ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. ಅವರಿಬ್ಬರಿಗೂ ಸೇರಿ ನೆರೆಮನೆ ಮುದುಕಿ ಪರವ್ವನ ಸಹಾಯ ಪಡೆಯುವುದು, ಗಂಗಾ-ಸಂಗ್ಯಾರ ಅಕ್ರಮ ಸಂಬಂಧದ ವಿಷಯ ತಿಳಿದು ಕೋಪಗೊಂಡ ಈರಪ್ಪ ಅವಳನ್ನು ತವರುಮನೆಗೆ ಗಡಿಪಾರುವುದು ಮತ್ತು ಸೋದರರೊಂದಿಗೆ ಸಂಗ್ಯಾನನ್ನು ಕೊಂದು ಜೈಲುಪಾಲಾಗುವುದು. ಅಂತಿಮವಾಗಿ ಪರಸ್ತ್ರೀ ಸಹವಾಸ ಪಾಶಾಣ(ವಿಷ)ದ ಸಮ ಎಂಬ ಸಾಮಾಜಿಕ ಸಂದೇಶ ನೀಡುತ್ತಾ ಅರಿವು ಮೂಡಿಸುವ ಮತ್ತು ದಾರಿ ತಪ್ಪಿದರೆ ಉಗ್ರ ಶಿಕ್ಷೆ ಕಾದಿರುತ್ತದೆ ಎಂಬುದು ಮೂಲ ಕಥಾ ಸಾರಾಂಶ ಮತ್ತು ಸಂದೇಶ. ಈ ರೀತಿಯಾಗಿ ಒಪ್ಪಿಕೊಂಡಿರುವ ಈ ಕಥಾನಕವು ಎಷ್ಟೋ ವರುಷಗಳಿಂದ ಉತ್ತರ ಕರ್ನಾಟಕದ ಹಳ್ಳಿಗಳ ಗ್ರಾಮೀಣ ರಂಗಭೂಮಿಯಲ್ಲಿ ಇಂದಿಗೂ ಯಾವುದಾದರೊಂದು ಸಂದರ್ಭದಲ್ಲಿ ಪ್ರದರ್ಶನಗೊಳ್ಳುತ್ತಿರುತ್ತದೆ.
ಇತ್ತೀಚೆಗೆ ಸಾಗರದ ಸ್ಪಂಧನ ತಂಡವು ಎಂ.ವಿ.ಪ್ರತಿಭಾ ನಿರ್ದೇಶನದಲ್ಲಿ ಧಾರವಾಡದಲ್ಲಿ ಪ್ರದರ್ಶಿಸಿದ ಡಾ.ಎಂ.ಎಂ.ಕಲಬುರ್ಗಿಯವರ ಖರೇ-ಖರೇ ಸಂಗ್ಯಾ-ಬಾಳ್ಯಾ ನಾಟಕವು ಶತಮಾನದ ಹಿಂದೆ ‘ಗಂಗಾ’ ಎಂಬ ಸಂಸಾರಿಕ ಮತ್ತು ಸುಂದರಿ ಮಹಿಳೆಯ ವಿಷಯದಲ್ಲಿ ಸೃಷ್ಟಿಯಾದ ಅಕ್ಷರರೂಪದ ಹಲ್ಲೆಯಾಗಿದೆ ಎಂಬುದರೊಂದಿಗೆ ಸಾಹಿತ್ಯಿಕ ಬೇಜವಾಬ್ದಾರಿಯನ್ನು ಪ್ರಶ್ನಿಸುತ್ತದೆ. ಸತ್ಯಸಂಶೋಧಕರೆಂದು ಹೆಸರಾಗಿದ್ದ ಡಾ.ಕಲಬುರ್ಗಿಯವರು ಸತ್ಯದ ಜಾಡು ಹಿಡಿದು ಹೊರಟ ಸಂಶೋಧನಾತ್ಮಕ ನಾಟಕವಿದು. ಸುಮಾರು 150 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಯನ್ನಾಧರಿಸಿ ಮೂಲ ‘ಸಂಗ್ಯಾ-ಬಾಳ್ಯಾ’ ನಾಟಕಕ್ಕೆ ಮುಖಾಮುಖಿಯಾಗಿ ಹೆಣ್ಣಿನ ವಿಷಯದಲ್ಲಿ ಆದ ಅನ್ಯಾಯ, ಅಪಚಾರವನ್ನು ಖಂಡಿಸಿ, ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸಿರುವುದು ತಿಳಿಯುತ್ತದೆ. ‘ಮಾನವಂತರು ಮಾರಿ ಎತ್ತದಾಂಗ ಮಾಡಬ್ಯಾಡ್ರೀ ನೀವು ತೆಗಳಿ, ಮಾನಗೇಡಿಗಳು ಮೆರಿಯುವಂಗ ನೀವು ಮಾಡಬ್ಯಾಡ್ರೀ ಹೊಗಳಿ, ಬದುಕಿಸಿದರೂ ನೀವು ಭಂಡರನ್ನ ಮತ್ತ ಸಾಯತಾರ, ಸಾಯ ಹೊಡೆದರೂ ಸತ್ಯವಂತರೂ ಸತ್ತು ಬದುಕತಾರ, ಕೆಡಿಸಬೇಡಿರಿ ಕಾಗದ ಗರತಿಯ ಮಿಂಡ ಮಸಿಯ ಕೆಳಗ, ತೊಳೆಯಬೇಡರಿ ವಿಷದ ಲೇಖನಿ ಕುಡಿವ ನೀರಿನೊಳಗ’ ಎಂಬ ಹಾಡಿನೊಂದಿಗೆ ಆರಂಭವಾಗುವ ನಾಟಕವು ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ಸುಳ್ಳಿನ ಸೃಷ್ಟಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತದೆ.
