ಸನ್ಯಾಸಿಯ ಮಗು: ಗಣೇಶ್ ಖರೆ

"ಅವ್ವಾ.. ಅವ್ವಾರ
ತಿನ್ನಾಕ ಒಸಿ ನೀಡ್ರೀ.. ಹೂಟ್ಟಿ ಹಸಿದೈತಿ
ಎನಾರ ಕೊಡ್ರಿ ಮನಿಗೆ ಒಳ್ಳೆದಾಕೈತಿ…" ಬೆಳಿಗ್ಗೆ ಮುಂಚಾ ಅಂಗಳದಾಗ ಅನಾಮಧೇಯ ಧ್ವನಿ ಕೇಳಾಕತ್ತಿತ್ತು.
"ಬೆಳಿಗ್ಗೆ ಆಗೋ ಪುರುಸೊತ್ತಿಲ್ಲ ಮನಿ ಬಾಗಿಲನಾಗ ಬಂದು ಬೇಡಾಕ್ ಸುರು ಆತು" ಅಂತ ಬಯ್ಕೋತ ಸೀತವ್ವ ಸಿಟ್ನಾಗ ಹೊರಗಡೆ ಮುಖಾನೂ ಹಾಕ್ದೆ ಹಿತ್ತಲಮನಿ ಕಡಿಗೆ ಹೋದ್ಲು.. 

"ಉಳದಿದ್ದು ಬಳದಿದ್ದು ಎನಾರ ನಡಿತೈತಿ, ಒಸಿ ನೀಡ್ರಿ ಹೊಟ್ಟಿ ಹಸದೈತಿ
ಕೊಡೋರಿಗೆಲ್ಲಾ ಸಿಕ್ಕಪಟ್ಟೆ ಕೊಟ್ಟೀರಿ, ದೇವ ಧರ್ಮಾ ಎಲ್ಲಾ ಮಾಡೀರಿ
ನನಗೂ ತುಸಾ ನೀಡ್ರಿ, ಕೂಸಿಲ್ಲದ ಮನೀಲಿ ವರ್ಶದಾಗ ತೊಟ್ಲಾ ತೂಗತೈತಿ.." 
ತೊಟ್ಲಾ ತೂಗತೈತಿ ಅಂದಿದ್ದೆ ತಡಾ ಜಾನಕಿ ಕಿವಿ ನೆಟ್ಟಗಾತು, ಇದ್ಬಿದ್ದ ಎಲ್ಲಾ ಕೆಲಸಾ ಬದಿಗಿಟ್ಟು ಉಳದಿದ್ದ ರೊಟ್ಟಿ ಪಲ್ಯಾ ಪತ್ರಾವಳ್ಯಾಗ ಹಾಕ್ಕಂಡು ಭರಾ ಭರಾ ಅಂಗಳದ ಕಡಿಗೆ ಹೆಜ್ಜಿ ಹಾಕಿದ್ಲು. ಅಂಗಳದಾಗ ಸುಮಾರು ೫೦ ರ ಆಸು ಪಾಸಿನ ಮನಶ್ಯಾ ಜೋಳಗಿ ಹಿಡಕಂಡು ನಿಂತಿದ್ದ. ನೋಡಿದ್ರ ಬಿಕ್ಷುಕನ ಥರಾನೂ ಇಲ್ಲ, ಉದ್ದಾನಿ ಗಡ್ಡ ಬಿಟ್ಕಂಡು ಒಳ್ಳೆ ಹಿಮಾಲಯದ ಬದಿಯಿಂದ ಬಂದ ಸಂನ್ಯಾಸಿ ಥರ ಇದ್ದ. ಹೊಟ್ಟಿ ಹಸಿದಾಂಗ ಕಾಣೋ ಯಾವ ಲಕ್ಷಣಾನೂ ಮುಖದಾಗ ಇರಲಿಲ್ಲ. ದಿವ್ಯ ತೇಜ ಅವ್ನ ಮುಖದಾಗಿತ್ತು.  ಹಂಗ ಅವ್ನ ಮುಖಾ ನೊಡ್ಕೋತ ಗರ ಬಡಿದೋರ ಥರಾ ನಿಂತಿದ್ದ ಜಾನಕಿ "ಏನವ್ವ ನೀಡಾಕಿಲ್ವಾ" ಅಂದಾಗೇ ಭೂಮಿ ಮ್ಯಾಕೆ ಬಂದಿದ್ದು. ಕೈಲಿದ್ದ ರೊಟ್ಟಿ ಪಲ್ಯಾ ಸಾಧು ಕೈಯ್ಯಾಗಿಟ್ಟು "ಯಾರಾ ತಾವು, ನಿಮ್ನಾ ಈ ಊರಾಗ ಎಲ್ಲೂ ಕಂಡಾಗಿಲ್ಲಾ. ತೊಟ್ಲಾ ತೂಗತೈತಿ ಅಂದ್ರಲ್ಲಾ ನಿಜಾನ" ಅಂದಿದ್ದಕ್ಕೆ ಸುಮ್ಮನೆ ನಕ್ಕು ಕ್ಷಣಮಾತ್ರದಾಗ ಕಣ್ಮರೆಯಾದ. ಹಂಗೆ ನಿಟ್ಟುಸಿರಾ ಬಿಟ್ಟು ಅವಾ ಹ್ವಾದ ದಾರಿನೇ ನೊಡ್ತಾ ಜಾನಕಿ ಯಾವ್ದೊ ಮಾಯದಾಗ ಕಳದುಹೊಗಿದ್ಲು. 

