ಅಮರ್ ದೀಪ್ ಅಂಕಣ

ಸಣ್ಣ ಕಾಕಾ, ಕಂಡಕ್ಟರ್ ಲೈಸೆನ್ಸು ಮತ್ತು ಖಯಾಲಿ: ಅಮರ್ ದೀಪ್ ಪಿ. ಎಸ್.

ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು  ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ.  ಓದು ಹತ್ತಿದರೆ ಹಿಂದೆ ನೋಡದಂತೆ ಓಡುತ್ತಲೇ, ಓದುತ್ತಲೇ ಒಂದು ಘಟ್ಟ ತಲುಪಿ ಬಿಡುತ್ತಾರೆ. ಅರ್ಧಂಬರ್ಧ ಓದಿದವರು ಅಲ್ಲಲ್ಲೇ ಇರುವ ಅವಕಾಶಗಳನ್ನು ಉಪ ಯೋಗಿಸಿಕೊಂಡು ದುಡಿಯುತ್ತಾರೆ. ಸ್ವಂತ ಅಂಗಡಿ, ದುಡಿಮೆ, ಮುಂಗಟ್ಟು ಇದ್ದವರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. 

ಆಗ  ನಮ್ಮ ಊರಿನಲ್ಲಿ ಇದ್ದದ್ದೇ ಆರೆಂಟು  ಸರ್ಕಾರಿ ಶಾಲೆಗಳು, ಮತ್ತು ಖಾಸಗಿ ಶಾಲೆಯೆಂದರೆ ಒಂದು ಖಾಸಗಿ  ಶಿಕ್ಷಣ ಸಂಸ್ಥೆ,  ಶಿಸ್ತಿಗೆ ಹೆಸರಾಗಿದ್ದ ಶಾಲೆ.  ಆ ಶಾಲೆಯಲ್ಲಿ ಸೇರಿದ ಮಕ್ಕಳಿಗೆ  ಬಹಳ ಶಿಸ್ತುಬದ್ಧ ಕಲಿಕೆಗೆ, ನಡವಳಿಕೆಗೆ ಹಾಗೂ ಜೀವನ ರೂಪಿಸಿಕೊಳ್ಳಬಲ್ಲಂಥ ಶಿಕ್ಷಣ ಕೊಡುತ್ತಿದ್ದ ಸಂಸ್ಥೆ.  ಉಳಿದಂತೆ ಸರ್ಕಾರೀ ಶಾಲೆಗಳಲ್ಲೂ ಉತ್ತಮ ಶಿಕ್ಷಕ ವರ್ಗ ಇದ್ದು ಮಕ್ಕಳನ್ನು ರೂಪಿಸುವವ ರಾಗಿದ್ದರು.  ನಾನು ಸೇರಿದ್ದು ಸರ್ಕಾರಿ ಶಾಲೆಗೇ.  ಮನೆ ಹಿಂದೆ ಇದ್ದ ಶಾಲೆಗೆ ಹೊರಟರೆ ನಮ್ಮ ಮನೆಯ ಹಿತ್ತಲಲ್ಲೇ ಸಣ್ಣ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ "ಕಾಕಾ ". ಆ ಅಂಗಡಿಯ ಮಾಲೀಕನ ಹೆಸರು ಇವತ್ತಿಗೂ ನನಗೆ ಗೊತ್ತಿಲ್ಲ .. ಇವತ್ತಿಗೂ ಆತನನ್ನು "ಕಾಕಾ " ಅಂತಲೇ ಕರೆಯುತ್ತೇವೆ . ಆ ಕಾಕಾನ ಹಿರಿಯ ಮಗ ಈರಣ್ಣ ಅಲಿಯಾಸ್ ಈರ, ಸಣ್ಣ ಕಾಕಾ .ಅಲಿಯಾಸ್ ಸಲ್ಮಾನ್ ಖಾನ್, ಸಾಂಗ್ಲಿಯಾನ ಇನ್ನು ಹೆಚ್ಚಿನ ನಾಮಧೇಯಗಳಿಂದ ಕರೆಯುತ್ತಿದ್ದೆವು.  ಅವನು ದೂರದಿಂದ ಬರುತ್ತಿದ್ದರೆ  ಹುಡುಗರು ಸಾಂಗ್ಲಿಯಾನ ಸಿನಿಮಾದಲ್ಲಿ ಶಂಕರ್ ನಾಗ್ ಬರುವಾಗಿನ  ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ಲೇ ಮಾಡೋದು ರೂಢಿಯಾಗಿತ್ತು. ಮೂಲತಃ  ಆ ಕುಟುಂಬ ಉತ್ತರ ಕರ್ನಾಟಕದಿಂದ ಈ ಭಾಗಕ್ಕೆ ವಲಸೆ ಬಂದು ಇದ್ದಿರಬಹುದು.  ಭಾಷೆ ಮಾತ್ರ ಉತ್ತರ ಕರ್ನಾಟಕದ್ದೇ ಅವರಾಡುವುದು.. ಈ ಸಣ್ಣ ಕಾಕಾ ಖಾಸಗಿ ಶಾಲೆಗೆ ಹೋಗುತ್ತಿದ್ದ. 

