ಸತ್ಯ ಮತ್ತು ಅಹಿಂಸೆಗಳು ಹಿಮಾಲಯದಷ್ಟೇ ಪುರಾತನವಾದದು. ಹಾಗೂ ಇವುಗಳನ್ನು ಬಿಟ್ಟು ಬೇರೆ ಏನನ್ನೂ ಹೇಳಲಾರೆ ಎಂದು ರಾಷ್ಟ್ರಪಿತ ಗಾಂಧೀಜಿಯವರು ಹೇಳಿದ್ದರು. ಈ ಭಾರಿಯ ಗಾಂಧಿ ಜಯಂತಿಯ ಪೂರ್ವದಲ್ಲೇ ಎರಡು ದೇಶಗಳ ಮುಖ್ಯಸ್ಥರು ಸೇರಿ ಹಲವಾರು ಅಭಿವೃದ್ಧಿ ಆಧಾರಿತ ವಿಷಯಗಳನ್ನು ಗಾಢವಾಗಿ ಚರ್ಚಿಸಿದರು. ವಿದ್ವಂಸಕ ಕೃತ್ಯಗಳು, ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆಯನ್ನೂ ಚರ್ಚಿಸಿದರು. ನಮ್ಮೂರನ್ನು ನಿಮ್ಮ ಊರಿನಂತೆ ಮಾಡಿಕೊಡಿ ಎಂದು ನಮ್ಮವರು ಕೇಳಿಕೊಂಡರು. ಪರಮಾಣು ತಂತ್ರಜ್ಞಾನವನ್ನು ಹಸ್ತಾಂತರಿಸುವ ಭರವಸೆಯನ್ನು ಅಮೆರಿಕಾದ ಅಧ್ಯಕ್ಷರು ನೀಡಿದ್ದನ್ನು ನಮ್ಮ ಪ್ರಧಾನಿಯವರು ಹಾರ್ಧಿಕವಾಗಿ ಸ್ವಾಗತಿಸಿದರು. ಇದೇ ಸಮಯದಲ್ಲಿ ಶಾಂತಿದೂತ ಗಾಂಧೀಜಿ ಹುಟ್ಟಿದ ಪವಿತ್ರ ಭಾರತ ಹಿಂಸೆಯಿಂದ ಬೇಯುತ್ತಿದೆ ಎಂದು ಜಾಗತಿಕ ಶಾಂತಿ ಸೂಚ್ಯಂಕದ ವರದಿ ಹೇಳಿದೆ. ೧೬೨ ದೇಶಗಳ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ೧೪೩ನೇ ಸ್ಥಾನದಲ್ಲಿದೆ. ಜಗತ್ತಿನ ಎಲ್ಲಾ ಪಂಥದವರೂ ಒಪ್ಪಿಕೊಳ್ಳಬಹುದಾದ ವಿವಾದೇತರ ಮಂತ್ರವೆಂದರೆ, ಸತ್ಯ ಮತ್ತು ಅಹಿಂಸೆ. ಆದರೆ ನಮ್ಮ ದೇಶದಲ್ಲೇ ಇವೆಷ್ಟು ಸವಕಲಾಗಿವೆಯೆಂದರೆ, ರೇಜಿಗೆಯಾದೀತು. ಒಂದೊಮ್ಮೆ ಗಾಂಧಿ ಬದುಕಿದ್ದರೆ ಖಂಡಿತಾ ಈ ದೇಶದಲ್ಲಿ ಇರುತ್ತಿರಲಿಲ್ಲ. ೧೫೪ನೇ ಸ್ಥಾನದಲ್ಲಿ ಸಾಂಪ್ರದಾಯಿಕ ಶತ್ರು ಪಾಕಿಸ್ಥಾನವಿದೆ. ಅತ್ಯಂತ ಶಾಂತಿಯುತ ದೇಶವೆಂದು ಐಸ್‌ಲ್ಯಾಂಡ್ ಮೊದಲ ಸ್ಥಾನ ಪಡೆದಿದ್ದರೆ, ಸಿರಿಯಾ ಅತ್ಯಂತ ಹಿಂಸೆಯಿಂದ ಕೂಡಿದ ದೇಶವಾಗಿ ಹೊರಹೊಮ್ಮಿ ೧೬೨ನೇ ಸ್ಥಾನದಲ್ಲಿದೆ. ಅತ್ಯಂತ ಮುಂದುವರೆದ ದೇಶ ಅಮೆರಿಕಾ ಈ ಪಟ್ಟಿಯಲ್ಲಿ ೧೦೧ನೇ ಸ್ಥಾನ ಪಡೆದಿದೆ.
