ನಮ್ಮ ಭೂಮಂಡಲದಲ್ಲಿ ಜೀವಿಗಳು ಸೃಷ್ಟಿಯಾದಾಗಿನಿಂದಲೂ 'ಚಿಂತನ-ಮಂಥನ' ಕ್ರಿಯೆಯು ನಡೆಯುತ್ತಲೇ ಬಂದಿದೆ. ಅಂದರೆ, ಹೊಸ ವಿಷಯಗಳ ಬಗ್ಗೆ ಕುತೂಹಲ, ಹುಡುಕಾಟ, ಆವಿಷ್ಕಾರಗಳು ಸಾಗುತ್ತಲೇ ಸಾಮಾನ್ಯ ಬುದ್ಧಿ ಶಕ್ತಿಯು ಅಸಾಮಾನ್ಯ ಅನ್ವೇಷಣೆಗಳಿಗೆ ನಾಂದಿ ಹಾಡಿರುವುದರಿಂದಲೇ ಇಂದು ಜಗತ್ತು ಅತ್ಯಾಧುನಿಕ ಕಾಲ ಘಟ್ಟಕ್ಕೆ ತಲುಪಿದೆ. ಒಂದು ವೇಳೆ ಮಾನವನಲ್ಲಿ ಈ "ಮಂಥನ" ಕಾರ್ಯ ಆಗದೇ ಇದ್ದಿದ್ದರೆ, ಇಂದು ವಿದ್ಯುತ್ ಸೌಲಭ್ಯವಾಗಲೀ, ಸಾರಿಗೆ-ಸಂಪರ್ಕ ಸಾಧನಗಳಾಗಲೀ, ಹರಿಯುವ ನೀರಿನ ಸದುಪಯೋಗವಾಗಲೀ, ಐಷಾರಾಮೀ ಬದುಕಿನ ಸೌಕರ್ಯಗಳಾಗಲೀ, ವೈಜ್ಞಾನಿಕ ಆವಿಷ್ಕಾರಗಳಾಗಲೀ ಯಾವುವೂ ಆಗುತ್ತಿರಲಿಲ್ಲ. ಇತಿಹಾಸದ ಪುಟಗಳು ನಮಗೆ ಹೇಳುವಂತೆ ಆದಿವಾಸಿಗಳಾಗಿ, ಗೆಡ್ಡೆ ಗೆಣಸುಗಳೇ ನಮ್ಮ ಮೃಷ್ಟಾನ್ನ ಭೋಜನವಾಗಿರುತ್ತಿತ್ತು. ಮರದ ಪೊದರು, ಪೊಟರೆಗಳೇ ನಮ್ಮ ಭವ್ಯ ಬಂಗಲೆಗಳಾಗಿರುತ್ತಿದ್ದವು. ತೊಗಟೆ, ಎಲೆಗಳೇ ನಮಗೆ ರೇಷ್ಮೆ ವಸ್ತ್ರಗಳಾಗಿರುತ್ತಿದ್ದವು. ಹಕ್ಕಿ ಪಕ್ಷಿಗಳ ಇಂಚರಗಳೇ ಮನಸೆಳೆದ ಸಂಗೀತವಾಗಿರುತ್ತಿತ್ತು. ಚಲಿಸುವ ಮೋಡಗಳು, ಹರಿಯುವ ಝರಿಗಳು, ಗಿರಿ ಪರ್ವತಗಳು, ಕಣಿವೆ ಕಂದರಗಳು ನಮಗೆ ಆಟಿಕೆಗಳಾಗಿರುತ್ತಿದ್ದವೇನೋ! ಆದರೆ, ಆಗಿದ್ದೇನು?
ಈಗಿನ ಕಾಲಘಟ್ಟದ ಉನ್ನತಿಗೆ ಕಾರಣ "ಮಂಥನ" ಶಕ್ತಿ ಪ್ರತಿಯೊಂದು ಕ್ಷಣದಲ್ಲಿ ಆಗುವ ಘಟನೆಗಳ ಸೂಕ್ಷತೆಯನ್ನು ವೀಕ್ಷಿಸುತ್ತಲೇ, ಅದರ ಸ್ವರೂಪ ಪರಿಣಾಮಗಳನ್ನು ವಿಮರ್ಶಿಸುತ್ತಲೇ, ತನ್ನ ತಾರ್ಕಿಕ ಶಕ್ತಿಯನ್ನು ವೃದ್ಧಿಸಿಕೊಂಡ ಆದಿ ಮಾನವನು ಸಹಸ್ರಾರು ವರ್ಷಗಳ ಅನುಭವಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿ, ಮತ್ತಷ್ಟು ವಿಶ್ಲೇಷಿಸಿ, ಪರಾಮರ್ಶಿಸಿಕೊಂಡು ಅಭಿವೃದ್ಧಿಪಡಿಸಿಕೊಂಡು ಸಾಗಿ ಬಂದಿರುವುದರಿಂದಲೇ ಇಡೀ ವಿಶ್ವವು ಈ ಮಟ್ಟಕ್ಕೆ ಬೆಳೆದು ಬಂದಿದೆ.
