ಸಮರ್ಥ ಜೀವನ ನಿರ್ವಹಣೆಗೆ ಬೇಕು ಜೀವನ ಕೌಶಲ್ಯಗಳು: ತೇಜಾವತಿ ಹುಳಿಯಾರ್

ಜೀವನವೆನ್ನುವುದು ಮನುಷ್ಯನ ಜನನದಿಂದ ಮರಣದವರೆಗಿನ ನಿರಂತರ ಪಯಣ. ನಮ್ಮ ಜೀವನವನ್ನು ನಾವೇ ಸುಂದರಗೊಳಿಸಿಕೊಳ್ಳದ ಹೊರತು ಮತ್ಯಾರೂ ಸುಂದರಗೊಳಿಸಲು ಸಾಧ್ಯವಿಲ್ಲ. ಸಾಗುವ ಮಾರ್ಗದಲ್ಲಿ ಹಲವು ಏರು -ತಗ್ಗುಗಳನ್ನು, ತಿರುವುಗಳನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನ ನಿರ್ವಹಣೆಯು ಕೂಡ ಒಂದು ಕಲೆಯೇ ಹೌದು. ಬರುಬರುತ್ತಾ ಮಾನವರ ಭಾವನೆಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಕೃತಕವಾಗಿ ಜನ್ಮ ತಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ತೀವ್ರತೆಯೂ ಕಡಿಮೆಯೇ. ಹಿಂದಿನಂತೆ ಗಟ್ಟಿ ಬೇರುಗಳು ಪಳಗುವ ಕೈಗಳು ತೀರಾ ವಿರಳ. ಜನರು ಕ್ಷಣಿಕ ಲಾಲಸೆಗಳಿಗೆ ಒಳಗಾಗಿ ಶಾಶ್ವತ ಕ್ಷಣಗಳಿಂದ ವಂಚಿತರಾಗುತ್ತಿರುವುದು ಮಾತ್ರ ವಿಪರ್ಯಾಸ. ನೂರಾರು ಒತ್ತಡಗಳ ನಡುವೆ ಬದುಕು ಸಾಗಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ಕೌಶಲ್ಯಗಳ ಅಳವಡಿಕೆ ಅತ್ಯಗತ್ಯ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಜೀವನ ಕೌಶಲ್ಯ ಎಂದರೆ “ತಮ್ಮ ಬದುಕಿನಲ್ಲಿನ ದೈನಂದಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬೇಕಿರುವ ಹೊಂದಾಣಿಕೆಯ ಹಾಗೂ ಸಕಾರಾತ್ಮಕ ನಡವಳಿಕೆ”. ಹೊಂದಾಣಿಕೆ ಎನ್ನುವುದು ವ್ಯಕ್ತಿಯ ನಡವಳಿಕೆ ನಮ್ಯವಾಗಿದ್ದು ಬದುಕಿನ ವಿವಿಧ ಸವಾಲುಗಳಿಗೆ ಹಾಗೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತದ್ದಾಗಿರುತ್ತದೆ. ಸಕಾರಾತ್ಮಕ ಧೋರಣೆ ಎನ್ನುವುದು ಬದುಕಿನ ಬೇರೆ ಬೇರೆ ಸವಾಲುಗಳನ್ನು ಕಷ್ಟಕರ ಪರಿಸ್ಥಿತಿಯಲ್ಲಿಯೂ ಸಹ ಎದೆಗುಂದದೆ ಭರವಸೆ ಹೊಂದಿ ಕಾರ್ಯ ಸಾಗಿಸುವ ಮನೋಭಾವವಾಗಿದೆ. ಹಾಗಾದರೆ ಸಮರ್ಥ ಜೀವನ ನಿರ್ವಹಣೆಗೆ ಏನೆಲ್ಲಾ ಅಂಶಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಅರಿಯುತ್ತಾ ಸಾಗೋಣ.

