ಬಹಳ ವರುಷ ಒಂದೇ ಸ್ಥಳದಲ್ಲಿ, ಒಂದೇ ವಾತಾವರಣದಲ್ಲಿ ವಾಸಿಸುವುದರಿಂದ, ಒಂದೇ ರುಚಿ ಆಹಾರ ಸೇವಿಸುವುದರಿಂದ ಬೇಸರ ಉಂಟಾಗುವುದು ಸಾಮಾನ್ಯ! ಅದಕ್ಕೇ ಆಗಾಗ ಹಬ್ಬಗಳು, ಜಾತ್ರೆಗಳು ಬಂದು ವಿಧವಿಧ ರುಚಿಯ ಭಕ್ಷ್ಯ ಬೋಜ್ಯಗಳ ತಂದು, ನೆಂಟರಿಷ್ಟರ ಮನೆತುಂಬಿಸಿ, ಪೂಜೆ ಪುರಸ್ಕಾರ ಗಂಟಾ ಘೋಷಗಳಲಿ ಮೀಯಿಸಿ, ಮನೆಯ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ವಾತಾವರಣವನ್ನು ಬದಲಾಯಿಸಿ ಏಕತಾನತೆಯ ಬೇಸರ ಕಳೆದು ಬದುಕುವ ಉತ್ಸಾಹವ ತುಂಬುವ ಹೊಸ ಹುರುಪು ತುಂಬುವ ಉಪಾಯಗಳ ನಮ್ಮ ಹಿರಿಯರು ವರುಷ ಪೂರ್ತಿ ಮಾಡಿರುವುದು! ಪ್ರವಾಸ, ತೀರ್ಥಯಾತ್ರೆಗಳು ಇದಕ್ಕೇ ಪೂರಕವಾದುವು!
ಮನೆಯಲ್ಲಿ ಎಲ್ಲೋ ಇಟ್ಟ ವಸ್ತುಗಳ ಬೇಕೆಂದಾಗ ಹುಡುಕುವುದು ಸಾಮಾನ್ಯ. ಕೆಲವೊಮ್ಮೆ ತಕ್ಷಣ ಕಾಣಿಸಿದರೆ ಕೆಲವೊಮ್ಮೆ ಅಲ್ಲೇ ಇದ್ದರೂ ಕಣ್ಣಿಗೆ ಕಾಣಿಸವು. ಆಗ ಹುಡುಕುವುದೇ ಕೆಲಸವಾಗುವುದು. ಹೀಗೆ ಹುಡುಕಿ ಹುಡುಕಿ ಏನು ಮಾಡಿದರು ಸಿಗಲಿಲ್ಲ ಅಂತ ನನ್ನ ಜೀವನ ಸಂಗಾತಿ ಮತ್ತು ಮಗಳು ಸೋತು ” ಆ ವಸ್ತು ಸಿಗಲಿಲ್ಲ ಇಲ್ಲೇ ಇಟ್ಟಿದ್ದೆ ” ಎಂದು ಪರಿತಪಿಸುತ್ತಾ ಈಗ ಆ ವಸ್ತು ಬೇಕು ಏನು ಮಾಡುವುದು ಎಂದು ಮತ್ತೆ ಮತ್ತೆ ಅದೇ ಧ್ಯಾನ ಜಪ ಮಾಡುತ್ತಿರುವುದ ನೋಡಲಾಗದೆ ನಾನೂ ಹುಡುಕಲು ಹೋಗುತ್ತಿದ್ದೆ. ಹೋಗಿ ಒಂದೆರಡು ನಿಮಿಷದಲ್ಲಿ ಹುಡುಕಿ ಕೊಟ್ಟಿದ್ದೆ. ಹೀಗೆ ಐದಾರುಬಾರಿ ಬೇಗ ಹುಡುಕಿಕೊಟ್ಟಮೇಲೆ ಅವರು ಹೆಚ್ಚು ಹುಡುಕುವ ಶ್ರಮತೆಗೆದುಕೊಳ್ಳದೆ ” ನೀವಾದರೆ ಬೇಗ ಪತ್ತೆ ಹಚ್ಚವಿರಿ ” ಎಂದು ನನ್ನನ್ನು ಸಹಾಯಕ್ಕೆ ಕರೆದುಬಿಡುತ್ತಿದ್ದರು. ಹುಡುಕುತ್ತಿದ್ದ ಹಾಗೆ ವಸ್ತುಗಳು ಸಿಕ್ಕುಬಿಡುತ್ತಿದ್ದವು. ಮುಂದೆ ಇದೇ ಪರಿಪಾಠವಾಯಿತು. ನಾನು ಕೆಲಸ ಮಾಡುವ ಕಛೇರಿಯಲ್ಲೂ ಹೀಗೆ ಅನೇಕ ವಸ್ತುಗಳ ಹುಡುಕಿಕೊಟ್ಟು ಅಲ್ಲೂ ನನ್ನನ್ನೇ ಹುಡುಕಲು ಆಶ್ರಯಿಸುವಂತಾಗಿತ್ತು! ಇದು ನನಿಗೆ ಇರುವ ಅದ್ಬತ ಶಕ್ತಿ ಅಂತ ಅನಿಸಿರಲಿಲ್ಲ. ಒಂದು ಘಟನೆ ಇದನ್ನು ಸಮರ್ಥಿಸುವಂತೆ ಮಾಡಿತು! ಹಾಗಂತ ಅದು ಅದ್ಭುತ ಶಕ್ತಿಯೇನೂ ಅಲ್ಲ. ಹುಡುಕುವುದರಲ್ಲಿರುವ ಶ್ರದ್ಧೆ ತೋರಿ, ವೈಜ್ಞಾನಿಕ ವಿಧಾನದ ಮೊರೆ ಹೋಗುತ್ತಿದ್ದೆ ಅಷ್ಟೆ!
