ಸಂಸ್ಕೃತಿ: ನೇಮಿನಾಥ ತಪಕೀರೆ


ಪುರಾತನ ಇತಿಹಾಸ, ಅನನ್ಯವಾದ ಭೌಗೋಳಿಕ ರಚನೆ, ವೈವಿಧ್ಯಮಯವಾದ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು, ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆಯ ರಾಷ್ಟ್ರಗಳ ಪ್ರಭಾವಗಳು ಇವೆಲ್ಲ ಒಟ್ಟುಗೂಡೆ ಭಾರತೀಯ ಸಂಸ್ಕೃತಿಯನ್ನು ಅನನ್ಯವಾಗಿಸಿವೆ. ಸಿಂಧು ಕಣಿವೆಯ ನಾಗರಿಕತೆ ಅಥವಾ ಅದಕ್ಕೂ ಪೂರ್ವದಲ್ಲಿಯೇ ಆರಂಭಗೊಂಡ ಭಾರತೀಯ ಭವ್ಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಶಾಧಾರಣ ವಿಕಸನವನ್ನು ಕಂಡಿತು. ಸದನಂತರದಲ್ಲಿ ಬೌದ್ಧ, ಜೈನಧರ್ಮಗಳ ಉನ್ನತಿ ಮತ್ತು ಅವನತಿ, ಮುಸ್ಲಿಂ ಆಳ್ವಿಕೆ, ಯುರೋಪಿಯನ್ನರ ವಸಾಹತು ಆಳ್ವಿಕೆ ಈ ಸಂಸ್ಕೃತಿಯ ವಿಕಸನಕ್ಕೆ ಇನ್ನಷ್ಟು ಇಂಬು ನೀಡಿತು. ವೈವಿಧ್ಯಮಯವಾಗಿಸಿತು. ಭಾರತದ ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಸಂಪ್ರದಾಯಗಳು ಕಳೆದ ಸುಮಾರು ೫೦೦೦ ವರ್ಷಗಳಿಂದ ನಾಡಿನ ಅನನ್ಯತೆಗೆ ಸಾಕ್ಷಿಯಾಗಿವೆ. ವಿವಿಧ ಧರ್ಮಗಳ ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ’ಸಂಸ್ಕೃತಿ’ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೆ ತನ್ನದೇ ಆದ ಪ್ರಭಾವ ಬೀರಿದೆ.

ಸಂಸ್ಕೃತಿ ಪದವನ್ನು ಇತ್ತೀಚೆಗೆ ಹೆಚ್ಚನ ಸಂದರ್ಭಗಳಲ್ಲಿ ನಾವು ಬಳಸಿಕೊಳ್ಳುತ್ತಿದ್ದೇವೆ. ಅದರಂತೆ ವಿದ್ವಾಂಸರೊಬ್ಬರು ಒಂದು ಪದದ ಅಥವಾ ವಸ್ತುವಿನ ದುರ್ಬಳಕೆಯಾಗುವತನಕ ಅದರ ವ್ಯಾಖ್ಯಾನ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳುತ್ತಾರೆ. ಅಂದರೆ ಇವತ್ತು ಸಂಸ್ಕೃತಿ ಪದದ ದುರ್ಬಳಕೆ ಆಗುತ್ತಿದೆ ಎಂದೇ ಅರ್ಥ. ಹೀಗಾಗಿಯೇ ದುಷ್ಟ ಸಂಸ್ಕೃತಿ ಹಾಗೂ ಶಿಷ್ಟ ಸಂಸ್ಕೃತಿ ಎಂದು ನಾವು ಗುರುತಿಸುತ್ತಿದ್ದೇವೆ.