ಮೊದಲಿಗೆ ‘ಸ್ವ ಅರಿವು’ ಅತೀ ಮುಖ್ಯವಾದ ಅಂಶ. ಸ್ವ ಅರಿವೆಂದರೆ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಿಯುವುದೇ ಆಗಿದೆ. ಸ್ವ ಅರಿವು ಒಮ್ಮೆಲೇ ತಲುಪಿಬಿಡಬಹುದಾದ ಗುರಿಯಲ್ಲ, ಬದಲಿಗೆ ಸತತವಾಗಿ ನಡೆಯುವ ವ್ಯಕ್ತಿಯೊಳಗಿನ ಬೆಳವಣಿಗೆ. ಸ್ವಅರಿವು ಉಂಟಾದಂತೆಲ್ಲ ನಮ್ಮಲ್ಲಿನ ದೌರ್ಬಲ್ಯಗಳನ್ನು ತಗ್ಗಿಸಿಕೊಂಡು ಜೀವನದ ಅರ್ಥ, ಉದ್ದೇಶ ಹಾಗೂ ಮೌಲ್ಯವನ್ನು ಅರಿತು ಸಾಗಲು ಅನುಕೂಲವಾಗುತ್ತದೆ. ಇದರಿಂದ ಸ್ವ ಗೌರವ, ಸ್ವ ನಿಯಂತ್ರಣ, ಭಾವನಾತ್ಮಕ ಬುದ್ಧಿಮತ್ತೆಯೂ ಹೆಚ್ಚುತ್ತದೆ. ನಮಗಾಗಿ ಒಂದಷ್ಟು ಸಮಯ ಮೀಸಲಿಸಿರಿಕೊಂಡು ನಮ್ಮ ಆಸಕ್ತಿಗಳು, ಸಂಬಂಧಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ಯಾವುದೇ ಘಟನೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡದೆ ಕೆಲಕಾಲ ಚಿಂತನೆಗೆ ಒಳಗಾಗಬೇಕು. ಬದುಕಿನ ನಿರ್ಧಾರ ಹಾಗೂ ಆಯ್ಕೆಗಳು ಸ್ಪಷ್ಟವಾಗಿರಬೇಕು.

ಮೂರು ರೀತಿಯಲ್ಲಿ ನಮ್ಮನ್ನು ನಾವು ಅರಿಯಲು ಸಾಧ್ಯವಿದೆ..
1) ನನ್ನೊಳಗಿನ ನಾನು:- ಇದರಲ್ಲಿ ಪ್ರತಿಭೆ, ಮನೋಭಾವಗಳು, ಜೀವನದ ಬಗೆಗಿನ ದೃಷ್ಟಿಕೋನ ಮುಂತಾದವನ್ನು ಅರಿಯುವುದು.
2) ಹೊರಗಿನ ನಾನು :- ಇಲ್ಲಿ ಹೊರನೋಟದಿಂದ ನಾವು ಹೇಗಿದ್ದೇವೆ ಎಂಬುದನ್ನು ಕುರಿತು ಅಂದರೆ ನಮ್ಮ ದೈಹಿಕ ಮತ್ತು ಶಾರೀರಿಕ ವಿಚಾರಗಳು, ಉಡುಗೆ -ತೊಡುಗೆಗಳು ಇತ್ಯಾದಿ.
3) ಸಾಮಾಜಿಕವಾಗಿ ನಾನು :- ಮೂಲತಃ ಮನುಷ್ಯ ಒಬ್ಬ ಸಂಘಜೀವಿ. ಸಾಮಾಜಿಕವಾಗಿ ನಾವು ಹೇಗಿದ್ದೇವೆ..ಸ್ನೇಹಿಗಳಾಗಿ, ಕಳಕಳಿಯುಳ್ಳವರಾಗಿ… ಹೀಗೆ ಅರಿವನ್ನು ಹೊಂದುವುದು.

ಎರಡನೆಯ ಅಂಶ ‘ಅನುಭೂತಿ’. “ಅನುಭೂತಿಯೆನ್ನುವುದು ಒಬ್ಬ ವ್ಯಕ್ತಿ ತನಗಾಗಿರುವ ನೋವುಗಳನ್ನು ಅನುಭವಿಸುವಾಗ ಉಂಟಾಗಬಹುದಾದ ಭಾವನೆಗಳನ್ನು ಅವರ ಸ್ಥಾನದಲ್ಲಿ ನಿಂತು ಅನುಭವಿಸುವ ಹಾಗೂ ಅದನ್ನು ಮತ್ತೊಬ್ಬರ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ”. ಇದರಿಂದ ಏಕಕಾಲದಲ್ಲಿ ಹಲವು ಸಂವೇದನೆಗಳನ್ನು ಅನುಭವಿಸಿ, ನಿಭಾಯಿಸಲು ಸಾಧ್ಯವಾಗುತ್ತದೆ. ಜೊತೆಗೆ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಇತರರ ಸಂವೇದನೆಗಳಿಗೆ ಸ್ಪಂದಿಸಲು ಅನುವಾಗುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಒಂದು ಸಹನಶೀಲ ಸಮಾಜ, ಬಲಿಷ್ಠ ಪ್ರಜಾಪ್ರಭುತ್ವ ಸೃಷ್ಟಿಯಾಗಲು ಸಾಧ್ಯವಾಗುತ್ತದೆ.

