ಸುಮ್ ಸುಮನಾ ಅಂಕಣ

ಸತ್ತವರ ಬಾಯಾಗ ಮಣ್ಣು-ಇದ್ದವರ ಬಾಯಾಗ ಹೋಳಿಗಿ-ತುಪ್ಪಾ: ಸುಮನ್ ದೇಸಾಯಿ


ಈಗ ಸ್ವಲ್ಪ ದಿವಸದ್ದ ಹಿಂದ ಒಂದರಮ್ಯಾಲೊಂದ ಗಣ್ಯರ ನಿಧನದ ಸುದ್ದಿ ಕೇಳಿದ್ವಿ. ಒಂದ ಘಳಿಗಿ ಹಿಂಗಾಗಬಾರದಿತ್ತು ಅನಿಸಿದ್ರು, ರಜಾ ಸಿಕ್ತಲ್ಲಾ ಅಂತ ಖುಷಿ ಆದವರ ಹೆಚ್ಚು. ಎಲ್ಲಾರು ಸೂಟಿ ಸಿಕ್ಕಿದ್ದಕ್ಕ ಒಂದ ನಮುನಿ ಖುಷಿಯ ಮುಗುಳ್ನಗಿ ಮುಖದಮ್ಯಾಲೆ  ತಂದಕೊಂಡು “ ಅಯ್ಯ ಪಾಪ ಹಿಂಗಾಗಬಾರದಿತ್ತ ” ಅಂತ ಅಂದವರ ಭಾಳ ಮಂದಿ. ಜಗತ್ತು ಎಷ್ಟ ವಿಚಿತ್ರ ಅಲ್ಲಾ? ನಮ್ಮ ಉತ್ತರ ಕರ್ನಾಟಕದ್ದ ಕಡೆ ಒಂದು ಆಡು ಮಾತದ ಎನಂದ್ರ “ ಸತ್ತವರ ಬಾಯಾಗ ಅಷ್ಟ ಮಣ್ಣು, ಉಳಿದವರಿಗೆ ಎಲ್ಲಾ ಆರಾಮ ಇರ್ತದ” ಅಂತ . ಅಗದಿ ಖರೆ ಅನಿಸ್ತದ.  ನಮ್ಮ ಕಡೆ ಹಳ್ಳ್ಯಾಗ ಯಾರರೆ ಸತ್ರ ಸಾಕು ಒಂದ ಸಣ್ಣ ಸಮಾವೇಶನ ಸೇರ್ತದ. ಸತ್ತಾಂವನ್ನ ಗೂಟಕ್ಕ ಬಡದ ಕೂಡಿಸಿ, ಜಿವಂತ ಇದ್ದಾಗ ಮಾರಿ ಮಾರಿ ತಿವದ್ರುನು ಚಿಂತಿಲ್ಲಾ, ಸತ್ತಾಗ ಮಾತ್ರ ಇದ್ದುದ್ದು ಇರಲಾರದ್ದು ಗುಣಗೊಳನ ಹುಡುಕಿ ತೆಗದು ಹಾಡ್ಯಾಡಿಕೊಂಡ ಅಳತಿರತಾರ. ಈ ಸತ್ತವರ ಮುಂದ ಅಳೊವರು ಯಾರು ತಮ್ಮ ದುಃಖ ವ್ಯಕ್ತಪಡಿಸೊದಕ್ಕಿಂತ ಹೆಚ್ಚು ಒಬ್ಬರಿಗೊಬ್ಬ ಮ್ಯಾಲಿನ ಹಳೆ ಸಿಟ್ಟು, ದ್ವೇಷಾನ ಹೆಂಗ ಅಂದು ಆಡಿ ತಿರಿಸ್ಕೊಬೇಕಂತ ಕಾಯ್ತಿರ್ತಾರ. ಒಮ್ಮೊಮ್ಮೆ ಜಗಳಾ ಎಷ್ಟ ಧೀರ್ಘಕ್ಕ ಹೋಗಿರತದ ಅಂದ್ರ ನಾ ಹೊಡಿ, ನೀ ಬಡಿ ಅಂತ ಕೈಗೆ ಕೈ ಹತ್ತಿರತದ. ಪಾಪ ಸತ್ತಾಂವ ನಾರಕೋತ ಗೂಟಕ್ಕ ಬಡಕೊಂಡ ಕೂತಿರತಾನ ಅಷ್ಟ, ಉಳದ ಯಾರಿಗು ಯಾವ ಫರಕ ಬಿಳಂಗಿಲ್ಲಾ. ತಮ್ಮ ತಮ್ಮ ಸುರತ್ಯಾಗ ತಾವಿರತಾರ.

ಈ ಹಳ್ಳಿ ಊರಾಗ ಸಂಜಿಮುಂದ ಸತ್ರ ಮಾತ್ರ ಹೆಣಗೋಳ ಮಂದಿನ್ನ ಕಾಣ್ತಾವ. ಇಲ್ಲಾಂದ್ರ ಹೊರೊದ ದೂರ ಉಳಿತು,ನೊಣಾ ಝಾಡಸ್ಲಿಕ್ಕು ಯಾರು ಸಿಗುದಿಲ್ಲಾ. ಎಲ್ಲಾರು ಹೊಲದ ಕೆಲಸಾ,ಕೂಲಿ ಕೆಲಸಾ ಅಂತ ಹೋಗಿರತಾರ. ಅಪ್ಪಿತಪ್ಪಿ ಸಂಜಿಮುಂದ ಯಾರರೆ ಸತ್ರ ಸಾಕು ಗಂಡಸರು ಮನ್ಯಾಗ ಗಡದ್ದ ಊಟ ಮಾಡಿ, ಹೆಗಲಿಗೊಂದು ಟಾವೇಲ ಹಾಕ್ಕೊಂಡು ಸತ್ತವರ ಮನಿಕಡೆ ಹೋದ್ರಂದ್ರ ,ಮರದಿನಾ ಹೆಣಾ ಒಯ್ದ ಸುಡಗಾಡಕ್ಕ ಕಾಣಿಸಿ,ಮೆಟ್ಟಿಗೆ ಹಚ್ಚಿನ ಮನಿಗೆ ಬರತಾರ. ಸತ್ತವರ ಮನಿ ಹೊರಗ ನೋಡತಕ್ಕಂಘ ಇರತದ. ಊರ ಉಸಾಬರಿ ಸುದ್ದೆಲ್ಲಾ ಹೊಂಡತಾವ. ರಾಜಕೀಯ, ಮಳಿ-ಬೆಳಿ,ಹುಡಗಾಹುಡುಗಿ ಓಡಿಹೊಗಿದ್ದು,ಕಳ್ಳ ಸಂಭಂದ ಇಟ್ಕೊಂಡಿದ್ದು, ಅದು ಇದು ಅಂತ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡಿತದ. ಅಲ್ಲೆ ಯಾರದರ ಮನ್ಯಾಗ ಚಹಾ ಮತ್ತ ಚುನಮರಿ ಮಾಡಿ ಕೂತವರಿಗೆಲ್ಲಾ ಸರಬರಾಜಾಗ್ತದ. ಓಣ್ಯಾಗಿನ ಡಬ್ಬಿ ಅಂಗಡಿಗೊಳಿಗೆ ಲಾಭನ ಲಾಭ ಯಾಕಂದ್ರ ಇಡಿ ರಾತ್ರಿ ಬೀಡಿ,ಕಡ್ಡಿಪೆಟ್ಟಿಗಿ, ಎಲಿ-ಅಡಕಿ ತಂಬಾಕ ಮಾರಾಟ ಆಗ್ತದ. ಹೆಂಗೆಂಗ ನಡುರಾತ್ರಿ ಆಗತದೊ ಹಂಗಂಗ ಹವರಗ ಇಸ್ಪಿಟ್ ಎಲಿಗೋಳ ಹೊರಗ ಹಣಿಕಿ ಹಾಕಲಿಕ್ಕೆ ಶೂರು ಆಗತಾವ. ರಾತ್ರಿ ಇಡಿ ಭಜನಿ ಹಚ್ಚಿರತಾರ ಅದರ ಗದ್ದಾಲದಾಗ ಇಸ್ಪಿಟ್ ಎಲಿಗೊಳ ಸಪ್ಪಳಾ ಮುಚ್ಚಿ ಹೋಗಿರತದ.  