ಕಾಕಾನ ಬಾಯಿ ಮಾತ್ರ ಭಲೇ ಹರಿತ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಅಷ್ಟೊಂದು ಮುಚ್ಚು ಮರೆ  ಇಲ್ಲದೇ  ಓಪನ್ ಅಪ್ ಆಗಿ ಮಾತಾಡುವುದು, ಜಗಳಾಡುವುದು, ಕಿರಿಚಾಡುವುದು ಮಾಮೂಲು. ಮೊದಲಿಂದಲೂ ಈರನಿಗೆ ಓದು ಹತ್ತಲೇ ಇಲ್ಲ. ಮಾತಿಗೊಮ್ಮೆ  ದೊಡ್ಡ ಕಾಕಾ "ಲೇ ಮಗನಾ ಈರ ಸಾಲಿ ಕಲೀಲಿಲ್ಲಾಂದ್ರ ಸುಮ್ನಾ ಅಂಗಡ್ಯಾಗ್ ಕುಂತು ಬೀಡಿ, ಪೆಪ್ಪರ್ಮೆಂಟ್ ಮಾರಲೇ ಮನಿಗಾರ ಹತ್ತತೈತಿ… ಕೂಳಿಗೇ ಮೂಲಾಗಿ ಇರಬ್ಯಾಡ" ಅಂತಿದ್ದ ರಸ್ತೆಯಲ್ಲಿ ನಿಂತು.  ಕೈ ತಿರುವ್ಯಾಡಿಕೊಂತ  ಮುಂಜೋಲಿ ಮಾಡಿ ಹೊರಟರೆ ಸಣ್ಣ ಕಾಕಾನಿಗೆ ಹೇಳಿದ್ದು ಕಿವ್ಯಾಗೇ ಇರುತ್ತಿದ್ದಿಲ್ಲ.  ಹಾಗಾಗಿ ಕಟ್ಟಿ ಮೇಳಕ್ಕೆ ಬೇಗ ಸದಸ್ಯನಾಗಿಬಿಟ್ಟ. ನಾವೊಂದಿಷ್ಟು ಹುಡುಗರು ಓದಿನ ನಂತರ ಕಟ್ಟೆಗೆ ಸೇರಿದೆವು.  ಈರನ ಬಗ್ಗೆ ಒಂದಿಷ್ಟು ಮಾಹಿತಿ ಹೇಳಿಬಿಡಬೇಕು.  ನೋಡಲು ಸಣ್ಣ ಕಾಕಾ ಥೇಟ್  "ಬರ್ತಾಳೆ ಕನಸಿನ ರಾಣಿ….. ಬರ್ತಾಳೆ … ತರ್ತಾಳೆ … " ಎನ್ನುವ ಅನುಪಮ ಚಿತ್ರದ ಹಾಡಿನಲ್ಲಿ ಅನಂತ ನಾಗ್ ಜೊತೆ  ಕಾಣಿಸಿಕೊಳ್ಳುವ ಡಿಂಗ್ರಿ ನಾಗರಾಜ್ ಹೋಲಿಕೆ, ಮಾತು ಮೂಗಿಂದ ಮಾತಾಡುವ ಅವನ ಮಾತುಗಳನ್ನು ಎರಡೆರಡು ಬಾರಿ ಕೇಳಿಸಿಕೊಂಡ ಮೇಲೆ ಅರ್ಥಮಾಡಿಕೊಳ್ಳಬೇಕು.  ಈಗೀಗ ಸ್ವಲ್ಪ ಸುಧಾರಿಸಿಕೊಂಡಿರಬಹುದು. ಹರಟೆ ಕಟ್ಟೆಗೆ ಸದಸ್ಯನಾದ ಮೇಲೆ ಜೋಕು, ಕೇಕೆ ಇರುವ ವೇಳೆ ದೂರದಿಂದಲೇ ಮಧ್ಯೆ ಬಾಯಿ ಹಾಕಿ "ನಾನೊಂದ್ ನಗೆಣ್ಣಿ ಹೇಳ್ತೀನ್ " ಅಂತಿದ್ದ.   ಹುಡುಗರು "ಪ್ರೈಯಾರಿಟಿ ಬೇಸಿಸ್ ಮೇಲೆ ನಗಣ್ಣಿ ಹೇಳಂತಿ"  ಅನ್ನುತ್ತಿದ್ದರು.  ಸಣ್ಣ ಕಾಕಾ ಮುಂದಾಗುತ್ತಿದ್ದುದು ಅವನ ನಿಲುಕಿಗೆ ಹೊಳೆವಂಥ " ನಗೆ ಹನಿ " ಹೇಳಲು.  ಅವನು ಹೇಳುವ ನಗೆಣ್ಣಿಗಿಂತ ಹೇಳೋ ಸ್ಟೈಲೇ ನಗೆಣ್ಣಿಯಾಗುತ್ತಿತ್ತು. ಸಣ್ಣ ಕಾಕಾ ಅಂದ್ರೆನೇ ನಮಗೆಲ್ಲಾ ನಗೆಣ್ಣಿ (ನಗೆ ಹನಿ ) ಇದ್ದಹಾಗೆ.  

