ಲೇಖನ

ಸಂಸಾರ ಸಾಗರದಿ ಅನುಮಾನದ ಅಲೆಗಳು: ಹೊರಾ.ಪರಮೇಶ್ ಹೊಡೇನೂರು

 "ಸಂಸಾರ" ಎಂಬುದು ಅನಾದಿ ಕಾಲದಿಂದಲೂ ಗಂಡು ಮತ್ತು ಹೆಣ್ಣುಗಳ ನಡುವೆ ಸೃಷ್ಟಿಸಿಕೊಳ್ಳುವ ಅಪೂರ್ವ ಅನುಬಂಧವಾಗಿದ್ದು ಅವರ ನಡುವಿನ ದೈಹಿಕ ಮತ್ತು ಮಾನಸಿಕ ಸಮ್ಮಿಲನದ ಫಲವಾಗಿ ಪಡೆಯುವ ಮಕ್ಕಳಿಂದಾಗಿ ಪೀಳಿಗೆಗಾಗಿ ಸರಣಿ ಹರಿದುಕೊಂಡು ಬಂದಿವೆ. "ಮದುವೆ" ಎಂಬ ಸಾಮಾಜಿಕ ಒಪ್ಪಂದದ ಪರವಾನಗಿ ಪಡೆದು ಜೀವನ ಸಂಗಾತಿಗಳಾಗಿ, ಪರಸ್ಪರ ನಿಷ್ಠರಾಗಿ ಬಾಳುವ ದಂಪತಿಗಳ ಬೇಕು ಬೇಡಗಳು, ಕಷ್ಟ-ಸುಖಗಳು, ಇಷ್ಟ-ಅನಿಷ್ಟಗಳು, ನೀತಿ-ನಿರ್ಧಾರಗಳು ಬಹುತೇಕ ಇಬ್ಬರೂ ಕೂಡಿ ಚರ್ಚಿಸುವ ಮೂಲಕ ಕೈಗೊಂಡರೂ, ಹೆಚ್ಚಾಗಿ ಜೀವನೋಪಾಯಕ್ಕಾಗಿ ದುಡಿಯುವ ಪುರುಷನೇ(ಪತಿ) ಮನೆಯ ಯಜಮಾನಿಕೆ ವಹಿಸಿದರೆ, ಮಹಿಳೆಯು(ಸತಿ) ಆ ಮನೆಯ ಅಡುಗೆ, ಬಟ್ಟೆ-ಬರೆ, ಮಕ್ಕಳ ಲಾಲನೆ-ಪಾಲನೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುತ್ತಾ, ಸಂಸಾರವೆಂಬ ರಥವನ್ನು ಮುನ್ನಡೆಸುವುದು ಪರಂಪರೆಯಾಗಿ ನಡೆದುಕೊಂಡೇ ಬಂದಿದೆ. ಆದರೆ ಇತ್ತೀಚೆಗೆ ಗಂಡು-ಹೆಣ್ಣು ಸಂಸಾರದ ಜವಾಬ್ದಾರಿಗಳನ್ನು ಸರಿ ಸಮಾನವಾಗಿ ದುಡಿಯುವ ವಾಡಿಕೆಯೂ ಹೆಚ್ಚಾಗುತ್ತಿದೆ ಮತ್ತು ಸ್ತ್ರೀಯು ಹೆಣ್ಣಿಗೆ ಗುಲಾಮಳಂತೆ ಅಡುಗೆ ಮನೆಗೇ ಸೀಮಿತ ಎಂಬಂತಹ ಕಟ್ಟಳೆಯು ಕಡಿತವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷನಿಗೆ ಸಮನಾಗಿ ಸಬಲಳಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಹೀಗೆ ಸಾಗಿರುವ "ಸಂಸಾರ" ಎಂಬ ಸಾಗರದಲ್ಲಿ ಸುಖ, ಶಾಂತಿ, ನೆಮ್ಮದಿ, ಮಿಥುನ, ಕಾಳಜಿ, ಪ್ರೇಮ, ನಿಷ್ಠೆ, ನಂಬಿಕೆಯಂತಹ ಅಮೂಲ್ಯ ಮುತ್ತುಗಳೂ ಅಡಗಿಕೊಂಡಿದ್ದು, ಅವುಗಳ ಅಪ್ಪುಗೆ ಮತ್ತು ಒಪ್ಪಿಗೆಯಿಂದ ಜೀವನ ನಡೆಸುತ್ತಾ ಮುಂದುವರೆದಿದೆ.

