ಸಮಾಜ ಸುಧಾರಕಿ, ಮಹಿಳಾವಿಮೋಚಕಿ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ: ಹಿಪ್ಪರಗಿ ಸಿದ್ದರಾಮ್

 

ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಪರಂಪರೆಯನ್ನು ಅವಲೋಕಿಸುತ್ತಾ ಹೋದಂತೆ ಭರತಖಂಡವು ಅಮೂಲ್ಯವಾದ ಸಾಮಾಜಿಕ ಸಮಾನತೆಯ ವೈಚಾರಿಕ, ಪ್ರಗತಿಪರ ಮನಸ್ಸುಗಳಿಂದೊಡಗೂಡಿದ ಅಪೂರ್ವ ರತ್ನಗಳ ಗಣಿಯಾಗಿದೆ. ಸಮಾಜ ಸೇವೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಹೀಗೆ ಹಲವಾರು ಸಂಗತಿಗಳನ್ನು ಆಯಾ ಕಾಲಘಟ್ಟವು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿರುವುದನ್ನು ಕಾಣಬಹುದು. ಹೀಗಿದ್ದರೂ ಕೆಲವು ಸಂಗತಿಗಳು ಸಮಾಜದಲ್ಲಿ ಐಕ್ಯತೆಯ ಮಂತ್ರದೊಂದಿಗೆ ಸಾಮರಸ್ಯವನ್ನುಂಟು ಮಾಡುವಲ್ಲಿ ಯಶಸ್ವಿಯಾದರೂ ಮತ್ತೆ ಕೆಲವೊಮ್ಮೆ ಸಾಮಾಜಿಕವಾಗಿ ಬಲಿಷ್ಟರು, ತಾವೇ ಶ್ರೇಷ್ಟರು ಎಂಬ ದುರಂಹಕಾರ ಮನೋಭಾವದ ಕುಹಕಿಗಳ ಕಪಟತನಕ್ಕೆ ಸಾಕ್ಷಿಭೂತವಾಗಿ ಕಹಿ ಘಟನೆಗಳು ಇತಿಹಾಸದ ಕೆಲವೆಡೆ ಕಪ್ಪು ಚುಕ್ಕೆಗಳಾಗಿ ಇಂದಿಗೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತಾ ವೈರಾಣುಗಳಂತೆ ಸಮಾಜದ ಸ್ವಾಸ್ಥ್ಯಗೆ ಭಾದೆಯನ್ನುಂಟು ಮಾಡುತ್ತಿವೆ. ಇಂತಹ ಸಮಾಜದಲ್ಲಿಯ ಪ್ರತಿಕೂಲ ವಿಚಾರ, ಆಚರಣೆ, ನಡೆ-ನುಡಿಗಳನ್ನು ದಿಟ್ಟತನದಿಂದ ಪ್ರಶ್ನಿಸುತ್ತಾ, ಸಾರಾಸಗಟಾಗಿ ನಿರಾಕರಿಸುತ್ತಾ, ಜೀವನ ದ್ರವ್ಯಗಳ ಹೊಸ ವಿಚಾರಗಳೊಂದಿಗೆ, ಮಾನವತೆಯ ಅಂತಃಕರುಣೆಯನ್ನು, ಪ್ರಖರ ವಿಚಾರಧಾರೆಗಳಿಂದ ವಿವರಿಸುತ್ತಾ, ಏನೆಲ್ಲಾ ಅಡ್ಡಿ-ಆತಂಕಗಳು, ಜೀವ ಬೆದರಿಕೆಯಂತಹ ಪ್ರಸಂಗಗಳನ್ನೂ ಎದುರಿಸಿ, ಸತ್ಯದ ಅರಿವಿನೊಂದಿಗೆ, ಮಾನವತೆಯ ಜಾಗೃತಿಗಾಗಿ ಶ್ರಮಿಸುತ್ತಾ, ಇತಿಹಾಸವನ್ನು ನಿರ್ಮಿಸಿದ ಕೆಲವೇ ಕೆಲವು ಮಹನೀಯರು ನಮ್ಮ ಕಣ್ಣ ಮುಂದೆ ಉಜ್ವಲ ತಾರೆಗಳಂತೆ ಕಂಗೊಳಿಸುತ್ತಿದ್ದಾರೆ.
 