ತೀರ್ಥಯಾತ್ರೆ ಪ್ರಿಯರೂ ಭಗವಂತನ ಪರಮ ಭಕ್ತರೂ ಜೀವನೋತ್ಸಾಹಿಗಳೂ ಆದ ನನ್ನ ಅಣ್ಣನವರು ಸಾಕಷ್ಟು ಸಲ ನಮಗೆ ಐತಿಹಾಸಿಕ, ಪೌರಾಣಿಕ, ಪುಣ್ಯಕ್ಷೇತ್ರಗಳ ದರ್ಶಿಸುವ ಉತ್ತಮ ಯೋಜನೆಗಳ ರೂಪಿಸಿ ಅನೇಕ ಕ್ಷೇತ್ರಗಳಿಗೆ ಕರೆದೊಯ್ದು ಜೀವನದ ಏಕತಾನತೆ ಕಳೆದು ನವ ಚೈತನ್ಯ ಬರುವಂತೆ ಮಾಡಿ ಜೀವನವ ಹೊಸದೆಂದು ಸವಿಯುವಂತೆ ಮಾಡಿರುತ್ತಾರೆ! ನಮಗಷ್ಟೇ ಅಲ್ಲ! ಸ್ನೇಹಿತರು ಸಂಬಂಧಿಕರಿಗೂ ಸಹ!ನಮಗೇನಾದರೂ ಪುಣ್ಯ ಬರುವಂತಾದರೆ ಅದು ಅಣ್ಣನವರ ಕಾರಣದಿಂದ! ಒಮ್ಮೆ ಗೊರವನಹಳ್ಳಿ, ಕಂಚಿ ಕಾಳಹಸ್ತಿ ತಿರುಪತಿ ವೆಲ್ಲೂರು ಮುಂತಾದ ಕ್ಷೇತ್ರಗಳಿಗೆ ಹೊರಡುವ ನೀಲನಕ್ಷೆಗೆ ಸಹಮತ ಪಡೆದು ಶಿವಮೊಗ್ಗಾದಿಂದ ಕ್ಲೂಸರಲ್ಲಿ ಸಂಸಾರ ಸಮೇತ ಆಗಮಿಸಿದರು. ಹೊರಟಿವಿ. ಗೊರವನಹಳ್ಳಿ ಲಕ್ಷ್ಮಿ ಆಶೀರ್ವಾದ ಪಡೆದು ತಿರುಪತಿ, ಕಾಳಹಸ್ತಿ ದರ್ಶಿಸಿ ಕಂಚಿಗೆ ಹೊರಟೆವು. ಕಂಚಿಯ ಕಾಮಾಕ್ಷಿ ಎಂಬುದು ಕಂಚಿಯೊಂದಿಗೆ ಬೆಸೆದಿರುವ ಪ್ರಸಿದ್ದ ದೇವತೆಯ ಪದ!ಈಗ ಅದಕ್ಕಿಂತ ಒಂದು ಕೈ ಮಿಗಿಲೆಂಬಂತೆ ಕಂಚಿ ಎಂದ ತಕ್ಷಣ ರೇಷ್ಮೆ ಸೀರೆ ಎಂಬ ಪದ ಬೆಸೆದಿದೆ! ಪ್ರಯುಕ್ತ ಹೆಣ್ಣುಮಕ್ಕಳು ಕಾಮಾಕ್ಷಿಯ ದರ್ಶನಕ್ಕೆ ಕಾತರಿಸುವುದು ಸತ್ಯವಾದರೂ ಅದಕ್ಕಿಂತಾ ಬಗೆಬಗೆಯ, ಬಣ್ಣಬಣ್ಣದ ರೇಷ್ಮೆ ಸೀರೆಗಳ ಕನಸು ಕಾಣಲು ಕಾತರಿಸುತ್ತಿದ್ದರು!
