ಸರಸ್ವತಿ ಪುರಂದರ ದಾಸರ ಸತಿ ಸದ್ಗತಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಪ್ರತಿಯೊಬ್ಬ ಮಹಾನ್ ಪುರುಷನ ಮಹಾನ್ ಸಾಧನೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳಿರುವುದನ್ನು ಕೇಳಿರುತ್ತೇವೆ! ಗಾಂಧಿ, ಶಿವಾಜಿಯ ಮಹಾನ್ ಸಾಧನೆಯ ಹಿಂದೆ ಇದ್ದ ಸ್ತ್ರೀಯರು ಯಾರೆಂದು ಎಲ್ಲರೂ ತಿಳಿದಿದ್ದಾರೆ! ಕರ್ನಾಟಕ ಸಂಗೀತ ಪದ್ದತಿಯ ಪಿತಾಮಹಾ, ದಾಸವರೇಣ್ಯ, ಭಕ್ತಿಯಿಂದ ಮುಕ್ತಿ ಮಾರ್ಗ ತೋರಿದ ಪುರಂದರ ದಾಸರು ಯಾರಿಗೆ ತಾನೇ ಗೊತ್ತಿಲ್ಲ? ಅವರು, ಅವರ ಕೀರ್ತನೆಗಳು ಎಲ್ಲ ಜನರಿಗೂ ಗೊತ್ತು! ಆದರೆ ಅವರು ಹರಿದಾಸರಾಗಿ ಪ್ರಖ್ಯಾತಿ ಹೊಂದಲು ಕಾರಣವಾದ ಅವರ ಹೆಂಡತಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಕೆಲವರಿಗೆ ಅವರ ಹೆಂಡತಿ ಬಗ್ಗೆ ಗೊತ್ತಿರಬಹುದು ಆದರೆ ಅವರ ಹೆಂಡತಿ ಸರಸ್ವತಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಆ ಸರಸ್ವತಿಯೇ ಮಹಾ ಜಿಪುಣನಾದ ತನ್ನ ಪತಿ ಪುರಂದರ ದಾಸರು ಹರಿದಾಸರಾಗಲು ಕಾರಣ ಎಂದರೆ ಯಾರೂ ನಂಬುವುದಿಲ್ಲ ಅಲ್ಲವೇ? ಜಿಪುಣಾಗ್ರೇಸರ ತಿಮ್ಮಪ್ಪನಾಯಕನನ್ನು ಪುರಂದರ ದಾಸರಾಗಿಸಿದ ಸರಸ್ವತಿ ಅಸಾಮಾನ್ಯಳೇ ಇರಬೇಕಲ್ಲವೆ? ಅಂತಹವಳಿಗೆ ಹೆಚ್ಚಿನ ಸ್ಥಾನ ಲಭಿಸುವುದು ಯಾವಾಗ? ಸರಸ್ವತಿಯೆ ತನ್ನನ್ನು ಹರಿದಾಸರನ್ನಾಗಿ ಮಾಢಿದಳೆಂದು ಪುರಂದರ ದಾಸರು ತಮ್ಮ ಒಂದು ಕೀರ್ತನೆಯಲ್ಲಿ ಅನಾವರಣಗೊಳಿಸಿದ್ದಾರೆ.

ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರ ಸೇವೆಗೆ ಸಾಧನ ಸಂಪತ್ತಾಯಿತು

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಮಾಚಿ ನಾಚುತ್ತಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯಂತೆ ಗರ್ವಿಸುತ್ತಿದ್ದೆ
ಆ ಪತ್ನಿ ಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಾಗಿ ನಾಚುತ್ತಿದ್ದೆ
ಸರಸಿಜಾಕ್ಷ ಪುರಂದರ ವಿಠಲನು
ತುಳಸಿ ಮಾಲೆ ಹಾಕಿಸಿದನಯ್ಯ!