ಡಾ.ಕಲಬುರ್ಗಿ ವಿರಚಿತ ಖರೇ-ಖರೇ ಸಂಗ್ಯಾ-ಬಾಳ್ಯಾ ನಾಟಕದಲ್ಲಿ ಪತ್ತಾರ ಪಾತ್ರಸೃಷ್ಟಿ ಬಹಳ ವಿಶೇಷವಾಗಿದೆ. ಆಭರಣಗಳನ್ನು ಮಾಡಿಸಲು ಪತ್ತಾರನ ಬಂಗಾರದ ಅಂಗಡಿಗೆ ಮುದುಕಿ ಪರವ್ವಳೊಂದಿಗೆ ಆಗಮಿಸುವ ಗಂಗಾ ರೂಪಕ್ಕೆ ಮರುಳಾಗುವ ಪತ್ತಾರನು ಹೇಗಾದರೂ ಮಾಡಿ ದೈಹಿಕ ಸುಖ ಅನುಭವಿಸುವಂತೆ ಅವಳನ್ನು ಒಪ್ಪಿಸಲು ವಿನಂತಿಸಿಕೊಳ್ಳುವುದು, ಆರಂಭದಲ್ಲಿ ನಿರಾಕರಿಸುವ ಪರವ್ವ, ಬಂಗಾರದ ಆಮಿಷಕ್ಕೆ ಗಂಗಾ ಹತ್ತಿರ ವಿಷಯ ತಿಳಸುವುದು. ಗಂಗಾ ಒಪ್ಪದಿದ್ದಾಗ ಸೇಡು ತೀರಿಸಿಕೊಳ್ಳಲು ಗಂಗಾನ ಗಂಡ ಈರಪ್ಪನ ಗೆಳೆಯ ಸಂಗಣ್ಣನೊಂದಿಗೆ ಅನೈತಿಕ ಸಂಬಂಧ ಕಲ್ಪಿಸಿ ಸುದ್ಧಿ ಹಬ್ಬಿಸುವುದು. ಇದನ್ನು ಕೇಳಿದ ಈರಪ್ಪ ಕಂಗಾಲಾಗಿ ತಾಳಿ ಹರಿದುಕೊಂಡು ಗಂಗಾಳನ್ನು ತವರಿಗೆ ಓಡಿಸುವುದು. ತಮ್ಮಂದಿರೊಂದಿಗೆ ಸಂಗಣ್ಣನ ಕೊಲೆ ಮಾಡಿ ಸೇಡು ತೀರಿಸಿಕೊಂಡು ಜೈಲು ಪಾಲಾಗುವುದು. ಮುಂದೆ ಈ ಘಟನೆಗಳನ್ನಾಧರಿಸಿ ಪತ್ತಾರ ಮಾಸ್ತರನು ನಾಟಕ ರಚಿಸಿ ಹಳ್ಳಿ-ಹಳ್ಳಿಗಳಲ್ಲಿ ಪ್ರದರ್ಶನ ಮಾಡುವುದು. ಈ ವಿಷಯದಲ್ಲಿ ತಾನು ತಪ್ಪು ಮಾಡಿದೆನೆಂದು ಪಶ್ಚಾತ್ತಾಪ ಪಡುವ ಪರವ್ವನ ಮಾತುಗಳ ನಂತರ ಮುಕ್ತಾಯವಾಗುವ ನಾಟಕ. ಇಲ್ಲಿ ಸಾಹಿತ್ಯವನ್ನು ದುರೂಪಯೋಗ ಮಾಡಿಕೊಳ್ಳುವ ಪತ್ತಾರನಂಥ ನೀತಿಬಾಹಿರರನ್ನು ಬದುಕಲು ಬಿಡುವುದು, ಸಂಗಣ್ಣನಂಥ ಅಮಾಯಕರ ಬಲಿ, ಈರಪ್ಪನಂಥ ಸಾವುಕಾರರ ಸಹವಾಸವೇ ಗಂಡಾಂತರದ ಆಪತ್ತಿಗೆ ಗುರಿ ಮಾಡುತ್ತದೆ ಎಂಬುದು ಸಾಮಾಜಿಕ ನೀತಿಯಾಗಿ ಉಳಿಯುತ್ತದೆ.
