ಮ್ಯಾಗಿಯಲ್ಲಿ ಸತುವಿದೆ, ಕೋಲ್ಗೇಟ್‍ನಲ್ಲಿ ಉಪ್ಪಿದೆ. ಇನ್ನುಳಿದ ಜಂಕ್ ಫುಡ್‍ಗಳಲ್ಲಿ ಯಾವ್ಯಾವ ವಿಷವಿದೆ ಗೊತ್ತಿಲ್ಲ. ಮ್ಯಾಗಿ ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಅದಕ್ಕೆ ನಿಷೇಧ ಹೇರಲಾಯಿತು. ದಾಸ್ತಾನಿನಲ್ಲಿದ್ದ ಎಲ್ಲಾ ಮ್ಯಾಗಿ ಉತ್ಪನ್ನಗಳನ್ನು ನೆಸ್ಲೆ ವಾಪಾಸು ಪಡೆದಿದೆ ಎಂದೆಲ್ಲಾ ಸುದ್ಧಿ ಪ್ರತಿ ಪತ್ರಿಕೆಯ ಎಲ್ಲಾ ಪೇಜುಗಳಲ್ಲಿ. ಇದೇ ಹೊತ್ತಿನಲ್ಲಿ ದೇಶದ ರಾಜಧಾನಿಯನ್ನು ಆಳುತ್ತಿರುವ ಆಮ್ ಆದ್ಮಿ ಸರ್ಕಾರದ ಕಾನೂನು ಸಚಿವರ ಪದವಿಯೇ ಫೇಕು ಎಂಬಂತಹ ಮತ್ತೊಂದು ಬ್ರೇಕಿಂಗ್ ಸುದ್ಧಿ. ಪತ್ರಿಕೆಗಳಿಗೆ ಖುಷಿಯೋ ಖುಷಿ. ಇದರ ಜೊತೆಗೆ ಕುಂದಣವಿಟ್ಟಂತೆ ಕೇಂದ್ರ ಕಾನೂನು ಮತ್ತು ಅರಣ್ಯ ಸಚಿವರು ನೀಡಿದ ಒಂದು ಹೇಳಿಕೆ ಹೀಗಿದೆ. “ಎಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕ್ಕೇರಿದೆಯೋ ಅಲ್ಲಿ ರಾಜ್ಯ ಸರ್ಕಾರ ತನ್ನ ವಿವೇಚನೆಯಿಂದ ವನ್ಯಪ್ರಾಣಿಗಳನ್ನು ಕೊಲ್ಲಬಹುದು ಅಥವಾ ಕೊಲ್ಲಿಸಬಹುದು”. ಮಾನ್ಯ ಪ್ರಕಾಶ್ ಜಾವೇಡ್‍ಕರ್ ಇಂತದೊಂದು ಹೇಳಿಕೆಯನ್ನು ನೀಡಿ “ಭಾರತದ ವನ್ಯಸಂಪತ್ತಿನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಬಿಟ್ಟರು”. ಸರಿ ಸುಮಾರು ಇದೇ ಹೊತ್ತಿನಲ್ಲಿ ಎಂದೂ ಎದ್ದೇಳದ ನಮ್ಮ ರಾಜ್ಯದ ಅರಣ್ಯ ಮಂತ್ರಿಗಳು ಶಿವಾನಂದ ಕಳವೆಯವರ ಕಾನ್ಮನೆಗೆ ಬೇಟಿ ನೀಡಿ ಅಚ್ಚರಿ ಮೂಡಿಸಿದರು. ಇರಲಿ, ಮ್ಯಾಗಿ, ಕೋಲ್ಗೇಟ್ ಆಗಲಿ, ರಾಜ್ಯದ ಅರಣ್ಯ ಮಂತ್ರಿಗಳ ಕಾನ್ಮನೆಗೆ ಬೇಟಿ ಮಾಡಿದ ಬಗ್ಗೆ ಇಲ್ಲಿ ಚರ್ಚೆ ಬೇಡ. ವನ್ಯಪ್ರಾಣಿಗಳನ್ನು ಸಾಂದರ್ಭಿಕವಾಗಿ ಹತ್ಯೆ ಮಾಡಲಡ್ಡಿಯಿಲ್ಲ ಎಂದು ಹೇಳಿದ ಕೇಂದ್ರ ಅರಣ್ಯ ಸಚಿವರ ಅನಾಹುತದ ಈ ಮಾತು ಭಾರತದ ವನ್ಯಸಂಪತ್ತನ್ನು ಶೇಷ ಶೂನ್ಯಕ್ಕೆ ತಂದು ನಿಲ್ಲಿಸುವ ದಿನ ದೂರವಿಲ್ಲ.
