ಕಥಾಲೋಕ

ಸರ್ವತ್ರ:’ಪ್ರೀತೀಶ’


ಚಲಂ ನನ್ನ ಬೆನ್ನು ಹತ್ತಿಬಿಟ್ಟಿತ್ತು.  ಯಾವತ್ತೂ ನನ್ನ ಮಾತು ಮೀರದ ಚಲಂ ಇಂದು ಬೇಡಬೇಡವೆಂದರೂ, ನಾನು ಕೋರ್ಟಿಗೆ ಹೋಗುತ್ತಿದ್ದೇನೆ, ಅಲ್ಲಿ ನೀನು ಬರಬಾರದು ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ದಾರಿಯಲ್ಲಿ ಒಂದೆರಡು ಬಾರಿ ಸಿಟ್ಟಿಗೂ ಬಂದೆ.  ನನ್ನ ಸಿಟ್ಟಿಗೆ ಹೆದರಿ ಕಾಲು ಉದ್ದಕ್ಕೆ ಬಿಟ್ಟು ದಾರಿಯಲ್ಲಿ ಕುಳಿತುಕೊಂಡಿತು.  ಹಾಳಾಗಿ ಹೋಗಲಿ, ಮನೆ ದಾರಿ ಅದಕ್ಕೆ ಗೊತ್ತು, ಯಾವಾಗಲಾದರೂ ಮನೆಗೆ ಹೋಗಲಿ ಎಂದು ನಾನು ಬಿರಬಿರನೆ ನಡೆದುಬಿಟ್ಟೆ.  ಮೊದಲೇ ಅದರ ಹಟದಿಂದಾಗಿ ಆಫೀಸಿಗೆ ಹೋಗುವುದು ತಡವಾಗಿತ್ತು.

ಕೋರ್ಟಿನ ಗೇಟು ಕಂಡೊಡನೆ ಒಂದು ಕ್ಷಣ ಮನಸ್ಸು ವಿಚಲಿತವಾಯಿತು.  ನಾನು ಇದನ್ನು ಯಾವಾಗ ತೊರೆದು ಹೋದೇನು ಎಂಬ ಪ್ರಶ್ನೆ ಮತ್ತೆ ಕಾಡಿತು.  ಅಷ್ಟರಲ್ಲಿ ನನ್ನ ಮುಂದೆಯೇ ಚಲಂ ಬಾಲ ಅಲ್ಲಾಡಿಸುತ್ತ ಓಡಿ ಹೋಯಿತು.  ಅಯ್ಯೋ ಇದು ಮನೆಗೆ ಹೋಗದೇ ನನ್ನ ಹಿಂದೆಯೇ ಬಂತಾ? ಇದನ್ನು ಹೇಗೆ ಸಂಭಾಳಿಸುವುದು ಎಂದು ಭಯಭೀತನಾಗಿ ನಾನೂ ಅದರ ಹಿಂದೆ ಓಡಿದೆ.  ನೇರ ಸಾಹೇಬರು ಅಂದರೆ ನ್ಯಾಯಾಧೀಶರ ಚೇಂಬರಿನ ಕಡೆ ದೌಡಾಯಿಸಿತು.  ಹೊರಗಡೆ ನಿಂತಿದ್ದ ದಫೇದಾರನಿಗೆ ಅದನ್ನು ತಡೆಯಲು ಚೀರಿದೆ.  ಅದು ಅವನ ಕಾಲು ನೆಕ್ಕಿ ಅವನೂ ಅದರ ತಲೆಯ ಮೇಲೆ ಕೈಯಾಡಿಸಿ ಅದನ್ನು ತಡೆಯದೇ ಒಳಗೆ ಬಿಟ್ಟ.  ನನ್ನ ಗಾಬರಿ ಇಮ್ಮಡಿಸಿತು.  ಏದುಸಿರು ಬಿಡುತ್ತ ಬಂದ ನನ್ನನ್ನು ನೋಡಿ ನಕ್ಕು, ಇವತ್ ಮತ್ ಸಾಹೇಬ್ರದ ನೆನಪಾಗೈತಿ ಕಾಣ್ತೈತಿ ನಾಯೀಗಿ.. ನೀಯೇನ್ ಹೆದರ್‍ಕೋಬ್ಯಾಡ ತಮ್ಮಾ.  ಅದ್ ಆವಾಗಾವಾಗ ಬಂದ ಸಾಹೇಬ್ರ ಹಂತೇಕ ಬಿಸ್ಕೀಟ ತಿಂದ ಹೋಗ್ತೇತಿ ಎಂದು ನಕ್ಕು ನನ್ನ ಹೆಗಲ ಮೇಲೆ ಕೈಹಾಕಿ ನನ್ನನ್ನು ತಡೆದ.  ಚಲಂನ ಕಂಡು ಸಾಹೇಬರು ಸಿಟ್ಟಾಗುವುದಿಲ್ಲ ಎಂದು ತಿಳಿದು ನನ್ನ ಮನಸ್ಸು ನಿರಾಳವಾಯಿತು.   ಆದರೂ ಒಳಗೊಳಗೆ ದುಗುಡ ಇದ್ದೇ ಇತ್ತು.  ಅವರ ಸಿಟ್ಟಿನ ಪರಿಚಯ ನನಗೆ ಚೆನ್ನಾಗಿತ್ತು.

ಸಾಹೇಬರ ಪರಿಚಯವೇ ಅವರ ಆ ಕೆಂಗಣ್ಣು ಬೀರುವ ಸಿಟ್ಟಾಗಿತ್ತು.  ಅವರ ಮುಖದಲ್ಲಿ ನಾನು ಕಂಡ ಮೊದಲ ಭಾವನೆಯೇ ಕೋಪ.  ಕೋರ್ಟಿನಲ್ಲಿ ಬೆರಳಚ್ಚುಗಾರನಾಗಿ ಸೇರಿದ ಮೊದಲ ಬಾರಿ ನಾನು ಓಪನ್ ಕೋರ್ಟಿಗೆ ಹೋಗಿದ್ದೆ.  ಅಲ್ಲಿ ನಡೆಯುತ್ತಿರುವ ಸಾಕ್ಷಿಯ ಹೇಳಿಕೆಯನ್ನು ಸಾಹೇಬರು ಪುನರುಚ್ಚರಿಸಿದಂತೆ ಬೆರಳಚ್ಚು ಮಾಡುವುದು ನನ್ನ ಕೆಲಸ.  ಅದು ಮೊದಲ ಬಾರಿಯಾದುದರಿಂದ ಹೆದರಿಕೊಂಡು ಅವರು ಕ್ಷೀಣದನಿಯಲ್ಲಿ ಹೇಳುವುದು ನನಗೆ ಸರಿಯಾಗಿ ಕೇಳುತ್ತಿರಲಿಲ್ಲ.  ನಾನು ಎರಡೆರಡು ಬಾರಿ ಏನ್ ಸರ್, ಏನ್ ಸರ್.. ಎಂದು ಕೇಳುವುದು ಅವರಿಗೆ ಸಹನವಾಗದೇ ನನ್ನತ್ತ ಕಡುಕೋಪದಿಂದ ಕೆಂಗಣ್ಣು ಬೀರಿ ನೋಡಿ ದನಿಯೆತ್ತರಿಸಿ ಹೇಳಲುತೊಡಗಿದರು.  ಎರಡು ತಾಸು ಅವರ ಸಿಟ್ಟನ್ನು ಎದುರಿಸಿ ಹೊರಬಂದ ನಂತರ ಅವರು ಒಳಹೋಗಿ ನಾನು ಟೈಪ ಮಾಡಿದುದನ್ನು ತರಿಸಿ ನೋಡಿದರೆನಿಸುತ್ತದೆ.  ನನ್ನನ್ನು ಕರೆಸಿದರು.  ನನ್ನನ್ನು ಕರೆಯಲು ಬಂದ ಇದೇ ದಫೇದಾರ ಹೆದರ್‍ಕೋಬ್ಯಾಡ ತಮ್ಮಾ.  ಭಾಳ ಸಿಡಕ್ ಅದಾನ್ ಸಾಹೇಬ.  ದಿವ್ಸಾ ಕುಡದ ಕುಡದ ಮನ್ಯಾಗೂ ಹಿಂಗ ಮಾಡ್ತಿದ್ದ ಯಾಂಬಲ್ಲಾ ಅವನ ಹೇಂತೀನ ಓಡಿಹೋಗ್ಯಾಳ.  ರೊಕ್ಕಾ ತಿಂದ್ ಜಜ್‌ಮೆಂಟ ಕೊಡ್ತಾನಂವಾ. ಅಂವ್ಗೇನ್ ಹೆದರೂ ಜರೂರತ್ತಿಲ್ಲ.  ಸುಮ್ಮ ಅಂವ ಹೇಳಿದ್ದ ಕೇಳಿಸ್ಕೊಂಡ ಅಲ್ಲೇ ಮರ್‍ತ ಬಾ.  ಆಮ್ಯಾಲ್ ಉಳದದ್ದ ಕತಿ ಹೇಳ್ತೇನ್.  ಧೈರ್ಯಲೇ ಹೋಗಿಬಾ… ಎಂದು ಯುದ್ಧಕ್ಕೆ ಹೊರಟವನಂತೆ ಧೈರ್ಯ ತುಂಬಿ ಕಳಿಸಿದ.