ಪಶುತ್ವವನ್ನು ಹೋಗಲಾಡಿಸುವುದು, ಮನುಷ್ಯನ ಅಂತರಂಗದ ವ್ಯವಸಾಯವೇ ಸಂಸ್ಕೃತಿಯೆಂದು ಸಾಮಾನ್ಯವಾಗಿ ಅರ್ಥೈಸಬಹುದು. ಸಂಸ್ಕೃತಿಯೆಂಬುದು ಪ್ರಧಾನವಾಗಿ ಆಂತರಂಗಿಕವಾದ ವಿಕಾಸಕ್ಕೆ ಸಂಬಂದಿಸಿದುದಾಗಿದೆ. ಮನುಷ್ಯನಲ್ಲಿನ ಮೃಗತ್ವವನ್ನು ಹೋಗಲಾಡಿಸುವುದು ಹಾಗೂ ಅಲ್ಲಿ ನಿಜವಾದ ಮಾನವೀಯತೆಯನ್ನು ಸ್ಥಾಪಿಸುವುದೇ ಆಗಿದೆ. ನಾವು ಆಲೋಚಿಸಿದ ಉಕ್ತಗಳು, ನಮ್ಮ ಭಾವನೆ ಮತ್ತು ಪದ್ಧತಿಗಳ ಮೇಲೆ ಬೆಳಕು ಬೀರಬೇಕು. ನಾವು ನಮ್ಮನ್ನು ತಿದ್ದಿಕೊಳ್ಳಬೇಕು. ಹೀಗೆ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಮಾಡುವ ಪ್ರಯತ್ನವೇ ಸಂಸ್ಕೃತಿ.

ಸಂಸ್ಕೃತಿಯೆಂಬುದೇನು ಒಂದು ಆಕಾರ ತಳೆದು ನಿಂತ ಆಕಸ್ಮಿಕ ಮೊತ್ತವಲ್ಲ. ನಮ್ಮ ಪರಿಪೂರ್ಣತೆಗೆ ರೂಪಿಸಿಕೊಂಡ ದಿವ್ಯದರ್ಶನದ ಅಭಿವ್ಯಕ್ತಿಯಾಗಿದೆ. ಹೀಗಾಗಿ ಸಮಾಜ, ಕುಟುಂಬ ವ್ಯವಸ್ಥೆ, ಹಬ್ಬಗಳು, ಆಚರಣೆಗಳು, ಆಹಾರ ಪದ್ಧತಿ, ಉಡುಗೆ-ತೊಡುಗೆ, ಇತಿಹಾಸ, ಕಾವ್ಯ, ಮಹಾಕಾವ್ಯ, ಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ, ನಾಟಕ, ಕ್ರೀಡೆ, ಧರ್ಮಗಳು ಸಂಸ್ಕೃತಿಯ ಸಮೀಕರಣಗಳಾಗಿವೆ. ಹಾಗೆಯೇ ಕರ್ನಾಟಕಕ್ಕೆ ತನ್ನದೇ ಆದ ಸಾಂಸ್ಕೃತಿಕ ಇತಿಹಾಸವಿದೆ. ಕನ್ನಡ ಎನ್ನುವುದು ಏಕಕಾಲಕ್ಕೆ ಒಂದು ಭಾಷೆ, ಜನಾಂಗ, ಹಾಗೂ ದೇಶದ ಹೆಸರೂ ಹೌದು. ಕ್ರಿ. ಪೂರ್ವದಿಂದಲೂ ನಾವು ಕನ್ನಡ ನಾಡಿನ ಭವ್ಯ ಪರಂಪರೆಯನ್ನು, ಸಾಂಸ್ಕೃತಿಕ ಕುರುಹುಗಳನ್ನು ಕಾಣಬಹುದು. ಅಂತೆಯೇ ಈ ನಾಡಿನ ಚರಿತ್ರೆಯನ್ನು, ಸಂಸ್ಕೃತಿಯನ್ನೂ ಕಟ್ಟಿದವರ ಅಭೂತಪೂರ್ವವಾದ ಪರಂಪರೆಯಿದೆ.

