ಸಮಾಜಮುಖಿ ಆಶಯ ಮತ್ತು ಸಾಹಿತ್ಯದ ಸಾರ್ಥಕತೆ: ಡಾ.ಪ್ರಕಾಶ ಗ.ಖಾಡೆ


ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ.

ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ ಉದ್ದೇಶ ವಿಶಾಲವಾದುದು, ವ್ಯಾಪಕವಾದುದು ಆಗಿದೆ. ಸಾಹಿತ್ಯ ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆಯಾಗಿದೆ. ಸಾಹಿತ್ಯ ಬಾಳಿನ ಸಮಂಜಸ ಚಿತ್ರಣ ಅರ್ಥಪೂರ್ಣದರ್ಶನ, ಚಿರಂತನ ಮೌಲ್ಯಗಳ ನಿರೂಪಣೆಯನ್ನು ಒಳಗೊಂಡಿರುತ್ತದೆ.

ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆಗೆ ಎರಡು ಮುಖಗಳುಂಟು. ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಒಂದು ಪ್ರೇರಕ ಶಕ್ತಿಯಾಗಿ ಪರಿಣಮಿಸುತ್ತದೆ ಎನ್ನುವುದು ಒಂದು. ಧಾರ್ಮಿಕ ರಾಜಕೀಯ ಮುಂತಾದ ಕಾರಣಗಳಿಂದ ನಡೆಯುವ ಸಾಮಾಜಿಕ ಪರಿವರ್ತನೆ ಆ ಕಾಲದ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗಿರುತ್ತದೆ ಎನ್ನುವದು ಇನ್ನೊಂದು. ಈ ದಿಸೆಯಲ್ಲಿ ಸಾಹಿತ್ಯದ ದೃಷ್ಟಿ ವಿಶಾಲವಾಗುತ್ತದೆ. ಅದು ಸಮಾಜದ ಕೈಗನ್ನಡಿ ಎಂಬ ಮಾತಿಗೆ ಪುಷ್ಟಿ ಕೊಡುತ್ತದೆ. ಕಾಲ ಕಾಲಕ್ಕೆ ಬದಲಾಗುವ ಮೌಲ್ಯಗಳು ಸಾಹಿತ್ಯದ ಸಂದರ್ಭದಲ್ಲಿಯೂ ಬದಲಾವಣೆ ಕಾಣುವಂತಾಗುತ್ತವೆ. ಹತ್ತನೆಯ ಶತಮಾನದ ವೀರಯುಗ, ಹನ್ನೆರಡನೆಯ ಶತಮಾನದ ಭಕ್ತಿಯುಗ, ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಯುಗ ಎಂದಾಗ ಆಯಾ ಕಾಲದ ಪ್ರಮುಖವಾದ ಜನಮನೋಧರ್ಮವನ್ನು ಸೂಚಿಸುತ್ತದೆ. ಸಾಮಾಜಿಕ ಬದಲಾವಣೆಗಳಿಂದ ಆಯಾ ಕಾಲದಲ್ಲಿ ವ್ಯೆಚಾರಿಕ ಕ್ರಾಂತಿಯಾಗಿರುತ್ತದೆ. ಅದರ ಪರಿಣಾಮವಾಗಿ ಹೊಸ ಮೌಲ್ಯಗಳು ಕಾಣಿಸಿಕೊಳ್ಳುತ್ತವೆ. ಸಾಹಿತ್ಯವು ಇದೆಲ್ಲವನ್ನು ಅಂದಂದಿನ ಸಂದರ್ಭವನ್ನು ದಾಖಲಿಸುತ್ತ ಬರುತ್ತದೆ.

