ಸನ್ಮಾನಗಳು ಸಣ್ಮಾನಗಳಾಗಬಾರದಷ್ಟೇ..: ಪಿ.ಎಸ್. ಅಮರದೀಪ್

ಸಾಧನೆಗೆ ಹಲವು ಮುಖಗಳಿರುತ್ತವೆ. ಸಾಧಕರಿಗೆ ನೂರು ಯೋಚನೆಗಳಿರುತ್ತವೆ. ಒಂದು ಯೋಚನೆ ನೂರು ಸಾಧಕರನ್ನು ಸೃಷ್ಟಿಸಬಲ್ಲದು. ಅಂತಹ ಸಾಧನೆಗಳನ್ನು ಯಾರಾದರೂ ಕೇವಲ ಪ್ರಚಾರಕ್ಕಾಗಿ ಮಾಡಿರುವುದಿಲ್ಲ. ಒಂದೊಳ್ಳೆ ಉದ್ದೇಶವಿಟ್ಟುಕೊಂಡೇ ಪರಿಶ್ರಮದ ಹಾದಿ ತುಳಿದಿರುತ್ತಾರೆ. ನಾವು ಇಲ್ಲಿಯವರೆಗೂ ಕಣ್ಣೆದುರಿಗೆ, ಸುದ್ದಿ ಮೂಲಕ, ದೃಶ್ಯ ಮಾಧ್ಯಮದ ಮೂಲಕ ಸಾಧಕರನ್ನು ಗುರುತಿಸುವುದನ್ನು ನೋಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹರಸಿದ್ದೇವೆ. ಕಿರಿಯರಿಗೆ ಮಾದರಿಯಾಗಿ ತೋರಿಸಿದ್ದೇವೆ.

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರ ಸಾಧಕರ ಪಟ್ಟಿಗೇನೂ ಕಮ್ಮಿಯಿಲ್ಲ. ಅಂತೆಯೇ ಅಂಥ ಸಾಧಕರ ಕುರಿತು ಬೆಳಕು ಚೆಲ್ಲುವ, ಸಾಧನೆಯ ಹಿಂದಿನ ಶ್ರಮದ ಕುರಿತು ಅಧ್ಯಯನ, ಹೊಗಳಿಕೆ, ಪ್ರಶಂಸೆ ಎಲ್ಲವೂ ಶಕ್ಯ ಮತ್ತು ಸೂಕ್ತ. ಈಗ್ಗೆ ಎರಡು ತಿಂಗಳ ಹಿಂದೆ ಶಿಕ್ಷಕರ ದಿನಾಚರಣೆ ಸಂಧರ್ಭದಲ್ಲಿ ಸೂಕ್ತ ಮತ್ತು ಅರ್ಹತೆಯುಳ್ಳ ಶಿಕ್ಷಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವೊಂದರಲ್ಲಿ ನನಗೆ ಪರಿಚಯವಿದ್ದ ಶಾಲಾ ಶಿಕ್ಷಕರೊಬ್ಬರನ್ನು ಹೆಸರಿಸಿ ಕರೆದುಕೊಂಡು ಹೋಗಿದ್ದೆ. ಮತ್ತು ಆ ದಿನ ಶಾಲಾ ಶಿಕ್ಷಕರನ್ನು ಸನ್ಮಾನಿಸುವ ಪರಿಪಾಠವನ್ನು ರೂಢಿಸಿಕೊಂಡವರ ಬಗ್ಗೆಯೂ ಚೂರು ಹೇಳಬೇಕು. ಹತ್ತನ್ನೆರಡು ವರ್ಷಗಳ ಹಿಂದೆ ನಾನಿದ್ದ ಬಳ್ಳಾರಿಯಲ್ಲಿ ಖಜಾನೆ ಇಲಾಖೆಗೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಬಸವರಾಜ್ ಪತ್ರಿ ಎನ್ನುವ ಹುಡುಗನಿಗೆ ಆಗಿನ್ನು ಕೇವಲ ಹದಿನೆಂಟು ವರ್ಷ. ಪರಿಚಯವಾದ ದಿನದಿಂದ ಆ ಹುಡುಗ ನಮ್ಮ ಗೆಳೆಯರ ಗುಂಪಿನಲ್ಲಿ ಒಳ್ಳೆಯ ಒಡನಾಟವಿದ್ದವನು. ತಾಂತ್ರಿಕ ವಿಷಯದಲ್ಲಿ ಡಿಪ್ಲೋಮಾ ಮಾಡಿದ ಆ ಹುಡುಗನಿಗೆ ಲಿಪಿಕ ನೌಕರಿಯು ಅಷ್ಟಾಗಿ ಹತ್ತಲಿಲ್ಲವೋ ಅಥವಾ ಏನನ್ನಾದರೂ ಸಾಧಿಸುವ ಹಂಬಲದಿಂದಲೋ ಒಟ್ಟಿನಲ್ಲಿ ಪ್ರಯತ್ನಪಟ್ಟು ಅಮೇರಿಕಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಗಿಟ್ಟಿಸಿಕೊಂಡು ವೇತನ ರಹಿತ ರಜೆಯ ಮೇಲೆ ತೆರಳಿದ. ಅದಕ್ಕೂ ಮುಂಚೆಯೇ ಇನ್ನೊಬ್ಬ ಗೆಳೆಯನೊಟ್ಟಿಗೆ ಸೇರಿ 2003ರಿಂದಲೇ ತಾನು ಓದಿದ ಬಳ್ಳಾರಿಯ ರೇಡಿಯೋಪಾರ್ಕ್ತ ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷ ಇಬ್ಬರು ಉತ್ತಮವಾಗಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ಆ ಹುಡುಗ ರೂಢಿಸಿಕೊಂಡ ಕ್ರಮ.