ಪರವಾನಿಗೆ ಕೇಳಿ ಒಳಹೋದ ನನ್ನನ್ನು ಕಣ್ಣೆತ್ತಿ ಸಹ ನೋಡದ ಸಾಹೇಬರು ಯಾ ಸೂಳೆಮಗಾ ನಿಂಗ್ ನೋಕರಿ ಕೊಟ್ಟಲೇ? ಎಷ್ಟ ಕೊಟ್ಟ ಬಂದೀ?  ಒಂದಕ್ಷರ ಟೈಪ ಮಾಡಾಕ ಬರೂದುಲ್ಲ, ಬಂದ್ ಬಿಡ್ತಾರ್ ನಮ್ ತಲೀ ತಿನ್ನಾಕ.  ತೊಗೋ ಕರೆಕ್ಷನ್ ಮಾಡ್ಕೊಂಡ ಬಾ. ಎಂದು ನನ್ನತ್ತ ಹಾಳೆಗಳನ್ನು ಎಸೆದರು.  ನಾನು ನೆಲಕ್ಕೆ ಬಿದ್ದ ಹಾಳೆಗಳನ್ನು ಎತ್ತಿಕೊಂಡೆ.  ಹಾಳೆಗಳ ತುಂಬೆಲ್ಲ ರಕ್ತಪಾತ.  ಅಳು ತಡೆದುಕೊಂಡು ಹೊರಬಂದೆ.

ಚಲಂ ಬಾಲ ಅಲ್ಲಾಡಿಸುತ್ತ ಖುಷಿಯಾಗಿ ಹೊರಬಂತು.  ನಾನು ಅಲ್ಲಿ ಇರುವುದನ್ನು ಅದು ಕಂಡೇ ಇಲ್ಲವೆಂಬಂತೆ ನೇರ ಶಿರಸ್ತೇದಾರರ ಕೋಣೆಗೆ ಹೋಯಿತು.  ನಾನು ಹಿಂಬಾಲಿಸಿದೆ.  ಅದನ್ನು ಕಂಡು ಖುಷಿಗೊಂಡ ಶಿರಸ್ತೇದಾರರು ಇದ ಏನ್ರೀ ನಿಮಗ್ ಹಾದ್ಯಾಗ ಸಿಕ್ಕಿದ್ದು.  ಭಾರಿ ಚಾಪ್ಟರ ನನ್ನ ಮಗಂದೈತಿ.  ಯಾರ ಹೊಸವಾಗಿ ಬರ್‍ತಾರು ಅವರ ಬೆನ್ನ ಹತ್ತಿ ಹೊಕ್ಕೇತಿ.  ಇವತ್ತೇನ್ ಹಳಬರ ನೆನಪಾಗೈತಿ ಕಾಣ್ತೈತಿ ಬಂದೈತಿ.. ಎಂದು ತನ್ನ ಮಗನನ್ನು ಎತ್ತಿಕೊಳ್ಳುವಂತೆ ಎತ್ತಿಕೊಂಡು ಅದಕ್ಕೆ ಮುದ್ದು ಮಾಡತೊಡಗಿದರು.  ಅವರಿಗೆ ಮನುಜರ ಮೇಲೂ ಅದೇ ರೀತಿಯ ಪ್ರೀತಿ.  ಅಂದು ನಾನು ಅಳುಮುಖದಲ್ಲಿ ಹಾಳೆಗಳನ್ನು ಹಿಡಿದುಕೊಂಡು ಬಂದಾಗ ಅಲ್ಲಿ ಖಾಲಿಯಿದ್ದ ಟೈಪಿಂಗ ಮಶೀನಿನ ಮೇಲೆ ಕುಳಿತುಕೊಂಡು ಬೆರಳಚ್ಚು ಮಾಡಲು ಹೇಳಿದರು.  ಹೊಸದಾಗಿ ಕೇಸು ದಾಖಲು ಮಾಡುವವರು ಐವತ್ತು ರೂಪಾಯಿ, ಅಫಿಡೆವಿಟ್ ಮಾಡಿಸಿಕೊಂಡು ಹೋಗುವವರು ಇಪ್ಪತ್ತು, ಮತ್ತೇನಾದರೂ ಚಿಕ್ಕ ಕೆಲಸಗಳು ಇದ್ದರೆ ಹತ್ತು ರೂಪಾಯಿ ಅವರ ಟೇಬಲ್ಲಿನ ಮೇಲೆ ಇಡುತ್ತಿದ್ದುದನ್ನು ಗಮನಿಸಿ ನನಗೆ ಒಳಗೊಳಗೆ ಅವರ ಬಗ್ಗೆ ಹೇಸಿಗೆಯಾಗತೊಡಗಿತು.  ಆದರೆ ಅವರು ನಾನು ಟೈಪ್ ಮಾಡಿದ ಕಾಗದ ತೆಗೆದುಕೊಂಡು ಮತ್ತೊಂದು ಸಾರಿ ಹೋಲಿಸಿ ನೋಡಿ ಅಲ್ಲಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ತೋರಿಸಿ ಅವನ್ನು ಪ್ರೀತಿಯಿಂದ ತಿಳಿಸಿ ಹೇಳಿ ಮತ್ತೆ ಒಂದೂ ತಪ್ಪಾಗದಂತೆ ಬೆರಳಚ್ಚು ಮಾಡಲು ಹೇಳಿದರು.  ನಂತರ ಒಂದೆರಡು ಜೋಕುಗಳನ್ನು ಹೇಳಿ ಮನಸ್ಸನ್ನು ತಿಳಿಗೊಳಿಸಿದ್ದರು.  ಅಂದು ಅವರು ನೀಡಿದ ಮಾನಸಿಕ ಸ್ಥೈರ್ಯದಿಂದ ಬಹುಶಃ ಮಾರನೆಯ ದಿನ ನಾನು ಕೆಲಸಕ್ಕೆ ಮತ್ತೆ ಹಾಜರಾದೆ.

ಚಲಂನ ಪರಿಚಯ ಎಲ್ಲರಿಗೆ ಇದೆ ಎಂದುಕೊಂಡು ಅದಕ್ಕೆ ಎಲ್ಲೆಲ್ಲಿ ತಿರುಗಾಡುವುದಿದೆಯೋ ತಿರುಗಾಡಿ ಬರಲಿ ಎಂದು ಶಿರಸ್ತೇದಾರರಿಗೆ ನಮಸ್ಕಾರ ಹೇಳಿ, ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ನಾನು ನನ್ನ ಕಾಪಿಂಗ್ ಸೆಕ್ಷನ್ನಿಗೆ ಬಂದೆ.  ಓಪನ್ ಕೋರ್ಟಿನಲ್ಲಿ ನಾನು ಮಾಡುತ್ತಿದ್ದ ತಪ್ಪುಗಳು ಹೆಚ್ಚಾಗಿದ್ದುದರಿಂದ ನನ್ನನ್ನು ಕಾಪಿಂಗ್ ಸೆಕ್ಷನ್ನಿಗೆ ತಳ್ಳಲಾಗಿತ್ತು.