ಸಾಹಿತ್ಯ ಸಮಾಜದ ಕೈ ಗನ್ನಡಿ ಎಂಬ ಮಾತು ಹೆಚ್ಚು ಬಳಕೆಯಲ್ಲಿರುವಲ್ಲಿ ಸಾಹಿತಿಯ ಪಾತ್ರ ವಿಶಿಷ್ಟತೆಯನ್ನು ಇದು ಸಾರುತ್ತದೆ. ಸಾಮಾಜಿಕ ವ್ಯವಸ್ಥೆಯ ಬದ್ರತೆಯನ್ನು ಕಾಪಾಡಿಕೊಂಡು ಬಂದವರೆ ಕವಿಗಳು. ಕವಿ ಸಾಮಾಜಿಕ ಸದಸ್ಯನಾಗುವುದರ ಜೊತೆಗೆ ಸಮಾಜದ ಕಣ್ಣು ಕಿವಿಯೂ ಆಗಿರುವುದರಿಂದ ಅವನು ಇತರ ಸಾಮಾಜಿಕರಿಗಿಂತ ಹೆಚ್ಚಿನ ಹೊಣೆಗಾರಿಕೆಯುಳ್ಳವನಾಗಿರುತ್ತಾನೆ. ಅವನು ಮಾಡಿದ್ದನ್ನು ಬರೆದುದ್ದನ್ನು ಮೊದಲು ಗುಮಾನಿಯಿಂದ ಅನಂತರ ಒಪ್ಪಿಗೆಯಾದಲ್ಲಿ ಮೆಚ್ಚುಗೆಯಿಂದ ನೋಡುವ ಸಮಾಜ ಅವನ ಬೇಕು ಬೇಡುಗಳನ್ನು ತನ್ನ ಬೇಕು ಬೇಡಗಳನ್ನಾಗಿ ಒಪ್ಪಿಕೊಳ್ಳುವ ಸಾಧ್ಯತೆಯೂ ಉಂಟು. ಹಾಗಾಗಿ ’ಕವಿಗಳು ವಿಶ್ವದ ಅನಧಿಕೃತ ಶಾಸನಕರ್ತರು’ ಎಂಬ ಉಕ್ತಿ ಪ್ರಸಿದ್ದವಾಗಿದೆ. ಸಾಹಿತ್ಯ ಸಮಾಜದೊಂದಿಗೆ ಸಂಬಂಧಿಕರಿಸಿ ಕೊಂಡಿರುತ್ತದೆ. ಸಾಹಿತ್ಯ ಒಂದು ಕಾಲದ ಒಂದು ದೇಶದ ಒಂದು ಭಾಷೆಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಂಸ್ಕೃತಿ ಜೀವನದ ಕೈಗನ್ನಡಿಯಾಗುವದು ಈ ಅರ್ಥದಲ್ಲಿಯೆ.

ಪರಿಣಾಮ ಮತ್ತು ಪ್ರಭಾವ
ಜಗತ್ತಿನ ಸಾಮಾಜಿಕ ಬದಲಾವಣೆಯಲ್ಲಿ ಸಾಹಿತ್ಯ ಮೂಡಿಸಿದ ಪರಿಣಾಮ, ಬೀರಿದ ಪ್ರಭಾವ ತುಂಬಾ ಮಹತ್ವದ್ದಾಗಿದೆ. ರಾಷ್ಟ್ರ ಕಟ್ಟುವಲ್ಲಿ ತಮ್ಮನ್ನು ತೇದುಕೊಂಡು ಮುಂದಾಳುಗಳಿಗೆ ಸಾಹಿತ್ಯ ದಾರಿ ಹಾಕಿಕೊಟ್ಟಿತು. ಜಗತ್ತಿನ ಬದಲಾವಣೆಯ ಮೇಲೆ ಅತ್ಯಂತ ಪ್ರಭಾವ ಬೀರಿದ ಮಾರ್ಕ್ಸ ಸ್ವತಃ ೧೯ನೇ ಶತಮಾನದ ಫ್ರೆಂಚ್ ಕಾದಂಬರಿಕಾರರಿಂದ ಸ್ಪೂರ್ತಿ ಪಡೆದಿದ್ದಾರೆ. ಲೆನಿನ್ ಲಿಯೊ ಟಾಲಸ್ಟಾಯರನ್ನು ತಮ್ಮ ಗುರು ಎಂದು ತಿಳಿದುಕೊಂಡಿದ್ದರು. ಲೆನಿನ್ನರು ತಮ್ಮ ಎಷ್ಟೋ ಕೃತಿಗಳಲ್ಲಿ ಮ್ಯಾಕ್ಸಂಗಾರ್ಕಿಯ ಉಕ್ತಿಗಳನ್ನು ಬಳಸಿಕೊಂಡಿದ್ದಾರೆ. ಹೂ-ಚಿ-ಮಿನ್, ಮಾವೋ ಸ್ವತಃ ಕವಿಗಳು. ರವೀಂದ್ರರು ಹೋರಾಟಗಳಲ್ಲಿ ಭಾಗವಹಿಸಿ ಜನರನ್ನು ಸಾಮ್ರಾಜ್ಯಶಾಹಿಯ ವಿರುದ್ದ ಹೋರಾಡಲು ಹಚ್ಚಿದರು. ಖಾಜಿ ನಜರೂಲರ ಅಗ್ನಿವೀಣಾ ಬಂಗಾಲಿಗಳ ಮೇಲೆ ಗಾಢ ಪರಿಣಾಮ ಬೀರಿದೆ. ರಾಮಧಾರಿ ಸಿಂಹ ದಿನಕರರ ಹೂಂಕಾರ್ ಅದೆಷ್ಟು ತರುಣರನ್ನು ಹೋರಾಟದೆಡೆಗೆ ಒಯ್ಯಿತು. ಮಹಾರಾಷ್ಟ್ರದ ದಲಿತ ಪ್ಯಾಂಥರರು ಆಂಧ್ರದ ದಿಗಂಬರ ಕವಿಗಳು ದೇಶದ ರಾಜಕೀಯದಲ್ಲಿಯೂ ಪಾತ್ರ ವಹಿಸಿದ್ದಾರೆ. ಚಿಲಿಯ ರಾಷ್ಟ್ರಕವಿ ಪಾಬ್ಲೊನೆರೂವಾ ರಾಜಕೀಯ ಕೇಂದ್ರ ಬಿಂದುವಾಗಿದ್ದರು. ಬಂಗ್ಲಾದೇಶದ ತರುಣ ಕವಿಗಳು, ಹಳ್ಳಿ ಹಳ್ಳಿಗೆ ಹೋಗಿ ಜನ ಜೀವನಕ್ಕೆ ಚೇತನ ತುಂಬುವ ಸಾಹಿತ್ಯ ಪ್ರಚಾರ ಮಾಡಿ ಜನರಿಗೂ ಬುದ್ದಿ ಜೀವಿಗಳಿಗೂ ಇರುವ ಕಂದರವನ್ನು ತುಂಬಿದರು ಹೀಗೆ ಸಾಹಿತ್ಯ ಸಾಮಾಜಿಕ ಬದುಕಿನೊಂದಿಗೆ ಬೆಸೆದುಕೊಂಡಿರುವದನ್ನು ಕಾಣಬಹುದಾಗಿದೆ.