ನಮ್ಮ ಓಣ್ಯಾಗ ಹೋದ ತಿಂಗಳ ಗುಡವ್ವ ಮುದುಕಿ ಸತ್ಲು. ಸಂಜಿಮುಂದ ಸತ್ತಿದ್ಲು. ಎಲ್ಲಾರಿಗು ಸುದ್ದಿ ಮುಟ್ಟಿಸಿ, ಅವರೆಲ್ಲಾ ಬರೋದ ಕಾಯ್ಕೋತ ಕೂತಿದ್ರ. ಒಳಗ ಹೆಣದ ಹತ್ರ ಮುದುಕಿಯ ಇಬ್ಬರು ಸೊಸೆಯಂದ್ರು ಕೂತಿದ್ರು. ಇನ್ನ ಬಂದ ಮಂದಿ ಏನರೆ ಅನಬಾರದಂತ ಕಣ್ಣಾಗ ನೀರ ಇಲ್ಲದಿದ್ರು ಸುಮ ಸುಮ್ನ ಒರಿಸ್ಕೊತ ಕೂತಿದ್ರು.  ಹೊರಗ ಕೂತ ಮಂದಿನು ಸುಮ್ನ ಕೂಡಂಗಿಲ್ಲಾ ಏನರೆ ಕಿತಬಿ ಮಾಡತಾರ. ಸೊಸೆಯಂದ್ರ ಅಷ್ಟೇನ ಅಳಲಾರದ್ದ ನೋಡಿ, “ ಅಯ್ಯ ಹೆಣ್ಣ ಮಕ್ಕಳಿದ್ರನ ಹೆಣಾ ಛಂದ” ಅಂತ ಅಂದ್ರು. ಅಂದ್ರ ಸೊಸೆಯಂದ್ರಿಗೆ ಅಂತಃಕರಣ ಇರುದಿಲ್ಲಾ ಕೆಟ್ಟವರಂತ ಇನಡೈರೆಕ್ಟ ಹೇಳಿದಂಗ. ಹಿಂಗಹೇಳಿದಾಕಿ ಏನ ಸತ್ತಾಕಿ ಮ್ಯಾಲಿನ ಅಂತಃಕರಣದಿಂದ ಹೇಳಿರುದಿಲ್ಲಾ, ಅಲ್ಲೆ ಬಂದವರೊಳಗ ತನ್ನ ಅಣ್ಣನ ಅಥವಾ ತಮ್ಮನ ಹೆಂಡ್ತಿನೊ ಇರತಾಳ,ಆಕಿನ್ನ ಹಂಗಿಸಲಿಕ್ಕೆ ಹೇಳಿರತಾಳ ಅಷ್ಟ. ಆಮ್ಯಾಲ ಬಂದ ಮುದಕಿ ಮಗಳು,ತಮ್ಮವ್ವ ಹೋಗಿದ್ದ ದುಃಖಕ್ಕಿಂತ ಅಣ್ಣನ ಹೆಂಡ್ರನ ಹಾಡ್ಯಾಡಿ ಬಯ್ಕೊಂಡ ಅತ್ಲು. ಸತ್ತವರ ಮನಿ ವಾತಾವರಣ ಒಂಥರಾ ಹಳೆಯ ಹಗಿ ತಿರಿಸ್ಕೊಳ್ಳೊ ಆಖಾಡಾಧಂಗಿರತದ. ಒಟ್ಟಿನ ಮ್ಯಾಲೆ ಜನರ ಮನಃಸ್ಥಿತಿ ಹೆಂಗದ್ರ ಸಾವನ್ನು ಸುಂದರವಾಗಿನ ಆಗಬೇಕಂತ ಬಯಸೋದು. ಛಂದಕ್ಕ ಭಾಳ ಬೆಲೆ ಅದ. ನಮ್ಮ ಕಡೆ ಹಳ್ಳಿಗೊಳೊಳಗ ಯಾರನ್ನರ ಸಿಟ್ಟಿನ್ಯಾಗ ಬೈಬೇಕಂದ್ರು ಸುದ್ಧಾ “ ನಿನ್ನ ಹೆಣಾ ಛಂದಾ ಮಾಡ್ಲಿ” ಅಂತನ ಬೈತಾರ.

