ಸಮಸ್ಯೆಗಳು ಇಲ್ಲದ ಮನೆ, ಕುಟುಂಬ, ಜೀವನ ಇರಲು ಸಾಧ್ಯವಿಲ್ಲ! ಇದನ್ನು ಅರಿಯದೆ ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೇ ಪರಿಹಾರ ಎಂದು ಜಗತ್ತು ಭಾವಿಸಿದಂತಿದೆ. ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಜಗತ್ತು ತುದಿಗಾಲಲಿ ನಿಂತಂತೆ ತೋರುತ್ತಿದೆ. ತಂದೆಯೋ ತಾಯಿಯೋ ಶಿಕ್ಷಕರೋ ಬುದ್ದಿ ಹೇಳಿದುದನ್ನು ಅವಮಾನವೆಂದು ಭಾವಿಸಿ, ಉತ್ತಮ ಅಂಕ ಗಳಿಸಲಿಲ್ಲವೆಂದು, ಬಯಸಿದ ವಸ್ತು ಕೊಡಿಸಲಿಲ್ಲವೆಂದು, ಇಷ್ಟವಾದವಳು ಪ್ರೀತಿಸಲಿಲ್ಲವೆಂದು ಇನ್ನೂ ಅನೇಕ ಚಿಕ್ಕ ಚಿಕ್ಕ ಕಾರಣಗಳಿಂದ ಚಿಕ್ಕವರು, ಯುವಕರು ಅತ್ಯಮೂಲ್ಯ ಆತ್ಮವ ಹತ್ಯೆ ಮಾಡಿಕೊಂಡರೆ, ವ್ಯಪಾರಿಗಳು, ರೈತರು, ಅಧಿಕಾರಿವರ್ಗ, ಪೋಲಿಸರು, ಸೇವಕವರ್ಗ ಮುಂತಾದವರು ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಕಂಡಾಗ ಹಾಗೆ ಅನ್ನಿಸದಿರದು. ಹಾಗೆ ಅವರೆಲ್ಲಾ ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೇ ಪರಿಹಾರ ಎಂದು ಭಾವಿಸಿದಂತಿದೆ.
ನಾವು ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವದರಿಂದ ಎಲ್ಲದಕ್ಕೂ ಸ್ಪರ್ಧೆಯಿರುವುದು ಸಹಜ. ಸ್ಪರ್ದೆ ಆರೋಗ್ಯಪೂರ್ಣವಾಗಿರಬೇಕೇ ವಿನಃ ಆತ್ಮಕ್ಕೇ ಸಂಚಕಾರ ತರುವಂತಿರಬಾರದು. ಅದಾಗುತ್ತಿರುವುದಕ್ಕೆ ಕಾರಣ.
ನಾವು ಅಂಕದ ಬೆಲೆ ಹೇಳಿಕೊಡುತ್ತಿದ್ದೇವೆಯೇ ವಿನಃ ಆತ್ಮದ ಬೆಲೆ ಹೇಳಿಕೊಡುತ್ತಿಲ್ಲ! ಹಣದ ಬೆಲೆ ಹೇಳಿಕೊಡುತ್ತಿದ್ದೇವೆ ವಿನಃ ಪ್ರಾಣದ ಬೆಲೆ ಹೇಳಿಕೊಡುತಿಲ್ಲ.! ವಸ್ತುಗಳ ಬೆಲೆ ಹೇಳಿಕೊಡುತ್ತಿದ್ದೇವೆ ವಿನಃ ಸಂಬಂಧಗಳ ಬೆಲೆ ತಿಳಿಸಿಕೊಡುತ್ತಿಲ್ಲ! ಅತಿ ವೇಗದ ಕಲಿಕೆಗೆ, ಗಳಿಕೆಗೆ ಮಹತ್ವ ಕೊಡುತ್ತಿದ್ದೇವೆ ಹೊರತು ತಾಳ್ಮೆಯ ಮಹತ್ವ ಹೇಳಿಕೊಡುತ್ತಿಲ್ಲ! ಜಗವೆಲ್ಲ ನನಗೇ ಇರಲೆಂಬ ಅತಿಯಾಸೆಯನ್ನು ಹೇಳಿಕೊಡುತ್ತಾ ತ್ಯಾಗದ ಮಹತ್ವವನ್ನು ಮರೆತಿದ್ದೇವೆ! ಬದುಕಿನ ಮತ್ತು ಆತ್ಮದ ಮಹತ್ವ ಹೇಳಿಕೊಡದ ಪ್ರಯುಕ್ತ ಆತ್ಮಹತ್ಯೆ ಸರಳ ಆಗಿದೆ. ಕೊಲೆಗಳೂ, ಅಪರಾಧಗಳು ಸಾಮಾನ್ಯವಾಗಿವೆ.