ಭಾರತೀಯ ಸಮಾಜದ ಸ್ಥಿತಿಯಲ್ಲಿ ಗತಿಯಲ್ಲಿ ಸಂಕ್ರಮಣ ಕಾಲಗಳು ಕಾಣಿಸಿಕೊಂಡಿವೆ. ಅಂಥ ಕಾಲಗಳಲ್ಲಿ ಸಾಮಾಜಿಕ ಮೌಲ್ಯಗಳು ಬದಲಾಗಿವೆ. ಬುದ್ಧ ಮಹಾವೀರರು ಧರ್ಮದಲ್ಲಿ ಪ್ರಮುಖವಾಗಿದ್ದ ಸಾಮಾಜಿಕ ಪರಿವರ್ತನೆಯನ್ನುಂಟು ಮಾಡಿದರು. ಈ ಪರಿವರ್ತನೆ ಸಾಹಿತ್ಯದ ಮೇಲೂ ಪ್ರಭಾವ ಬೀರಿತು ಬುದ್ಧ ಹೇಳುವಂತೆ ಸಾಮಾಜಿಕ ಜೀವನವು ಬಹು ಜನ ಹಿತಾಯ ಆಗಿರಬೇಕು. ಬಸವಣ್ಣ ಹೇಳಿದಂತೆ ಸಕಲ ಜೀವಾತ್ಮರಿಗೆ ಲೇಸನೇ ನೀಡುವದಾಗಿರಬೇಕು. ಗಾಂಧೀಜಿ ಹೇಳಿದಂತೆ ಕೊನೆಯ ಮಾನವರ ಅಂತ್ಯ ಜನರ ಹಿತ ಸಾಧಿಸುವದಾಗಿರಬೇಕು. ಡಾ.ಅಂಬೇಡ್ಕರ ಬಯಸಿದಂತೆ ದಲಿತರ ಹಿತ ಸಾಧಿಸುವದಾಗಿರಬೇಕು. ಭಾರತೀಯ ಸಮಾಜ ವ್ಯವಸ್ಥೆ ತನ್ನ ಪ್ರಾರಂಭದ ದಿನಗಳಿಂದಲೂ ಧರ್ಮದ ಪಟ್ಟಭದ್ರರ ಹಿತಾಸಕ್ತಿಗಳನ್ನು ರಕ್ಷಿಸುವದಕ್ಕೊಸ್ಕರವೇ ರೂಪಗೊಂಡಿದ್ದರಿಂದ ಈ ಚಿಂತಕರು ಹೀಗೆ ಸಾಮಾಜಿಕ ಬದಲಾವಣೆಗೆ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಂದಿಕೊಂಡು ನಡೆದು ಬಂದಿದೆ. ಸಾಮಾಜಿಕ ಪರಿವರ್ತನೆಗೆ ವಿವೇಕಾನಂದ, ಗಾಂಧಿ ಮುಂತಾದ ರಾಷ್ಟ್ರಚಿಂತಕರು ಪ್ರೇರಕ ಶಕ್ತಿಗಳಾಗಿದ್ದರೆ ಸಾಹಿತಿಗಳು ಅವರು ಮುಂದಿಟ್ಟ ಆದರ್ಶವನ್ನು ತಮ್ಮ ಕೃತಿಯಲ್ಲಿ ಎತ್ತಿ ಹಿಡಿಯುತ್ತ ಬಂದಿದ್ದಾರೆ. ಹೀಗಾಗಿ ಆಧುನಿಕ ಸಾಹಿತ್ಯ್ಲದ ಬರಹಗಾರರಲ್ಲಿ  ಸಾಮಾಜಿಕ ಬದಲಾವಣೆಯ ಪ್ರಜ್ಞೆ   ಕಾರ್ಯಶೀಲರಾಗುವಂತಾಯಿತು. 