ಇಂತಹ ಸಂಸಾರ ಸಾಗರದಲ್ಲಿ ಇತ್ತೀಚೆಗೆ ಅನುಮಾನದ ಅಲೆಗಳು ಆಗಾಗ ಪುಟಿದೇಳುವ  ಮೂಲಕ ಕೌಟುಂಬಿಕ ವ್ಯವಸ್ಥೆಯ ಚೌಕಟ್ಟು ಸಡಿಲಗೊಳ್ಳುತ್ತಿದೆ. ಇದರಿಂದಾಗಿ ಒಪ್ಪಿ ಅಪ್ಪಿದ ಸುಖ, ಶಾಂತಿಯಂತಹ ಅಮೂಲ್ಯ ರತ್ನಗಳಿಗೆ ಅಭಾವ ಉಂಟಾಗಿದ್ದು ಅನುಮಾನದ ಅಲೆಗಳು ಮೇಲಾಟ ನಡೆಸುತ್ತಿದೆ. ಅಂತಹ ಸಂದರ್ಭ ಅಥವಾ ಸನ್ನಿವೇಶಗಳಿಗೆ ಕೆಲವು ಸಾಮಾನ್ಯ ಉದಾಹರಣೆಗಳನ್ನು ಹೇಗೆ ಗಮನಿಸಬಹುದು. 

*ಅದೊಂದು ಅಪೂರ್ವ ಸಂಸಾರ. ಮುದ್ದಾದ ಒಬ್ಬಳೇ ಹೆಣ್ಣು ಮಗಳ ಜೊತೆ ಆನಂದವಾಗಿ ಸಂಸಾರ ಸಾಗಿಸುತ್ತಿದ್ದಾರೆ.ಗಂಡನು ಬ್ಯುಸಿನೆಸ್ ಮಾಡುತ್ತಾ ಕಾರು, ಬಂಗಲೆಯೊಂದಿಗೆ
ಉತ್ತಮ ವಹಿವಾಟಿನೊಂದಿಗೆ ಜೀವನ ನಡೆಸುತ್ತಿದ್ದಾನೆ. ಬಿಸಿನೆಸ್ ಮೇಲೆ ಬೆಳಿಗ್ಗೆ ಹೊರ ಹೋದರೆ ಸಂಜೆಯೇ ಮನೆಗೆ ಬರುವುದು. ಈ ನಡುವೆ ಹೆಂಡತಿ ಮಗಳನ್ನು ಅಣಿಗೊಳಿಸಿ ಕಾನ್ವೆಂಟ್ ಗೆ ಬಿಟ್ಟುಬಂದ ನಂತರ ದಿನವಿಡೀ ಟಿವಿ ವೀಕ್ಷಣೆ ಹಾಗೂ ಮನೆಯ ಸಣ್ಣ ಪುಟ್ಟ ಕೆಲಸಗಳೊಂದಿಗೆ ಕಾಲ ಕಳೆಯುವ ದಿನಚರಿ ಇತ್ತು.