ಭಾರತೀಯ ಸಾಹಿತ್ಯ, ಸಂಸ್ಕೃತಿ, ಧರ್ಮ, ಪರಂಪರೆ, ನಂಬಿಕೆಗಳು ಅಮೂಲ್ಯವಾದವುಗಳು. ಅವು ಮನುಷ್ಯ ಎಂಥಾ ಕಷ್ಟದಲ್ಲೂ ಆತ್ಮಹತ್ಯೆ ಮಾಡಿಕೊಳ್ಳದಂತೆ, ಜೀವನದ ಸೆಲೆ ಬತ್ತದಂತೆ ನೋಡಿಕೊಂಡಿವೆ! ಭಾರತೀಯ ಪುರಾಣಗಳು, ಕತೆಗಳು ಸುಖಾಂತ್ಯಗಳಾಗಿವೆ! ರಾಮನ ಕತೆ, ಹರಿಶ್ಚಂದ್ರನ ಕತೆ, ಹೇಮರೆಡ್ಡಿ ಮಲ್ಲಮ್ಮನ ಕತೆ, ನಳದಮಯಂತಿ ಕತೆ ಮುಂತಾದ ಎಲ್ಲಾ ಭಾರತೀಯ ಕತೆಗಳಲ್ಲಿ ಕಥಾ ನಾಯಕನಿಗೆ ಬರುವ ಕಷ್ಟಗಳ, ನೋವುಗಳ ಸರಣಿಯೇ ಕತೆಯ ಅಂತ್ಯದವರೆಗೂ ಕಾಣುತ್ತೇವೆ. ಅಂತ್ಯದಲ್ಲಿ ನಾಯಕನಿಗೆ ಅಪಾರ ಸುಖ ಲಭಿಸುತ್ತದೆ. ಇವು ಜನರಿಗೆ ಎಷ್ಟೇ ಕಷ್ಟಗಳು ಬಂದರೂ ಒಂದಲ್ಲ ಒಂದು ದಿನ ಸುಖ ಬಂದೇ ಬರುತ್ತದೆ ಎಂಬ ಸಂದೇಶವನ್ನು, ಸಾರಿ, ಜೀವನ ಪೂರ್ತಿ ಬದುಕುವಂತೆ ಮಾಡಿವೆ! ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಹಿಡಿದು ಬದುಕಿನ ಮಹತ್ವವನ್ನು ಸಾರಿವೆ! ಹಾಗೇ ಆತ್ಮಹತ್ಯೆ ಮಾಡಿಕೊಂಡರೆ ಆತ್ಮ ಇತ್ತ ಸ್ವರ್ಗಕ್ಕೂ ಅತ್ತ ನರಕಕ್ಕೂ ಹೋಗದೆ ಅಂತರ್ ಪಿಶಾಚಿಯಾಗಿ ಅಲೆಯಬೇಕಾಗುತ್ತದೆ. ಎಂಬ ನಂಬಿಕೆ ಆಳವಾಗಿ ಬಿತ್ತಿದ್ದರಿಂದ ಆತ್ಮಹತ್ಯೆಗಳು ಅಪರೂಪವಾಗಿದ್ದವು! ಇವುಗಳ ಬಗ್ಗೆ ಇಂದು ನಂಬಿಕೆ ಇಲ್ಲದಿರುವುದು ಆತ್ಮಹತ್ಯೆ ಹೆಚ್ಚಾಗಲು ಅವಕಾಶವಾಗಿದೆ! ಹಾಗೇ ಪಾಶ್ಚಾತ್ಯರ ಪ್ರಭಾವ: ಭಾರತೀಯರು ತೋರಿಸದ ಬದುಕಿನ ಇನ್ನೊಂದು ಮುಖವನ್ನು ಸಾಹಿತ್ಯದಲ್ಲಿ ತೋರಿಸಿದೆ! ಅವರ ದುಃಖಾಂತವಾಗುವ ಪ್ರಮುಖ ಕಾವ್ಯಗಳು, ರುದ್ರ ( tragedy ) ನಾಟಕಗಳು ಬದುಕು ದುಃಖಾಂತ ಎಂಬ ಸಂದೇಶ ಸಾರುತ್ತವೆ! ನೇತ್ಯಾತ್ಮಕವಾಗಿ ಬದುಕನ್ನು ನೋಡುವಂತೆ ಮಾಡಿವೆ!