ಪರಿವರ್ತನೆ ಮತ್ತು ಸಮಾಜ ವಿಮರ್ಶೆ
ಕನ್ನಡ ಸಾಹಿತ್ಯದಲ್ಲಿ ಪಂಪನ ಕಾಲಕ್ಕಿದ್ದ ತ್ಯಾಗ ವೀರ ಮೊದಲಾದ ಮೌಲ್ಯಗಳು ಎರಡು ಶತಮಾನಗಳ ಕಾಲ ಕನ್ನಡದ ಜನ ಜೀವನದಲ್ಲಿ ಸಾಮಾಜಿಕ ಮೌಲ್ಯಗಳಾಗಿ ನೆಲೆಗೊಂಡವು ಹನ್ನೆರಡನೆಯ ಶತಮಾನದ ವಚನ ಕ್ರಾಂತಿ ಹೊಸ ಸಾಮಾಜಿಕ ನೈತಿಕ ಮೌಲ್ಯಗಳನ್ನು ಜನರ ಕಣ್ಣೆದುರಿಗಿಟ್ಟಿತು. ವಚನಕಾರರು ತಮ್ಮ ಸಮಾಜವನ್ನು ಅದರ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿ ಅದರ ಲೋಪದೋಷಗಳನ್ನು ಬಯಲಿಗೆಳೆದರು. ಸಾಮಾಜಿಕವಾಗಿ ವಚನಕಾರರು ತಂದ ಬದಲಾವಣೆ ಕ್ರಾಂತಿಕಾರಿಯಾದುದು. ಬಡವ ಬಲ್ಲಿದ ಎಂಬ ವರ್ಗ ಭೇದ ತೆಗೆದು ಹಾಕುವದು, ಸಮಾಜದ ಸಿರಿವಂತರಲ್ಲಿ ತುಂಬಿದ್ದ ಧನಮದವನ್ನು ,ಬಡವರಲ್ಲಿ ಬೇರೂರಿದ್ದ ದೈನಾಸಿ ಭಾವವನ್ನು ಕಿತ್ತಿ ಹಾಕಿದರು. ’ಕುದುರೆ ಸತ್ತಿಗೆಯವರ ಕಂಡರೆ ಹೊರಳಿ ಬಿದ್ದು ಕಾಲು ಹಿಡಿಯುವ, ಬಡ ಭಕ್ತರು ಬಂದರೆ ಸಮಯವಿಲ್ಲ ಅತ್ತ ಸನ್ನಿ’ ಎನ್ನುವ ಹಣವಂತರನ್ನು  ವಚನಕಾರರು ಉದಾಸೀನ ಮಾಡಿದರು. ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತಾ ಸಮಸ್ಯೆಯನ್ನು ಕಿತ್ತೆಸೆಯುವಲ್ಲಿ ಮುಂದಾದರು. ’ಇವನಾರವ ಇವನಾರವ’ನೆಂದು ವ್ಯಕ್ತಿ ವ್ಯಕ್ತಿಯನ್ನು ಜಾತಿ; ಮತ, ಕುಲಗೋತ್ರಗಳನ್ನು ನೋಡಿ ವಿಂಗಡಿಸದೇ ಆತನನ್ನು ವಿಶಾಲ ಹೃದಯದಿಂದ ಅಪ್ಪಿಕೊಂಡರು. ಮುಂದೆ ಬಂದ ದಾಸರು ನಿಜವಾದ ಭಕ್ತನಿಗೆ ಅಗತ್ಯವಾದ ಪರಿಶುದ್ಧವಾದ ಜೀವನ ವಿಧಾನವನ್ನು ಪ್ರತಿಪಾದಿಸುವದಕ್ಕೆ ಸಮಾಜ ಸುಧಾರಣೆಯ ದೃಷ್ಟಿಯನ್ನು ಹೊಂದಿದರು. ಹರಿಹರನು ಕಾವ್ಯದ ವಸ್ತು ಬಂಧ ವರ್ಣಗಳಲ್ಲಿ ಪ್ರಯತ್ನ ರೂಪದ ಪ್ರತಿಭಟನೆಯನ್ನು ಸಾರಿದನು. ಅವನ ಕಾವ್ಯದ ವಸ್ತುವಿನಲ್ಲಿ ಶ್ರೀ ಸಾಮಾನ್ಯರು ದೈವತ್ವಕ್ಕೇರಿದರು. ಹರಿಹರನ ಕಾಲವಾದ ಮೇಲೆ ಕುಮಾರ ವ್ಯಾಸ ಕಾವ್ಯದ ಗೇಯತೆಗೆ ಪ್ರಾಧಾನ್ಯವನ್ನು ಕೊಟ್ಟರೆ ಸರ್ವಜ್ಞ ತನ್ನ ಚಿಕ್ಕ ಚಿಕ್ಕ ತ್ರಿಪದಿಗಳಲ್ಲಿ ಇಡೀ ಸಮಾಜದ ಲೋಪದೋಷಗಳನ್ನು ಎತ್ತಿ ತೋರಿದನು. ಸರ್ವಜ್ಞ ತನ್ನ ಕಾವ್ಯ ಇರುವುದು ವಿಮರ್ಶೆಯ ಆಶಯಕ್ಕಾಗಿ ಎಂಬುದನ್ನು ಪ್ರತಿಪಾದಿಸಿ ತೋರಿಸಿದ.