 
ತಥಾಗತ ಗೌತಮ ಬುದ್ಧ, ಸಾಮ್ರಾಟ ಅಶೋಕ, ಸಂತ ಕಭೀರ, ಸಂತ ರವಿದಾಸ, ಛತ್ರಪತಿ ಶಿವಾಜಿ, ಮಹಾತ್ಮಾ ಬಸವೇಶ್ವರ, ರಾಷ್ಟ್ರಪಿತ ಜ್ಯೋತಿರಾವ್ ಫುಲೆ, ಸಂತ ನಾರಾಯಣ ಗುರು, ಪೆರಯಾರ ನಾರಾಯಣ ಸ್ವಾಮಿ, ರಾಜರ್ಷಿ ಶಾಹುಮಹಾರಾಜ, ವಿಶ್ವರತ್ನ, ಡಾ.ಬಾಬಾಸಾಹೇಬ ಅಂಬೇಡ್ಕರ್, ಸಂತ ಗಾಡಗೆ ಮಹಾರಾಜರು, ಸಾಹಿತ್ಯ ಸಾಮ್ರಾಟ ಅಣ್ಣಾಬಾವು ಸಾಠೆ ಹೀಗೆ ಹಲವಾರು ಮಹನೀಯರು ತಮ್ಮ ಕರ್ತವ್ಯ ನಿಷ್ಠೆಯಿಂದ, ಪ್ರಖರ ವೈಚಾರಿಕತೆಯಿಂದ, ತ್ಯಾಗ ಮನೋಭಾವದಿಂದ ಭಾರತೀಯ ಸಮಾಜವನ್ನು ಮಾನವೀಯತೆಯ ನೆಲೆಗಟ್ಟಿನ ಸಮಭಾವದಡಿಯಲ್ಲಿ ತರಲು ಶ್ರಮಿಸುವುದರೊಂದಿಗೆ ಸಮೃದ್ಧಗೊಳಿಸಲು ಪ್ರಯತ್ನಿಸಿದ್ದಾರೆ. ಅದೇ ರೀತಿ ಮಾತೆ ಜೀಜಾಬಾಯಿ, ಅಹಿಲ್ಯಾಬಾಯಿ ಹೋಳ್ಕರ, ವೀರರಾಣಿ ಕಿತ್ತೂರು ಚೆನ್ನಮ್ಮಾ, ಝಾಂಸಿ ರಾಣಿ ಲಕ್ಷ್ಮಿಬಾಯಿ, ಮಾತೆ ಸಾವಿತ್ರಿಬಾಯಿ ಫುಲೆ, ಮಾತೆ ರಮಾಬಾಯಿ ಹೀಗೆ ಹಲವಾರು ಮಾತೃಸಮಾನ ಮಹಿಳಾರತ್ನಗಳು ಕ್ರಾಂತಿಯ ಕಿಡಿಗಳಾಗಿ ಇತಿಹಾಸದಲ್ಲಿ ದ್ರುವತಾರೆಯಂತೆ ಇಂದಿಗೂ ಕಂಗೊಳಿಸುತ್ತಿದ್ದಾರೆ.
 
ಇಂದು ಭಾರತೀಯ ಮಹಿಳೆ ಉತ್ತುಂಗ ಶಿಖರದ ಮೇಲಿದ್ದು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹಲವಾರು ರಂಗಗಳಲ್ಲಿಯೂ ತಾನೇನು ಕಡಿಮೆಯಿಲ್ಲ ಎಂಬುದನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಭೀತು ಪಡಿಸುವುದರೊಂದಿಗೆ ಸಮಾಜದಲ್ಲಿ ಸರಿಸಮನಾಗಿ ಸ್ಪರ್ಧೆಯೆಂಬ ಸವಾಲಿಗೆ ತನ್ನ ಪ್ರತಿಭೆಯ ಮೂಲಕ ಉತ್ತರಿಸುತ್ತಿದ್ದಾಳೆ. ಈ ಎಲ್ಲ ಉತ್ತುಂಗ ಶಿಖರತೆಗೆ, ಉತ್ತಿರುಸುವ ಮನೋಸಾಮರ್ಥಕ್ಕೆ, ಪ್ರಗತಿಗೆ ಮೂಲಕಾರಣಕರ್ತರಾದ ಪ್ರಾತಃಸ್ಮರಣೀಯರನ್ನು ನೆನೆಯಬೇಕಾದುದು ನಾಗರಿಕ ಸಮಾಜದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಂತಹ ಪ್ರೇರಕ ಶಕ್ತಿಯಾಗಿ ಕಳೆದ ಶತಮಾನದಲ್ಲಿ ಭರತಖಂಡದಲ್ಲಿ ಹೊರಹೊಮ್ಮಿದ ಸ್ಪೂರ್ತಿಯ ಸೆಲೆ, ನಿರ್ಗತಿಕರ ಅಮ್ಮ, ಕರುಣಾಮಯಿ, ಮಮತಾಮಯಿ ಬೇರೆ ಯಾರೂ ಅಲ್ಲ ವಿದ್ಯಾಜ್ಯೋತಿ, ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆಯವರು.
 
