಾಸಿಗಳಿಗೆ ಸಮೃದ್ಧ ಆಹಾರ. ಈ ಪಾಚಿಯನ್ನು ಬಳಸಿ ಶಕ್ತಿಯನ್ನು ಪಡೆಯಬಹುದು ಎಂಬುದನ್ನು ಅಮೇರಿಕದ ವಿಜ್ಞಾನಿಗಳು ಇತ್ತೀಚಿಗೆ ಕಂಡುಕೊಂಡಿದ್ದಾರೆ. ಆಹಾರ ಪದಾರ್ಥಗಳಾದ ಸೋಯಾ ಇತ್ಯಾದಿಗಳಿಂದ ಬಯೋಡೀಸೆಲ್ ಉತ್ಪಾದಿಸುವುದು ಆಹಾರಭದ್ರತೆಗೆ ಧಕ್ಕೆ ತರುತ್ತದೆ ಎಂಬ ವಾದವಿದೆ. ಪ್ರಪಂಚದಲ್ಲಿ ಹಸಿದವರ ಸಂಖ್ಯೆ ಸಾಕಷ್ಟಿದೆ. ಆದ್ದರಿಂದ ಆಹಾರೋತ್ಪನ್ನಗಳನ್ನು ಇತರೆ ಉಪಯೋಗಕ್ಕೆ ಬಳಸಬಾರದು ಎಂದು ಹೇಳಲಾಗುತ್ತದೆ. ಪಾಚಿಯ ವಿಚಾರದಲ್ಲಿ ಮನುಷ್ಯನಿಗೆ ನೇರ ಸಂಪರ್ಕವಿಲ್ಲದಿದ್ದರೂ, ಪಾಚಿಗಳನ್ನು ಎಲ್ಲೂ ವ್ಯಾಪಕವಾಗಿ ಆಹಾರದ ರೂಪದಲ್ಲಿ ಬಳಸಲಾಗುವುದಿಲ್ಲ. ಆದ್ದರಿಂದ ಪಾಚಿಗಳಿಂದ ಶಕ್ತಿಯನ್ನು ಪಡೆಯಲು ಯಾವುದೇ ತಕರಾರು ಬರಲಿಕ್ಕಿಲ್ಲ. ಆದರೆ ಇದೇ ಪಾಚಿಗಳು ಸಮುದ್ರಪ್ರಾಣಿಗಳಿಗೆ ಆಹಾರವಾಗಿ ಬಳಕೆಯಾಗುತ್ತದೆ. ಮನುಷ್ಯ ಹೆಚ್ಚು-ಹೆಚ್ಚು ಪಾಚಿಗಳನ್ನು ಬಳಸಿದಲ್ಲಿ ಸಮುದ್ರವಾಸಿಗಳ ಆಹಾರಭದ್ರತೆಗೆ ಧಕ್ಕೆಯಾದೀತು. ಇದನ್ನು ವಿಜ್ಞಾನಿಗಳು ಇನ್ನೂ ಯೋಚಿಸಿಲ್ಲ. ಅಲ್ಲದೇ ಕೃತಕವಾಗಿ ಪಾಚಿಗಳನ್ನು ಬೆಳೆಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಒಂದು ಪೌಂಡ್ ಪಾಚಿಯನ್ನು ಬೆಳೆಯಲು ೩೫೦ ಪೌಂಡ್ ನೀರು ಬೇಕು. ಅಲ್ಲದೆ ಪಾಚಿಯಿಂದ ಪಡೆಯಲಾಗುವ ಇಂಧನಕ್ಕೇ ಖರ್ಚು ಹೆಚ್ಚು. ಯಾವುದೇ ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಸಂಶೋಧನೆಯ ಹಂತದಲ್ಲೇ ಇನ್ನೂ ಇರುವುದರಿಂದ ಪಾಚಿಯಿಂದ ಪೆಟ್ರೋಲ್ ಪಡೆಯುವುದರ ಮೂಲಕ ಹವಾಮಾನ ವೈಪರೀತ್ಯವನ್ನು ತಡೆಯುವ ಪ್ರಯತ್ನ ಇನ್ನೂ ದೂರವಿದೆ ಎನ್ನಬಹುದು.
