ಸಂಬಂಧ ಸಂದೇಶಗಳ ಸಂಬಂಧ: ಪ್ರಶಸ್ತಿ ಪಿ.

 


 

ಕಾಳಿದಾಸನ ಮೇಘಸಂದೇಶದಿಂದ ಹಿಡಿದು ಮಾಡರ್ನ್ ಚಾಟಿಂಗಿನಿಂದ ಶುರುವಾದ ಸ್ನೇಹ,ಪ್ರೇಮಗಳವರೆಗೆ ಬಂಧಗಳ ಬೆಸುಗೆಯಲ್ಲಿ ಸಂದೇಶಗಳದ್ದೊಂದು ಪಾತ್ರ ಇದ್ದೇ ಇದೆ. ಎದುರಿಗೆಷ್ಟೇ ಕಿತ್ತಾಡಿದರೂ, ಹೇಳಲಾಗದಿದ್ದರೂ , ಮಾತೇ ಬಿಟ್ಟಿದ್ದರೂ ಯಾವಾಗಲೋ ಕಳಿಸಿದ ಫಾರ್ವರ್ಡ್ ಮೆಸೇಜು ಮತ್ತೆ ಮುರಿದ ಸಂಬಂಧಗಳ ಬೆಸೆದಿದ್ದಿದೆ. ವರ್ಷಗಳವರೆಗೂ ಕಾಡದಿದ್ದವರು ಟ್ರಂಕು ಖಾಲಿ ಮಾಡುವಾಗ ಸಿಕ್ಕ ಮಾಸಿದ ಪತ್ರದಿಂದ ನೆನಪಾಗಿದ್ದಿದೆ. ವರ್ಷಗಳ ಸಾಥಿ ಬೇರ್ಪಡುವಾಗ ಕಳುಹಿಸಿದ "ಮಿಸ್ ಯೂ" ಎಂಬ ಎರಡೇ ಪದದ ಸಂದೇಶ ಎಷ್ಟೋ ಸಮಯ ಕಾಡಿ , ಅಳಿಸಿದ್ದಿದೆ. ಹಲಕಾರಣಗಳಿಂದ ಹಳಸುತ್ತಿರುವ ಸ್ನೇಹ ಸಂಬಂಧಗಳ ಮಧ್ಯೆ ಮತ್ಯಾಕೋ ನೆನಪಾಗೋ ಸಂದೇಶಗಳ ಲೋಕದಲ್ಲೊಂದು ಸುತ್ತು..ಹೀಗೇ ಸುಮ್ಮನೆ.

ಹಿಂದೆ ಅಂದ್ರೆ ತೀರಾ ಹಿಂದಲ್ಲ. ಒಂದು ಎಂಟೊಭತ್ತು ವರ್ಷಗಳ ಹಿಂದಷ್ಟೆ. ನಮ್ಮೂರು ಸಾಗರದಲ್ಲಿ ಹೈಸ್ಕೂಲು ಓದುತ್ತಿದ್ದ ದಿನಗಳವು. ಫೋನಂದ್ರೆ ಲ್ಯಾಂಡ್ ಲೈನು ಅದೂ ಊರಲ್ಲಿ ಯಾರದೋ ಒಬ್ಬರ ಮನೆಯಲ್ಲಿದ್ದರೆ ಹೆಚ್ಚು ಎನ್ನುವಂತಿದ್ದ ದಿನಗಳು. ಏನೇ ಸಂತೋಷ, ಸಮಾಚಾರ, ವಿಶೇಷಗಳಿದ್ರೂ ಪತ್ರಗಳಲ್ಲೇ ವ್ಯವಹಾರ. ದೀಪಾವಳಿ, ಯುಗಾದಿ, ಗಣಪತಿ ಹಬ್ಬ .. ಹೀಗೆ ಪ್ರತಿ ಹಬ್ಬಕ್ಕೂ ಶುಭ ಕೋರಲು ಬರೆಯುತ್ತಿದ್ದ ಪತ್ರಗಳೇನು, ರಕ್ಷಾಬಂಧನದ ಸಂದರ್ಭದಲ್ಲಿ ರಾಕಿ ಕಳಿಸಲೆಂದೇ ಮೀಸಲಾದ ಪತ್ರಗಳೇನು, ಏನೂ ಹಬ್ಬಗಳಿಲ್ಲದಿದ್ದರೂ ಹೀಗೇ ಸುಮ್ಮನೆ ಕ್ಷೇಮ ವಿಚಾರಣೆಗೆ ಅಂತ ದೂರದೂರಿನ ನೆಂಟರಿಗೆ ಬರೆಯುತ್ತಿದ್ದ ಪತ್ರಗಳೇನು.. ಹಲತರದ ಪತ್ರಗಳಲ್ಲಿ ಹಲತರದ ಖುಷಿ. ಪತ್ರ ಅಂದರೆ ಆ ಕಡೆಯವರನ್ನೆಲ್ಲಾ ಕೇಳುತ್ತಾ ಮನೆಮಂದಿಯೆಲ್ಲಾ ಬರೆದಿದ್ದೂ ಇದೆ. ಎಲ್ಲರೂ ಬರಿಯಬೇಕು ಅಂದರೆ ಒಂದೇ ಹಾಳೆಯಲ್ಲಿ ಜಾಗ ಸಾಕೇ ? !! ಪುಟಗಟ್ಟಲೇ ಇರುವ ಪತ್ರ, ಇನ್ ಲ್ಯಾಂಡಾದರೆ ಚೂರೂ ಜಾಗ ಬಿಡದಂತೆ ಪತ್ರವನ್ನು ತುಂಬಿಸೋದು ಆಗ ಕಾಮನ್ನು ! 

