ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು

Paramesh Ho Ra            
ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ ನೆಪದಲ್ಲಿ ಹೀಗೆ ಸಂತೋಷಪಡುವುದು ಸಹಜವೇ ಆದರೂ ಅಜಾಗರೂಕತೆಯಿಂದ ಅಗ್ನಿ ಅವಘಡ, ಅನಾಹುತ, ಅಪಾಯಗಳಿಗೆ ತುತ್ತಾಗುವ ಅವಕಾಶವಿರುತ್ತದೆ.  ಹೇಗೆ ಎಂಬುದರ ಬಗ್ಗೆ ಕೆಲವು ಅನುಭವಕ್ಕೆ ಬಂದ ನಿದರ್ಶನಗಳು, ಅಲ್ಲಿಲ್ಲಿ ಕಂಡು ಕೇಳಿದ, ನೋಡಿದ ಘಟನೆಗಳನ್ನು ವಿವರಿಸುವುದರೊಂದಿಗೆ ಪಟಾಕಿಗಳ ಹಾವಳಿಯ ಸಂದರ್ಭಗಳನ್ನು ತಿಳಿಸುತ್ತಾ, ಇಂತಹವುಗಳ ಮೇಲೆ ಎಚ್ಚರವಾಗಿರಬೇಕೆಂದು ಕೋರುತ್ತೇನೆ.

★ನಮ್ಮ ಊರಿನಲ್ಲಿ ದೀಪಾವಳಿ ಹಬ್ಬದ ಸಂದರ್ಭವೊಂದರಲ್ಲಿ ರಾಜಣ್ಣ ಎಂಬುವರೊಬ್ಬರು ಪಟಾಕಿ ಸಿಡಿಸುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಹಾಗಾಗಿ ಪ್ರತಿ ದೀಪಾವಳಿಯ ಅಮವಾಸ್ಯೆಯಂದು ಸಂಜೆ ಸಾವಿರಾರು ರೂ.ಗಳ ಪಟಾಕಿಗಳನ್ನು ತಂದು ಅವರ ಮನೆಯ ಮುಂದೆ ನೆರೆಹೊರೆಯವರೆದುರು ಸಿಡಿಸಿ ಸಂಭ್ರಮಿಸುತ್ತ ಹೀರೋ ಅನಿಸಿಕೊಳ್ಳುತ್ತಿದ್ದರು. ಪಳಗಿದ ಕೈ ಎನಿಸಿದರೂ ಒಮ್ಮೆ ಆಟಂಬಾಂಬ್ ಹಚ್ಚುವ ಸಂದರ್ಭದಲ್ಲಿ ಬತ್ತಿಗೆ ಬೆಂಕಿ ಕಿಡಿ ತಾಕಿದ ತಕ್ಷಣ ಕೈ ತೆಗೆಯುವಷ್ಟರಲ್ಲಿಯೇ 'ಢಮಾರ್!' ಎಂದು ಸದ್ದು ಮಾಡಿ ಅವರ ಹಸ್ತದ ಹೆಬ್ಬೆರಳನ್ನೇ ಬಲಿ ಪಡೆದುಕೊಂಡಿತು. ನೋವಿನಿಂದ ಚೀರಾಡಿದ ರಾಜಣ್ಣನ ಗರ್ವಭಂಗಕ್ಕೆ ಕೆಲವರು ಮರುಗಿದರೂ, ಅವರಿಗೆ ಆಗದವರು 'ತಕ್ಕ ಶಾಸ್ತಿಯಾಯಿತು' ಎಂದು ಆಡಿಕೊಂಡರು.

