ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ ಮಾಸ್ತಿಗಲ್ಲಿನಂತಾಗಲಿದೆ. ಹೇಗೆ ಅನ್ನೋ ಕುತೂಹಲವಾ..? ಸ್ವಲ್ಪ ಕಾಯಬೇಕು ನೀನು. ಅದೇ, ಹಲ್ಲಿಯಂತೆ ಲೊಚಗುಟ್ಟುತ್ತಾ ಕೊಡ್ತಿದ್ದ ಸಿಂಗಲ್ ಕಿಸ್‍ಗೆ  ತುಳಸಿಕಟ್ಟೆಯ ಬಣ್ಣ ಕೆರೆಯುತ್ತಾ ಕೂರ್ತಿದ್ದೆಯಲ್ಲಾ ಹಾಗೆ..

ಕಾಯ್ತಾ ಕಾಯ್ತ ಕೈ ಬೆರಳಿನ ಉಗುರೆಲ್ಲಾ ಹಲ್ಲಲ್ಲೇ ಹುಡಿಯಾದ್ವು ಅಂತ ಬೈಯ್ಕೋ ಬೇಡ ಅಷ್ಟೊಂದು ಕಾಯ್ಸಲ್ಲ. ನನ್ನ ನಂಬು, ನಾನೀಗ ಸುಳ್ಳು ಹೇಳುವುದ ಬಿಟ್ಟಿದ್ದೇನೆ, ಮಳೆ ಕರೆಯುತ್ತಿದ್ದ ಗ್ವಾಂಕರ್ ಕಪ್ಪೆಗೆ ಹೆದರಿ, ಜಿಗಣೆಯಂತೆ ಅಪ್ಪಿ ಹಿಡಿದಿದ್ದೆಯಲ್ಲ ನನ್ನ. ನಾನೀಗ ಅದೇ ತುಂಗೆಯ ತೀರದಲ್ಲಿ ಅಲೆಯುತ್ತಿದ್ದೇನೆ.

ಓಯ್, ಕೇಳಿಲ್ಲಿ..ಲಜ್ಜೆಯಿಲ್ಲದೇ ನಿನ್ನ ಕಾಲ್ಗೆಜ್ಜೆಯ ಸದ್ದಿನ ಜೊತೆ ಹೆಜ್ಜೆಯಿಟ್ಟು ಸಾಗಿದ ಹಾದಿಯ ನೆನಪುಗಳೆಲ್ಲಾ, ನಮ್ಮನ್ನು ನೋಡಿ ನಾಚಿ ಹರಿಯುತ್ತಿದ್ದ ತುಂಗೆ ಅಳಿಸಿಹಾಕಿದ್ದಾಳೆ. ಅಳಿಸಿದ್ದು ಅವಳೇನಾ ? ಅಥವಾ ನಾಗರಿಕತೆಯ ಕೊಳಲ ನಿನಾದದವೋ..? ಬಲ್ಲವರ್ಯಾರು. ತುಂಗೆಯ ತಲ್ಲಣಗಳು ಬದಲಾಗಿರೋದಂತು ಸತ್ಯ. 

ಸದ್ದು ಬದಲಿಸಿ, ಮುದ್ದುಮಾಡುತ್ತಿದ್ದ ತುಂಗೆ ಈಗ ಅನಾಥ ಶೋಷಣೆಗಳನ್ನ ಭರಿಸಿಕೊಂಡು ಒಲವ ಮಾತನಾಡುತ್ತಿಲ್ಲ. ಸಂಜೆಯಲ್ಲಿ ಮುನಿದು ಕೆಂಪಾದ ರವಿಯ ಮೇಲೆ, ಮರಳಿನ ತೀರಕೆ ಚಾಡಿ ಹೇಳುವ ಕೆಲಸವನ್ನು ತುಂಗೆಯ ಅಲೆಗಳು ನಿಲ್ಲಿಸಿವೆ. ತುಂಗೆಯ ಹರಿವಲ್ಲೂ ಈಗ ಸ್ವರ ಸಿಗದ ಸಂಗೀತಗಾರನ ಕರ್ಕಶ ಆಲಾಪ ಮಾಡುತ್ತಿದ್ದಾನೆ. ಅವಳ ಒಡಲಲ್ಲಿ ತುಂಬಿದೆ ಬೋರ್ಗರೆದು ಸಮಸ್ತವನ್ನೂ ಬಲಿ ಪಡೆವ ಆಕ್ರೋಶ. ಅಬ್ಬಬ್ಬಾ ತೀರದಲಿ ನಿಂತು ನಾನೇ, ನದಿದೇವತೆ ನೆನಪಿದೆಯಾ ಎಂದು ಅರಚುತ್ತಿರುವೆ. ತುಂಗೆ ಮಾತ್ರ ಛೀ ತೊಲಗು, ನನ್ನ ಮಡಿಲಲ್ಲಾಡಿದ ಮಕ್ಕಳಲ್ಲಾ  ನೀವು ಎನ್ನುತ್ತಿದ್ದಾಳೆ..

ತುಂಗೆಯಷ್ಟೆ ಅಲ್ಲ, ಸಹ್ಯಾದ್ರಿ ಶ್ರೇಣಿಯ ಗಾಳಿಯಲ್ಲೂ ಅಂದಿನ ಘಮಲಿಲ್ಲ. ಚುರುಗುಟ್ಟಿಸಿ ಪ್ರೇಮದಪ್ಪುಗೆಗೆ ಪ್ರೇರೇಪಿಸೋ ಗುಣವಿಲ್ಲ. ಏನೋ ಒಂಥರಾ, ಆಷಾಢಭೂತಿಯಂತೆ ತುಂಗೆಯ ಮೇಲೆ ಹಾಗೆ ಸುಮ್ಮನೆ ಸುಯ್ಯುಗುಡುತ್ತಾ ಹಾದುಹೋಗುತ್ತಿದೆ. ಬಹುಶಃ ಹಸಿರುವನವ ಸೋಕಲಾಗದ ವಿರಹವಿರಬೇಕು ಅದಕ್ಕೆ.

ಕಾಡುಹಕ್ಕಿಗಳ ಕ್ಷೀಣ ಕೂಗು, ಮಂದ ಮುಗಿಲಿನ ಹೀನ ಚೆಲುವು, ಬಿದಿರುಮಟ್ಟಿಯ ಚಿಟಪಟ ಆಲಾಪ, ಕಾಲವನಣಕಿಸಿ ಒಣಗಿ ನಿಂತ ಮರಗಿಡಗಳು. ಕ್ವಾರಿಗಳಿಂದಾದ ಊನ ನೆಲ. ಇಲ್ಲಿಯ ಪರಿಸರವೇ ಹೊಲಸೆದ್ದಿದೆ. ದೇಶವಿದೇಶದ ಹಕ್ಕಿಗಳನ್ನು ಆಷಾಢದ ಸಂಸಾರ ಹೂಡಲು ಬಿಡಾರ ಒದಗಿಸಿಕೊಟ್ಟಿದ್ದು ಇದೇ ಭೂಮಿಯಾ? ನಮ್ಮಿಬ್ಬರ ಪ್ರೇಮ ಸ್ವಯಂವರಕ್ಕೆ ಸಾಕ್ಷಿಯಾಗಿದ್ದು ಇದೇ ಭೂಮಿಯಾ?  ನನಗೇನೋ ಸಂಶಯ..!

ಭವಿಷ್ಯದ ಕನವರಿಕೆಯಲ್ಲಿ ವರ್ತಮಾನದ ಕಾಲ, ಇತಿಹಾಸವನ್ನು ಇಡೀ ಇಡೀಯಾಗಿ ನುಂಗಿಬಿಟ್ಟಿದೆ ಗೆಳತಿ.ಹೌದು, ಮನೆಯಲ್ಲಿ ಮಾಡ್ ಹಾಕಿದ್ದನ್ನ ತಿಂದು ಕಾಲ ಹಾಕುತ್ತಿದ್ವಲ್ಲಾ, ಆಗ ನಮ್ಮಿಬ್ಬರ ವಯಸ್ಸೇಷ್ಟಿದ್ದೀತು..? ಅಸಲಿಗೆ ಈ ಒಲವಿಗಂಟಿಕೊಂಡು ಎಷ್ಟು ಯುಗಾದಿಗಳು ಕಳೆದವು. ಥೂ…ಹಾಳು ಮರವು.. ಇಂದಿನ ಟೆಕ್ನಾಲಿಜಿ ಆಗಿದ್ದಿದ್ದರೇ, ಗೂಗಲ್ ಡ್ರೈವ್ನಲ್ಲಿ ನೆನಪುಗಳನ್ನ ಸ್ಟೋರೆಜ್ ಮಾಡಿಟ್ಟುಕೊಳ್ಳುತ್ತಿದ್ದೆ. ಯಾರದ್ದೋ ಎಸ್ಟಿಡಿ ಭೂತ್‍ನಲ್ಲಿ ಹೇಳಿದ ಟೈಂನಲ್ಲಿ ಸರಿಯಾಗಿ ಎಣಿಸಿ ಮೂರು ಭಾರಿ ರಿಂಗ್ಮಾಡಿ, ಮಿಸ್ ಕಾಲ್ ಕೊಡುತ್ತಿದ್ದೆವಲ್ಲ. ಅದೀಗ ಸಾದ್ಯವೇ? ಇಲ್ಲಬಿಡು. ಬಹುಶಃ ಮೊಬೈಲ್ ಮಿಸ್‍ ಕಾಲ್‍ಗಳಿಗೆ ಅಂಕಿತ ಹಾಕಿದ್ದು ನಾವೇ ಅನ್ಸುತ್ತೆ ಅಲ್ವಾ?

