ಸಚಿನ್ ಅಂಕೋಲಾ ಅವರ ಪ್ರಗತಿಪರ ಕ್ರಾಂತಿಕಾರೀ ಕವನಗಳು: ಹುಳಗೋಳ ನಾಗಪತಿ ಹೆಗಡೆ

Nagapati Hegde
ಇತ್ತೀಚೆಗೆ ಅಂಕೋಲೆಯ ಪಿ.ಎಮ್. ಜ್ಯೂನಿಯರ್ ಕಾಲೇಜಿನಲ್ಲಿ ಸಚಿನ್ ಅಂಕೋಲಾ ಅವರ, ‘ನಾನೂ ಹೆಣ್ಣಾಗಬೇಕಿತ್ತು..’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಈ ಮೊದಲೇ ತಮ್ಮ ಹಲವು ಗಟ್ಟಿ ಕವನಗಳ ಮೂಲಕ ಅನೇಕ ಹಿರಿಯರ ಗಮನ ಸೆಳೆದವರು ಸಚಿನ್. ಬಹಳಷ್ಟು ಕವಿಗೋಷ್ಠಿಗಳಲ್ಲಿ ಸಾಕಷ್ಟು ಸಶಕ್ತವಾದ ಕವನಗಳನ್ನೇ ವಾಚಿಸಿ, ಕಾವ್ಯಪ್ರಿಯರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದೀಗ ಲೋಕಾರ್ಪಣೆಗೊಂಡಿರುವ ತಮ್ಮ ಕವನ ಸಂಕಲನದಲ್ಲಿ ಹಿರಿಯರು ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಇನ್ನಷ್ಟು ಭರವಸೆಯನ್ನು ಮೂಡಿಸಿ ಕನ್ನಡ ಕಾವ್ಯಲೋಕಕ್ಕೆ ಇನ್ನೊಬ್ಬ ಗಟ್ಟಿ ಕವಿ ಬರುತ್ತಿರುವ ಎಲ್ಲ ಬಗೆಯ ವಿಶ್ವಾಸವನ್ನೂ ಹುಟ್ಟಿಸಿದ್ದಾರೆ. ಒಟ್ಟು 84 ಪುಟಗಳ ಈ ಸಂಕಲನವು 42 ಕವನಗಳನ್ನು ಒಳಗೊಂಡಿದೆ. ಹಿರಿಯರಾದ  ವಿಷ್ಣು ನಾಯ್ಕರು ಮುನ್ನುಡಿಯನ್ನೂ ಬರೆದು ತಮ್ಮ ರಾಘವೇಂದ್ರ ಪ್ರಕಾಶನದಿಂದಲೇ ಪ್ರಕಟಿಸಿದ್ದಾರೆ. ಶ್ಯಾಮಸುಂದರ ಗೌಡ ಅವರು ಅರ್ಥಪೂರ್ಣವಾದ ರಕ್ಷಾಪುಟ ವಿನ್ಯಾಸ ಮಾಡಿದ್ದಾರೆ.
    
ಈ ಸಂಕಲನದಲ್ಲಿರುವ ಸಚಿನ್ ಅವರ ಕವಿತೆಗಳ ಧೋರಣೆ ಅವರ ಶ್ರಮಸಂಸ್ಕೃತಿಯ ಪ್ರತಿಬಿಂಬವಾಗಿದೆ; ಅವರಲ್ಲಿರುವ ಆರೋಗ್ಯಪೂರ್ಣ ಮನಸ್ಥಿತಿಯ ದ್ಯೋತಕವಾಗಿವೆ. ಅಲ್ಲಲ್ಲಿ ಕ್ರಾಂತಿಯ ಕಿಡಿಗಳು ಪ್ರಜ್ವಲಿಸಿದರೂ ಹೆಚ್ಚಿನ ಕವನಗಳಲ್ಲಿ ಅವರ ಪ್ರಗತಿಪರ ನಿಲುವು ಅನಾವರಣಗೊಂಡಿದೆ. ಕೆಲವು ಕವನಗಳಲ್ಲಿ ಸಚಿನ್ ಕಾರ್ಮಿಕರು, ಕೃಷಿಕರು, ಮಹಿಳೆಯರು ಹೀಗೆ ಸಮಾಜದ ಶೋಷಿತರ, ನೊಂದವರ ದನಿಯಾಗಿ ಕಂಡುಬರುತ್ತಾರೆ. ವಿಷ್ಣು ನಾಯ್ಕರು ಮುನ್ನುಡಿಯಲ್ಲಿ ಗುರುತಿಸಿದಂತೆ ಸಚಿನ್ ಅವರ ‘ಪ್ರತಿಯೊಂದು ಬೆವರ ಹನಿಯೂ ಇಲ್ಲಿ ಅಕ್ಷರವಾಗಿ ಮೈದಳೆದು ನಿಂತಿದೆ.’ ಕೆಲವು ಕವನಗಳು ಕವಿಯ ಬಾಲ್ಯದ ನೆನಪುಗಳು ಮತ್ತು ಪ್ರೀತಿ-ಪ್ರೇಮಗಳನ್ನು ನಿವೇದಿಸುತ್ತವೆ.

