ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ ಭಾವನಾತ್ಮಕ ಬೆಸುಗೆಯಲ್ಲಿ ಪತಿಯ ಕಚಗುಳಿ, ಮೆಲುಮಾತು, ಪ್ರೀತಿಯ ಆಲಿಂಗನ, ವಿಶ್ವಾಸದ ಭರವಸೆಗಳು ಹೀಗೆ ಆ ಮಾತುಗಳಿಗಾಗಿ, ಮೆಚ್ಚುಗೆಗಾಗಿ ಕಾಯುವ ಆಕೆಗೆ ದಿನವೂ ನಿರಾಶೆ ಕಾದಿರುತ್ತದೆ. ಗಂಡನಾದವ ತನ್ನ ಹೊರ ಜಗತ್ತಿನ ಎಲ್ಲ ಸಂಗತಿಗಳನ್ನು ತನ್ನೊಂದಿಗೆ ಹಂಚಿಕೊಳ್ಳಲೆಂದು ಆಕೆ ಬಯಸುತ್ತಾಳೆ. ಇದಾಕೆಯ ಪ್ರತಿದಿನದ ನಿರೀಕ್ಷೆ. ಕಳೆದ ನಾಲ್ಕು ತಿಂಗಳಿಂದಲೂ ಆಕೆಯ ನಿರೀಕ್ಷೆಗಳು ಬರಿಯ ನಿರೀಕ್ಷೆಗಳಾಗಿಯೇ ಉಳಿದಿವೆ. ಪ್ರತಿದಿನ ಕಛೇರಿ ಕೆಲಸ ಮುಗಿಸಿ ಬರುವ ಪತಿರಾಯ ಸುಸ್ತಾಗಿ ಬಂದವನೇ ಈಕೆ ಕೊಟ್ಟ ತಿಂಡಿ ತಿಂದು ಚಾ ಅಥವಾ ಕಾಫಿ ಹೀರಿ ದಣಿವಾರಿಸಿಕೊಳ್ಳುತ್ತ ಮೌನವನ್ನೆ ಬಯಸುತ್ತಾನೆ. ಬೆಳಿಗ್ಗೆಯಿಂದ ಒಂಟಿಯಾಗಿರುವ ಈಕೆಗೆ ಆತನೊಂದಿಗೆ ಮಾತಾಡುವ ಬಯಕೆ, ಮುಂಜಾನೆಯಿಂದಲೂ ಜನರೊಂದಿಗೆ ಏಗಿ ಏಗಿ ಬಂದ ಆತನಿಗೆ ಮೌನವೇ ಅಮೃತ. ಆದರೆ ಕಲಿತ ಹೆಣ್ಣಾದ ಆಕೆಗೆ ಮನೆಯ ನಾಲ್ಕು ಗೋಡೆಗಳ ನಡುವೆ ಸಮಯ ಸವೆದು ಹೋಗುತ್ತಿದೆ. ಗಂಡನ ಅನಾದರ, ಸೆರೆಮನೆಯಲ್ಲಿದ್ದಂತೆ ಬದುಕು ಎಲ್ಲವೂ ಅಯೋಮಯವಾಗಿ ಆಕೆಯೂ ಸಿಡಿದೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾಳೆ. ಜೀವನ ದುರ್ಗಮವೆನಿಸಲಾರಂಭಿಸುತ್ತದೆ.