"ರಾಜಾಧಿರಾಜರು" ಯುದ್ಧ ಪರಂಪರೆಯನ್ನು ಮುಂದುವರೆಸುವುದೇ ತಮ್ಮ ಗುರಿ-ಸಾಧನೆ ಎಂದು ನಂಬಿದ್ದರಿಂದಲೇ ಇತಿಹಾಸದ ಪುಟಗಳಲ್ಲಿ ರಕ್ತದ ವಾಸನೆ ಸೇರಿಕೊಂಡಿದೆ. ಆದರೆ ಅಶೋಕ ಚಕ್ರವರ್ತಿಗೆ "ಕಳಿಂಗ" ಯುದ್ಧದ ಪರಿಣಾಮದಿಂದ ಜ್ಞಾನೋದಯವಾಗಿ, ಬೌದ್ಧ ಸನ್ಯಾಸಿಯೊಬ್ಬರ ಸಲಹೆಯಂತೆ, ಶಾಂತಿಯ ಹುಡುಕಾಟಕ್ಕಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ, ಜಗತ್ತಿಗೇ ಸತ್ಯ, ಧರ್ಮ ಶಾಂತಿಯ ಸಂದೇಶಗಳನ್ನು ಸಾರಿದುದರಿಂದಲೇ ಇಂದು ಅಮರನಾಗಿ ಉಳಿದಿರುವ ಅಶೋಕ ಆದರ್ಶ ಪುರುಷನಾಗಿದ್ದಾನೆ. ಮೃಗೀಯ ಧೀರತ್ವದಿಂದ ಮನಸ್ಸಿಗೆ ಶಾಂತಿ ಸುಖ ಸಿಗುವುದಿಲ್ಲ ಎಂಬ ಅನುಭವ ಜನ್ಯ ಆದೇಶ ನೀಡಿದ್ದಾನೆ. ಅಶೋಕನ ಈ ಅಪರೂಪದ, ಅನುಕರಣಾಯೋಗ್ಯ ಬದಲಾವಣೆ/ಪರಿವರ್ತನೆಗೆ ನಾಂದಿಯಾದುದು ಅವನ "ಮಂಥನ".
ಹೀಗೆ ಇತಿಹಾಸದ ಅದೆಷ್ಟೋ ಮಹಾಪುರುಷರಲ್ಲಿ "ಮಹಾ ಮಂಥನ" ಕಾರಣವಾದುದು ಒಂದು ಘಟನೆ ಇರಬಹುದು. ಯಾವುದೋ ಪ್ರೇರಣೆ ಇರಬಹುದು ಅಥವಾ ಒಬ್ಬ ವ್ಯಕ್ತಿಯೂ ಕಾರಣನಾಗಿರಬಹುದು. ಬದಲಾವಣೆಗೆ, ಸೃಷ್ಟಿಗೆ, ಜ್ಞಾನದ ಬೆಳಕೆಗೆ ಕಾರಣೀ ಪುರುಷರಾದವರನ್ನೇ ನಮ್ಮ ಸಮಾಜವು "ಗುರು" ಎಂಬ ಗೌರವಯುತ ಸ್ಥಾನದಿಂದ ಗುರುತಿಸಿಕೊಂಡು ಬಂದಿದ್ದಾರೆ.
ಯಾವುದೋ ಒಂದು ದೇಶದ ಹಣೆಬರಹವನ್ನು ಬರೆಯಬಲ್ಲ ಬ್ರಹ್ಮನೇ "ಗುರು" ಅಥವಾ "ಶಿಕ್ಷಕ"ನಾಗಿದ್ದಾನೆ. ಏಕೆಂದರೆ ಒಂದು ದೇಶದ ಎಲ್ಲ ವ್ಯವಸ್ಥೆಯೂ "ಶಿಕ್ಷಣ"ದ ಬುನಾದಿಯನ್ನೇ ಆಧರಿಸಿದೆ, ಶಿಕ್ಷಣದ ದಕ್ಷತೆಯಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯವಾಗುತ್ತದೆ. ಅಂತಹ ಮಹತ್ವದ ಶಿಕ್ಷಣ ನೀಡುವವರು "ಶಿಕ್ಷಕ"ರೇ ಆಗಿರುವುದರಿಂದ ರಾಷ್ಟ್ರದ ನಿರ್ಮಾಣ ಮಾಡುವ ಅಥವಾ ನಿರ್ನಾಮ ಮಾಡುವ ಸಾಮರ್ಥ್ಯ ಅವರಿಗಿದೆ.ಹಿಂದೆ ಯಾರೋ ಹೇಗೋ ಬರೆದಿರುವ ಕೆಟ್ಟ ಬರಹವನ್ನು ಬದಲಿಸಿ, ಹೊಸದಾಗಿ ಬರೆಯಬಲ್ಲ ಶಕ್ತಿ ಶಿಕ್ಷಕರಲ್ಲಿದೆ, ಇಂತಹ ಅನನ್ಯ ಶಕ್ತಿ ಹೊಂದಿರುವ ಗುರುಗಳನ್ನು ಸಾಮಾನ್ಯರೆಂದು ಭಾವಿಸದೇ, ಅವರಲ್ಲಿ ಭಕ್ತಿ, ಗೌರವ, ಶೃದ್ಧೆ, ಸೇವೆಗಳನ್ನು ಗುರ್ತಿಸಿ, ಪ್ರೋತ್ಸಾಹಿಸಿದರೆ, ಸಮಾಜಕ್ಕೆ ಆ ಮೂಲಕ ದೇಶಕ್ಕೆ ಉಪಯುಕ್ತವಾದ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ.
