ಜೀವನದಲ್ಲಿ ಸತ್ಯ ಬಹು ಅಮೂಲ್ಯವಾದುದು. ಸತ್ಯದ ನಡೆ – ನುಡಿ ಕಠಿಣವಾದರೂ, ಮೌಲ್ಯಯುತವಾದುದು. ಬದುಕನ್ನು ಪಾರದರ್ಶಕಗೊಳಿಸಿ ಸತ್ಯವಂತರನ್ನು ಪ್ರಾಕಾಶಿಸುವಂತೆ ಮಾಡುತ್ತದೆ. ಸತ್ಯಕ್ಕೆ ಪ್ರತ್ಯೇಕ ಅಸ್ಥಿತ್ವವಿಲ್ಲ. ಅದು ಅದನ್ನು ಉಳಿಸಿಕೊಳ್ಳಲು ಹೋರಾಡುವುದಿಲ್ಲ. ಅದು ಮಾನವರ ನಡವಳಿಯನ್ನು ಅವಲಂಭಿಸಿರುತ್ತದೆ. ಮಾನವರು ಸತ್ಯದ ಪರ ನಿಂತಂತೆ ಅವರ ವ್ಯಕ್ತಿತ್ವ ಉನ್ನತಿಗೇರುತ್ತಾ ಹೋಗಿ ಅವರದು ಪರಿಶುದ್ದ ಆತ್ಮ ಆಗುತ್ತಾ ಹೋಗುತ್ತದೆ. ಆದ್ದರಿಂದ ‘ ಸತ್ಯ’ ಜೀವಕ್ಕಿಂತ ಅಮೂಲ್ಯ ಎಂದು ಭಾವಿಸಿ ಅಮರರಾದವರು ನಮ್ಮ ಸುತ್ತ ಇದ್ದಾರೆ! ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಮುಚ್ಚಿಟ್ಟಷ್ಟೂ ಬಡಬಾಗ್ನಿಯಂತೆ ಹೊರ ಚಿಮ್ಮುತ್ತದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಶ್ಚಿಯನ್ನರೇ ಹೆಚ್ಚು ವಾಸಿಸುತ್ತಿದ್ದಾರೆ. ನವೋದಯ ಕಾಲದಲ್ಲಿ ಮತ್ತು ಅದಕ್ಕೂ ಮುಂಚೆ ಕ್ರೈಸ್ತರ ಧರ್ಮ ಗುರು ಪೋಪ್ ಗೆ ಕ್ರಿಶ್ಚಿಯನ್ನರ ಮೇಲೆ ಹೆಚ್ಚಿನ ಅಧಿಕಾರ ಇತ್ತು. ಜನ ಅವನನ್ನೇ ದೇವರು ಎಂದು ಭಾವಿಸಿದ್ದರು. ಎಲ್ಲಾ ರಾಜರೂ ಅವನಿಗೆ ಗೌರವ ಕೊಡುತ್ತಿದ್ದರು. ಇವರ ಆದೇಶ ಪಾಲಿಸುತ್ತಿದ್ದರು! ಪೋಪ್ ರಾಜನಿಗಿಂತ ಹೆಚ್ಚು ಬೆಲೆ, ಗೌರವ, ಅಧಿಕಾರ ಹೊಂದಿದ್ದ! ಅವನ ಮಾತು ವೇದ ವಾಕ್ಯವಾಗಿತ್ತು. ಇಂದೂ ಅವರಿಗೆ ವಿಶೇಷ ಸ್ಥಾನ ಮಾನ ಇದೆ!