ಗುಡವ್ವ ಮುದುಕಿ ಹೆಣಾ ತೊಳಿಬೇಕಾದ್ರ ತಲ್ಯಾಗಿನ ಹೆನುಗೊಳ ಹಣಿಮ್ಯಾಲೆ ಬಂದ ಹರದ್ಯಾಡ್ಲಿಕತ್ತಿದ್ವು. ಏನಿಲ್ಲದ ಹಂಗಸೊ ಮಂದಿ ಇದನ್ನ ನೋಡಿ ಸುಮ್ನಿರತಾರ,ಅದರಾಗ ಒಬ್ಬಾಕಿ  ಅಂದಬಿಟ್ಲು, “ ಅಯ್ಯ ಇಬ್ಬಿಬ್ಬರ ಸೊಸ್ತ್ಯಾರ ಕೂಡೆ, ಇದ್ದ ಒಂದ ಜಡ್ಡಿನ ಮುದಕಿನ್ನ ಹಸನ ಮಾಡಿ ವಾಗತ್ತಿಂದ ಜ್ವಾಪಾನ ಮಾಡ್ಲಿಕ್ಕಾಗಿಲ್ಲಂದ್ರ ಇವೆಂಥಾವ ತಗಿರಿ, ನಮ್ಮ ಓಣ್ಯಾಗ ಆಗಿದ್ರ ಸೀರಿ ಎಳದ ಬಡಿತಿದ್ವಿ, ಹಂಗಾ ಬಿಟ್ಟಾರ ಇಂಥಾವಕರನ್ನ ,’ಎಂಥಾ ಓಣ್ಯಾಗಿನ್ನು ಇವು’ ಅಂತ ಆ ಓಣ್ಯಾಗಿದ್ದ ನಮ್ಮನ್ನು ಉಧ್ಧಾರ ಮಾಡಿದ್ರು. ಮಜಾ ಅನಿಸ್ತಿತ್ತು, ಅವರೆಲ್ಲಾ ಹೆಣ್ಣ ಮಕ್ಕಳು ಮಸ್ತ ಹರಟಿ ಹೊಡಕೋತ,ಒಬ್ಬರಿಗೊಬ್ಬರು ಚಾಷ್ಟಿ ಮಾಡಕೋತ ಹೆಣಾ ತೊಳಿಲಿಕತ್ತಿದ್ರು. ಮನಿ ಮಂದಿಗೆಮಾತ್ರ ದುಃಖ ಇರತದ. ಹೊರಗಿನವರಿಗೆ ಅದೊಂದು ಸಾಮಾಜೀಕ ಅನಿವಾರ್ಯತೆ. ಮಂದಿ ಸತ್ತಾಗ ನಾವ ಹೋಗಲಿಲ್ಲಂದ್ರ ನಾಳೆ ನಾವ ಸತ್ತಾಗ ಯಾರು ಬರುದಿಲ್ಲಾ ಅನ್ನೊ ಮನಸ್ಸಿನ ಡುಗುಡುಗಿ. 

ಹಿಂಗ ಒಂದ ಮಜಾಪ್ರಸಂಗ ನೆನಪಾಗ್ಲಿಕತ್ತದ ಎನಂದ್ರ “ ನನ್ನ ತಮ್ಮಾ ಟೂರ್ ಮ್ಯಾಲಿದ್ದಾಗ ಆಂವನ ಪರಿಚಯದ ಒಬ್ಬರ ಡಿಲರ್ ತಿರಿಕೊಂಡಿದ್ರು. ಸುದ್ದಿ ಗೊತ್ತಾಗಿ ನೋಡಕೊಂಡ ಬರಲಿಕ್ಕಂತ ಹೋದಾ. ಇಂವಾ ಒಳಗ ಹೋಗಿ ಸ್ವಲ್ಪ ಹೊತ್ತಿಗೆ ಹೆಣದ ಸುತ್ತ ಕೂತಿದ್ದವರು, “ಅಯ್ಯ ಭಾಳ ಹೊತ್ತಾತು ಹೆಣಾ ವಾಸನಿ ಹರಡಿ ನಾರಲಿಕತ್ತದ, ಇನ್ನ ತಡಾ ಮಾಡಬ್ಯಾಡ್ರಿ ,ಮುಂದಿನ ಕೆಲಸಾ ಮುಗಸರಿ ಅಂದ್ರು. ಇದನ್ನ ಕೇಳಿ ನನ್ನ ತಮ್ಮಗ ತಡಕೊಳ್ಳಾರದಷ್ಟು ನಗು ಬರಲಿಕತ್ತಿತ್ತು. ಯಾಕಂದ್ರ ಆಂವಗ ಒಬ್ಬಾಂವಗ ಗೊತ್ತಿತ್ತು ಅದು “ ತಾ ಕಾಲೊಳಗ ಹಾಕ್ಕೊಂಡಿದ್ದ ಸಾಕ್ಸಿನ ಕೊಳಕ ವಾಸನಿ” ಅಂತ. ಮದಲ ಬ್ಯಾಸಗಿ ದಿನಾ ಆಂವಾ ಊರು ಬಿಟ್ಟ 5 ದಿನಾ ಆಗಿತ್ತು ಒಂದ ಸಾಕ್ಸಿನ ಮ್ಯಾಲೆ ಅಷ್ಟ ದಿನಾ ಅಂದ್ರ ಅವುಕರ ಆವಸ್ಥಿ ಏನಾಗಿರಬ್ಯಾಡಾ ಲೆಕ್ಕಾ ಹಾಕ್ರಿ. ಶೂ ಒಂದ ಹೊರಗ ಬಿಚ್ಚಿಟ್ಟು ಸಾಕ್ಸಿನ ಮ್ಯಾಲೆನ ಒಳಗ ಹೋಗಿದ್ದಾ ಗಬ್ಬ ಹಿಡಿಸಿ ಬಂದಿದ್ದಾ. ಇಂವಾ ಇನ್ನು ಸ್ವಲ್ಪ ಹೊತ್ತ ಅಲ್ಲೆ ನಿಂತಿದ್ರ ಹೆಣಾನು ಎದ್ದು ಮೂಗಮುಚಗೊಂಡ ಓಡಿಹೋಗತಿತ್ತೇನೊ.  

ಒಂದ ಸಲಾ ಹಿಂಗಾ ಆಗಿತ್ತು. ಹೋದ ವರ್ಷ ಛಟ್ಟಿ ಆಮವಾಸಿ ದಿನಾ ನಮ್ಮ ದೂರದ ಬಳಗದವರೊಬ್ಬರು ತಿರಕೊಂಡ್ರು ಅಂತ ಸುದ್ದಿ ಬಂತು. ಮನ್ಯಾಗ ಎಲ್ಲಾರು ಹೋಗಿದ್ವಿ. ಅವರ ಊರ ಮುಟ್ಟೊ ಅಷ್ಟೊತ್ತಿಗೆ ಮಧ್ಯಾಹ್ನ ಆಗಿತ್ತು ಎಲ್ಲಾರಿಗು ಹಸಿವಿನು ಆಗಿತ್ತು. ಎಲ್ಲಾ ಎಷ್ಟೊತ್ತಿಗೆ ಮುಗಿತದೊ ಏನರೆ ಒಂಚೂರ ತಿಂದ ಹೋದ್ರಾತು ಅಂತ ಅಲ್ಲೆ ಇದ್ದ ಒಂದ ಖಾನಾವಳಿಗೆ ಹೋದ್ವಿ. ಅದೊಂದು ಹಳ್ಳಿ ಊರು, ಇಡಿ ಊರಿಗೆ ಅದೊಂದ ಖಾನಾವಳಿ ಇತ್ತಂತ ಕಾಣಸ್ತದ, ಊಟದ್ದ ಟೈಮ್ ಆಗಿತ್ತು ನಾಷ್ಟಾ ಏನು ಸಿಗಲಿಲ್ಲಾ.  ಊಟಾನ ತಗೊಂಡ ಬಾ ಅಂತ ಹೇಳಿದ್ವಿ. ಆವತ್ತ ಅಮವಾಸಿ ಬ್ಯಾರೆ ಇತ್ತು ಮಸ್ತ ಹೊಳಿಗಿ ಊಟದ ತಾಟ ತಂದಿಟ್ಟಾ. ಮತ್ತ ಹೋಡಿ ಹಪ್ಪಳಾ ಸಂಡಿಗಿ ಬ್ಯಾರೆ ಇದ್ವು. ಸಿಕ್ಕಾಪಟ್ಟೆ ಹಸಿವ್ಯಾಗಿತ್ತು ,ಅದನ್ನ ನೋಡಿ ಒಲ್ಲೆ ಅನಲಿಕ್ಕು ಮನಸಿಲ್ಲಾ. ಗಪ್ಪಚಿಪ್ಪ ಎಲ್ಲಾರು ಚಂಡ ಬಗ್ಗಿಸಿ ಊಟಾ ಮಾಡಿ ಮುಗಿಸಿ ಬಿಟ್ವಿ. ಅಂತು ಇಂತು ಹೊಳಿಗಿ ಊಟಾ ಮಾಡಿ ಸತ್ತಾಂವನ್ನ ನೋಡಲಿಕ್ಕೆ ಹೋದ್ವಿ. 