ಹರಿದಾಸರಾಗಲು ಕಾರಣವಾದ ಹೆಂಡತಿಗೆ ” ಹೆಂಡತಿ ಸಂತತಿ ಸಾವಿರವಾಗಲಿ ” , ” ಪತ್ನಿ ಕುಲ ಸಾವಿರವಾಗಲಿ ” ಎಂದು ಸಂತೋಷದಿಂದ ಹರಸಿರುವುದನ್ನು ಮೇಲಿನ ಕೀರ್ತನೆಯ ಎರಡೂ ಸ್ಟಾಂಜಾಗಳಲ್ಲಿ ಕಾಣಬಹುದು. ” ಆದದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರ ಸೇವೆಗೆ ಸಾಧನ ಸಂಪತ್ತಾಯಿತು” ಎಂಬ ಪಾದಗಳಿಂದ ಅವಳು ಒಳಿತನ್ನು ಮಾಡಿದಳು. ಅವಳು ಏನನ್ನು ಮಾಡಿದಳೋ ಅದು ಶ್ರೀಧರನ ಸೇವೆ ಮಾಡಲು ಸಾಧನವೂ ಸಂಪತ್ತೂ‌ ಅಯಿತು ಎಂದು ತುಂಬಾ ಸಂತಸದಿಂದ ಹೇಳಿಕೊಂಡಿರುವುದು ಕಾಣಬಹುದು. ಅವಳು ಮಾಡಿದ ಒಳಿತು ಯಾವುದೆಂದರೆ ಶ್ರೀಧರನ ಸೇವೆಗೆ ದಂಡಿಗೆ, ಬೆತ್ತ, ಗೋಪಾಲ ಬುಟ್ಟಿ ಹಿಡಿಸಿದುದು! ಬೆತ್ತ ಎಂಬುದು ಸನ್ಯಾಸಿಗಳು ಉಪಯೋಗಿಸುವ ಮರದ ವಸ್ತು! ದಂಡಿಗೆ ಎಂಬುದು ಸಂಗೀತ ನುಡಿಸುವ ವಾಧ್ಯ! ದಾಸರು ಅದನ್ನು ನುಡಿಸುತ್ತಾ ಹರಿಯನ್ನು ಭಕ್ತಿಯಿಂದ ಸ್ಮರಿಸುತ್ತಿದ್ದರು. ಕೀರ್ತನೆಗಳನ್ನು ಹಾಡುತ್ತಿದ್ದರು. ಗೋಪಾಲಬುಟ್ಟಿ ಎಂಬುದು ಬಿಕ್ಷಾಪಾತ್ರೆ. ಅದನ್ನು ಹಿಡಿಯಲು ರಾಜನಂತೆ ಗರ್ವಿಸುತ್ತಿದೆ. ಆದರೆ ನನ್ನ ಸತಿ ಅದನ್ನು ಮನಃಪೂರ್ವಕವಾಗಿ ಹಿಡಿಯುವಂತೆ ಮಾಡಿದಳು. ಬಿಕ್ಷುಕರು ಹಿಡಿದರೆ ಅದು ಬಿಕ್ಷಾ ಪಾತ್ರೆ ಆಗುತ್ತದೆ. ಅದನ್ನು ಹರಿಸೇವೆ ಮಾಡಲು ಪುರಂದರದಾಸರು ಹಿಡಿದುದರಿಂದ ಅದು ಕೃಷ್ಣ ಭಗವಂತನ ಸ್ಪರ್ಷಹೊಂದಿ ಗೋಪಾಲಬುಟ್ಟಿಯಾಗಿದೆ. ಹೆಂಡತಿ ಹಿಡಿಸಿದ ದಂಡಿಗೆ, ಬೆತ್ತ, ಗೋಪಾಲಬುಟ್ಟಿ ಇವು ಭಗವಂತನ ನಾಮಸ್ಮರಣೆ ಮಾಡಲು, ಭಕ್ತಿಯಿಂದ ಮುಕ್ತಿ ಸಾಧಿಸಲು, ಆಧ್ಯಾತ್ಮ ಸಾಧನೆಗೆ ಸಾಧನವಾದವು ಎಂದು ಹೆಮ್ಮೆಯಿಂದ ದಾಸರು ಹೇಳಿದ್ದಾರೆ! ಈ ಕೀರ್ತನೆಯಲ್ಲಿ ಮೂರು ಸ್ಟಾಂಜಾಗಳಿವೆ ಅದರಲ್ಲಿ ಮೊದಲೆರಡು ಸ್ಟಾಂಜಾಗಳನ್ನು ತನಗೆ ಆಧ್ಯಾತ್ಮದ ದಾರಿ ತೋರಿದವಳು ನನ್ನ ಹೆಂಡತಿ ಎಂಬುದನ್ನು ಹೇಳಲು ಮೀಸಲಿರಿಸಿದರೆ ಕೊನೆಯ ಒಂದು ಸ್ಟಾಂಜಾವನ್ನು ಆ ವಿಠಲನ ದಯೆಯೂ ಕಾರಣ ಎಂದು ಹೇಳಲು