ಅದರಂತೆ ಈ ಬಾರಿ ನನಗೆ ಆ ಕಿರಿಯ ಗೆಳೆಯ ತಿಳಿಸಿದಂತೆ ಇನ್ನೊಬ್ಬ ಪರಿಚಯದ ಶಿಕ್ಷಕರನ್ನು ಪರಿಚಯಿಸಿ ಸನ್ಮಾನಿಸಲು ಗುರುತಿಸುವಂತಾಯಿತು. ಆಯ್ತಲ್ಲಾ? ಆ ದಿನ ಸನ್ಮಾನಗೊಂಡ ಶಿಕ್ಷಕರೆಲ್ಲರೂ ಅರ್ಹತೆಯುಳ್ಳವರೇ. ಮತ್ತವತ್ತು ಕಾರ್ಯಕ್ರಮವೂ ಸುಗಮ, ಸರಳ ಮತ್ತು ಚೆಂದವೇ ಆಗಿತ್ತು. ಇರಲಿ ಬಿಡಿ, ಈ ಹುಡುಗ ಬಸವರಾಜನ ಬಗ್ಗೆ ಮತ್ಯಾವಾಗಾದ್ರೂ ಹೇಳ್ತೀನಿ. ಈಗ ನಾನು ಹೇಳ ಹೊರಟಿರುವ ಸಂಗತಿ ಅದಲ್ಲ.

ಚಿಕ್ಕ ಚಿಕ್ಕ ಯೋಚನೆಗಳೇ ದೊಡ್ಡ ಯೋಜನೆಗಳಾಗಿ ರೂಪುಗೊಳ್ಳುವ, ಕನಸುಗಳೇ ಸಾಧಕರನ್ನು ಸಾಧನೆಯ ತುದಿ ತಲುಪಿಸಿಬಿಡುತ್ತವೆ. ತಲುಪುಲೇನು ಕಡಿಮೆ ಕಷ್ಟಗಳಾದರೂ ಇರ್ತವಾ? ಅದೂ ಇಲ್ಲ. ಹೆಜ್ಜೆ ಹೆಜ್ಜೆಗೂ ಹಂಗಿನ ಮಾತು, ಲೇವಡಿ, ಕಟಕಿ, ಕುಟುಕಿ ತಿವಿಯುವ ಕಣ್ಣು, ಮನ, ಮನುಷ್ಯ, ಮನಸ್ಸುಗಳೆಲ್ಲವನ್ನೂ ದಾಟಿ, ಸಹಿಸಿಕೊಂಡು ತಲುಪಿ ಇಟ್ಟ ಹೆಜ್ಜೆ ಇರುತ್ತದಲ್ಲಾ? ಆ ಕ್ಷಣದಲ್ಲಿ ಎಲ್ಲ ಅವಮಾನಗಳೆಲ್ಲವನ್ನೂ ಮೀರಿ ಸಾಧನೆ ಒಂದು ಹಂತದ ಕಾನ್ಫಿಡೆನ್ಸ್ ಬಲಗೊಳಿಸಿರುತ್ತದೆ. ಹೀಗೆ ಏನಾದರೂ ವಿಶೇಷವಾದ, ಕ್ರಿಯೇಟಿವ್ ಆದ, ಸಮಾಜದಲ್ಲಿ ಅನುಕರಿಸುವಂಥ ಸಾಧನೆ ಮಾಡಿದವರನ್ನು ಒಂದು ವೇದಿಕೆ ಮೇಲೆ ಜಾತಿ, ಅಧಿಕಾರ, ಗುಂಪುಗಾರಿಕೆ ಇಲ್ಲದೇ ಸನ್ಮಾನಿಸುವ ಕ್ರಮವನ್ನು ಯಾರಾದರೂ ಮೆಚ್ಚಲೇಬೇಕು. ಗೌರವಿಸಬೇಕು.