ಹಂಗೂ ಹಿಂಗೂ ಹೈಸ್ಕೂಲ್ ಗೆ ಬಂದ  ಈರ ಈಗೀಗ ದೊಡ್ಡ ಕಾಕಾನಿಗೆ, ತನ್ನ ಕುಟುಂಬಕ್ಕೆ ದುಡಿಮೆಯಾದ ಬೀಡಿ  ಅಂಗಡಿಯಲ್ಲಿ ಕೂತು ಯಾಪಾರ ಮಾಡೋನು . ಹೈಸ್ಕೂಲ್ಗೆ ಬಂದ  ಮೇಲೆ ಯಾರಾದ್ರೂ ಹುಡುಗೀರು ಏನಾದ್ರೂ ಮಾತಾಡಿಸಿದರೆ ಅವತ್ತು ಅವನ ನಡಿಗೆಯಲ್ಲಿನ ಬಿರುಸು ಕಂಡೇ ಹುಡುಗರು ಶಾಲೆ ಮುಂದಿನ ಕುರುಕಿ ದಿನಸಿ ಅಂಗಡಿಗೆ ಎಳೆದುಕೊಂಡು ಹೋಗಿ ಅವನಿಂದ ಕೊಡಿಸಿ ಕೊಂಡು ತಿನ್ನೋರು. ಇಂಥ ಸಣ್ಣ ಕಾಕಾ ಹುಡುಗಿಯ ಬಗ್ಗೆ ಗೋಡೆ ಮೇಲೆ ಬರೆದ ಗುಮಾನಿಗೆ ಒಳಗಾಗಿದ್ದ. "ಇವನಿಗೆ ಕನ್ನಡ ಅಕ್ಷರನೇ ನೆಟ್ಟಗೆ ಬರೆಯಾಕ್ ಬರಾದಿಲ್ಲ ಇವನ್ ಹೆಂಗೆ ಬರೆಯೋಕೆ ಸಾಧ್ಯ" ಅನ್ನುವುದೇ ಜನರ ವಾದ. ಅಂತೂ ಗೋಡೆ ಬರಹದ ಕಿರಿಕಿರಿಯಿಂದ ಹೊರಬಂದ ಈರ, ಓದಿಗೆ ನಮಸ್ಕಾರ ಹೇಳಿ ಕ್ರಮೇಣ ಮನೆ, ಬಜಾರದಲ್ಲಿನ ಬೀಡಿ ಅಂಗಡಿಗೆ ಸೀಮಿತನಾದರೂ ಹುಡುಗರ ಗುಂಪು  ಹಗರಿಬೊಮ್ಮನಹಳ್ಳಿಯಿಂದ ಟಿ. ಬಿ. ಡ್ಯಾಮ್ಗೋ, ಇನ್ನೆಲ್ಲಿಗೋ ಹೊರಡಲು ಅಣಿಯಾದರೆ ಸಣ್ಣ ದುಡಿಮೆಯಲ್ಲೇ ಇದ್ದರೂ ಎಲ್ಲಿಂದಾದರೂ ರೊಕ್ಕ, ಒಂದು ಕೂಲಿಂಗ್ ಗ್ಲಾಸ್ ಜೋಡಿಸಿಕೊಂಡು ರಂಗೀಲಾ ಆಮೀರ್ ಖಾನ್ ತರಹ ಹೋಗಾಣ? ಎಂದು ಬಂದು ಬಿಡುತ್ತಿದ್ದ. ಆಗಾದರೂ ಎಷ್ಟು ಬೇಕಿತ್ತು ದುಡ್ಡು ? ಒಂದು ನೂರಿನ್ನೂರು  ಇದ್ದರೆ ಸಾಕು. ಓಣಿಯಲ್ಲಿ ಯಾವು ದಾದರೂ  ಮದುವೆ ಸಮಾರಂಭ, ಅದೂ ಬೇರೆ ಊರಿನಲ್ಲಿ ಹೋಗಿ ಬರುವುದಿದ್ದರಂತೂ ಹುಡುಗರು ಹಾಜರ್.  ಯಾಕಂದ್ರೆ ಬೇರೆ ಊರಲ್ಲಿ ಮದುವೆ ನೆಪದಲ್ಲಿ ಜಂಗುಳಿಯ ಛತ್ರದ ಯಾವುದಾದರೊಂದು ರೂಂ ಹುಡುಕಿ "ಎಲೆ" ಹರಡಲು ಶುರು ಹಚ್ಚಿದರೆ ಮುಗಿಯಿತು.  "ಇವನೌನ… ಮದುವೆಗೆ ಬಂದ ಮಂದಿ ತಾಳಿ ಆಗಿ ಉಂಡು ತಿರುಗಾ ಲಾರಿ ಹತ್ತಾಕ್ ರೆಡಿಯಾದ್ರು ಇನ್ನೊಂದ್ ಕೈ ಹಾಕ್ರಲೇ" .. ಎಂದು ಕೂಡುವ ಚಾಳಿಗೆ ಹಳಿಯಲಾರೆ, ಹಳಿಯದಿರಲಾರೆ ಎಂಬಂತೆ ಮಂದಿ. ಮದುವೆ ಮಾಡುವ ಮನೆಯವರು ಬಂದು ಜಮಖಾನದ ಲೆಕ್ಕ ಕೊಡಲೇಬೇಕಾದ ಅನಿವಾರ್ಯದಲ್ಲಿ "ಎಲೆ" ಪ್ರಿಯರನ್ನು ಒತ್ತಾಯವಾಗಿ ಎಬ್ಬಿಸಿ ಕಳಿಸಬೇಕಿತ್ತು.  ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಆಟ. ನಿನುವು ಎಷ್ಟೋ ದವಲೇ …. ನಂದೀಟ್ ಹರಿತಲೇ ಬೊಕ್ಕಣ ಎಂದು ಗುಸು ಗುಸು ಮಾಡಿ, ಊರಿಗೆನಾದ್ರೂ ಡೈರೆಕ್ಟ್ ಬಸ್ ಸಿಗೋ ಚಾನ್ಸ್ ಇದ್ದರೆ  ಮದುವೆಗೆ ಬಂದ  ಮಂದೀನ  ಲಾರಿ ಹತ್ತಿಸಿ, ಅವತ್ತು ಸಂಜಿಗೆ ಸಿನೆಮಾ ನೋಡಿಕೊಂಡು ಇಲ್ಲವೇ ಸಾವಜಿ ಖಾನಾವಳಿ ಶೇರ್ವಾ ದರ್ಶನ ಮಾಡ್ಕೊಂಡು ಕಡೆ ಬಸ್ಸೋ ಇರೋ ಬಸ್ಸೋ ಹತ್ಕೊಂಡು ಊರ ಸೇರುವುದು ರೂಢಿ. 