ಹಿಂದೊಮ್ಮೆ ಬೆಂಗಳೂರಿನ ಹೈಸ್ಕೂಲ್ ಹುಡುಗಿಗೆ ಒಂದು ಪ್ರಶ್ನೆ ಕೇಳಿದ್ದೆ. ಹಾವು ನೋಡಿದ್ದೀಯಾ? ಹಾಂ! ನೋಡಿದ್ದೇನೆ ಎಂದಳು. ಎಲ್ಲಿ ನೋಡಿದೆ. ಟಿವಿಯಲ್ಲಿ!!!. ವಿಶ್ವದ ಶಕ್ತಿಕೇಂದ್ರವಾಗಿ ಹೊರಹೊಮ್ಮಬೇಕೆಂಬ ಭಾರತದ ಅದಮ್ಯ ಬಯಕೆಯ ಭಾವೀ ಪ್ರಜೆಗಳ ಪರಿಸ್ಥಿತಿಯಿದು. ಮನುಷ್ಯನಿಗೆ ಹವ್ಯಾಸಗಳು ಹಲವು, ಕೆಲವರು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಾರೆ, ಕೆಲವರು ಹಳೇ ಕಾಲದ ನಾಣ್ಯಗಳನ್ನು, ಕೆಲವರು ವಿವಿಧ ರೀತಿಯ ಬೆಂಕಿಪೊಟ್ಟಣಗಳ ಸಂಗ್ರಹ ಮಾಡುತ್ತಾರೆ. ಭಾರತದ ಎಲ್ಲಾ ವನ್ಯಜೀವಿಗಳನ್ನು ರೈತರ ಹೆಸರಿನಲ್ಲಿ ನಾಶ ಮಾಡಿ ಹಾಕಿದರೆ, ಮುಂದೊಂದು ದಿನ ನಮ್ಮ ಚಿಣ್ಣರು ವನ್ಯಪ್ರಾಣಿಗಳ ಛಾಯಾಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬಹುದೇನೋ?
ಭಾರತದ ಭೌಗೋಳಿಕ ಪ್ರದೇಶಕ್ಕೆ ಹೋಲಿಸಿದರೆ ಇಲ್ಲಿ ಜನಸಂಖ್ಯೆ ತುಂಬಾ ಹೆಚ್ಚು. ಅದರಲ್ಲೂ ಗ್ರಾಮೀಣ ಪ್ರದೇಶಗಳೂ ಜನರಿಂದ ತುಂಬಿ ತುಳುಕುತ್ತಿವೆ. ಮಾನವ ಮತ್ತು ವನ್ಯಜೀವಿಗಳ ಸಂಖ್ಯೆಗಳ ಅನುಪಾತದಲ್ಲಿ ತೀರಾ ವ್ಯತ್ಯಾಸವಿದೆ. ಉದಾಹರಣೆಯಾಗಿ ಹೇಳುವುದಾದರೆ, ನಮ್ಮಲ್ಲಿರುವ ಜನಸಂಖ್ಯೆ ಹತ್ತಿರ ಹತ್ತಿರ 130 ಕೋಟಿ, ಅದೇ ಹುಲಿಗಳ ಸಂಖ್ಯೆ ಹದಿನೈದು ನೂರು ಮಾತ್ರ. ಅದೂ ಹೆಚ್ಚು ಇರುವುದು ಸಂರಕ್ಷಿತ ಅರಣ್ಯಗಳಲ್ಲಿ ಮಾತ್ರ. ಸಂರಕ್ಷಿತ ಅರಣ್ಯಗಳ ಅಂಚಿನ ಊರುಗಳ ರೈತರು ಆಗಾಗ ವನ್ಯಜೀವಿಗಳಿಂದ ತೊಂದರೆ ಅನುಭವಿಸುತ್ತಾರೆ, ಆನೆಗಳ ದಾಳಿಗೆ ಬೆಳೆದ ಬೆಳೆ ಹಾಳಾಗುತ್ತದೆ. ಹಾಗಂತ ಅಳಿದುಳಿದ ಆನೆಗಳನ್ನು ರೈತರಿಗೆ ತೊಂದರೆಯಾಗುತ್ತದೆ ಎಂಬ ನೆವದಲ್ಲಿ ಕೊಲ್ಲುತ್ತಾ ಹೋದಲ್ಲಿ ಪರಿಣಾಮವೇನಾಗಬಹುದು?