ಕಿವಿಗೆ ರಿಸಿವರ್ ಅಂಟಿಸಿಕೊಂಡ ಕಾಯಿನ್ ಬಾಕ್ಸ್ ಸೀಸನ್ ಬರುತ್ತಲೇ ಎಸ್ಟಿಡಿ ಬೂತ್‍ಗಳ ಅಂಗಡಿ ಮುಚ್ಚಿದವಲ್ಲ. ಅವುಗಳಿಗೆ ಯಾರಾದರೂ ಸತ್ತಾಗ ನಾಮಾಕಾವಸ್ಥೆ ಮೌನಾಚರಣೆಯ ಮಾಡುವ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು ನೆನಪಿದೆಯಾ ನಿಂಗೆ?. ಹೊಟ್ಟೆಕಿಚ್ಚಿನ ಮಾತುಗಳಿಗೆ ಸಾಕ್ಷಿಯಾಗಿ ಗಿರಗಿಟ್ಲೆ ಪೋನ್ವೊಂದನ್ನ ತೆಗೆದಿಸಿಕೊಂಡಿದ್ದೆ ನೀನು. ಈಗಲೂ ಅದು ನಿನ್ನ ಹತ್ತಿರವೇ ಇರಬೇಕು. ಇಂತಹುದೇ ಸನ್ನಿವೇಶ ಕಾಣಿಕೆ ಡಬ್ಬಿ ಪೋನಿಗೂ ನಿರ್ಮಾಣವಾಗುತ್ತೆ ಅಂತ ನಮಗಾಗ ಗೊತ್ತಿತ್ತಲ್ವಾ?  ಮತ್ತೇ 1100 ಸೆಟ್‍ಗಳ ಜಮಾನಕ್ಕೆ ಒಗ್ಗಿದ್ದೇವು..ರಾಶಿರಾಶಿ ಚಿಲ್ಲರೆ ನುಂಗಿ ನಗು ವಿನಿಮಯಮಾಡಿಕೊಂಡ ಗೋಡೆಪೋನುಗಳನ್ನ ಬೀಳ್ಕೊಡುವ ಗೋಜಿಗೆ ಹೋಗಲೇ ಇಲ್ಲ, ಯಾಕೆ ?ಎಂಥಾ ದ್ರೋಹ? ಛೇ, ಕ್ಷಮೆಯಿರಲಿ ಹಳದಿ ಡಬ್ಬಿ ಸಂದೇಶ ವಾಹಕವೇ ನಿನ್ನಾತ್ಮಕ್ಕೆ ಶಾಂತಿ ಸಿಗಲಿ.

ಹಾಗಂತ ಮೊಬೈಲ್‍ಗಳ ಮೇಲೆ ನನಗನುಕಂಪವಿಲ್ಲ.ಹಾಳಾದ್ದು ಪೀಡೆ ನಮ್ಮಿಬ್ಬರನ್ನ ಬೆಸೆದಿದ್ದಕ್ಕಿಂತ ಕಿರುಕುಳ ನೀಡಿದ್ದೇ ಜಾಸ್ತಿ. ಅದಕ್ಕಿಂತ ಇಂಗ್ಲೆಂಡ್ ಲೆಟರ್‍ನಲ್ಲಿ ಗ್ರೀನ್ ಇಂಕ್‍ನಲ್ಲಿ ಬರೀತ್ತಿದ್ದ ಸುಂದರ ಕವಿತೆಗಳೇ ಚೆಂದವಿತ್ತು. ಎಂಜಲು ಅಂಟಿಸಿ, ಪ್ರಮ್  ಟು ಅಡ್ರೆಸ್ ಬರೆದು, ರೀ ನಿಮಗೊಂದು ಪೋಸ್ಟ್ ಬಂದಿದೆ ನೋಡಿ ಅಂತ ಎಕ್ಸ್ಚೇಂಜ್ ಮಾಡಿಕೊಂಡಿದ್ದು. ನಮ್ಮ ಹುಚ್ಚಾಟ ನೋಡಿ ಕಾಲೇಜಿನ ಹುಡುಗರು ನಮ್ಮನ್ನ ಮೆಂಟಲಿ ರಿಟೈರ್ಡ್ ಲವರ್ಸ್ ಅಂತಿದ್ದಿದ್ದು. ಅದೆಷ್ಟು ಸ್ಪೇಶಲ್ ಗುರುತುಗಳು ಗೆಳತಿ, ಈ ಪ್ರೇಮದ ಇತಿಹಾಸದಲಿ..

ಓಹ್ ಮರತೇ ಹೋಗಿತ್ತು ನೋಡು, ಭಾವಗೀತೆಗಳ ಅಮಲಿನಲ್ಲಿ ನಿನ್ನೊಳಗೆ ಕಾಮನೆಗಳನ್ನು ಬಿತ್ತಿದ ವೇದಿಕೆ ಇದೆ ತೀರ ಅಲ್ವಾ? . ಹೌದು, ನೆನಪಾಯ್ತು ನೀನಾಗ ನನ್ನ ವಾಕ್‍ಮನ್‍ನಲ್ಲಿ  ಶ್ರೀರಾಮಚಂದ್ರ ಚಿತ್ರದ ಸುಂದರಿ ಸುಂದರಿ ಹಾಡನ್ನ ಹಾಕಿ ಕುಣಿ ಅಂತಿದ್ದೆ, ನಾನೋ ಮೈಮೇಲೆ ಇರುವೆಗೂಡು ಬಿದ್ದವನ ಹಾಗೆ ಯಕ್ಷಗಾನದಲ್ಲಿ ಮಂಗನವೇಷ ಹಾಕಿದವನಂತೆ ಕುಣಿದಿದ್ದೆ. ನಿನಗೊಬ್ಬಳಿಗೆ ಪ್ರೀತಿ ಮಾರಾಯ್ತಿ, ಅಂದು ನನ್ನ ಡಿಂಗ್ರಿಬಿಲ್ಲಿ ಡ್ಯಾನ್ಸ್ ಕದ್ದು ನೋಡಿದ. ಈ ಕಾಲದ ಹಣ್ಣುಮುದುಕಿಯರನ್ನ ನೋಡಿದ್ರೆ ಈಗಲು ನಾಚಿಕೆಯಾಗುತ್ತೆ.

ಅದೇ ಚೆಂದವಿತ್ತು ಗೆಳತಿ, ನನಗೋ ಭವಿಷ್ಯದ ಹಂಗಿರಲಿಲ್ಲ, ನಿಂಗೋ ಲೋಕದ ಪರಿವೇ ಇರಲಿಲ್ಲ.  ಬೆಳೆದವು, ಹುಡುಗಾಟದ ಪ್ರೇಮ, ಗಂಭೀರವಾಗಿ ಬದುಕಿಗಂಟಿತು, ಸಂರ್ಪಕ, ಸಂಬಂಧ, ಸಂವೇದನೆ, ಸಲ್ಲಾಪವೆಲ್ಲ, ಹೈಟೆಕ್ ಆವಿಷ್ಕಾರದಲ್ಲಿ ಆವಿಯಾದವಲ್ಲ. ಕಾಲದ ತಿರುಗಾಟ ತಂದ ಬದಲಾವಣೆಯನ್ನ ನೀ ಮೊದಲೇ ಊಹಿಸಿದ್ದೆಯಾ?