ದೂರದೂರಿಗೆ ಹೋದ ಮಗನನ್ನು ಮಿಸ್ ಮಾಡಿಕೊಂಡ ಅಪ್ಪ ಬರೆದ "Love you sunny.. "  ಅನ್ನೋ ಪತ್ರ ಇಷ್ಟು ವರ್ಷ ಕಂಡಿರದ ಅಪ್ಪನ ಇನ್ನೊಂದು ಮುಖವನ್ನು ತೆರೆದಿಟ್ಟಿತ್ತು.

ಯಾವುದೋ ರಾಜ್ಯದಲ್ಲಿ ಕೆಲಸಕ್ಕಿರೋ ಮಗ ತಂದೆ ತಾಯಿಗೆ ಬರೆದ ಪತ್ರ, ತಾಯಿ ಮಗನಿಗೆ ಬರೆದ ಪತ್ರ, ಅಣ್ಣ-ಅತ್ತಿಗೆಗೆ ಬರೆದ ಪತ್ರ..ಹೀಗೆ ಪತ್ರಗಳಲ್ಲಿ ಹಲತರದ ಭಾವಪ್ರಭಾವ.ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಅವರಿಗೂ ಪತ್ರದಲ್ಲಿ ಸಣ್ಣ ಜಾಗ ! ಅವರ ಮುದ್ದಾದ ಅಕ್ಷರಗಳನ್ನ ನೋಡೋದೇ ಒಂದು ಖುಷಿ.ಅವರು ಬೆಳೆದು ದೊಡ್ಡವರಾದಾಗ ತಾವೇ ಬರೆದ ಪತ್ರಗಳನ್ನು ನೋಡುವಾಗ, ಆ ಭಾವಗಳನ್ನು ನೆನೆಯುವಾಗ.. ಒಂದು ಕಾಲಘಟ್ಟವನ್ನೇ , ಅದರ ಎಲ್ಲಾ ಸಂತೋಷ, ಅನುಭವಗಳನ್ನು ಹಾಳೆಗಳಲ್ಲಿ ಸೆರೆಹಿಡಿದ ಸಂಭ್ರಮ. ಬರೆಯೋ ಹುಚ್ಚು ಎಷ್ಟಿತ್ತೆಂದರೆ ಯಾವ ನೆಂಟರ ಮನೆಗೆ ಹೋದರೂ ಅವರ ಮನೆಯ ಅಂಚೆ ವಿಳಾಸವನ್ನು , ಪಿನ್ ನಂಬರ್ ಸಮೇತ ಬರೆದು ತಂದು ಮನೆಯಲ್ಲಿದ್ದ ಒಂದು ಪುಸ್ತಕದಲ್ಲಿ ಬರೆಯೋದು. ಮತ್ತೆ ಕ್ಷೇಮ ವಿಚಾರಣೆಗೆ ಅಥವಾ ಹಬ್ಬಗಳಿಗೆ ಎಂದು  ಅವರಿಗೆ ಒಂದಾದರೂ ಪತ್ರ ಬರೆದೇ ಸಿದ್ದ  !. 