"ಮನ್ಯಾಗ ಇರೋ ಸಾಮಾನೆಲ್ಲಾ ಹಿಂಗಾ ಊರ ಮಂದಿಗೆ ದಾನ ಮಾಡಿ, ಗುಡ್ಸಿ ಗುಂಡಾಂತರಾ ಮಾಡೋವರ್ಗೂ ಸಮಾಧಾನಿಲ್ಲ ಇಕೀಗೆ, ಇವರಪ್ಪ ಎನ್ ಸಿಕ್ಕಾಪಟ್ಟೆ ಹೇರಿ ಕಳ್ಸಿರೊ ಥರಾ ದೇವ್ರು ದಿಂಡ್ರು ಅಂತಾ ದಾನಾ ಧರ್ಮಾ ಮಾಡಿದ್ರೂ ಇದರ ಬಸರು ಎನ್ ನಿಲ್ಲಾಂಗಿಲ್ಲಾ. ಅದ್ಯಾವ ಕೆಟ್ ಗಳಿಗ್ಯಾಗೆ ಹುಟ್ಟಿ ಈ ಮನ್ಯಾಗ ಕಾಲಿಟ್ಯವ್ವಾ ಮಹಾತಾಯಿ… ಇನ್ನಾ ಏಟೋತ್ತು ಅಂಗಳದಾಗ ಹಿಂಗಾ ನಿತ್ಕೊಂಡಿರ್ತಿ ಮನೀ ಕೆಲ್ಸಾ ರಗಡ್ ಅದಾವ್, ನಿಮ್ಮವ್ವ ಎನ್ ಬಂದ್ ಮಾಡ್ಯಾಳಾ..??" ಸೀತವ್ವ ಅತ್ಲಾಗಿಂದ ಕೂಗಾಕ ಹತ್ತಿದ್ಲು. ಈ ಅತ್ತೀ ಬಯ್ಗುಳಾ ದಿನಾ ಇದ್ದಿದ್ದೇ ಅಂತಾ ಹಂಗ ಬಿಟ್ಟ್ ಉಸರಾ ಬಿಟ್ಟು ಜಾನಕಿ ಕೊಟ್ಟಗಿ ಕಡಿಗೆ ಮುಖಾ ಮಾಡಿದ್ಲು.

*****

ಹಾವನೂರಿನ ಸುಮಾರು ನೂರು ಎಕರಿ ಜಮೀನಿನ ಜಮೀನ್ದಾರ ಕಿಟ್ಟಪ್ಪ ಜೋಗಿ. ಬಯಲು ಸೀಮಿ ಆದ್ರೂ ತುಂಗಭದ್ರಾ ನದೀ ತೀರದ್ ಜಮೀನು ಅಂದ್ರ ಬೀಜಾ ಹಾಕಿದ್ರ ಬಂಗಾರ ಬೆಳ್ಯೊ ಜಮೀನು. ಕಿಟ್ಟಪ್ಪ ಜೋಗಿ ಹೆಂಡ್ತಿ ಸೀತವ್ವ. ಈ ಜೋಡಿ ಒಂದೇ ಸಂತಾನ ಅಂದ್ರ ರಾಮನಾಥ. ಒಳ್ಳೆ ಫಲವತ್ತಾದ ಜಮೀನು, ಬಂಗಾರದಂತಾ ಬೆಳಿ, ಹೊಟ್ಟಿ ಬಟ್ಟಿಗೆನೂ ಕಮ್ಮಿ ಇಲ್ಲಾಗಿತ್ತು. ಓದಿ ಉದ್ಧಾರಾಗ್ಲಿ ಹೇಳಿ ರಾಮನಾಥಂಗೆ ಕಾಲೆಜ್ ಮಟಾ ಓದಿಸಿದ್ದ ಕಿಟ್ಟಪ್ಪ. ಇಷ್ಟಾದ್ರೂ ರಾಮನಾಥ ಕಡೀಗೆ ಮತ್ತ್ ಬಂದು ಊರ್ನಾಗೆ ಜಮೀನು ನೋಡ್ಕಂಡು ಇರಾಕಹತ್ತಿದ್ದ. ಮದ್ವಿ ವಸ್ಸಿಗೆ ಮದ್ವಿನೂ ಆತು. ಸೀತವ್ವ ಎಷ್ಟು ಹೇಳಿದ್ರೂ ನಾ ಪತ್ರಿಕಾ ಎಲ್ಲಾ ನೋಡಾಂಗಿಲ್ಲಾ ಅಂತ, ಹಂಗ ಬಡ ಮನೀ ಜಾನಕಿನ ಮದ್ವಿನೂ ಆದ. ಹಂಗಾಗಿ ಸೀತವ್ವಂಗೆ ಜಾನಕಿ ಕಂಡ್ರ ಅಷ್ಟಕಷ್ಟೆ ಆಗಿತ್ತ. ಆದ್ರ ಜಾನಕಿ ಅತ್ತೀನ ಅವ್ವನ ಥರ ನೊಡ್ಕತ್ತಿದ್ಲು. ಮಾವಂಗೆ ಒಳ್ಳೀ ಸೊಸಿಯಾಗಿ, ಗಂಡಗೆ ತಕ್ಕ ಹೆಂಡ್ತಿ ಆಗಿ ಅತ್ತಿ ಮಾತ್ನ ಹೊಟ್ಟ್ಯಾಗ ಹಾಕ್ಕಂಡು ಚಲೊತ್ನಾಗ ಮನೀ ನಡಸ್ಕಂಡು ಹೋಗತಿದ್ಲು. ಮದ್ವಿ ಆಗಿ ಎಂಟು ವರ್ಷ ಆದ್ರೂ ಜಾನಕಿ ಮಡಿಲು ತುಂಬಿರಲಿಲ್ಲ. ಅದೂ ಇದೂ, ಓಶಧಿ ಉಪಚಾರ ಎಲ್ಲಾ ಮಾಡಿದ್ರೂ ಎನೂ ಉಪಯೋಗ ಇಲ್ಲಾತು. ಇದ್ದ ಬದ್ದ ಎಲ್ಲಾ ಹರಕಿನೂ ಆತು. ಮಗಾ ಇಲ್ಲಾ ಅನ್ನೊ ಚಿಂತಿ, ಜೊತ್ಯಾಗ ಅತ್ತೀ ಬಯ್ಗುಳದಾಗ ಜಾನಕಿ ಥಂಡಾಗಿದ್ಲು. 