ಆ ನಮ್ಮ ಪರಂಪರೆಯಲ್ಲಿ ನಾಡನ್ನು ಆಳಿದ ಅರಸರು, ಕವಿಗಳು, ಸಂತರು, ಶಿಲ್ಪಿಗಳು, ಗಾಯಕರು, ಕಲೆಗಾರರು, ಆಚಾರ್ಯರು, ಚಿಂತಕರು ಹಾಗೂ ಬಹುಸಂಖ್ಯಾತರಾದ ಶ್ರೀಸಾಮಾನ್ಯರನ್ನು ಗುರುತಿಸುತ್ತೇವೆ. ಇವರೆಲ್ಲರ ಕೊಡುಗೆಗಳನ್ನು ನಾವು ಲಿಪಿಗಳಲ್ಲಿ, ಶಿಲೆಗಳಲ್ಲಿ, ಕಲೆಗಳಲ್ಲಿ, ಬಣ್ಣಗಳಲ್ಲಿ, ರಾಗ-ತಾಳಗಳಲ್ಲಿ ಹಾಗೂ ಸಮಾನಾಂತರವಾಗಿ ಸಾಗಿ ಬಂದಿರುವ ಅಲಿಖಿತ ಧ್ವನಿಗಳಲ್ಲಿ ಕಾಣುತ್ತೇವೆ. ಕದಂಬ, ರಾಷ್ಟ್ರಕೂಟ, ಹೊಯ್ಸಳ, ಚಾಲುಕ್ಯಾದಿಯಾದ ವಾಸ್ತುಶಿಲ್ಪಗಳಿವೆ. ಪ್ರವರ್ಧಮಾನಕ್ಕೆ ಬಂದ ಜೈನ, ಶೈವ, ವೀರಶೈವ, ವೈಷ್ಣವ, ಶ್ರೀವೈಷ್ಣವ, ಮಾಧ್ವಾದಿ ಮತ-ಧರ್ಮಗಳು, ಈ ಮತಗಳ ಪ್ರೇರಣೆಯಿಂದ ನಿರಂತರತೆಯನ್ನು ಪಡೆದುಕೊಂಡು ಬಂದ ನಮ್ಮ ನಾಡಿನ ಸಾಹಿತ್ಯವನ್ನು ಕಾಣುತ್ತೇವೆ.

ಅನ್ಯ ಪ್ರಭಾವ ಪ್ರೇರಣೆಗಳನ್ನು ಕನ್ನಡದ ಸಂಸ್ಕೃತಿ ತನ್ನೊಳಗೆ ಕರಗಿಸಿಕೊಳ್ಳುತ್ತ, ಅರಗಿಸಿಕೊಳ್ಳುತ್ತ, ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಳ್ಳುತ್ತ ತನ್ನ ಪ್ರಾದೇಶಿಕತೆಯಲ್ಲಿ ಸಂಸ್ಕೃತಿಯ ಅನುಸೃಷ್ಟಿ ಅದರಲ್ಲಿ ಪ್ರತಿಸೃಷ್ಟಿಯನ್ನು ಅಳವಡಿಸಿಕೊಂಡಿದೆ. ಸಾಮಾಜಿಕ ಸಂಚರಣಾತ್ಮಕವಾದ, ನಿತ್ಯ ನಿರಂತರವಾದ, ಏಕರೂಪತೆ ಮತ್ತು ಸಮಗ್ರತೆಯ ಸಮ್ಮಿಶ್ರಣವಾದ ಆದರ್ಶಸೂಚಕವಾದ ಹಾಗೂ ಭಿನ್ನವಾದ ವೈಶಿಷ್ಟ್ಯಪೂರ್ಣವಾದ ವಿಶಾಲ ಕಲ್ಪನೆಯನ್ನು ಸಂಸ್ಕೃತಿಯು ಹೊಂದಿದೆ. ಮೌಲ್ಯ ಆದರ್ಶಗಳು, ನೈತಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಸಂಸ್ಕೃತಿಯ ಪ್ರವಾಹವನ್ನು ಕಾಣಬಹುದು. ಸೌಂದರ್ಯೋಪಾಸನೆ, ಹೃದಯ ಸಂಪರ್ಕ, ನಡೆ-ನುಡಿಗಳ ಚೊಕ್ಕಾಟ, ಪರಿಪೂರ್ಣತೆಯ ಪ್ರಯತ್ನ, ಮನೋವಿಕಾಸ, ಭಾವನಾತ್ಮಕ ಬಂಧಗಳು ಒಟ್ಟು ಅಂತರಂಗದ ಉಳುಮೆಯಾಗಿದೆ ಸಂಸ್ಕೃತಿ.