ನಮ್ಮ ದೇಶದಲ್ಲಿ ವೇದಗಳ ಕಾಲದಲ್ಲಿದ್ದ ಗುರುವಿನ ಸ್ಥಾನದ ಗೌರವಾದರಗಳು ಇಂದು ಕಡಿಮೆಯಾಗುತ್ತಿರುವ ಬಗ್ಗೆ ಸಂಶಯ ಉಂಟಾಗುತ್ತಿರುವಂತಿದೆ.ಅದಕ್ಕೆ ಕಾರಣಗಳೇನೇ ಇರಲಿ, ಶಿಕ್ಷಕ ಸಮುದಾಯಕ್ಕೆ ದೇಶವನ್ನು ಸಮರ್ಥಗೊಳಿಸುವ ಸಾಮರ್ಥ್ಯವಂತೂ ಇದೆ. ಶಿಕ್ಷಕರಿಗೆ ಸಿಗುತ್ತಿರುವ ಪ್ರಾಮುಖ್ಯತೆಯನ್ನು ಸಮಾಜ, ಸಂಘ-ಸಂಸ್ಥೆಗಳು, ಸರ್ಕಾರಗಳು ಮತ್ತಷ್ಟು ಹೆಚ್ಚಿಸಬೇಕು.
"ಶಿಕ್ಷಕರೇ ನಮ್ಮ ದೇಶದ ಭವಿಷ್ಯದ ಶಿಲ್ಪಿಗಳು" ಎಂದು ಭಾವಿಸಿರುವ ಅಮೇರಿಕಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ಬೇರೆ ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿಗೆ ಹೆಚ್ಚು ಮನ್ನಣೆ ಇದೆ. ಪ್ರೋತ್ಸಾಹವಿದೆ. ಅಷ್ಟೇ ನಂಬಿಕೆಯಿದೆ. ಹಾಗಾಗಿಯೇ ಇಂದು ಅಮೇರಿಕಾ ಇತರೆಲ್ಲ ದೇಶಗಳಿಗೆ "ದೊಡ್ಡಣ್ಣ"ನ ಸ್ಥಾನ ಪಡೆದು ಆಧುನಿಕತೆಯಲ್ಲಿ, ಮಾನವ ಸಂಪನ್ಮೂಲಗಳ ಸಧ್ಭಳಕೆಯಲ್ಲಿ ಮಂಚೂಣಿಯಲ್ಲಿದೆ. ತಮ್ಮ ದೇಶದ ಈ ಪ್ರಗತಿಗೆ ಯಾರು ಕಾರಣ? ವಿಜ್ಞಾನಿಗಳಾ? ತಂತ್ರಜ್ಞರಾ? ವೈದ್ಯರಾ? ಸಾಹಿತಿಗಳಾ? ಚಿಂತಕರಾ? ಅಥವಾ ರಾಜಕಾರಣಿಗಳಾ? ಎಂದು ಪ್ರಶ್ನಿಸಿದರೆ, ಅಮೇರಿಕಾ ಅಧ್ಯಕ್ಷರು ಹೇಳುವ ಉತ್ತರ – "ಅವರೆಲ್ಲರನ್ನೂ ರೂಪಿಸುವ ಶಿಕ್ಷಕರೇ ನಮ್ಮ ರಾಷ್ಟ್ರದ ರೂವಾರಿ "ಗಳೆಂದು ಮನಃ ಪೂರ್ವಕವಾಗಿ ಹೇಳುತ್ತಾರೆಂದರೆ, ಶಿಕ್ಷಕರ ಸಮರ್ಥತೆ, ಅಗತ್ಯತೆ ಬಗ್ಗೆ ಎರಡು ಅಭಿಪ್ರಾಯಗಳ ಅವಶ್ಯಕತೆಯಿಲ್ಲ.
1945ರಲ್ಲಿ ಪರಮಾಣು ಬಾಂಬ್ ದಾಳಿಗೆ ತುತ್ತಾಗಿದ್ದ ಜಪಾನ್ ದೇಶವು ಲಕ್ಷಾಂತರ ಜನರ ಸಾವಿನಿಂದ ಕಂಗಾಲಾಗಲಿಲ್ಲ. ಹದಗೆಟ್ಟ ಹವಾಮಾನ ಪರಿಸ್ಥಿತಿಯಿಂದ ಬೇರೆ ಕಡೆಗೆ ಪಲಾಯನ ಮಾಡಲಿಲ್ಲ.ಬದಲಿಗೆ ಆತ್ಮ ಬಲವನ್ನೇ ರಾಷ್ಟ್ರ ಪ್ರೇಮವನ್ನೇ ಆಧಾರವಾಗಿಸಿಕೊಂಡು ಒಂದೆರಡು ದಶಕಗಳಲ್ಲೇ ಸುಧಾರಿಸಿ ಏನೂ ಆಗಿಯೇ ಇಲ್ಲವೆನ್ನುವಷ್ಟು ಸಹಜ ಸ್ಥಿತಿಗೆ ಜಪಾನ್ ಮರಳಿದಾಗ ಶತ್ರು ರಾಷ್ಟ್ರಗಳೂ ಚಕಿತಗೊಂಡು ಬೆಕ್ಕಸ ಬೆರಗಾದವು.