"ಆಗೋ ಕಾಲಕ್ಕೆ ಎಲ್ಲಾ ಆಗತೈತಿ ನೀ ಯಾಕ್ ಆ ಮಗೀಗೆ ಸುಮ್ ಸುಮ್ನಾ ತ್ರಾಸ್ ಕೊಡ್ತಿ" ಅಂತಾ ಕಿಟ್ಟಪ್ಪ ಸೀತವ್ವಂಗೆ ಬಯ್ತಾ "ನೀ ಇಕಿ ಮಾತ್ನ ಮನ್ಸಿಗೆ ಹಚ್ಕಾಳಕೆ ಹೊಗಬ್ಯಾಡಾ, ದೇವ್ರು ಅವ್ನೆ ಅವಾ ಎಲ್ಲಾ ನೋಡ್ಕಾತಾನೆ" ಅಂತಾ ಸೊಸಿಗೆ ಸಮಾಧಾನ ಮಾಡಿದ್ದ. "ನಾ ಇನ್ಮುಂದಾ ಮಾತಾಡಂಗೆ ಇಲ್ಲಾ, ನಾ ಮಾತಾಡಿದ್ರೆ ಎಲ್ಲಾರಗೂ ಚುಚ್ತೈತಿ. ಇದ್ದದ್ದು ಇದ್ದಾಂಗ್ ಹೇಳಿದ್ರ ಎಲ್ಲಾ ನನ್ ಮ್ಯಾಕೆ ಬಯ್ರಿ. ನಾ ಹೇಳಿದ್ದ ಮಾತಾ ಯಾರ್ ಕೇಳ್ತಾರ?? ಮದ್ವಿ ಮಾಡಬೇಕಾರ ಹೇಳಿದ್ನಿ, ಹುಡ್ಗಿ ರಾಶಿ ನಕ್ಷತ್ರ ನೊಡಿ ಮದ್ವಿ ಮಾಡ್ರಿ ಅಂತ… ಯಾರಾರಾ ಕೇಳಿರನೂ ಈಗಾ ಅನುಭವಿಸ್ರಿ" ಅನ್ನೊ ಮಾತು ದಿನಕ್ಕೊಮ್ಮಿಯಾದ್ರೂ ಸೀತವ್ವನ ಬಾಯಿಂದ ಬರ್ದೆ ಹೊಗಾಂಗಿಲ್ಲಾಗಿತ್ತು. ರಾಮನಾಥ ಇದ್ಯಾವ್ದು ನಂಗ ಸಂಬಂಧಾನೂ ಇಲ್ದೆ ಇರೊ ಹಂಗ ಇರ್ತಿದ್ದ. ಇದು ಎಲ್ಲಾದರ ನಡುವೆ  ಜಾನಕಿ ಮನಸ್ಸು ಒಳಗೊಳಗ ಸಾಯಾಕತ್ತಿತ್ತು. ಇವತ್ತಲ್ಲಾ ನಾಳಿಯದ್ರೂ ನನ್ ಮಡ್ಲು ತುಂಬ್ತೈತಿ ಅನ್ನೊ ಆಸೆ ಮಾತ್ರ ಇನ್ನಾ ಹಂಗೇ ಇತ್ತು.