ಒಮ್ಮೆ ಸಮಾಜಮುಖಿಯಾದ ಕಾರ್ಯಸಾಧನೆಯನ್ನು ಗುರುತಿಸಿ ಸನ್ಮಾನಿಸುವಂಥ ವ್ಯಕ್ತಿಯನ್ನು ಬೇರೆ ಬೇರೆ ವೇದಿಕೆಯಲ್ಲಿ ಸನ್ಮಾನಿಸುವುದು. ಜಾತಿ ಬಾಂಧವರೆಂಬ ಕಾರಣಕ್ಕೆ, ವಿವಿಧ ಸಂಘ ಸಂಸ್ಥೆಗಳಲ್ಲಿ, ಸಮ್ಮೇಳನಗಳಲ್ಲಿ , ಸಭೆಗಳಲ್ಲಿ ಪುನರಪಿಯಾಗಿ ಸನ್ಮಾನಿಸುವಂಥ ಪ್ರಸಂಗಗಳೂ ನಡೆದೇ ಇರುತ್ತವೆ. ಸಮಾರಂಭಗಳು ಯಾವುವೋ, ಸಂಘಟಕರು ಯಾರೋ, ವಿಷಯಾಧರಿತ ಸಭೆಗಳ್ಯಾವುವೋ, ಒಟ್ಟಿನಲ್ಲಿ ಅಂಥ ಕಾರ್ಯಕ್ರಮಗಳಲ್ಲಿ ಹತ್ತರಲ್ಲಿ ಹನ್ನೊಂದು ಎಂಬಂತೆ ಸಾಧಕ ವ್ಯಕ್ತಿಗಳನ್ನು ಕರೆದುಕೊಂಡು ಹೋಗಿಯೋ, ಕರೆಸಿಕೊಂಡೋ ಸನ್ಮಾನಿಸುವುದನ್ನು ನೋಡಿಯೇ ಇರುತ್ತೇವೆ. ಅಂಥ ಸಮಾರಂಭಗಳಲ್ಲಿ ಸನ್ಮಾನಿಸಲು ವೇದಿಕೆ ಕೊಟ್ಟ ಮಂದಿ, ಸನ್ಮಾನಕ್ಕೊಳಗಾದ ವ್ಯಕ್ತಿ ಮತ್ತು ಆಯಾ ಸಂಧರ್ಭಕ್ಕಿಂತ ಹೆಚ್ಚಾಗಿ ಸನ್ಮಾನಿಸಲು ಪ್ರಯತ್ನಿಸಿದವರ, ಹೆಸರಿಸಿದವರ, ಶಿಫಾರಸ್ಸು ಮಾಡಿದವರ ಮುಖಗಳು ಜಾಸ್ತಿ ಕಳೆ ಹೊಂದಿರುತ್ತವೆ.