ವಿಜ್ಞಾನ ತಂತ್ರಜ್ಞಾನ ಯಾವುದೇ ವಿಷಯದಲ್ಲಿ ಇವರದೇ ಅಂತಿಮ ತೀರ್ಮಾನವಾಗಿತ್ತು. ಭೂಮಿ ಚಪ್ಪಟೆಯಾಗಿದೆ ಭೂಮಿಯ ಅಂಚಿಗೆ ಹೋದರೆ ಹಡಗುಗಳು ಕೆಳಕ್ಕೆ ಬಿದ್ದುಬಿಡುತ್ತವೆ ಎಂಬ ನಂಬಿಕೆ ಹಿಂದೆ ಇದ್ದುದರಿಂದ ಬಹು ದೂರ ಹಡಗಿನಲ್ಲಿ ಪ್ರಯಣಿಸುತ್ತಿರಲಿಲ್ಲ. ಹಾಗೇ ಭೂಮಿಯ ಸುತ್ತ ಸೂರ್ಯ ಸುತ್ತುತ್ತಿದ್ದಾನೆ. ವಿಶ್ವಕ್ಕೆ ಭೂಮಿಯೇ ಕೇಂದ್ರ ಎಂದು ನಂಬಿದ್ದರು. ಅಂಥಾ ಸಂದರ್ಭದಲ್ಲಿ ಕೆಲ ವಿಜ್ಞಾನಿಗಳು ಸೌರವ್ಯೂಹಕ್ಕೆ ಸೂರ್ಯನೇ ಕೇಂದ್ರ ಸೂರ್ಯನ ಸುತ್ತ ಭೂಮಿ ಮುಂತಾದ ಗ್ರಹಗಳು ಸುತ್ತುತ್ತಿವೆ ಎಂದು ತಿಳಿದಿದ್ದರೂ ಪೋಪ್ ಗೆ ಹೆದರಿ ಹೇಳಲಾಗಿರಲಿಲ್ಲ. ಕೋಪರ್ನಿಕಸನ ಕಾಲಘಟ್ಟದಲ್ಲಿ ಸೂರ್ಯನು ಭೂಮಿಯ ಸುತ್ತ ತಿರುಗುವನೆಂದು ಟಾಲೆಮಿ ಹೇಳಿದ ಮಾತೇ ಚರ್ಚಿನ ಸಿದ್ಧಾಂತವಾಗಿತ್ತು. ಕ್ಯಾಥೋಲಿಕ್ ಚರ್ಚ್ ತನ್ನ ನಂಬಿಕೆ, ನಡವಳಿಕೆ, ಸಂಪ್ರದಾಯದಲ್ಲಿ ಯಾವುದೇ ಸುಧಾರಣೆ ಒಪ್ಪುತ್ತಿರಲಿಲ್ಲ. ಪ್ರಯುಕ್ತ ಸತ್ಯ ತಿಳಿದವರು ಪೋಪ್ ಗೆ ಅಂಜಿ ಸತ್ಯ ಮುಚ್ಚಿಡುವಂತಾಗಿತ್ತು.
ಸತ್ಯವಾದಿ, ವಿಜ್ಞಾನಿ, ಗಣಿತ ಶಾಸ್ತ್ರಜ್ಞ, ಪಾದ್ರಿಯೂ ಆಗಿದ್ದ ಕೋಪರ್ನಿಕಸ್ ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ ; ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ. ಎಂದು ವಾದಿಸುತ್ತಿದ್ದ. ಆದರೆ ಚರ್ಚಿನ ಸಿದ್ಧಾಂತಗಳಿಗೆ ವಿರುದ್ದವಾದ್ದರಿಂದ ಗ್ರಂಥ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಲಿಲ್ಲ !ಆದರೂ ಮೌಖಿಕವಾಗಿ ಸಾರುವುದನ್ನು ನಿಲ್ಲಿಸಲಿಲ್ಲ! ಸತ್ಯ ಸುಮ್ಮನಿರುವುದಿಲ್ಲ!