*****

ಸಂಜಿ ಹೊತ್ತು ಗಂಟೆ ಆರಾಗಿತ್ತು, ಸೀತವ್ವ ಗದ್ದಿ ಕಡಿಗಿಂದ ಹುಲ್ ಹೊರಿ ಹೊತ್ಕಂಡು ಮನಿ ಬಾಗಲಿಗೆ ಬರೋ ಪುರುಸೊತ್ತಿಲ್ಲ ಪಕ್ಕದ್ ಮನಿ ದ್ಯಾಮವ್ವ "ಅವ್ವಾರ ಅವ್ವಾರ ಸಿಹಿ ಸುದ್ದಿ ಐತಿ,ಸಣ್ಣ್ ಅವ್ವಾರಿಗ್ ಮೂರ್ ತಿಂಗಳಾ. ಅಂತೂ ದೇವರು ಕಣ್ಣ್ ಬಿಟ್ಟಾನ ನೋಡ್ರಿ ಅವ್ವಾರ ಮಡಿಲು ತುಂಬೈತಿ"ಅಂತ ಓಂದೆ ಉಸರಿನಾಗ ಒದರಿ ಮನಿ ದಾರಿ ಹಿಡದ್ಲು. "ಇನ್ನಾ ಈ ದ್ಯಾಮವ್ವ ಈಡೀ ಊರಾಗ ಡಂಗುರಾ ಸಾರಾಕ್ಯೆ" ಅನ್ಕೋತ ಸೀತವ್ವ ಭರಾ ಭರಾ ಕೈ ಕಾಲು ಮುಖಾ ತೊಕ್ಕೊಂಡು ಸೀದಾ ಒಳಗೆ ನಡದ್ಲು. ಸೀತವ್ವ ಬಂದಿದ್ದ ನೋಡೀ ಜಾನಕಿ ಮುಖದಾಗ ನಗು ತುಸಾ ಕಮ್ಮಿ ಆತು. "ದೇವ್ರಿಗೆ ತುಪ್ಪದ್ ದೀಪಾ ಹಚ್ಚೀನ ಇಲ್ಲಾ??" ಅನ್ನೊ ಅತ್ತಿ ಮಾತ್ ಕೇಳಿ ಜಾನಕಿ ತುಸಾ ಗಡಬಡಿಸಿ "ಹೂಂ ರಿ" ಅಂದ್ಲು. "ತುಸಾ ಕಾಳಜಿ ತಗೊ" ಅಂತ ಹೇಳಿ ಅಕಿ ಉತ್ತರಾನೂ ಕೇಳದೆ ಅಡಗಿ ಮನಿ ಕಡಿಗೆ ನಡದಿದ್ಲು ಸೀತವ್ವ. ಕಿಟ್ಟಪ್ಪ ಜೋಗಿಗೆ ಎಲ್ಲಿಲ್ಲದ್ ಖುಶಿ, ಬಾಳ್ ವರ್ಶದ ನಂತರಾ ಮನ್ಯಾಗ ಕೂಸ್ ಹುಟ್ಟೊ ಸಡಗರಾ."ಅಂತೂ ಈ ಮನ್ಯಾಗ ತೊಟ್ಲಾ ತೂಗತೈತಿ ಅಂತಾತು, ವಸಿ ಜೋಪಾನ ಆಗಿರು. ನೀರೆತ್ತುದು, ಕೊಟ್ಟಿಗಿ ಕೆಲ್ಸಾ ಇನ್ನಾ ಮಾಡಾಕ್ ಹೊಗ್ ಬ್ಯಾಡಾ.ಮೊದಲ ಬಸುರು ಕಾಳಜಿ ತಗೊಬೇಕು. ನಿನ್ ಗಂಡಂಗೆ ತುಸಾ ಲಕ್ಷಾ ಕೊಡಾಕ ಹೇಳು" ಅನ್ನೊ ಕಿಟ್ಟಪ್ಪನ ಮಾತಿಗೆ ಸುಮ್ನಾ ತಲಿ ಆಡ್ಸಿ ಜಾನಕಿ ಸಮ್ಮತಿ ನೀಡಿದ್ಲು. "ತುಸಾ ಸೊಸಿ ಕಾಳಜಿ ತಗೊ, ಚೊಚ್ಚಲ್ ಬಸುರು ಏನೆನು ಬಯಕಿ ಕೇಳಿ ಮಾಡ್ಕೊಡು. ಉಡಿ ತುಂಬೊ ಕಾರ್ಯಾ ಬ್ಯಾಗಾ ಮುಗಸ್ಬುಡು" ಅಂತಾ ಹೆಂಡ್ತಿಗೆ ಅಪ್ಪಣೆನೂ ಆತು. ಜಾನಕಿಗ ಸ್ವರ್ಗಕ್ಕ ಮೂರೆ ಗೇಣು ಅನ್ನಷ್ಟು ಖುಶಿ. ಆ ಖುಶ್ಯಾಗ ಅಕಿ ಎಲ್ಲಾ ದುಃಖ ಮರತಿದ್ಲು. 