Sachin Ankola Book
    
ನಾನು ಗಮನಿಸಿದಂತೆ ನಾನೂ ಹೆಣ್ಣಾಗಬೇಕಿತ್ತು, ಹೀಗೊಂದು ಕಿವಿಮಾತು, ಕೊಲ್ಲಬಹುದು ನೀವು, ಗುಲಾಬಿ ನೆಡುವ, ಕಾಂಕ್ರಿಟ್ ಹುಡುಗಿ, ಕಾಲದೊಡನೆ, ಮಹಾಮಾಯೆ, ಕೆಚ್ಚಿನ ಬಾಲೆ, ಅವನ ಹಾಡು, ನನ್ನವರು, ಹರಿಯಲಿ ಬಿಡಿ, ಪ್ರಶ್ನೆ, ಕವಿತೆ, ಮಳೆ ಮತ್ತು ಬದುಕು, ಮೋರಿಯ ಪಕ್ಕದ ಬದುಕು, ದೇವರು, ಆ ದಿನಗಳು, ಕೂಲಿಯವಳು, ಹೀಗೊಂದು ದಿನ ಶಾಲೆಯಲ್ಲಿ, ಮೂತ್ರಖಾನೆಯ ಹುಡುಗ, ಕರಾಳ ಕಣ್ಣು, ಓ ದೇವನೇ ಈ ಮುಂತಾದುವು ಈ ಸಂಕಲನದ ಉತ್ತಮ ಕವನಗಳು. ಇದರ ಅರ್ಥ ಉಳಿದವು ಉಪಯೋಗವಿಲ್ಲ ಎಂದಲ್ಲ; ಇವುಗಳಷ್ಟು ಉಳಿದವು ನನ್ನನ್ನು ಅಷ್ಟಾಗಿ ತಟ್ಟಿಲ್ಲ ಅಷ್ಟೆ.
    
‘ನಾನೂ ಹೆಣ್ಣಾಗಬೇಕಿತ್ತು’ ಕವನದಲ್ಲಿ ಈ ಜಗತ್ತಿನಲ್ಲಿ ಎಲ್ಲಾ ಕಾಲ, ಎಲ್ಲಾ ದೇಶಗಳಲ್ಲಿ ಹೆಣ್ಣು ಅನುಭವಿಸುತ್ತಿರುವ ನೋವು ನರಳಾಟಗಳ ನಡುವೆಯೂ, ಆದರೂ ನಾನು ಹೆಣ್ಣೆ ಆಗಬೇಕಿತ್ತು…!/ ನನಗೂ ಬೇಕಿತ್ತು/ ಉದರದಲ್ಲೊಂದು ಗರ್ಭದ ಚೀಲ/ ಸೃಷ್ಟಿಸಲು ಜೀವವೊಂದಾದರೂ/ ಅದು ಅತ್ತಾಗ/ ಎದೆಗಪ್ಪಿ ಮೊಲೆ ನೀಡಿ/ ತೃಪ್ತಿಯ ಉಸಿರೆಳೆಯಲು ಎಂಬ, ‘ಹೊಸತನ್ನು ಸೃಜಿಸಬೇಕು; ಎದೆಗಪ್ಪಿಕೊಂಡು ಬೆಳೆಸಬೇಕು’ ಎಂಬ ಸೃಜನಶೀಲ ಮನೋಭಾವ ಖುಶಿ ಕೊಡುತ್ತದೆ. 
    