ಒಂದೊಂದು ದೇಶವೂ ತನ್ನ ರಕ್ಷಣೆಗಾಗಿ ಆಯಾ ದೇಶಗಳ ಒಟ್ಟೂ ರಾಷ್ಟ್ರೀಯ ಉತ್ಪನ್ನಗಳ ಸಿಂಹಪಾಲನ್ನು ವ್ಯಯಿಸುತ್ತವೆ. ರಾಜರುಗಳ ಕಾಲದಲ್ಲಿ ಆನೆ-ಕುದುರೆ ಹಾಗೂ ಸೈನಿಕರ ಸಂಖ್ಯೆಯ ಮೇಲೆ ಆಯಾ ರಾಜನ ಸಾಮರ್ಥ್ಯ ನಿರ್ಧರಿತವಾಗುತ್ತಿತ್ತು. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಯುದ್ಧಗಳ ಸ್ವರೂಪವೂ ಬದಲಾಯಿತು. ಈಗಿನ ಅಣು ಯುದ್ದವೆಂದರೆ ಸ್ವಯಂ ನಾಶವೂ ಹೌದು. ವೈರಿಯೊಡನೆ ತಾನು ಸಾಯಬೇಕಾಗುತ್ತದೆ. ಪ್ರತೀ ದೇಶಗಳ ರಕ್ಷಣಾ ವಿಭಾಗದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಈ ತರಹದ ಸಂಶೋಧನೆಗಳಿಗೆ ಸರ್ಕಾರಗಳು ಸಾಕಷ್ಟು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ನಮ್ಮ ದೇಶದಲ್ಲೂ ಪ್ರತಿಷ್ಟಿತ ಡಿ.ಆರ್.ಡಿ.ಓ ಸಂಸ್ಥೆಯಿದೆ. ಇದರಲ್ಲೂ ನುರಿತ ವಿಜ್ಞಾನಿಗಳಿದ್ದಾರೆ. ಪಕ್ಕದ ದೇಶದ ತಂತ್ರಕ್ಕೆ ಬೇಕಾದ ಪ್ರತಿತಂತ್ರವನ್ನು ಅಥವಾ ಪ್ರತ್ಯಾಸ್ತ್ರಗಳನ್ನು ರೂಪಿಸುವುದು ಈ ವಿಜ್ಞಾನಿಗಳ ಹೊಣೆ. ನಮ್ಮ ಒಂದು ಕ್ಷಿಪಣಿ ಪಾಕಿಸ್ಥಾನ ಪ್ರವೇಶ ಮಾಡಬೇಕೆಂದರೆ ಅಷ್ಟು ಸುಲಭದ ಮಾತಲ್ಲ. ಪಾಕಿಸ್ಥಾನದ ರಾಡಾರ್ ತನ್ನ ಕಕ್ಷೆಯೊಳಗೆ ಬರುವ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ನಮ್ಮ ಕ್ಷಿಪಣಿ ಗಮ್ಯ ತಲುಪದರೊಳಗಾಗಿ ಅಲ್ಲಿನ ಪ್ರತ್ಯಸ್ತ್ರ ಈ ಕ್ಷಿಪಣಿಯನ್ನು ಆಕಾಶದಲ್ಲೇ ಹೊಡೆದುರುಳಿಸುತ್ತದೆ. ಹಾಗೆ ರಾಡಾರ್‌ನ ದಿಕ್ಕು ತಪ್ಪಿಸುವ ತಂತ್ರವೂ ನಮ್ಮ ಕ್ಷಿಪಣಿಗಳಿಗಿರಬೇಕು. ಇದಕ್ಕೆ ಮತ್ತೆ ಜಾಮರ್ ತಂತ್ರವನ್ನು ಉಪಯೋಗಿಸಬೇಕು. ಈ ನಮ್ಮ ಜಾಮರ್ ತಂತ್ರಕ್ಕೆ ಪ್ರತಿತಂತ್ರವಾಗಿ ಅವರು ಆಂಟಿಜಾಮರ್ ತಂತ್ರವನ್ನು ಅವುಗಳ ರಾಡಾರ್‌ಗಳಿಗೆ ಅಳವಡಿಸಬೇಕು. ಹೀಗೆ ಎಂದೆಂದೂ ಮುಗಿಯಲಾರದ ಸರಪಳಿಯಿದು.
ಶಾಂತಿಯೆಂದರೆ ಎರಡು ಯುದ್ಧಗಳ ನಡುವಿನ ವಿರಾಮ ಎಂದು ಹೇಳುತ್ತಾರೆ. ಯುದ್ಧವೆಂದರೆ, ಶಸ್ತ್ರಾಸ್ತ್ರ ತಯಾರಿಸುವವರಿಗೆ ವ್ಯವಹಾರವಷ್ಟೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂದ ಹಾಗೆ. ಶಾಂತಿಪ್ರಿಯರಿಗೆ ಯುದ್ಧವೆಂದರೆ ಅಥವಾ ಯುದ್ದಾಸ್ತ್ರಗಳೆಂದರೆ ದುಬಾರಿಯಾದ ಕಸದ ರಾಶಿ. ರಜಾದಿನದಂದು ಕಚೇರಿಗೆ ಬಂದು ಪೊರಕೆ ಹಿಡಿದು ಕಸಗುಡಿಸುವ ಆದೇಶ ಬಂದ ಮೇಲೆ ಗೊಣಗಿದವರಷ್ಟೋ, ಹಿಡಿಶಾಪ ಹಾಕಿದವರೆಷ್ಟೋ? ಸ್ವಚ್ಛ ಭಾರತ ಪರಿಕಲ್ಪನೆ ಅದ್ಭುತವಾಗಿದೆ. ಅನುಷ್ಠಾನ ಮಾತ್ರ ಭಯಹುಟ್ಟಿಸುವಂತಿದೆ. ಜಗತ್ತಿನ ಅತಿಹೆಚ್ಚು ಜನಸಾಂದ್ರತೆಯಿರುವುದು ಪಟ್ಟಣಗಳಲ್ಲಿ ಮತ್ತು ಹೆಚ್ಚು ಕಸ ಸಂಗ್ರಹಣೆಯಾಗುವುದೂ ನಗರಗಳಲ್ಲೇ. ಫೋಟೋಗೊಂದು ಫೋಸ್ ಕೊಟ್ಟು ಸಂಗ್ರಹಿಸಿದ ಕಸವನ್ನು ಹಳ್ಳಿಗಳಿಗೆ ಮತ್ತು ಹಳ್ಳಗಳಿಗೆ ಹಾಕಿದರೆ ಸ್ವಚ್ಛವಾದಂತಾಯಿತೆ? ಮನದಲ್ಲಿ ಕೊಳಕಿದ್ದರೆ, ಮನೆಯೂ ಕೊಳಕಾಗಿರುತ್ತದೆ. ಸ್ವಚ್ಛತೆಯೆನ್ನುವುದು ಒಂದು ಸಮಗ್ರ ಪದ. ಒಂದು ಮನೆಗೆ ಅಥವಾ ಊರಿಗೆ ಅಥವಾ ದೇಶಕ್ಕೆ ಸಂಬಂಧಿಸಿದ್ದಲ್ಲ. ಸ್ವಚ್ಚತೆಗೊಂದು ಪರಿಮಿತಿ ಹಾಕುವುದೇ ಅಪಾಯಕಾರಿಯಾದದು. ಇಂಗ್ಲೀಷ್ ಭಾಷೆಯ ರೋಗಕ್ಕೆ ಸಂಬಂಧಿಸಿದ ಗಾದೆಯ ಸಾರಾಂಶ ಹೀಗಿದೆ ವಾಸಿ ಮಾಡುವುದಕ್ಕಿಂತ – ಮುನ್ನೆಚ್ಚರಿಕೆಯೇ ಮೇಲು. ಕಸದ ವಿಚಾರದಲ್ಲೂ ಈ ಮಾತನ್ನು ಅನ್ವಯಿಸಿಕೊಳ್ಳಬಹುದು. ಇದನ್ನು ಸ್ವಲ್ಪ ವಿವರವಾಗಿ ನೋಡೋಣ.