★ಬಾಲ್ಯದಲ್ಲಿ ನಾನು ಮತ್ತು ಗೆಳೆಯರಿಬ್ಬರು ದೊಡ್ಡವರ ಕಣ್ಣು ತಪ್ಪಿಸಿ ಮನೆಯ ಹಿತ್ತಲಿನಲ್ಲಿ ಪಟಾಕಿ ಹೊಡೆಯಲು ಭಯದಿಂದಲೇ ಧೈರ್ಯ ಮಾಡಿದೆವು. ಒಬ್ಬ ಗೆಳೆಯ ಸುಮ್ಮನಿರಲಾರದೆ ಒಂದು ಪುಟ್ಟ ಮಡಿಕೆಯನ್ನು ತಂದು ಲಕ್ಷ್ಮೀಪಟಾಕಿಯೊಂದನ್ನು ಅದರೊಳಗೆ ಇಟ್ಟು ಸಿಡಿಸಿ, ಅದು ಚೂರು ಚೂರಾಗಿ ಸಿಡಿಯುವುದನ್ನು ಕಾಣಬೇಕೆಂದನು. ನಾನು ಏನಾದರೂ ಅಪಾಯವಾದರೆ ಗತಿಯೇನು? ಈ ಸಾಹಸ ಬೇಡವೆಂದು ಬೇಡಿಕೊಂಡರೂ ಕೇಳದ ತರಲೆ ಗೆಳೆಯ ಪಟಾಕಿಯನ್ನು ಮಣ್ಣಿನ ಸಣ್ಣ ಗುಡ್ಡೆಗೆ ನೆಟ್ಟು, ಬೆಂಕಿ ಹಚ್ಚಿ, ಮಡಕೆಯನ್ನು ಬೋರಲಾಗ ಮುಚ್ಚಿ ಅವಸರದಲ್ಲಿ ಓಡುವಾಗ ಕಲ್ಲಿಗೆ ಎಡವಿ ಬಿದ್ದುಬಿಟ್ಟನು. ಅದರ ಜೊತೆ ಜೊತೆಗೇ ಸಿಡಿದ ಮಡಕೆ ಮುಚ್ಚಿದ ಪಟಾಕಿಯು, ಚೂರುಗಳನ್ನು ರಭಸವಾಗಿ ಎಲ್ಲಾ ಕಡೆ ತೂರಿಬಿಟ್ಟಿತು. ಅದರ ಚೂರುಗಳು ತರಲೆ ಗೆಳೆಯನ ಮೈಕೈಗಳಿಗೂ ತಾಗಿ ಗಾಯ ಮಾಡಿದವು. ಪಾಪ! ದಯನೀಯ ಸ್ಥಿತಿಗೆ ತಾನೇ ಒಳಗಾಗಿದ್ದ ಅವನ ತರಲೆ ಬುದ್ಧಿಗೆ ತಕ್ಕ ಶಾಸ್ತಿಯಾಯ್ತು ಅನಿಸಿದರೂ ಬಹಳ ಬೇಜಾರಾಯ್ತು. ಈ ವಿಚಾರವನ್ನು ಮನೆಯವರಿಗೆ ಯಾರೂ ಹೇಳಬಾರದೆಂದು ನಮ್ಮ ನಮ್ಮಲೇ ಮಾತಾಡಿಕೊಂಡರೂ, ಯಾರೋ ಪಕ್ಕದ ಮನೆಯ ಅಜ್ದಿ ನೋಡಿ ಊರಿಗೆಲ್ಲಾ ಹೇಳಿಬಿಟ್ಟಿತ್ತು. ನಮ್ಮ ಶಾಲೆಯ ಮೇಷ್ಟ್ರಿಗೆ ಈ ವಿಷಯ ಗೊತ್ತಾಗಿ "ಛಡೀ ಚಂಚಂ" ಮಾಡಿಬಿಟ್ಟರು.