ಮೂರನೆಯದಾಗಿ “ವಿಮರ್ಶಾತ್ಮಕ ಆಲೋಚನೆ”:- ಚೀನಾ ತತ್ವಜ್ಞಾನಿ ಕನ್ಫ್ಯೂಶಿಯಸ್ ಹೇಳುವಂತೆ “ಚಿಂತನೆಯಿಲ್ಲದ ಅಧ್ಯಯನ ವ್ಯರ್ಥ ಕಾಲಹರಣ, ಅಧ್ಯಯನವಿಲ್ಲದ ಚಿಂತನೆ ಅಪಾಯಕಾರಿ”. “ವಸ್ತುನಿಷ್ಠವಾಗಿ ಅನುಭವಗಳನ್ನು ಹಾಗೂ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವೇ ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯ”. ಇದರಿಂದ ವ್ಯಕ್ತಿಯಲ್ಲಿನ ನಡವಳಿಕೆ, ಮನೋಭಾವ, ದೃಷ್ಟಿಕೋನದ ಜೊತೆಜೊತೆಗೆ ವಿಮರ್ಶಾತ್ಮಕವಾಗಿ ಆಲೋಚಿಸುವ ಅದರ ಉಪಕೌಶಲಗಳಾದ ಸಂವಹನ ಕೌಶಲ, ವಿಶ್ಲೇಷಣಾ ಕೌಶಲ, ಸೃಜನಶೀಲತೆ, ತನ್ನೊಳಗೆ ಚಿಂತನಾತ್ಮಕವಾಗಿ ನೋಡಿಕೊಳ್ಳುವ ಸಾಮರ್ಥ್ಯ ಉತ್ತಮವಾಗುತ್ತದೆ. ಇವುಗಳನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡಾಗ ಎದುರಾಗುವ ಜಗತ್ತಿನ ಸಂದರ್ಭಗಳಲ್ಲಿ ನಡೆಯುವ ಕ್ರಿಯೆ ಹಾಗೂ ಆಲೋಚನೆಗಳನ್ನು ತುಲನೆ ಮಾಡಿ ತರ್ಕಬದ್ಧ ಅರ್ಥ ಕಂಡುಕೊಳ್ಳಲು ನೆರವಾಗುತ್ತದೆ.

ನಾಲ್ಕನೆಯದಾಗಿ “ಸೃಜನಶೀಲ ಆಲೋಚನೆ”:- ಬಟ್ರಾಂಡ್ ರಸೆಲ್ ಈ ರೀತಿ ಹೇಳುತ್ತಾರೆ. “ಕುತೂಹಲವೆಂಬುದು ಬೌದ್ಧಿಕ ಬದುಕಿನ ಸಹಜ ನೆಲೆಗಟ್ಟಾಗಿದೆ” ಕುತೂಹಲದ ಹಿಂದೆ ಸೃಜನಶೀಲತೆ ಹೆಜ್ಜೆಹಾಕುತ್ತದೆ. “ಯಾವುದೇ ಒಂದು ಸಮಸ್ಯೆ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿ ವಿವಿಧ ಆಯಾಮಗಳಿಂದ ಆ ವಿಷಯಗಳನ್ನು ಗಮನಿಸಿ ವಿಭಿನ್ನವಾಗಿ ಆಲೋಚನೆ ಮಾಡುವ ಮೂಲಕ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸುವ ಕೌಶಲವೇ ಸೃಜನಶೀಲತೆ. ಅಬ್ದುಲ್ ಕಲಾಂ ರ ನುಡಿಯಂತೆ ಯುವಜನತೆಯಲ್ಲಿ ಸಾಹಸ ಪ್ರವೃತ್ತಿಯನ್ನು ಉದ್ದೀಪಿಸಬೇಕು, ಪ್ರಶ್ನೆ ಮಾಡುವ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸೃಜನಶೀಲತೆಯು ಸಮಯದ ಸದುಪಯೋಗದೊಂದಿಗೆ ಕ್ರಿಯಾಶೀಲ ಆಲೋಚನೆಯನ್ನು ವೃದ್ಧಿಸುತ್ತದೆ.