ಆ ಸನ್ಯಾಸಿ ಮನಿ ಕಡೀಗೆ ಬಂದ್ ಹೋಗಿ ಸುಮಾರು ನಾಕೈದು ತಿಂಗಳಾ ಆಗಿತ್ತ.ಅವಾ ಬಂದ್ ಹೋಗಿದ್ದು ಯಾರ ಜಪ್ತಿನಾಗೂ ಇರಲಿಲ್ಲ. ಆದರ ಜಾನಕಿ ಮಾತ್ರ ಅವನ್ನ ಮರತಿರಲಿಲ್ಲ. ರಾತ್ರಿ ಗಂಡನ ಜೋತಿ ಮಲಗಿ ಮಾತಾಡಕತ್ತಿದ್ಲು " ಆ ಸಾಧು ಬಂದೊಗಿ ಸುಮಾರ್ ನಾಲ್ಕೈದು ತಿಂಗ್ಳಾ ಆಗೈತಿ, ಅವಾ ಹೇಳಿದ್ದು ಖರಾ ಆತು. ಅವಾ ಬರೀ ಸಾಧು ಅಲ್ಲಾ, ಅವಂಗ ಎಲ್ಲಾ ಗೊತ್ತೈತಿ ಹೌದಲ್ಲೊ?? ನಿಮ್ಗ ಎನ್ ಅನಸ್ತೈತಿ.." ಅನ್ನೊ ಜಾನಕಿ ಮಾತಿಗೆ "ಯಾರೊ ಬರ್ತಾ ಇರ್ತಾರ್ ಹೊಗ್ತಾ ಇರ್ತಾರ, ಎಲ್ಲಾರ್ ಮಾತು ಖರಾ ಆಗಿತ್ತಂದ್ರ ಯಾವಾಗೊ ಮಕ್ಕಳು ಆಗ್ತಿತ್ತು. ಎಲ್ಲಾ ಬಂದು ದುಡ್ಡ್ ಕಿತ್ಕೊಂಡು ಹೊಗ್ತಾರ್ ಆಟೆಯಾ. ನೀ ಅವೆಲ್ಲಾ ಮನಸಿಗೆ ಹಚ್ಕೊಂಡು ಕೊರಗಾಕ ಹೊಗಬ್ಯಾಡ, ಸುಮ್ನಾ ಮಲಗು ರಾತ್ರಿ ಜಾಸ್ತಿ ಜಾಗರಣಿ ಮಾಡಿ ಆರೊಗ್ಯ ಹಾಳ್ ಮಾಡ್ಕೊಬ್ಯಾಡ" ಅಂತ ಮುಖಾ ತಿರಗಿಸಿ ಸುಮ್ನಾದ. ಆದರ ಜಾನಕಿ ಮನಸನ್ಯಾಗ ಆ ಸಾಧು ಬಗ್ಗಿ ವಿಶೇಷ ಕಾಳಜಿ ಇತ್ತು. ಇದೇ ವಿಚಾರ ಮಾಡ್ತಾ ಆಕಿಗೆ ಯಾವಾಗ ನಿದ್ದಿ ಹತ್ತತೊ ಗೊತ್ತಾಗಿಲ್ಲ.

*****

"ಅವ್ವಾ ಅವ್ವಾರ ತುಸಾ ಉಣ್ಣಾಕ ನೀಡ್ರಿ
ತೊಟ್ಲಾ ತೂಗತೈತಿ, ಮನ್ಯಾಗ ಲಕ್ಷ್ಮಿ ಬರತಾಳ
ಉಣ್ಣಾಕ ನೀಡ್ರಿ ಹೊಟ್ಟಿ ಹಸದೈತಿ… "
ಅದೇ ದನಿ, ಅದೇ ಕೂಗು. ದೇವರ ದ್ಯಾನ ಮಾಡ್ಕೊತ ಕೂತಿದ್ದ ಜಾನಕಿಗೆ ಒಮ್ಮಿಗೆ ಎಚ್ಚರಾತು. ಕನಸೋ, ನನಸೋ ತಿಳಿದಾ ಭರಾ ಭರಾ ಎದ್ದು ಮನಿ ಬಾಗಲಿಗ ಬಂದ್ರ ಎದರಿಗೆ ಅದೇ ಸಾಧು ನಿಂತಿದ್ದ. ಖುಶ್ಯಾಗ ಒಳಗೋಗಿ ಗಂಡ ತನಗಾ ಅಂತ ತಂದಿದ್ದ ಹಣ್ಣು, ಅದು ಇದು ಅಂತ  ಒಂದಿಷ್ಟು ಬಟ್ಟಲದಾಗ ತುಂಬಕೊಂಡು ಸೀದಾ ಸನ್ಯಾಸಿ ಎದ್ರಿಗೆ ನಿಂತು ಕೈ ಮುಂದ್ ಮಾಡಿ ನೀಡಾಕ್ ಹೋದ್ಲು.. "ಇವೆಲ್ಲಾ ನನಗ್ ಬ್ಯಾಡಾ, ನಿನಗ ಈಗ ಇದರ ಅವಶ್ಯಕತಿ ಅದಾ," ಅಂತ ಒಂದು ಹಣ್ಣು ಎತ್ಕೊಂಡು "ಎಷ್ಟ್ ತಿಂಗಳವ್ವಾ ತಾಯಿ..?" ಅಂದ. "ಆರ್ ತಿಂಗಳಾ ಸ್ವಾಮೆರಾ… ಅಲ್ಲಾ ಅವತ್ತು ಹಂಗಾ ಮಾಯಾ ಆಗ್ಬುಟ್ರಿ. ಈಗ ಮತ್ತ ಬಂದೀರಾ… ಲಕ್ಷ್ಮಿ ಬರತಾಳ ಅಂತೀರಾ, ಹೆಣ್ ಮಗಾ ಆಗತೈತಾ…??" ಅನ್ನೊ ಮಾತಿಗ ಮತ್ತ್ ತುಸಾ ನಕ್ಕು "ಎಲ್ಲಾ ಒಳ್ಳೆದಾಕೈತಿ ಎನೂ ಚಿಂತಿ ಮಾಡಬ್ಯಾಡಾ ತಾಯಿ" ಅಂತ ಹಂಗಾ ನಡದೇಬುಟ್ಟಾ. "ಯಾರ್ ಅದಾನ ಇವಾ..?? ಒಮ್ಮಿಗೇ ಬರತಾನ ಹಂಗಾ ಮಾಯ ಆಗತಾನ… ನಂಗೂ ಇವಂಗೂ ಎನ್ ನಂಟ ಅದ..ಯಾವ ಜನ್ಮದಾಗ ಎನ್ ಆಗಿದ್ನೊ ಎನೋ??" ಅಂತಾ ಯೊಚನೆ ಮಾಡ್ತಾ ಹಂಗ ಮನಿ ಒಳಗ ನಡದ್ಲು ಜಾನಕಿ.