ಗಾಂಧೀಜಿಯವರ ಆಶಯಕ್ಕೂ ನೆಹರೂರವರ ಆಶಯಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ರಾಷ್ಟ್ರಪಿತ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಪ್ರತಿಪಾದಿಸಿದರೆ, ನೆಹರು ಯಾಂತ್ರಿಕೃತ ಬೃಹತ್ ಕೈಗಾರಿಕೆಗಳಿಗೆ ಮಣೆ ಹಾಕಿದರು. ಗಾಂಧೀಜಿಯ ನೂಲುವ ಚರಕ ಸ್ವಾಭಿಮಾನದ ಸಂಕೇತವಾದರೆ, ಲಕ್ಷಾಂತರ ಜನರ ಬದುಕನ್ನು ಕಸಿದುಕೊಂಡು ವಿದ್ಯುತ್ ಉತ್ಪಾದಿಸಿ, ಕೈಗಾರಿಕೆಗಳಿಗೆ ಪ್ರಾಶಸ್ತ್ಯ ನೀಡುವುದು ದಬ್ಬಾಳಿಕೆ ಮತ್ತು ಹಿಂಸೆಯ ಸಂಕೇತವಾಯಿತು. ಆಣೆಕಟ್ಟುಗಳ ನಿರ್ಮಾಣದಿಂದ ಒಕ್ಕಲೆದ್ದ ಅದೆಷ್ಟೋ ಕುಟುಂಬಗಳು ಇವತ್ತು ಕಸಕ್ಕಿಂತ ಕಡೆಯಾಗಿ ಬದುಕುತ್ತಿವೆ. ನೆಹರೂ ನಂತರದ ಎಲ್ಲಾ ಸರ್ಕಾರಗಳೂ ಅಭಿವೃದ್ಧಿ ಎಂಬ ಸರ್ವಾಧಿಕಾರಿಯ ಸಯನೈಡಿಗೆ ಜನಸಾಮಾನ್ಯರನ್ನು ಬಲಿ ಹಾಕುತ್ತಲೇ ಇದ್ದಾರೆ. ಇದೀಗ ಗುಜರಾತಿನ ಸರ್ದಾರ್ ಸರೋವರದ ಆಣೆಕಟ್ಟನ್ನು ೧೭ ಮೀಟರ್ ಏರಿಸುವ ಪ್ರಸ್ತಾವನೆ ಸರ್ಕಾರಕ್ಕಿದೆ. ಇದರಿಂದ ೪೦ ಸಾವಿರ ಕುಟುಂಬಗಳು ನೆಲೆ ಕಳೆದುಕೊಳ್ಳಲಿವೆ. ಸಂಗ್ರಹವಾದ ನೀರನ್ನು ಪೆಪ್ಸಿ ಕಂಪನಿಯ ತಂಪು ಪಾನೀಯ ಘಟಕಕ್ಕೆ ನೀಡುವ ಪೂರ್ವತಯಾರಿಯಾಗಿ ನಮ್ಮ ಪ್ರಧಾನಿಯವರು ಮೊನ್ನೆ ಅಮೆರಿಕಾ ಭೇಟಿಯಲ್ಲಿ ಪೆಪ್ಸಿಕೋ ಕಂಪನಿಯ ಮುಖ್ಯಸ್ಥೆಯಾದ ಇಂದಿರಾ ನೋಯಿಯನ್ನು ಭೇಟಿಯಾಗಿ ಬಂದ್ದಿದ್ದಾರೆ. ಗುಜರಾತಿನಲ್ಲಿ ಈಗಾಗಲೇ ೫೫ ಎಸ್.ಇ.