ಸರಳ ಸುಂದರ ರಂಗಸಜ್ಜಿಕೆಯ (ಮೀರಾ ಬೆಂಗಳೂರು) ಈ ನಾಟಕ ಪ್ರದರ್ಶನಕ್ಕೆ ಉತ್ತಮ ಬೆಳಕಿನ ಸಂಯೋಜನೆ (ಸತೀಶ ಶೆಣೈ) ಗಮನ ಸೆಳೆಯಿತು. ವಿನ್ಯಾಸ ಮತ್ತು ನಿರ್ದೇಶನದೊಂದಿಗೆ ಪರವ್ವನ ಪಾತ್ರದಲ್ಲಿ ಎಂ.ವಿ.ಪ್ರತಿಭಾ ನೈಜವಾಗಿ ಅಭಿನಯಿಸಿದರು. ಭಾಗವತನಾಗಿ ಸಂಧೀಪ ಶೆಣೈ, ಬಾಳ್ಯಾ ಪಾತ್ರದಲ್ಲಿ ಶಿವಕುಮಾರ, ಈರಪ್ಪನಾಗಿ ಪರಶುರಾಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ವಿರುಪಾಕ್ಷಿ ಮತ್ತು ಬಸವಂತನಾಗಿ ರವಿಕುಮಾರ ಮತ್ತು ಯಶವಂತ್ ಅವರ ಮುಗ್ದ ಅಭಿನಯ ಎದ್ದು ಕಾಣುತ್ತಿತ್ತು. ಪತ್ತಾರನ ಪಾತ್ರದಲ್ಲಿ ನಾಗೇಂದ್ರ ಕುಮಟಾ ಅವರ ಆಂಗಿಕ ಶೈಲಿ ಇಷ್ಟವಾಯಿತು ಆದರೆ ಭಾಷಾಶೈಲಿ ಇನ್ನೂ ಬದಲಾಗಬೇಕಿದೆÉ ಎಂದು ಅನಿಸಿತು. ಸಂಗಣ್ಣನ ಪಾತ್ರಕ್ಕೆ ಸಂತೋಷ ಶೇಟ್ ಜೀವ ತುಂಬಿದರು. ಇನ್ನೂ ಗಂಗಾ ಪಾತ್ರಧಾರಿ ವಿಜಯಶ್ರೀಯವರು ತೂಕಬದ್ಧವಾಗಿ ಅಭಿನಯಿಸಿದರೂ ಪ್ರೇಕ್ಷಕರಿಗೆ ಕೇಳಿಸುವಂತೆ ಸಂಭಾಷಿಸಬೇಕಾಗಿತ್ತು ಎಂದು ಬಾಲ್ಕನಿಯ ಪ್ರೇಕ್ಷಕರು ಚರ್ಚಿಸುತ್ತಿರುವುದು ಕೇಳಿ ಬಂತು. ಬಹುದಿನಗಳ ನಂತರ ಧಾರವಾಡದ ಪ್ರೇಕ್ಷಕರು ತಮ್ಮದೇ ನೆಲದ ಕಥೆಯೊಂದನ್ನು ಕರಾವಳಿಯವರು ವಿಶಿಷ್ಟ ಶೈಲಿಯಲ್ಲಿ ಅಭಿನಯಿಸಿದ್ದನ್ನು ನೋಡುವ ಅವಕಾಶ ನೀಡಿದ ಸಂಘಟಕರು ಧನ್ಯರು. ಡಾ.ಕಲಬುರ್ಗಿಯವರು ಹತ್ಯೆಯಾಗುವ ಮೊದಲು ಸೃಜನಾ ರಂಗಮಂದಿರದ ಕಾರ್ಯಕ್ರಮದಲ್ಲಿ ಹೇಳಿದ ಮಾತು ‘ಧಾರವಾಡದವರಿಗೆ ಹಿಂಗ ನಾಟಕ ಮಾಡಾಕ ಬರೂದಿಲ್ಲೇಳು!’ ನೆನಪಿಗೆ ಬಂತು. 2012ರಿಂದ ಸಾಗರದ ಸ್ಪಂಧನ ತಂಡದಿಂದ ಪ್ರಯೋಗವಾಗುತ್ತಿರುವ ಈ ನಾಟಕವನ್ನು ಮೊಟ್ಟ ಮೊದಲ ಬಾರಿಗೆ ರಂಗದಲ್ಲಿ ಧಾರವಾಡದ ಹಿರಿಯ ರಂಗಕರ್ಮಿ ಶ್ರೀಮತಿ ವಿಶ್ವೇಶ್ವರಿ ಹಿರೇಮಠರು ಸಣ್ಣಾಟದ ಶೈಲಿಯಲ್ಲಿ ನಿರ್ದೇಶನ ಮಾಡಿ ನಾಡಿನಾದ್ಯಂತ ಪ್ರಯೋಗಿಸಿದ್ದರು. ನಂತರ ವಿಠ್ಠಲ ಕೊಪ್ಪದ ನಿರ್ದೇಶನದಲ್ಲಿ ಜಾನಪದ, ಬಯಲಾಟ ಮತ್ತು ರಿಯಲಿಸ್ಟಿಕ್ ಶೈಲಿಗಳ ಮಿಶ್ರಣದಲ್ಲಿ ಪ್ರದರ್ಶನಗೊಂಡಿತ್ತು.