ಸಮಾಜವಾದಿ ಕ್ಯೂಬಾದ ವೈದ್ಯಕೀಯ ಕ್ರಾಂತಿ; ಜಗತ್ತಿಗೇ ಮಾದರಿ: ಜೈಕುಮಾರ್ ಹೆಚ್.ಎಸ್.


ಬೆಂಗಳೂರಿನಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾ ವೈದ್ಯಕೀಯ ರಂಗದಲ್ಲಿ ಮಾಡುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಅದರ ವಿಶಿಷ್ಟ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಪ್ರತಿದಿನ ಸುದ್ದಿಯಲ್ಲಿವೆ. ಅಲ್ಲಿಯ ಜನರ ಜೀವಿತಾವಧಿ ಸುಮಾರು 78 ವರ್ಷ ಮತ್ತು ಅಲ್ಲಿನ ಹಲವು ಆರೋಗ್ಯ ಸೂಚ್ಯಂಕಗಳು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿದೆ. ಭೂಕಂಪ, ಚಂಡಮಾರುತ, ಇತ್ಯಾದಿ ವಿಪತ್ತಿನ ಕಾಲದಲ್ಲಿಯಂತೂ ವಿಶ್ವದಾದ್ಯಂತ ಕ್ಯೂಬಾದ ವೈದ್ಯರು ತಮ್ಮ ಅನುಪಮ ಸೇವೆಯಿಂದ ಮೇಲ್ಪಂಕ್ತಿಯಲ್ಲಿದ್ದಾರೆ. ಮಿಷನ್ ಐ ಹೆಸರಿನ ಕಾರ್ಯಕ್ರಮದಡಿ ಇತರೆ ದೇಶಗಳಲ್ಲಿ ಸುಮಾರು 35 ಲಕ್ಷ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿ5 ರಾಷ್ಟ್ರಗಳು ಜಗತ್ತಿನೆಲ್ಲೆಡೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿ ಲಾಭಗಳಿಸುತ್ತಿದ್ದರೆ, ಪುಟ್ಟ ಕ್ಯೂಬಾ ವಿಶ್ವದ ಬಡವರಿಗೆ ಆರೋಗ್ಯವನ್ನು ರಫ್ತು ಮಾಡುತ್ತಿದೆ.

ಹೆಚ್.ಐ.ವಿ ರೋಗವಿರುವ ಗರ್ಭಿಣಿಯಿಂದ ಆ ರೋಗ ಮಗುವಿಗೆ ಬರುವ ಸಾಧ್ಯತೆ ಎಷ್ಟು? ಅಮೇರಿಕಾ ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಶೇ. 15ರಷ್ಟು ಗರ್ಭಿಣಿಯರಲ್ಲಿ ಇದು ಮಗುವಿಗೆ ವರ್ಗಾವಣೆ ಆಗುವ ಸಾಧ್ಯತೆಯಿದೆ. ಆದರೆ ಕ್ಯೂಬಾ ಇದನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ.