ಉಪಯೋಗಿಸಿದ್ದಾರೆ! ಇದರಿಂದ ತನ್ನ ಹೆಂಡತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು ಕಂಡುಬರುತ್ತದೆ. ಅವರು ಸುಮ್ಮನೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರಲಾರರು. ಹರಿದಾಸರಾಗಿಸಲು ಅವಳು ತುಂಬಾ ಶ್ರಮಿಸಿರಬೇಕು. ಅವಳು ಆ ವಿಠಲನ ಸೇವೆಗೆ ಕಾರಣವಾಗುವ ಸಾಧನಗಳನ್ನು ಹೇಗೆ ಹಿಡಿಸಿದಳು? ಅದಕ್ಕೆ ಎಷ್ಟು ಕಷ್ಟಪಟ್ಟಳು? ಅದನ್ನು ಸಾಧಿಸಲು ಎಷ್ಟು ಸಮಯ ತೆಗೆದುಕೊಂಡಳು? ಎಂಬ ಮುಂತಾದ ಪ್ರಶ್ನೆಗಳಿಗೆ ಉತ್ತರಗಳು, ವಿವರಗಳು ಈ ಕೀರ್ತನೆಯಲ್ಲಿರುವುದಿಲ್ಲ! ಆದರೂ ಅವಳು ಅದಕ್ಕೆ ಬಹಳಷ್ಟು ಶ್ರಮಿಸಿರಲೇಬೇಕು. ಪರಮ ಜಿಪುಣನಿಂದ ನವಕೋಟಿನಾರಾಯಣನೆಂದು ಬಿರುದಾಂಕಿತನಾದವನಿಂದ ಎಲ್ಲಾ ಸಂಪತ್ತನ್ನು ದಾನ ಮಾಡಿಸಿ ಆಧ್ಯಾತ್ಮದ ದಾರಿಯಲ್ಲಿ ನಡೆಸಲು ಬಹಳ ಕಾಲ ಪ್ರಯತ್ನಿಸಿರಲೇಬೇಕು! ಪುರಂದರದಾಸರಿಗೆ ಆಧ್ಯಾತ್ಮ ಜ್ಞಾನ ತೋರಬೇಕಾದರೆ ಅವಳೆಷ್ಟು ಪರಮ ಜ್ಞಾನಿಯೂ ಭಕ್ತ ಶ್ರೇಷ್ಠಳೂ ಆಗಿರಬೇಡ? ಅವಳು ಪರಮ ಭಕ್ತಳು ಆಗಿರಲೇಬೇಕು. ಈ ದೃಷ್ಟಿಯಿಂದ ಅವಳಿಗೆ ಪುರಂದರ ದಾಸರನ್ನು ರೂಪಿಸಿದ ಕೀರ್ತಿ ಸಲ್ಲಲೇಬೇಕು. ಆದರೆ ಎಷ್ಟೋ ಜನಕ್ಕೆ ಅವಳ ಹೆಸರು ಸಹ ತಿಳಿಯದಿರುವುದು ಅಚ್ಚರಿ!

ಇದಕ್ಕೆ ಸಂಬಂಧಿಸಿದಂತೆ ಅವಳ ಮಹತ್ವ ಸಾರುವ ಒಂದು ಕತೆ ಇದೆ ಇದರ ಸತ್ಯಾಸತ್ಯತೆ ಏನೇ ಇರಲಿ ಪುರಂದರದಾಸರ ಆದ್ಯಾತ್ಮ ದಾರಿ ಹಿಡಿಯುವಂತೆ ಮಾಡಿದ ಘಟನೆಯ ಕತೆ ಅದು. ಕೀರ್ತನೆಗೆ ಸ್ವಲ್ಪ ಪೂರಕವಾಗೇ ಇದೆ. ಅದನ್ನು ಅಲೌಕೀಕರಿಸಿದ್ದಾರೆ! ಮಹಾತ್ಮರ ವಿಷಯದಲ್ಲಿ ಇವು ಸಾಮಾನ್ಯ! ದಾಸರಾಗುವ ಮುನ್ನ ಅವರಿಗೆ ಶ್ರೀನಿವಾಸ ನಾಯ‌ಕ ಎಂದು ಹೆಸರಿತ್ತು. ತಂದೆಯ ಲೇವಾದೇವಿ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದರು. ಅವರು ತುಂಬಾ ಜಿಪುಣರಾಗಿದ್ದರು! ವಿಠ್ಠಲನು ಶ್ರೀನಿವಾಸ ನಾಯಕರ ಪರೀಕ್ಷೆಗೆಂದು ಬ್ರಾಹ್ಮಣರ ವೇಷದಲ್ಲಿ ಬಂದು ತನ್ನ ಮಗನ ಉಪನಯನಕ್ಕಾಗಿ ಸಹಾಯ ಕೇಳಿದನಂತೆ ಮಹಾ ಜಿಪುಣನಾದ ಪುರಂದರರು ಆರು ತಿಂಗಳ ಕಾಲ ನಾಳೆ ಬಾ, ನಾಳೆ ಬಾ ಎಂದು ಓಡಾಡಿಸಿ ಒಂದು ದಿನ ಸವಕಲು ನಾಣ್ಯವೊಂದನ್ನು ಕೊಟ್ಟು ಮಹಾಜಿಪುಣತನ ಪ್ರದರ್ಶಿಸಿ ಅವನ ಕಾಟ ತಪ್ಪಿಸಿಕೊಂಡರಂತೆ. ನಂತರ ಆ ಬ್ರಾಹ್ಮಣ ದಾಸರನ್ನು ಬಿಟ್ಟು‌ ಅವರಿಲ್ಲದಾಗ ದಾಸರ ಮನೆಗೆ ಹೋಗಿ ಅವರ ಹೆಂಡತಿಯನ್ನು ತನ್ನ ಮಗನ ಉಪನಯನಕ್ಕೆ ಸಹಾಯ ಮಾಡಬೇಕೆಂದು ಕೇಳಿದನಂತೆ. ತನ್ನ ಹತ್ತಿರ ಕೊಡಲು ನನ್ನದು ಎಂಬ ವಸ್ತು‌ ಏನು ಇಲ್ಲವೆಂದು ಹೇಳಿದಾಗ ನಿನ್ನ ಬಳಿ ತವರು ಮನೆಯವರು ಕೊಟ್ಟ ಮೂಗುತಿ ಇದೆ ಅದನ್ನು ಕೊಡಬಹುದಲ್ಲಾ ಎಂದು ಕೇಳಲು ಅವಳು ಕೊಟ್ಟುಬಿಟ್ಟಳಂತೆ. ಅದನ್ನು ಪಡೆದ ಬ್ರಾಹ್ಮಣ ವೇಷದ ವಿಠ್ಠಲ ಶ್ರೀನಿವಾಸ ನಾಯಕನ ಅಂಗಡಿಗೇ ಬಂದು ಅದನ್ನು ಅಡ ಇಟ್ಟುಕೊಂಡು ಹಣ ಕೊಡುವಂತೆ ಕೇಳಿದನಂತೆ. ಆ ಮೂಗುತಿಯನ್ನು ತಿರುವಿ ತಿರುವಿ ನೋಡಿ ಪರೀಕ್ಷಿಸಿ ಅದು ತನ್ನ ಹೆಂಡತಿಯ ಮೂಗುತಿಯೇ ಇರಬೇಕೆಂದು ಸಂಶಯಗೊಂಡು ಆ ಮೂಗುತಿಯನ್ನು ಪೆಟ್ಟಿಗೆಯಲ್ಲಿ ಬದ್ರವಾಗಿಟ್ಟು ನಾಳೆ ಬಂದು ಹಣ ತೆಗೆದುಕೊಂಡು ಹೋಗು ಎಂದು ಹೇಳಿ ಮನೆಗೆ ಬಂದು ಹೆಂಡತಿಯನ್ನು ನಿನ್ನ ಮೂಗುತಿ ಎಲ್ಲಿ ಎಂದು ಕೇಳುವುದು ಅದನ್ನು ಸ್ನಾನ ಮಾಡುವಾಗ ತೆಗೆದಿರಿಸಿದ್ದೆ ತಂದುಕೊಡುವೆನೆಂದು ಬಯಭೀತಳಾಗಿ ಒಳಕ್ಕೆ ಬಂದು ಒಂದು ಬಟ್ಟಲಿನಲ್ಲಿ ವಿಷ ಹಾಕಿಕೊಂಡು ಸೇವಿಸಲು ಮುಂದಾಗುವುದು ಆಗ ಆ ಬಟ್ಟಲಿಗೆ ತಾನು ಪತಿಗೆ ಕೊಟ್ಟ ಮೂಗುತಿ ಬೀಳುವುದು ಅದನ್ನು ತಂದು ತನ್ನ ಪತಿಯಾದ ಶ್ರೀನಿವಾಸ ನಾಯಕನಿಗೆ ಕೊಡುವುದು ಅವನು ಅದನ್ನು ಅಂಗಡಿಗೆ ತಂದು ಪೆಟ್ಟಿಗೆ ತೆರೆದು ನೋಡಲು ಅಲ್ಲಿ ಮೂಗುತಿ ಕಾಣದೆಹೋಗುವುದು ಅದರಿಂದ ಭಗವಂತ ಬ್ರಾಹ್ಮಣನ ವೇಷದಲ್ಲಿ ನನ್ನನ್ನೂ ಪರೀಕ್ಷಿಸಲು ನನ್ನ ಮನೆ ಬಾಗಿಲಿಗೆ ಆರು ತಿಂಗಳು ಕಾಲ ಬಂದರೂ ನಾನೂ ಅವನನ್ನು ಗುರುತಿಸಲಿಲ್ಲವೆಂದು ಮರುಗಿ ವೈರಾಗ್ಯದಿಂದ ಎಲ್ಲಾ ದಾನ ಮಾಡಿ ಶ್ರೀನಿವಾಸ ನಾಯಕ ಪುರಂದರ ದಾಸರಾದರೆಂದು ಕೇಳಿದ್ದೇವೆ.