ಇದು ಪಟ್ಟಣವಾಸಿ ಜೀವನದಲ್ಲಿ ಮನೆಯಲ್ಲಿರುವ ಗೃಹಿಣಿಯನ್ನು ಕಾಡುವ ಸಂಕಟ. ವಿಭಕ್ತ ಕುಟುಂಬದ ದುರಂತವೂ ಎನ್ನಬಹುದು. ಪೇಟೆಯಲ್ಲಿ ಕಛೇರಿಯ ಸ್ಥಳದಲ್ಲಿ ತಾನು ತಿರುಗಿ ನಕ್ಕು ನಲಿದು ಬರುವ ಗಂಡಿಗೆ ಮನೆಗೆ ಬಂದೊಡನೆ ಅದು ಬರಿಯ ವಿಶ್ರಾಂತಿ ಕೇಂದ್ರವಾಗಿ ಕಂಡುಬರುತ್ತದೆ. ಬಹಳಷ್ಟು ಜನ ಗಂಡಸರು ಹೀಗೆಯೇ ಯೋಚಿಸುತ್ತಿರುತ್ತಾರೆ..ಹೆಣ್ಣು ಬಾಯಿ ಮುಚ್ಚಿಕೊಂಡು ತನ್ನ ಬಯಕೆಗಳನ್ನು ಪೂರೈಸುವ ಬರಿಯ ಯಂತ್ರದಂತೆ ಇದ್ದರೆ ಮಾತ್ರ ಸದ್ಗøಹಿಣಿ ಎಂಬ ಅಲಿಖಿತ ಕಾನೂನು ಗಂಡು ಸೃಷ್ಟಿಸಿಕೊಂಡಂತಿದೆ. ಪತ್ನಿ ತನ್ನನ್ನು ತನ್ನ ಪ್ರೀತಿಯನ್ನು ನಿರೀಕ್ಷಿಸುತ್ತಿರುವಳೆಂದು ತಿಳಿದೂ ಗಂಡು ಉಪೇಕ್ಷಿಸುತ್ತಾನೆ. ಆಕೆಯೊಂದಿಗೆ ಒಂದೆರಡು ಸಮಾಧಾನದ ಸರಸದ ಮಾತುಗಳನ್ನಾಡಿದರೆ ಆತನ ಸುಸ್ತೇನೂ ಹೆಚ್ಚುವುದಿಲ್ಲ. ಬದಲಿಗೆ ಅದು ಆತನನ್ನು ಪ್ರಫುಲ್ಲಿತಗೊಳಿಸುತ್ತದೆ. ಆದರೂ ಆಕೆಯ ತುಡಿತವನ್ನು ಕಂಡೂ ಅದನ್ನು ನಿವಾರಿಸುವ ಗೋಜಿಗೆ ಹೋಗದ ಆತ ಆಕೆಯೇನಾದರೂ ಒತ್ತಾಯಿಸಿ ಕೇಳಿದರೆ ಹರಿಹಾಯುತ್ತಾನೆ.. ಒಟ್ಟಾರೆ ಆಕೆಗೆ ಕೇಳಲೂ ಆಗದ ಕೇಳದೇ ಇರಲೂ ಆಗದ ಪರಿಸ್ಥಿತಿ. ಆದರೆ ಆತನ ಪ್ರಕಾರ ಆಕೆ ಹೆಣ್ಣು. ಅವನಿಗಾಗೇ ಇರುವವಳು. ಆಕೆಗೊಂದು ಸ್ವತಂತ್ರ ಕಲ್ಪನೆಯಿದೆ.ಅದಕ್ಕೆ ತಾನು ಪ್ರತಿಕ್ರಿಯೆ ನೀಡಬೇಕು ಎಂಬ ಸಾಮಾನ್ಯ ಕಳಕಳಿಯೂ ಇಲ್ಲದಂತೆ ವರ್ತಿಸುವ ಆತನ ಬಗ್ಗೆ ಆಕೆಯಲ್ಲಿ ಬರಬರುತ್ತ ತಿರಸ್ಕಾರ, ನಿರ್ಲಿಪ್ತತೆ ಬರುವುದು ಸುಳ್ಳಲ್ಲ. ಆದರೆ ಆತನಿಗೆ ತಾನು ಗಂಡು ಎಂಬ ಗರ್ವ.ಆತ ಬಯಸಿದಾಗ ಮಾತ್ರ ಆಕೆಯ ಪ್ರಶ್ನೆಗಳಿಗೆ ಉತ್ತರ ನೀಡುವುದು ಆತನ ಜಾಯಮಾನ. ತನ್ನ ದೈಹಿಕ ಬಯಕೆ ಗರಿಗೆದರಿದಾಗ ಮಾತ್ರ ಆಕೆಯನ್ನು ಓಲೈಸುವ ಆತನ ವರ್ತನೆ ಆಕೆಗೆ ನಿಧಾನವಾಗಿ ಅಪಥ್ಯವಾಗಬಹುದು. ಹೀಗಾದಾಗ ಕ್ರಮೇಣ ಬೆಳೆಯಬೇಕಾದ ಪರಸ್ಪರ ಹೊಂದಾಣಿಕೆ, ಅನ್ಯೋನ್ಯತೆ ಶಿಥಿಲಗೊಳ್ಳುವುದು ಸಹಜ. ತನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪುರುಷನನ್ನು ಬಯಸುವ ಹೆಣ್ಣಿಗೆ ಅದು ಬರಬರುತ್ತಾ ಅಸಾಧ್ಯವೆನಿಸಿದಾಗ ಆಕೆಯೂ ಮೌನವನ್ನೆ ತೊಟ್ಟುಕೊಳ್ಳುತ್ತಾಳೆ. ವಿಘಟನೆ ತಲೆ ಎತ್ತುತ್ತದೆ. ಬದುಕು ದುರ್ಭರವಾಗುತ್ತಲೇ ವಿಚ್ಛೇದನ, ಬೇರ್ಪಡುವಿಕೆ ತಲೆದೋರುತ್ತದೆ.

ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಕುಟುಂಬದ ಏಕವ್ಯಕ್ತಿ ದುಡಿಮೆಯ ಕುಟುಂಬಗಳ ಒಂದು ದೃಶ್ಯವಷ್ಟೇ ಈ ಮೇಲಿನ ಉದಾಹರಣೆ. ಇಂತಹ ಬೇರೆ ಬೇರೆ ಆಯಾಮಗಳ ಹತ್ತು ಹಲವು ಸಂಗತಿಗಳು ಸ್ತ್ರೀ ಪುರುಷ ಜೀವನದಲ್ಲಿ ದಿನವೂ ಕೋಲಾಹಲಗಳನ್ನು ಎಬ್ಬಿಸುತ್ತಿವೆ. ಗಂಡ ಹೆಂಡತಿಯರಿಬ್ಬರೂ ದುಡಿಯುವ ಕುಟುಂಬಗಳಲ್ಲಿ ಇನ್ನೊಂದು ರೀತಿಯ ಒಡಕು, ಸೌಹಾರ್ದತೆಯ ಕೊರತೆ ಕಂಡುಬರುತ್ತದೆ. ಹಾಗಾಗಿಯೇ ಸಮಾನತೆಯ ಮುಖಗಳು ಹತ್ತು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತಾ ಸಾಗುತ್ತಿವೆ. ನಮ್ಮ ಸಂಸ್ಕೃತಿಗೆ ಒಗ್ಗದ ಲಿವಿಂಗ್ ಟುಗೆದರೆನಂತಹ ಪಾಶ್ಚಾತ್ಯ ಬದುಕಿನ ವ್ಯವಸ್ಥೆಗಳು ಮೂಗುತೂರಲಾರಂಬಿಸಿವೆ.

ವಿವಾಹವೆಂದರೆ ಗಂಡು ಹೆಣ್ಣಿನ ಆಕರ್ಷಣೆಗೆ ದೈಹಿಕ ಬಯಕೆಗಳ ಈಡೇರಿಕೆಗೆ ಮಾನವ ಸಂತತಿಯ ಮುಂದುವರಿಕೆಗೆ ಸಮಾಜ ಜೀವನ ವಿಧಿಸಿದ ಒಂದು ಸಾಮಾಜಿಕ ಒಪ್ಪಂದ. ಭಾರತೀಯರಲ್ಲಿ ಅದು ಜನ್ಮಜನ್ಮದ ಅನುಬಂಧವೆಂದೂ, ಒಂದು ಪವಿತ್ರ ಬಂಧನವೆಂದೂ ಆ ನೆಲೆಯಲ್ಲಿಯೇ ಭಾರತೀಯ ಸಾಮಾಜೀಕರಣದ ವಿಸ್ತøತ ನೋಟವು ಶತಶತಮಾನಗಳಿಂದ ರೂಪುಗೊಳ್ಳುತ್ತಲೇ ಬರುತ್ತಿದೆ. ಗಂಡು ಹೆಣ್ಣಿನ ನಡುವಿನ ಸ್ನೇಹ ಪ್ರೇಮ ಕಾಮಗಳಿಗೆಲ್ಲಾ ಒಂದು ಚೌಕಟ್ಟು ಕಟ್ಟಿ ಅದಕ್ಕೆ ನಿರ್ಬಂಧಗಳನ್ನು ಹೆಣೆದು, ಅಶ್ಲೀಲವೆನಿಸುವ ದೇಹ ಬಯಕೆ ಈಡೇರಿಕೆಯ ಮಾರ್ಗಗಳಿಗೆ ಶಿಸ್ತಾದ ಒಂದು ರೂಪು ಕೊಡಲಾಗಿದೆ. ಕುಟುಂಬ ಸಂಬಂಧಗಳ ವರ್ತುಲದಲ್ಲಿಯೇ ಅಪ್ಪ-ಅಮ್ಮ, ಅಣ-್ಣತಮ್ಮ, ಅಕ್ಕ-ತಂಗಿ, ಮಾವ- ಅಳಿಯ ಇತ್ಯಾದಿ ಇತ್ಯಾದಿ ಬೆಸುಗೆಯನ್ನು ಸುಂದರವಾದ ಭಾಂದವ್ಯ ತೋಟವನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಮಾನವ ಸಂಘ ಜೀವಿ ಎಂಬ ಅರಿಸ್ಟಾಟಲ್ನ ವ್ಯಾಖ್ಯಾನಕ್ಕೆ ಸಂವಾದಿ. ಇಲ್ಲಿ ಯಾರೂ ಪ್ರಮುಖರಲ್ಲ. ಯಾರೂ ಅಪ್ರಮುಖರಲ್ಲ. ಅವರವರಿಗೆ ಅವರದೇ ಆದ ಸ್ಥಾನವಿದೆ. ಮಾನವಿದೆ.