ಜ್ಞಾನ, ಅಭ್ಯಾಸ, ನಂಬಿಕೆ ಮತ್ತು ಕಲಾತೀತಗಳಲ್ಲಿ ಅವುಗಳಲ್ಲಾದ ಬದಲಾವಣೆ, ಆದರ್ಶಮಯವಾದ ಮಾರ್ಗಗಳು, ಸಾಮಾಜಿಕ ಧೋರಣೆಗಳು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸಬಲ್ಲವು. ಪವಿತ್ರ ಮತ್ತು ಅಪವಿತ್ರ ವೃತ್ತಿಗಳು ಎಂಬ ಸಾಂಪ್ರದಾಯಿಕ ವರ್ಗೀಕರಣವು ಶಿಷ್ಟ ಮತ್ತು ದುಷ್ಟ ಸಂಸ್ಕೃತಿಗಳನ್ನು ಬೇರ್ಪಡಿಸುತ್ತವೆ. ಹಾಗೆಯೇ ಸಾಂಪ್ರದಾಯಿಕ ಹಿಂದೂ ನಿಲುವುಗಳು, ಸರ್ವಧರ್ಮ ಸಹಿಷ್ಣುತೆಯೂ, ವಿವೇಕವೂ, ಕಾಲ ಕಾಲಕ್ಕೆ ನಿಷ್ಪನ್ನವಾದ ಮಾನವನ ಕಲ್ಪನೆಗಳಿಗೂ ಕನ್ನಡ ನಾಡಿನ ಸಂಸ್ಕೃತಿಯು ಕನ್ನಡಿಯಾಗಿದೆ. ನಿಷ್ಕಪಟ ವೃತ್ತಿ, ಸ್ವಾಭಿಮಾನ, ಉದಾತ್ತ ದೃಷ್ಟಕೋನ, ಅಚಲವಾದ ವಿಶ್ವಾಸ, ಶೀಲ, ಹೃದಯ ವೈಶಾಲ್ಯತೆ, ಸರ್ವಧರ್ಮ ಸಮನ್ವಯತೆ, ಸ್ವಾಭಿಮಾನ, ಸಾಹಸಿಗಳ ನಾಡು, ಕಲೆಗಳ ಬೀಡು, ಸಾಹಿತ್ಯ ಶ್ರೀಮಂತಿಕೆ, ಧರ್ಮಾಭಿಮಾನ ವರ್ಣನಾತೀತವಾದ ವಿಶಿಷ್ಟ ಸಂಪ್ರದಾಯಗಳು ಕನ್ನಡ ನಾಡಿನ ಅಪ್ರತಿಮ ಸಂಸ್ಕತಿಯ ಸಂಗಮವಾಗಿದೆ.     

-ಇಂದುತನಯ.

 

 

ವಿಳಾಸ: ನೇಮಿನಾಥ ತಪಕೀರೆ

ಮು/ಪೋ: ಬೆಳಕೂಡ

ತಾ: ಚಿಕ್ಕೋಡಿ

ಜಿ: ಬೆಳಗಾವಿ – ೫೯೧೨೨೨

ಮೋ: ೯೦೦೮೭೭೧೨೭೭

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x