ಶ್ರೀ, ಕ್ಷೇಮಗಳಿಂದ ಶುರುವಾದ ಪತ್ರಗಳಲ್ಲಿ ಯಾರಿಗೆ ಅನ್ನುವುದರ ಮೇಲೆ ಹಲ ತರ ಸಂಬೋಧನೆ.

ಪೂಜ್ಯ ಅಜ್ಜನವರಿಗೆ ಮತ್ತು ಪಿತೃಸಮಾನ ದೊಡ್ಡಪ್ಪನವರಿಗೆ ನಮಸ್ಕಾರಗಳು … ಮತ್ತು ತಂಗಿ ಗುಂಡಿಗೆ ಆಶೀರ್ವಾದಗಳು  ಅಂತ ಉದ್ದುದ್ದ ಸಂಬೋಧನೆಯದೇ ಒಂದು ಮಜ. ಈಗಿನ ಫೇಸ್ಬುಕ್ಕಿನ @Arun: ಅನ್ನೋ ಶೈಲಿ ಆಗಲೂ ಇತ್ತು! ಸಂಬೋಧನೆಯಲ್ಲಿ ಎಲ್ಲರನ್ನೂ ಸೇರಿಸೋದು ಉದ್ದವಾದರೆ ಮನೆಯ ಮುಖ್ಯಸ್ಥರನ್ನ ಸಂಬೋಧಿಸೋದು. ಉಳಿದವರನ್ನ ಯಾರನ್ನೂ ಬಿಡದಂತೆ ಅತ್ತೆಗೆ: .. ಮಾವನಿಗೆ:  ಅಂತ ಪ್ರತ್ಯೇಕ ಪ್ಯಾರಾದಲ್ಲಿ ಎಚ್ಚರವಹಿಸಿ ಬರೆಯೋ ಶೈಲಿಯೂ ಇತ್ತು. 

ಪ್ರತ್ಯೇಕವಾಗಿ ಸಂಬೋಧಿಸದಿದ್ದರೂ ನಮ್ಮ ಮನೆಯ ಎಲ್ಲರ ಆರೋಗ್ಯ , ಆ ಕಡೆಯವರ ಕ್ಷೇಮ ವಿಚಾರಣೆ ನಡೆದ ಬಳಿಕ ನಮ್ಮಲ್ಲಿನ  ವಿಶೇಷಗಳ ಬಗ್ಗೆಯ ಕಥನ. ಇಲ್ಲಾ ಆ ಕಡೆಯ ಬಗ್ಗೆ ಪ್ರಶ್ನಾವಳಿ. ಕಥನದ ಕೊನೆಗೆ ಆ ಕಡೆಯವರ ಬಗೆಗಿನ ಪ್ರಶ್ನಾವಳಿ ಇದ್ದದ್ದೂ ಉಂಟು. ಎಷ್ಟೇ ಲೇಟಾದರೂ ನಮ್ಮ ಪತ್ರಕ್ಕೊಂದು ಪ್ರತಿ ಪತ್ರ ಗ್ಯಾರಂಟಿ ಇರುತ್ತಿತ್ತು. ಪ್ರಶ್ನೆ ಕೇಳಿಸಿಕೊಂಡವ ಸುಮ್ಮನಿರಲಾದೀತೇ ? 🙂 ಆದ ಹಬ್ಬಗಳ ತಡವಾದ ಶುಭಾಶಯ, ಮುಂಬರೋ ಹಬ್ಬಗಳ ಮುಂಚಿನ ಶುಭಾಶಯ ಪ್ರತೀ ಪತ್ರಗಳಲ್ಲೂ ಇದ್ದೇ ಇರುತ್ತಿತ್ತು. ಇವುಗಳ ಮಧ್ಯೆ ಸೃಜನಶೀಲತೆ ಅರಳುತ್ತಿದ್ದ ಪರಿಯೇ ಒಂದು ವಿಸ್ಮಯ. ನೀನು ಈ ಪತ್ರ ಓದುವ ಹೊತ್ತಿಗೆ ನಮ್ಮ ಮನೆಗೆ ಗಣಪತಿ ತಂದು ಅಲಂಕಾರ ಮಾಡುತ್ತಿರುತ್ತೇವೆ ಅಂತಲೋ, ಇದನ್ನು ಓದುವ ಹೊತ್ತಿಗೆ ಪುಟ್ಟಿಯ ಪರೀಕ್ಷೆಗಳೆಲ್ಲಾ ಮುಗಿದಿರುತ್ತವೆ ಅಂದುಕೊಳ್ಳುತ್ತೇನೆ. ಹೇಗಾದವಂತೆ ಪರೀಕ್ಷೆಗಳು ಅಂತಲೋ.. ಬರೆಯುತ್ತಿದ್ದ ಆಲೋಚನಾ ಪರಿ, ಇದ್ದ ಅಲ್ಪ ಜಾಗದಲ್ಲೇ ಚಿತ್ರಗಳು, ಬೇರೆ ಬಣ್ಣದ ಪೆನ್ನಲ್ಲೋ ಪೆನ್ಸಿಲ್ ಶೇಡಿನಲ್ಲೋ ಅಂದಗಾಣಿಸಿದ "ದೀಪಾವಳಿಯ ಹಾರ್ದಿಕ ಶುಭಾಶಯಗಳು" , "ಹುಟ್ಟಿದಬ್ಬದ ಹಾರ್ದಿಕ ಶುಭಾಶಯಗಳು".. ಇತ್ಯಾದಿ ಅವರೇ ಎದುರು ಬಂದು ಕೈಕುಲುಕಿದಂತೆಯೂ, ಹಾರೈಸಿದಂತೆಯೋ ಖುಷಿ ಕೊಡುತ್ತಿತ್ತು.  