ಹೀಗಿರುವಾಗ ಗಂಡನ ತಮ್ಮ ಕಾಲೇಜು ವ್ಯಾಸಂಗಕ್ಕಾಗಿ ಬಂದು ಇವರ ಮನೆಯಲ್ಲಿಯೇ ಉಳಿದು ಪ್ರತಿದಿನವೂ ಸಮೀಪದ ಕಾಲೇಜಿಗೆ ಹೋಗಿಬರುವ ಪರಿಪಾಠ ಶುರುವಾಯ್ತು. ಆರಂಭದಲ್ಲಿ ಎಲ್ಲವೂ ಹಿಂದಿನಂತೆಯೇ ಇತ್ತು. ಮುಂದೊಂದು ದಿನ ತನ್ನ ಹೆಂಡತಿಯು ಮೈದುನನೊಂದಿಗೆ ಹೆಚ್ಚು ಸಲಿಗೆಯಿಂದ ಇರುತ್ತಿದ್ದುದನ್ನು ಗಮನಿಸಿದ ಗಂಡನ ತಲೆಯಲ್ಲಿ ಅನುಮಾನದ ಹುಳು ಓಡಾಡಲಾರಂಭಿಸಿತು. ಪ್ರಶಾಂತವಾದ ಸಂಸಾರ ಸಾಗರದ ಮೇಲೆ ಅನುಮಾನದ ಅಲೆಗಳು ಜೋರಾಗಿ ಏಳತೊಡಗಿದವು. ಇಂತಹ ಮನಸ್ಥಿತಿಯೇ ಮುಂದುವರೆಯುತ್ತಾ ಹೋದಂತೆ ಅತ್ತಿಗೆ ಮೈದುನರ ಸಲುಗೆ ಅಪಾರ್ಥ ಮಾಡಿಕೊಂಡ ಗಂಡ ಇದ್ದಕ್ಕಿದ್ದಂತೆ ರಂಪಾಟ ಮಾಡಿಬಿಟ್ಟ. ಸಂಶಯ ಪಿಶಾಚಿಯೊಂದಿಗೆ ಸಂಸಾರ ಮಾಡುವುದು ಕೊಳಕ ಮಂಡಲ ಹಾವಿನೊಂದಿಗೆ ಸ್ಪೇಹ ಮಾಡಿದಂತೆ ಎಂದು ಆಲೋಚಿಸಿದ ಹೆಂಡತಿ ಗುಡ್ ಬೈ ಹೇಳಿ ತವರುಮನೆ ಸೇರುವಲ್ಲಿಗೆ ಆ ಕುಟುಂಬದ ಸುವರ್ಣ ಚೌಕಟ್ಟು ಕಳಚಿಬಿತ್ತು.