ಅವಳು ವಿಷ ಕುಡಿಯಲು ಮುಂದಾಗುವ ಘಟನೆ ಶ್ರೀನಿವಾಸ ನಾಯಕ ನವಕೋಟಿನಾರಾಯಣ ಎಂದು ಬಿರುದಾಂಕಿತನಾಗಿದ್ದರೂ ಎಷ್ಟು ಸಂಪತ್ತಿನ ವ್ಯಾಮೋಹಿಯಾಗಿದ್ದ, ಜಿಪುಣನಾಗಿದ್ದ, ನಿರ್ದಯಿಯಾಗಿದ್ದ ಎಂಬುದನ್ನು ಅನಾವರಣಗೊಳಿಸುತ್ತದೆ. ಅದೇ ಸಮಯದಲ್ಲಿ ತನ್ನ ಪತಿಯ ಕೋಪ, ಜಿಪುಣತ್ವ, ಧನದ ವ್ಯಾಮೋಹವನ್ನು ತಿಳಿದೂ ಅದನ್ನು ಮೀರಿ ಬಡವತನಕೆ ಮಿಡಿದು ಮೂಗುತಿಯನ್ನು ದಾನ ಮಾಡಿದುದು ಸರಸ್ವತಿಯ ಬಡವರ ಮೇಲಿನ ಅಪಾರ ಕಳಕಳಿಯನ್ನು, ಪ್ರೀತಿಯನ್ನು ತೋರುತ್ತದೆ! ಅವಳು ವಿಷ ಸೇವಿಸಲು ಮುಂದಾದಾಗ ಮೂಗುತಿ ಬಟ್ಟಲಿಗೆ ಬಂದು ಬೀಳುವುದು ಅವಳ ಪರಮ ದೈವ ಭಕ್ತಿಯ ಪ್ರಕಟಣೆಯ ಸಂಕೇತವಾಗಿದೆ! ಈ ಕತೆ ಸಹ ಪುರಂದರದಾಸರ ಹೆಂಡತಿ ಎಲ್ಲಾ ದಾನ ಮಾಡಿಸಿ ಆಧ್ಯಾತ್ಮದ ದಾರಿ ತೋರಿದುದನ್ನು ಸಾರುತ್ತದೆ! ಅದನ್ನು ಅಲೌಕೀಕರಿಸಿರುವುದರಿಂದ ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆಯಾದರೂ ಅವರ ಹೆಂಡತಿ ಆದ್ಯಾತ್ಮ ದಾರಿ ತೋರಲು ಕಾರಣಳಾದಳು ಎಂಬುದನ್ನು ಅಲ್ಲಗಳೆಯಲಾಗದು! ಏಕೆಂದರೆ ಪುರಂದರ ದಾಸರೇ ಮೇಲಿನ ಕೀರ್ತನೆಯಲ್ಲಿ ತನ್ನ ಹೆಂಡತಿ ತಾನು ಆದ್ಯಾತ್ಮದ ದಾರಿ ಹಿಡಿಯಲು ಕಾರಣಳೆಂದು ಎರಡು ಸ್ಟಾಂಜಾದಲ್ಲಿ ಹೇಳಿದ್ದಾರೆ! ಅದ್ದರಿಂದ ಪುರಂದರದಾಸರಂತಹವರಿಗೆ ಆಧ್ಯಾತ್ಮದ ದಾರಿ ತೋರಿದವಳ ಸ್ಮರಿಸುವುದು ಅವಳ ಮಹತ್ವವನ್ನು ಅರಿಯುವುದು ಅವಶ್ಯಕ!

-ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x