ಹೊಸ ಔಷಧಿಗಳ ಆವಿಷ್ಕಾರದಲ್ಲಿ ಮುಂದು:
ಕಳೆದ ವರ್ಷ ಕ್ಯೂಬಾ ಸರ್ಕಾರದ ಹವಾನಾ ನಗರದ ಅಣು ರೋಗನಿರೋಧಕ ಸಂಸ್ಥೆಯು ಗಂಭೀರ ಹಂತದ ತಲುಪಿರುವ ಶ್ವಾಸಕೋಶದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ನಾಲ್ಕು ತರಹದ ವ್ಯಾಕ್ಸೀನುಗಳನ್ನು ಆವಿಷ್ಕಾರ ಮಾಡಿತ್ತು.  ಸಿಮಾವ್ಯಾಕ್ಸ್ ಇಜಿಎಫ್ ಮತ್ತು ರ್ಯಾಕೋಟ್ಯುಮೋಮ್ಯಾಬ್ ಎಂಬ ಹೆಸರಿನ ಈ ಔಷಧಗಳು ಸುಮಾರು 86 ದೇಶಗಳಲ್ಲಿÀ ಕ್ಲಿನಿಕಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ್ದು, ಇವು ಕ್ಯಾನ್ಸರ್ ಗಡ್ಡೆ ಬೆಳೆಯದಂತೆ ತಡೆಗಟ್ಟಬಲ್ಲವೆಂದು ಸಾಬೀತಾಗಿದೆ. ಅಲ್ಲದೆ, ಮಧುಮೇಹ ರೋಗ ಉಲ್ಬಣಗೊಂಡು ಕಾಲಿನಲ್ಲಿ ಗಾಯವುಂಟಾಗಿ ಗ್ಯಾಂಗ್ರೀನ್ ಹಂತ ತಲುಪಿದಾಗ ಕಾಲನ್ನೇ ತೆಗೆಯುವುದು ಸಾಮಾನ್ಯ. ಇದಕ್ಕೂ ಕೂಡ ಕ್ಯೂಬಾ ದೇಶ ಹೆಬರ್‍ಪ್ರೊಟ್ ಪಿ ಎಂಬ ಔಷಧ ಶೋಧಿಸಿದ್ದು, ಇದರಲ್ಲಿ ಚರ್ಮವನ್ನು ಮತ್ತೆ ಬೆಳೆಸುವ ಅಂಶವಿರುವುದು ವರವಾಗಿ ಪರಿಣಮಿಸಿದೆ. 

ಸಮಾಜವಾದಿ ಸಿದ್ದಾಂತವನ್ನು ಅಪ್ಪಿಕೊಂಡು ಮಗ್ಗುಲ ಮುಳ್ಳಾಗಿರುವ ಕ್ಯೂಬಾ ತನ್ನ ಹಿತ್ತಲಲ್ಲಿ ತಲೆಎತ್ತಬಾರದೆಂದು ಅದನ್ನು ಹೊಸಕಿ ಹಾಕಲು ಅಮೇರಿಕಾ ಅದೇನೆಲ್ಲಾ ಪ್ರಯತ್ನಗಳನ್ನು ನಡೆಸಿತು. ಕಳೆದ ವರ್ಷದವರೆಗೂ ಸುಮಾರು 60ವರ್ಷಕ್ಕೂ ಹೆಚ್ಚು ಕಾಲ ಕ್ಯೂಬಾ ವಿರುದ್ದ ಅಮೇರಿಕಾ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿತ್ತು. ಇದರಿಂದಾಗಿ ಕ್ಯೂಬಾ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದರೂ ಸ್ವಾವಲಂಬನೆಯ ಹಾದಿಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಕ್ಯೂಬಾ ಬೆಳೆದುನಿಂತಿರುವುದು ಆಶ್ಚರ್ಯ ಮತ್ತು ಸ್ಫೂರ್ತಿಯ ಸೆಲೆಯೇ ಸರಿ. 
ಮೆದುಳಿನ ರೋಗಗಳಿಗೆ ಸಂಬಂಧಿಸಿದಂತೆ ಬ್ರೈನ್ ಮ್ಯಾಪಿಂಗ್ ಮಾಡಲು ಅಮೇರಿಕಾದ ದುಬಾರಿ ಬೆಲೆಯ ಮ್ಯಾಗ್ನೆಟಿಕ್ ರೆಸೊನೆನ್ಸ್ ಉಪಕರಣಗಳು ಕ್ಯೂಬಾ ತಲುಪದೇ ದಿಢೀರನೇ ನಿಂತುಹೋದವು. ಇದಕ್ಕೆ ಪರ್ಯಾಯ ಶೋಧನೆ ನಡೆಸಿದ ಕ್ಯೂಬಾದ ವೈದ್ಯಕೀಯ ತಜ್ಞರು ಕಡಿಮೆಯ ಬೆಲೆಯ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಉನ್ನತ ಮಟ್ಟದ ಅಲ್ಗೊರಿದಮ್‍ಗಳನ್ನು ಬರೆದು ಪರಿಹಾರ ಕಂಡುಕೊಂಡರು. 