★ನಮ್ಮ ಮನೇಲಿ ಒಂದು ನಿಷ್ಠೆಯ ನಾಯಿಯಿತ್ತು. ಅದನ್ನು ಮನೆಯವರೆಲ್ಲರೂ ಪ್ರೀತಿಯಿಂದ 'ಭೈರ' ಅಂತಾ ಕರೆಯುತ್ತಿದ್ದೆವು. ಒಂದು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ, ನಮ್ಮಣ್ಣನಿಗೆ ಒಂದು ಯೋಚನೆ ಹೊಳೀತು. ಹುಡುಗಾಟಿಕೆ ವಯಸ್ಸಲ್ವ. ಸುಮ್ಮನೇ ಮಲಗಿದ್ದ ನಾಯಿ ಭೈರನ ಬಾಲಕ್ಕೆ ದಾರ ಕಟ್ಟಿ, ಅದರ ತುದಿಗೆ ಪಟಾಕಿಯನ್ನು ಸಿಕ್ಕಿಸಿ ಬೆಂಕಿ ತಾಗಿಸಿದನು. ಪಾಪ! ನಿದ್ರೆ ಮಾಡುತ್ತಿದ್ದ ನಾಯಿ ಸಿಡಿದ ಪಟಾಕಿ ಶಬ್ದಕ್ಕೆ ಬೆಚ್ಚಿಬಿದ್ದು ಮನ ಬಂದ ಕಡೆ ದಿಕ್ಕಾಪಾಲಾಗಿ ಓಡಿ ಬಿಟ್ಟಿತು. ಅದರ ಮನಸ್ಸಿಗೆ ಎಷ್ಟು ಘಾಸಿಯಾಯ್ತೋ ಏನೋ! ಮನೆಗೆ ಮೂರ್ನಾಲ್ಕು ದಿನ ಕಳೆದ ಮೇಲೆ ವಾಪಾಸಾಯ್ತು. ಮಾಡಿದ್ದ ತಪ್ಪಿನ ಅರಿವಾಗಿದ್ದ ನನ್ನಣ್ಣ ಪ್ರೀತಿಯಿಂದ ನಾಯಿಯ ಮೈ ನೇವರಿಸಿ, ಊಟ ತಿನ್ನಿಸಿ ಸಮಾಧಾನ ಮಾಡಿದರು. ಮುಂದೆ ಆ ನಾಯಿಯ ಮೇಲಿನ ಅಕ್ಕರೆ ಮತ್ತಷ್ಟು ಹೆಚ್ಚಾಯ್ತು, ಜೊತೆಗೆ "ಪ್ರಾಣಿ ಹಿಂಸೆ ಮಾಡುವುದು ಮಹಾ ಪಾಪ" ಎಂಬುದು ಸ್ಪಷ್ಟವಾಗಿ ಅರಿವಾಯ್ತು.

★ಇನ್ನೊಮ್ಮೆ ಇದೇ ದೀಪಾವಳಿ ಸಂದರ್ಭದಲ್ಲಿ ಪಕ್ಕದೂರಿನಲ್ಲಿ ಆದ ಅವಘಡ ಮರೆಯುವಂತಿಲ್ಲ. ಆ ಊರಿನ ಯುವಕನೊಬ್ಬ ಬಾಣವನ್ನು ಕೈಯಲ್ಲಿ ಹಿಡಿದು ಹಚ್ಚಲು ಭಯಪಟ್ಟುಕೊಂಡು, ನೆಲದ ಮೇಲೆ ಮಣ್ಣಿನ ಗುಡ್ಡೆ ಮಾಡಿ, ಅದರಲ್ಲಿ ಬಾಣವನ್ನು ಮೇಲ್ಮುಖವಾಗಿ ನಿಲ್ಲಿಸಿ ಬುಡದ ಬತ್ತಿಗೆ ಬೆಂಕಿ ತಾಗಿಸಿದ್ದಾನೆ. ಭಯದಿಂದ ನಡುಗಿದ ಅವನ ಕೈ ಸ್ವಲ್ಪ ಸೋಕಿದಾಗ ಬಾಣದ ದಿಕ್ಕು ಬದಲಾಗಿದೆ. ಕೆಳಗೆ ಬತ್ತಿ ಉರಿಯುತ್ತಿದ್ದಂತೆ ವೇಗವಾಗಿ ದಿಕ್ಕಾಪಾಲಾಗಿ ಹೊರಟ ಬಾಣವು ಊರಿನ ದೇವಾಲಯಕ್ಕೆ ಬಂದಿದ್ದ ಹೆಂಗಸರ ಸೀರೆಯನ್ನು ಸವರಿಕೊಂಡೇ ಹೋಗಿ ಪಕ್ಕದಲ್ಲಿದ್ದ ಹುಲ್ಲಿನ ಗುಡ್ಡೆಗೆ ತಾಕಿ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲೇ ಇದ್ದ ಊರಿನ ಜನರೆಲ್ಲ ಸೇರಿ ನೀರು ಹಾಕಿ ಹುಲ್ಲಿನ ಬೆಂಕಿಯನ್ನು ಆರಿಸಿದರು. ಆದರೆ ಬೆಲೆ ಬಾಳುವ ವರ್ಣ ರಂಜಿತ ಸೀರೆಗಳ ಮೇಲೆ ಸೋಕಿದ ಬೆಂಕಿ ಕಿಡಿಯಿಂದಾದ ತೂತುಗಳು ಕೆಲವರು ಹೆಂಗಸರ ಹೊಟ್ಟೆ ಉರಿಸಿಬಿಟ್ಟವು.