ಇಟಲಿಯ ಖಗೋಳ ಶಾಸ್ತ್ರಜ್ಞನಾದ ಗೆಲಿಲಿಯೋ ಗೆಲಿಲಿ ದೂರದರ್ಶಕವನ್ನು ತಯಾರಿಸಿದ. ಅವನ ಕೀರ್ತಿ ಪ್ರಪಂಚದಾದ್ಯಂತ ಹರಡಿತು. ಇದರಿಂದ ಗ್ರಹಗಳ ಚಲನೆಯನ್ನು ಕಣ್ಣಾರೆ ನೋಡಿ, ‘ ಸೂರ್ಯ ‘ ಸೌರವ್ಯೂಹದ ಕೇಂದ್ರ. ‘ ಭೂಮಿ ‘ ಸೂರ್ಯನ ಸುತ್ತ ಸುತ್ತುತ್ತದೆಂಬ ಸತ್ಯವನ್ನು ಬಲವಾಗಿ ಪ್ರತಿಪಾದಿಸಿದನು. ಸೂರ್ಯನ ಕಲೆಗಳನ್ನು, ಚಂದ್ರನಲ್ಲಿರುವ ಬೆಟ್ಟಗಳನ್ನು ದೂರದರ್ಶಕದ ಮೂಲಕ ಅನೇಕರಿಗೆ ತೋರಿಸಿದ. ಇದನ್ನು ಕೆಲವರು ನಂಬದೆ ಟೀಕಿಸಿದರು. ಆ ದೂರದರ್ಶಕದಲ್ಲಿ ಏನೋ ಚಮತ್ಕಾರ ಅಡಗಿದೆ ಎಂದು ಕೆಲವರು ದೂರಿ ಅದನ್ನು ನಂಬಲಿಲ್ಲ! ವೈಜ್ಞಾನಿಕ ಸತ್ಯ ಶೋಧಿಸಿ ಲೋಕಕೆ ತಿಳಿಸಿದುದು ಚರ್ಚಿನ ದೃಷ್ಟಿಯಿಂದ ಅಪರಾಧವಾಗಿತ್ತು. ಹಾಗೂ ಚರ್ಚಿನ ನಂಬುಗೆಗೆ ವಿರುದ್ದವಾಗಿತ್ತು. ಆದ್ದರಿಂದ ಚರ್ಚ್ ಇವನನ್ನು ಬಂಧಿಸಿ ಚರ್ಚಿನ ನ್ಯಾಯಾಲಯಕ್ಕೆ ಒಳಪಡಿಸಿತು. ಧರ್ಮಾಧಿಕಾರಿಗಳ ಮುಂದೆ ಮಂಡಿಯೂರಿ ” ಭೂಮಿ ಚಲಿಸುತ್ತಿಲ್ಲ. ಭೂಮಿಯೇ ವಿಶ್ವದ ಕೇಂದ್ರ. ಕೋಪರ್ನಿಕಸ್ಸನ ಸಿದ್ಧಾಂತ ದುರ್ಬಲವಾಗಿದೆ ” ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿ ಶಿಕ್ಷೆಯಿಂದ ಪಾರಾಗಬೇಕಿತ್ತು. ಬಲವಂತದಿಂದ ಆ ಹೇಳಿಕೆ ನೀಡಿದ! ಆದರೂ ಸತ್ಯವನ್ನು ಮುಚ್ಚಿಡಲು ಇಚ್ಚಿಸದೆ, ನಂತರ ತಾನು ಕಂಡುಹಿಡಿದ ವೈಜ್ಞಾನಿಕ ಸತ್ಯ ಪ್ರಕಟಿಸಿ ಶಿಕ್ಷೆಗೊಳಗಾದ ! ಇದರಿಂದ ಇವನೂ ಬದುಕಿಗಿಂತ ಸತ್ಯ ದೊಡ್ಡದು ಎಂದು ಭಾವಿಸಿರುವುದು ಸ್ಪಷ್ಟವಾಗುತ್ತದೆ.
ಬೆಲ್ಜಿಯಮ್ ನ ವೆಸಾಲಿಯಸ್ ಎಂಬ ವಿಜ್ಞಾನಿಯೊಬ್ಬ ದೇಹದಲ್ಲಿನ ರಕ್ತ ಸಂಚಾರದ ಬಗ್ಗೆ ಅಮೂಲ್ಯ ಗ್ರಂಥವೊಂದನ್ನು ಪ್ರಕಟಿಸಿದ. ಇದೂ ಚರ್ಚಿನ ನಂಬುಗೆಗೆಯನ್ನು ಪ್ರಶ್ನಿಸಿದಂತಿತ್ತು. ಅದಕ್ಕೆ ಅವನನ್ನು ಮರಣ ದಂಡನೆಗೆ ಗುರಿಪಡಿಸಲಾಯಿತು!