ಒಂದು ವಾರ ಮಾತ್ರ ನಾನು ಆರಾಮಾಗಿ ಎಲ್ಲರೊಡನೆ ಮಾತಾಡಿಕೊಂಡು ಕೆಲಸ ಮಾಡಿದೆ.  ಶನಿವಾರ ನನ್ನ ಎದುರಿಗೆ ಧುತ್ತೆಂದು ನಿಂತುಬಿಟ್ಟಿತ್ತು ಒಂದು ಪ್ರಶ್ನೆ.  ಒಂದು ವಾರ ವಕೀಲರಿಂದ, ಕಕ್ಷಿಗಾರರಿಂದ ತೆಗೆದುಕೊಂಡ ಲಂಚವನ್ನು ಹಂಚುವ ದಿನವಂದು.  ನನಗೆ ನೌಕರಿ ಸಿಕ್ಕ ದಿನವೇ ನನ್ನ ಗೆಳೆಯರು ಛೇಡಿಸಿದ್ದರು.  ಇನ್ನೇನು ಸಂಬಳಕ್ಕಿಂತ ಗಿಂಬಳ ಜಾಸ್ತಿ ಬರುತ್ತದೆ ವರ್ಷದಲ್ಲಿ ಒಂದು ಮನೆ ಕಟ್ಟುವೆನೆಂದು.  ನನಗೆ ಹೇಸಿಗೆಯಾಗಿತ್ತು.  ಸತ್ತರೂ ಲಂಚ ತೆಗೆದುಕೊಳ್ಳುವುದಿಲ್ಲವೆಂದು ಪ್ರಮಾಣ ಮಾಡಿದ್ದೆ.  ಅದನ್ನು ಮುರಿಯುವ ಮೊದಲ ಪ್ರಯತ್ನ ಇದೇ ಕೋಣೆಯಲ್ಲಿ ನಡೆದಿತ್ತು.  ಆ ಸೆಕ್ಷನ್ನಿಗೆ ಮುಖ್ಯಸ್ಥರಾದ ಸುನಂದಾ ಅವರು ಸಂಜೆ ಹೋಗುವ ವೇಳೆಗೆ ತಮ್ಮ ಡ್ರಾವರಿನಲ್ಲಿದ್ದ ಹಣವನ್ನೆಲ್ಲ ಹೊರತೆಗೆದು ಎಲ್ಲರನ್ನು ಅವರ ಟೇಬಲ್ ಬಳಿಗೆ ಕರೆದು ಎಣಿಸಿ ಐದು ಭಾಗ ಮಾಡಿ ಎಲ್ಲರ ಮುಂದೆ ಇರಿಸಿದರು.  ನನಗೆ ಎದೆ ದಡದಡ ಎನ್ನತೊಡಗಿತು.  ನಾನು ಇದನ್ನು ತೆಗೆದುಕೊಳ್ಳಲಾರೆ ಎಂದು ಹೇಳಿದುದಕ್ಕೆ ಅವರೆಲ್ಲ ಖೊಳ್ಳನೆ ನಕ್ಕರು.  ಅದ್ಕೇನಾಗುದುಲ್ಲ ತೊಗೊಳಲೆ ಎಂದರು.  ನನಗ್ ಬ್ಯಾಡ್ರಿ ಎಂದೆ.  ಅವರ ಒತ್ತಾಯ ಹೆಚ್ಚಿತು.  ಅದರಿಂದ ನನಗೆ ಕೋಪ ಬರತೊಡಗಿತು.  ನಾನು ಹಣ ವಾಪಸು ಸರಿಸಿದೆ.  ಒಬ್ಬರು ಅದನ್ನೆತ್ತಿ ನನ್ನ ಕೈಯಲ್ಲಿ ತುರುಕಿದರು.  ನನಗೆ ರೋಸಿಹೋಗಿ ಅವನ್ನೆಲ್ಲ ಪರಪರನೆ ಹರಿದು ಕಸದ ಬುಟ್ಟಿಗೆ ಎಸೆದು ಬ್ಯಾಗು ಎತ್ತಿಕೊಂಡು ಹೊರಟುಬಿಟ್ಟೆ.  ದಾರಿ ತುಂಬ ಕೋಪವೊಮ್ಮೆ, ಖಿನ್ನತೆಯೊಮ್ಮೆ ನನ್ನ ಮನಸ್ಸನ್ನು ಕೊಳಚೆ ಮಾಡಿಬಿಟ್ಟವು.

ಅಲ್ಲಿಗೆ ನನ್ನ ಮನಸ್ಸನ್ನು ಅರ್ಥಮಾಡಿಕೊಂಡು ಅವರು ನನಗೆ ಮತ್ತೆ ಲಂಚ ಹಂಚಲು ಬರುವುದಿಲ್ಲ ಎಂದು ನಾನಂದುಕೊಂಡುದು ಸುಳ್ಳಾಗಿತ್ತು.

ಚಲಂ ಓಪನ್ ಕೋರ್ಟಿನ ಒಳಗೆ ಓಡಿಹೋಗುವುದು ಕಂಡಿತು.  ಗಾಬರಿಯಾಗಿ ನಾನೂ ಓಡಿದೆ.  ಅಷ್ಟರಲ್ಲಿ ಅದು ಬೆಂಚ್ ಕ್ಲಾರ್ಕನ ಬದಿಗಿದ್ದ ಕುರ್ಚಿಯಲ್ಲಿ ಕುಳಿತಿತ್ತು.  ಬೆಂಚ್ ಕ್ಲಾರ್ಕ ಅದನ್ನು ನೋಡಿರಲಿಲ್ಲ ಎನಿಸುತ್ತದೆ.  ಅದೇನೋ ಬರೆಯುವುದರಲ್ಲಿ ಅವರು ಮಗ್ನರಾಗಿದ್ದರು.  ಅಷ್ಟರಲ್ಲಿ ವಕೀಲರೊಬ್ಬರು ಬಂದು ಹತ್ತರ ನೋಟೊಂದನ್ನು ಅವರ ಎದುರಿಗೆ ಇರಿಸಿ ಇವತ್ ಸಾಕ್ಷಿ ಆಗುವಂಗ್ ನೋಡ್ಕೊಳ್ರೀ ಎಂದ.  ಮುಖ ಎತ್ತಿ ಅವನನ್ನು ನೋಡಿದವರೆ, ಎದುರಿಗಿದ್ದ ಹಣವನ್ನು ಡ್ರಾವರಿಗಿಳಿಸಿ, ನಮ್ಮ ಕೈಯಾಗ್ ಏನ್ ಐತ್ರಿ ವಕೀಲ್ರ, ಅವರ ಮನಸ್ಸಿದ್ರ ಆಗೇ ಆಗ್ತೈತಿ ಎಂದು ನ್ಯಾಯಾಧೀಶರು ಕೂರುವ ಕುರ್ಚಿಯ ಕಡೆಗೆ ಕೈ ಮಾಡಿ ತೋರಿಸಿದರು.  ಅಷ್ಟಕ್ಕೆ ಸಂತುಷ್ಟನಾಗಿ ವಕೀಲ ಹೊರಟುಹೋದ.  ಆಗಲೇ ಅವರಿಗೆ ಚಲಂ ಕಣ್ಣಿಗೆ ಬಿದ್ದಿದ್ದು ಹಾಗೂ ನಾನೂ ಕಂಡದ್ದು.  ಚಲಂನ ತಲೆಯ ಮೇಲೆ ಕೈಯಾಡಿಸುತ್ತ ನನ್ನನ್ನುದ್ದೇಶಿಸಿ ಏನ್ ಟೈಪಿಸ್ಟ ಕಾಪಿಸ್ಟ ಸಾಹೇಬ್ರು ನಮ್ಮ ಕಡೆ ಕೆಲ್ಸಾ ತಗದಾರು? ಎಂದು ಕೇಳಿದರು.  ನಾನು ನಕ್ಕು ಮರಳಿದೆ.