ಹೊಸತನ್ನು ಕಟ್ಟುವ ಹಂಬಲ, ಹೊಸತನದ ಹುಡುಕಾಟ, ಕ್ರಾಂತಿಯ ಕಿಡಿಗಳು, ‘ಹೀಗೊಂದು ಕಿವಿಮಾತು’ ಎನ್ನುವ ಕವನದಲ್ಲಿ ತಣ್ಣನೆಯ ಕಿಡಿಯಾಗಿ ಹೊರಹೊಮ್ಮಿವೆ. ಕವಿಯಾದವನು ತಾನೇ ಕಟ್ಟಿಕೊಂಡ ಕೋಟೆಯೊಳಗೆ ಬಂಧಿಯಾಗಬಾರದು. ಅದರಿಂದ ಹೊರಬಂದು ಸುತ್ತಣ ಪ್ರಪಂಚದ ಆಗುಹೋಗುಗಳನ್ನು ಗಮನಿಸುವ, ಈ ಜಗದ ಕಷ್ಟಕೋಟಲೆಗಳಿಗೆ ಸ್ಪಂದಿಸುವ ಮನೋಭಾವವಿರಬೇಕು. ಅವನಿಗೆ ತನ್ನ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳ ಅರಿವಿರಬೇಕು. ಅವನು ಹೊಲಗದ್ದೆಗಳಲ್ಲಿ, ಸಂತೆಯಲ್ಲಿ, ಕಟ್ಟಡ ಕಟ್ಟುವಲ್ಲಿ ಶ್ರಮಿಸುವ ಶ್ರಮಿಕರನ್ನು ನೋಡಬೇಕು. ಶ್ರಮ ಮತ್ತು ಹಸಿವಿನ ಅನುಭವವಿಲ್ಲದೆ ಕವಿತೆ ಹುಟ್ಟದು ಎನ್ನುತ್ತಾರೆ ಕವಿ. ಈ ಕವಿತೆ ಜಿ.ಎಸ್. ಶಿವರುದ್ರಪ್ಪನವರ, ‘ಮನೆ ಕಟ್ಟುವ ಮಂದಿ’ ಎನ್ನುವ ಕವನವನ್ನು ನೆನಪಿಸುವಂತಿದೆ.

sachin naik
    
‘ಕೊಲ್ಲಬಹುದು ನೀವು….’ ಇನ್ನೊಂದು ಉತ್ತಮ ಕವನ. ಕೊಲ್ಲಬಹುದು ನೀವು :/ ನಿಮ್ಮ ಧರ್ಮದ ಕತ್ತಿಯಲ್ಲಿ/ ನೂರಾರು, ಸಾವಿರಾರು/ ತಲೆಗಳ ಉರುಳಿಸಲೂಬಹುದು…!/ ………… ಆದರೆ ಹೇಳಿ,/ ಒಮ್ಮೆಯಾದರೂ ಕಟ್ಟಬಲ್ಲಿರಾ/ ಹಕ್ಕಿಯಂತೆ ಗೂಡೊಂದನ್ನು…?/ ಹಾರಾಡಬಲ್ಲಿರಾ ದೇಶ-ಗಡಿಗಳ/ ಮೀರಿ ಎಲ್ಲೆಂದರಲ್ಲಿ ಗಾಳಿಯಂತೆ…?/ ಭೇದ ತೋರದೆ ಎಲ್ಲರನು/ ಸಲಹುವ ಭೂಮಿಯಂತೆ/ ತಾಯಿಯಾಗಬಲ್ಲಿರಾ…?? ಎನ್ನುವ ಕವಿ ಮುಂದರಿದು, ಒಂದ್ಲಲಾ ಒಂದು ದಿನ/ ಮುಳ್ಳಿಲ್ಲದ ಗುಲಾಬಿ ಹುಟ್ಟುತ್ತದೆ/ ಜಾತಿ-ಧರ್ಮಗಳ ಸೋಂಕಿಲ್ಲದ/ ಹೊಸಲೋಕ ಹುಟ್ಟುತ್ತದೆ…!! ಎನ್ನುತ್ತಾರೆ. ಈ ಕವನದ ಪ್ರಗತಿಪರ ನಿಲುಮೆ, ಕ್ರಾಂತಿಕಾರಿ ಆಲೋಚನೆಗಳು, ಜಾತಿಧರ್ಮಗಳ ಸೋಂಕಿಲ್ಲದ ಸರ್ವಸಮಾನತೆಯ ಸಮಾಜ ಉದಿಸುವುದೆಂಬ ನಿರೀಕ್ಷೆಗಳು ಮತೀಯ ಮೂಲಭೂತವಾದದ ಝಂಜಾವಾತಕ್ಕೆ ಸಿಲುಕಿ ಚೂರುಚೂರಾಗುತ್ತಿರುವ ಭಾರತಕ್ಕೆ ಹಿಂದೆಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿವೆ. ಎಲ್ಲ ಯುವಮನಸ್ಸುಗಳೂ ಸಚಿನ್‍ರಂತೆ ಯೋಚಿಸಿದರೆ ಈ ದೇಶದಲ್ಲಿ ನಮ್ಮನ್ನು ಬಂಧಿಸುವ ಯಾವ ಸಂಕೋಲೆಯಾದರೂ ಉಳಿದೀತೆ?
    