"God sleeps in stones, grows in plants, walks in animals, talks and thinks in man and perfects in himself again and again " ಇದೊಂದು ಬ್ರಾಹ್ಮಣ ವಾಕ್ಯ. ಇಲ್ಲಿ ಪ್ರಕೃತಿಯು ಭಗವಂತನ ಸ್ವರೂಪ ಎಂದು ಸಾರಿರುವುದು ಹಾಗೂ ಮಾನವ ಎಷ್ಟು ಶ್ರೇಷ್ಠ ಜೀವಿ ಎಂದು ಹೇಳಿರುವುದನ್ನು ಗುರುತಿಸಬಹುದು. " Man is the lord of creation " ಎಂಬ ಇಂಗ್ಲಿಷ್ ಸೂಕ್ತಿ, " ಜಂತೂನಾಂ ನರ ಜನ್ಮಂ ದುರ್ಲಭಂ ", ಎಂಬ ಆರ್ಯರ ಸೂಕ್ತಿ, "ಈಸಬೇಕು ಇದ್ದು ಜೈಸಬೇಕು" , "ಮಾನವಜನ್ಮ ದೊಡ್ಡದು ಇದ ಹಾಳುಮಾಡಬೇಡಿ ಹುಚ್ಚಪ್ಪಗಳಿರ ", "ಇರುವೆ ಎಂಬತ್ತುನಾಲ್ಕು ಕೋಟಿ ಜೀವರಾಶಿಗಳಲ್ಲಿ ಮಾನವಜನ್ಮ ಶ್ರೇಷ್ಠವಾದದ್ದು ", " Where there is a will, there is a way " – ಈ ದಾಸರ, ದಾರ್ಶನಿಕರ, ಅನುಭವಿಗಳ, ಅನುಭಾವಿಗಳ ನುಡಿಮುತ್ತುಗಳು ಬದುಕಿನ ಮಹತ್ವವನ್ನು , ಮಾನವನ ಶ್ರೇಷ್ಠತೆಯನ್ನು ಸಾರುತ್ತವೆ. ನಾವು ಸತ್ತು ಏನನ್ನೂ ಸಾಧಿಸಲಾಗದು , ಇದ್ದು ಏನನ್ನಾದರೂ ಸಾಧಿಸಬಹುದು. " ಇರಬೇಕು – ಇರದಿರಬೇಕು " ಎಂದು ಪುರಂದರರು ಸರಳವಾಗಿ ಜೀವಿಸುವುದನ್ನು, ದುಃಖ ಕಡಿಮೆ ಮಾಡಿಕೊಳ್ಳುವುದು ಹೇಗೆಂದು ಹೇಳಿದ್ದಾರೆ! ಇದನ್ನು ಅರಿತು ಬದುಕಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಬರದೇನೊ!