ಇತ್ತೀಚೆಗೆ ಉಂಟಾದ "ಸುನಾಮಿ" ಯ ಪರಿಣಾಮದಿಂದಾಗಿ ಅಣು ವಿಕಿರಣಾ ಸೋರಿಕೆಗೆ ಹೆದರಿ, ಅಲ್ಲಿನ ಜನತೆ ಇರಲಿ, ವಿಕಿರಣ ಘಟಕಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಯಾರೂ ಓಡಿ ಹೋಗಲಿಲ್ಲ. ಸುರಕ್ಷತಾ ತಂತ್ರಗಳನ್ನು ಅಳವಡಿಸಿಕೊಂಡೇ ಆತ್ಮ ಬಲದಿಂದ ಅಲ್ಲಿಯೇ ಇದ್ದು ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಕೆಲವೇ ತಿಂಗಳಲ್ಲಿ ಜಪಾನ ಯಥಾಸ್ಥಿತಿಗೆ ಬರಲು ಶ್ರಮ ವಹಿಸಿದರು. ಇಂತಹ ಅದಮ್ಯ ಆತ್ಮ ವಿಶ್ವಾಸಕ್ಕೆ, ದೇಶಾಭಿಮಾನಕ್ಕೆ ಅಲ್ಲಿನ ಜನತೆ ಹೇಗೆ ಒಳಗಾದರು ಎಂದರೇ ಮತ್ತದೇ ಉತ್ತರ. ಅಲ್ಲಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರಲ್ಲಿನ ಸೇವಾ ದಕ್ಷತೆ, ಶಿಸ್ತು, ಸಮಯ ಪಾಲನೆ, ನಿಸ್ವಾರ್ಥತೆ, ದೇಶದ ಬಗ್ಗೆ ಗೌರವ ಎಲ್ಲರನ್ನೂ ಶಿಕ್ಷಕರು ಪ್ರತಿಯೊಬ್ಬ ಪ್ರಜೆಯಲ್ಲೂ ರಕ್ತಗತಗೊಳಿಸಿರವುದೇ "ಜಪಾನ್" ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿರುವುದಕ್ಕೆ ಕಾರಣವಾಗಿದೆ.
ಶಿಕ್ಷಕರ ಈ ಶ್ರಮದಾಯಕ, ಸಾರ್ಥಕತೆಯ ಸೇವೆಯನ್ನು ಗುರುತಿಸಿಯೇ ಜಪಾನ್ ಇತರೆಲ್ಲಾ ನೌಕರರಿಗಿಂತಲೂ ಶಿಕ್ಷಕರಿಗೆ ಹೆಚ್ಚು ವೇತನ ನೀಡಿ ಹುರಿದುಂಬಿಸುತ್ತಿದೆ. ಆದರೆ, ನಮ್ಮಲ್ಲಿ ಶಿಕ್ಷಕರನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ದೋಷವಿದೆ. ಸಮರ್ಥ ನಾಗರೀಕರನ್ನು ಸೃಷ್ಠಿ ಮಾಡಬೇಕು ಎಂಬ ಧ್ಯೇಯದಿಂದಲೇ ಅಮೇರಿಕಾ ಮತ್ತು ಜಪಾನ್ ದೇಶಗಳ ಯುವಕ ಯುವತಿಯರು ಶಿಕ್ಷಕರಾಗಲು ಹಪಹಪಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಆ ಮನೋಭಾವನೆ ಇರುವವರ ಸಂಖ್ಯೆ ತೀರಾ ವಿರಳವೆಂದೇ ಹೇಳಬೇಕಾಗಿದೆ.
ನಮ್ಮ ದೇಶದ ತಂದೆ-ತಾಯಿಯರು ಹುಟ್ಟಿದ ಮಗುವಿಗೆ ಕಲಿಸುವ ಮೊದಲ ಪದ "ಅಮ್ಮ" ಆದರೆ ಜಪಾನ್ ದೇಶದಲ್ಲಿ ತಾಯಿಯು ಮಗುವಿಗೆ ಹೇಳಿಕೊಡುವ ಪದ "ನಾನು ಜಪಾನೀಸ್" ಅಷ್ಟೊಂದು ದೇಶಾಭಿಮಾನವನ್ನು ಅಲ್ಲಿನ ಶಿಕ್ಷಕರು ನಾಗರೀಕರಲ್ಲಿ ಬಿತ್ತಿದ್ದಾರೆ. ಯಾವುದೇ ವಿಕೋಪ, ಉದ್ವೇಗ, ಒತ್ತಡಗಳನ್ನು ತಾಳಿಕೊಂಡು, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಅಲ್ಲಿನ ಶಿಕ್ಷಕರು ಸಮಸ್ತ ಪ್ರಜೆಗಳಿಗೆ ಪ್ರಾಥಮಿಕ ಹಂತದಿಂದಲೇ ತುಂಬಿದ್ದಾರೆ.
ನಮ್ಮ ದೇಶದಲ್ಲಿಯೂ "ಗುರು"ವಿನ ಸ್ಥಾನಕ್ಕೆ ಕುಂದೇನಿಲ್ಲದಿದ್ದರೂ, ನೀಡುತ್ತಿರುವ ಮಾನ್ಯತೆ ಕಡಿಮೆಯಿದೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ತಮ್ಮ ಗುರುಗಳನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುವ ಸಂಸ್ಕಾರ ಈಗಲೂ ನಮ್ಮಲ್ಲಿದೆ. ಸ್ವಾಮಿ ವಿವೇಕಾನಂದರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರ ತತ್ವ ಆದರ್ಶಗಳ ಆಧಾರಿತವಾಗಿಯೇ ಉತ್ತಮ ವ್ಯಕ್ತಿತ್ವ ಪಡೆದು ಆಧ್ಯಾತ್ಮಿಕ ಲೋಕದಲ್ಲಿ ಅದ್ವಿತೀಯರಾಗಿ ಬೆಳಗಿ ಅಮರರಾಗಿದ್ದಾರೆ.
