ಲೇಖನ

ಸಂವೇದನಾಶೀಲ ಯುವ ಕವಿ ಕಾಜೂರು ಸತೀಶ್: ಕಾವ್ಯ ಎಸ್


ನಾನು ಇಂದು ಪರಿಚಯಿಸುತ್ತಿರುವುದು, ನಮ್ಮ ನಿಮ್ಮೆಲ್ಲರೊಂದಿಗೆ ಸಾಮಾನ್ಯರಂತಿರುವ, ಭಿನ್ನತೆಯಲ್ಲಿ ವಿಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ ಕಾಜೂರು ಸತೀಶ್ ರವರ ಬಗ್ಗೆ. ಶ್ರೀ. ನಾರಾಯಣ್ ಮತ್ತು ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ. ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ ಆಗಾಗ್ಗೆ ಕಾಡುತ್ತಿರುತ್ತದೆ. ಇರಲಿ….. ಅನ್ನಿಸಿದ್ದನ್ನು ಹೇಳುವುದರಲ್ಲಿ ತಪ್ಪಿಲ್ಲವೆಂದು ಭಾವಿಸುತ್ತೇನೆ.

2015ರ ” ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ ” ಪಡೆದ ಸತೀಶ್ ರವರ ಮೊದಲ ಕವನ ಸಂಕಲನ “ಗಾಯದ ಹೂವುಗಳು ” ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ “ಕಡಲಕರೆ “ಗೆ..ತಡವಾಗಿಯಾದರೂ ಶುಭಾಶಯಗಳನ್ನು ತಿಳಿಸುತ್ತಾ… ಮುಂದುವರೆಯುತ್ತೇನೆ. ನಾ ಅರಿತಂತೆ ಸತೀಶ್ ರವರ ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ.. ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ. ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.

ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
ಹೌದಾಗಿರುವ ಇವರು, ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ. ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ…!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ ಸತೀಶ್ ರವರು ವರ್ಣಚಿತ್ರಗಳು… ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು. ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ ಚಾರಣ ಹೋಗುವುದು, ಬಲುಪ್ರೀತಿಯ ಹವ್ಯಾಸಗಳಲ್ಲಿ ಒಂದಾಗಿದೆ.

ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ… ಸತೀಶ್ ರವರು ಮಾತ್ರ ಸಾಟಿ. ಸಾಮಾಜಿಕಜಾಲತಾಣಗಳು… youtube.. ನಂತಹ ವಿಡಿಯೋ ಶೇರಿಂಗ್ ಸರ್ವಿಸ್ ಗಳಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.

” ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.”.. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ ನಿಪುಣತೆ ಇವರಲ್ಲಿದೆ. ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು, ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು, ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ… ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರಗು ನೀಡುತ್ತವೆ.

ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. ಇಂತಹ ವಿಶಿಷ್ಟತೆಯ ವಿಭಿನ್ನ ಚೇತನ, ಶಿಕ್ಷಕರಾಗಿರುವುದೇ ಹೆಮ್ಮೆಯ ಸಂಗತಿ. 2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ, ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. ತಮ್ಮಲ್ಲಿಯ ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡ ಕವಿಗಳ ಸಾಲಿನಲ್ಲಿ ನಮ್ಮ ಸತೀಶ್ ಸರ್ ರವರ ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ

ಕಾವ್ಯ ಎಸ್.


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸಂವೇದನಾಶೀಲ ಯುವ ಕವಿ ಕಾಜೂರು ಸತೀಶ್: ಕಾವ್ಯ ಎಸ್

  1. ಅದ್ಭುತ ಬರಹಗಾರರೊಬ್ಬರ ಅದ್ಭುತವಾದ ಪರಿಚಯ ಇಬ್ಬರಿಗೂ ಅಭಿನಂದನೆಗಳು

Leave a Reply

Your email address will not be published. Required fields are marked *