ಮಮತಾಮಯಿ ಅಮ್ಮ ಸಾವಿತ್ರಿಬಾಯಿ ಫುಲೆಯವರು 1831ರ ಜನೇವರಿ 3ನೇ ದಿನಾಂಕದಂದು ಈಗಿನ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ನಾಯಗಾಂವ ಎಂಬ ಗ್ರಾಮದ ಮುಖ್ಯಸ್ಥರಾಗಿದ್ದ ಶ್ರೀ ಖಂಡೋಜಿ ನವಸೆ ಮತ್ತು ಮಾತೆ ಲಕ್ಷ್ಮಿಬಾಯಿ ದಂಪತಿಗಳ ಉದರದಲ್ಲಿ ಜನಿಸಿದರು. ಆಗಿನ ಸಂಪ್ರದಾಯದಂತೆ ಬಾಲಕಿ ಸಾವಿತ್ರಿಬಾಯಿಯ ವಿವಾಹ 9ನೇ ವಯಸ್ಸಿನಲ್ಲಿಯೇ 1840ರಲ್ಲಿ (ಹಿಂದೂ ಪಂಚಾಗದ ಪ್ರಕಾರ, ಪಾಲ್ಗುಣ ಪಂಚಮಿಯಂದು, ಶಕೆ 1765) 13ನೇ ವಯಸ್ಸಿನ ಜ್ಯೋತಿರಾವ್ ಫುಲೆಯವರರೊಂದಿಗೆ ನೆರವೇರಿತು. ಸಾವಿತ್ರಿಭಾಯಿಯವರ ಮಾವ (ಪತಿಯ ತಂದೆ) ಗೋವಿಂದರಾವ್ ಫುಲೆ, ಅವರು ಖೀರಸಾಗರ(ಫುರಸುಂಗಿ)ದಿಂದ ಪುಣೆಗೆ ವಲಸೆ ಬಂದವರಾಗಿದ್ದರು. ಆಗಿನ ಕಾಲದ ಆಡಳಿತಗಾರ ಪೇಶ್ವೆಯವರು ತೋಟಗಾರಿಕೆ ಮಾಡಿಕೊಳ್ಳುವ ಸಲುವಾಗಿ ಇವರಿಗೆ ಜಮೀನು ದಾನವಾಗಿ ನೀಡಿದ್ದನು. ಹೂದೋಟವನ್ನು ಅಭಿವೃದ್ಧಿಪಡಿಸಿ ಹೂವಿನ ವ್ಯಾಪಾರವನ್ನು ಆರಂಭಿಸಿದ್ದರಿಂದ (ಹಿಂದಿ/ಮರಾಠಿಯಲ್ಲಿ ಹೂವಿಗೆ ಫೂಲ್ ಎಂದಾಗುತ್ತದೆ) ಫುಲೆ ಎಂಬ ಹೆಸರು ಇವರ ಮನೆತನಕ್ಕೆ ಅಂಟಿಕೊಂಡಿತು. ಈಗಲೂ ಆ ಪ್ರದೇಶದಲ್ಲಿ ವಂಶದ ಕಸುಬಿನಿಂದಲೇ ಮನೆತನಗಳನ್ನು ಗುರುತಿಸುವುದು ರೂಡಿಯಲ್ಲಿದೆ.
 