ಅವನ್ನು ನೋಡುವ ಉತ್ಸಾಹದಿಂದ ಯಾವಾಗ ಕಂಚಿ ತಲುಪಿಯೇವು ಯಾವಾಗ ಸ್ಯಾರಿ ಶಾಪಿಗೆ ಹೋದೇವು, ತನ್ನ ಪರಿಚಯಸ್ಥರು ಸೂಚಿಸಿದ ಅಂಗಡಿಗಳು ಯಾವುವು? ಅವು ಯಾವ ಬೀದಿಯಲ್ಲಿವೆ? ಯಾವ ಸ್ಯಾರಿಸೆಂಟರಿಗೆ ಮೊದಲು ಹೋಗಬೇಕು? ಎಷ್ಟೆಷ್ಟು ಸೀರೆಗಳ ಕೊಳ್ಳಬೇಕು? ಝರಿ ಸೀರೆಯ ಯಾವ ಯಾವ ಭಾಗದಲ್ಲಿ ಎಷ್ಟೆಷ್ಟು ಇರಬೇಕು? ಎಂಥ ಬಣ್ಣದ ಸೀರೆ ನನಗೆ ಒಪ್ಪೀತು? ಪಕ್ಕದ ಮನೆಯವರಿಗೆ ಎಂಥಾ ಸೀರೆ ಅವರು ಕೊಟ್ಟ ಹಣಕ್ಕೆ ಕೊಳ್ಳಬೇಕು ಅಂತ ಕಂಚಿಯ ರೇಷ್ಮೆ ಸೀರೆಗಳ ಮಂತ್ರ ಜಪಿಸತೊಡಗಿದರು. ಕಣ್ಣು ತೆರೆದರು ರೇಷ್ಮೆ ಸೀರೆಗಳು ಕಣ್ಣು ಮುಚ್ಚಿದರು ರೇಷ್ಮೆ ಸೀರೆಗಳು ಕಾಣತೊಡಗಿದವು! ಹೆಣ್ಣುಮಕ್ಕಳಿಗೆ ಇದು ಸಹಜ! ಎಷ್ಟು ಸೀರೆಗಳಿದ್ದರೂ ಹೊಸವನ್ನು ಕಂಡತಕ್ಷಣ ಆಕರ್ಷಿತರಾಗುವರು. ರೇಷ್ಮೆ ಸೀರೆಗಳ ಕನಸು ಕಾಣುತ್ತನೆ ನಿದ್ದೆಗೆ ಜಾರಿದ್ದರು. ಸುಮಾರು ರಾತ್ರಿ ಎರಡು ಗಂಟೆಯ ಸಮಯ ಆಗಿರಬೇಕು. ಕುಳಿತೂ ಕುಳಿತೂ ಮಗ್ಗಲು ಬದಲಿಸಿ ಬದಲಿಸಿ ಸಾಕಾಗಿ ಜತೆಗೆ ಚಳಿ ಬಾದಿಸುತ್ತಿದ್ದ ಪ್ರಯುಕ್ತ ದೇಹಬಾದೆ ನೀಗಲು ಒಂದು ಸ್ಟಾಪ್ ಕೊಡುವಂತೆ ಕೇಳಿದೆವು. ಊರು, ಮನೆ ಏನೂ ಇರದ ಬರೀ ಹೊಲಗಳೇ ಇರುವ ಒಂದು ಜಾಗದಲ್ಲಿ ಕ್ಲೂಸರ್ ನಿಲ್ಲಿಸಿದ, ಇಳಿದು ಕಾಲು ಕೊಡವಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಅವಕಾಶ ಮಾಡಿಕೊಟ್ಟು ದೇಹಬಾದೆ ತೀರಿಸಿ ಎಲ್ಲರೂ ಮತ್ತೆ ಹೊರಟೆವು. ಅಲ್ಲಿಂದ ಸುಮಾರು ಇಪ್ಪತ್ತೈದು ಮೂವತ್ತು ಕಿಲೋಮೀಟರಿಗೂ ಹೆಚ್ಚು ಪ್ರಯಾಣವಾಗಿರಬೇಕು ಇದ್ದಕ್ಕಿದ್ದಂತೆ ಅಕ್ಕನವರ ಮರುಕದ ಪಶ್ಚಾತ್ತಾಪದ ದನಿ ಗಂಟಲೊಳಗಿಂದ ಹೊರಡಲೋ ಬೇಡವೋ ಎಂಬಂತೆ ಅಧೀರಳಾಗಿ ಹೊರಡಿಸಿದುದು ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿ ರೇಷ್ಮೆ ಸೀರೆ ಬೇಗ ಕಾಣುವ ಕನಸಿಗೆ ತಣ್ಣೀರೆರಚಿತು. ವೇಗವಾಗಿ ಓಡುವ ಕ್ಲೂಸರ್ ಗೆ ಬ್ರೇಕು ಹಾಕಿಸಿತು! ನಿದ್ದೆಗೆ ಜಾರಿದವರ ನಿದ್ದೆ ಹೇಳದೆ ಕೇಳದೆ ಮಾಯ ಮಾಡಿಸಿತು!