*ಇನ್ನೊಂದು ಸಂಸಾರವು ಹಾಲು ಜೇನಿನ ಸಂಗಮದಂತೆ ಆನಂದದಿಂದ ಸಾಗಿತ್ತು. ಕಾಲಕ್ರಮೇಣ ಸಹಜವಾದ ಕೆಲವು ಸಮಸ್ಯೆಗಳು ನುಸುಳಿದವು.ದಿನವಿಡೀ ದುಡಿದು ಬಂದು ಸಾಕಾಗಿ ಆಯಾಸದಿದ ಬೇಗನೇ ಮಲಗುತ್ತಿದ್ದ ಪತಿರಾಯರ ನಿದ್ದೆಗೆ ಭಂಗ ತರಬಾರದೆಂಬ ಉದ್ದೇಶದಿಂದ ಹೆಂಡತಿಯು ರಾತ್ರಿವೇಳೆಯ ತನ್ನ ಕಾಮಾಸಕ್ತಿಯನ್ನು ಅದುಮಿಟ್ಟುಕೊಂಡು  ರಗ್ಗು ಹೊದ್ದು ಮಲಗಿಬಿಡುತ್ತಿದ್ದಳು. ಇದೇ ಪರಿಪಾಠ ಮುಂದುವರೆದಂತೆ ಗಂಡನಲ್ಲಿ ಕೆಟ್ಟ ಅದೇ ಅನುಮಾನದ ವಾಸನೆ ಪಸರಿಸತೊಡಗಿತು.
ಪತ್ನಿ ತಾನಾಗಿಯೇ ಒಂದು ದಿನವೂ ಸುರತ ಸುಖಕ್ಕೆ ಆಹ್ವಾನಿಸದೇ ಸುಮ್ಮನೇ ಮಲಗುವಳಲ್ಲಾ! ಒಂದು ವೇಳೆ ತನಗೆ ಬೇಕಾದ ಸುಖವನ್ನು ಬೇರೆ ಮೂಲದಿಂದೇನಾದರೂ ಪಡೆಯುತ್ತಿರಬಹುದೇ? ಎಂಬ ಲೆಕ್ಕಾಚಾರಕ್ಕೆ ಹೆಂಡತಿಯ ವರ್ತನೆಯನ್ನು ತಳಕು ಹಾಕಿದ. ಈ ವಿಷಯ ತಿಳಿದ ಗಂಡನೊಂದಿಗೆ ಬಾಳುವುದಕ್ಕಿಂಥ ಒಂಟಿಯಾಗಿರುವುದೇ ಲೇಸೆಂದು ನಿರ್ಧರಿಸಿ ಅವನಿಂದ ವಿಚ್ಛೇದನ ಪಡೆದು, ತನ್ನ ಓದಿಗೆ ತಕ್ಕುದಾದ ನೌಕರಿ ಮಾಡುತ್ತಾ ಒಂಟಿಯಾಗಿ ಬಾಳು ಮುಂದುವರೆಸಿದಳು.ಅಲ್ಲಿಗೆ ಹಾಲು ಜೇನಿನ ಮಧುರ ದಾಂಪತ್ಯದ ಶರಧಿಯಲ್ಲಿ ಮತ್ತವೇ ಅನುಮಾನದ ಅಲೆಗಳು ಪ್ರಭಾವ ಬೀರಿದ್ದವು.

*ಮತ್ತೊಂದು ಕುಟುಂಬದ ಕತೆ ತೀರಾ ಭಿನ್ನವಾದುದು. ಹಳ್ಳಿಯ ಕುಟುಂಬದ ಯಜಮಾನ ಗಂಡ ಸಾರಿಗೆಯಲ್ಲಿ ಚಾಲಕ ವೃತ್ತಿಯಲ್ಲಿದ್ದ. ದೂರದ ಊರಿನ ಪ್ರಯಾಣದ ಡ್ಯೂಟಿಯಾದುದರಿಂದ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮನೆಗೆ ಬರುತ್ತಿದ್ದ. ದೀರ್ಘ ಪ್ರಯಾಣದ ಬಳಲಿಕೆಯಿಂದ ಬೇಸರಗೊಂಡು ಯಾವುದರಲ್ಲೂ ಆಸಕ್ತಿಯಿಲ್ಲದೆ ದಾಂಪತ್ಯ ಸುಖವನ್ನೂ ಅಪೇಕ್ಷಿಸದೆ, ಹೆಂಡತಿಯ ಸಹಜ ಆಸೆಯನ್ನು ಉಪೇಕ್ಷಿಸುತ್ತಿದ್ದ ಗಂಡನ ವರ್ತನೆಯು ದಿನಕಳೆದಂತೆ ಹೆಂಡತಿಯಲ್ಲಿ ಅಸಹನೆ ಮೂಡಿಸಿತು. ಜೊತೆಗೆ ಟಿವಿ ಶೋಗಳಲ್ಲಿ  ನೋಡಿದಂತೆ ಹಾಗೂ ಅವರಿವರು ಹೇಳುವಂತೆ  ಗಂಡನ ಮೇಲೆ ಅನುಮಾನದ ಕಿಡಿಗಳು ಹೊತ್ತಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಯಿತು. "ಹೊರಗೆ ಹೋಗುವ ಗಂಡಸರಿಗೆ ವೇಶ್ಯಾವಾಟಿಕೆ ಅಡ್ಡೆಗಳ ಸಂಪರ್ಕವಿರುತ್ತದೆ, ಕೆಲವು ರಾತ್ರಿ ಡಾಬಾಗಳಲ್ಲಿ ಹಣ ಕೊಟ್ಟರೆ ಎಲ್ಲ ಸುಖವೂ ಸಿಗುತ್ತದೆ" ಎಂಬ ಪೂರ್ವಾಗ್ರಹ ಪೀಡನೆಗೂ, ಗಂಡನ ನಡವಳಿಕೆಗೂ ತಾಳೆ ಹಾಕಿದ ಹೆಂಡತಿಯು ವಿವೇಚನೆಯಿಲ್ಲದೆ ಗಂಡನನ್ನು ತ್ಯಜಿಸುವ ನಿರ್ಧಾರದೊಂದಿಗೆ ಆ ಕುಟುಂಬವೂ ಛಿದ್ರವಾಗುತ್ತದೆ.