ಗುರುವಾದವರು ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಸಂಸ್ಕೃತಿ, ರಾಷ್ಟ್ರಭಕ್ತಿಯ ಭಾವನಾ ಬೀಜಗಳನ್ನು ಬಿತ್ತುವುದರ ಜೊತೆಗೆ ಅವರಲ್ಲಿ ಕುತೂಹಲಗಳನ್ನು ಸೃಷ್ಠಿಸಬೇಕು. ಪ್ರೋ||ಯು.ಆರ್.ರಾವ್ ರವರು ತಮ್ಮ ಪ್ರೌಢ ಶಾಲಾವಧಿಯಲ್ಲಿಯೇ ತಮ್ಮ ಗುರುವಾಗಿದ್ದ ಶೆಣೈರವರು ತುಂಬಿದ್ದ ಖಗೋಳ ಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಮುಂದೆ ಖಗೋಳ ವಿಜ್ಞಾನಿಯಾಗಿ ಹೆಸರು ಮಾಡಿದರು.
ಮನೆ ಮನೆಗೆ ನ್ಯೂಸ್ ಪೇಪರ್ ಹಾಕುತ್ತಾ ಬಡತನದ ಬೇಗೆ ಅನುಭವಿಸುತ್ತಲೇ ವ್ಯಾಸಂಗ ಮಾಡಿದ ಎ.ಪಿ.ಜೆ.ಅಬ್ದುಲ್ ಕಲಾಂರವರು ತಮ್ಮ ಗುರು ಶಿವಸುಬ್ರಹ್ಮಣ್ಯ ಅಯ್ಯರ್ ರವರ ಮಾರ್ಗದರ್ಶನದಿಂದಲೇ ಸಾಧಿಸಿ ಮುಂದೆ ಅಣು ವಿಜ್ಞಾನಿಯಾಗಿ, ನಮ್ಮ ದೇಶದ ರಾಷ್ಟ್ರಪತಿಗಳಾಗಿ ಆ ಹುದ್ದೆಗೆ ಗೌರವ ತಂದು ಕೊಟ್ಟವರಾಗಿದ್ದಾರೆ. ಸದಾ ತಮ್ಮ ಗುರುಗಳನ್ನು ನೆನೆಯುತ್ತಲೇ ತಮ್ಮ ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿ ಎಂದು ಭಾವಿಸಿ ಮಕ್ಕಳಲ್ಲಿ ಚಿಕ್ಕವರಾಗಿದ್ದಾಗಲೇ "ಕನಸುಗಳನ್ನು ಬಿತ್ತಬೇಕು. ಬಿತ್ತಿದ ಆ ಕನಸಿನ ಬೀಜ ಮೊಳೆಯಲು, ಬೆಳೆಯಲು, ನನಸಿನ ಫಲ ದೊರೆಯುವಂತಾಗಲು ಗುರುವಾದವರು ಪ್ರೇರಣೆ ನೀಡಬೇಕು" ಎಂದು ತಮ್ಮ ಅನೇಕ ಸಂವಾದಗಳಲ್ಲಿ ಹೇಳುತ್ತಿರುತ್ತಾರೆ.
ಶಾಲೆ- ಕಾಲೇಜುಗಳಲ್ಲಿ ಗುರುವಾದವನು ಮಕ್ಕಳಿಗೆ ವೈಯಕ್ತಿಕವಾಗಿ ಗಮನ ಕೊಡುತ್ತಾ ಹೋದಂತೆ ಅವರ ಆಸಕ್ತಿದಾಯಕ ಅಂಶಗಳು ಗೋಚರವಾಗುತ್ತವೆ. ಅವನ್ನು ಗುರ್ತಿಸಿ, ಆಸಕ್ತ ಕ್ಷೇತ್ರಗಳಲ್ಲಿಯೇ ಸಾಧಿಸಲು ಪ್ರೇರೇಪಿಸಿದರೆ, ಅವನೊಬ್ಬ ಕವಿ, ವೈದ್ಯ, ಅಭಿಯಂತರ, ವಿಜ್ಞಾನಿ, ವಕೀಲ, ಪತ್ರಕರ್ತ…..ಹೀಗೆ ಹೊರಹೊಮ್ಮುತ್ತಾನೆ. ಆಸಕ್ತ ವಿಷಯದ ಗುರ್ತಿಸುವಿಕೆ ಮಾತ್ರ ಗುರುವಿನಿಂದಲ್ಲದೆ ಬೇರೆಯವರಿಂದ ಸಾಧ್ಯವಿಲ್ಲ.