ನಿದ್ದೆಯ ಮಾಯ ಮಾಡಿಸಿದ್ದು ಅಕ್ಕನವರ ಕೈಯಲ್ಲಿನ ಉಂಗುರ ಮಾಯವಾಗಿರುವ ವಿಚಾರ. ತಾನು ಕುಳಿತ ಜಾಗವನ್ನೆಲ್ಲ ಪರಿಶೀಲಿಸಿದರೂ ಉಂಗುರ ಸಿಗದಿರಲು ಅಕ್ಕ ನಿಧಾನವಾಗಿ ಎಲ್ಲಿ ಹೋಗಿರಬೇಕೆಂದು ಚಿಂತಿಸಿ ಅಲ್ಲಿ ಇಲ್ಲಿ ಎಲ್ಲಿ ಹೋಗಿರಬಹುದೆಂದು, ಆಕಡೆ ಈಕಡೆ ಯಾವಕಡೆಯೆಂದು ಲೋಲಕದಂತೆ ಹೊಯ್ದಾಡಿ ಹೊಯ್ದಾಡಿ ಕೊಟ್ಟಕೊನೆಗೆ ಒಂದು ಕಡೆ ನಿಂತದ್ದು ಜಲಬಾದೆ ತೀರಿಸಲು ಹೋದಾಗ ಕಳೆದಿರಬೇಕೆಂಬ ಜಾಗದಲ್ಲಿ! ಹಿಂದಿರುಗಿ ಹೋಗಿ ಉಂಗುರ ಹುಡುಕುವ ಅಂತ ಅಕ್ಕನವರು ಬಯಸಿದರು. ಆದರೆ ಹಿಂದಿರುಗಿ ಹೋಗುವುದೋ ಬೆಡವೋ ಎಂಬ ಚರ್ಚೆಗೆ ಆ ಗಾಢ ರಾತ್ರಿಯ ಕತ್ತಲು ಚಳಿ ತಮ್ಮ ತಮ್ಮ ನಾಲಗೆಯ ಉದ್ದ ಚಾಚುವಂತೆ ಮಾಡಿತು. ” ಈ ಕತ್ತಲಲ್ಲಿ ಆ ಉಂಗುರ ಹೇಗೆ ಸಿಗಲು ಸಾಧ್ಯ? ಹಿಂದಿರುಗಿ ಹೋಗುವುದು ವ್ಯರ್ಥ! ಮುಂದಕ್ಕೆ ಹೋಗೋಣ” ಎಂಬುದು ಅಣ್ಣನ ಅಭಿಪ್ರಾಯ. ” ಅಮ್ಮಾ ಎಲ್ಲಾದರೂ ಅದು ಸಿಗಲು ಸಾಧ್ಯವೇ? ಅದೇ ಜಾಗವನ್ನು ಈ ಕತ್ತಲಲ್ಲಿ ಗುರುತಿಸುವುದಾದರೂ ಹೇಗೆ? ಅದು ಸಿಗುವುದು ಅಸಾಧ್ಯ! ಹಿಂದಕ್ಕೆ ಹೋಗುವುದು ವೇಸ್ಟ್ ” ಎಂಬ ಅಭಿಪ್ರಾಯ ಅಕ್ಕನ ಚಿಕ್ಕ ಮಗಳಿಂದ. ನನ್ನ ಜೀವನ ಸಂಗಾತಿಯದು ದೇವರ ಬಗ್ಗೆ ಅಗಾಧ ಭಕ್ತಿ! ಅವನ ದರ್ಶನಕ್ಕೆ ನಾವು ಬಂದಿರುವುದು ಅವನ ಭಕ್ತರಿಗೆ ಅವನು ದುಃಖ ತರಲಾರನೆಂಬ ನಂಬುಗೆ. ಉಂಗುರ ಹುಡುಕಲು ಹಿಂದಿರುಗೋಣವೆಂಬ ಅಚಲ ನಿರ್ದಾರ ತೆಗೆದುಕೊಂಡು ಅಕ್ಕನವರ ಬೆನ್ನಿಗೆ ನಿಂತರು!
ಎಲ್ಲರದೂ ಹಿಂದಿರುಗಿ ಹೋಗುವುದು ವ್ಯರ್ಥ ಎಂಬ ಅಭಿಪ್ರಾಯವಾದರೂ ನನ್ನ ಜೀವನ ಸಹಭಾಗಿನಿ ಮತ್ತು ಅಕ್ಕನವರಿಗೆ ನೋವುಂಟು ಮಾಡಲಾಗದೆ ಮನಸ್ಸಿಲ್ಲದ ಮನಸ್ಸಿನಿಂದ ಅಣ್ಣ ಹಿಂದಕ್ಕೆ ಹೋಗಲು ಒಪ್ಪಿದರು! ಹಿಂದಿರುಗಿ ಹೋದರೆ ಈ ಕಗ್ಗತ್ತಲಲ್ಲಿ ಅದೇ ಜಾಗಕ್ಕೆ ಹೋಗಿ ವಾಹನ ನಿಲ್ಲಿಸಲು ಹೇಗೆ ಸಾಧ್ಯ? ಆ ಜಾಗದ ಹತ್ತಿರ ಹೋಗಬಹುದಾದರೂ ಒಂದು ಕಿಲೋ ಮೀಟರು ಹತ್ತತ್ತಿರ ಹೋಗಬಹುದೇನೋ ಬಹಳ ಬುದ್ದಿವಂತ ಡ್ರೈವರ್ ಆಂದರೂ ಆ ಸ್ಥಳದ ನೂರೋ ಐವತ್ತೋ ಅಡಿಗಳ ಆಸುಪಾಸಿಗೆ ಒಯ್ಯಬಹುದೇನೋ ಹಾಗೆ ಒಯ್ದರೆ ಉಂಗುರ ಸಿಗುವುದು ಹೇಗೆ ಸಾಧ್ಯ! ಅದೇ ಜಾಗಕ್ಕೆ ಹೋಗುವುದಂತೂ ಅಸಾಧ್ಯ! ಹಾಗೇನಾದರೂ ಅದೇ ಜಾಗಕ್ಕೆ ಹೋದರೂ ಕತ್ತಲಲಿ ಹೇಗೆ ಕಾಣಿಸೀತು? ಎಲ್ಲರೂ ತುಳಿದಾಡಿರುವುದರಿಂದ ಭೂಮಿಯೊಳಕ್ಕೆ ಊತುಹೋಗಿರುವ ಸಾಧ್ಯತೆಗಳಿರುವುದರಿಂದ ಹೇಗೆ ಸಿಗಲು ಸಾಧ್ಯ? ಹೀಗಂತ ಹೇಳಿ ಅವರ ಭಾವನೆಗೆ ತಣ್ಣೀರು ಎರಚುವುದು ಬೇಡವೆಂದು ನಾನು ಮೌನವಾಗಿದ್ದೆನು. ಆದರೂ ಮನಸ್ಸು ಹೇಳುತಿತ್ತು ಇದೊಂದು ವ್ಯರ್ಥ ಪ್ರಯತ್ನವೆಂದು. ಅಣ್ಣ ಹಿಂದಿರುಗಲು ಒಪ್ಪಲೇಬಾರದಿತ್ತು ಎಲ್ಲಾ ವೇಷ್ಟು, ಎಲ್ಲಾ ವೇಷ್ಟು ಎನ್ನುತಿತ್ತು ನನ್ನ ಮನ. ಡ್ರೈವರನ ಆತ್ಮಸ್ಥೈರ್ಯ ಸೆಲ್ಫ್ ಕಾನ್ಪಿಡೆನ್ಸ್ ನಾವು ಜಲಬಾದೆ ತೀರಿಸಿದ ಜಾಗವೇ ಇದು ಎಂದು ಒಂದು ಕಡೆ ಬಂದು ನಿಲ್ಲಿಸಿತು.