ಝಡ್‌ಗಳಿವೆ ಮತ್ತು ಇವುಗಳಿಗಾಗಿ ೨೭,೧೨೫ ಹೆಕ್ಟೇರ್ ಜಮೀನುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗಿದೆ. ಎಸ್.ಇ.ಝಡ್ ಎಂದರೆ ವಿಶೇಷ ವಿತ್ತ ವಲಯವೆಂದು ಕರೆಯಲಾಗುವ ಇದು ವಾಸ್ತವವಾಗಿ ರೈತರ ಅಂತಿಮ ಸ್ಮಶಾನವಾಗಲಿದೆ. ಮೊನ್ನೆ ಸೆಪ್ಟೆಂಬರ್ ೨೮ರಂದು ಮ್ಯಾಡಿಸನ್ ಚೌಕದಲ್ಲಿ ಪ್ರಧಾನಿಯವರು ಹೇಳಿದ್ದು, ಭಾರತದಲ್ಲಿಯ ಹಲವಾರು ಕಾನೂನುಗಳು ಅಪ್ರಸ್ತುತ ಹಾಗೂ ವ್ಯವಹಾರ ವಿರೋಧಿಯಾಗಿದೆ. ತುರ್ತಾಗಿ ಈ ಕಾನೂನುಗಳನ್ನು ತೆಗೆದು ಹಾಕುವುದೋ ಅಥವಾ ತಿದ್ದುಪಡಿ ಮಾಡುವುದೋ ಮಾಡಬೇಕಾಗಿದೆ. ಭಾರತ ಬಿಸಿನೆಸ್ ವಿರೋಧಿ ದೇಶವೆಂಬ ಹಣೆಪಟ್ಟಿಯನ್ನು ತೆಗೆದುಹಾಕಬೇಕಾಗಿದೆ. ಆದ್ದರಿಂದ ಬರುವ ಚಳಿಗಾಲದ ಅಧಿವೇಶನದಲ್ಲಿ ಅಪ್ರಸ್ತುತ ಕಾನೂನುಗಳನ್ನು ತಿದ್ದುಪಡಿಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸುಮಾರು ೨೮೭ ಈ ತರಹದ ಕಾನೂನುಗಳಿದ್ದು, ಉದಾಹರಣೆಯಾಗಿ ಕಾರ್ಮಿಕ ನಿಯಮ ೧೯೪೮, ಕಾರ್ಖಾನೆ ನಿಯಮ, ಗುತ್ತಿಗೆ ಕಾರ್ಮಿಕ ನಿಯಮ, ಪರಿಸರ ಕಾನೂನುಗಳು ಹೀಗೆ ಹಲವು ಕಾನೂನುಗಳು ವಿದೇಶಿ ಬಂಡವಾಳವನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಆದ್ದರಿಂದ ಜಗತ್ತಿನ ಶ್ರೀಮಂತರೇ ನೀವು ಇನ್ನು ನಮ್ಮಲ್ಲಿ ಬಂಡವಾಳ ಹೂಡಲು ಹಿಂಜರಿಯಬೇಕಾಗಿಲ್ಲ. ಸೆಪ್ಟೆಂಬರ್ ೨೯ರಂದು ಅಮೆರಿಕಾದ ದಿಗ್ಗಜರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಪೆಪ್ಸೆಕೋ, ಸಿಟಿಗ್ರೂಫ್, ಕಾರ್ಗಿಲ್, ಕ್ಯಾಟರ್‌ಫಿಲ್ಲರ್, ಬೋಯಿಂಗ್, ಕೆಕೆಆರ್, ಬ್ಲಾಕ್‌ರಾಕ್, ಐಬಿಎಂ, ಜನರಲ್ ಎಲೆಕ್ಟ್ರಿಕಲ್ ಕಂಪನಿಗಳ ಮುಖ್ಯಸ್ಥರು ಬಹಳ ಸಂಭ್ರಮದಿಂದ ಪಾಲ್ಗೊಂಡು ಇಂಡಿಯಾದಲ್ಲಿ ಇನ್ವೆಸ್ಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗಲೇ ಕಸಗಳಿಂದಾಗಿ ಇಡೀ ದೇಶ ಮಾಲಿನ್ಯದಿಂದ ಬಳಲುತ್ತಿದೆ. ದೇಶದ ಹೆಚ್ಚಿನ ಜನರಿಗೆ ಬೇಕಾಗಿರುವುದು ಐಷಾರಾಮಿ ಗಾಡಿ-ಬಂಗಲೆಗಳಲ್ಲ, ನಮ್ಮ ದೇಶದ ಜನರು ಸಹಿಷ್ಣುಗಳು ಹಾಗೂ ಕ್ಷಮಾಗುಣ ಹೊಂದಿರುವವರು. ಇವರ ನೆಮ್ಮದಿಗೆ ಭಂಗ ಬರದಂತೆ, ಜೀವನಾವಶ್ಯವಾದ ಶುದ್ಧ ನೀರು, ಗಾಳಿ, ವಿಷರಹಿತ ಆಹಾರ ಭದ್ರತೆಯಿದ್ದರೆ ಸಾಕು. ಮತ್ತೆ ಗಾಂಧಿಯವರು ಬ್ರಿಟೀಷರನ್ನು ದೇಶ ಬಿಟ್ಟು ಹೋಗಿ ಹೇಳಿದ್ದು ಯಾವ ಉದ್ಧೇಶಕ್ಕಾಗಿ ಎಂಬುದನ್ನು ಮರೆತೆವೆ. ಮೂಲತ: ಬ್ರಿಟೀಷರು ಬಂದ್ದಿದ್ದು ವ್ಯಾಪಾರಕ್ಕೋಸ್ಕರವಾಗಿ, ಆಮೇಲೆ ನಮ್ಮ ಅತಿ ಒಳ್ಳೆತನ ಮತ್ತು ಒಳಜಗಳಗಳನ್ನು ದುರುಪಯೋಗಗೊಳಿಸಿಕೊಂಡು ನಮ್ಮನ್ನಾಳಿದರು. ಅವರನ್ನು ಒದ್ದು ಮತ್ತೆ ವಾಪಾಸು ಕಳುಹಿಸಲು ನಮ್ಮವರದೇಷ್ಟೋ ಜನ ಪ್ರಾಣ ತೆತ್ತರು. ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರೆ. ಸ್ವರಾಜ್ಯ, ಸ್ವತಂತ್ರ, ಸ್ವಾಭಿಮಾನಕ್ಕಾಗಿ ಹೋರಾಡಿದ ರಾಷ್ಟ್ರಪಿತನ ಎಲ್ಲಾ ಆಶಯಗಳನ್ನೂ ಧಿಕ್ಕರಿಸಿ ಭಾರತ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದೆ. ಅಭಿವೃದ್ದಿಯ ರಾಕ್ಷಸ ಚಕ್ರದಡಿ ಸಿಕ್ಕಿ ಅದೆಷ್ಟೋ ರೈತರು, ಕಾರ್ಮಿಕರು ಬೀದಿ ಪಾಲಾಗುತ್ತಾರೆ, ಸರ್ಕಾರಿ ಸಂತ್ರಸ್ಥ ಜೀವಂತ ಕಸವಾಗುತ್ತಾರೆ. ಇಂತಹ ಸಂತ್ರಸ್ಥರ ಯಾವ ಹಕ್ಕುಗಳಿಗೂ ಬೆಲೆಯಿಲ್ಲದಾಗುತ್ತದೆ. ಸರ್ಕಸ್ಸಿನಲ್ಲಿ ಯಾವ ಪ್ರಾಣಿಯ ಹಕ್ಕನ್ನು