ವಾರಕ್ಕೊಮ್ಮೆ ಸೇರ್ತಿದ್ದ ಭೇಟಿ, ಕೈ ಸೋಕುತ ನಡೆದ ಕ್ಷಣ, ತಣ್ಣಗೆ ಪುಟಿಯುತ್ತಿದ್ದ ಕನಸು, ಮತ್ತೆ ನೀನು ಸಹ ಕ್ಯಾಲೆಂಡರ್ ಬದಲಾದಂತೆ ಅಸ್ತಿತ್ವ ಕಳೆದುಕೊಂಡ ತಂತ್ರಜ್ಞಾನದ ಕೊಡುಗೆಯಂತಾದೆ ಅಂತ ಈಗ ಅನಿಸುತ್ತಿದೆ, ದೇವರಿಗೇನು ಬರ ಅಂತ ನಡೆಯದ ನೋಟುಗಳನ್ನ ಕಾಣಿಕೆ ಹಾಕಿದ್ದೇ ಈ ಪರಿಸ್ಥಿತಿಗೆ ಕಾರಣವಿರಬೇಕು. ಏನೋ ಯೋಚಿಸಿ ಫಲವಿದೆಯಾ ಈಗ?

ಅಸಲಿಗೆ, ನಾನಾಗಿಯೇ ಇಲ್ಲಿಗೆ ಬರಲಿಲ್ಲ. ಬೆನ್ನಿಗೇರಿದ ಶನಿಯಂತೆ ನೆರಳೊಗೆ ಅವಿತು ಕಾಡುತ್ತಿರೋ ಒಲವಿನ ಯಾತನೆಗಳೇ ನನ್ನ ಈ ತೀರಕ್ಕೆ ತಂದು ನಿಲ್ಲಿಸಿದೆ. ಈ ಹಾಳುಬಿದ್ದ ತುಂಗೆ ತಟದಲ್ಲಿ ಕೂತು ಯೋಚಿಸಿದ್ರೆ ಅರಬ್ಬಿಯ ಕಡಲಿನ ಅಮಾವಾಸ್ಯೆ ಅಲೆಗಳ ಮೊರೆತದಂತೆ ಕಳೆದ ಘಳಿಗೆಗಳು ಹರಿದು ಸಾಗುತ್ತಿದೆ. ನಿನ್ನಾಣೆ ಕಣೆ, ಪ್ರೇಮವ ಕೊಂದು ಬದುಕಲಾಗದೇ ಅದರ ನೋವಿಗೆ ಶರಣಾಗಿರುವೇ. ನಿನು ಹೇಗೆ ಸರಿವ ಕಾಲದ ಜೊತೆಜೊತೆಗೆ ಪ್ರೀತಿಯ ಗುಟುಕು ಜೀವಕ್ಕೂ ವಿಷ ಕೊಟ್ಟು ಮುಂದೆ ಸಾಗಿದೆ? ಕೊನೆ ಪಕ್ಷ , ಮೊದಲಿನಿಂದಲೂ ನನ್ನಿಂದ ಮರೆಮಾಡಿಟ್ಟ ಕಣ್ನೀರನ್ನಾದ್ರೂ ತೋರ ಬಹುದಿತ್ತಲ್ಲ.ಅದಕ್ಕೂ ನಿಷೇಧ ಹೇರಿದೆ. ಎದೆಗೆ ಭಾರವಿಳಿಸಿ, ಪ್ರಶ್ನೆಗಳಿಗೆ ಬೆನ್ನುಹಾಕಿ ಕಾಡುಹಾದಿಯ ಕಡೆ ಹೊರಟು ಹೋದೆ ನೋಡು.ಯಾವಾ ಹೈಫೈ ಕಾಲದ ವಾಟ್ಸ್ಪು, ಫೇಸ್ಬುಕ್ಕಿನ ತೆಕ್ಕೆಗೂ ಸಿಗದೆ.