ಮೊದಲು ಅವರು ಎಸ್ಟಾಬ್ಲಿಷಮೆಂಟ ಕ್ಲಾರ್ಕಾಗಿದ್ದವರು.  ನಾನು ಹಣ ಹರಿದು ಹಾಕಿದ ನಂತರದ ಸೋಮವಾರ ಬೇಡದ ಮನಸ್ಸಿನಿಂದ ಹಾಜರಾಗಿ ನನ್ನ ಕುರ್ಚಿಯ ಮೇಲೆ ಯಾರೊಡನೆಯೂ ಮಾತನಾಡದೇ ಕುಳಿತಾಗ ಅವರೇ ನನ್ನನ್ನು ಕರೆದಿದ್ದರು.  ಅಲ್ಲಿಯೇ ಕುಳಿತಿದ್ದ ಅಕೌಂಟ್ಸ ಶಿರಸ್ತೇದಾರರಿಗೆ ನಮಸ್ಕರಿಸಿ ನಾನು ಅವರ ಎದುರಿಗೆ ಇದ್ದ ಹಳೆಯ ಕಾಲದ ಕಟ್ಟಿಗೆಯ ಕುರ್ಚಿಯ ಮೇಲೆ ಕುಳಿತಿದ್ದೆ.  ನನ್ನ ಪೂರ್ವಾಪರಗಳ ಕೇಳಿದರು.  ಓ ನಮ್ಮೂರಾವ್ರ ಐಂತ ನೀವಾ? ಎಂದು ಖುಷಿಗೊಂಡು ಅವರು ಬರೆಯುತ್ತಿದ್ದ ದೊಡ್ಡ ರಜಿಸ್ಟರನ್ನು ನನ್ನತ್ತ ತಿರುಗಿಸಿ ನೋಡ್ರಿ ನಿಮ್ಮ ಫಸ್ಟ ಪಗಾರ ನಾನ ಮಾಡಾಕತ್ತೇನಿ ಎಂದು ಅಲ್ಲಿದ್ದ ನನ್ನ ಹೆಸರಿನ ಮೇಲೆ ಬೆರಳು ತೋರಿಸಿದರು.  ನಾನು ಮೆತ್ತಗೆ ನನ್ನ ಸಂಬಳ ಏನೆಂದು ನೋಡಿದೆ.  ಏನೆಂದು ಅರ್ಥವಾಗಲಿಲ್ಲ.  ಹತ್ ರೂಪಾಯ್ ಕೊಡ್ರಿ. ಟ್ರೇಜರೀಗಿ ಕೊಡಬೇಕಾಗ್ತೇತಿ ಎಂದರು.  ನಮ್ಮ ಸಂಭಾಷಣೆಯನ್ನು ಕೇಳುತ್ತಿದ್ದವರಂತೆ ಮಧ್ಯೆ ಅಕೌಂಟ್ಸ ಶಿರಸ್ತೇದಾರರು ಏ ಮೊದ ಅರ್ಧಾ ತಿಂಗಳ್ದ ಪಗಾರ ಐತ್ಯವಂದಾ. ಬಿಟ್ ಬಿಡ ಹೋಗ್ಲಿ ಎಂದು ಕರುಣೆ ತೋರಿದರು.  ಅದಕ್ಕೆ ಹಂಗಾರ ನೀವ್ ಕೊಡ್ರಿ.  ಅಲ್ಲಿ ಟ್ರೆಜರ್‍ಯಾಗ ಸುಳೆಮಕ್ಳ ಪಗಾರ ಎಷ್ಟೈತಿ ಎಲ್ಲಿ ನೋಡ್ತಾರು, ಎಷ್ಟ ಮಂದಿ ಪಗಾರ ಐತ್ಯೋ ಹತ್ತರ್‍ಲೇ ಗುಣಾಕಾರ ಮಾಡ್ತಾರು. ಅಷ್ಟ ಕೊಡ್ಬೇಕ್ರಿ ಎಂದು ಉತ್ತರಿಸಿದ.  ಆ ಉತ್ತರ ತನಗೆ ಅಲ್ಲವೇ ಅಲ್ಲ ಎಂಬಂತೆ ಅವರು ಮತ್ತೆ ತಮ್ಮ ಕೆಲಸದಲ್ಲಿ ಮುಳುಗಿದರು. ನಾನು ಕೊಡುವುದಿಲ್ಲ ಎಂದು ಹೇಳುವ ಮೊದಲು ನನಗೆ ಅನಿಸಿದ್ದು – ನಾನು ಕೊಡಲಿಲ್ಲ ಎಂದರೆ ಬೇರೆ ಯಾರೋ ನನಗಾಗಿ ಲಂಚ ಕೊಡಬೇಕು.  ನನ್ನ ಪರವಾಗಿಯೂ ಯಾರೂ ಕೊಡಬೇಡಿ ಎಂದು ಹಟ ಹಿಡಿದರೆ ಯಾರಿಗೂ ಸಂಬಳ ಸಿಗುವುದಿಲ್ಲ.  ಅದಕ್ಕಾಗಿ ಯಾರಾದರೂ ಕೊಟ್ಟೇ ಕೊಡುವರು.  ಯಾರಾದರೂ ಕೊಡಲಿ ನನಗೇನು ನಾನು ಮಾತ್ರ ಕೊಡುವುದಿಲ್ಲ ಎಂದು ಹೇಳಿಬಿಟ್ಟೆ.  ಅಂದಿನಿಂದ ಆ ಕ್ಲಾರ್ಕು ನನ್ನನ್ನು ಟೈಪಿಸ್ಟ ಕಾಪಿಸ್ಟ ಸಾಹೇಬರು ಎಂದೇ ಕರೆಯುತ್ತಿದ್ದರು.

ಪೆಂಡಿಂಗ್ ಸೆಕ್ಷನ್ ಅಂದರೆ ಕೇಸಿನ ಕಾಗದಪತ್ರಗಳನ್ನು ಇಡುವ ಸೆಕ್ಷನ್ನಿನಿಂದ ಒಂದು ಫೈಲು ತರಬೇಕಾದುದು ನೆನಪಾಗಿ ಅಲ್ಲಿಗೆ ಹೋದೆ.  ಪೆಂಡಿಂಗ್ ಕ್ಲಾರ್ಕನ್ನು ಕಂಡಾಗಲೆಲ್ಲ ನನಗೆ ಕರುಣೆ ಉಕ್ಕಿ ಬಂದಂತಾಗುವುದು.  ಅವರು ಎಂದಿಗೂ ಯಾರಿಗೂ ಸಿಟ್ಟಿನಿಂದ ಮಾತನಾಡಿದವರಲ್ಲ.  ಮಾಸಲು ಬಣ್ಣದ ಅಂಗಿ, ದೊಗಳೆ ಪ್ಯಾಂಟನ್ನು ತೊಟ್ಟುಕೊಂಡು ಯಾವಾಗಲೂ ಸಮನ್ಸಗಳನ್ನು ಯರ್ರಾಬಿರ್ರಿ ಅಕ್ಷರಗಳಲ್ಲಿ ಬರೆಯುತ್ತ ಕುಳಿತಿರುತ್ತಿದ್ದರು.  ಯಾರೂ ಯಾವುದೇ ಕೆಲಸ ಹೇಳಿದರೂ ತಕ್ಷಣವೇ ಮಾಡುತ್ತಿದ್ದರು.  ಪೆಂಡಿಂಗ್ ಕ್ಲರ್ಕಾದರೂ ಅವರ ಹತ್ತಿರ ಯಾವುದೇ ಕೆಲಸ ಪೆಂಡಿಂಗ ಉಳಿಯುತ್ತಿದ್ದಿಲ್ಲ, ಲಂಚ ಕೊಡದೇ ಇದ್ದವರ ಕೆಲಸವನ್ನು ಹೊರತುಪಡಿಸಿ.  ನಾನು ಬಂದುದನ್ನು ಕಂಡು ಮುಗಳ್ನಕ್ಕು ಕುರ್ಚಿಯನ್ನು ತೋರಿಸಿದರು.  ನಾನು ಕೇಸ ನಂಬರ ಹೇಳಿ ಫೈಲು ಬೇಕೆಂದೆ.  ಅದನ್ನು ಕೊಡುತ್ತೇನೆ ಮೊದಲು ಕೂತುಕೊ ಎಂದರು.  ನನ್ನ ತಯಾರಿ ಹೇಗಿದೆ ಎಂದು ಕೇಳಿದರು.  ನಾನು ಈ ನೌಕರಿ ಬಿಟ್ಟು ಲಂಚದ ಸಂಭವವೇ ಇಲ್ಲದ ಕೇಂದ್ರ ಸರ್ಕಾರದ ಅಂಕಿಸಂಖ್ಯೆ ವಿಭಾಗದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ ಅಭ್ಯಾಸ ಮಾಡುತ್ತಿದ್ದುದು ಅವರಿಗೆ ಮಾತ್ರ ಗೊತ್ತಿತ್ತು.  ಪ್ರತಿಸಾರಿ ಭೇಟಿಯಾದಾಗ ಮುತುವರ್ಜಿಯಿಂದ ಅದರ ಬಗ್ಗೆ ಕೇಳಿ, ಬೇಗ ಇಲ್ಲಿಂದ ಹೊರಗೆ ಹೋಗು ಎಂದು ಸ್ಫೂರ್ತಿ ನೀಡುತ್ತಿದ್ದರು.  ತಾನು ಸಿಕ್ಕಿಹಾಕಿಕೊಂಡ ಈ ಲಂಚದ ಜೈಲಿನಲ್ಲಿ ನನ್ನಂಥವರು ಇರಬಾರದು ಎಂದು ಅವರು ಪದೇ ಪದೇ ಹೇಳುತ್ತಿದ್ದರು.  ಅವರ ಪ್ರಶ್ನೆಗೆ ಉತ್ತರಿಸಿ ಅವರ ಮಾತುಗಳನ್ನೆಲ್ಲ ಕೇಳಿ ಹೋಗಬೇಕೆನ್ನುವಾಗ ಚಲಂ ಅಲ್ಲಿಯೂ ಹಾಜರು.  ಅದು ಅವರ ಕಾಲು ನೆಕ್ಕಿತು.  ಅದಕ್ಕೆ ಅವರು ಪ್ರತಿಭಟಿಸಲಿಲ್ಲವಾದರೂ ಅದನ್ನು ಅವರು ಪ್ರೀತಿಸಲಿಲ್ಲ.  ನಾನು ಅದನ್ನು ಬೈದು ಹೊರಗಟ್ಟಿದೆ.  ಅವರಿಗೆ ಧನ್ಯವಾದ ಹೇಳಿ ನಾನು ತಿರುಗಿ ನನ್ನ ಸೆಕ್ಷನ್ನಿಗೆ ಹೋದೆ.