ನವೋದಯ ಯುಗದ ಸಾಹಿತಿಗಳು ಸಮಾಜವನ್ನು ವಿಮರ್ಶಿಸ ಹೊರಟಿದ್ದರೂ ಸಹ ಸಮಾಜವನ್ನು ಕ್ರ್ರಾಂತಿಕಾರವಾಗಿ ಬದಲಾಯಿಸುವ ಉದ್ದೇಶ ಹೊಂದಿರಲಿಲ್ಲ. ಆದರೂ ಅವರು  ಬಿತ್ತಿದ ಸಾಮಾಜಿಕ ವಿಚಾರಗಳು ಪರಿಣಾಮ ಬೀರುವಂಥವೇ ಆಗಿದ್ದವು .ನವೋದಯ ಸಾಹಿತ್ಯದಲ್ಲಿ ಕಾಣಬರುವ ಪ್ರಕೃತಿ ಪ್ರೇಮ,ಸ್ವದೇಶಾಭಿಮಾನ ,ಸಾಮಾಜಿಕ ಪ್ರಜ್ಞೆ ,ಜೀವನಾಶಕ್ತಿ ಈ ಎಲ್ಲ ಪ್ರವೃತ್ತಿಗಳು ಅಂದಿನ ರಾಷ್ರ್ಟೀಯತೆ ಹಾಗೂ ಉದಾರ ನೀತಿಯ ಶಿಕ್ಷಣದಿಂದ ಉದಿಸಿದ ಪ್ರಜ್ಞೆಯ ಅಂಶಗಳಾಗಿದ್ದವು.ಕುವೆಂಪು,ಮಾಸ್ತಿ,ಬೇಂದ್ರೆ ಅವರ ಕಾವ್ಯಗಳು,ಕೈಲಾಸಂ,ಶ್ರೀರಂಗರ ಸಾಮಾಜಿಕ ನಾಟಕಗಳು,ಕಾರಂತರ ದೇವದೂತರು, ಔದಾರ್‍ಯದ ಉರುಳಲ್ಲಿ, ಚೋಮನ ದುಡಿಯಂಥ ಕಾದಂಬರಿಗಳು ಆತ್ಮಶೋಧನೆಯ ಪ್ರಬಲ ಸಾಧನೆಗಳೇ ಆಗಿದ್ದವು.ನವೋದಯ ಬರಹಗಾರರು ಬಹು ಮುಖ್ಯವಾಗಿ ಜಾತಿ ಪದ್ದತಿ, ವಿಧವೆಯ ಸ್ಥಿತಿ, ಮೇಲು ಜಾತಿಯ ಜನರು ಧರ್ಮದ ಸೋಗಿನಲ್ಲಿ ನಡೆಸುವ ಢಾಂಭಿಕತನ ಮುಂತಾದ ಸಮಸ್ಯೆಗಳನ್ನೆತ್ತಿಕೊಂಡು ಅಂದಿನ ಬುದ್ದಿ ಜೀವಿಯ ನಿಲುವನ್ನು ಪ್ರಾಮಾಣಿಕವಾಗಿ ಸಮರ್ಥಿಸಿದರು.ಆದರೆ ಅಸಮಾನತೆ,ಅನ್ಯಾಯಗಳ ವಿರುದ್ದ ಪ್ರತಿಭಟಿಸುವಾಗ ಅವುಗಳ ಬಗೆಗೆ ರೋಷ ಹುಟ್ಟಿಸುವ ,ಅಂಥ ಸಾಮಾಜಿಕ ವಿಷಮತೆಗಳು ಅನಿವಾರ್ಯವಲ್ಲ ಎಂದು ತೋರಿಸುವ ಅವರ ಪ್ರಯತ್ನಗಳು ಒಂದು ಸಮಗ್ರ ಕ್ರಾಂತಿಕಾರಕ ವಿಚಾರಧಾರೆಯಾಗಿ ಹರಿಯಲಿಲ್ಲ.

ನವ್ಯಕ್ಕೆ ಬಂದಾಗ ಇವರು ಅತಿಯಾದ ಸಂಕೀರ್ಣ ಸುಶಿಕ್ಷಿತ ಭಾಷೆಯನ್ನು ಬಳಸಿ ,ಅನುಭವಗಳನ್ನು ಸುಕ್ಷ್ಮಾತಿಸೂಕ್ಷ್ಮವಾಗಿ ವಿಶ್ಲೇಷಿಸಿ ಸಾಹಿತ್ಯಕ್ಕೆ, ಓದುಗನಿಗೂ ನಡುವೆ ತುಂಬಲಾಗದ ಕಂದಕವನ್ನು ಸೃಷ್ಟಿಸಿದರು. ಇದರಿಂದಾಗಿ ನವ್ಯರ ಸಾಮಾಜಿಕ ಪ್ರಜ್ಞೆ ಇದ್ದಷ್ಟು ಕೂಡ ವ್ಯರ್ಥವಾಯಿತು. ನವೋದಯ ಮತ್ತು ನವ್ಯಗಳ ಮಧ್ಯ ಇದ್ದು ತನ್ನ ಇರುವನ್ನು ಪ್ರಕಟಿಸಿದ ಪ್ರಗತಿಶೀಲ ಸಾಹಿತ್ಯದಲ್ಲಿ ಮುಖ್ಯವಾಗಿ ಬರಗಾಲದ ಬವಣೆ, ಹಸಿವೆಯ ಕೂಗು ಇವುಗಳ ಮಾರ್ದನಿ ಇದೆ.ಪ್ರಗತಿಶೀಲ ಸಾಹಿತ್ಯದ ಮುಂದಾಳು ಅ.ನ.ಕೃ. ಅವರ ಕೃತಿಗಳಲ್ಲಿ ವಿಶಾಲ ಮಾನವತಾವಾದ ದೃಷ್ಟಿಯಿಂದ ಪ್ರೇರಿತವಾದ ಸಮಾಜ ದೋಷಗಳ ಕಟು ಟೀಕೆ, ಕ್ರಾಂತಿಯ  ಘೊಷಣೆ ಎದ್ದು ತೋರುತ್ತದೆ. ಬರಗಾಲ ಬಡತನ, ಅನ್ಯಾಯ, ಆಕ್ರಮಣ,ಅತ್ಯಾಚಾರ ಇವುಗಳು ಗಟ್ಟಿಗೊಂಡಿರುವುದು ಬಸವರಾಜ ಕಟ್ಟಿಮನಿ ಅವರ ಕಾದಂಬರಿಗಳಲ್ಲಿ ಕಾಣುತ್ತೇವೆ.ತ.ರಾ.ಸು. ಅವರ ಸಾಮಾಜಿಕ ಕಾದಂಬರಿಗಳಲ್ಲಿ ವೈಶ್ಯಾಜೀವನ, ಸ್ತ್ರೀ ಸ್ವಾತಂತ್ರ್ಯ ,ಕುಟುಂಬ ಸಂಸ್ಥೆಯ ಶ್ಶೆಥಿಲ್ಯ ಈ ಮುಂತಾಗಿ ಹಲವಾರು ಸಮಸ್ಯೆಗಳು ನಿರೂಪಿತವಾಗಿವೆ.

ದಲಿತ ಮತ್ತು ಬಂಡಾಯ
ಎಪ್ಪತ್ತರ ದಶಕದಲ್ಲಿ ಬಂದ ಬಂಡಾಯ ಮತ್ತು ದಲಿತ ಸಾಹಿತ್ಯ ಜನಸಮುದಾದತ್ತ ಸಾಗಿ ಸಾಮಾಜಿಕ ಪರಿವರ್ತನೆಯಲ್ಲಿ ಹೊಸ ಚಾಲನೆ ನೀಡಿದವು. ಇತಿಹಾಸದ ಪ್ರಗತಿಯನ್ನು ಗುರುತಿಸುವ ಬೌದ್ದಿಕ ಕಸರತ್ತುಗಳಿಂದ ದೂರವಾದ ವೈಯಕ್ತಿಕ ತೀಟೆಯಿಂದ ಮಕ್ತವಾದ ಜನರ ಅನೇಕ ರೀತಿಯ ಆಶೋತ್ತರಗಳನ್ನು ಪ್ರತಿನಿಧಿಸುವ ಹಾಗೂ ಈ ಆಶೋತ್ತರಗಳಿಗೆ ಕಾರಣವಾದ ಆಳವಾದ ಸಾಮಾಜಿಕ ರಾಜಕೀಯ ಸಂಗತಿಗಳನ್ನು ನಿಯಂತ್ರಿಸುವ ಜಾತಿ,ಧರ್ಮ, ವರ್ಗಇವುಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ತನ್ನ ಓದುಗರಿಗೆ ಅರ್ಥಮಾಡಿಸುವ ಪ್ರಯತ್ನದಲ್ಲಿ ಬಂಡಾಯ ಸಾಹಿತ್ಯ ಒಲವು ತೋರಿತು .ಪ್ರಗತಿಶೀಲ ,ಬಂಡಾಯ ಮತ್ತು ದಲಿತ ಚಳುವಳಿಗಳಿಂದ ವಾಸ್ತವ ಲೋಕ, ಕಾವ್ಯ ಲೋಕ, ಲೋಕ ಸತ್ಯಗಳು ಬೇರೆ ಬೇರೆ ಎಂಬುದು ಬಯಲಾಗಿ ಸಾಹಿತಿಗಳು ಹಸ್ತಿದಂತ ಗೋಪುರಗಳಿಂದ ಕೆಳಗಿಳಿದು ವ್ಯಕ್ತಿ ಕೇಂದ್ರಿತ ನೆಲೆಗಳಿಂದ ಹೊರಗೆ ಬಂದು ಸಾಮಾಜಿಕ ಹೊಣೆಗಾರಿಕೆಯನ್ನು ಹೊರಲು ಸಮಾಜದಲ್ಲಿ ಆರೋಗ್ಯಕರವು ಅಮೂಲಾಗ್ರವೂ ಆದ ಬದಲಾವಣೆಗಳನ್ನು  ತರಲು ಸಿದ್ದರಾಗುವಂತಾಯಿತು. ಭಾವಪರ,ಚಿಂತನಪರ, ಕೃತಿಗಳ ಜೊತೆ ಜೊತೆಗೆ ಜನಪರ ಕೃತಿಗಳೂ ಬರತೊಡಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಇನ್ನೂ ಹೆಚ್ಚಿನ ಸಮೃದ್ದಿ , ವೈವಿಧ್ಯಗಳು ಜೀವಕಳೆ ಜೀವನ ಕಲೆಗಳು ದೊರೆಯುವಂತಾಯಿತು.