ಮದುವೆಯಾಗಿ ಬಂದ ಸಾವಿತ್ರಿಬಾಯಿಗೆ ಶಿಕ್ಷಣದ ಮೇಲಿನ ಆಸೆ ಮತ್ತು ಗುರಿ ಕಂಡು ಪ್ರಗತಿಪರ, ಪ್ರಖರ ವಿಚಾರಧಾರೆಯ ಶಿಕ್ಷಣ ಪ್ರೇಮಿ, ಮಹಿಳಾ ಮತ್ತು ಶೋಷಿತರ ಸುಧಾರಣೆಗಾಗಿ ಪ್ರಯತ್ನಿಸುವ ಮಹಾನ್ ಮನಸ್ಸಿನ ಮಹಾತ್ಮಾ ಜ್ಯೋತಿ(ರಾವ್)ಭಾ ಫುಲೆಯವರು ಸಂಪೂರ್ಣವಾಗಿ ಬೆಂಬಲಿಸುವುದರೊಂದಿಗೆ ಸಾವಿತ್ರಿಬಾಯಿಯವರಲ್ಲಿ ಅಕ್ಷರಜ್ಯೋತಿಯನ್ನು ಬೆಳಗಿಸಿ ಸಾಕ್ಷರಳನ್ನಾಗಿ ಮಾಡಿ ಪ್ರೋತ್ಸಾಹಿಸಿದರು. ತಮ್ಮ ಸರ್ವಸ್ವವನ್ನೂ ಈ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಸಮರ್ಪಿಸಿದರು. ತನ್ಮೂಲಕ ಸಾವಿತ್ರಿಬಾಯಿಯವರ ಕತೃತ್ವದ ಜ್ಯೋತಿಯನ್ನು ಪ್ರಜ್ವಲಿಸುವಂತೆ ಮಾಡಿದರು. ಹೀಗೆ ಪತಿ ಜ್ಯೋತಿ(ರಾವ್)ಭಾ ಫುಲೆಯವರ ಪ್ರೇರಣೆಯಿಂದ ಶೈಕ್ಷಣಿಕ ಅರ್ಹತೆಯನ್ನು ಪಡೆದ ಇವರು ಆಗಿನ ಕಾಲದಲ್ಲಿಯೇ ಅಂದರೆ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಶಿಕ್ಷಕಿಯ ತರಬೇತಿಯನ್ನು ಪೂರೈಸಿದ ಪ್ರಥಮ ವಿದ್ಯಾರ್ಥಿನಿ ಮತ್ತು ಪ್ರಥಮ ಮುಖ್ಯೋಪಾಧ್ಯಾಯಿನಿಯೆಂದು ಇತಿಹಾಸ ನಿರ್ಮಿಸಿದ ಭಾರತದ ಪ್ರಪ್ರಥಮ ಮಹಿಳೆಯಾಗಿ ಹೊರಹೊಮ್ಮಿದರು.
 
ಅಮಾನವೀಯ, ಪಿತೃಪ್ರಧಾನ ಮತ್ತು ದಬ್ಬಾಳಿಕೆಯ ಸಾಂಪ್ರದಾಯಿಕ ಸಾಮಾಜಿಕ ಮನೋಸ್ಥಿತಿಯ ಮನುವಾದಿಗಳ ಕಠೋರ ವಿರೋಧಗಳನ್ನು ದಿಕ್ಕರಿಸಿ ಮನುವಾದಿಗಳ ಪ್ರಾಬಲ್ಯವಿದ್ದ ಪೂನಾ ನಗರದಲ್ಲಿ “ಫಿಮೇಲ್ ನೇಟಿವ್ ಸ್ಕೂಲ್” ಮತ್ತು “ಸೋಸೈಟಿ ಫಾರ್ ಪ್ರಮೋಟಿಂಗ್ ಎಜ್ಯುಕೇಶನ್ ಟು ಮಹಾರ್ ಮಾಂಗ್ ಎಟಸ್ಪ್ರೂಜ್” ಎಂಬ ಎರಡು ಶಿಕ್ಷಣ ಸಂಸ್ಥೆಗಳನ್ನು ಪತಿ ಮಹಾತ್ಮಾ ಜ್ಯೋತಿಭಾ ಫುಲೆಯವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಆರಂಭಿಸಿದರು. ಶಿಕ್ಷಣದ ಜೊತೆಗೆ “ಬಾಲಹತ್ಯೆ ಪ್ರತಿಬಂಧಕ (ಬಾಣಂತಿಮನೆ) ಗೃಹ”ವನ್ನು ಆರಂಭಿಸಿದರು. ಕಾರ್ಮಿಕರಿಗೆ ಶಿಕ್ಷಣ ನೀಡುವುದರೊಂದಿಗೆ ಅವರಲ್ಲಿ ಜಾಗೃತಿಯನ್ನುಂಟು ಮಾಡಲು ರಾತ್ರಿ ಶಾಲೆಗಳನ್ನು ಪ್ರಾರಂಭ ಮಾಡಿದರು. ಬರಗಾಲದಿಂದ ಬಸವಳಿದ ಬರಪೀಡಿತರಿಗೆ “ಅನ್ನ ದಾಸೋಹ” ಆರಂಭಿಸಿದರು. ಆಗಿನ ಕಾಲದಲ್ಲಿ ಹಿಂದೂ ಧರ್ಮದಲ್ಲಿ ಆಳವಾಗಿ ಬೇರೂರಿದ್ದ, ಅರ್ಥವಿಲ್ಲದ ಅನಿಷ್ಟ ಆಚರಣೆಗಳಾದ ಬಾಲ್ಯವಿವಾಹ, ಕೇಶಮುಂಡನ, ದೇವದಾಸಿ ಪದ್ಧತಿ, ಸತಿಸಹಗಮನ ಪದ್ಧತಿ, ಅಸ್ಪೃಶ್ಯತೆ ನಿವಾರಣೆ ಮುಂತಾದವುಗಳನ್ನು ಸಮಾಜದಿಂದಲೇ ಶಾಶ್ವತವಾಗಿ ಉಚ್ಛಾಟಿಸಲು ದಂಪತಿಗಳಿಬ್ಬರೂ ಕಂಕಣಬದ್ದರಾಗಿ ಹಗಲಿರುಳು ದುಡಿದರು.
 