ವಿಜ್ಞಾನ ಕ್ಷೇತ್ರದಲ್ಲಿ ಅಲ್ಲದೆ ಧಾರ್ಮಿಕ ಸಾಮಾಜಿಕ ರಂಗಗಳಲ್ಲಿಯೂ ಇದೇ ರೀತಿಯಾದ ಬೆಳವಣಿಗೆ ಕಾಣಬಹುದು. ಚರ್ಚಿನ ಅನೈತಿಕ ಚಟುವಟಿಕೆಗಳನ್ನು ಜಾನ್ ಹಸ್ ಕಟುವಾಗಿ ಖಂಡಿಸಿದನು. ಚರ್ಚಿನ ನ್ಯಾಯಾಲಯವು ಅವನನ್ನು ಕರೆಯಿಸಿ ಚರ್ಚಿನ ತತ್ವಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ” ನನ್ನ ಆತ್ಮಸಾಕ್ಷಿಯ ವಿರುದ್ಧವಾದ ಯಾವುದೇ ವಿಚಾರಗಳನ್ನು ಒಪ್ಪಿಕೊಳ್ಳಲಾರೆ ” ಎಂದು ಜಾನ್ ಹಸ್ ಹೇಳಿದುದಕ್ಕೆ ಚರ್ಚ್ ಅವನನ್ನು ಅಪರಾಧಿಯೆಂದು ತೀರ್ಮಾನಿಸಿ ಜೀವಂತ ಸುಡಲಾಯಿತು! ಆಗಸ್ಟಿನ್ ಚರ್ಚಿನ ಪಾದ್ರಿಯಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಚರ್ಚಿನ ಅನೀತಿಗಳನ್ನು ಬಯಲಿಗೆಳೆದು ಪ್ರಬಲವಾಗಿ ಹೋರಾಡತೊಡಗಿದ. ಅವನಿಗೆ ಚರ್ಚ್ ಶಿಕ್ಷಿಸಲು ಮುಂದಾಯಿತಾದರೂ ಅವನಿಗೆ ಅನೇಕ ರಾಜರ ಬೆಂಬಲವಿದ್ದ ಪ್ರಯುಕ್ತ ಸಾಧ್ಯವಾಗಲಿಲ್ಲ ! ಇವನೇ ಕ್ರಿಶ್ಚಿಯನ್ ಧರ್ಮ ಎರಡು ಪಂಗಡಗಳಾಗಲು ಕಾರಣನಾದ!
ಸತ್ಯ ಹರಿಶ್ಚಂದ್ರನ ಕಥೆ ಎಲ್ಲರಿಗೂ ಗೊತ್ತು. ಅವನ ಸತ್ಯದ ನಡತೆಯನ್ನು ಪರೀಕ್ಷೆಸಲು ವಿಶ್ವಾಮಿತ್ರ ನಿರ್ಧರಿಸುವದು, ಅವನ ರಾಜ್ಯವನ್ನು ಕಸಿದುಕೊಂಡು ಸಾಲಹೊರಿಸಿ ಕಳುಹಿಸುವುದು. ವಿಶ್ವಾಮಿತ್ರ ತನ್ನ ಶಿಷ್ಯನಾದ ನಕ್ಷತ್ರಕನನ್ನು ಸಾಲ ವಸೂಲು ಮಾಡಲು ಕಳುಹಿಸುವುದು, ಹೆಂಡತಿ, ಇದ್ದೊಬ್ಬ ಮಗನನ್ನು ಮಾರಿ, ತನ್ನನ್ನೂ ಮಾರಿಕೊಂಡು ಸಾಲ ಹಿಂದಿರುಗಿಸಲು ಹರಿಶ್ಚಂದ್ರ ಪ್ರಯತ್ನಿಸುವದು, ತನ್ನ ಹೆಂಡತಿ ತನ್ನ ಮಗನ ಶವ ಸುಡಲು ಹೋದಾಗ ಮಸಣದ ಬಾಡಿಗೆ ಕೊಡಲಿಲ್ಲವೆಂದು ಸುಡಲು ಅನುಮತಿ ನಿರಾಕರಿಸಿ ಅರೆ ಬೆಂದ ಕಟ್ಟಿಗೆ ಮೇಲೆ ಮಲಗಿರುವ ಹೆಣದ ಕಾಲು ಹಿಡಿದು ಎಳೆದು ಹಾಕುತ್ತಾನೆ. ಕೊಲೆ ಆರೋಪ ಹೊತ್ತ ಹೆಂಡತಿಯ ಕೊಲ್ಲಲು ಹೋಗುವುದು ಕಾಣುತ್ತೇವೆ. ಇಲ್ಲಿಯ ತನಕ ಸತ್ಯ ವ್ರತ ಬಿಡದೆ ಪಾಲಿಸಿದ್ದು ಎಷ್ಟು ಕಠಿಣ ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ! ಈ ನಡೆ ಮೂಲಕ ಹೆಂಡತಿ, ಮಗ, ರಾಜ್ಯಕ್ಕಿಂತ ಸತ್ಯವೇ ಪರಮ ಶ್ರೇಷ್ಠವಾದುದು ಎಂದು ಸಾರಿ ಹರಿಶ್ಚಂದ್ರ ಸತ್ಯ ಹರಿಶ್ಛಂದ್ರನೆಂದು ಪ್ರಖ್ಯಾತನಾಗಿ ಕೀರ್ತಿವಂತನಾದ!