ಪ್ರತಿಯೊಬ್ಬರು ಗುರುವಿನ ಬಗ್ಗೆ ಹೇಳುವಾಗ ಶಿಕ್ಷಣ ಶಿಲ್ಪಿ ಡಾ.ಎಸ್.ರಾಧಾಕೃಷ್ಣನ್ ಕುರಿತು ಹೇಳದಿದ್ದರೆ ಅಪೂರ್ಣವೆನಿಸುತ್ತದೆ. ಅವರು ಮೈಸೂರು ವಿ.ವಿ.ಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ವರ್ಗಾವಣೆಯಾಗುತ್ತದೆ. ಅವರ ಶಿಷ್ಯರು ಸಾರೋಟಿನಲ್ಲಿ ಅವರನ್ನು ಕೂಡಿಸಿಕೊಂಡು ಮೆರವಣಿಗೆಯೊಂದಿಗೆ ರೈಲ್ವೆ ನಿಲ್ದಾಣಕ್ಕೆ ಗೌರವಾದರಗಳಿಂದ, ಪುಷ್ಪಾರ್ಚನೆಗಳಿಂದ ಕರೆತರುತ್ತಾರೆ. ಅಷ್ಟೊಂದು ಭಕ್ತಿ, ಗೌರವ, ಅಭಿಮಾನದಿಂದ ಬೀಳ್ಕೊಟ್ಟ ಶಿಷ್ಯರ ಸಂಭ್ರಮವನ್ನು ಕಣ್ತುಂಬಿಕೊಂಡ ರಾಧಾಕೃಷ್ಣನ್ ರವರು, "ಎಂಥ ಪವಿತ್ರ ವೃತ್ತಿ" ಎಂದು ಸಂತೃಪ್ತರಾಗುತ್ತಾರೆ. ಮುಂದೆ ರಾಷ್ಟ್ರದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದರೂ ಅವರು ಸ್ಮರಿಸುವ ಕ್ಷಣ "ಸಾರೋಟಿನ ಮೆರವಣಿಗೆ" ಎಂದು ವಿನಮ್ರರಾಗಿ ಸ್ಮರಿಸುತ್ತಿದ್ದರು ಎಂದರೆ, ಗುರುವಿನ ಹಿರಿಮೆಯ ಅರಿವಾಗುತ್ತದೆ.
ಮುಂದೊಂದು ದಿನ ರಾಧಾಕೃಷ್ಣನ್ ರವರು ಅನಿರೀಕ್ಷಿತವಾಗಿ ತಮ್ಮ ಗುರು ಒಬ್ಬರನ್ನು ಬಡತನದ ಸ್ಥಿತಿಯಲ್ಲಿ ಕಂಡು ತಾನು ನಿಮ್ಮ ಶಿಷ್ಯ ಎಂದು ಪರಿಚಯಿಸಿಕೊಂಡಾಗ ಆ ಬಡ ಮೇಷ್ಟ್ರು "ಇಷ್ಟು ದಿನ ನಾನು ಕಡು ಬಡವ ಎಂದು ಕೊಂಡಿದ್ದೆ. ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವ ನಿನ್ನಂಥ ಶಿಷ್ಯನಿರುವಾಗ ನಾನು ಜಗತ್ತಿನ ಅತಿ ದೊಡ್ಡ ಶ್ರೀಮಂತ" ಎನ್ನುತ್ತಾ ತಮ್ಮ ಶಿಷ್ಯನನ್ನು ಅಪ್ಪಿಕೊಂಡು ಶಿಕ್ಷಕ ವೃತ್ತಿಯ ಸಾರ್ಥಕತೆ ಕಂಡು ಸಂಭ್ರಮ ಪಡುತ್ತಾರೆ. ಈ ರೀತಿಯ ಗುರು – ಶಿಷ್ಯರ ಪರಂಪರೆಯ ಅವಲೋಕನದಿಂದಾಗಿ "ಗುರು"ವಿನ ಮಹಿಮೆ ಮಹತ್ವ ಪಡೆದಿದೆ.
ಅಸಮರ್ಥ ಶಿಕ್ಷಕನ ಬಲಹೀನತೆಗಳು :
ಬೆಳೆಯುವ ಫಸಲಿನಲ್ಲಿ ಜೊಳ್ಳು ಕಾಳುಗಳೂ ಇರುವಂತೆ ಅಲ್ಲೊಬ್ಬ ಇಲ್ಲೊಬ್ಬ ಅಸಮರ್ಥ ಗುರುಗಳೂ ಇರುತ್ತಾರೆ. ಉದಾಹರಣೆಗೆ ಒಬ್ಬ ಶಿಕ್ಷಕನಿಂದ ತಿರಸ್ಕಾರಕ್ಕೆ ಒಳಗಾದ ಹುಡುಗನೊಬ್ಬ ಶಾಲೆಯನ್ನು ತೊರೆಯುತ್ತಾನೆ. ತನ್ನ ಆಸಕ್ತಿ, ಗುರ್ತಿಸದ ಗುರುವಿನ ಬಗ್ಗೆ ತಾತ್ಸಾರ ತಳೆದು, ತನ್ನ ಕಲಿವಿನ ಹಂಬಲವನ್ನು ತಾಯಿಗೆ ತಿಳಿಸಿ, ಅವಳ ಮಾರ್ಗದರ್ಶನದಲ್ಲಿ ಓದಿ, ಮುಂದೆ ವಿಜ್ಞಾನಿಯಾಗಿ ವಿದ್ಯುತ್ ಬಲ್ಫ್ ನಂತಹ ಆವಿಷ್ಕಾರಗಳನ್ನು ಮಾಡಿದ "ಥಾಮಸ್ ಅಲ್ವಾ ಎಡಿಸನ್"ನ ಭವಿಷ್ಯವನ್ನು ಅವನ ಅಸಮರ್ಥ ಗುರು ಗುರ್ತಿಸಲಾರದೆ ಹೋಗಿದ್ದು ವಿಪರ್ಯಾಸವೇ ಸರಿ.