ಇಂದು ಶಾಲೆಗಳಲ್ಲಿ ಅಂಕ ಗಳಿಕೆಯ ಮಹತ್ವನ್ನು ಹೇಳಿಕೊಡುತ್ತಿದ್ದಾರೆ. ಎಲ್ಲಾ ಕಡೆ ಅಂಕ ಹೆಚ್ಚು ಗಳಿಸಿದವರಿಗೆ ಮಾನ ಮನ್ನಣೆ ಉನ್ನತ ಉದ್ಯೋಗ ,ಕೈ ತುಂಬ ಹಣ, ಹೈ ಪೈ ಜೀವನ ಸಿಗುತ್ತಿದೆ. ಅನುತ್ತೀರ್ಣರಾದವರ , ಅಂಕಗಳಿಕೆಯಲಿ ಹಿಂದುಳಿದವರ ಬದುಕೇ ಮುಗಿಯಿತು ಎಂಬಂತೆ ಸಮಾಜದಲ್ಲಿ ಬಿಂಬಿತವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಹಾಗೇ ತಮ್ಮ ವೃತ್ತಿಯಲ್ಲಿ ರೈತರು ವ್ಯಾಪಾರಿಗಳು ಮುಂತಾದವರು ಯಶಸ್ವಿಯಾಗಲಿಲ್ಲವೆಂದು ಆತ್ಮಹತ್ಯೆ ದಾರಿ ಹಿಡಿಯುವುದು ಸರಿಯಲ್ಲ. ವಿದ್ಯಾರ್ಥಿಗಳಷ್ಟೇ ಅಲ್ಲ ,ರೈತರು, ವ್ಯಾಪಾರಸ್ಥರು , ಅಧಿಕಾರಿಗಳು, ಕೆಳಹಂತದ ನೌಕರರು ಮುಂತಾದ ಎಲ್ಲರಿಗೂ ಶಾಲೆಗಳಲ್ಲಿ ಮನೆಗಳಲ್ಲಿ ಜೀವದ, ಜೀವನದ ಮಹತ್ವ ಹೇಳಿಕೊಡದೇ ಇರುವುದು ಇದಕ್ಕೆಲ್ಲಾ ಕಾರಣ. ಜತೆಗೆ ಹಾಸಿಗೆ ಇದ್ದಷ್ಟು ಕಾಲುಚಾಚು, ಹಿಟ್ಟು ಇದ್ದಷ್ಟು ರೊಟ್ಟಿ ಸುಡು – ಎಂಬ ಗಾದೆಗಳ ಮರೆತಿರುವುದು, " ಹುಲಿ ಬಣ್ಣಕ್ಕೆ ನರಿ ಮೈ ಸುಟ್ಟುಕೊಂಡಂತೆ " ಎಂದು ಹುಲಿ ಆಗಲು ಹೋಗಿ ಸಾಧ್ಯವಾಗದಾದಾಗ ಆತ್ಮಹತ್ಯೆಯ ದಾರಿ ತುಳಿದಿರುವವರು ಕಡಿಮೆಯೇನಲ್ಲ! ಚಿಕ್ಕ ವಯಸ್ಸಿಗೇ ಅಪರಿಮಿತ ಸ್ವಾತಂತ್ರ್ಯ ಕೊಡುವ ಅವಿಭಕ್ತ ಕುಟುಂಬಗಳು, ಅನನುಭವ, ಗುಡ್ಡಕ್ಕೆ ಕಟ್ಟುವ ಬಳ್ಳಿ ಹಾಸುವ ಪ್ರೌರುತ್ತಿಗಳೂ ಕಾರಣವಾಗಿವೆ.