ಅಲ್ಲದೇ, ಮೆದುಳು ರೋಗ, ಹೆಪಾಟಿಟಿಸ್ ಬಿ, ಡೆಂಗೆ, ಇತ್ಯಾದಿ ರೋಗಗಳಿಗೆ ಯಶಸ್ವಿ ಲಸಿಕೆಗಳನ್ನು ಅವರು ಕಂಡು ಹಿಡಿದಿದ್ದಾರೆ. ಇವೆಲ್ಲ ಔಷಧಗಳು ಕ್ಯೂಬಾದಲ್ಲಿ ಜನತೆಗೆ ಉಚಿತವಾಗಿ ದೊರೆಯುತ್ತವೆ. ಇಡೀ ತೃತೀಯ ರಾಷ್ಟ್ರಗಳನ್ನು ಆಗಾಗ್ಗೆ ಬಾಧಿಸುವ ಸಾಮಾನ್ಯ ಕಾಯಿಲೆಗಳಾದ ಡಿಫ್ತೀರಿಯಾ, ಪೋಲಿಯೋ, ಸಿಡುಬು, ಕ್ಷಯ, ಮಲೇರಿಯಾ, ಹೆಚ್.ಐ.ವಿ, ಕೆಮ್ಮು, ಇತ್ಯಾದಿ ಕಾಯಿಲೆಗಳನ್ನು ಸಂಪೂರ್ಣವಾಗಿ ಅಲ್ಲಿ ನಿರ್ಮೂಲನೆ ಮಾಡಲಾಗಿದೆ. ಅಮೇರಿಕಾ ಮತ್ತು ಯೂರೋಪ್ ಖಂಡದ ಬಹುರಾಷ್ಟ್ರೀಯ ಕಂಪನಿಗಳು ಜೀವವುಳಿಸುವ ಔಷಧಗಳನ್ನು ಆವಿಷ್ಕಾರ ಮಾಡಿ, ಪೇಟೆಂಟ್ ಮೂಲಕ ದುಬಾರಿ ವೆಚ್ಚಕ್ಕೆ ಮಾರಿ ಲಾಭ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಕ್ಯೂಬಾ ಮಾದರಿಯೇ ಸರಿ. 