ಯಾವ ವಿಷಯವನ್ನೂ ಕಲಿಯಲು ನೀನು ಅಸಮರ್ಥ, ನಾಲಾಯಕ್ ಎಂದು ಗುರುವಿನೊಂದಿಗೆ ಮೂದಲಿಸಿಕೊಂಡ ಐನಸ್ಟೀನ್ ತನ್ನ ಚಿಕ್ಕಪ್ಪನ ಮಾರ್ಗದರ್ಶನದಲ್ಲಿಯೇ ಓದಿ ಮುಂದೆ ಬಹುದೊಡ್ಡ ವಿಜ್ಞಾನಿಯಾಗಿ ಹೆಸರು ಮಾಡಿ ಲೋಕ ವಿಖ್ಯಾತಿ ಪಡೆದಿದ್ದು ಒಂದು ಅದ್ಭುತವೆಂದೇ ಹೇಳಬೇಕು.
ಕೆಲವು ತರಗತಿಗಳನ್ನು ಪುನಃ ಪುನಃ ಪರೀಕ್ಷೆ ಕಟ್ಟಿ ಪಾಸ್ ಮಾಡಿ ಮುಂದೆ ಚೆನ್ನಾಗಿ ಓದಿ ಉನ್ನತ ಸ್ಥಾನ ಪಡೆದು ಹೆಸರಾಗಿರುವ ಕವಿಗಳು, ಸಾಹಿತಿಗಳು, ವೈದ್ಯರೂ ಸೇರಿದಂತೆ ನಾನಾ ಕ್ಷೇತ್ರದ ಸಾಧಕರು ನಮ್ಮೊಳಗೇ ಇದ್ದಾರೆ. ಅವರಲ್ಲಿ ಕೆಲವರು ತಮ್ಮ ಓದಿನ ತಡೆಗೆ ಕೆಲವು ಶಿಕ್ಷಕರು ಕಾರಣ ಎಂದರೂ ಅನಂತರದ ಪ್ರಗತಿಗೂ ಅವರೇ ಕಾರಣೀಕರ್ತರು ಎಂದು ಸ್ಮರಿಸಿಕೊಳ್ಳುತ್ತಾರೆ. ಅಂದರೆ ಗುರುವಾದವರು ಸಮರ್ಥರಾದರೆ ಸ್ಫೂರ್ತಿ ತುಂಬುತ್ತಾರೆ. ಅಸಮರ್ಥರಾದರೆ ಪ್ರಯೋಜನವಾಗಲಾರರು ಎಂಬಂತಾಗುತ್ತದೆ. ಗುರುಗಳು, ತಮ್ಮ ವೃತ್ತಿ ದಕ್ಷತೆಗೆ ಮೊದಲು ಪ್ರಾಶಸ್ತ್ಯ ನೀಡಬೇಕು. ಆನಂತರ ತನ್ನ ವೈಯಕ್ತಿಕ ಕುಟುಂಬದ ಕಡೆ ಗಮನ ನೀಡಬೇಕು. ಸಮಾಜ, ಸಂಸಾರಗಳಲ್ಲಿ ಕೂಡಿ ಬಾಳುವ ಕಲೆಯನ್ನು ಮಕ್ಕಳಲ್ಲಿ ತುಂಬಬೇಕು. ತಾಯಿ-ತಂದೆಯರ ಬಗ್ಗೆ ಗೌರವ, ನಾಡು-ನುಡಿಯ ಬಗ್ಗೆ ಅಭಿಮಾನ, ಸುಖ ದಃಖಗಳಲ್ಲಿ ಸಹಭಾಗಿತ್ವ, ಸತ್ಯ, ಧರ್ಮ, ಸಹಕಾರ, ಪ್ರಾಮಾಣಿಕತೆ…. ಮುಂತಾದ ಅಮೂಲ್ಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುತ್ತಲೇ, ನಿಗಧಿತ ವಿಷಯ ಜ್ಞಾನವನ್ನು ತುಂಬಬೇಕು. ನಮ್ಮ ದೇಶೀಯ ಸಂಸ್ಕೃತಿಯ ಬಗ್ಗೆ ಗೌರವಗಳನ್ನು ಮೂಡಿಸಬೇಕು.
ಕಳೆದುಕೊಂಡುದಕ್ಕೆ ಕೊರಗದೆ ನಾಳಿನ ಆತಂಕಗಳಿಗೆ ಚಿಂತಿಸದೆ, ಈಗಿನ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಂಚನೆಯಿಂದ ಮಾಡಿದರೆ, ಫಲಗಳು ನಿರೀಕ್ಷೆಯಂತೆಯೇ ದೊರೆಯುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಪ್ರತಿಯೊಬ್ಬ ಮನುಷ್ಯನ ಉನ್ನತಿ ಅಥವಾ ಅವನತಿಯು ಅವನ ಗುರು ಇಲ್ಲವೇ ತಾಯಿಯನ್ನು ಅವಲಂಬಿಸುತ್ತದೆ.
ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದಾಗಿ ಎಸಗುವ ತಪ್ಪುಗಳನ್ನು ಒಪ್ಪಿಕೊಂಡು, ಆತ್ಮ ವಿಮರ್ಶೆ ಮಾಡಿಕೊಂಡು, ಮುಂದೆ ಅಂತಹ ಅವಘಡಗಳಿಗೆ ಒಳಗಾಗದಂತೆ ಎಚ್ಚರವಹಿಸಿ ಮುನ್ನಡೆದರೇ ಹಿಂದಿನ ತಪ್ಪುಗಳಿಂದ ಆಗುವ ಖಿನ್ನತೆ ಕ್ರಮೇಣ ದೂರವಾಗುತ್ತದೆ.