ಅದು ಅದೇ ಜಾಗ ಎಂದು ನನಗೆ ನಂಬಲು ಆಗದ್ದರಿಂದ ಕ್ಲೂಸರ್ ಇಳಿಯಲು ನಿರಾಸಕ್ತನಾಗಿದ್ದೆ. ನನ್ನ ಸಂಗಾತಿ ಮತ್ತು ಅಕ್ಕ ಇಳಿಯಲು ಉತ್ಸಾಹ ತೋರಿದರೂ ಅಕ್ಕನ ಮಗಳು ಮನಸ್ಸಿಲ್ಲದ ಮನಸ್ಸಿನಿಂದ ದೇಹ ನೂಕಿದಳು. ನನಗೆ ಇಳಿಯಲು ಮನಸ್ಸಿಲ್ಲ. ಇಳಿಯದಿದ್ದರೆ ಎಲ್ಲರೂ ಇವನಿಗೆ ಉಂಗುರದ ಬಗ್ಗೆ ಕಾಳಜಿಯಿಲ್ಲ ಅಂತರೆ ಅಂತ ಇಲಲಿಯಲು ಮನಸ್ಸು ಮಾಡಿದರೂ ಇಳಿಯಲಿಲ್ಲ. ಆದರೆ ನನ್ನ ಸಂಗಾತಿ ಬಿಡಬೇಕೆ? ಅವರ ಒತ್ತಾಯಕ್ಕೆ ನೀವು ಇಳಿಯಿರಿ ನಾನು ಇಳಿಯುತ್ತೇನೆಂದೆ. ಅವರು ಇಳಿದು ಒಂದಿಪ್ಪತ್ತು ಹೆಜ್ಜೆ ಹೋದ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಕಾಲುಗಳ ಮುಂದಕ್ಕೆ ಕಿತ್ತಿಟ್ಟು ದೇಹವ ಒಲ್ಲದ ಮನಸ್ಸಿನಿಂದ ಅವರಕಡೆಗೆ ನೂಕತೊಡಗಿದೆ! ಇಳಿದ ಮೇಲೆ ಹುಡುಕುವ ಪ್ರಯತ್ನ ಮಾಡದಿದ್ದರೆ ಏನೆಂದುಕೊಂಡಾರು ಅದು ಸಿಗಲಿ ಬಿಡಲಿ ಹುಡುಕುವ ಪ್ರಯತ್ನವನ್ನಾದರೂ ಮನಸ್ಸಿಟ್ಟು ಮಾಡೋಣವೆಂದುಕೊಂಡೆ! ಎಲ್ಲರೂ ಸುಮಾರು ಹದಿನೈದು ಅಡಿ ಮುಂದೆ ಹೋಗಿದ್ದರು. ಅವರು ಹೋದ ಜಾಗದಲ್ಲೆ ಹುಡುಕಬೇಕಾಗಿರುವುದು. ಅವರು ಹುಡುಕುತ್ತಾ ಹೋದ ಜಾಗದಲ್ಲಿ ಏನು ಹುಡುಕುವುದು? ಜತೆಗೆ ಇದು ನಾವು ಜಲಬಾದೆ ತೀರಿಸಲು ಇಳಿದ ಜಾಗನೋ ಅಲ್ಲವೋ? ಅದೇ ಜಾಗಕ್ಕೆ ಬಂದಿದ್ದೇವೋ ಇಲ್ಲವೋ? ಅದೇ ಜಾಗಕ್ಕೆ ಬಂದು ನಿಲ್ಲಿಸಲು ಚಾಲಕನಿಂದ ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ! ಎಂಬ ಪ್ರಶ್ನೆಗಳು ಕಾಡಿದರೂ ಇರಲಿ ಯಾವ ಜಾಗನೋ ತಂದು ನಿಲ್ಲಿಸಿದ್ದಾನೆ ನನ್ನ ಜೀವನ ಸಂಗಾತಿಯ ಆರೋಪ ತಪ್ಪಿಸಿಕೊಳ್ಳಲಾದರೂ ಹುಡುಕೋಣ ಎಂದು ಹೊರಟೆ.