★ಒಮ್ಮೆ ಸಂಜೆ ಮಬ್ಬುಗತ್ತಲಿನ ಸಮಯ, ಸಮೀಪದ ಕೊಣನೂರಿನಲ್ಲಿ ನಮ್ಮೂರಿನ ಬಸ್ ಗೋಸ್ಕರ ಕಾಯುತ್ತಾ ನಿಂತಿದ್ದೆ. ದೀಪಾವಳಿ ದಿನ ಎಲ್ಲರ ಮನೆ ಮುಂದೆ ಸಾಲು ಹಣತೆಗಳು ಬೆಳಗುತ್ತಿದ್ದವು. ‌ಸ್ವಲ್ಪ ಸಮಯದಲ್ಲಿಯೇ ಯುವಕರ ಗುಂಪೊಂದು ಹಲವಾರು ಪಟಾಕಿ ಸರಗಳನ್ನು ತಂದು ಒಂದಕ್ಕೊಂದು ತಳಕು ಹಾಕಿ, ರಸ್ತೆಯ ಉದ್ದಕ್ಕೂ ಹಾಸಿದರು. ಒಂದು ತುದಿಯಲ್ಲಿ ಬೆಂಕಿ ಹಚ್ಚಿದ ತಕ್ಷಣವೇ ಪಟಾಕಿಗಳೆಲ್ಲವೂ ಢಂ ಢಮಾರ್ ಶಬ್ದ ಮಾಡುತ್ತಾ ಇಕ್ಕೆಲಗಳಲ್ಲಿ ನಿಂತಿದ್ದ ನನ್ನಂಥವರನ್ನು ಹೆದರಿಸುತ್ತಾ ಮುನ್ನುಗ್ಗುತ್ತಿದ್ದವು. ಹೆಂಗಸರು, ಮಕ್ಕಳು ಭಯದಿಂದ ಅತ್ತಿತ್ತ ಓಡಾಡುತ್ತಾ ಪಟಾಕಿ ಹಚ್ಚಿದ ತರುಣರ ಗುಂಪನ್ನು ಬೈಯ್ದುಕೊಂಡರು. ನೋಡು ನೋಡುತ್ತಿದ್ದಂತೆ ತುಂಡಾದ ಪಟಾಕಿ ಸರವೊಂದು ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಮೇಲೆ ಹಾರಿ ಕುಳಿತು ಸಿಡಿಯಲಾರಂಭಿಸಿತು. ಪೆಟ್ರೋಲ್ ಟ್ಯಾಂಕ್ ಲ್ಲಿ ಸ್ವಲ್ಪವೇ ಪೆಟ್ರೋಲ್ ಇದ್ದುದರಿಂದ ಸಣ್ಣ ಪ್ರಮಾಣದ ಸ್ಫೋಟವಾಯಿತು. ಭಾರೀ ಸ್ಫೋಟದ ನಿರೀಕ್ಷೆಯಿಂದ ಜನರೆಲ್ಲರೂ ಭಯಭೀತರಾಗಿ ಉಸಿರು ಬಿಗಿ ಹಿಡಿದಿದ್ದರು. ಅದೃಷ್ಟವಶಾತ್ ಭಾರೀ ಅನಾಹುತ ಆಗಲಿಲ್ಲವೆಂಬುದು ಸಮಾಧಾನಕರವಾದರೂ, ಇಂತಹ ಅಚಾತುರ್ಯಗಳು ಘಟಿಸುವ ಸಾಧ್ಯತೆ ಇರುತ್ತದೆ.

★ಮತ್ತೊಂದು ಬಾರಿ ಮನೆ ಮುಂದೆ ಪುಟ್ಟ ಮಕ್ಕಳು ಪಟಾಕಿ ಹೊಡೆಯುತ್ತಿದ್ದರು. ಅಂದು ಮೂರ್ನಾಲ್ಕು ದಿನ ಸೋನೆ ಮಳೆ ಸುರಿದು ವಾತಾವರಣ ತಂಪಾಗಿತ್ತು. ಹಾಗಾಗಿ ಪಟಾಕಿಗಳು ಮೆತ್ತಗಾಗಿ 'ಠುಸ್!' ಎನ್ನುತ್ತಿದ್ದವು. ಒಬ್ಬ ಪುಟಾಣಿಯು ಹಚ್ಚಿದ ಪಟಾಕಿಯ ಬತ್ತಿ ಮಾತ್ರ ಸುರ್ ಎಂದು ಸದ್ದು  ಮಾಡಿ ಸಿಡಿಯದೆ ಬಿದ್ದುಕೊಂಡಿತು.  ನಿರಾಸೆಯಿಂದ ಪುಟ್ಟನು ಸ್ವಲ್ಪ ಹೊತ್ತಿನ ನಂತರ ಸಿಡಿಯದ ಪಟಾಕಿಯನ್ನು ಎತ್ತಿಕೊಂಡು ಮದ್ದಿನ ಭಾಗದಲ್ಲಿ ಹಿಚುಕಿ ನೋಡಿದ ತಕ್ಷಣ ದೊಡ್ಡ ಸದ್ದಿನೊಂದಿಗೆ ಸಿಡಿದು ಆ ಹುಡುಗನ ಹಸ್ತವನ್ನು ಗಾಯಗೊಳಿಸಿತು. ಇಂಥ ಹುಡುಗಾಟಿಕೆಯಿಂದಲೇ ಹೆಚ್ಚು ಮಕ್ಕಳು ಅನಾಹುತ ಮಾಡಿಕೊಳ್ಳುತ್ತಾರೆ.

ಮೇಲೆ ವಿವರಿಸಿದ ಅವಘಡಗಳು ದೀಪಾವಳಿ ಮತ್ತು ಇತರೆ ಸಂಭ್ರಮಾಚರಣೆಗಳಲ್ಲಿ ಅಲ್ಲಿ ನಡೆದ ಬಗ್ಗೆ ಮಾಧ್ಯಮಗಳಲ್ಲಿ ನೋಡಿರುತ್ತೇವೆ, ಕೇಳಿರುತ್ಯೇವೆ ಅಥವಾ ಓದಿಯೂ ಇರುತ್ತೇವೆ. ಅಷ್ಟೇ ಅಲ್ಲದೆ ಪಟಾಕಿಗಳ ಹಾವಳಿಯಿಂದ ದೃಷ್ಟಿ ಕಳೆದುಕೊಂಡು ಬದುಕನ್ನೇ ಕತ್ತಲು ಮಾಡಿಕೊಂಡ ದುರ್ದೈವಿಗಳ  ಉದಾಹರಣೆಗಳು ತಿಳಿದಿದ್ದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಎಂಬುದು ನಮ್ಮ ನಿರ್ಲಕ್ಷ್ಯ ವಲ್ಲದೆ ಮತ್ತೇನೂ ಅಲ್ಲ. ಹಬ್ಬಗಳು ನಮ್ಮ ಬದುಕಿನ ಬೇಸರವನ್ನು ಕಳೆದು ಜೀವನೋತ್ಸಾಹವನ್ನು ಹೆಚ್ಚಿಸಬೇಕೇ ವಿನಃ ಬದುಕಿನ ಮೇಲೆ ಬರೆ ಎಳೆಯಬಾರದಲ್ಲವೇ? 
         