‘ಗುಲಾಬಿ ನೆಡುವ’ ಕವನದಲ್ಲಿಯೂ ಗುಂಡಿಗೆ ಬದಲು ಗುಂಡೇ ಉತ್ತರವಲ್ಲ; ಮಾನವ ಪ್ರೀತಿಯನ್ನು ಬೆಸೆಯಲು ಕೆಂಪು, ಹಳದಿ, ಬಿಳಿ/ ಮುಳ್ಳುಗಳಿಲ್ಲದ ಗುಲಾಬಿ ನೆಡಬೇಕಿದೆ ಎನ್ನುತ್ತಾರೆ ಕವಿ. ಇಲ್ಲಿ ಕವಿಗೆ ಪ್ರೀತಿಯ, ಸ್ನೇಹ-ಸಹಬಾಳ್ವೆಯ ಗುಲಾಬಿಯನ್ನು ನೆಡಬೇಕಿದೆ. ಈ ಸ್ವಸ್ಥ ಯುವಮನಸ್ಸಿನ ‘ಮುಳ್ಳುಗಳಿಲ್ಲದ ಗುಲಾಬಿ ನೆಡುವ’ ತುಡಿತ ಮೆಚ್ಚುಗೆಯಾಗುತ್ತದೆ.  ‘ಮುಳ್ಳುಗಳಿಲ್ಲದ ಗುಲಾಬಿ’ ಸಚಿನ್ ಅವರ ಕವನಗಳಲ್ಲಿ ಒಂದು ಅತ್ಯುತ್ತಮವಾದ ರೂಪಕವಾಗಿ ಕಂಡುಬರುತ್ತದೆ.
    
‘ಕವಿತೆ’ ಒಂದು ಕ್ಷಣ ಹಿಡಿದು ನಿಲ್ಲಿಸುವ – ಓದುಗನನ್ನು ಸೆರೆಹಿಡಿದು ನಿಲ್ಲಿಸುವ ಕವನ. ಸುಮ್ಮನೆ ಕುಳಿತಿರುವ ಕವಿತೆ, …..ಗಂಗೆಯಾಗುತ್ತದೆ/ ಎದೆಯಿಂದ ಎದೆಗೆ ಮಾನಸಗಂಗೆಯಾಗುತ್ತದೆ/ ತನ್ನೊಡಲ ತೆರೆದಿಟ್ಟು/ ಬೆತ್ತಲಾಗುತ್ತದೆ…!!/ ಹಗುರಾಗುತ್ತದೆ…!!/ ಮುಕ್ತವಾಗುತ್ತದೆ….!!! ಎಂಬ ಸಾಲುಗಳು ಆಪ್ತವಾಗುತ್ತವೆ.
    