ಕುಟುಂಬ ವ್ಯವಸ್ಥೆಯಲ್ಲಿ ಗಂಡು ಹೆಣ್ಣು ಪರಸ್ಪರ ಗೌರವಿಸುತ್ತಾ, ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾ ಹೋದಲ್ಲಿ ಅಲ್ಲೊಂದು ಸುಂದರ ಬದುಕು ಸೃಷ್ಟಿಗೊಳ್ಳುತ್ತದೆ. ಹೆಣ್ಣು ಬರಿಯ ಕಾಮದ ಗೊಂಬೆ.ತನ್ನ ಸುರತಕ್ಕೆ ಮಾತ್ರ ಸಂಗಾತಿ ಎಂದು ಗಂಡು ಬಯಸಿದ್ದಲ್ಲಿ ಆ ಕುಟುಂಬದಲ್ಲಿ ದೈಹಿಕ ಬೆಸುಗೆ ಮಾತ್ರ ಸಾಧ್ಯವಾಗಿ ಮಾನಸಿಕ ಬೆಸುಗೆ ಇಲ್ಲದೇ ಆ ಬಂಧ ಬಹುಬೇಗ ತನ್ನ ಆಕರ್ಷಣೆಯನ್ನು ಗಟ್ಟಿತನವನ್ನು ಕಳೆದುಕೊಂಡು ಬಿಡುತ್ತದೆ. ಹಾಗಾಗಿ ಪತಿಯಾದವ ಪತ್ನಿಯ ವ ಪತ್ನಿಯಾದವಳು ಪತಿಯ ಆಶೋತ್ತರಗಳಿಗೆ ವಿಚಾರಗಳಿಗೆ ಸ್ಪಂದಿಸುತ್ತಾ ಸಾಗಿದ್ದಲ್ಲಿ ಮಾತ್ರ ಅದೊಂದು ಸುಖಿ ಕುಟುಂಬವಾಗುವುದು. ಇನ್ನೊಂದು ಸಂಗತಿ ಎಂದರೆ ಹೆಣ್ಣು ಮತ್ತಾಕೆಯ ಮಾನಸಿಕ ಜಗತ್ತು ಅದರ ವ್ಯಾಪಾರಗಳು ತೀರಾ ಸಂಕೀರ್ಣ ಮತ್ತು ಸಂವೇದನಾತ್ಮಕ. ಮೃದು ಮನಸ್ಸಿನ ಪುರುಷನನ್ನು ಹಾಗೆಂದೇ ಹೆಂಗರಳಿನವ ಎಂಬ ವಿಶೇಷಣ ಬಳಸಿ ಕರೆಯಲಾಗುತ್ತದೆ. ಹೆಣ್ತನದ ಭಾವೋದ್ವೇಗಗಳ ಅರಿವು ಗಂಡಿಗೂ, ಗಂಡಿನ ಧೋರಣೆಗಳ ಸ್ವಲ್ಪಮಟ್ಟಿನ ಅರಿವು ಹೆಣ್ಣಿಗೂ ಇದ್ದು, ಸಾಮರಸ್ಯದ ಅಗತ್ಯತೆ ಇಂದಿಗಿದೆ. ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಯ ಪ್ರೇಮ ಹಾಗೂ ಸಂಬಂಧಗಳು [ಪ್ಲೆಟೋನಿಕ್ ಲವ್] ನಮಗೆ ನಮ್ಮ ಸಮಾಜಕ್ಕೆ ಒಗ್ಗಲಾರದು. ನಮ್ಮ ಮಾನಸಿಕ ವ್ಯಾಪಾರಗಳು ಜೀವನ ವಿಧಾನಗಳು ಹುಟ್ಟಿನಿಂದ ಬೆಳೆಸಿಕೊಂಡು ಬಂದ ಭಾರತೀಯ ಮನಸ್ಥಿತಿ ಇವೆಲ್ಲವೂ ಬದುಕೆಂಬ ಆಲದ ಮರದ ಮಹಾನ್ ಬೀಳಲುಗಳಾಗಿವೆ. ಆದಾಗ್ಯೂ ಗಂಡು ಹೆಣ್ಣನ್ನು ತನ್ನಂತೆ ಗೃಹಿಸಿ ಪುರಸ್ಕರಿಸಿ ಆಕೆಗೆ ಕೊಡುವ ಗೌರವ, ಮಾನ್ಯತೆಗಳ ಕೊಟ್ಟಿದ್ದೇ ಆದರೆ ಸಮಾನತೆಯ ಹಿರಿಮೆಗೆ ಇನ್ನುಗರಿ ಮೂಡಬಹುದು.
-ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
nanda
nanda
5 years ago

realistic thinking madam

1
0
Would love your thoughts, please comment.x
()
x