ಐದನೆಯದಾಗಿ “ನಿರ್ಧಾರ ಮಾಡುವ ಸಾಮರ್ಥ್ಯ”:- ನಮ್ಮ ಬದುಕಿನಲ್ಲಿ ನಾವು ಸಮಯಕ್ಕೆ ಸೂಕ್ತವಾದ, ಎಲ್ಲಾ ಸಾಧಕ -ಬಾಧಕಗಳನ್ನು ಗುರುತಿಸಲಾದ ಹಾಗೂ ಸಮಂಜಸವಾದ ನಿರ್ಧಾರ ಮಾಡುವ ಸಾಮರ್ಥ್ಯ ಬಹಳ ಮುಖ್ಯವಾದುದು. ಇದರಿಂದ ರಚನಾತ್ಮಕ ನಿರ್ಧಾರ ಸಾಧ್ಯವಾಗಿ ನಮ್ಮ ದಾರಿಯು ಸ್ಪಷ್ಟವಾಗಿ ಬದುಕಿನ ಬದ್ಧತೆ ಹಾಗೂ ನಿರ್ಧಾರಗಳೂ ಸ್ಪಷ್ಟವಾಗಿತ್ತವೆ. ನಮ್ಮ ಬದುಕಿನ ಪ್ರತಿ ಹಂತದಲ್ಲೂ ನಮಗೆ ನಿರ್ಧಾರ ಮಾಡುವ ಕೌಶಲ ಉಪಕಾರಿ. ಯುನಿಸೆಫ್ (ನಮೀಬಿಯ) ನಿರ್ಧಾರದ ಹಂತಗಳನ್ನು ಈ ರೀತಿ ಗುರುತಿಸಿದೆ. “ಯಾವುದೇ ಸಮಸ್ಯೆಯನ್ನು ಮೊದಲು ಅರ್ಥಮಾಡಿಕೊಂಡು, ಆಯ್ಕೆಗಳನ್ನು ಗುರುತಿಸಿ, ತುಲನೆ ಮಾಡಿ ನಂತರ ಸರಿಯಾದ ನಿರ್ಧಾರ ಮಾಡಿ ಅನುಷ್ಠಾನಗೊಳಿಸಬೇಕಾಗುತ್ತದೆ.

“ಸಮಸ್ಯೆ ಪರಿಹರಿಸುವಿಕೆ”:- ಇದೊಂದು ಸಂಕೀರ್ಣ ವಿಷಯವಾಗಿದ್ದು ಬದುಕಿನ ಹಲವಾರು ಸಮಸ್ಯೆಗಳಿಗೆ ಈ ಸಾಮರ್ಥ್ಯವು ಸಮಾಧಾನ ನೀಡಲು ಅನುವಾಗುತ್ತದೆ. ಒತ್ತಡದ ದಿನಗಳಲ್ಲಿ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆಹೋದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಮಸ್ಯೆಗಳನ್ನು ಗುರುತಿಸಿಕೊಂಡು, ಆಯ್ಕೆಗಳನ್ನು ಆದ್ಯತೀಕರಿಸಿ ಸರಿಯಾಗಿ ಕಾರ್ಯಗತಗೊಳಿಸಿದ ನಂತರ ಅನುಸರಿಸಿದ ವಿಧಾನಗಳ ಅನುಪಾಲನೆಯಾಗಬೇಕು. ಸಮಸ್ಯೆಗಳೇ ಎಲ್ಲಾ ರೋಗಗಳ ಮೂಲವಾದ್ದರಿಂದ ಅವುಗಳನ್ನು ಚಿಗುರಲು ಬಿಡದೆ ಅಲ್ಪದಲ್ಲೇ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