ಸಾಹಿತ್ಯ ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಒಂದು ಸೃಜನಶೀಲ ಕ್ರಿಯೆಯಾದುದರಿಂದ ಯಾವುದೇ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯ ಅಥವಾ  ಕೃತಿಗಳು ಆಯಾ ಕಾಲದ ವಿಶಿಷ್ಟ ವರ್ಗದ ಜನರ ಹಿತಾಸಕ್ತಿಗಳನ್ನು ಆಶೋತ್ತರಗಳನ್ನು ಪ್ರವೃತ್ತಿಗಳನ್ನು ಪಡಿಮೂಡಿಸುತ್ತವೆ ಎಂಬ ಮಾರ್ಕ್ಸನ ಮಾತು ಇಲ್ಲಿ ಸಾಹಿತಿ ತನ್ನ ಸಮಾಜ ಚಿತ್ರಣವನ್ನು ಒಂದಿಲ್ಲೊಂದು ರೀತಿಯಲ್ಲಿ ಅಳವಡಿಸಿಕೊಳ್ಳಲೇಬೇಕಾಗುತ್ತದೆ. ಆತ ಆ ಸಮಾಜದ ಒಂದು ಅನಿವಾರ್ಯವಾದ ಅಂಗವಾಗಿರುವುದರಿಂದ ಅವನು ತನ್ನ ಸಮಕಾಲೀನ ಸಮಾಜದ ಬಗ್ಗೆ ಎಚ್ಚರ ತಾಳಿರುತ್ತಾನೆ. ಸಮಾಜದ ಗತಿಯನ್ನು ತನ್ನ ಇತಿಮಿತಿಗಳೊಂದಿಗೆ ಸಾಹಿತ್ಯದಲ್ಲಿ ಒಡಮೂಡಿಸುವುದು ಸಾಮಾಜಿಕ ಪ್ರಜ್ಞೆಯುಳ್ಳ ಸಾಹಿತಿಯ ಮೊದಲ ಕರ್ತವ್ಯವಾಗಿದೆ. ಮಾನವೀಯ ಬಾಳಿನಲ್ಲಿ ಹಲವಾರು ವಿಕೃತಿಗಳು ಕಂಡು ಬರಬಹುದು. ಆದರೆ ಈ ವಿಕೃತಿಗಳ ಹಿಂದೆ ಅಡಗಿರುವ ಬಾಳಿನ ಅರ್ಥವನ್ನು ಸಾಹಿತ್ಯವು ಹೊರಹೊಮ್ಮಿಸಿ ತೋರಿಸಬೇಕು. ಹಾಗಾಗಿ ಮಾನವ ತನ್ನ ಪರಿಸರದಿಂದ ರೂಪುಗೊಳ್ಳುವದಾದರೆ ಮಾನವೀಯತೆಯಿಂದ ಕೂಡಿದ ಪರಿಸರವನ್ನು ರೂಪಿಸುವಲ್ಲಿ ಸಾಹಿತಿಯ ಪಾತ್ರ ಮಹತ್ವದ್ದಾಗಿದೆ.

ಒಟ್ಟಾರೆ ಸಾಹಿತ್ಯವು ಸಾಮಾಜಿಕ ಬದಲಾವಣೆಯಲ್ಲಿ ಒಂದು ಮಹತ್ವಪೂರ್ಣವಾದ ಹೆಣಿಕೆಯಾಗಿದೆ.  ಸಾಹಿತ್ಯ ಬಿಟ್ಟು ಸಮಾಜವಿಲ್ಲ ಸಮಾಜ ಬಿಟ್ಟು ಸಾಹಿತ್ಯವಿಲ್ಲ ,ಸಾಹಿತ್ಯವನ್ನು ಬಿಟ್ಟ ಸಮಾಜ ತನ್ನ ಕಲಾತ್ಮಕತೆಯನ್ನು ಕಳೆದುಕೊಳ್ಳಬಲ್ಲದು, ಸಮಾಜವನ್ನು ಬಿಟ್ಟ ಸಾಹಿತ್ಯ ಶಾನುಭೋಗರ ಖಾತೆಯಾಗಬಲ್ಲದು .ಹೀಗಾಗಿ ಯಾವೊಂದು ಭಾಷೆಯ ಸಾಹಿತ್ಯವು ಆ ಜನರ ನಿತ್ಯ ಬದುಕಿನಲ್ಲಿ ತೇದು ಕೊಂಡಿರಬೇಕಾಗುತ್ತದೆ.ಅಂದಾಗಲೆ ಅದು ಸಾಮಾಜಿಕ ಬದಲಾವಣೆಯೊಂದಿಗೆ ಚಿರಂತನ ಮೌಲ್ಯ ಉಳಿಸಿಕೊಳ್ಳುತ್ತದೆ.    

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Suman
Suman
10 years ago

Bhala chanda barediri… niv helodu khare ada. sahityadindana samajdolaga kalatmakate ada.. ishta aatu nivu baredaddu…

mahesh kalal
mahesh kalal
10 years ago

ಸಾಹಿತ್ಯ ಸಮಾಜ ಮುಖಿಯಾಗಿದ್ದಾಗ ಮಾತ್ರ ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ ಸರ್…

2
0
Would love your thoughts, please comment.x
()
x