"ಅಸತೋಮಾ ಸದ್ಗಮಯಾ
ತಮಸೋಮಾ ಜ್ಯೋತಿರ್ಗಮಯಾ
ಮೃತ್ಯೋರ್ಮಾ ಅಮೃತಂಗಮಯಾ
ಓಂ ಶಾಂತಿ ಶಾಂತಿ ಶಾಂತಿಃ"
ಸ್ತೋತ್ರವನ್ನು ಗುರುಗಳು ಆದರ್ಶವಾಗಿಟ್ಟುಕೊಂಡು ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡು ಸಮಾಜೋಪಯೋಗಿ ನಾಗರೀಕರನ್ನು ನಿರ್ಮಾಣ ಮಾಡಿದರೆ, ಇಡೀ ರಾಷ್ಟ್ರವೇ ಸದೃಢವಾಗಿ, ಸಂಪದ್ಭರಿತವಾಗುವುದರಲ್ಲಿ ಸಂಶಯವೇ ಇಲ್ಲ.
"ಗುರುವೇ ನಮಃ"
*****
ನಿಜವಾದ ಮಾತು. ಯಾರಿಗೆ ನಿಜವಾಗಲೂ ಹೆಚ್ಚಿನ
ಮನ್ನಣೆ ನೀಡಬೇಕೋ ಅವರಿಗೆ ನೀಡುತ್ತಿಲ್ಲ. ಒಳ್ಳೆಯ
ಗುರು ಸಿಗುವುದಕ್ಕೂ ಅದೃಷ್ಟ ಬೇಕು.
ಇನ್ನು ಕೆಲ ಶಿಕ್ಷಕರಂತೂ ಭಕ್ಷಕರಾಗುತ್ತಾರೆ.
ಸ ಕಾರ ಶ ಕಾರ ಹೊರಡದ ಶಿಕ್ಷಕರೂ ಇರುವರು.
ತುಂಬಾ ಚೆಂದಾದ ಬರಹ. ಧನ್ಯವಾದಗಳು ಪರಮೇಶ್ ರವರೆ.
ನನ್ನ ಬರಹವನ್ನು ಓದಿ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು
ಚೆನ್ನಾಗಿದೆ. ಹತ್ತಿರಬರುತ್ತಿರುವ ಶಿಕ್ಷಕರ ದಿನಕ್ಕೆ ಸೂಕ್ತ ಸಮರ್ಪಣಾ ಲೇಖನದಂತೆ ಕಂಡಿತು..
ನನ್ನ ಬರಹವನ್ನು ಓದಿ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು prashati.p ರವರೆ
ಇತ್ತೀಚಿನ ದಿನಗಳಲ್ಲಿ ಶಿಕ್ಷಕ ವೃತ್ತಿ ಬಗ್ಗೆ ಜನರಿಗೆ ಹೆಚ್ಚು ಒಲವಿಲ್ಲ. ಶಿಕ್ಷಕ ವೃತ್ತಿಯನ್ನು ಬರಿ ಹೊಟ್ಟೆಪಾಡಿಗೆ ಮಾತ್ರ ಎಂದು ಪರಿಗಣಿಸಿ ಕಾಲ ಹರಣ ಮಾಡಿ ಹೋಗುವ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಬಹಳ ಮಂದಿ ಶಿಕ್ಷಕರು
ಮಕ್ಕಳಿಗೆ ಕಲಿಸುವ ಕಲೆಯನ್ನು ಕರಗತಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದಕ್ಕೆ ಬೇಕಾದ ಪೂರ್ವ ಸಿದ್ದತೆ, ತರಬೇತಿ, ಕೌಶಲ್ಯ ಮತ್ತು ತಾವು ಸರಿಯಾಗಿ ಕಲಿತು ಮಕ್ಕಳಿಗೆ ಕಲಿಸಬೇಕು ಅನ್ನುವ ತುಡಿತ ಕಾಣೆಯಾಗುತ್ತಲಿದೆ. ಎಲ್ಲರೂ ತಮ್ಮ ಮಕ್ಕಳು ಒಬ್ಬ ಹೆಚ್ಚು ಸಂಪಾದನೆ ಮಾಡುವ ವೈದ್ಯನೂ, ಇಂಜಿನೀಯರ್, ವಿಜ್ಞಾನಿಯೋ, ಅಥವಾ ಸಾಫ್ಟ್ ವೇರ್ ಇಂಜಿನೀಯರ್ ಆಗಲೇಬೇಕು ಅನ್ನುವ ಹಟಕ್ಕೆ ಬಿದ್ದು ಸ್ಪರ್ಧಾತ್ಮಕ ಜಗತ್ತಿಗೆ ತಳ್ಳುವ ತವಕ ಪ್ರದರ್ಶಿಸುತ್ತಿರುತ್ತಾರೆ. ಉಪಾದ್ಯಾಯ ವೃತ್ತಿಯನ್ನು ಪ್ರೀತಿಸಿ ಮಾಡುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಲಿದೆ. ಈ ಬೆಳವಣಿಗೆ ಸಮಾಜಕ್ಕೆ ಹಾನಿಕಾರಕವೆಂಬುದನ್ನು ಅರಿಯಬೇಕು.
ನನ್ನ ಬರಹವನ್ನು ಓದಿ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು Manjunath.S ರವರೆ
ತುಂಬ ಅತ್ಯುತ್ತಮ
ಲೇಖನ ಗುರುಗಳೇ…..