ಲೆಕ್ಕಕ್ಕೆ ಸುಲಭವಾಗಲೆಂದು ಭಾರತದ ಭೌಗೋಳಿಕ ವಿಸ್ತೀರ್ಣ 100 ಎಕರೆ ಇದೆಯೆಂದು ಇಟ್ಟುಕೊಳ್ಳೋಣ. ಇದರಲ್ಲಿ 95 ಎಕರೆ ಪ್ರದೇಶವನ್ನು ಕೃಷಿಗೋ, ಕಾರ್ಖಾನೆಗೋ ಅಥವಾ ಮರಳುಗಾಡೋ, ಹೀಗೆ ಹಂಚಿಹೋಗಿದೆ. ಉಳಿದ 5 ಎಕರೆ ಪ್ರದೇಶವನ್ನು ಮಾತ್ರ ನಾವು ಸಂಪೂರ್ಣವಾಗಿ ವನ್ಯಜೀವಿಗಳಿಗೆಂದೇ ಮೀಸಲಾಗಿಟ್ಟಿದ್ದೇವೆ. ಸಾಂವಿಧಾನಿಕವಾಗಿ ಹೀಗೆ ರಕ್ಷಣೆಯಾದ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಒಂದೊಮ್ಮೆ ಸರ್ಕಾರಕ್ಕೆ ಮಾನವ ಕೇಂದ್ರಿತ ಅಭಿವೃದ್ಧಿಗಾಗಿ ಅಥವಾ ರಕ್ಷಣೆಯ ವಿಷಯಕ್ಕಾಗಿ ಈ ಪ್ರದೇಶದ ಬಳಕೆ ಅನಿವಾರ್ಯವಾದರೆ, ಅಲ್ಲಿನ ಮಾನವೇತರ ಜೀವಿಗಳು ದೇಶಕ್ಕಾಗಿ ತ್ಯಾಗ ಮಾಡುವುದು ಅನಿವಾರ್ಯ. ಹೀಗೆಂದು ಬಹುಮತದಿಂದ ನಿರ್ಧರಿಸುವ ಅಧಿಕಾರವನ್ನು ಸಂಸತ್ತು ಹೊಂದಿದೆ. ಮತ್ತು ಇದೇ ಅಪಾಯಕಾರಿ ಅಂಶವಾಗಿದೆ.