ಜಾನಕಿಗ ಆರ್ ತುಂಬಿ ಏಳಕ್ಕೆ ಬಿದ್ದಿತ್ತು. ಮಾವ, ಗಂಡನ ಆರೈಕ್ಯಾಗ ಯಾವದಕ್ಕೂ ಕಮ್ಮಿ ಇಲ್ಲಾಗಿತ್ತು. ಖುಶ್ಯಾಗ ನಾಕ್ ಮಾತು ಆಡದಿದ್ರೂ ಅತ್ತೀ ಬೈಗುಳ ಕಮ್ಮಿಯಾಗಿತ್ತು. ಹೊತ್ತ್ ಹೊತ್ತಿಗೆ ಊಟಾ, ಹಣ್ಣು ಹಂಪಲಾ, ಅಂಟಿನ ಉಂಡಿ ಎಲ್ಲಾ ತಿನ್ಕೊತ ದೇವರ ದ್ಯಾನ ಅನ್ಕೊತ ಆರಾಮಾಗಿ ಕಾಲ ಕಳಿತಿದ್ಲು ಜಾನಕಿ. 
ಗಂಡನೂ ಮನಿ ಕಡಿಗೆ ಇದ್ದು ಜಾನಕಿ ಕಾಳಜಿ ತಗೊತಿದ್ದ. ಸಾನೆ ವರ್ಶದಾಗ ಮನ್ಯಾಗ ಮಗಾ ಬಾಣಂತಿ ಆಗ್ಯಾಳ, ಅವಳಿಗೆ ಬೇಕಾದ್ ಎಲ್ಲಾ ಬಟ್ಟಿ ಬರಿ, ತೊಟ್ಲಾ ಹಿಂಗ ಮುಂದಿನ ಎಲ್ಲಾ ತಯಾರಿ ಮಾಡಾಕ್ ಹತ್ತಿದ್ದ ಕಿಟ್ಟಪ್ಪ ಜೋಗಿ. "ಮಕ್ಳು ಇಲ್ದಿದ್ದ ಮನಿ ಬರೀ ಭಣಾ ಭಣಾ ಇರತೈತಿ, ಮಕ್ಳಿದ್ರೆ ಮನಿಗೊಂದು ಕಳಿ ಇರತೈತಿ. ನನಗೂ ಒಂದೇ ಮಗಾ ಅವಾಗಿಂದಾ ಮನ್ಯಾಗ ಮಕ್ಕಳ ಗೆಜ್ಜಿ ಸದ್ದಿಲ್ಲಾ.." ಅನ್ಕೊತ ಸೊಸಿ ಬಗ್ಗೆ ವಿಶೇಷ ನಿಗಾ ಇಡತಿದ್ದ.

*****

ಬೆಳಿಗ್ಗೆ ಎಂಟಾಗಿತ್ತು. ಜಾನಕಿ ಸ್ನಾನಾ ಎಲ್ಲಾ ಮುಗ್ಸಿ ದೇವರ ಮನಿ ಕಡಿ ಹೊಂಟಿದ್ಲು, ಯಾಕೋ ಹೊಟ್ಟಿ ನೋವದಂಗ ಆಗಿ ಹಂಗಾ ಹೊಟ್ಟಿ ಹಿಡಕಂಡು ಕೂತಬಿಟ್ಲು. ಆ ಹೊತ್ತಿಗೆ ಸೀತವ್ವ ಹಿತ್ಲಕಡಿಗಿಂದ ಒಳಗ ಬಂದ್ಲು. ಹೊಟ್ಟಿ ಹಿಡಕೊಂಡು ಕೂತಿದ್ದ ಜಾನಕಿ ನೋಡಿ ಎನಾತವ್ವಾ?? ಹೊಟ್ಟಿ ನೊಯಾಕತ್ತದಾ? ಮೊನ್ನಿಯಷ್ಟ ಒಂಬತ್ತು ತುಂಬದ, ಜಾಸ್ತಿ ತ್ರಾಸ್ ಮಾಡ್ಕೋಬ್ಯಾಡಾ ಅಂದ್ರಾ ಕೇಳೂದಿಲ್ಲಾ.. ಬಾಳ್ ನೊಯಾಕತ್ತದಾ ಅನ್ಕೂತ ಸೊಸಿ ಬಾಜು ಕೂತ್ಕೊಂಡು ಸಮಾಧಾನ ಮಾಡೊದಕ್ಕೂ ಕಿಟ್ಟಪ್ಪ ಗದ್ದಿ ಕಡಿ ಹೊಂಟವ ಒಳಗ್ ಬಂದಾ.. ಯಾಕವ್ವಾ ಏನಾತು ಅಂತ ಬಾಜೂಕ ಬಂದ. ಜಾನಕಿಗೆ ನೋವು ಜಾಸ್ತ್ ಆಗಿದ್ದು ನೋಡಿ ಸೀತವ್ವ "ಆಕಿಗೆ ಹೆರಗಿ ನೋವು ಸುರು ಆಗದಾ ರಾಮನಾಥನಾ ಕರೀರಿ. ಬ್ಯಾಗ್ ದವಾಖಾನಿಗೆ ಕರ್ಕೊಂಡು ಹೊಗಾಕ್ ಬೇಕು. ಬಾಜೂ ಮನಿ ದ್ಯಾಮವ್ವ, ಗಂಗವ್ವನ್ನೂ ಕರೀರಿ" ಅಂದಿದ್ದೆ ತಡಾ ಕಿಟ್ಟಪ್ಪ ಭಡಾ ಭಡಾ ಎದ್ದು "ಎಲ್ಲಿದಿಯೋ ರಾಮ್ಯಾ ಮಗೀಗೆ ಹೆರಗಿ ಬ್ಯಾನೆ ಸುರು ಆಗದಾ… " ಅನ್ಕೊತ ಹೊರಗ್ ನಡದಾ. ಐದ್ ಮಿನಿಟ್ನಾಗ ರಾಮನಾಥ, ಪಕ್ಕದ್ಮನಿ ದ್ಯಾಮವ್ವ, ಗಂಗವ್ವ, ಅವನ್ ಮಗಾ ಸೋಮ ಎಲ್ಲಾ ಒಟ್ಟಾಗಿದ್ರು. "ನಡೀರಿ ಬೇಗಾ ದವಾಖಾನಿಗೆ ಕರ್ಕೋಂಡು ಹೊಗಾಣಾ, ಗಾಡಿ ತಯಾರೈತಿ" ಅನ್ಕೋತ ರಾಮನಾಥ ಹೊಂಡಾಕ ತಯಾರಾದ. ಎಲ್ಲಾರೂ ಸೀತವ್ವನ್ನ ಎತ್ಕೊಂಡು ಗಾಡ್ಯಾಗ ಕುಂಡ್ರಿಸಿ ದವಾಖಾನಿ ಕಡಿಗೆ ಗಾಡಿ ಬಿಟ್ರು.

ಸೀತವ್ವನ್ನ ರೂಮನ್ಯಾಗ್ ಕರ್ಕೊಂಡು ಹೋಗಿ ಬಾಗಲಾ ಹಾಕ್ಕೊಂಡ್ರು ಡಾಕಟರ್ರು. ಹೊರಗ ರಾಮನಾಥ, ಕಿಟ್ಟಪ್ಪ ಜೋಗಿ, ಸೋಮ ಎಲ್ಲ ಆ ಕಡಿ ಈ ಕಡಿ ತಿರಗಕೋತ ನಿಂತಿದ್ರು. ಈ ಕಡಿ ಸೀತವ್ವ ಮನ್ಯಾಗ ದೇವ್ರಿಗೆ ತುಪ್ಪದ್ ದೀಪ ಹಚ್ಚಿ ದವಾಖಾನಿ ಕಡಿಗೆ ಮುಖಾ ಮಾಡಿದ್ಲು. ಡಾಕ್ಟರು ಹೊರಗ ಬಂದಿದ್ದೆ ತಡಾ ಎಲ್ಲಾರೂ ಅವ್ರ ಕಡಿಗೆ ಮುಖಾ ಮಾಡಿದ್ರು. "ಹೆಣ್ ಮಗಾ ಆಗೈತಿ, ಇಬ್ರೂ ಆರಾಮ್ ಇದಾರ.ಕಾಳಜಿ ಮಾಡೊದು ಎನಿಲ್ಲಾ. ಅರ್ಧಾ ತಾಸಾಗ ರೂಮನ್ಯಾಗ್ ಕರಕೊಂಡು ಬರ್ತೀವಿ ಆಗ ಭೆಟಿ ಮಾಡೀರಂತೆ" ಅಂತಾ ನಡದ್ರು. ಎಲ್ಲಾರೂ ಯಾವಾಗ್ ಮಗೀನ ನೋಡಿವೊ ಅಂತಾ ಚಡಪಡಿಸಾಕ ಹತ್ತಿದ್ರು. ಕಿಟ್ಟಪ್ಪ ಜೋಗಿ ಮಗನ್ನ ತಬ್ಕೊಂಡು ಮನಿಗೆ ಲಕ್ಷ್ಮಿ ಬಂದಾಳ ಅಂತ ಖುಶಿಪಡಾಕತ್ತಿದ್ದ. ಎಲ್ಲರ್ ಮುಖದಾಗೊ ಖುಶಿ ಎದ್ದು ಕಾಣಾಕತ್ತಿತ್ತು.