ಎಂಥಾ ಕಠಿಣ ಸಂದರ್ಭಗಳಲ್ಲೂ ಗಾಂಧೀಜಿ ಸತ್ಯವನ್ನು ಬಿಡಲಿಲ್ಲ. ಸತ್ಯಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದರು. ಸತ್ಯಾಗ್ರಹ ಅಂತ ಬ್ರಿಟಿಷ್ ವಿರುದ್ಧ ಒಂದು ಪ್ರಬಲ, ವಿಶಿಷ್ಟ ಚಳಿವಳಿಯನ್ನೇ ಆರಂಭಿಸಿ ಬ್ರಿಟಿಷರನ್ನು ಸತ್ಯಕ್ಕಿರುವ ಸಾಮರ್ಥ್ಯವನ್ನು ತೋರಿ ನಡುಗಿಸಿದರು. ಸತ್ಯವ್ರತಿಯಾದರೂ ನಮ್ಮವರಿಂದಲೇ ಕೊಲೆಯಾಗಬೇಕಾಯಿತು. ಸತ್ಯ ಶೋಧಕನಾಗಿ ಏಸು ಯಾರಿಗಾಗಿ ಹೋರಾಡಿದನೋ ಅವರಿಂದಲೇ, ( ಯಾತಕ್ಕಾಗಿ ಹೋರಾಡಿದನೋ ಅದರಿಂದಲೇ ) ಶಿಲುಬೆಗೇರಬೇಕಾಯಿತು ! ಇದು ವಿಪರ್ಯಾಸ! ಆದರೂ ಶರೀರ ಅಶಾಶ್ವತ, ಸತ್ಯವೊಂದೇ ಶಾಶ್ವತ ಎಂಬ ತತ್ವ ಸಾರಿ ಇವರೆಲ್ಲಾ ಅಮರರಾಗಿದ್ದಾರೆ!