ಒಮ್ಮೆ ಗೆಳೆಯನೊಬ್ಬನ ಮದುವೆಗೆ ಹೋದಾಗ ಈರನಿಗೆ ಇಂಗ್ಲೀಷ್ ನಲ್ಲಿ ವಿಶ್ ಮಾಡಲು ಆಸೆ ಯಾಗಿದೆ.  ಏನ್ ಹೇಳ ಬೇಕೆನ್ನುವುದನ್ನು ಜೊತೆಗಿದ್ದವನನ್ನು ಕೇಳಿದ್ದಾನೆ. " ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ " ಅಂತ ಹೇಳಲು ತಿಳಿಸಿದ್ದಾರೆ. ಅದೇನಾತೋ ಏನೋ ಸ್ಟೇಜ್ ಮೇಲೆ ಕೈ ಕುಲುಕಿ ಹೇಳುವಾಗಲೇ ಹೇಳೋದನ್ನು ಮರೆತು "ವಿಶ್ ಯು …………….  " ಏನೋ ಹೇಳಿದ್ದಾನೆ.  ಸ್ಟೇಜ್ ಕೆಳಗಿಳಿದು ಊಟಕ್ಕೆ ಕುಂತಾಗ "ವಿಶ್ ಮಾಡ್ದೇನಲೇ ಕಾಕಾ? " ಹುಡುಗರು ಕೇಳಿದ್ದಾರೆ.  ಹೇಳ್ ಬಂದ್ನ್ಯಪ್ಪ ; "ವಿಶ್ ಯು ……………….."   ಅಂದಿದ್ದಾನೆ.   ಹುಡುಗರು, "ಅಷ್ಟು ದೊಡ್ಡ ಸೆಂಟ್ಟೆನ್ಸ್ ಒಮ್ಮೆಲೇ ಹೆಂಗಲೇ ಹೇಳ್ಬೇಕು?  ಸಿಂಪಲ್ ಆಗಿ ಕಾಂಗ್ರ್ಯಜುಲೆಶನ್ ಅಂತ್ಹೇಳಿ ಕೊಟ್ಟಿದ್ದರೆ ಬೇಷಿತ್ತು ನೋಡು" ಅಂದರಂತೆ.   ಇನ್ನೊಬ್ಬ ಕಾಲೆಳೆಯುತ್ತಾ, " ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ "ಹೇಳಂದ್ರ, ಸಣ್ಣ ಕಾಕಾ(ಈರ) "ವಿಶ್ ಯು ………………….  " ಹೇಳಿ ಬಂದಾನ, ಇನ್ನೇನಾರಾ ಕಾಂಗ್ರ್ಯಜುಲೆಶನ್ ಹೇಳಂದ್ರ "ಕಂಡಕ್ಟರ್ ಲೈಸೆನ್ಸ್" ಅಂತ ಹೇಳಿರೋನು ಅಂದು ಗೊಳ್ ಎಂದಿದ್ದಾರೆ.  ಓಣಿ ಹುಡುಗರು ಎಷ್ಟೇ ಕಾಡಿಸಿದರೂ, ಸಣ್ಣ ಕಾಕಾ (ಈರ) ಮಾತ್ರ ಅಲ್ಲೇದಲ್ಲಿಗೆ ಬಿಟ್ಟು ಗಾಳಿಗುಂಟ ತೇಲುತ್ತಾ ಹೊರಡುತ್ತಾನೆ.  ಅವತ್ತಿಗೂ ಇವತ್ತಿಗೂ ಹುಡುಗರ ಮಧ್ಯೆ ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ತಾನಾಯಿತು ತನ್ನ ಗೂಡಂಗಡಿ ಆಯಿತು.  ಒಮ್ಮೊಮ್ಮೆ ಹುಮ್ಮಸ್ಸು ಬಂದರೆ ಎಲೆಕ್ಷನ್ ಗೂ ನಿಂತು ನೋಡುವ ಖಯಾಲಿ ಬೇರೆ.  