ಅರ್ಧಾ ತಾಸನಾಗ ಸೀತವ್ವನ್ನ ರೂಮನಾಗ್ ಕರ್ಕೊಂಡು ಬಂದಿದ್ರು. ಎಲ್ಲರೂ ಅವಳ ಸುತ್ತ ನಿತ್ಕೊಂಡು ಖುಶೀಲೆ ಮಾತಾಡ್ಸಾಕತ್ತಿದ್ರು. ಕಿಟ್ಟಪ್ಪ ಜೋಗಿ ಮಗೀನ ನೋಡಿ "ಥೇಟ್ ಅವ್ವನ್ ತರಾನೆ ಅದಾಳ" ಅಂತ ತಂದೇ ದ್ರುಷ್ಟಿ ಆಗೈತಿ ಅನ್ನೊ ತರ ಕೈ ಮುರ್ದು ಲಟಿಗೆ ತೆಗದಾ. ಸೀತವ್ವನೂ ಖುಶೀಲೆ ಮಗೀನೂ ಜಾನಕಿನೂ ಮುದ್ದಾಡಿ "ಇಬ್ರೂ ಲಕ್ಷ್ಮೀನೂ ಸೇರಿ ಮನಿ ಬೆಳಗ್ರವ್ವಾ" ಅಂತ ಹಾರೈಸಿದ್ಲು. ಅತ್ತಿ ಮುದ್ದು ಮಾಡಿದ್ದು ಸೀತವ್ವಂಗೆ ಎಲ್ಲಿಲ್ಲದ ಖುಶಿ ಆಗಿತ್ತು. ಎಷ್ಟೋ ವರ್ಶದ ತಪಸ್ಸಿನ ಫಲಾ ಸಿಕ್ಕ ಖುಶಿ ರಾಮನಾಥನ ಮುಖದಾಗಿತ್ತು. ತುಸಾ ಹೊತ್ತು ಎಲ್ಲಾ ಮಗಿನ ನೋಡಿ, ಸೀತವ್ವನ್ನ ಮಾತಾಡ್ಸಿ ಇಬ್ರೂ ತುಸ ಹೊತ್ತು ಆರಾಮ್ ತಗೊಳ್ಳಿ ಹೇಳಿ ಹೊರಗ್ ನಡದ್ರು. ಜಾನಕಿ ಒಮ್ಮೆ ಹಂಗಾ ಮಗು ಮುಖಾ ನೊಡಿದ್ಲು, ಯಾಕೊ ಒಮ್ಮಿಗೆ ಸಾಧು ನೆನಪಾದ. "ಹೌದು ಆ ಸನ್ಯಾಸಿ ಹೇಳಿದ್ದು ಖರೆ ಆತು, ಮನಿಗೆ ಲಕ್ಷ್ಮೀನೂ ಬಂದ್ಳು, ಅತ್ತಿ ಮನಸೂ ಬದಲಾತು..ಒಟ್ನಾಗ ಎಲ್ಲಾ ಒಳ್ಳೆದಾತು. ಎಲ್ಲಾ ಆ ಸನ್ಯಾಸಿ ಬಾಯ್ ಹರಕಿ, ಬಾಳ್ ವರ್ಶದ್ ಮ್ಯಾಗೆ ಮಗಾ ಆತು. ಯಾವ ಜನ್ಮದ ಋಣಾನೊ ಎನೊ..ಯಾರು ಎನೇ ಹೆಳಲಿ ಈ ಮಗಾ ಆ ಸನ್ಯಾಸಿ ಪ್ರಸಾದ" ಅಂತಾ ಮನಸನ್ಯಾಗೇ ಅಂದ್ಕೊಂಡ್ಳು. ಈ ಮಗು ಆ ಸನ್ಯಾಸಿ ಮಗು ಅನ್ನೊ ನಂಬಿಕೆ ಸೀತವ್ವನ ಮನಸನ್ಯಾಗೆ ಹಂಗೇ ಉಳ್ಕೊಂಡ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
prashasti.p
10 years ago

nice

gaviswamy
10 years ago

ಸುಂದರ ಭಾಷೆ , ನಿರೂಪಣೆ. ಕಥೆ ಚೆನ್ನಾಗಿದೆ .

padma
padma
10 years ago

channagaitriiii………

ವನಸುಮ
10 years ago

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Dinesh
10 years ago

ಚೆನ್ನಾಗಿದೆ "ಸನ್ಯಾಸಿಯ ಮಗು"  !  🙂

Guruprasad Kurtkoti
10 years ago

ಗಣೆಶ, ಕತೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ! ಒಂದೆರಡು ಶಬ್ಧಗಳು ('ಒಸಿ') ನಮ್ಮ ಕಡೆ ಬಳಕೆಯಲ್ಲಿಲ್ಲ, ಅವುಗಳಿಗೆ ಪರ್ಯಾಯ ಪದ ಬಳಸಬಹುದಿತ್ತೇನೊ ಅಂತ ನನ್ನ ಅನಿಸಿಕೆ. ಆದರೂ ಕತೆಗೆ ಅದರಿಂದ ಕುತ್ತು ಬಂದಿಲ್ಲ ಬಿಡಿ 🙂

6
0
Would love your thoughts, please comment.x
()
x