ಅಥೆನ್ಸ್ ನಗರದಲ್ಲಿ ತತ್ವಜ್ಞಾನಿಯೊಬ್ಬನಿದ್ದ. ಅವನ ಹೆಸರು ಸಾಕ್ರಟೀಸ್ ಅಂತ. ಅವನು ಏನನ್ನೂ ಬರೆಯಲಿಲ್ಲ. ಅವನ ಶಿಷ್ಯರು ಅವನ ವಿಚಾರಗಳನ್ನು ಬರೆದಿಟ್ಟಿದ್ದಾರೆ. ಅದರಿಂದ ಅವನ ವಿಚಾರಗಳನ್ನು ತಿಳಿಯಬಹುದಾಗಿದೆ. ಅವನು ಸತ್ಯ, ಧರ್ಮ, ಪ್ರೇಮ ಇವುಗಳಿಗೆ ಪ್ರಾಮುಖ್ಯ ಕೊಟ್ಟಿದ್ದ. ಪ್ರತಿದಿನ ಇವನು ಅಥೆನ್ಸ್ ನಗರದಲ್ಲಿ ಸುತ್ತಾಡಲು ಹೋಗುತ್ತಿದ್ದ. ಅಲ್ಲೆಲ್ಲಾ ಇವನಿಗಾಗಿ, ಇವನ ಮಾತುಗಳಿಗಾಗಿ, ಪ್ರಶ್ನೆ, ಚರ್ಚೆಗಾಗಿ ಗುಂಪು, ಗುಂಪಾಗಿ ಜನ ಕಾಯುತ್ತಿತ್ತು. ಅವರೊಡನೆ ಇವನು ಸಂಭಾಷಣೆ ಮಾಡುತ್ತಿದ್ದ. ಪ್ರಶ್ನಿಸಿ ಸತ್ಯ ದರ್ಶನ ಮಾಡಿಸುತ್ತಿದ್ದ. ಇವನು ಜನರನ್ನು ತಪ್ಪುದಾರಿಗೆ ಎಳೆಯುತ್ತಾನೆಂಬ ಆರೋಪದ ಮೇಲೆ ಚರ್ಚ್ ಬಂಧಿಸಿತು, ಅವನನ್ನು ತಿದ್ದಿಕೊಳ್ಳವಂತೆ ಎಚ್ಚರಿಸಿತು. ತಿದ್ದಿಕೊಳ್ಳವುದಾಗಿ ತಿಳಿಸಿ ಪ್ರಾಣ ಉಳಿಸಿಕೊಳ್ಳಬಹುದಾಗಿತ್ತು. ತಾನು ಸತ್ಯವನ್ನೇ ನುಡಿದಿದ್ದೇನೆ, ಜನರಿಗೆ ಸತ್ಯದ ದರ್ಶನ ಮಾಡಿಸುತ್ತಿದ್ದೇನೆ. ತಾನು ಮಾಡುತ್ತಿರುವುದು ಸರಿಯಾಗಿದೆ ಎನ್ನುತ್ತಾನೆ. ಅವನ ಈ ಸತ್ಯನಿಷ್ಠೆ ಪ್ರತಿಫಲವಾಗಿ ಅಥೆನ್ಸಿನ ಜೂರಿಗಳು ಅವನಿಗೆ ವಿಷ ಕೊಟ್ಟು ಸಾಯಿಸುವ ಶಿಕ್ಷೆ ಪ್ರಕಟಿಸುತ್ತಾರೆ. ಹಾಗೇ ಹೆಮ್ ಲಾಕ್ ಸಸ್ಯದ ರಸ ಕುಡಿಸಿ ಸಾಯಿಸುತ್ತಾರೆ. ಸತ್ಯ ಉಳಿಸಲು ಸಾವನ್ನು ಸಂತೋಷವಾಗಿ ಆಹ್ವಾನಿಸಿ ಅವನ ಸ್ನೇಹಿತರಿಗೆ ಸಾವಿನ ಅನುಭವ ವಿವರಿಸಿದ ಮಹಾ ದೈರ್ಯಶಾಲಿ ಸತ್ಯ ಪ್ರೇಮಿ ಸಾಕ್ರಿಟೀಸ್! ಹೀಗೇ ಅನೇಕರು ಜೀವಕ್ಕಿಂತ ಸತ್ಯ ಹೆಚ್ಚು ಬೆಲೆಯುಳ್ಳದ್ದು ಎಂದು ಲೋಕಕೆ ಸಾರಿ ಅಮರರಾಗಿದ್ದಾರೆ! ಸತ್ಯಮೇವ ಜಯತೆ ಎಂದಿದ್ದಾರೆ! ಇಂಥವರ ಜೀವನ ಚರಿತ್ರೆ ಓದಿ, ಕೇಳಿಯಾದರೂ ನಾವು ಅವಶ್ಯವಾದಷ್ಟು ಸತ್ಯ ಜೀವನ ನಡೆಸುವುದು ಜೀವಕ್ಕೆ, ಸಮಾಜಕ್ಕೆ ನೆಮ್ಮದಿಯಲ್ಲವೆ?
* ಕೆ ಟಿ ಸೋಮಶೇಖರ ಹೊಳಲ್ಕೆರೆ.