ಮೊನ್ನೆ ಎಲೆಕ್ಷನ್ ಟೈಮ್ನಲ್ಲಿ  ಮೊದಲೇ ಹೇಳಿದಂತೆ ಉತ್ತರ ಕರ್ನಾಟಕದ ಮಂದಿ ಆದ್ದರಿಂದ ಸೀದಾ ಬಾಗಲಕೋಟೆಗೆ ಹೋಗಿ ಎಮ್ಮೆಲ್ಲೆ ಸೀಟಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಧಿಕಾರಿ ಮುಂದೆ ನಿಂತು ನಾಮಪತ್ರದ ನಮೂನೆ ಪಡೆದಿದ್ದಾನೆ.  ಅಧಿಕಾರಿ ಇವನಿರೋ ಅವತಾರ ನೋಡಿ "ತಮ್ಮಾ, ಯಾರ್ದಾರ ರೆಫರೆನ್ಸ್ ಇದ್ರಾ  ಕೊಡಪ್ಪಾ ನಿಮ್ಮೊರಿನವರದು" ಅಂದಿದ್ದಾರೆ. ಸಣ್ಣ ಕಾಕಾ ನಮ್ಮೂರಿನ ಆಡಿಟರ್ ಆಫೀಸ್ ನ ಸೂರಿ ನಂಬರ್ ಕೊಟ್ಟಿದ್ದಾನೆ.  ಹಿಂದೆಲೇ ಸೂರಿಗೆ ಫೋನಾಯಿಸಿದ ಅಧಿ ಕಾರಿಯು ಖಚಿತಪಡಿಸಿಕೊಂಡಿದ್ದಾರೆ. ಸೀದಾ ಊರಿಗೆ ಬಂದವನೇ " ಸೂರಿ, ಒಂದೆರಡು ಟಾಟಾ ಸುಮೋ ಮಾಡ್ತಿನಲೇ ಒಂದಿಪ್ಪತ್ ಮಂದಿ ಹೋಗಿ ನಾಮಪತ್ರ ತುಂಬಿ ಕೊಟ್ಟು ಬರಾನ " ಅಂದಿದ್ದಾನೆ.   ಅದೆಲ್ಲಿತ್ತೋ ಸೂರಿಗೆ ಪಿತ್ತ "ದುಡ್ಕಂಡು ತಿನ್ನಾಕ ಒಂದ್ ಬೀಡಿ ಅಂಗಡಿ ಡಬ್ಬಿ, ಛಲೋತ್ನಾಗಿ ಇರಾಕ್ ತಟಗು ಸೂರು ಐತಲೇ ಕಾಕಾ. ಸುಮ್ಕಿದ್ದೀ ಸರಿಹೋತು ಇಲ್ಲಾಂದ್ರ ? ಅಂದಿದ್ದಾನೆ.  ಅದಕ್ಕೂ ಮುಂಚೆ ಗ್ರಾಮ ಪಂಚಾಯತಿ ಎಲೆಕ್ಷನ್ಗೂ ನಿಂತಿದ್ದನಂತೆ.. "ನಾವ್ಯಾಕ್ ನಿಂದ್ರಬಾರ್ದಲೇ… ಅನ್ನುವುದು ಸಣ್ಣ ಕಾಕಾನ ವಾದ. ಮೊನ್ನೆ ಮೊನ್ನೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನ್ನ ನೋಡಿ ಹಳೆಯ ದಿನಗಳ ಸಣ್ಣ ಕಾಕಾನನ್ನು ನೆನೆಸಿಕೊಂಡೆ. ಒಬ್ಬೊಬ್ಬರಿಗೆ ಒಂದೊಂದು ಖಯಾಲಿ ಇರುತ್ತದೆ. 