ಭಾರತದಲ್ಲಿಯೇ ಪ್ರಪ್ರಥಮ ಬಾಲಕಿಯರ ಶಾಲೆ ಆರಂಭಿಸುತ್ತಾ (ಜನೇವರಿ 1, 1848 ಭಿಡೇವಾಡ, ನಾರಾಯಣಪೇಠ, ಪೂನಾ) ಶಾಲಾ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಕೆಳವರ್ಗದ ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸ ಹೇಳಿಕೊಡಲು ಹೋಗುವ ಸಮಯದಲ್ಲಿ ಮಾತೆ ಸಾವಿತ್ರಿಬಾಯಿಯವರು ಮೇಲ್ಜಾತಿಯವರಿಂದ ದೈಹಿಕವಾಗಿ ಹಲ್ಲೆಗೊಳಗಾಗಬೇಕಾಯಿತು. ಸಂಪ್ರದಾಯಸ್ಥ ಹೀನ ಮನದ ವ್ಯಕ್ತಿಗಳು ದಾರಿಯಲ್ಲಿ ಅವರನ್ನು ಹಿಂಬಾಲಿಸುತ್ತಾ ಹಿಯ್ಯಾಳಿಸುವುದು, ಅಶ್ಲೀಲ ಶಬ್ದಗಳಿಂದ ಬೈಯ್ಯುವುದು, ಕೊಳೆತ ಟೊಮಾಟೋ, ಕೊಳೆತ ಮೊಟ್ಟೆ, ಕಲ್ಲುಗಳನ್ನು ಎಸೆಯುವುದು, ಇವರು ಹೋಗುವ ರಸ್ತೆಯಲ್ಲಿ ಇವರ ಮೇಲೆ ಸೆಗಣಿ ಎರಚುವ ಮೂಲಕ ಅವಮಾನಿಸಲಾಯಿತು. ಆದರೂ ಎದೆಗುಂದದ ಮಾತೆಯವರು ಉಪಾಯವಾಗಿ ಅಂದರೆ ಶಾಲೆಗೆ ಹೋದ ಮೇಲೆ ಬಟ್ಟೆ ಬದಲಾಯಿಸಿಕೊಂಡು ಹೆಣ್ಣು ಮಕ್ಕಳಿಗೆ, ಯುವಕರಿಗೆ, ಕಾರ್ಮಿಕರಿಗೆ ಹೀಗೆ ಶೋಷಿತ ಸಮುದಾಯದ ಎಲ್ಲರಿಗೂ ಶಿಕ್ಷಣ ನೀಡಿ ಆದರ್ಶಪ್ರಾಯರಾದರು. "ಏಳಿ, ಎದ್ದೇಳಿ, ಶಿಕ್ಷಣ ಪಡೆಯಿರಿ, ಸಂಪ್ರದಾಯಗಳನ್ನು ಸದೆ ಬಡೆಯಿರಿ, ಮುಕ್ತಿ ಹೊಂದಿರಿ" ಎಂದು ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ದಂಪತಿಗಳಿಬ್ಬರು ಹಲವಾರು ಕಡೆಗಳಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಶಾಲೆಗಳನ್ನು ಆರಂಭಿಸಿದರು. ಇದನ್ನು ಗಮನಿಸಿದ ಬ್ರಿಟಿಷ-ಭಾರತ ಸರಕಾರ ದಂಪತಿಗಳಿಬ್ಬರನ್ನು (1852) ರಾಜಮರ್ಯಾದೆಯಿಂದ ಶಾಲು ಹೊದಿಸಿ ಸನ್ಮಾನಿಸಿತು. ಮನೆಯ ಆವರಣದಲ್ಲಿ ತಾವು ಉಪಯೋಗಿಸುತ್ತಿದ್ದ ಬಾವಿಯನ್ನು ದಲಿತರಿಗಾಗಿ (1848) ಮುಕ್ತವಾಗಿಟ್ಟರು.
 