ಅಲ್ಲಿ ಹೋದರೆ ಯಾರೂ ಇರಲಿಲ್ಲ, ಅಜ್ಜಿಯೊಂದನ್ನು ಹೊರತುಪಡಿಸಿ.  ಆ ಅಜ್ಜಿ ನಮ್ಮಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿತ್ತು.  ಅವಳ ವಯಸ್ಸು ಸುಮಾರು ಅರವತ್ತು ದಾಟಿದಂತೆ ಕಂಡರೂ ದಾಖಲೆಗಳಲ್ಲಿ ಅವಳದು ಐವತ್ತು ವಯಸ್ಸು.  ಹತ್ತು ವರ್ಷಗಳ ಹಿಂದೆ ನಮ್ಮ ಆಫೀಸಿನಲ್ಲಿ ಆಕೆಯ ಗಂಡ ಕೆಲಸ ಮಾಡುತ್ತಿದ್ದ.  ಕುಡಿಕುಡಿದು ರೋಗ ಬಂದು ಅವನು ಸತ್ತುಹೋದ.  ಆಗ ಅವಳ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಕರು.  ಅದಕ್ಕಾಗಿ ಅನುಕಂಪದ ಆಧಾರದ ಮೇಲೆ ಅಜ್ಜಿಗೆ ಕೆಲಸ ತೆಗೆದುಕೊಳ್ಳಬೇಕಾಯಿತು.  ಎರಡನೇ ಇಯತ್ತೆಯವರೆಗೆ ಮಾತ್ರ ಕಲಿತ ಅವಳ ಹತ್ತಿರ ಯಾವುದೇ ಜನ್ಮ ದಾಖಲೆ ಇರಲಿಲ್ಲ.  ಅದಕ್ಕೆ ಅವಳ ಪರಿಚಯದವರೊಬ್ಬರು ಅವಳ ಹತ್ತಿರ ಎರಡು ಸಾವಿರ ರೂಪಾಯಿ ತೆಗೆದುಕೊಂಡು ಅವಳ ವಯಸ್ಸು ನಲವತ್ತು ಎಂದು ಪ್ರಮಾಣಪತ್ರ ಮಾಡಿಸಿಕೊಟ್ಟು ಅವಳಿಗೆ ಹದಿನೆಂಟು ವರ್ಷ ಕೆಲಸ ಸಿಗುವಂತೆ ವ್ಯವಸ್ಥೆ ಮಾಡಿದ್ದರು.  ಅದನ್ನು ಯಾರಿಗೂ ಹೇಳಬೇಡಿ ಎಂದು ಎಲ್ಲರಿಗೂ ಹೇಳಿಬಿಟ್ಟಿತ್ತು ಅಜ್ಜಿ.  ಆದರೆ ಅವಳ ನಿಯತ್ತು ಹಾಗೂ ಅವಳ ಮೇಲಿನ ಕರುಣೆಯಿಂದ ಯಾರೂ ಅದರ ಬಗ್ಗೆ ಚಕಾರವೆತ್ತುತ್ತಿರಲಿಲ್ಲ.  ಇಡೀ ಕೋರ್ಟಿನ ಎಲ್ಲ ಸಿಪಾಯಿಗಳಲ್ಲಿ ಹೇಳಿದ್ದನ್ನು ಎದುರುತ್ತರ ನೀಡದೇ ಯಾವುದೇ ನೆಪ ಹೇಳದೇ ನಗುನಗುತ್ತ ಕೆಲಸ ಮಾಡಿಕೊಡುತ್ತಿದ್ದ ಏಕೈಕ ಸಿಪಾಯಿ ಅವಳು.  ಎಲ್ಲರಿಗೂ ಸರ್, ಮೇಡಂ ಎನ್ನುತ್ತ ಅವರು ಹೇಳಿದ ಕೆಲಸಗಳನ್ನು ಮಾಡಿ ಅವರು ಕೊಟ್ಟ ಐದು ಹತ್ತು ರೂಪಾಯಿಗಳನ್ನು ಬೇಡ ಬೇಡ ಎನ್ನುತ್ತಲೇ ನಗುತ್ತ ತನ್ನ ಕುಪ್ಪಸದಲ್ಲಿ ಇಟ್ಟುಕೊಳ್ಳುತ್ತಿದ್ದಳು.

ಎಲ್ಲರೂ ಎಲ್ಲಿ ಹೋಗಿದ್ದಾರೆಂದು ಕೇಳಿದೆ.  ರುಕ್ಮಿಣಿ ಹೊಟೇಲಿಗೆ ಹೋಗಿರುವರೆಂದು ಹೇಳಿದಳು.  ಚಲಂ ಬಾಗಿಲ ಮೂಲೆಯಲ್ಲಿ ಕುಳಿತುಕೊಂಡಿತ್ತು.  ಅದೇ ವೇಳೆಗೆ ತನ್ನ ಕೈಯಲ್ಲಿ ಕಾಗದ ಒಂದನ್ನು ಹಿಡಿದುಕೊಂಡು ಝರಾಕ್ಸ ಬೇಕೆಂದು ಸಮನ್ಸ ವಾರಂಟ್ ನೋಟೀಸುಗಳನ್ನು ಜಾರಿ ಮಾಡುವ ಪ್ರೊಸೆಸ್ ಸರ್ವರ ಬಂದ.  ಅವನನ್ನು ನೋಡಿದ್ದೇ ಚಲಂ ಅವನ ಕಾಲಿಗೆ ಜಿಗಿಯಿತು.  ಅಲೇ ಮಗನಾ ಇಲ್ಲಿದಿ? ಎಂದು ಕುಳಿತು ಅದರ ಮೈಯೆಲ್ಲ ತೀಡಿದ.  ನಮ್ಮ ಸೆಕ್ಷನ್ನಿಗೆ ಬಾ ಬಿಸ್ಕಿಟ್ ಕೊಡುವೆ ಎಂದು ಕರೆದು ಝರಾಕ್ಸ ಮಾಡಿಕೊಂಡು ಅದನ್ನು ಕರೆದುಕೊಂಡು ಹೋದ.  ಎಲ್ಲ ಪ್ರೊಸೆಸ್ ಸರ್ವರ್‌ಗಳಲ್ಲಿ ಅತ್ಯಂತ ಜನಪ್ರಿಯನಾತ.  ಲಂಚ ಕೊಟ್ಟರೆ ಕೋರ್ಟಿನಲ್ಲಿ ತಿರುಗಾಡುವವರಿಗೇ ವಾರಂಟ್ ಜಾರಿಯಾಗುವುದಿಲ್ಲ. ಆದರೆ ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಿರುವ ಯಾರನ್ನಾದರೂ ಹಿಡಿದುಕೊಂಡು ಬಾ ಎಂದರೆ ಅವನು ಎಲ್ಲಿದ್ದರೂ ಹುಡುಕಾಡಿ ಹಿಡಿದುಕೊಂಡು ಬರುವಷ್ಟು ಚಾಣಾಕ್ಷ.