ಪ್ರಪಂಚ ವಿಶಾಲವಾದುದು ಬದುಕಲು ನಾನಾ ದಾರಿಗಳುಂಟು, ಕಷ್ಟಗಳನ್ನು, ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ಗಟ್ಟಿಯಾಗುತ್ತೇವೆ. ಕಷ್ಡಗಳು ಬರುವುದೇ ನಮ್ಮನ್ನು ಗಟ್ಟಿಗೊಳಿಸಲಿಕ್ಕೆ ಎಂದು ಎದುರಿಸಲು ಮುಂದಾದಾಗ ಅವು ನಿರ್ಗಮಿಸುತ್ತವೆ! ಜೀವನ ಕಷ್ಟಗಳ, ನೋವುಗಳ ಸರಣಿಯಂತೆ ಆನಂದದ ಸರಣಿಯನ್ನು ಒದಗಿಸುತ್ತದೆ. ಕಾಯುವ ತಾಳ್ಮೆ ಬಹು ಮುಖ್ಯ. " ತಾಳಿದವನು ಬಾಳಿಯಾನು ". ಸತ್ಯ ಹರಿಶ್ಚಂದ್ರ ಸರಣಿ ಕಷ್ಟಗಳಿಗೆ ಹೆದರಿದ್ದರೆ, ಎಷ್ಟು ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು? ಸಚಿನ್ ತೆಂಡೋಲ್ಕರ್ ಪ್ರೌಢ ಶಾಲಾ ಹಂತದಲ್ಲೇ ಶಾಲೆ ಬಿಟ್ಟ ಮಗು. ಆದರೂ ವಿಶ್ವದಲ್ಲೇ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಆಗಲಿಲ್ಲವೆ? ಮೈಕ್ರೋಸಾಪ್ಟ್ ಸ್ಥಾಪಕ ಬಿಲ್ ಗ್ರೇಟ್ಸ್, ಆಪಲ್ ಸ್ಥಾಪಕ ಸ್ಟೀವ್ ಜಾಬ್ಸ್ ಇವರೂ ಶಾಲೆ ಬಿಟ್ಟ ಮಕ್ಕಳು.ವಿಶ್ವವಿಖ್ಯಾತರಾಗಲಿಲ್ಲವೆ ? ಥಾಮಸ್ ಆಲ್ವ ಎಡಿಸನ್ ಶಾಲೆಯಿಂದ ಹೊರಹಾಕಲ್ಪಟ್ಟ ಮಗು ವಿಶ್ವವಿಖ್ಯಾತ ವಿಜ್ಞಾನಿಯಾಗಲಿಲ್ಲವೆ? ಕಾರ್ಲ್ ಮಾರ್ಕ್ಸ್ ನನ್ನು ದೇಶದಿಂದ ದೇಶಕ್ಕೆ ಗಡಿಪಾರು ಮಾಡಿದರೂ, ಕಷ್ಟಗಳ ಸರಣಿಯೇ ಬಂದರೂ ಎದೆಗುಂದದೆ ಹೋರಾಡಿ ಆಧುನಿಕ ಸಮಾಜವಾದದ ಜನಕನಾದ! ಯಾರಿಗೇ ಆಗಲಿ ಏನೇ ಸಮಸ್ಯೆಗಳು ಬಂದಲ್ಲಿ ಹೆದರಬಾರದು. ಸಕಾರಾತ್ಮಕ ಚಿಂತನೆಗಳಿಂದ ಅವುಗಳನ್ನು ಹೆದುರಿಸಲು ಪ್ರಯತ್ನಿಸಬೇಕು, ಒಂದಿಲ್ಲೊಂದು ಕಡೆ ಯಶಸ್ಸು ದೊರೆತೀತು. ಹಿಂದಿನ ಎಲ್ಲಾ ನೋವನು ಮರೆಯಿಸುವಂತಹ ಅಪಾರ ಆನಂದ ಆದೀತು
ಬದುಕಿನ ಪ್ರಾಮುಖ್ಯತೆ ತಿಳಿದಾಗ , ಬದುಕಿಗಿರುವ ಅನೇಕ ಆಯಾಮಗಳನ್ನು ಅರ್ಥಮಾಡಿಕೊಂಡಾಗ , ಧನಾತ್ಮಕ ಚಿಂತನೆಗಳನ್ನು ಮಾಡಿದಾಗ ಆತ್ಮಹತ್ಯೆಯ ಯೋಚನೆಗಳು ಬರುವುದೇ ಇಲ್ಲ. ಬದುಕನ್ನು ಹೇಗೆ ಉತ್ತಮ ಮಾಡಿಕೊಳ್ಳಬೇಕೆಂದು ಚಿಂತಿಸುತ್ತೇವೆ, ಆಗ ಮಾರ್ಗಗಳು ಗೋಚರಿಸುತ್ತವೆ. ಉತ್ತಮ ಬದುಕು ನಮ್ಮದಾಗುತ್ತದೆ.
* ಕೆ ಟಿ ಸೋಮಶೇಖರ, ಹೊಳಲ್ಕೆರೆ.