ಕ್ಯೂಬಾದ ಜನಾರೋಗ್ಯ ವ್ಯವಸ್ಥೆಯ ಹಿಂದಿರುವ ರಹಸ್ಯ:
ಆರ್ಥಿಕ ದಿಗ್ಬಂಧನದ ಹೊಡೆತಗಳಿಗೆ ಜಗ್ಗದೆ ಪರಿಣಾಮಕಾರಿ ಜನಾರೋಗ್ಯ ವ್ಯವಸ್ಥೆಯನ್ನು ಕ್ಯೂಬಾ ಹೇಗೆ ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಯಿತು? ಸಮುದಾಯ ಆರೋಗ್ಯ ವ್ಯವಸ್ಥೆಗೆ ಒತ್ತು ನೀಡುವ ಕ್ಯೂಬಾದ ವೈದ್ಯಕೀಯ ವ್ಯವಸ್ಥೆಯು ಮೊದಲಿಗೆ ಆರೋಗ್ಯವನ್ನು ಸರಕನ್ನಾಗಿ ಪರಿಗಣಿಸದೇ ಸೇವೆ ಎಂದು ಅಕ್ಷರಶ: ಅಂಗೀಕರಿಸಿರುವುದು. ಎರಡನೆಯದಾಗಿ, ಆ ದೇಶದ ಪ್ರತಿಯೊಬ್ಬರಿಗೂ ಡಾಕ್ಟರ್, ನರ್ಸ್, ತಜ್ಞ ವೈದ್ಯ ಮತ್ತು ಔಷಧಗಳು ಲಭ್ಯವಿವೆ.  ಮೂರನೆಯದಾಗಿ, ಕ್ಯೂಬಾದ ಆರೋಗ್ಯ ವ್ಯವಸ್ಥೆಯಲ್ಲಿ ವ್ಯಕ್ತಿಯ ರೋಗಕ್ಕೆ ಮಾತ್ರವೇ ಚಿಕಿತ್ಸೆ ನೀಡುವ ಬದಲಿಗೆ, ಆ ಕುಟುಂಬಕ್ಕೆ ತೆರಳಿ ಕುಟುಂಬದ ಆರೋಗ್ಯ ಹಿನ್ನೆಲೆ ಹಾಗೂ ಸುತ್ತಮುತ್ತಲಿನವರ ಆರೋಗ್ಯ ಸ್ಥಿತಿಗತಿ ಅರಿಯುವ ಮೂಲಕ ರೋಗಿಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ರೋಗ ನಿಯಂತ್ರಣಕ್ಕಿಂತ ಅದ ಬರುವುದಕ್ಕೆ ಮುಂಚೆ ಅದನ್ನು ತಡೆಗಟ್ಟಲು ನಿಗಾವಹಿಸಲಾಗುತ್ತದೆ. ಅಲ್ಲಿನ ಜೈವಿಕ ತಂತ್ರಜ್ಞಾನ, ಜೀವ ಔಷಧಶಾಸ್ತ್ರ, ವೈದ್ಯಕೀಯ ರಂಗದ ಸಂಶೋಧನಾ ಅಭಿವೃದ್ಧಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಇದರಿಂದಾಗಿ ಸಂಶೋಧನೆಯ ಲಾಭ ಜನತೆಯ ಆರೋಗ್ಯಕ್ಕೆ ಸುಲಭವಾಗಿ ದಕ್ಕುತ್ತಿದೆ. 

ಕ್ಯೂಬಾದಲ್ಲಿ ಸಮಾಜವಾದಿ ಕ್ರಾಂತಿಯ ನಂತರ ಸಾರ್ವಜನಿಕ ಆರೋಗ್ಯ ಅಭಿವೃದ್ಧಿಯ ಭಾಗವಾಗಿ ನೈರ್ಮಲ್ಯ, ಲಸಿಕೆ ಕಾರ್ಯಕ್ರಮ ಮತ್ತು ಗ್ರಾಮೀಣ ಭಾಗದ ಆರೋಗ್ಯಕ್ಕೆ ಒತ್ತು ನೀಡುವುದು, ಇವೇ ಪ್ರಾಥಮಿಕ ಹೆಜ್ಜೆಗಳಾಗಿದ್ದವು. 1990 ರ ಹೊತ್ತಿಗೆ, ಪ್ರತಿ ವಾರ್ಡ್‍ನಲ್ಲಿ ಡಾಕ್ಟರ್ ಮತ್ತು ನರ್ಸ್ ಲಭ್ಯವಿದ್ದು, 120 ರಿಂದ 160 ಕುಟುಂಬಗಳ ಆರೋಗ್ಯ ಸೇವೆಗೆ ಬುನಾದಿಯಾಗಿದ್ದರು. ಸದ್ಯಕ್ಕೆ ಕ್ಯೂಬಾದಲ್ಲಿ ಪ್ರತಿ 170 ಜನರಿಗೆ ಒಬ್ಬ ಡಾಕ್ಟರ್ ಲಭ್ಯವಿದ್ದಾರೆ. ಜೊತೆಗೆ ಪಾಲಿಕ್ಲಿನಿಕ್‍ಗಳು ವಿಶೇಷ ತಜ್ಞರು, ಹೊರರೋಗಿಗಳ ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ, ಪ್ರಯೋಗಾಲಯ, ಪುನಶ್ಚೇತನ ಇತ್ಯಾದಿ ಸೇವೆಗಳನ್ನು ಒದಗಿಸುತ್ತವೆ. 