ಖಯಾಲಿ ಅಂದ ಕೂಡಲೇ ನೆನಪಾಯಿತು. ಒಂದು ಬಳ್ಳಾರಿಯಲ್ಲಿ ನಡೆದ ಸಂಗತಿಯೊಂದನ್ನು ಹೇಳುತ್ತೇನೆ. ಅದು "ಖಾಯಿಲೆ " ಎಂದರೂ ತಪ್ಪಿಲ್ಲ ಅಂದುಕೊಳ್ಳುತ್ತೇನೆ.  ಡಿ. ಸಿ. ಕಚೇರಿ ಆವರಣ ದಲ್ಲಿ ಒಂದು  ಇಲಾಖೆಯಲ್ಲಿ ನನ್ನ ಆತ್ಮಿಯರೊಬ್ಬರು ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ  ಅತ್ತ ಸಮಾಜ ಸೇವಕನೂ ಅಲ್ಲದ ಇತ್ತ ಪೂರ್ಣ ಪ್ರಮಾಣದ ರಾಜಕಾರಣಿಯೂ ಅಲ್ಲದ  ಒಬ್ಬ ವ್ಯಕ್ತಿ  ನಾಲ್ಕು ಜನರನ್ನು ಯಾವಾಗಲೂ ಹಿಂದೆ ಕಟ್ಟಿಕೊಂಡು ಕಚೇರಿ ಕಚೇರಿ ಅಲೆದು ತನ್ನಲ್ಲಿದ್ದ ಒಂದು ವಿಸಿಟಿಂಗ್ ಕಾರ್ಡ್ ತೋರಿಸುವುದು ಸಣ್ಣ ಪುಟ್ಟ ಕೆಲಸ ಮಾಡಿಸಿಕೊಳ್ಳುವುದು ಹೀಗೆ ಮಾಡುತ್ತಿದ್ದನಂತೆ. ಅವನ ವಿಸಿಟಿಂಗ್ ಕಾರ್ಡ್ ಗಿಂತ ಅಪ್ರೋಚ್  ಮಾಡುವ "ಕಲೆ"ಯೊಂದನ್ನು ರೂಢಿ ಮಾಡಿಕೊಂಡಿದ್ದನು. ಹೀಗೆ ಒಮ್ಮೆ ನನ್ನ ಆತ್ಮಿಯರ ಕಚೇರಿಗೆ ಹೋಗಿ ಯಾವುದೋ "ಮಾಡಲಾರದಂಥ" ಕೆಲಸದ ಬಗ್ಗೆ ಪ್ರಸ್ತಾಪಿಸಿದ್ದಾನೆ. ನನ್ನ ಆತ್ಮೀಯರು ಕಾನೂನು ಪ್ರಕಾರ "ಆ ಕೆಲಸ " ಲಭ್ಯವಿಲ್ಲದ್ದರ ಬಗ್ಗೆ ತಿಳಿಸಿ ಹೇಳಿದ್ದಾರೆ.  ಆದರೂ ಆ ವ್ಯಕ್ತಿ ತನ್ನಲ್ಲಿದ್ದ  ಕಾರ್ಡ್ ಕೊಟ್ಟು "ನಾನ್ಯಾರ್ ಗೊತ್ತಾ"? ಅಂದಿದ್ದಾನೆ. ನನ್ನ ಆತ್ಮೀಯರಿಗೆ ಆ ವಿಸಿಟಿಂಗ್ ಕಾರ್ಡ್ ನೋಡುತ್ತಲೇ ನಗು ಮತ್ತು ಆಶ್ಚರ್ಯ ಒಟ್ಟಿಗೆ ತಡೆಯಲಾಗದೇ ಒಳಗೊಳಗೇ ಅನುಭವಿಸಿದ್ದಾರೆ. ಆ ವ್ಯಕ್ತಿ  ಯಾವುದಕ್ಕೂ ಜಗ್ಗದೇ "ಅದೇಗೆ ಆಗಲ್ಲವೊ ನಾನು ನೋಡುತ್ತೇನೆ" ಅಂದು ಅಲ್ಲೇ ನಿಂತಿದ್ದಾನೆ.  ನನ್ನ ಆತ್ಮೀಯರು ಸೀದಾ ಸಂಭಂಧಪಟ್ಟ ಪೋಲಿಸ್ ಠಾಣೆಗೆ ಕರೆ ಮಾಡಿ "ಕಚೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ದೂರು ನೀಡಿದ್ದಾರೆ. ಅಷ್ಟೊತ್ತಿನವರೆಗೂ ಹಿಂಬಾಲಕ ರೊಂದಿಗೆ ಬೆನ್ನ ಕೆಳಗಿನ ಭಾಗದ ಮೇಲೆ ಕೈ ಇಟ್ಟು ಜರ್ಪು ತೋರಿಸುತ್ತಿದ್ದ ಆ ವ್ಯಕ್ತಿಯನ್ನು  ಪೊಲೀಸರು ಬಂದು ಒಂದೇ ಒಂದು ಮಾತು ಆಡದೇ ಜೀಪಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ.  