ಅವನು ಹೋದ ಮೇಲೆ ಅಜ್ಜಿ ನನ್ನನ್ನೂ ಹೊಟೇಲಿಗೆ ಕರೆದಿದ್ದಾರೆಂದು ಹೇಳಿದಳು.  ನನಗೆ ಮನಸ್ಸಿರಲಿಲ್ಲ.  ಆ ದಿನ ನಡೆದ ರಾದ್ಧಾಂತದಿಂದ ನನಗೆ ಅಲ್ಲಿ ಹೋಗುವ ಮನಸ್ಸೇ ಆಗುತ್ತಿರಲಿಲ್ಲ.  ತಂದ ಫೈಲನ್ನು ತೆಗೆದುಕೊಂಡು ಕಾಪಿ ಟೈಪ ಮಾಡುವುದಕ್ಕೆ ಕುಳಿತೆ.  ಜಡ್ಜಮೆಂಟ ತೆಗೆದು ಬೆರಳಚ್ಚು ಯಂತ್ರದಲ್ಲಿ ಹಾಳೆ ಹಾಕಿ ಕುಟ್ಟಲು ಆರಂಭಿಸಿದೆ.  ನ್ಯಾಯಾಧೀಶರ ಹೆಸರು ಕಂಡೊಡನೆ ಆವತ್ತು ದಫೇದಾರ ಹೇಳಿದ ಮಾತುಗಳು ನೆನಪಾದವು.  ನನ್ ಮೂವತ್ತ ವರ್ಷ ಸರ್ವಿಸನ್ಯಾಗ ಇಂಥಾ ದರಿದ್ರ ಸಾಹೇಬನ್ನ ಎಲ್ಲೂ ನೋಡಿಲ್ಲ ನಾ.  ಇದಕಿತ ಮೊದಲಿನ ಸಾಹೇಬ ಹೆಂಗಿದ್ದ ಅಂದಿ.  ವಕೀಲ್ರೆಲ್ಲ ಮಾತಾಡಾಕ ಹೆದರಿ ಸಾಯ್ತಿದ್ರ.  ಇಂವಾ ದಿವ್ಸಾ ಅವರ ಜೋಡಿ ಕುಡಿತಾನ.  ದಿನಾ ಒಬ್ಬಿಲ್ಲೊಬ್ಬ ವಕೀಲ ಅವ್ರ ಮನ್ಯಾಗ ಇದ್ದ ಇರ್‍ತಾನ.  ರೊಕ್ಕಾ ತೊಗೊಂಡ ಜಜಮೆಂಟ ಕೊಡ್ತಾನ.  ನಮಗ್ ಹತ್ರೂಪಾಯ್ ಕೊಡಾಕ ಕೊಂಯ್ ಕೊಂಯ್ ಮಾಡ್ತಾರು.  ಅಂವಗ ಸಾವ್ರಾರಗಂಟಲೆ ಕೊಡ್ತಾರ್.  ಅಷ್ಟಾದ್ರೂ ಸಾಲೂದುಲ್ಲ.  ತಿಂಗಳ ಲಾಸ್ಟಲಾಸ್ಟೀಗಿ ಕಂಟ್ರಿ ದಾರೂ ಕುಡಿತಾನ್.  ನಾನ ತಂದ ಕೊಡ್ತೇನ ಅಂವಗ ದಿನಾ ಒಂದ್ ಕ್ವಾರ್ಟರ.   ಅದ್ಕ ವಕೀಲ್ರ ಮುಂದ ಅವಾಜ ಬರೂದುಲ್ಲ.  ನಮ್ಮ ಮುಂದ್ ಜಬರ್ ಮಾಡ್ತಾನ್ ಎಂದದ್ದು ಕೇಳಿ, ನ್ಯಾಯಾಧೀಶರ್‍ಯಾರೂ ಲಂಚ ತೆಗೆದುಕೊಳ್ಳುವುದಿಲ್ಲ ಎಂಬ ನನ್ನ ನಂಬಿಕೆ ಸತ್ತುಹೋಗಿತ್ತು.  ಅಂಥ ಲಂಚ ತೆಗೆದುಕೊಂಡು ಕೊಟ್ಟ ತೀರ್ಪನ್ನು ನಾನು ಬೆರಳಚ್ಚು ಮಾಡುತ್ತಿದ್ದೆ.

ಅರ್ಧ ಗಂಟೆಯ ನಂತರ ಎಲ್ಲರೂ ನಗಾಡುತ್ತ ಕೋಣೆ ಪ್ರವೇಶಿಸಿದರು.  ಯಾಕ್ ಬರಲಿಲ್ಲರಿ? ಎಂದು ಕೇಳಿದುದಕ್ಕೆ ಉತ್ತರ ಕೊಡದೇ ನಾನು ನನ್ನ ಕೆಲಸದಲ್ಲಿ ಮಗ್ನನಾದೆ.  ಅವರ ಹಿಂದೆಯೇ ಚಲಂ ಬಂತು, ಅಂದು ರುಕ್ಮಿಣಿ ಹೊಟೇಲಿನ ರಾದ್ಧಾಂತದ ನಂತರವೇ ಅದು ಸಿಕ್ಕದ್ದು ನೆನಪಾಯಿತು.

ಸೋಮವಾರ ನಾನು ಸಂಬಳಕ್ಕೆ ಹತ್ತು ರೂಪಾಯಿ ಕೊಡುವುದಿಲ್ಲ ಎಂದು ಹೇಳಿದುದು ಕೋರ್ಟಿನಲ್ಲಿ ಎಲ್ಲ ಕಡೆಗೂ ಹಬ್ಬಿತ್ತು.  ಅದರ ಪರಿಣಾಮವೋ ಏನೋ ನಮ್ಮ ಸೆಕ್ಷನ್ನಿನಲ್ಲಿ ಕೂಡ ಮತ್ತೆ ಆ ಹಣದ ಬಗ್ಗೆ ಯಾರೂ ಚಕಾರವೆತ್ತಿರಲಿಲ್ಲ ಶನಿವಾರದವರೆಗೆ.  ಶನಿವಾರದ ದಿನವೂ ನನಗೆ ಆ ಲಂಚವನ್ನು ಕೊಡುವ ಪ್ರಯತ್ನ ನಡೆಯಲಿಲ್ಲ.  ಬದಲಾಗಿ ಆ ರುಕ್ಮಿಣಿ ಹೊಟೇಲಿಗೆ ಒತ್ತಾಯದಿಂದ ಕರೆದುಕೊಂಡು ಹೋಗಲಾಯಿತು.