ಹೀಗೆಯೇ ಅನೇಕ ಸಂಸಾರ ಸಾಗರಗಳಲ್ಲಿ ಅನುಮಾನದ ಅಲೆಗಳ ಅಬ್ಬರ ಹಿಂದೆಂದಿಗಿಂತಲೂ ಇತ್ತೀಚೆಗೆ ಹೆಚ್ಛಾಗುತ್ತಿವೆ. ಸಮಾನತೆಯ ಹೆಸರಿನಲ್ಲಿ ಪೈಪೋಟಿಯಿಂದ ಸತಿ-ಪತಿಯರಿಬ್ಬರೂ ಕೂಡಿ ನೌಕರಿ ಮಾಡಿ ದುಡಿಯುವ ಪರಿಪಾಠ ಹೆಚ್ಚುವುದರೊಟ್ಟಿಗೇ, ತಮ್ಮ ಸೇವಾ ವ್ಯಾಪ್ತಿಯ ಆಪ್ತೇಷ್ಟರೊಂದಿಗಿನ ಸಲಿಗೆಯ ನಡವಳಿಕೆಗಳನ್ನು ಅಪಾರ್ಥ ಮಾಡಿಕೊಂಡು ಮತ್ತು ತಮ್ಮ ತಮ್ಮಲ್ಲಿಯೇ 'ಇಗೋ'ಯಿಸಂಗಳನ್ನು ಬೆಳೆಸಿಕೊಂಡು ಪವಿತ್ರವಾದ ದಾಂತ್ಯದ ಮಧುರ ಬೆಸುಗೆಯನ್ನು ಸಡಿಲಿಸಿಕೊಳ್ಳುತ್ತಿದಾರೆ. ಈ ರೀತಿಯ ಟ್ರೆಂಡ್ ಈಗೀಗ ಹಳ್ಳಿಗಳ ಕಡೆಗೂ ದಾಂಗುಡಿಯಿಡುತ್ತಿದ್ದು, ಹೀಗೇ ಮುಂದುವರೆದರೆ ಸನಾತನ ಸಂಸ್ಕೃತಿಯ ಅವಿಭಾಜ್ಯ ಜೀವನ ವಿಧಾನವಾಗಿರುವ 'ಸಂಸಾರ'ದ ಅನುಬಂಧವು ಮೌಲ್ಯ ಕಳೆದುಕೊಂಡು, ಮುಂದೊಂದು ದಿನ ಮುಕ್ತ ಲೈಂಗಿಕತೆ, ಭದ್ರತೆಯಿಲ್ಲದ ಕುಟುಂಬ, ವ್ಯಾಪಾರೀ ವ್ಯಭಿಚಾರಗಳಂತಹ ಪಾರಿಭಾಷಿಕ ಪದಗಳು ವಿಜೃಂಭಿಸುವ ಮುನ್ಸೂಚನೆ ದೊರೆಯುತ್ತಿರುವಂತಿವೆ. ಹಾಗಾಗದಿರಲೆಂಬುದೇ ಪ್ರತಿಯೊಬ್ಬ ಸನ್ನಾಗರೀಕನ ಸದಾಶಯವಾಗಿದೆ.             

*******

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *