ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಬಹಳ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ದಾಸ ಶ್ರೇಷ್ಠರೆಂದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಗಣನೀಯ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ "ಅಶ್ವಿನಿ ದೇವತೆ"ಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಆರಂಭದಲ್ಲಿ ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ತಮ್ಮ ಪದವಿ, ವೈಯಕ್ತಿಕ. ಭೋಗಾಭಿಲಾಷೆಗಳನ್ನು ತ್ಯಜಿಸಿ ಸದಾ ಸಂಕೀರ್ತನೆಗಳನ್ನು ಹಾಡುತ್ತಾ ಹರಿ ಭಕ್ತರಾಗಿ, ಭಗವನ್ನಾಮ ಸ್ತುತಿಗಾಗಿ ತಮ್ಮ ಬದುಕನ್ನೇ ಮುಡುಪಾಗಿರಿಸಿದರು.
ಶ್ರೀಕನಕದಾಸರು ಈಗಿನ ಹಾವೇರಿ ಜಿಲ್ಲೆಯ 'ಬಾಡ' ಗ್ರಾಮದಲ್ಲಿ 1487ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ ಅವರ ಅಗಾಧ ವಿದ್ವತ್ತಿನಿಂದ ಪ್ರಭಾವಿತರಾದರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಕರಗತ ಮಾಡಿಕೊಂಡು ಒಪ್ಪಿಕೊಂಡ ಕನಕದಾಸರು ಉಡುಪಿಯ ಶ್ರೀ ಕೃಷ್ಣನ ಪರಮ ಭಕ್ತರಾದರು. ಕಾಗಿನೆಲೆಯ ಆದಿಕೇಶವನ ಆರಾಧಕರಾಗಿದ್ದ ಕನಕದಾಸರು ತಮ್ಮ ಕೀರ್ತನೆಗಳ ಅಂಕಿತವನ್ನಾಗಿ ಆರಾಧ್ಯ ದೈವದ ಹೆಸರನ್ನೇ ಅಳವಡಿಸಿಕೊಂಡರು. "ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ…ಬಲ್ಲಿರಾ…!" ಎಂದು ಜನ ಸಾಮಾನ್ಯರ ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು.
ಕನಕನ ಕಿಂಡಿಯ ಮಹತ್ವ!
******************
ಅನೇಕ ಭಕ್ತರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಕನಕದಾಸರು ಶೂದ್ರ ದಾಸರೆಂಬ ಕಾರಣಕ್ಕೆ, ಅಲ್ಲಿನ ಪುರೋಹಿತ ವರ್ಗದಿಂದ ಅವರಿಗೆ ದೇಗುಲದ ಒಳಗೆ ಪ್ರವೇಶ ದೊರೆಯಲಿಲ್ಲ, ಅಪಾರ ನಿಂದನೆ, ಹೀಯಾಳಿಕೆಗಳಿಗೆ ನೊಂದುಕೊಂಡ ಕನಕದಾಸರು, ತಮ್ಮ ಇಷ್ಟ ದೈವದ ಮೇಲೆ ಭರವಸೆ ಇಟ್ಟು ದೇವಸ್ಥಾನದ ಹಿಂದೆ ನಿಂತು ತಮ್ಮ ಮನದಾಳದ ಇಂಗಿತವನ್ನು ಹಾಡಿನ ಮೂಲಕ ನಿವೇದಿಸಿಕೊಂಡರು. "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ, ಕೂಗಿದರು ದನಿ ಕೇಳದೆ ನರಹರಿಯೆ…." ಎಂದು ನಿರ್ಮಲ ಭಕ್ತಿಯಿಂದ ಬೇಡಿಕೊಂಡರು. ಅವರ ಅನನ್ಯ ಭಕ್ತಿಗೆ ಪರವಶನಾದ ಶ್ರೀ ಕೃಷ್ಣನು ಹಿಂಭಾಗದ ಗೋಡೆಯನ್ನು ಒಡೆದು ಹಿಮ್ಮುಖವಾಗಿ ದರ್ಶನ ಭಾಗ್ಯವನ್ನು ಕರುಣಿಸಿದರಂತೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂಭಾಗದ ಗೋಡೆಯಲ್ಲಿರುವ ಸಣ್ಣ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ಕಾಣಬಹುದಾಗಿದ್ದು "ಕನಕನ ಕಿಂಡಿ" ಎಂದೇ ಲೋಕ ವಿಖ್ಯಾತವಾಗಿದೆ.
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಯಾವುದೇ ಕೃತಿಗಳಲ್ಲೀ, ಅಥವಾ ಇತರೆ ಕೀರ್ತನೆಗಳಲ್ಲಾಗಲೀ ಇಲ್ಲವೇ ಮಠದ ದಾಖಲೆಗಳಲ್ಲಾಗಲೀ, ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲವಾದರೂ ಜನಪದರ ನಂಬಿಕೆಯಿಂದಲೇ ಈ ಮಹತ್ವದ ಘಟನೆಯು ಜನಸಾಮಾನ್ಯರ ಮನದಲ್ಲಿ ಅಚ್ಚೊತ್ತಿದಂತೆ ಉಳಿದಿದೆ.
ಆಗಿನ ಕಾಲಮಾನದಲ್ಲಿದ್ದ ದಾಸವರೇಣ್ಯರಲ್ಲಿ ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ ಇದ್ದರು. ಮೂವರು ದಾಸದಿಗ್ಗಜರೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.
ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವಿತೀಯ ಸ್ಥಾನಗಳಿಸಿ ಚಿರಸ್ಮರಣೀಯರಾಗಿದ್ದಾರೆ
ಕನಕದಾಸರ ಜನಜನಿತ ಕೀರ್ತನೆಗಳು:-
^^^^^^^^^^^^^^^^^^^^^^^^^
*ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಿವನಾರಮ್ಮಾ
ಕಮ್ಮಗೋಲನ ವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ
*ಹಣ್ಣು ಕೊಂಬುವ ಬನ್ನಿರಿ
ಚೆನ್ನಬಾಲಕೃಷ್ಣನೆಂಬ
ಕೆನ್ನೆಗೊನೆ ಬಾಳೆಹಣ್ಣು
*ಬಾಯಿ ನಾರಿದ ಮೇಲೆ ಏಕಾಂತವೇ?
ತಾಯಿ ತೀರಿದ ಮೇಲೆ ತವರಾಸೆಯೇ?
*ಮರೆಯದಿರು ಮರೆಯದಿರು ಮರುಳು ಮನುಜ
ನಾರಾಯಣನ ಸ್ಮರಣೆಯ ಮಾಡು ಮನುಜ
*ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ
ಅಜಸುರೇಂದ್ರಾದಿಗಳು ಆದಿವಂದಿತಪಾದ
*ಈತನೀಗ ವಾಸುದೇವನು
ಈ ಸಮಸ್ತ ಭುವನದೊಡೆಯ
ದೂತಗೊಲಿದು ತೇರನೇರಿ
ಹಿತದಿ ತೇಜಿ ನಡೆಸಿದಾತ
*ನಾರಾಯಣ ನಿನ್ನ
ನಾರಾಯಣ ನಿನ್ನ ನಾಮವೊಂದಿರುತಿರೆ
ಬೇರೊಂದು ನಾಮವಿನ್ನೇತಕಯ್ಯಾ
*ಆರಿಗೆ ಆರಿಲ್ಲವಯ್ಯ ಆಪತ್ತು ಕಾಲಕೆ
ವಾರಿಜನಾಭನ ನೆನೆ ಮನವೆ
*ಸತ್ಯವಂತರ ಸಂಗವಿರಲು
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
*ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ
*ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ
ಬಿಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ….