ಮಾಮೂಲಾಗಿ ಕ್ಯಾಂಟೀನಿಗೆ ಚಹಾ ಕುಡಿಯಲು ಹೋಗುತ್ತಿದ್ದೆವು.  ಆವತ್ತು ಹೊಟೇಲಿಗೆ ಯಾಕೆ ಕರೆದುಕೊಂಡು ಹೋದರೆಂದು ಆವಾಗ ತಿಳಿಯಲಿಲ್ಲ.  ಅಲ್ಲಿ ಹೋದ ಮೇಲೆ ತಿನ್ನುವುದಕ್ಕೆ ಏನೇನೋ ಆರ್ಡರ ಮಾಡಿದರು.  ನನಗೇಕೋ ಮನಸ್ಸಿನಲ್ಲಿ ಇದು ನನಗಾಗಿಯೇ ಮಾಡಲಾಗಿದೆ ಎನ್ನಿಸತೊಡಗಿತು.  ಹೋದವಾರ ನಾನು ಹಣವನ್ನು ಹರಿದುಹಾಕಿದ್ದೆ.  ಅದಕ್ಕೆ ಇವತ್ತು ಏನಾದರೂ ತಿನ್ನಿಸಿ ನನ್ನ ಪಾಲಿನದನ್ನು ಖರ್ಚು ಮಾಡಲು ಪ್ರಯತ್ನಸುತ್ತಿರುವರೆ ಎಂದು ಸಂಶಯ ಬರತೊಡಗಿತು.  ತಿಂಡಿ ಬಂದ ಮೇಲೆ ನಮ್ಮಲ್ಲಿ ಹಿರಿಯರಾದ ಕಾಪಿಸ್ಟ ಮಾತನಾಡಲು ಆರಂಭಿಸಿದರು.  ಅವರು ನನ್ನತ್ತ ನೋಡುತ್ತಲೇ ಹೇಳತೊಡಗಿದರು.  ಸುನಂದಾ ಅವರ ಗಂಡ ತೀರಿಕೊಂಡು ಒಂದು ವರ್ಷವಾಯಿತು.  ಅವರಿಗೆ ಒಬ್ಬ ಎರಡು ವರ್ಷದ ಮಗಳಿದ್ದಾಳೆ.  ಅವಳನ್ನು ಪೋಷಿಸುವುದಕ್ಕೋಸ್ಕರ ಅವರ ಊರು ದೂರದ ಚಿಕ್ಕಮಗಳೂರಾದರೂ ಇಲ್ಲಿ ಒಬ್ಬರೇ ಇದ್ದು ಕೆಲಸ ಮಾಡುತ್ತಿದ್ದಾರೆ.  ಆದರೆ ಅವರಿಗೆ ಹಾಗೂ ಉಳಿದವರೆಲ್ಲರಿಗೂ ನನ್ನಿಂದಾಗಿ ಬಹಳ ಕಷ್ಟವಾಗುತ್ತಿದೆ ಎಂದರು.  ನನಗೆ ಒಂದೂ ಹೊಳೆಯಲಿಲ್ಲ.  ನಾನು ಅಂಥದೇನನ್ನು ಮಾಡಿದೆ ಎಂದು ಅರ್ಥವಾಗಲಿಲ್ಲ.  ಅದನ್ನೇ ಕೇಳಿದೆ.  ಅದಕ್ಕೆ ಅವರು ನಾನು ಹಣ ತೆಗೆದುಕೊಳ್ಳಲು ಏನು ತೊಂದರೆಯಿದೆ ಎಂದರು.  ನನಗೆ ಅದು ಹಿಡಿಸುವುದಿಲ್ಲ ಎಂದರು.

ಅದಕ್ಕೆ ಇನ್ನೊಬ್ಬರು ನೀನು ಈಗ ತಾನೇ ನೌಕರಿಗೆ ಸೇರಿರುವೆ.  ನಿನಗಿನ್ನೂ ಮದುವೆಯಾಗಿಲ್ಲ.  ಸಂಸಾರದ ಕಷ್ಟಗಳು ಗೊತ್ತಿಲ್ಲ.  ಸಿಗುವ ಸಂಬಳದಲ್ಲಿ ಹೆಂಡತಿ ಮಕ್ಕಳನ್ನು ಸಾಕುವುದು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದು, ಲಕ್ಷಾಂತರ ಹಣ ಕೊಟ್ಟು ನೌಕರಿಗೆ ಸೇರಿಸುವುದು, ಹೆಣ್ಣುಮಕ್ಕಳಾದರೆ ವರದಕ್ಷಿಣೆ ನೀಡಿ ಮದುವೆ ಮಾಡಿಸುವುದು ಅಸಾಧ್ಯದ ಮಾತು.  ಲಂಚ ತೆಗೆದುಕೊಳ್ಳದೆ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಸೇರಿಸಿ ಅವರ ಶಾಪ ತಟ್ಟಿಸಿಕೊಳ್ಳುವುದಕ್ಕಿಂತ ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ನೌಕರಿ ಕೊಡಿಸಿದರೆ ಅವರು ಲಂಚ ತೆಗೆದುಕೊಳ್ಳುವ ತಾಪತ್ರಯ ಬರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.  ಅಷ್ಟಕ್ಕೂ ಯಾರೂ ಮಾಡದಿದ್ದುದನ್ನು ನಾನು ಮಾಡುತ್ತಿಲ್ಲ.  ಅದೆಲ್ಲ ಸಾಮಾನ್ಯ ಎಂದರು.

ಮತ್ತೊಬ್ಬರು ನಾವು ತೆಗೆದುಕೊಳ್ಳುವ ಲಂಚವಾದರೂ ಎಷ್ಟು ಹತ್ತು, ಇಪ್ಪತ್ತು ರೂಪಾಯಿ.  ಉಳಿದ ಡಿಪಾರ್ಟಮೆಂಟಿನಲ್ಲಿ ಲಕ್ಷಾಂತರ ಕೊಳ್ಳೆ ಹೊಡೆಯುತ್ತಾರೆ.  ಮಿನಿಸ್ಟರುಗಳು ಕೋಟಿಗಟ್ಟಲೇ ನುಂಗಿ ಹಾಕುತ್ತಾರೆ.  ಅವರೇ ಹೆದರುತ್ತಿಲ್ಲ ಎಂದ ಮೇಲೆ ನಾವ್ಯಾಕೆ ಹೆದರಬೇಕು ಎಂದರು.

ನಾನು ಹೆದರುತ್ತಿಲ್ಲ.  ನನಗೆ ಲಂಚ ತೆಗೆದಕೊಳ್ಳುವುದು ಸೇರುವುದಿಲ್ಲ ಎಂದು ಎಷ್ಟೇ ಸಮಜಾಯಿಷಿ ಹೇಳಿದರು ಅವರು ಒಂದಿಲ್ಲೊಂದು ಕಾರಣಗಳನ್ನು ಹೇಳುತ್ತಲೇ ಹೋದರು.  ನನ್ನ ಮೊಂಡುತನವನ್ನು ಸಹಿಸಲಾಗದೇ ಸುನಂದಾ ಮೇಡಂ ಅಳಲು ಶುರುಮಾಡಿದರು.  ನನಗೆ ಒಮ್ಮೆಲೆ ಹೆದರಿಕೆಯಾಯಿತು.  ಹೆಣ್ಣುಮಕ್ಕಳು ಅಳತೊಡಗಿದರೆ ನನಗೆ ಗೊತ್ತಿಲ್ಲದೆ ಹೆದರಿಕೆ ಆರಂಭವಾಗುತ್ತದೆ.  ನಾನು ಸುಮ್ಮನೆ ಕುಳಿತೆ. ಉಳಿದವರು ಅವರಿಗೆ ಸಮಾಧಾನ ಹೇಳಿ ಸುಮ್ಮನಾಗಿಸಿದರು.

ನಿನಗೆ ಬೇಡವಾದರೆ ನೀನು ಹಣ ತೆಗೆದುಕೊಂಡು ಹೊರಗೆ ಹೋಗಿ ಬಿಸಾಡು.  ಇಲ್ಲದಿದ್ದರೆ ಭಿಕ್ಷುಕರಿಗೆ ಕೊಡು.  ಯಾಕೆ ನಮ್ಮನ್ನು ಗೋಳು ಹೊಯ್ಕೊಳ್ಳುತ್ತಿದ್ದಿ ಎಂದು ಒಬ್ಬರು ಸಿಟ್ಟಿಗೆದ್ದರು.  ನಾನು ಸಿಟ್ಟಿಗೆದ್ದು ನನಗ್ ಬ್ಯಾಡಂದ್ರೂ ನೀವ್ಯಾಕ ಒತ್ತಾಯ ಮಾಡಾಕತ್ತೀರಿ ಎಂದು ಎದ್ದು ನಿಂತೆ.  ಆಗ ಸುನಂದಾ ಎದ್ದು ನಿಂತು ನನ್ನ ಮುಂದೆ ಕೈಮುಗಿದು ನಿಂತರು.  ಪ್ಲೀಜ್ ಕೆಳಗ್ ಕೂಡ್ರಿ ಎಂದರು.  ಅವರ ಕಣ್ಣಲ್ಲಿ ಮತ್ತೆ ನೀರಾಡತೊಡಗಿತು.  ನನ್ನ ಸಿಟ್ಟು ಜರ್ರನೇ ಇಳಿದು ಕುಳಿತುಕೊಂಡೆ.  ಅವರೂ ಕುಳಿತುಕೊಂಡರು.

ನಾ ನೌಕರಿ ಮಾಡ್ಬೇಕಂದ್ರ ಪ್ಲೀಜ್ ಇದನ್ನ ತೊಗೋರಿ ಎಂದು ನನ್ನ ಎದುರಿಗೆ ಹಣ ಇಟ್ಟರು.

ಹಿಂಗ್ಯಾಕ್ರಿ ಮೇಡಂ? ಎಂದೆ ನಾನು.

ಅವರು ಅಳುತ್ತ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತ ಗೋಣು ಅಲ್ಲಾಡಿಸಿದರು.  ಮತ್ತೆ ಕೈಮುಗಿದರು.  ನಾನು ತಿನ್ನಲು ತೊಡಗಿದೆ.  ಚಹಾ ಬಂತು.  ಮುಂದೆ ಯಾರೂ ಮಾತಾಡಲಿಲ್ಲ.  ನನಗೆ ಏನೂ ತಿಳಿಯದೇ ಸುಮ್ಮನೆ ಹಣವನ್ನೆತ್ತಿಕೊಂಡು ಅಂಗಿಯ ಕಿಸೆಯಲ್ಲಿ ತುರುಕಿದೆ.  ಒಳಗಿನಿಂದ ಏನೋ ಚುಚ್ಚುತ್ತಿರುವ ಭಾಸವಾಯಿತು.  ಚಹಾ ಮುಗಿಸಿ ಹೊರಬಿದ್ದೆ.

ಮನಸ್ಸು ಕೊಳಚೆಯಾಗಿತ್ತು.  ಲಂಚ ತೆಗೆದುಕೊಂಡಾಗಿತ್ತು.  ಅದು ಎದೆಯನ್ನು ಇರಿಯುತ್ತಿರುವಂತೆ ಕಲ್ಪನೆಯಾಗತೊಡಗಿತು.  ಅವರ ಅಳುವಿನ ಮುಂದೆ ಸೋತುಹೋದ ನನ್ನ ಪ್ರತಿಜ್ಞೆಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತು.  ತಿರುಗಿ ಹೋಗಿ ಅವರ ಮುಖದ ಮೇಲೆ ಎಸೆದು ಬರಲೇ ಎಂದೆನಿಸುತ್ತಿತ್ತು.   ಆದರೆ ಮೈಯಲ್ಲಿ ಶಕ್ತಿಯೇ ಇದ್ದಂತನಿಸಲಿಲ್ಲ.  ಹೋಗಿ ಹಣವೆಲ್ಲವನ್ನೂ ಮದ್ಯ ಕುಡಿದು ಮುಗಿಸಿಬಿಡಲೇ ಎನಿಸಿತು.  ಆದರೆ ಅದಕ್ಕೂ ಧೈರ್ಯ ಬರಲಿಲ್ಲ.  ಎಂದೂ ಬಾರಿಗೆ ಹೋಗದವನು ನಾನು. ಅಲ್ಲಿ ಹೋಗಿ ಏನು ಹೇಳಲಿ ಎಂದು ಹೆದರಿಕೆಯಾಯಿತು.  ಗಟಾರಿನಲ್ಲಿ ಎಸೆದುಬಿಡಬೇಕೆಂದು ಗಟ್ಟಿ ನಿರ್ಧಾರ ಮಾಡಿದರೆ ಕಿಸೆಗೆ ಕೈ ಹಾಕಲು ಹೇಸಿಗೆಯಾಗುತ್ತಿತ್ತು.  ಆ ಹಣವನ್ನು ಮುಟ್ಟುವ ಕಲ್ಪನೆಗೆ ನಾನು ಥರಥರ ನಡುಗುತ್ತಿರುವಂತೆ ಅನಿಸತೊಡಗಿತು.

ಸುಮ್ಮನೆ ನಿಂತುಕೊಂಡೆ ಒಂದು ಬೀದಿದೀಪದ ಕಂಬಕ್ಕಾನಿಸಿ.  ಎಷ್ಟು ಹೊತ್ತು ಅಲ್ಲಿ ನಿಂತಿದ್ದೇನೋ ಯಾರೋ ನನ್ನ ಕಾಲು ತೊಯ್ಯಿಸಿದಂತೆನಿಸಿತು.  ಕಾಲು ಎಳೆದುಕೊಂಡು ನೋಡಿದರೆ ಒಂದು ನಾಯಿ.  ನಾನು ಹಾಗೆ ಎಳೆದುಕೊಂಡಿದ್ದಕ್ಕೆ ನನ್ನತ್ತ ನೋಡಿತು.  ಸ್ವಲ್ಪ ದೂರ ಹೋಗಿ ನಿಂತಿತು.  ಅದನ್ನೇ ದಿಟ್ಟಿಸುತ್ತ ನಿಂತು.  ಅದೂ ಕೆಲಕಾಲ ನನ್ನನ್ನೇ ನೋಡುತ್ತಿತ್ತು.  ನಂತರ ತನ್ನ ಬಾಲವನ್ನು ಹಿಡಿಯಲು ದುಂಡಗೆ ತಿರುಗಹತ್ತಿತು.  ಬಾಲ ಸಿಗುವವರೆಗೂ ಬಿಡುವುದೇ ಇಲ್ಲ ಎಂಬಂತೆ ಸುತ್ತುತ್ತಲೇ ಇತ್ತು.  ಈ ಹಣದಿಂದ ಆ ನಾಯಿಗೆ ಬ್ರೆಡ್ಡು ತಿನ್ನಿಸಬಹುದೆಂದು ಹೊಳೆಯಿತು.  ಮನಸ್ಸು ಯಾಕೋ ಆ ಯೋಚನೆಯಿಂದ ನಿರಾಳವಾದಂತೆನಿಸಿ ಎದುರಿಗೆ ಇದ್ದ ಅಂಗಡಿಯಿಂದ ಆ ಹಣದಲ್ಲಿ ಒಂದು ಬ್ರೆಡ್ಡು ತಂದು ಹಾಕಿದೆ.  ತಿನ್ನುತ್ತ ನಿಂತಿತು.  ಅದು ತಿನ್ನುವುದನ್ನು ನೋಡುತ್ತ ನಾನೂ ನಿಂತೆ.  ಅದು ಮುಗಿದ ಮೇಲೆ ಮನೆ ಕಡೆಗೆ ಹೊರಟೆ.  ಅದು ನನ್ನ ಬೆನ್ನು ಹತ್ತಿ ಬಂದದ್ದು ಮನೆಗೆ ಬಂದು ತಲುಪಿದಾಗಲೇ ನನಗೆ ತಿಳಿದಿದ್ದು.

ಅದಕ್ಕೆ ಏನು ಹೆಸರಿಡಲಿ ಎಂದಾಗ ಒಮ್ಮೆಲೆ ಹೊಳೆದದ್ದು ಲಂಚವನ್ನು ತಿರುಗಾಮುರುಗಾ ಮಾಡಬೇಕೆಂದು.

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಸರ್ವತ್ರ:’ಪ್ರೀತೀಶ’

  1. superb ಕಥೆ.
    ಲಂಚವೇ ಹಾಗೆ, ಛ(ಚ)ಲವನ್ನೇ ಮಣಿಸಿಬಿಡುತ್ತದೆ!

    ನ್ಯಾದ ಒಳಮನೆಯ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ.

    ಅತ್ಯಂತ ನೈಜ ಚಿತ್ರಣ. ವಿಷಾದನೀಯ ವಾಸ್ತವ.
    ಕಥೆ ಇಷ್ಟವಾಯಿತು .
    expecting a lot more.

  2. ಉತ್ತಮವಾದ ಕತೆ,ಅ ಅದರೆ ಕಡೆಯಲ್ಲಿ ಲಂಚ ತೆಗೆದುಕೊಂಡೆ ಅನ್ನುವಾಗ ಎಕೊ ಬೇಸರವಾಯಿತು, ಆದರೆ ಪರಿಸ್ಥಿಥಿ ಎಷ್ಟು ಹೊಲಸಾಗಿದೆ ಎಂದು ನೆನೆಯುವಾಗ ಬೇಸರವೆನಿಸುತ್ತದೆ. 

Leave a Reply

Your email address will not be published. Required fields are marked *