ಗಾಢ ಕತ್ತಲು ಇನ್ನೂ ಕರಗಿರಲಿಲ್ಲ. ಆದ್ದರಿಂದ ಎಲ್ಲರೂ ಮೊಬೈಲಿನ ಟಾರ್ಚ್ ಆನ್ ಮಾಡಿ ಹುಡುಕುತ್ತಾ ಹೋದರು. ಡ್ರೈವರು ಹುಡುಕಬೇಕಾದ ಜಾಗದ ಮೇಲೆ ವಾಹನದ ಬೆಳಕು ಬೀಳುವಂತೆ ಮಾಡಿದ್ದ. ನಾನು ಕುಳಿತು ನೆಲ ಮಟ್ಟಕ್ಕೆ ಸಮವಾಗಿ ತಲೆ ಬಾಗಿಸಿ ದೃಷ್ಟಿ ಹರಿಸೋಣವೆಂದುಕೊಂಡೆ. ಯಾವ ಕಡೆ ದೃಷ್ಟಿ ಹರಿಸುವುದು? ಅವರು ಮುಂದೆ ಹೋದ ಕಡೆಯೆ ದೃಷ್ಟಿ ಹರಿಸಬೇಕು! ಅವರು ಹುಡುಕಾಡಿ ಹೋದಜಾಗದಲ್ಲಿ ಏನು ಹುಡುಕುವುದು? ಅವರ ಕಣ್ಣಿಗೆ ಕಾಣಿಸದಿರುವುದು ನನ್ನ ಕಣ್ಣಿಗೆ ಕಾಣಿಸುತ್ತದಾ? ಆದರೂ ಪ್ರಯತ್ನಿಸೋಣ ಎಂದು ಹೇಗೆ ಪ್ರಯತ್ನಿಸುವುದೆಂದು ಯೋಚಿಸತೊಡಗಿ ಅದು ಬಂಗಾರದ ವಸ್ತು ಆಗಿರುವುದರಿಂದ ತನ್ನ ಮೇಲೆ ಬಿದ್ದ ಬೆಳಕಿನ ಕಿರುಣಗಳನ್ನು ಪ್ರತಿಫಲಿಸುತ್ತದೆ. ಬೆಳಕು ಬಿದ್ದಾಗ ಕಿರಣಗಳು ಚದುರುತ್ತವೆ. ಅದು ಕಿಡಿಕಾರಿ ಹೊಳೆಯುವುದರಿಂದ ಕಾಣಿಸುತ್ತದೆಂದು ಬಾಗಿ ನೆಲದ ಸಮಾಂತರವಾಗಿ ದೃಷ್ಟಿ ಹಾಯಿಸಿದೆ. ಒಂದು ಸಣ್ಣ ಕಲ್ಲು ಅಡ್ಡವಿದ್ದರೂ, ನಡೆದು ಹೋದವರ ಹೆಜ್ಜೆ ಗುರುತಿನ ತಗ್ಗು ದಿಬ್ಬದಿಂದ ಬೆಳಕು ಅದರ ಮೇಲೆ ಬೀಳದಿದ್ದರೂ ಹೋದವರು ಅದ ತುಳಿದು ಮುಂದೆ ಹೋಗಿದ್ದರೂ ಅದು ಗೋಚರಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ಅದು ಸಿಗದೇ ಹೋಗಬಹುದು! ಎಂದು ಯೋಚಿಸಿದರೂ ಹುಡುಕುವ ಪ್ರಯತ್ನ ಬಿಡಲಿಲ್ಲ! ಬೆಳಕು ಬಿದ್ದಿರುವ ದಿಕ್ಕಿನಿಂದಲೇ ನೆಲದ ಸಮಾಂತರವಾಗಿ ಹತ್ತಿರದಿಂದ ದೂರಕ್ಕೆ ದೃಷ್ಟಿಹರಿಸುತ್ತಿದ್ದೆ ಒಂದು ಕಡೆಯಿಂದ ನಿಧಾನವಾಗಿ ದೃಷ್ಟಿಹರಿಸುತ್ತಾ ಹೋದೆ ನಾನಂದುಕೊಂಡಂತೆ ಒಂಬತ್ತು ಹತ್ತಡಿ ದೂರದಲ್ಲಿ ನನ್ನ ಬಂದುಗಳ ನಡೆದು ಹೋದ ನೆಲದಲ್ಲಿ ಅವರ ಹಿಂದೆ ಬೆಂಕಿಯಂತೆ ಕಿಡಿಕಾರಿ ಹೊಳೆಯುವ ಒಂದು ವಸ್ತು ಗೋಚರಿಸಿತು.
ಅದು ಉಂಗುರ ಆಗಿರದೆ ಚಾಕ್ಲೇಟಿನ ಕವರೋ ಆಟಿಗೆ ಉಂಗುರವೋ ಯಾವುದಾದರೂ ಬಂಗಾರ ಬಣ್ಣ ಲೇಪಿತ ವಸ್ತುವೋ ಮತ್ತೇನೋ ಪ್ಲಾಸ್ಟಿಕ್ಕಿನ ವಸ್ತುವಾಗಿರಬಹುದು ಒಮ್ಮೆ ಪರೀಕ್ಷಿಸೋಣವೆಂದು ಹತ್ತಿರ ಹೋಗಿ ಅದನ್ನು ಮುಟ್ಟಿದೆ. ಆ ಕ್ಷಣ ಆದ ರೋಮಾಂಚನ ವರ್ಣಿಸಲಸದಳ. ಅದು ಸಾಕ್ಷಾತ್ ಆ ಉಂಗುರವೇ ಆಗಿತ್ತು! ಆದರೂ ಅನುಮಾನದಿಂದ ಮತ್ತೆ ಮತ್ತೆ ತಿರುವಿ ತಿರುವಿ ನೋಡಿದೆ. ಇದು ಉಂಗರನೇನ? ಅದೇ ಉಂಗುರನೇನಾ? ಏನು ಪವಾಡ? ಅಬ್ಬಾ! ಏನಾಶ್ಚರ್ಯ! ಅಚ್ಚರಿಗೊಂಡೆ. ಆದರೆ ಇದುವರೆಗಿನ ನನ್ನ ನಕಾರಾತ್ಮಕ ಚಿಂತನೆಗಳು ಸಂತೋಷವನ್ನು ಆಚರಿಸದಂತೆ ಕಸಿದುಕೊಂಡಿದ್ದರಿಂದ ಏನೂ ಆಗಿಲ್ಲವೆಂಬಂತೆ ನಿರ್ಬಾವುಕನಾಗಿ ಉಂಗುರ ಸಿಕ್ಕಿತು ಎಂದೆ. ಎಲ್ಲರೂ ಒಮ್ಮೆಗೆ ತಿರುಗಿ ನೋಡಿದರು. ಕವಿದಿದ್ದ ದುಗಡದ ಕಾರ್ಮೋಡಗಳು ಒಮ್ಮೆಲೆ ಮಾಯವಾದಂತಾಗಿ ಎಲ್ಲರ ಮೊಗದಲಿ ಸಂತಸದ ಗೆರೆಗಳು ಸ್ಪರ್ದೆಗಿಳಿದವು! ಎಲ್ಲರಿಗೂ ಅಚ್ಚರಿ! ಅಬ್ಬಾ! ನನ್ನ ಮೈದುನ ಉಂಗುರ ಹುಡುಕಿಕೊಟ್ಟ! ಎಂದು ಹೆಮ್ಮಯಿಂದ ಹೇಳಿದರು. ಕೋಟಿ ರೂ ಕೊಟ್ಟರೂ ಅಗದ ಸಂತೋಷ ಅಕ್ಕನ ಮುಖದಲ್ಲಿ ನಾಟ್ಯವಾಡುತಿತ್ತು! ಎಲ್ಲರೂ ನಡೆದುಹೋದ ಜಾಗದಲ್ಲೇ ಅವರ ಕಣ್ಣು ತಪ್ಪಿಸಿ ನನ್ನ ಕಣ್ಣಿಗೆ ಕಾಣಿಸಿಕೊಂಡುದು ನನಗೆ ತುಂಬಾ ಅಚ್ಚರಿ ಎನಿಸಿ ಸಂತೋಷ ಕೊಟ್ಟಿತು. ಅದು ಹೇಗೆ ಎಂಬ ಪ್ರಶ್ನೆ ಕಾಡಿತು. ಆದರೂ ಸಂತೋಷವನ್ನು ತಡೆಯಲಾಗಲಿಲ್ಲ! ಆದರೆ ಇದರ ಬಗೆಗಿನ ಹಿಂದಿನ ನಕಾರಾತ್ಮಕ ಭಾವಗಳು ಸಂತೋಷವನ್ನು ಹೊರಗೆ ಆಚರಿಸದಂತೆ ತಡೆ ಹಿಡಿದಿದ್ದವು. ಎಲ್ಲರೂ ಅಬ್ಬಾ! ಹೇಗೆ ಹುಡುಕಿದೆ? ಹೇಗೆ ಸಿಕ್ತು? ಇದು ಪವಾಡವೆ ಸರಿ! ನಾವೆಲ್ಲಾ ಹುಡುಕಿ ಮುಂದಕ್ಕೆ ಹೋದ ಜಾಗದಲ್ಲಿ ನಿನಗೆ ಸಿಕ್ಕಿದ್ದು ಪವಾಡವೇ ಅಲ್ಲವೆ? ಎಂದು ಪ್ರಶ್ನಿಸಿ ಮೆಚ್ಚಿಗೆಯ ಮಳೆ ಸುರಿಸಿದರು! ದೇವರು ದೊಡ್ಡವ ಹಡುಕಿಸಿಕೊಟ್ಟ! ನಾನು ಹೇಳಿರಲಿಲ್ಲವೆ ಭಕ್ತರಿಗೆ ಭಗವಂತ ಅನ್ಯಾಯ ಮಾಡ ಎಂದು? ಎಂದು ನನ್ನ ಸಂಗಾತಿ ಉಬ್ಬಿದರು.