ಆಸ್ಟ್ರೇಲಿಯಾದಲ್ಲಿ ಕಾಂಗೋರೊಗಳಿವೆ. ಅದು ಅಲ್ಲಿನ ರಾಷ್ಟ್ರೀಯ ಪ್ರಾಣಿಯೂ ಹೌದು. ಅಗಾಧ ಭೌಗೋಳಿಕ ಪ್ರದೇಶವನ್ನು ಹೊಂದಿದ ಈ ದೇಶದಲ್ಲಿ, ಕಾಂಗೋರುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಂಖ್ಯಾಸ್ಪೋಟದ ಸ್ಥಿತಿಯನ್ನು ತಲುಪುತ್ತವೆ. ಈ ಪರಿಸ್ಥಿತಿ ಬಂದಾಗ ಅಲ್ಲಿನ ಸರ್ಕಾರಗಳು ನಿಗದಿತ ಸಂಖ್ಯೆಯ ಕಾಂಗೋರುಗಳನ್ನು “ಕಲ್ಲಿಂಗ್” ಮೂಲಕ ನಿಯಂತ್ರಣಕ್ಕೆ ತರುತ್ತದೆ. ಇಲ್ಲಿ ಕಲ್ಲಿಂಗ್‍ಗೂ ಮತ್ತು ಕಿಲ್ಲಿಂಗ್‍ಗೂ ವ್ಯತ್ಯಾಸವಿದೆ. ಕಲ್ಲಿಂಗ್ ಕೂಡ ಪ್ರಾಣಿಯನ್ನು ಸಾಯಿಸುವ ವಿಧಾನವೇ ಆಗಿದ್ದರೂ, ಇದನ್ನು ಒಂದು ತರಹದ ದಯಾಮರಣದ ಸಾಲಿಗೆ ಸೇರಿಸಬಹುದು. ಸಾಯುವ ಪ್ರಾಣಿಗೆ ನೋವಾಗದಂತೆ, ಅದನ್ನು ತಜ್ಞರು ಎಚ್ಚರ ತಪ್ಪಿಸುತ್ತಾರೆ, ಇವರನ್ನು ಮೇಲ್ನಿಗಾವಹಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಲಕರಣೆಗಳನ್ನು ಬಳಸಲಾಗುತ್ತದೆ. ಯಾವುದೇ ತರಹದ ಸಾರ್ವಜನಿಕ ದೃಶ್ಯಮಾಲಿನ್ಯವಿರದಂತೆ ಜಾಗ್ರತೆ ವಹಿಸಲಾಗುತ್ತದೆ. ಕಲ್ಲಿಂಗ್ ತಜ್ಞರಿಗೆ ಈ ಹೊತ್ತಿನಲ್ಲಿ ಮಾತ್ರ ಪರವಾನಿಗೆ ನೀಡಲಾಗುತ್ತದೆ. ಹೀಗೆ ಈ ಬಾರಿ 5000 ಕಾಗೋಂರುಗಳನ್ನು “ಕಲ್ಲಿಂಗ್” ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಚಿತ್ರ 1 ಕೆಳದಿ ಕೆರೆಯ ದಡದಲ್ಲಿಯ ಕಪ್ಪೆಮರಿಗಳ ಜಾತ್ರೆ
ಚಿತ್ರ 2 ಕೆಂಪು ಏಡಿಗಳ ವಲಸೆ ಹೊತ್ತಿನಲ್ಲಿ ವಾಹನಗಳನ್ನು ನಿಷೇಧಿಸಿದ ರಸ್ತೆ
ಮೊನ್ನೆ ಜೂನ್ 5ರಂದ ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅದೇ ದಿನ ಗ್ರಾಮಪಂಚಾಯ್ತಿ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನಾಂಕವೂ ಆಗಿತ್ತು. ಹಾಗಾಗಿ ನಮ್ಮ ಊರಿನಲ್ಲಿ “ವಿಶ್ವಪರಿಸರ” ದಿನಾಚರಣೆಯ ಸಂಭ್ರಮವಿರಲಿಲ್ಲ. ಸಮಾನರಷ್ಟು ಜನ ಸೇರಿ ಒಂದೈದು ಗಿಡ ನೆಟ್ಟೆವು. ಇದೇ ದಿನ ಸಂಜೆ 6 ಗಂಟೆಗೆ ಮಗನಿಂದ ಕರೆ ಬಂತು. ಪಕ್ಕದ ಮನೆಯೆದುರು ಬೀದಿ ದೀಪದ ಕೆಳಗೊಂದು ಮೊಲದ ಮರಿಯಿದೆ. ನಿಧಾನವಾಗಿ ಎತ್ತಿಕೊಂಡು ಮನೆಯೊಳಗೆ ತೆಗೆದುಕೊಂಡು ಹೋಗಲು ಹೇಳಿದೆ. ಹೋಗಿ ನೋಡಿದರೆ ಒಂದತ್ತು-ಹದಿನೈದು ಗ್ರಾಂ ತೂಗುವ ಮೊಲದ ಮರಿ, ಮುಂದಿನ ಎಡಗಾಲು ಊನವಾಗಿಯೇ ಜನಿಸಿತ್ತು. ಆಕಳ ಹಾಲಿಗೊಂದಿಷ್ಟು ನೀರು ಬೆರೆಸಿ ಕುಡಿಸಿ ಕೈಯಲ್ಲಿಟ್ಟುಕೊಂಡರೆ, ಹಾಯಾಗಿ ನಿದ್ದೆ ಮಾಡಿತು. ಇನ್ನೂ ಕಣ್ಣು ಬಿಡದ ಆ ಮರಿಯನ್ನು ಕನಿಷ್ಟ 15-20 ದಿನಗಳಾದರೂ ಜತನದಿಂದ ನೋಡಿಕೊಳ್ಳಬೇಕಾಗುತ್ತದೆ. ಮಾರನೇ ದಿನ ಮನೆಯಲ್ಲೇ ಬೆಳೆದ ಸಾವಯವ ಎಳೆಯ ಅಲಸಂದೆ ಹಾಗೂ ಗರಿಕೆಯ ಎಳೆ ಕುಡಿಗಳನ್ನು ಹಾಕಿದೆವಾದರೂ ಅದನ್ನು ಮುಟ್ಟಲಿಲ್ಲ. ಚುರುಕಾಗಿಯೇ ಇತ್ತು. ಕಾಲ-ಕಾಲಕ್ಕೆ ಆಕಳ ಹಾಲು ಹೀರುತ್ತಿತ್ತು. ಪಕ್ಕದ ಮನೆಯ ಮೂರು ವರ್ಷದ ಧಾರಿಣಿಗಂತೂ ಮೂರೊತ್ತು ಮೊಲದ ಮರಿಯದೇ ಧ್ಯಾನ. ಭೂತಾಯಿ ಸಕಲ ಚರಾಚರಗಳನ್ನು ತನ್ನೊಡಲಿನಲ್ಲಿ ಹೊತ್ತು ಪೊರೆಯುವಂತೆ, ಈ ಪುಟ್ಟ ಧಾರಿಣಿಯೂ ಮೊಲದ ಮರಿಯನ್ನು ಪೊರೆಯುತ್ತಿದ್ದಳು.
ಹೀಗೆ ಎರೆಡು ದಿನ ಕಳೆಯಿತು. ಮೇ-ಜೂನ್ ತಿಂಗಳೆಂದರೆ, ಮದುವೆ-ಮುಂಜಿಗಳ ಸೀಸನ್. ಅಂದು ಭಾನುವಾರ ಅಂದರೆ ಜೂನ್ 7. ಹೋಗಲೇ ಬೇಕಾದ ಮುಂಜಿಯ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿಸಿ ಊಟ ಮಾಡಿ, ಉತ್ತಮ ಛಾಯಾಚಿತ್ರಕಾರ, ಪರಿಸರಪ್ರೇಮಿ, ಹೊಸಬಾಳೆ ಮಂಜುನಾಥ್ ಮನಗೆ ಹೋಗಿ ಅವರ ಮನೆಯ ಅಪರೂಪದ ಚಿಟ್ಟೆಯ ಸಂಗ್ರಹ ನೋಡಿ, ಫೋಟೊ ತೆಗೆದುಕೊಂಡ ಮಗನಿಗೆ ಆ ಬೇಟಿ ಖುಷಿಯಾಗಿತ್ತು. ಇಷ್ಟರಲ್ಲಿ ಮಳೆಯೂ ಬಂತು. ಅವರ ಮನೆಯ ಆತ್ಮೀಯ ಸತ್ಕಾರವನ್ನೂ ಸ್ವೀಕರಿಸಿದ್ದಾಯಿತು. ವಿಷ ರಾಸಾಯನಿಕಗಳನ್ನು ಬಳಸದೇ ಬೆಳೆದ ಅನಾನಸ್ ಹಣ್ಣಿನ ಹೋಳುಗಳು ಸಕ್ಕರೆಗಿಂತಲೂ ಸಿಹಿಯಾಗಿದ್ದವು. ಮಳೆ ಬಿಟ್ಟ ನಂತರ, ಅವರ ಮನೆಯಿಂದ ಹೊರಟೆವು. ಕಾದ ಕಬ್ಬಿಣದಂತೆ ಆಗಿದ್ದ ಟಾರು ರಸ್ತೆಯ ಮೇಲೆ ಮಳೆ ನೀರು ಬಿದ್ದು, ಆವಿಯಾಗಿ ಮತ್ತೆ ಮೇಲೇರುತ್ತಿತ್ತು. ಕೆಳದಿ ಕೆರೆಯ ಹತ್ತಿರ ಬರುತ್ತಿದ್ದ ಹಾಗೆ ರಸ್ತೆಯ ಮೇಲೊಂದು ಮರಿಕಪ್ಪೆ ಕುಪ್ಪಳಿಸುತ್ತಾ ರಸ್ತೆ ದಾಟುತ್ತಿತ್ತು. ಮಗನಿಗೆ ಹುಷಾರಾಗಿ ಗಾಡಿ ಓಡಿಸಲು ಹೇಳಿ ಒಂದರ್ಧ ಕಿ.ಮಿ. ಮುಂದೆ ಬರುತ್ತಿದ್ದ ಹಾಗೆಯೇ ರಸ್ತೆಯ ಮೇಲೆ ನೂರಾರು ಕಪ್ಪೆ ಮರಿಗಳು ಕುಪ್ಪಳಿಸುತ್ತಿದ್ದವು. ಅಷ್ಟರಲ್ಲೇ ಬಂದ ಪ್ರಕಾಶ್ ಟ್ರಾವೆಲ್ಸ್ ಬಸ್ಸು ವೇಗವಾಗಿ ಕಪ್ಪೆಗುಂಪಿನ ಮೇಲೆ ಹರಿದು ಹೋಯಿತು. ನೂರಾರು ಕಪ್ಪೆಗಳು ಚಟ-ಪಟವೆಂದು ಸಶಬ್ಧವಾಗಿ ಸತ್ತು ಟಾರೋಡಿಗೆ ಅಂಟಿಕೊಂಡವು. ಹೀಗೆ ನಿರಂತರವಾಗಿ ಬರುತ್ತಿದ್ದ, ಕಾರು-ಬೈಕು-ಬಸ್ಸುಗಳಿಗೆ ಆಹುತಿಯಾಗುತ್ತಲೇ ಇದ್ದವು. ಇತಿಹಾಸ ಪ್ರಸಿದ್ಧ ಕೆಳದಿ ಕೆರೆ ಅದೆಷ್ಟು ಕಪ್ಪೆಮರಿಗಳಿಗೆ ಜನ್ಮ ನೀಡಿತ್ತೋ. ಅಗಣಿತ ಸಂಖ್ಯೆಯಲ್ಲಿ ಈ ಉಭಯವಾಸಿಗಳು ಕೆರೆಯ ಮೇಲ್ಭಾಗದ ಊರಿನತ್ತ, ಕಾಡಿನತ್ತ ಹೊರಟಿದ್ದವು.
ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಹೋಗುವ ಏಡಿಗಳಿಗಾಗಿ ವಿದೇಶಗಳಲ್ಲಿ ತಾತ್ಕಾಲಿಕವಾಗಿ ಅಲ್ಲಿನ ರಸ್ತೆಗಳನ್ನು ಮುಚ್ಚುವ ಪರಿಪಾಠವಿದೆ. ಕೆಲವು ದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ವನ್ಯಜೀವಿಗಳಿಗೆ ಅನುಕೂಲವಾಗಲೆಂದೇ ಸುರಂಗಗಳನ್ನು ನಿರ್ಮಿಸಿ ಬಿಟ್ಟಿರುತ್ತಾರೆ. ಜೀವಿವೈವಿಧ್ಯವನ್ನು ಅತ್ಯಂತ ತುಚ್ಛವಾಗಿ ಕಾಣುವ ನಮ್ಮ ಮನ:ಸ್ಥಿತಿಯೆದುರು ಕಪ್ಪೆಗಳು ಯಾವ ಲೆಕ್ಕ! ಆದರೂ ಹೀಗೆ ನೂರರ ಸಂಖ್ಯೆಯಲ್ಲಿ ಹರಣವಾಗುತ್ತಿರುವ ಕಪ್ಪೆಮರಿಗಳನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಇಬ್ಬರೂ ಸೇರಿ ಮತ್ತೆ ಕೆರೆಯ ಕಡೆಗೆ ಮರಿಗಳನ್ನು ವಾಪಾಸು ಕಳುಹಿಸುವ ಪ್ರಯತ್ನವನ್ನು ಮಾಡಿದೆವು. ಅಂದರೆ, ರಾತ್ರಿಯಾಯಿತೆಂದರೆ, ಸ್ವಾಭಾವಿಕವಾಗಿ ವಾಹನಗಳ ಸಂಚಾರ ಕಡಿಮೆಯಾಗುತ್ತದೆಯಾದ್ದರಿಂದ, ಹೆಚ್ಚು ಮರಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚು ಎಂಬುದು ನಮ್ಮ ಅಭಿಮತ. ಈ ಕೆಲಸವನ್ನು ಮಾಡುತ್ತಿರುವ ತಂದೆ-ಮಗನನ್ನು ಅಲ್ಲಿನ ಜನ ವಿಚಿತ್ರವಾಗಿ ನೋಡಿದರು ಎಂದು ಬೇರೆ ಹೇಳಬೇಕಾಗಿಲ್ಲ. ಇಷ್ಟು ಮಾಡಿ ಕೆಳದಿಯಿಂದ ಮನೆಗೆ ಹೋಗುವಷ್ಟರಲ್ಲಿ ಮೊಲದ ಮರಿಯ ಸಾವಿನ ವಾರ್ತೆ ಕಾಯುತ್ತಿತ್ತು. ನಮ್ಮ ಸಾಂಘಿಕ ಪ್ರಯತ್ನದ ಹೊರತಾಗಿಯೂ ಮೊಲದ ಪುಟ್ಟ ಮರಿ ತಮಗಿಲ್ಲಿ ಹೇಗೂ ಉಳಿಗಾಲವಿಲ್ಲವೆಂದು ಕೊಂಡು ಸತ್ತು ಹೋಯಿತೇನೋ? ಧಾರಿಣಿಯ ದು:ಖವನ್ನು ನೀಗಿಸುವ ಬಗೆ ಹೇಗೆ?
ಹಸುರು ಮುಕ್ತ ಭಾರತಕ್ಕೆ ಅಡಿಪಾಯ ಹಾಕಿಯಾಗಿದೆ. ವನ್ಯಜೀವಿಗಳ ಹರಣಕ್ಕೆ ಮುನ್ನುಡಿ ಬರೆದಾಗಿದೆ. ಮುಕ್ತವಾಗಿ ಬಂದೂಕು ಪರವಾನಿಗೆ ನೀಡುವುದು, ಉಚಿತವಾಗಿ ಬುಲೆಟ್‍ಗಳನ್ನು ಹಂಚುವುದು ಮುಂತಾದ ಮುಖ್ಯ ಕೆಲಸಗಳೂ ಇವೆ. ಆದರೂ ಇನ್ನೊಂದು ಮಹತ್ವದ ಕಾರ್ಯ ಬಾಕಿಯಿದೆ ಇಂತಹ ಕೃತ್ಯಕ್ಕೆ ಮುಂದಾದ ಮಾನ್ಯ ಕೇಂದ್ರ ಅರಣ್ಯ ಮಂತ್ರಿಗಳಿಗೆ ಸನ್ಮಾನ ಮಾಡುವುದು. ಉಡದ ಚರ್ಮದಿಂದ ತಯಾರಿಸಿದ ಚಪ್ಪಲಿ, ಜಿಂಕೆ ಚರ್ಮದಿಂದ ಮಾಡಿದ ಕೋಟು, ಹುಲಿಯುಗುರು ಸೇರಿಸಿ ಮಾಡಿದ ಚಿನ್ನದ ಸರದ ಜೊತೆಗೆ ದಂತದಿಂದ ನಿರ್ಮಿಸಿದ ರಾಮನ ವಿಗ್ರಹವನ್ನೇ ನೀಡಿ ಸನ್ಮಾನಿಸೋಣ ಬಿಡಿ. ಏನೀಗ?.
*****
ಸೊಗಸಾಗಿದೆ… ಕಾಂಕ್ರಿಟ್ ನಲ್ಲಿ ಹುಟ್ಟಿದವರಿಂದ ಮತ್ತಿನೆನ್ನನ್ನು ಬಯಸಬಹುದು