ನಂಗೊತ್ತು ಉತ್ತರ ಕೊಡು ಅಂತ ಕೇಳಿದರೂ, ನೀ ಮತ್ತೆ ಬರಲಾರೆ. ಅಸಲಿಗೆ ನನ್ನ ಗುರುತು ಸಹ ನಿನಗೆ ಬರಲಿಕ್ಕಿಲ್ಲ. ಆದ್ರೆ ನಾ ನಿನ್ನ ಹಾಗೆ ಕಟ್ಟಿಕೊಂಡ ಪ್ರೀತಿಯನ್ನ ನಡುದಾರಿಯಲ್ಲಿ ಬಿಟ್ಟು ಹೋಗಲಾರೆ. ಹಾಗಂತ ನೀನಿಲ್ಲದೇ ನಾ ನೊಂದುಕೊಂಡಿಲ್ಲ. ನಿನ್ನ ನೆನಪುಗಳೊಂದಿಗೆ ಬದುಕಿನ ಹಾದಿಯಲ್ಲಿ ಬಾಕಿಯಿದ್ದ ಜವಬ್ದಾರಿಗಳನ್ನೆಲ್ಲ ಮುಗಿಸಿದ್ದೇನೆ..ಬಾಕಿ ಉಳಿದ ಮಾತೊಂದಿತ್ತಲ್ಲ.. ಅದೇ ರಾಜನ ಕಥೆಗೂ ಶ್ರೇಷ್ಟವಾದ ಪ್ರೀತಿ ನಮ್ಮದಾಗಿಸುವ ಹೊಣೆಗಾರಿಕೆ. ಅದನ್ನೀಗ ಈಡೇರಿಸುತ್ತಿದ್ದೇನೆ.. ಗೆಳತಿ..

ನನ್ನೀ ಪ್ರೇಮ ಸಾಧನೆಯ ಕೊನೆಯ ಪ್ರೇಮ ಪತ್ರ ನಿನಗೆ ನೇರವಾಗಂತೂ ಸೇರಲಾರದು, ಕಾರಣ ಇಷ್ಟೆ..ಬದುಕಿನ ಹಾದಿಯಲ್ಲಿ ಸಿಕ್ಕ ಹೊಸ ಜೊತೆಗಾರನ ಬಿಸಿತೋಳಲ್ಲಿ ಬೆಚ್ಚಗೆ ಕುಳಿತ ನಿನಗೆ ಮತ್ತೆ ಒಲವಿನ ಹುಚ್ಚುತನದಲ್ಲಿ ಅಳಿಸಲಾರೆ. ಇಂಗ್ಲೆಂಡ್ ಲೆಟರಿನ ಯಾವ ಮಗ್ಗಲು ಬಿಡದೆ ಬರೆದಿರೋ ಈ ಪತ್ರವನ್ನ, ವಿಳಾಸವಿಲ್ಲದ ಪೋಸ್ಟ್ ಡಬ್ಬಕ್ಕೆ ಹಾಕುತ್ತೇನೆ. ನನ್ನಂತೆ ವಾಯಿದೆ ಕಳೆದುಕೊಂಡಿರೋ ಕೆಂಪುಡಬ್ಬದಿಂದ ಪತ್ರ ಹೊರಬಂದು, ಯಾರೋ ಓದಿ ಇನ್ಯಾರಿಗೋ ತಿಳಿಸಿ ಮತ್ತೆಲ್ಲೋ  ಅಚ್ಚಾದ್ರೆ, ಯಾರೋ  ಪ್ರಾರಾಬ್ದ  ಬರೆದಿದ್ದು ಅಂತ ಓದಿ ಬದಿಗಿಡು..ಅದಕ್ಕೂ ಮೀರಿ ಅನಿಸಿದ್ರೆ, ಇಲ್ಲೇ ತುಂಗೆಯ ತೀರದಲ್ಲಿ ನಾವಿಬ್ಬರು ಕೂತು ಅಮರ ಪ್ರೇಮದ ಶಪಥ ಗೈದಿದ್ದವಲ್ಲ,. ಓಯ್ ಅದೇ,, ಹಳೆ ಆಲದ ಮರದ ಬುಡ.. ನೆನಪಾಯ್ತಾ..ಅಲ್ಲಿ ನಾನೇ ತೆಗೆದ ಗೋರಿಯಲ್ಲಿ ಹಾಗೇ ಮಲಗಿರುತ್ತೇನೆ. ಮೊದಲ ಭೇಟಿಯಲ್ಲಿ ನೀಡಿದಂತೆ ಗುಲಾಬಿಯೊಂದನ್ನು  ಮುಚ್ಚಿದ ಮಣ್ಣಿನ ಮೇಲಿಟ್ಟು ,ಮತ್ತೆಂದೂ ನೆನಪಿನ ಲೋಕಕ್ಕೆ ಬಾರದೆ ಬೆನ್ನು ತಿರುಗಿಸಿ ಹೊರಟು ಬಿಡು, ಕಾಡು ಹಾದಿಯ ಕಡೆಗೆ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x