“ಪರಿಣಾಮಕಾರಿ ಸಂವಹನ”:- ಮಾಹಿತಿಯ ಪರಸ್ಪರ ಹಂಚಿಕೆಯೇ ಸಂವಹನ”. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಡನೆ ತನ್ನಲ್ಲಿನ ಮಾಹಿತಿ, ಅನುಭವ, ವಿಷಯ ಮುಂತಾದವನ್ನು ಹಂಚಿಕೊಳ್ಳುವಂತಹ ಅರ್ಥಗರ್ಭಿತ ಪ್ರಕ್ರಿಯೆಯಾಗಿರುತ್ತದೆ. ಇದು ವೈಯಕ್ತಿಕವೂ ಇರಬಹುದು ಅಥವಾ ಸಾರ್ವಜನಿಕವಾಗಿಯೂ ಇರಬಹುದು. ವ್ಯಕ್ತಿ -ವ್ಯಕ್ತಿ /ವ್ಯಕ್ತಿ – ಗುಂಪುಗಳ ನಡುವೆ ನಡೆಯುವ ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಯೂ ಹೌದು. ಇನ್ನು ಸಂವಹನ ಎನ್ನುವುದು ಮೌಖಿಕವಾಗಿಯೂ, ಲಿಖಿತವಾಗಿಯೂ, ವಿದ್ಯುನ್ಮಾನ ಮಾಧ್ಯಮದ ಮೂಲಕವೂ ಹಾಗೂ ಅಂಗಿಕ ಭಾಷೆಯ ಮುಖಾಂತರವೂ ನಡೆಯಬಹುದು. ಜೀವನದಲ್ಲಿ ನಾವು ಉತ್ತಮ ಸಂವಹನ ಕೌಶಲ್ಯವನ್ನು ರೂಢಿಸಿಕೊಂಡರೆ ಅರ್ಧ ಸಮಸ್ಯೆಯನ್ನು ಗೆದ್ದಂತೆ. ನಮ್ಮ ದಿನಚರಿಯು ಸಂವಹನದಿಂದಲೇ ಆರಂಭವಾಗುತ್ತದೆ. ಮನೆಗಳಲ್ಲಿ, ಶಾಲೆಗಳಲ್ಲಿ, ವೃತ್ತಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಂವಹನಕ್ಕೆ ಮಹತ್ವದ ಸ್ಥಾನವಿದೆ. ಉತ್ತಮ ಸಂವಹನದಿಂದ ಸಮಸ್ಯೆಗಳನ್ನು ಬಹಳ ಸುಲಭವಾಗಿ ಹಾಗೂ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು.

“ಅಂತರ್ ವ್ಯಕ್ತಿ ಸಂಬಂಧಗಳು”:- ಮನುಷ್ಯ ಸಂಘಜೀವಿಯಾಗಿದ್ದು ಸಮಾಜಮುಖಿಯಾಗಿ ಬದುಕಬೇಕಾಗಿರುವುದರಿಂದ ಸಮುದಾಯದೊಳಗೆ ಪರಸ್ಪರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಂತರ್ ವ್ಯಕ್ತಿ ಸಂಬಂಧ ಹೊಂದುವುದು ಅಗತ್ಯವಾಗಿದೆ. ಮನುಷ್ಯ ತನ್ನ ಸಹಜೀವಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಆಗ ಬದುಕು ಸುಗಮವಾಗುತ್ತದೆ. ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ವ್ಯಕ್ತಿ ಅವಿನಾಭಾವ ಸಂಬಂಧವಿರಿಸಿಕೊಳ್ಳಬೇಕಾಗುತ್ತದೆ. ಇದರಿಂದ ವ್ಯಕ್ತಿಗಳಲ್ಲಿ ನಾಯಕತ್ವ ಗುಣವು ಬೆಳೆದು, ಗುಂಪುಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮೂಡುತ್ತದೆ. ವ್ಯಕ್ತಿ ಅನುಭವಗಳ ಮೂಲಕ ಪರಿಣತಿಯನ್ನು ಪಡೆಯುತ್ತಾ ಸಾಗುತ್ತಾನೆ. ವ್ಯಕ್ತಿಯ ಮನೋಭಾವ ಸಂಕುಚಿತತೆಯಿಂದ ವಿಶಾಲ ಪಥದತ್ತ ಹಾಯುತ್ತದೆ.

“ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ”:- ಜೀವಿಗಳಲ್ಲೆಲ್ಲ ವಿವೇಕವಂತ ಮನುಷ್ಯ. ಆದರೆ ಕೆಲವೊಮ್ಮೆ ಮನುಷ್ಯನ ಈ ಗುಣದಿಂದಲೇ ತನ್ನ ಬದುಕಿನಲ್ಲಿ ಒತ್ತಡವನ್ನು ತಂದುಕೊಳ್ಳುತ್ತಿದ್ದಾನೆ. ಒತ್ತಡವು ಮನುಷ್ಯನ ಆಯಸ್ಸನ್ನು ಇಂಚಿಂಚು ಕಡಿಮೆ ಮಾಡುತ್ತ ಹೋಗುತ್ತದೆ. ಇದು ಮನುಷ್ಯನನ್ನು ಅವನತಿಯ ಅಂಚಿಗೆ ಕರೆದೊಯ್ಯುತ್ತದೆ.. ಸಹನೆ, ತಾಳ್ಮೆಯಿಂದ ವರ್ತಿಸಿದಾಗ ಮಾತ್ರ ನಾವು ಒತ್ತಡದಿಂದ ಪಾರಾಗಬಹುದು. “ಅತ್ಯುತ್ತಮವಾದುದನ್ನು ಬಯಸಿ.ಅದಕ್ಕಾಗಿ ದುಡಿಯಿರಿ ಸಮೃದ್ಧ ಫಸಲನ್ನು ಪಡೆಯಿರಿ” ಎಂಬ ಉಕ್ತಿಯಂತೆ ನಾವು ಯಾವಾಗಲೂ ಸಕಾರಾತ್ಮಕವಾದ ಹಾಗೂ ಆರೋಗ್ಯಕರವಾದ ಒತ್ತಡವನ್ನು ಸ್ವೀಕರಿಸಬೇಕು. ಆಗ ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಸ್ಫೂರ್ತಿ ದೊರೆಯುತ್ತದೆ. “ಬಾಯಿ ಚಪಲವೆಂದು ಅತಿ ಬಲಿತ ಕಾಯಿಯನ್ನು ಇಂದೇ ತಿಂದು, ನಾಳೆ ಹಣ್ಣು ತಿನ್ನುವ ಅವಕಾಶವನ್ನು ಕಳೆದುಕೊಳ್ಳುವುದು ಮೂರ್ಖ ಲೆಕ್ಕಾಚಾರ”. ಹಾಗಾಗಿ ನಾವು ಎಂದಿಗೂ ನಕಾರಾತ್ಮಕವಾದ ಹಾಗೂ ಅನಾರೋಗ್ಯಕರ ಒತ್ತಡಗಳನ್ನು ಆಹ್ವಾನಿಸದಿರುವುದು ಒಳಿತು. ಇದರಿಂದ ಸಮಸ್ಯೆಯ ಕೂಪದಲ್ಲೇ ಸಿಲುಕಬೇಕಾಗಿಬರಬಹುದು. ಒತ್ತಡದಿಂದ ದೈಹಿಕ ಹಾಗೂ ಮಾನಸಿಕ ಎರಡೂ ರೀತಿಯ ಹಾನಿ ಉಂಟಾಗುವ ಕಾರಣ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಸಕಾರಾತ್ಮಕ ಚಿಂತನೆ ಮಾಡುವುದು ಮುಂತಾದವನ್ನೂ ಅಳವಡಿಸಿಕೊಳ್ಳಬೇಕಿದೆ. “ಅಭ್ಯಾಸಗಳು ಬದುಕಿನ ಪರಿಧಿಯನ್ನು ನಿರ್ಧರಿಸಿದರೆ ಹವ್ಯಾಸಗಳು ಜೀವನದ ಅಮೂಲ್ಯ ರತ್ನಗಳು” ಎಂಬ ಮಾತಿನಂತೆ ಉತ್ತಮ ಹವ್ಯಾಸಗಳಿಂದ ನಾವು ಒತ್ತಡಗಳಿಂದ ಮುಕ್ತಿಹೊಂದಲು ಸಾಧ್ಯವಿದೆ. ಒತ್ತಡದ ಪರಿಮಾಣಕ್ಕಿಂತ ಒತ್ತಡದ ನಿರ್ವಹಣೆಯೇ ಮುಖ್ಯವಾಗಿರುತ್ತದೆ.