"ದೀಪದ ಹಬ್ಬ"ವೆಂದೇ ಪೌರಾಣಿಕ ಮಹತ್ವ ಹೊಂದಿರುವ ದೀಪಾವಳಿಯ ಆಚರಣೆಯ ವೈಜ್ಞಾನಿಕ ಉದ್ದೇಶವನ್ನು ಪುಟಾಣಿಗಳಾದಿಯಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬರಲಿರುವ ಛಳಿಗಾಲದಲ್ಲಿ ವಾತಾವರಣವು ತುಂಬಾ ಶೀತಾಂಶದಿಂದ ಕೂಡಿರುತ್ತದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಛಳಿ ಹೆಚ್ಚಾಗಿರುತ್ತದೆ. ಆದ್ದರಿಂದ  ನಾಡಿನ ಪ್ರತಿಯೊಂದು ಮನೆಯಲ್ಲಿಯೂ ಸಾಲು ಹಣತೆಗಳನ್ನು ಕಾರ್ತಿಕ ಮಾಸ ಪೂರ್ತಿಯಾಗಿ ಬೆಳಗಿಸುವ ಸತ್ಸಂಪ್ರದಾಯದಿಂದ ವಾತಾವರಣದ ಉಷ್ಣತೆಯನ್ನು ಹೆಚ್ಚಿಸುವ ಉದ್ಧೇಶವು ಈ ಹಬ್ಬದ ಆಚರಣೆಯಲ್ಲಿ ಅಡಗಿದೆ. ಅದು ಬಿಟ್ಟು ಹಬ್ಬದ ನೆಪದಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನು ಪಟಾಕಿಗಳ ಸುಡುವಿಕೆಗೆ ಬಳಸಿ ಹಾಳು ಮಾಡುವುದು, ಅಗ್ನಿ ಅವಘಡಗಳನ್ನು ನಮಗೆ ನಾವೇ ತಂದುಕೊಳ್ಳುವುದು ಎಷ್ಟು ಸರಿ ಎಂದು ಪುಟಾಣಿಗಳು, ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಪರಿಸರ ಮಾಲಿನ್ಯವೂ (ವಾಯು, ಶಬ್ದ) ಈ ಪಟಾಕಿಗಳ ಹಾವಳಿಯಿಂದ ಉಂಟಾಗುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಆದ್ದರಿಂದ 
              "ಪಟಾಕಿಗಳ ಸುಡುವ ಬದಲು
                ಪ್ರಣತಿಗಳ ಬೆಳಗಿಸೋಣ"
                         
~ಹೊರಾ.ಪರಮೇಶ್ ಹೊಡೇನೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ರಮೇಶ ಗಬ್ಬೂರು
ರಮೇಶ ಗಬ್ಬೂರು
7 years ago

ದೀಪಾವಳಿಯ ಮರೆಯದ ಚಿತ್ರಗಳ ಜೊತೆಗೆ ಪರಮೇಶರವರ ಕಾಳಜಿಯ  ಮಾತುಗಳು….????????

1
0
Would love your thoughts, please comment.x
()
x