ಕ್ಯೂಬಾದ ಅಂತರಾಷ್ಟ್ರೀಯ ವೈದ್ಯಕೀಯ ಸೇವೆ:
1998ರಲ್ಲಿ ಅಮೇರಿಕಾ ದೇಶದ ಹಲವು ನಗರಗಳು ಭೀಕರ ಚಂಡಮಾರುತಕ್ಕೆ ಸಿಕ್ಕಿ ಜನತೆ ನರಳುತ್ತಿದ್ದಾಗ ಕ್ಯೂಬಾ ದೇಶ ಸಾವಿರಾರು ಸಂಖ್ಯೆಯಲ್ಲಿ ತನ್ನ ವೈದ್ಯಕೀಯ ಸಿಬ್ಬಂದಿಗಳನ್ನು ಕಳುಹಿಸಿ ನೆರವು ನೀಡಿತ್ತು. ಅಲ್ಲದೆ, ಇಲಾಮ್ ಎಂಬ ಹೆಸರಿನ ಹವಾನಾ ಮೂಲದ ಲ್ಯಾಟೀನ್ ಅಮೇರಿಕಾ ವೈದ್ಯಕೀಯ ಶಾಲೆಯನ್ನು ಕ್ಯೂಬಾ ತೆರೆದಿದ್ದು ವೈದ್ಯಕೀಯ ತರಬೇತಿಗಾಗಿ ಸುಮಾರು 10,000 ಅಂತರಾಷ್ಟ್ರೀಯ ಶಿಷ್ಯವೇತನಗಳನ್ನು ನೀಡುತ್ತಿದೆ. ಸದ್ಯಕ್ಕೆ ಅಮೇರಿಕಾ, ಆಫ್ರಿಕಾ, ಏಷ್ಯಾ, ಕೆರಿಬೀಯನ್, ಲ್ಯಾಟಿನ್ ಅಮೇರಿಕಾದ 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 22,000 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಶಿಷ್ಯವೇತನದಿಂದ ತರಬೇತಿ ಪಾಠದ ಶುಲ್ಕ, ಊಟ & ವಸತಿ ಶುಲ್ಕ, ಪುಸ್ತಕ ಮತ್ತು ವೈದ್ಯಕೀಯ ವೆಚ್ಚ ಇತ್ಯಾದಿಗಳು ಸಿಗುವುದರಿಂದ ಬೊಲಿವಿಯಾದ ಆದಿವಾಸಿಯ ಮಕ್ಕಳು, ಹೊಂಡುರಾಸ್‍ನ ರೈತರ ಮಕ್ಕಳು, ಗ್ಯಾಂಬಿಯಾದ ಬೀದಿ ವ್ಯಾಪಾರಿ ಮಕ್ಕಳು ತಾವು ವೈದ್ಯರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಇದಕ್ಕೆ ಪ್ರತಿಫಲವಾಗಿ ಈ ಯೋಜನೆಯಡಿ ವೈದ್ಯರಾದವರು ತಂತಮ್ಮ ದೇಶಗಳಲ್ಲಿ ಬಡಜನತೆಗೆ ಆರೋಗ್ಯ ಸೇವೆ ನೀಡುವ ಬದ್ದತೆಗೆ ಒಳಗಾಗಬೇಕಾಗುತ್ತದೆ. 

ವೈದ್ಯಕೀಯ ರಂಗದಲ್ಲಿನ ತನ್ನೆಲ್ಲಾ ಸಾಧನೆಗಳಿಗೆ ಕ್ಯೂಬಾ ತಾನು ಅನುಸರಿಸುತ್ತಿರುವ “ಪ್ರತಿಯೊಬ್ಬರಿಗೂ ಸಮಾನವಿರುವ & ಲಭ್ಯವಿರುವ ಸಾರ್ವತ್ರಿಕ ವೈದ್ಯಕೀಯ ನೀತಿಯೇ” ಕಾರಣ ಎಂದು ಹೇಳಿರುವುದನ್ನು ನಮ್ಮನ್ನು ಆಳುತ್ತಿರುವವರು ಅರ್ಥಮಾಡಿಕೊಳ್ಳಬಲ್ಲರೇ?

***********

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x