“ಸಂವೇದನೆಗಳ ನಿರ್ವಹಣೆ”:- ಮನುಷ್ಯನಲ್ಲಿ ಭಯ, ಸಿಟ್ಟು ಬೇಸರ, ಸಂತಸ, ಸಂತೃಪ್ತಿಯಂತಹ ಸಂವೇದನೆಗಳು ಪರಿಸ್ಥಿತಿಗೆ ತಕ್ಕಂತೆ ಮೂಡುತ್ತವೆ. ಅವುಗಳ ಸರಿಯಾದ ನಿರ್ವಹಣೆಯಿಂದ ಉತ್ತಮ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು. ಸಂವೇದನೆಗಳನ್ನು ನಿಭಾಯಿಸಲು ದೀರ್ಘಕಾಲ ವಿಫಲರಾದಲ್ಲಿ ವ್ಯಕ್ತಿ ಮಾನಸಿಕ ಸಮಸ್ಯೆಗೆ ತುತ್ತಾಗುವ ಸಂಭವವಿರುತ್ತದೆ. ಇಂದಿನ ಯುವಜನಾಂಗವಂತೂ ಅತಿವೇಗವಾಗಿ ಸಂವೇಗಗಳಿಗೆ ಒಳಗಾಗುತ್ತಾರೆ. ಕೊನೆಗೊಮ್ಮೆ ಇವು ಅತಿರೇಕಕ್ಕೂ ತಲುಪಿ ಅದೆಷ್ಟೋ ಜೀವನಗಳು ಬಲಿಯಾಗುವ ಅಪಾಯವು ಇದೆ.

ಜೀವನ ಕೌಶಲವು ಪ್ರತಿಯೊಬ್ಬರಿಗೂ ಅಗತ್ಯವಿರುವ ಬಹುಮುಖ್ಯ ಕೌಶಲ್ಯ. ನಾವು ಇದನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲೂ ಬೆಳೆಸಿದರೆ ಅವರು ಪ್ರೌಢರಾಗುವ ವೇಳೆಗೆ ತಮಗೆ ಎದುರಾಗುವ ಸಮಸ್ಯೆಗಳನ್ನು ತಾವೇ ನಿಭಾಯಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಅವರು ಬೆಳೆದು ದೊಡ್ಡವರಾದಾಗ ಹೊರಜಗತ್ತಿನಲ್ಲಿ ಎದುರಾಗುವ ಸಮಸ್ಯೆ, ಸಂಘರ್ಷ, ಸಂಬಂಧಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
“Learning gives creativity
Creativity leads to thinking
Thinking provides knowledge
Knowledge makes you great”

ಎಂಬ ಅಬ್ದುಲ್ ಕಲಾಂ ರ ಮಾತಿನಂತೆ ಕಲಿಕೆಯಿಂದ ಸೃಜನಶೀಲತೆ, ಸೃಜನಶೀಲತೆಯಿಂದ ಚಿಂತನೆ, ಚಿಂತನೆಯಿಂದ ಜ್ಞಾನ ದೊರೆಯುತ್ತದೆ ಮತ್ತು ಜ್ಞಾನವು ವ್ಯಕ್ತಿಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ನಾವು ಪುಸ್ತಕ ಜ್ಞಾನಕ್ಕಿಂತ ಮುಖ್ಯವಾಗಿ ಜೀವನ ಜ್ಞಾನವನ್ನು ಹೊಂದಬೇಕಾಗಿರುತ್ತದೆ. ಭವಿಷ್ಯದ ಸದೃಢ ಸಮಾಜದ ಸ್ವಾಸ್ಥ್ಯಕ್ಕಾಗಿ ಜೀವನ ಕೌಶಲ್ಯಗಳ ಜ್ಞಾನ ಅತ್ಯಗತ್ಯವಾಗಿದೆ. ಇಂತಹ ಜೀವನ ಕೌಶಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಅಮೂಲ್ಯವಾದ ಜೀವನವನ್ನು ಸಮರ್ಥವಾಗಿ ಮುನ್ನಡೆಸಿ ಬದುಕಿನ ಸಾರ್ಥಕತೆಯನ್ನು ಮೆರೆಯೋಣ…

-ತೇಜಾವತಿ ಹುಳಿಯಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Dayanand
Dayanand
3 years ago

ಎಲ್ಲರಿಗೂ ಅಗತ್ಯವಾದ ಜೀವನ ಕೌಶಲಗಳ ಕುರಿತ ಲೇಖನ ಉತ್ತಮವಾಗಿದೆ.

ಬಸವರಾಜ ಐಗೋಳ
ಬಸವರಾಜ ಐಗೋಳ
2 months ago
Reply to  Dayanand

ಅತ್ಯಂತ ಶ್ರೇಷ್ಠವಾದ ಮನಮಿಡಿಯುವ ರೀತಿಯಲ್ಲಿ ಮೂಡಿಬಂದ ಅಷ್ಟೇ ಉಯುಕ್ತವಾದ ಲೇಖನ!👌🏽👌🏽👍👍

2
0
Would love your thoughts, please comment.x
()
x