ಮೊನ್ನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಯಾವುದೋ ಸಮಾರಂಭ ನಡೆಯುತ್ತಿತ್ತು. ಹೊರಗೆ ಭರ್ಜರಿ ಫ್ಲೆಕ್ಸ್ ಗಳು, ತರೇವಾರಿ ಕೈಮುಗಿದ ಹಲ್ಲು ಬಿರಿದ ಮುಖಗಳು, ಕಾರ್ಯಕ್ರಮಕ್ಕೆ ಯಶಸ್ಸು ಕೋರಿದ ತಲೆಗಳ ಚಿತ್ರಗಳು. ಭವನದ ಮುಂದೆ ಕಾರ್ಯಕ್ರಮಕ್ಕೆ ಆಗಮಿಸಿದ ಗೆಸ್ಟ್ ಗಳು, ಆಹ್ವಾನಿತರು, ಕಲಾವಿದರು, ವೀಕ್ಷಕರ ಮಧ್ಯೆ ನಾನು. ಭವನದ ಪ್ರವೇಶದ್ವಾರದಲ್ಲೇ ಪರಿಚಿತ ವ್ಯಕ್ತಿಯೊಬ್ಬರು ಕೈ ಕುಲುಕಿದರು. ನೋಡಿದರೆ ಪರಿಚಿತ ವ್ಯಕ್ತಿಯ ಪಕ್ಕ ಒಬ್ಬ ಪರಿಚಿತ ಶಿಕ್ಷಕ. ಪರಿಚಿತ ವ್ಯಕ್ತಿ ಆ ಶಿಕ್ಷಕರ ಕೈಗೆ ಐವತ್ತು ರೂಪಾಯಿ ನೀಡಿ ಒಂದು “ಮೂವತ್ತು ರೂಪಾಯಿಯ ಹೂವಿನ ಹಾರ” ತರಲು ಹೇಳಿದರು. ಪಾಪ, ಆ ಶಿಕ್ಷಕ ಹೂವಿನ ಹಾರ ತರಲು ಬೈಕ್ ಇಲ್ಲದೇ ನನ್ನದೇ ಬೈಕ್ ಕೀ ತೆಗೆದುಕೊಂಡು ಹೊರಟರು. ನಂತರ ಪರಿಚಿತ ವ್ಯಕ್ತಿಯಿಂದ ವಿಷಯ ಹೀಗೇ ತಿರುಗಿ ಶಿಕ್ಷಕರ ಕಡೆಗೆ ಹೊರಳಿತು.

ಪರಿಚಿತ ವ್ಯಕ್ತಿ ಹೇಳಿದ್ದಿಷ್ಟು. “ ನೋಡ್ರಿ ಸಾ…. ನಮ್ಗೆ ಎಲ್ಲೆಲ್ಲಿ ವೇದಿಕೆಗಳು ಸಿಕ್ತವೋ ಯಾವ್ದನ್ನೂ ಮಿಸ್ ಮಾಡಂಗಿಲ್ಲ. ಅಲ್ಲೊಂದು ಮನವಿ, ಸನ್ಮಾನ, ಖಂಡನೆ, ಪ್ರತಿಭಟನೆ ಯಾವ್ದುಕ್ಕಾದ್ರೂ ಸರಿ, ಬಳಸ್ಕ್ಯಂತೀವಿ” . ನಾನು ಸುಮ್ಮನಿರದೇ “ ಈ ಸಮಾರಂಭದಲ್ಲಿ ಯಾವ ವಿಷಯಕ್ಕೆ ವೇದಿಕೆ ಬಳಸ್ಕೊಳ್ತಿದೀರಾ?” ಕೇಳಿದೆ. “ಸನ್ಮಾನ ಮಾಡೋದಿಕ್ಕೋಸ್ಕರ ಸಾರ್, ಈಗ ಹಾರ ತರೋದಿಕ್ಕೆ ಹೋದ್ರಲ್ಲಾ, ಶಿಕ್ಷಕರು? ಅವರನ್ನೇ ಸನ್ಮಾನ ಮಾಡೋ ಸಲುವಾಗೇ, ನೋಡಿ, ಶಾಲು ತಂದೀನಿ, ಹಾರ ತರಾದಿಕ್ ಕಳ್ಸೀನಿ” ಅಂದರು.

ನೋಡಿ, ಪರಿಚಿತ ವ್ಯಕ್ತಿ ಆ ಸಮಾರಂಭದಲ್ಲಿ ಪಕ್ಕದಲ್ಲಿದ್ದ ಶಿಕ್ಷಕನಿಗೆ ಸನ್ಮಾನಿಸುವವನಿದ್ದಾರೆ. ಸನ್ಮಾನಿಸಿಕೊಳ್ಳುವ ಶಿಕ್ಷಕನೇ ತನಗೆ ಹಾಕುವ ಹೂವಿನ ಹಾರವನ್ನು ತಾನೇ ಖರೀದಿಸಿ ತಂದು ಸನ್ಮಾನಿಸುವವರ ಕೈಗಿಡುವ ದುಸ್ಥಿತಿ ಬಂದಿದ್ದು ನೋಡಿ ನನಗಂತೂ ಅದು ಶಿಕ್ಷಕನಿಗೆ ಮಾಡಿದ “ಸಣ್ಮಾನ” ವೆನಿಸಿದ್ದು ಸುಳ್ಳಲ್ಲ. ಪುಣ್ಯಕ್ಕೆ ಹಾರ ತರಲು ದುಡ್ಡಾದ್ರೂ ಪರಿಚಿತ ವ್ಯಕ್ತಿ ನೀಡಿದ್ದರು. ಅರೆ, ಬುದ್ಧಿವಂತರಾಗಿದ್ದರೆ ಆ ಶಿಕ್ಷಕರಾದರೂ ಇಂಥ “ಸಣ್ಮಾನ” ಕ್ಕೆ ಹೋಗುವುದರಿಂದ ತಪ್ಪಿಸಿಕೊಳ್ಳಬಹುದಿತ್ತು. ಹೆಚ್ಚಾನು ಹೆಚ್ಚು ಸನ್ಮಾನಗಳು ಸಣ್ಮಾನಗಳಾಗುವುದೇ ಇಂಥ ಮನಸ್ಥಿತಿಯಿಂದ. ಅಂದಹಾಗೆ ಆ ಪರಿಚಿತ ವ್ಯಕ್ತಿ ಯಾರೆಂದು ಹೇಳೋದು ಸಹ ಮರೆತೆ. ಆತನೂ ಒಬ್ಬ ಶಿಕ್ಷಕನಾಗಿದ್ದ.

ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಲಿ, ಸನ್ಮಾನಿಸಲಿ, ಗೌರವಿಸಲಿ. ಆದರೆ, ಇಂಥಹ “ಸಣ್ಮಾನ” ಕ್ಕೊಳಪಡಿಸುವ/ಕ್ಕೊಳಗಾಗುವ ಚಾಳಿಯಿಂದ ಮಾಡುವವರು ಮತ್ತು ಫಲಾನುಭವಿಗಳೂ ದೂರ ದೂರ ಇರುವುದೊಳಿತು. ನಾನು ಹೇಳಿದ್ದು ತಪ್ಪೆಂದು ಯಾರು ಮತ್ತು ಎಷ್ಟು ಮಂದಿ ಹೇಳ್ತಾರೆ ಅನ್ನೋದರ ಮೇಲೆ ಪಟ್ಟಿ ಮಾಡಿ ಅಂಥವರನ್ನು ಸನ್ಮಾನಿಸಲು ಉತ್ಸುಕನಾಗಿದ್ದೇನೆ. ಹಾಗಂತ ಇನ್ನೇನು ಹೇಳಬೇಕು ಅಂದುಕೊಂಡೆ. ಅಷ್ಟರಲ್ಲಿ ಅಶೋಕ ಸರ್ಕಲ್ ನಲ್ಲಿ ಹಿಂಡು ಕುರಿಗಳ ಸಾಲು ಹಾದು ಹೋಗುತ್ತಿದ್ದುದ್ದನ್ನು ನೋಡಿ ಹೇಳುವುದೇ ಮರೆತುಬಿಟ್ಟೆ…..
-ಪಿ.ಎಸ್. ಅಮರದೀಪ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸೋಮು ಕುದರಿಹಾಳ ಗಂಗಾವತಿ
ಸೋಮು ಕುದರಿಹಾಳ ಗಂಗಾವತಿ
6 years ago

ಸನ್ಮಾನದ ಕುರಿತು ತುಂಬಾ ವಿಡಂಬನಾತ್ಮಕವಾಗಿ ಬರೆದ ಈ ಲೇಖನ ವಾಸ್ತವವನ್ನು ಬಿಂಬಿಸಿದ್ದು ನಿಜ. ಪ್ರಶಸ್ತಿಗಳಿಗೆ ಲಾಬಿ ಮಾಡುವುದನ್ನು ತಿಳಿದಿದ್ದೆ. ಸನ್ಮಾನಕ್ಕೂ ಹೀಗೆನಾ ಎಂದು ಅಚ್ಚರಿಗೊಳಗಾದೆ. ಮುಂದೆ ಓದಿದಂತೆ ಶಿಕ್ಷಕರ ಬವಣೆ ತಿಳಿದು ಇನ್ನೂ ಬೇಜಾರಾಯ್ತು. ಹೀಗೆ ಗೌರವದ ಹಿಂದೆ ಬಿದ್ದವರು ಮುಂದೆ ಬರಲ್ಲ. ಅವರು ಅಲ್ಲಿಯೇ ಇರುತ್ತಾರೆ. ನಿಜ ಗೌರವ ಉತ್ತಮ ಕೆಲಸ ಹುಡುಕಿಕೊಂಡು ತಾನೇ ಬರುತ್ತದೆ ಎಂಬುದು ನನ್ನ ನಂಬಿಕೆ.

1
0
Would love your thoughts, please comment.x
()
x