ಆ ಉಬ್ಬುವಿಕೆಯಲ್ಲಿ ನನ್ನ ಜೀವನ ಸಂಗಾತಿಯ ಕೈಗೆ ಆ ಭಗವಂತ ಆ ಉಂಗುರ ಸಿಗುವಂತೆ ಮಾಡಿದನೆಂಬ ಸಂತೋಷವೂ ತುಂಬಿತ್ತು. ಆದರೆ ಉಂಗುರ ದೊರೆತದ್ದರ ಪೂರ್ಣ ಮೆಚ್ಚುಗೆ, ಮೆರಿಟ್ ನನಗಷ್ಟೇ ಸೇರುವುದು ಸರಿಯಲ್ಲವೆನಿಸಿತು. ಉಂಗುರ ಹುಡುಕಲು ಹಿಂದಕ್ಕೆ ಹೋಗಲೇಬೇಕೆಂದು ಕರೆದುಕೊಂಡು ಬಂದ ಅಕ್ಕನವರಿಗೋ ಅದೇ ಜಾಗದಲ್ಲಿ ಸರಿಯಾಗಿ ವಾಹನವ ತಂದು ನಿಲ್ಲಿಸಿದ ಡ್ರೈವರನಿಗೋ ನೆಲದ ಸಮ ದೃಷ್ಟಿ ಹಾಯಿಸಿ ಅವರು ಹಾದು ಹೋದ ಜಾಗದಲ್ಲೆ ಅದನ್ನು ಗುರುತಿಸಿದ ನನಗೋ ಯಾರಿಗೆ ಈ ಮೂವರೊಳಗೆ ಆ ಉಂಗುರ ದೊರೆತದ್ದರ ಮೆರಿಟ್ ಸೇರಬೇಕು? ಅಕ್ಕ ಹಠ ಹಿಡಿದು ಹಿಂದಕ್ಕೆ ಕರೆತರದಿದ್ದರೆ ಇಲ್ಲಿಗೆ ವಾಹನ ಬರುತ್ತಿರಲಿಲ್ಲ. ಉಂಗುರ ಕಳೆದ ಜಾಗಕ್ಕೇ ಸರಿಯಾಗಿ ಡ್ರೈವರ್ ಕ್ಲೂಸರ್ ತಂದು ನಿಲ್ಲಿಸದಿದ್ದರೆ ಅದು ಕಾಣುತ್ತಿರಲಿಲ್ಲ, ಇಲ್ಲೇ ನಿಲ್ಲಿಸಿದ್ದರೂ ನೆಲಕ್ಕೆ ಸಮಾನವಾಗಿ ದೃಷ್ಟಿ ಹರಿಸದಿದ್ದರೆ ಆ ಉಂಗುರ ಕಾಣಿಸುತ್ತಿರಲಿಲ್ಲ! ಆದ್ದರಿಂದ ಈ ಮೂವರೂ ಆ ಮೆರಿಟ್ಟಿಗೆ ಭಾಜನರು!
ಆದರೆ ನನ್ನ ಜೀವನ ಸಂಗಾತಿ ಇವರಿಗೆಲ್ಲಾ ಉಂಗುರ ಹುಡುಕುವಂತೆ ಪ್ರಯತ್ನಿಸುವ ಬುದ್ದಿ ಕೊಟ್ಟ ಭಗವಂತನೆ ಇದಕ್ಕೆ ಕಾರಣ ಅನ್ನುತ್ತಾರೆ. ಅದು ತರ್ಕಕ್ಕೆ ಸಿಲುಕದ ನಂಬುಗೆಗೆ ಸಂಬಂಧಿಸಿದ ವಿಚಾರ! ಉಂಗುರ ಸಿಕ್ಕ ಘಟನೆ ಮತ್ತೆ ಮತ್ತೆ ನೆನಪಾಗುವ ಅಪರೂಪದ ಕ್ಷಣ! ಸ್ಮರಣೀಯ ಜೀವನಾನುಭವ! ಜತೆಗೆ ಈ ಘಟನೆ ನನಗೆ ಕಳೆದ ವಸ್ತುಗಳ ಹುಡುಕುವ ಅದ್ಭುತ ಶಕ್ತಿ ಇದೆ ಅನಿಸುವದಕ್ಕೆ ಪುಷ್ಟಿ ನೀಡಿತಾದರೂ ಅಂತಹ ಅದ್ಭುತ ಶಕ್ತಿ ನನ್ನಲಿಲ್ಲ ಎಂದು ತಿಳಿದವನಾದುದರಿಂದ ಅದು ಅದ್ಭುತ ಶಕ್ತಿಯಲ್ಲ ಹುಡುಕುವ ವೈಜ್ಞಾನಿಕ ವಿಧಾನ ಅಷ್ಟೆ ಅನಿಸಿತು! ಆದರೂ ಉಂಗುರ ದೊರೆತದ್ದು ಎಲ್ಲರಿಗೂ ಪವಾಡ ಅನಿಸಿದ್ದು ಸತ್ಯ! ಸುಮ್ಮನೆ ಯಾಕೆ ಪ್ರಯತ್ನ ಮಾಡುವುದು ಸಾಧ್ಯವಾಗುವುದಿಲ್ಲ ಬಿಡಿ ಎಂದು ತೀರ್ಮಾನಿಸುವುದಕ್ಕಿಂತ ಪ್ರಯತ್ನ ಮಾಡಿಯೆ ತೀರ್ಮಾನಿಸಬೇಕು ಎಂಬುದಕ್ಕೆ ಇದು ಒಂದು ಒಳ್ಳೆಯ ಪಾಠ! ಅದಕ್ಕೆ ಯಾವುದನ್ನೇ ಆಗಲಿ ಧನಾತ್ಮಕವಾಗಿ ಚಿಂತಿಸಬೇಕು ಪ್ರಯತ್ನಿಸಲೂ ಬೇಕು.
-ಸೋಮಶೇಖರ್ ಹೊಳಲ್ಕೆರೆ