ಕಾಪಾಡಲಾಗುತ್ತದೆ? ಒಂದೆಡೆ ಇಂತಹ ಕಸಗಳನ್ನು ಸೃಷ್ಟಿ ಮಾಡುತ್ತಾ ಅಭಿವೃದ್ಧಿಯ ಏಣಿ ಹತ್ತುತ್ತಾ ಹೋದರೆ ಮುಂದಿನವರ ಪಾಡೇನು? ಸಂತ್ರಸ್ಥರ ಎಲ್ಲಾ ಹಕ್ಕುಗಳನ್ನು ದಮನ ಮಾಡಿ ಯಾವ ಹತಾರದಿಂದ ಕಸದಂತಾಗುವ ಜೀವಗಳನ್ನು ಗುಡಿಸುತ್ತೀರಿ?
ಇಡೀ ಜಗತ್ತಿನ ಈ ಹೊತ್ತಿನ ಸಮಸ್ಯೆಯೆಂದರೆ, ಹವಾಮಾನ ಬದಲಾವಣೆ. ಇದನ್ನು ಆಯಾ ಕ್ಷೇತ್ರಗಳ ವಿಜ್ಞಾನಿಗಳು ಸಾರಿ ಹೇಳುತ್ತಾ ಬಂದ್ದಿದ್ದಾರೆ. ಜೀವಿವೈವಿಧ್ಯನಾಶ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ವರ್ಲ್ಡ್ ವೈಲ್ಡ್ ಫಂಡ್ ತನ್ನ ೨೦೧೪ರ ವಿಸೃತ ವರದಿ ಸ್ಪಿಸೀಸ್ & ಸ್ಪೇಸಸ್ – ಪೀಪಲ್ಸ್ & ಪ್ಲೇಸಸ್ಲ್ಲಿ ಹೇಳಿದೆ. ಗಾಂಧೀಜಿಯ ಅಹಿಂಸೆ ಯಾವತ್ತೂ ಉದ್ಯಮ ವಿರೋಧಿಯಾಗಿರಲಿಲ್ಲ. ಆದರೆ ಮಾನವರು ಯಂತ್ರಗಳ ಕೈಗೊಂಬೆಯಾಗುವುದನ್ನು ಅವರು ಒಪ್ಪುತ್ತಿರಲಿಲ್ಲ. ತಲೆಯ ಮೇಲೆ ಮಲಹೊರುವ ಪದ್ಧತಿ ರೂಢಿಯಲ್ಲಿದ್ದಾಗ ಸ್ವಂತವಾಗಿ ಮಲದ ಬುಟ್ಟಿಯನ್ನು ಹೊತ್ತು ಶುಚಿತ್ವದ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾತ್ಮ. ಬಂದ ಲಕೋಟೆಯ ಹಿಂಭಾಗದಲ್ಲೇ ಉತ್ತರಿಸುವಷ್ಟು ಜಿಪುಣತನ ತೋರಿದ ಮತ್ತು ಆ ಮೂಲಕ ನೈಸರ್ಗಿಕ ಸಂಪತ್ತನ್ನು ಬೇಕಾಬಿಟ್ಟಿ ಬಳಸಕೂಡದು ಎಂಬ ಸಂದೇಶ ಸಾರಿದ ಸಂತ. ಇಂತಹ ಸಂತನ ಹುಟ್ಟಿದ ದಿನವನ್ನು ಸ್ವಚ್ಚ ಭಾರತ ದಿನವೆಂದು ಕರೆಯುವುದು ಸಕಾಲಿಕವಾಗಿದೆ. ಆದರೆ, ಕಸ ಗುಡಿಸುವ ಹಿಡಿ ಅಥವಾ ಪೊರಕೆ ಯಾವ ಅಂತಾರಾಷ್ಟ್ರೀಯ ಕಂಪನಿಯ ಉತ್ಪನ್ನವೆಂದು ಗೊತ್ತಾಗಲಿಲ್ಲ!!! ಗಾಂಧೀಜಿಯ ಆಶಯಗಳು ಚಿರಾಯುವಾಗಲಿ ಎಂಬ ದೂರದ ಕಮರದ ಆಶಯದೊಂದಿಗೆ.
*****