ಸ್ವಲ್ಪ ಹೊತ್ತಿನ  ಮ್ಯಾಲೆ ಅಲ್ಲೆ ಯಾರೊ ಒಬ್ಬರು ಎಲ್ಲಾರು ಬಂಧಂಗಾತು, ದೂರದುರಿಂದ ಬಂದಿರತಾರ, ಮಕ್ಕಳು ಮರಿ ಹಸಿವಿ ನೀರಡಿಕಿ ಹೆಂಗ ತಡ್ಕೊತಾರ ಲಗೂ ಲಗೂ ಮುಗಸ್ರಿನ್ನ ಅಂದದ್ದ ಕೇಳಿ ಹೊಟ್ಟ್ಯಾಗಿನ ಹೋಳಿಗಿ ಎದ್ದೆದ್ದ ಕುಣಿಲಿಕತ್ತಾವ ಅನಿಸ್ಲಿಕತ್ತಿತ್ತು. ಅವರಂದಿದ್ದ ಕೇಳಿ ನಮ್ಮ ತಮ್ಮಾ ನಂಗ “ ಅಕ್ಕಾ ಸತ್ತವರ ಬಾಯಾಗ ಅಷ್ಟ ಮಣ್ಣು. ಇದ್ದವರ ಬಾಯಾಗ ಹೊಳಿಗಿ-ತುಪ್ಪಾ, ಹಪ್ಪಳಾ ಸಂಡಿಗಿ “ ಅಂದದ್ದ ಕೇಳಿ ಒತ್ತರಿಸಿ ಬಂದ ನಗು ತಡಕೊಂಡ್ವಿ..

******

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಸತ್ತವರ ಬಾಯಾಗ ಮಣ್ಣು-ಇದ್ದವರ ಬಾಯಾಗ ಹೋಳಿಗಿ-ತುಪ್ಪಾ: ಸುಮನ್ ದೇಸಾಯಿ

  1. ಲೇಖನ ಅಗ್ದದೀ  ಛಲೋ ಅದ ರೀ, ಮತ್ತ ಮುಂದ ಯಾವ್ದಾರೂ ಸಾವಿಗೆ ಹೋದಾಗ ಇದೆಲ್ಲಾ ನೆನಪಾಗೆ ನಗದ ಇರಬೇಕ ನೋಡ್ರೀ. 🙂

     

  2.   ಅಬ್ಬಬ್ಬಾ … ನಾನು ಒಂದು ಲೇಖನದಲ್ಲಿ ನಾನೇ ಸತ್ತಂಗ ಕನಸು ಬಿದ್ದಿದ್ದನ್ನು ಹಗಲು ಹೊತ್ತು ಕೂತು ಬರೆದಿದ್ದೆ…. ಬಹಳ ಹಾಸ್ಯ ಹುಟ್ಟಿಸುತ್ತವೆ.. ಪ್ರಸಂಗಗಳು.. ಕೊನೆದಾಗಿ ನಿಮ್ಮ ಸಾಲು-      "ಹೊಟ್ಟ್ಯಾಗಿನ ಹೋಳಿಗಿ ಎದ್ದೆದ್ದ ಕುಣಿಲಿಕತ್ತಾವ ಅನಿಸ್ಲಿಕತ್ತಿತ್ತು. "ಇನ್ನೂ ನಗು ತರಿಸಿತು.

  3. ಎಂದಿನಂತೆ, ಲೇಖನ ಚೆನ್ನಾಗಿ ಮೂಡಿ ಬಂದಿದೆ. ಛಲೋ ಬರ್ದೀರಿ.

  4. ಅಯ್ಯೋ ಮೇಡಂ, ಎಂಥಾ ಅದ್ಭುತವಾದ ಮಾತು ಕಣ್ರೀ ನಿಮ್ದು! ಮನಸ್ಸಿನ ಅಲ್ಲಾ ಪ್ರಾಸಂಗಿಕ್ ಲೇಖನಾ ರೀ ನಿಮ್ದು ಅಕ್ಕಾರೇ

Leave a Reply

Your email address will not be published. Required fields are marked *