ಭಾರತೀಯ ಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣವೆಂಬುದು ಅಗತ್ಯ ಸಾಧನವೆಂಬುದನ್ನರಿತ ಮಾತೆ ಸಾವಿತ್ರಿಬಾಯಿ ಫುಲೆಯವರು ಅಕ್ಷರ ಕಲಿಯಲು ಸ್ಫೂರ್ತಿಸೆಲೆಯಾಗುವುದರೊಂದಿಗೆ ಹಲವಾರು ಸಮಾಜಗಳ ಹಲವಾರು ವಿಭಿನ್ನ ಮನೋಸ್ಥಿತಿಯ ಮಹಿಳೆಯರನ್ನು ಒಂದೇಡೆ ಸೇರಿಸಿಕೊಂಡು ಅವರ ಎದೆಯಲ್ಲಿ ಅಕ್ಷರ ಭೀಜ ನೆಡುವ ಕೆಲಸ ಮಾಡುತ್ತಲೇ ಶೈಕ್ಷಣಿಕ ಕ್ರಾಂತಿಯನ್ನು ಆರಂಭಿಸಿದವರು. ಇದರಿಂದ ಅಕ್ಷರವಂಚಿತ ಶೋಷಿತ ಸಮುದಾಯ ಶಿಕ್ಷಣ ಪಡೆದು ತಮ್ಮ ಸ್ಥಿತಿ-ಗತಿಗಳನ್ನು ಅರಿತು, ಜಾಗೃತರಾಗುವಂತೆ ಮಾಡುವಲ್ಲಿ, ಅಂತಹ ಆತ್ಮಶಕ್ತಿಯ ಕಿಡಿಯನ್ನು ಪ್ರಥಮವಾಗಿ ಭಾರತದ ಇತಿಹಾಸದಲ್ಲಿ ಹೊತ್ತಿಸಿದವರು ದಂಪತಿಗಳಾದ ಜ್ಯೋತಿಭಾ ಮತ್ತು ಸಾವಿತ್ರಿಬಾಯಿ ಫುಲೆಯವರು. ಅಂತಹ ಕಿಡಿಯ ಸಹಾಯದಿಂದ ಸಾಮಾಜಿಕ ಜಾಗೃತಿಯ ಚಳುವಳಿಯ ದೀವಿಗೆಯನ್ನು ಮನೆ-ಮನಗಳಲ್ಲಿ ದೇದಿಪ್ಯಮಾನವಾಗಿ ಉರಿಯುವಂತೆ ಮಾಡಿದ ಕೀರ್ತಿ ಈ ಯಶಸ್ವಿಯ ಜೋಡಿಯದು ಅಂದರೆ ಅತಿಶಯೋಕ್ತಿಯೇನಲ್ಲ. ಇಂದು ಸ್ವಾತಂತ್ರೋತ್ತರ, ಜಾಗತೀಕರಣೋತ್ತರದ ಸಂದರ್ಭದ ಮಹಿಳೆಯರು ಉತ್ತುಂಗ ಸ್ಥಾನವನ್ನು ಅಲಂಕರಿಸಿದ್ದಾರೆ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ, ಪಿ.ಟಿ.ಉಷಾ, ಸ್ವರ್ಣಕನ್ಯಾ, ಗಗನಯಾನಿ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೀಗೆ ಹಲವರನ್ನು ಉದಾಹರಿಸಬಹುದು. ಶಿಕ್ಷಣ ಪಡೆಯುವುದರ ಮೂಲಕ ಒಬ್ಬ ಮಹಿಳೆ ದೇಶವನ್ನೇ ಆಳಬಲ್ಲಳು ಎಂಬ ಸಿದ್ಧಾಂತವನ್ನು ಪ್ರತಿಪಾಧಿಸಿದ ಮಾತೆ ಸಾವಿತ್ರಿಬಾಯಿಯವರ ಮುಂದಾಲೋಚನೆ ಅಥವಾ ದೂರದೃಷ್ಟಿಯ ಫಲ ಈಗ ಎಲ್ಲ ಮಹಿಳೆಯರಿಗೂ ಸಿಗುತ್ತಿರುವುದು ಅವರಲ್ಲಿಯ ಶ್ರೇಷ್ಟ ಸಮಾಜ ಸುಧಾರಕಿ ಎಂಬ ಪ್ರಾಮಾಣಿಕ ಮನದ ಪ್ರಯತ್ನಕ್ಕೆ ಸಂದ ಜಯವೆನ್ನಬಹುದು.
 