ಸರ್ಕಾರಿ ಬಂಜರು ಭೂಮಿಯಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ ಮಾಡುತ್ತೇವೆ ಎಂದು ನೂತನ ಇಂಧನ ಸಚಿವರು ಹೇಳಿರುವುದು ಬದಲಾಗುತ್ತಿರುವ ಮನೋಭಾವಕ್ಕೆ ಸಾಕ್ಷಿಯಾಗಬಹುದೇ. ಸೂರ್ಯನಿಂದ ನಿರಂತರವಾಗಿ, ಉಚಿತವಾಗಿ, ಎಣೆಯಿಲ್ಲದಷ್ಟು ಶಕ್ತಿಯನ್ನು ಪಡೆಯಬಹುದು. ಮನೆ-ಮನೆಯೂ ಸೂರ್ಯನಿಂದ ವಿದ್ಯುತ್ ಉತ್ಪಾದಿಸುವ ಮಿನಿ ಕಾರ್ಖಾನೆಗಳಾಗಬಹುದು. ಸರ್ಕಾರಿ ಬಂಜರು ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿ ಅವರಿಂದ ವಿದ್ಯುತ್ ಖರೀದಿಸುವ ಸರ್ಕಾರದ ಯೋಚನೆ ಅಷ್ಟೇನೂ ಅಪ್ಯಾಯಮಾನವಾಗಿ ತೋರುವುದಿಲ್ಲ. ಆಹಾರದ ಭದ್ರತೆಯ ಜೊತೆ ಶಕ್ತಿಯ ಭದ್ರತೆಯು ಮುಖ್ಯ. ದೇಶ ಅಭಿವೃದ್ದಿ ಕಾಣಬೇಕಾದರೆ ಶಕ್ತಿಯ ಮೂಲವು ಮುಖ್ಯವಾಗುತ್ತದೆ. ಪ್ರಪಂಚದಲ್ಲಿ ಅದೆಷ್ಟೋ ವಿಜ್ಞಾನಿಗಳು ನಿತ್ಯ ಪರ್‍ಯಾಯ ಶಕ್ತಿಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಇದೀಗ ಹೊಸ ಸೇರ್ಪಡೆಯೆಂದರೆ, ಅಮೇರಿಕಾದ ವಾಷಿಂಗ್ಟನ್ ನಗರದ ಕೊಳಚೆ ನೀರಿನಿಂದ ವಿದ್ಯುತ್ ತಯಾರಿಸುವ ಯೋಜನೆ.
ತಗ್ಗಿದ್ದಲ್ಲಿ ನೀರು ಹರಿಯುತ್ತದೆ. ಇದು ನಿಯಮ. ದಿನಂಪ್ರತಿ ಪ್ರತಿಯೊಬ್ಬ ವ್ಯಕ್ತಿ ೫೦ ಲೀಟರ್ ನೀರು ಬಳಸುತ್ತಾನೆ ಎಂದಾದರೆ, ಬೆಂಗಳೂರಿನಂತಹ ಜನ ಒತ್ತಡವಿರುವ ನಗರಗಳಲ್ಲಿ ಅದೆಷ್ಟು ಕೋಟಿ ನೀರನ್ನು ಬಳಸಲಾಗುತ್ತದೆ. ನಗರದ ಕೊಳೆಗಳನ್ನು ತೊಳೆದುಕೊಂಡು ಚರಂಡಿಯ ಮೂಲಕ ಹರಿದು ಹೋಗುತ್ತದೆ. ಇದೇ ನೀರಿನ ಓಟದ ರಭಸವನ್ನು ಶಕ್ತಿಯಾಗಿ ಮಾರ್ಪಡಿಸಿದರೆ? ಇಂತದೊಂದು ಯೋಜನೆಯನ್ನು ವಾಷಿಂಗ್ಟನ್ ನಗರದಲ್ಲಿ ಶುರು ಮಾಡಲಾಗುತ್ತಿದೆ. ಅಲ್ಲಿ ದಿನಂಪ್ರತಿ ೩೭೦ ಲಕ್ಷ ಗ್ಯಾಲನ್ ನೀರು ಹೀಗೆ ಹರಿದುಹೋಗುತ್ತದೆ. ಕೊಳಚೆ ನೀರಿನಿಂದ ವಿದ್ಯುತ್ ಉತ್ಪಾದಿಸಿ ಅಲ್ಲಿಯೇ ಬಳಸುವ ಈ ಯೋಜನೆಗೆ ೪೫೦ ಲಕ್ಷ ಡಾಲರ್‌ಗಳನ್ನು ವ್ಯಯಿಸಲು ಅಲ್ಲಿನ ನಗರ ಸಭೆ ತೀರ್ಮಾನಿಸಿದೆ. ಮುಂಬಯಿ ಮಹಾನಗರ ಪಾಲಿಕೆಯವರು ಚರಂಡಿ ನೀರನ್ನು ಸೋಸಿ, ಕಾಸಿ ಮತ್ತೆ ಉಪಯೋಗಿಸುತ್ತಾರೆ ಎಂಬುದನ್ನು ಕೇಳಿದ್ದೇವೆ. ಕೆಲ ದೇಶಗಳು ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯಲು ಯೋಗ್ಯವಾಗುವಂತೆ ಪರಿವರ್ತಿಸುತ್ತಾರೆ ಎಂಬುದು ನಮಗೆ ಗೊತ್ತು.
ಚರಂಡಿಯಲ್ಲಿ ಹರಿಯುವ ಕಸ ಕಡ್ಡಿಗಳನ್ನು ಬೇರ್ಪಡಿಸಿ, ದಿನಕ್ಕೆ ೧೨೦ ಗೊಬ್ಬರವನ್ನು ಅಲ್ಲಿ ಉತ್ಪಾದಿಸುವ ಕೆಲಸವನ್ನು ಇದರ ಜೊತೆಗೆ ಶುರು ಮಾಡಲಾಗಿದೆ. ಗೊಬ್ಬರದಿಂದ ದೊರೆಯುವ ಮೀಥೇನ್ ಅನಿಲದಿಂದಲೂ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ತಯಾರಾಗಿದೆ. ಉಳಿದ ಫಲವತ್ತಾದ ಗೊಬ್ಬರವನ್ನು ಹತ್ತಿರದ ರೈತರಿಗೆ ರಿಯಾಯತಿ ದರದಲ್ಲಿ ಪೂರೈಸಲಾಗುತ್ತದೆ. ಅಲ್ಲದೆ ಗೊಬ್ಬರ ಮತ್ತು ಗೊಬ್ಬರದಿಂದ ಉತ್ಪಾದಿಸಲಾಗುವ ಮೀಥೇನ್ ಅನಿಲ ಸ್ಥಾವರಗಳಿಗೆ ಮುಚ್ಚಿಗೆಯಾಗಿ ಸೌರಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರತಿನಿತ್ಯ ೮. ಕಿ.ವ್ಯಾ. ವಿದ್ಯುತ್ ಲಭ್ಯವಿದೆ. ಹೀಗೆ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿರುವ ಕೊಳಚೆ ನೀರನ್ನು ಶುದ್ಧಿಕರಸಿ ಇನ್ನಿತರ ಯೋಜನೆಗಳಿಗೆ ಬಳಸುವ ಮಾತುಕತೆಯು ನಡೆದಿದೆ.