ಆ ಕಡೆ ಪೊಲೀಸರು ವ್ಯಕ್ತಿಯನ್ನು ಎತ್ತಾಕಿಕೊಂಡು ಹೋದದ್ದೇ ತಡ, ಕಚೇರಿಯಲ್ಲಿ ಆ ವ್ಯಕ್ತಿ ನೀಡಿದ್ದ ವಿಸಿಟಿಂಗ್ ಕಾರ್ಡ್ ತೋರಿಸಿ ನನ್ನ ಆತ್ಮೀಯರು ನಕ್ಕಿದ್ದೇ ನಕ್ಕಿದ್ದು.  ಏಕೆಂದರೆ ನಾವೆಲ್ಲರೂ ಇದುವರೆಗೂ ಚುನಾವಣೆಯಲ್ಲಿ ಗೆದ್ದವರು ಲೆಟರ್ ಪ್ಯಾಡ್ ನಲ್ಲಿ, ವಿಸಿಟಿಂಗ್ ಕಾರ್ಡ್ ನಲ್ಲಿ ತಮ್ಮ ಹೆಸರಿನ ಮುಂದೆ ಚುನಾಯಿತ ಹುದ್ದೆಯನ್ನು ಛಾಪಿಸಿಕೊಳ್ಳುವುದನ್ನು ನೋಡಿದ್ದೇವೆ, ಆದರೆ ಸ್ವತಂತ್ರ ಅಭ್ಯರ್ಥಿಯಾಗಿದ್ದ  ಆ ವ್ಯಕ್ತಿ –ಪುಣ್ಯಾತ್ಮ ತನ್ನ ಹೆಸರಿನ ಮುಂದೆ ಬ್ರಾಕೆಟ್ ನಲ್ಲಿ "DEFEATED M.P"   ಎಂದು ಹಾಕಿಸಿಕೊಂಡಿದ್ದನು. ನಗರಸಭೆ ಸದಸ್ಯನ ಚುನಾವಣೆಯಿಂದ ಹಿಡಿದು ಎಂ. ಪಿ. ಚುನಾವಣೆ ವರೆಗೂ ಸ್ಪರ್ಧಿಸಿದ ಕೀರ್ತಿ ಆ ವ್ಯಕ್ತಿಗೆ ಸಲ್ಲುತ್ತದೆ ಮತ್ತು ಸೋತ ದಾಖಲೆಯೂ ಕೂಡ. ಖಯಾಲಿಗಳು ಹೀಗೂ ಇರುತ್ತವೆ. 