ಪತಿ ಜ್ಯೋತಿಭಾ ಫುಲೆಯವರ ಕಾಲಾನಂತರವೂ ಅವರು ಸ್ಥಾಪಿಸಿದ್ದ “ಸತ್ಯ ಶೋಧಕ ಸಮಾಜ” ಸಂಸ್ಥೆಯ ಮೂಲಕ ಸಮಾಜ ಸುಧಾರಣೆಯ ಕುರಿತಾದ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಹೀಗೆ ನಿಷ್ಠೆಯಿಂದ ಕಾರ್ಯೋನ್ಮುಖರಾಗಿದ್ದಾಗಲೇ ಪೂನಾ ನಗರವು ಪ್ಲೇಗ ರೋಗದಿಂದ ತತ್ತರಿಸಿತು. ಪ್ಲೇಗ್ ರೋಗಿಗಳ ಆರೈಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾಗಲೇ ಮಾತೆ ಸಾವಿತ್ರಿಬಾಯಿಯವರು 1897ರ ಮಾರ್ಚ 10ರ ರಾತ್ರಿ 9.00 ಗಂಟೆಗೆ ಇಹಲೋಕವನ್ನು ತ್ಯಜಿಸಿದರು. ಮಹಿಳೆಯ ಸಮಸ್ತ ಜೀವನ, ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳು ಹೀಗೆ ಮಹಿಳಾಪರ, ಶೋಷಿತರ ಪರ ಹಲವಾರು ಸುಧಾರಣೆಯ ಕನಸುಗಳನ್ನು ಹೊತ್ತ ಮಾತೆಯವರು ಮಹಿಳಾ ಮತ್ತು ಶೋಷಿತ ಸಮುದಾಯದ ಧ್ವನಿಯಾಗಿ ದೈಹಿಕವಾಗಿ ಇಲ್ಲದಿದ್ದರೂ ಇಂದಿಗೂ ಜೀವಂತವಾಗಿದ್ದಾರೆ. ಪ್ರತಿ ವರ್ಷ “ಮಾರ್ಚ 10”ನ್ನು “ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮೃತಿ ದಿನ” ಮತ್ತು "ಮಹಿಳಾ ಸಬಲೀಕರಣದ ದಿನ" ಎಂದು ದೇಶದಲ್ಲೇಡೆ ಆಚರಿಸಲಾಗುತ್ತಿದೆ. ಅವರು ರಚಿಸಿದ ಕವನಗಳ ಗುಚ್ಛ “ಕಾವ್ಯ ಫುಲೆ”ಯನ್ನು 1934ರಲ್ಲಿ ಮತ್ತು “ಬವನಕಾಶಿ ಸುಭೋಧ ರತ್ನಾಕರ” ಕೃತಿಯನ್ನು 1982ರಲ್ಲಿ ಪ್ರಕಟಿಸಲಾಯಿತು. ಇತ್ತೀಚೆಗೆ ಮಹಾರಾಷ್ಟ್ರ ಸರಕಾರವು ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯಮಹಿಳೆಯರಿಗೆ ಪ್ರತಿಷ್ಟಿತ ‘ಮಾತೆ ಸಾವಿತ್ರಿಬಾತಿ ಫುಲೆ’ ಪ್ರಶಸ್ತಿಯನ್ನು ನೀಡುವುದರ ಮೂಲಕ ಮಾತೆ ಸಾವಿತ್ರಿಬಾಯಿ ಫುಲೆಯವರನ್ನು ಗೌರವಿಸಲಾಗುತ್ತಿದೆ. ಅವರ ಜೀವನ ಸರ್ವ ಕಾಲಕಕ್ಕೂಶಿಕ್ಷಣ ಕ್ಷೇತ್ರದ ಎಲ್ಲರಿಗೂ ಸ್ಪೂರ್ತಿ.
 
-ಹಿಪ್ಪರಗಿ ಸಿದ್ದರಾಮ್, ಧಾರವಾಡ
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Ganesh Khare
11 years ago

ವ್ಯಕ್ತಿ ಪರಿಚಯ ಚೆನ್ನಾಗಿದೆ ಮೂಡಿ ಬಂದಿದೆ. ಪೂಜ್ಯ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶ ಈಗಿನ ಹೆಣ್ಣು ಮಕ್ಕಳಲ್ಲಿ ಬಂದರೆ ಬೇಗ ನಮ್ಮ ದೇಶದ ಏಳಿಗೆ ಆಗುವುದರಲ್ಲಿ ಸಂದೇಹವಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಹೆಣ್ಣು ಮಕ್ಕಳು ನಾವು ಪುರುಷರಿಗಿಂತ ಏನೂ ಕಮ್ಮಿಯಿಲ್ಲ ಅಂತ ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪನ್ನ ಮೂಡಿಸುತ್ತಿದ್ದಾರೆ. ಆದರೆ ನಮ್ಮ ಸಂಸ್ಕೃತಿಯನ್ನ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಜಾಸ್ತಿ ಒಲವು ತೋರಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಗಂಡು ಹೆಣ್ಣು ಇಬ್ಬರೂ ಸರಿಸಮಾನರು ಅಂತ ತೋರಿಸುವುದರಲ್ಲಿ ಹೆಣ್ಣು ಸ್ವಲ್ಪ ಎಡವುತ್ತಿದ್ದಾಳೆ ಅನ್ನುವುದು ನನ್ನ ಅನಿಸಿಕೆ. ಸ್ವಲ್ಪ ಅರಿತುಕೊಂಡು ಹೆಣ್ಣು ಈ ಜಗತ್ತಿನಲ್ಲಿ ವ್ಯವಹರಿಸಿದರೆ ಹೆಣ್ಣು ತನ್ನದೇ ಆದ ಸ್ಥಾನವನ್ನ ರೂಪಿಸಬಲ್ಲಳು ಎನ್ನುವುದರಲ್ಲಿ ಸಂಶಯವಿಲ್ಲ.

hipparagi Siddaram
hipparagi Siddaram
11 years ago
Reply to  Ganesh Khare

ಪ್ರತಿಕ್ರಿಯಿಸಿದ ಎಲ್ಲಾ ಸಹೃದಯರಿಗೆ ನನ್ನ ಅನಂತ ಧನ್ಯವಾದಗಳು….

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ತುಂಬು ಮಹತ್ವದಿಂದ ಕೂಡಿದ ಲೇಖನ ನಿಮ್ಮದು. ಮಹಾನ್ ಚೇತನ ಸಾವಿತ್ರಿ ಬಾಯಿ ಫುಲೆ ಮಹಾ ಮಾತೆಯ ಪರಿಚಯ ಮತ್ತು ಸಮಾಜ ಮುಖಿ ಸೇವೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದೀರಿ. ಇಂಥ ಧೀರ ಮಾತೆಯರು ನಮ್ಮ ಸಮಾಜದಲ್ಲಿ ಮತ್ತೆ ಜನಿಸಲಿ ಎನ್ನುವುದೆ ನನ್ನ ಕೋರಿಕೆ. ಚೆಂದದ ಲೇಖನವನ್ನು ಓದಲು ಎಡಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಶುಭವಾಗಲಿ………….

ಸುಮತಿ ದೀಪ ಹೆಗ್ಡೆ

ಒಬ್ಬ ಕ್ರಾಂತಿಕಾರಿ ಮಹಿಳೆಯ ಕುರಿತು ಮಾಹಿತಿಗಾಗಿ ಧನ್ಯವಾದಗಳು…

Manju
Manju
10 years ago

ಏನೋ search ಮಾಡುವಾಗ ಅಚಾನಾಕ್ ಈ ಲೇಖನ ಸಿಕ್ಕಿತು…ತುಂಬಾ ಚೆನ್ನಾಗಿದೆ…ಲೇಖಕರಿಗೆ ಧನ್ಯವಾದಗಳು !

ಹಿಪ್ಪರಗಿ ಸಿದ್ದರಾಮ್...
ಹಿಪ್ಪರಗಿ ಸಿದ್ದರಾಮ್...
10 years ago
Reply to  Manju

ಆತ್ಮೀಯ ಮಂಜು ಅವರಿಗೂ ಸಹ ಶುಭಾಶಯಗಳು…

ದಾವಲಸಾಬ
4 years ago

ಈ ಲೇಖನ ಮಕ್ಕಳಿಗೆ ಮಾತೆ ಜ್ಯೋತಿಬಾ ಪುಲೆಯವರ ಬಗ್ಗೆ ವಿವಾರವಾಗಿ ತಿಳಿಸಲು ತುಂಬಾ ಸೂಕ್ತವಾಗಿದೆ.

7
0
Would love your thoughts, please comment.x
()
x