ಇತ್ತ ನಮ್ಮ ಹಳ್ಳಿಗಳು ಖಾಲಿಯಾಗುತ್ತಿವೆ. ಜಾನುವಾರುಗಳ ಸಗಣಿಯಿಂದ ಶಕ್ತಿಯನ್ನು ಮನೆಯಲ್ಲೇ ತಯಾರು ಮಾಡಿಕೊಳ್ಳುತ್ತಿದ್ದ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹಳ್ಳಿ ಜನ ಪೇಟೆಯ ನಂದಿನಿ ಹಾಲನ್ನು ನೆಚ್ಚಿಕೊಂಡು ಬದುಕುವ ಸ್ಥಿತಿ ಅತಿ ಸಾಮಾನ್ಯವಾಗಿದೆ. ಅತ್ತ ಗೊಬ್ಬರವಿಲ್ಲದ ಹೊಲ-ಗದ್ದೆಗಳು ಸೊರಗುತ್ತಿವೆ. ರೈತನಿಗೆ ನಿರಂತರ ವಿದ್ಯುತ್ ನೀಡುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಅಳಿದುಳಿದ ಪ್ರದೇಶದಲ್ಲಿ ಬೆಳೆದಿರುವ ಫಸಲು ಇದೇ ಪವರ್‌ಕಟ್‌ನಿಂದಾಗಿ ಹಾಳಾಗುತ್ತಿದೆ. ರೈತನ ಜೀವನವೆಂದರೆ, ನೆಮ್ಮದಿಯ ಬದುಕು. ಹೈನುಗಾರಿಕೆಯಲ್ಲಿ ಬರೀ ಹಾಲಿನ ಉತ್ಪನ್ನಗಳಿಗಾಗಿ ಮಾತ್ರ ಹಸುವನ್ನೋ ಅಥವಾ ಎಮ್ಮೆಯನ್ನೋ ಸಾಕುವುದಿಲ್ಲ. ತೋಟದ ಉಪಉತ್ಪನ್ನಳು ರಾಸುಗಾಳಿಗೆ ಆಹಾರವಾಗುತ್ತದೆ. ಇದೇ ಉಪಉತ್ಪನ್ನಗಳನ್ನು ತಿಂದ ಜಾನುವಾರುಗಳು ರೈತನಿಗೆ ಹಾಲಿನ ಜೊತೆಗೆ ಸಗಣಿ-ಗಂಜಲವನ್ನು ನೀಡುತ್ತವೆ. ಹೀಗೆ ಹೊಲದಲ್ಲಿನ ಬೆಳೆ ಕೊಟ್ಟಿಗೆಗೆ ಬಂದು ಹಾಲಾಗಿ, ಗೊಬ್ಬರವಾಗಿ, ಗಂಜಲವಾಗಿ ಮತ್ತೆ ಹೊಲಕ್ಕೆ ಸೇರುತ್ತದೆ. ಈ ಚಕ್ರದ ಮಧ್ಯದಲ್ಲಿ ಪೇಟೆಯ ನಂದಿನಿ ಪ್ಲಾಸ್ಟಿಕ್ ಬಂದು ಕುಳಿತಿದೆ.