ಸಾರ್ವಜನಿಕವಾಗಿರುವ ಇಂಥ "ಖಾಯಿಲೆ " ಮಂದಿ ನಡುವೆ   ಸಣ್ಣ ಖಯಾಲಿ ಇರುವ ಸಣ್ಣ ಕಾಕಾನ ಅಮಾಯಕತೆ ಸುಧಾರಿಸುವಂಥದ್ದು ಏನಂತೀರಾ ?

********

ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ಸಣ್ಣ ಕಾಕಾ, ಕಂಡಕ್ಟರ್ ಲೈಸೆನ್ಸು ಮತ್ತು ಖಯಾಲಿ: ಅಮರ್ ದೀಪ್ ಪಿ. ಎಸ್.

  1. ತೆಪ್ಪು ತಿಳಿಬ್ಯಾಡಿ  ಅಕ್ಕೋರ ನಮ್ ಕಾಕಾ ವಿಶ್ ಮಾಡಿದ್ದು " ವಿಶ್ ಯು ಹ್ಯಾಪಿ ನ್ಯೂ ಇಯರ್….. " ಅಂತ…

 1. Ha ha … KAKA is great chap…. ! Becuase he always feel like "Strongest Person in the world" himself irrespective of his physical and always trying to do different things which makes different from others and he is innocent. Nice writeing about KAKA and his election Kayali, (He got 50 votes out of 1200 in GP election)   

 2. ಜೀವನದ ಅನುಭವಾಮೃತ ಹಂಚೋದು ಅಂದ್ರೆ ಇದೇ ಕಣೋ ಅಮರ್
  ರಾಜ್

 3. ಚೆನ್ನಾಗಿದೆ ಸರ್.. ಕಾಕಾನ ಮುಗ್ಧತೆ… ಒಂದು ಕೈ ನೋಡೇಬಿಡುವ ಎಂಬ ಹುಂಬತನ .. ಜೀವನೋನಾತ್ಸಾಹ..
  ಎರಡನೇ ಕ್ಯಾರೆಕ್ಟರ್ ಲೆಟರ್ ಹೆಡ್ ಶೂರರನ್ನು ನಾನೂ ಕೂಡಾ ನೋಡಿದ್ದೇನೆ .. ಹೆದರಿದರೆ ಹೆಗಲೇರುತ್ತಾರೆ..ತಿರುಗಿ ಬಿದ್ದರೆ ಬೆದರಿ ಎಸ್ಕೇಪಾಗುತ್ತಾರೆ!.. ಐಡೆಂಟಿಟಿ ಕ್ರೈಸಿಸ್ ,ಅವಕಾಶವಾದಿತನ ಮತ್ತು ಭಂಡತನಗಳನ್ನು ಎರಕಕ್ಕೆ ಹಾಕಿ ತಯಾರಿಸಿದಂತೆ ಇರ್ತಾರೆ ಇವರು !

 4. (second line of frst comment )ಎರಡನೇ ಕ್ಯಾರಕ್ಟರ್ ಲೆಟರ್ ಹೆಡ್ ಶೂರರ ಬಗ್ಗೆ .. ನಾನೂ ನೋಡಿದ್ದೇನೆ ಇಂತವ್ರನ್ನು.
  ಹೆದರಿದರೆ ಹೆಗಲೇರ್ತಾರೆ.. ತಿರುಗಿ ಬಿದ್ದರೆ ಬೆದರಿ ಎಸ್ಕೇಪಾಗುತ್ತಾರೆ!.. (contd )

 5. ಇಂಥವರು ನಮಗೀಗ ಎಲ್ಲೇಡೆಗೂ ಸಿಗುತ್ತಿದ್ದಾರೆ…..ಖಯಾಲಿಗಳು ! ಉತ್ತಮ ಲೇಖನ !!

 6. ಕಾಕಾನಾ ಕತೆ ಓದಿ ನಗು ಬಂತು.. ಹೌದು ಇಂತ ಖಯಾಲಿಗಳೋ ಖಾಯಿಲೆಯವ್ರು ತುಂಬಾ ಜನ ಸಿಗ್ತಿರ್ತಾರೆ..

Leave a Reply

Your email address will not be published.