‘ದೇವರು’, ‘ದೇವನಿರುವನು/ ಅಡಿಪಾಯದಲ್ಲಿ/ ಅಡಿ ಅಡಿಯ ಶ್ರಮದಲ್ಲಿ/ ದಣಿದ ದೇಹದ ರಟ್ಟೆಯಲ್ಲಿ…!!’ ಎನ್ನುತ್ತ ಶ್ರಮಸಂಸ್ಕೃತಿಯನ್ನು ತೆರೆದಿಡುವ ಕವನ.
    
‘ಹೇ ತಾಯಿ/ ನೀನು ಕಡಲು/ ಬತ್ತದ ಒಡಲು/ ನೀ ಜಗದ ಮಹಾಮಾಯೆ…!! ತಾಯಿಜೀವದ ಕುರಿತು ಎಂದಿನಿಂದಲೂ ಉಳಿದುಕೊಂಡೇ ಬಂದಿರುವ ಜಗದಚ್ಚರಿಯನ್ನು ಕಾಪಿಟ್ಟುಕೊಂಡು ಬಂದಿದೆ.
    
‘ಮಳೆ ಮತ್ತು ಬದುಕು’ ಹಾಗೂ ‘ಮೋರಿಯ ಪಕ್ಕದ ಆಕೆ’ ಕವನಗಳು ರೈತರು, ಕೂಲಿ-ಕುಂಬಳಿಯವರ ಸಂಕಷ್ಟಗಳಿಗೆ ಸ್ಪಂದಿಸುವ ಕವನಗಳು.
    
‘ಹೀಗೊಂದು ದಿನ ಶಾಲೆಯಲ್ಲಿ’ ಎಲ್ಲವೂ ಇದ್ದು ಅವಶ್ಯವಾಗಿ ಬೇಕಾಗಿರುವುದೇ ಇಲ್ಲದ – ಮಕ್ಕಳ ಕೊರತೆ ಇಂದಿನ ಕನ್ನಡ ಶಾಲೆಗಳ ದುಃಸ್ಥಿತಿಯನ್ನು ಬಿಂಬಿಸುವ ಕವನ.    ‘ಕಾಲದೊಡನೆ’ ‘ಬದುಕು ಕಾರ್ಖಾನೆ’ಯೆನ್ನುತ್ತ ಯಾಂತ್ರಿಕ ಜೀವನದ ಏಕತಾನತೆಯನ್ನು ಪ್ರತಿಬಿಂಬಿಸುತ್ತದೆ. ‘ಅವನ ಹಾಡು’ ಕಾರ್ಮಿಕರ ಗೋಳನ್ನು ಬಿತ್ತರಿಸುವ ಒಂದು ಕ್ರಾಂತಿಕಾರಿ ಕವನ. ‘ಕಾಯ್ತೇ ಇದ್ದಿ’ ಮತ್ತು ‘ಸಂಕಟ’ ಇವು ಆಡುನುಡಿಯಲ್ಲಿರುವ ಗ್ರಾಮೀಣ ಸೊಗಡಿನ ಕವನಗಳು.
    
ಒಟ್ಟಂದದಲ್ಲಿ ಹೇಳುವುದಾದರೆ ಹೆಚ್ಚಿನ ಸಂಖ್ಯೆಯ ಉತ್ತಮ ಕವನಗಳನ್ನು ಹೊಂದಿರುವ ಈ ಸಂಕಲನವು ಈ ಯುವ ಕವಿ ಸಚಿನ್ ಮುಂದೊಂದು ದಿನ ಮಾರ್ಕೆಬಲ್-ಗುರುತಿಸಬಲ್ಲಂತಹ ಕೃತಿಗಳನ್ನು ಖಂಡಿತವಾಗಿಯೂ ಕೊಡುತ್ತಾರೆ; ಅವರಲ್ಲಿ ಆ ಸಾಮಥ್ರ್ಯವಿದೆ ಎಂಬ ಭರವಸೆಯನ್ನು ಮೂಡಿಸುವಲ್ಲಿ ಸಫಲವಾಗಿದೆ ಎಂಬುದು ನನ್ನ ಅಭಿಪ್ರಾಯ.
– ಹುಳಗೋಳ ನಾಗಪತಿ ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x