ರೈತರಿಗೆ ಸಾಂತ್ವಾನ ಹೇಳಬೇಕಾದವರು, ರಾಜಕೀಯದಲ್ಲೇ, ಬರೀ ಬಾಯಿಮಾತಿನಲ್ಲೇ, ಅಂಗೈನಲ್ಲೇ ಆಕಾಶ ತೋರಿಸುತ್ತಿದ್ದಾರೆ. ರೈತನ ಹೆಸರಿನಲ್ಲಿಯ ಸಬ್ಸಿಡಿಗಳು ದೊಡ್ಡ ಕಂಪನಿಗಳಿಗೆ ಮಾತ್ರ ಲಾಭ ಮಾಡಿಕೊಡುತ್ತಿವೆ. ನಮ್ಮಲ್ಲೂ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಕೋಟಿಗಟ್ಟಲೆ ಲೀಟರ್ ನೀರು ನಮ್ಮಲ್ಲೂ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ಶಕ್ತಿಯಾಗಿ ಬದಲಿಸುವ ಕಾರ್ಯಕ್ರಮಗಳನ್ನು ಯೋಜಿಸಬೇಕಾಗಿದೆ. ಸೌರಶಕ್ತಿಯನ್ನು ನೆಚ್ಚಿಕೊಂಡು ಬೇಸಾಯ ಮಾಡುವ ಪದ್ಧತಿಯನ್ನು ರೂಡಿಸಬೇಕಾಗಿದೆ. ಕಳಪೆ ಕಲ್ಲಿದ್ದಲು ಉಪಯೋಗವನ್ನು ಕಡಿಮೆ ಮಾಡುವುದರ ಮೂಲಕ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಬೇಕಾಗಿದೆ. ಬೆಟ್ಟದಷ್ಟು ಸವಾಲುಗಳಿವೆ. ಸವಾಲುಗಳನ್ನು ಮೆಟ್ಟಿ ಶಾಶ್ವತ ಪರಿಹಾರೋಪಾಯಗಳನ್ನು ಹುಡುಕಬೇಕಾದ ಅನಿವಾರ್ಯತೆಯಿದೆ. ಯುವಪೀಳಿಗೆಯನ್ನು ಮುಂದಿನ ಹೋರಾಟಕ್ಕೆ ಸಜ್ಜುಗೊಳಿಸಿ, ಸಧೃಡ ನಾಡನ್ನು ಕಟ್ಟಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.
******
ರೈತರಿಗೆ ಸಾಂತ್ವಾನ ಹೇಳಬೇಕಾದವರು, ರಾಜಕೀಯದಲ್ಲೇ, ಬರೀ ಬಾಯಿಮಾತಿನಲ್ಲೇ, ಅಂಗೈನಲ್ಲೇ ಆಕಾಶ ತೋರಿಸುತ್ತಿದ್ದಾರೆ. ರೈತನ ಹೆಸರಿನಲ್ಲಿಯ ಸಬ್ಸಿಡಿಗಳು ದೊಡ್ಡ ಕಂಪನಿಗಳಿಗೆ ಮಾತ್ರ ಲಾಭ ಮಾಡಿಕೊಡುತ್ತಿವೆ. ನಮ್ಮಲ್ಲೂ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಕೋಟಿಗಟ್ಟಲೆ ಲೀಟರ್ ನೀರು ನಮ್ಮಲ್ಲೂ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ಶಕ್ತಿಯಾಗಿ ಬದಲಿಸುವ ಕಾರ್ಯಕ್ರಮಗಳನ್ನು ಯೋಜಿಸಬೇಕಾಗಿದೆ. ಸೌರಶಕ್ತಿಯನ್ನು ನೆಚ್ಚಿಕೊಂಡು ಬೇಸಾಯ ಮಾಡುವ ಪದ್ಧತಿಯನ್ನು ರೂಡಿಸಬೇಕಾಗಿದೆ. ಕಳಪೆ ಕಲ್ಲಿದ್ದಲು ಉಪಯೋಗವನ್ನು ಕಡಿಮೆ ಮಾಡುವುದರ ಮೂಲಕ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಬೇಕಾಗಿದೆ. ಬೆಟ್ಟದಷ್ಟು ಸವಾಲುಗಳಿವೆ. ಸವಾಲುಗಳನ್ನು ಮೆಟ್ಟಿ ಶಾಶ್ವತ ಪರಿಹಾರೋಪಾಯಗಳನ್ನು ಹುಡುಕಬೇಕಾದ ಅನಿವಾರ್ಯತೆಯಿದೆ. ಯುವಪೀಳಿಗೆಯನ್ನು ಮುಂದಿನ ಹೋರಾಟಕ್ಕೆ ಸಜ್ಜುಗೊಳಿಸಿ, ಸಧೃಡ ನಾಡನ್ನು ಕಟ್ಟಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. yes sir
ಪ್ರತಿಕ್ರಿಯೆಗೆ ಧನ್ಯವಾದಗಳು ಕಾಕಾಲ್ ಜೀ
ಮಾಹಿತಿ ಪೂರ್ಣ ಲೇಖನ. ಚೆನ್ನಾಗಿದೆ.