ಇವೇ ಮೊದಲಾದ ನೂರಾರು ಕೀರ್ತನೆಗಳನ್ನು ರಚಿಸಿ, ಹಾಡುವ ಮೂಲಕ ಎಲ್ಲ ವರ್ಗದ ಜನರಿಗೂ ಹರಿನಾಮದ ಮಹತ್ವ, ಜೀವನದ ಸಾರಾಂಶ, ಬದುಕಿನ ಅಂತಃಸತ್ವ, ಜಾತಿ ತಾರತಮ್ಯದ ಅನಿಷ್ಠ ಆಚರಣೆಗಳು, ಮುಂತಾದ ಗಹನವಾದ ವಿಷಯಗಳ ಮೇಲೆ ಪ್ರಖರವಾದ ಬೆಳಕನ್ನು ಚೆಲ್ಲಿದ್ದಾರೆ. ಅವರ ಆ ಶತಮಾನದ ವಿಚಾರ ಧಾರೆಯು ಇಂದಿಗೂ ಪ್ರಸ್ತುತವಾಗಿರುವುದು ಅವರ ಸಾಹಿತ್ಯದ ಗಟ್ಟಿತನ ಮತ್ತು ದೂರದರ್ಶಿತ್ವಕ್ಕೆ ಸಾಕ್ಷೀಭೂತವಾಗಿವೆ.
ಕನಕದಾಸರ ಸಾಹಿತ್ಯ ಕೃಷಿ:-
""""""""""""""""""""
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಮೇಲೆ ತಿಳಿಸಿದ ಗೀತೆಗಳೂ ಸೇರಿದಂತೆ ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಕೃತಿಗಳು ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ.
ಅವರ ಐದು ಮುಖ್ಯ ಕಾವ್ಯಕೃತಿಗಳು ಯಾವುವೆಂದರೆ,
★ಮೋಹನತರಂಗಿಣಿ
★ನಳಚರಿತ್ರೆ
★ರಾಮಧಾನ್ಯ ಚರಿತೆ
★ಹರಿಭಕ್ತಿಸಾರ
★ನೃಸಿಂಹಸ್ತವ (ಉಪಲಬ್ದವಿಲ್ಲ).
ಹೀಗೆ ದಾಸ ಪರಂಪರೆಯ ಸಾವಿರದ ನಕ್ಷತ್ರಗಳ ನಡುವೆ ಧೃವ ತಾರೆಯಂತೆ ಇಂದಿಗೂ ಮಿನುಗುತ್ತಿರುವ ಕನಕದಾಸರು ಜಾತ್ಯಾತೀತ ನಿಲುವಿನೊಂದಿಗೆ ಸಮಾನತೆಯನ್ನು ಸಾರಿದ ಅಸಾಮಾನ್ಯ ದಾಸ ಶ್ರೇಷ್ಠರಾಗಿದ್ದು, ಅವರ ಸಂಸ್ಮರಣೆಯು ಚಿರಂತನವಾಗಿ ಉಳಿಯುವ ಸದುದ್ಧೇಶದಿಂದಾಗಿ ಸರ್ಕಾರವು ಪ್ರತಿ ವರ್ಷ "ಕನಕದಾಸ ಜಯಂತಿ"ಯನ್ನು ಆಚರಿಸುವ ಸತ್ಸಂಪ್ರದಾಯವನ್ನು ಮುಂದುವರೆಸಿದೆ. ಜೊತೆಗೆ ಸಾಧಕರಿಗೆ 'ಕನಕಶ್ರೀ' ಪುರಸ್ಕಾರವನ್ನು ನೀಡುವ ಮೂಲಕ ಅಪಾರ ಗೌರವವನ್ನು ಸಲ್ಲಿಸುತ್ತಿದೆ.
ಒಟ್ಟಾರೆ ಕನಕದಾಸರ ವ್ಯಕ್ತಿತ್ವ, ಭಗವಂತನ ಸಾಕ್ಷಾತ್ಕಾರದಲ್ಲಿ ಕೀರ್ತನೆಗಳ ಪಾತ್ರ, ಕನ್ನಡ ಸಾಹಿತ್ಯ ಲೋಕದಲ್ಲಿ ಜೀವ ದ್ರವ್ಯವಾಗಿ ಉಳಿದಿರುವ ಕೃತಿಗಳೆಲ್ಲವೂ ಇಂದಿಗೂ ಅನ್ವಯವಾಗುತ್ತವೆ ಎಂಬುದೇ ಹೆಮ್ಮೆಯ ವಿಷಯವಾಗಿದೆ.
~ಹೊರಾ.ಪರಮೇಶ್ ಹೊಡೇನೂರು,