ಈ ಪತ್ರಗಳಿಂದಲೇ ಹುಟ್ಟಿದ್ದು ಪೆನ್ ಫ್ರೆಂಡ್ಸ್ ಅನ್ನೋ ಕಾನ್ಸೆಪ್ಟು.ಯಾವ ರಕ್ತ ಸಂಬಂಧ ಇರದ, ಪ್ರತಿದಿನವೂ ಭೇಟಿಯಾಗದ, ಮುಖವನ್ನೂ ನೋಡಿರದೇ ಇದ್ದವರೂ ಈ ಪೆನ್ ಫ್ರೆಂಡ್ಸ್ ಆಗಿದ್ದಿದೆ! 

ಹೀಗೇ ಕಾರ್ಯಕ್ರಮದಲ್ಲಿ ಸಿಕ್ಕ ಸಮಾನ ಅಭಿರುಚಿಯ ಜನ ಪರಸ್ಪರ ವಿಳಾಸ ಇಸ್ಕೊಳ್ಳುತ್ತಿದ್ದರು. ಈಗ ಮೊಬೈಲ್ ನಂಬರ್ ಇಸ್ಕೊಂಡ ಹಾಗೆ.. ತಿಂಗಳಿಗೋ ಎರಡು ತಿಂಗಳಿಗೋ ಒಂದು ಪತ್ರ ವಿನಿಮಯ ಪರಸ್ಪರರ ಮಧ್ಯೆ. ಕ್ರಮೇಣ ಸ್ನೇಹ ಗಟ್ಟಿಯಾಗಿ ಅವರೂರಿಗೆ ಹೋದಾಗ ಅವರ ಮನೆಗೆ ಹೋಗದೇ ಇರಲಾಗದಷ್ಟು ಅನ್ಯೋನ್ಯತೆ ಬೆಳೆದದ್ದೂ ಇದೆ! ಮತ್ತೆ ಇದು ಹುಡುಗ-ಹುಡುಗಿ ಪ್ರೇಮಪತ್ರಗಳಲ್ಲ ಕಣ್ರಿ! ಮನು ಬಳಿಗಾರ್ ಸರ್ ಅವರು ಒಮ್ಮೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅವರಿಗೆ ಹೊರದೇಶದ ಪೆನ್ ಫ್ರೆಂಡ್ಸ್ ಗಳು ಇದ್ದರು ಮತ್ತು ಈಗಲೂ ಇದ್ದಾರೆ ಅನ್ನೋ ಮಾತನ್ನು ಕೇಳಿದ್ದೆ. 

 ಹೈಸ್ಕೂಲ್ ಕೊನೆಯ ದಿನಗಳ ವೇಳೆಗೆ ಪತ್ರ ಸಂಸ್ಕೃತಿ ಕಳೆಗುಂದುತ್ತಾ ಬಂದಿತ್ತು. ಆಗ ಪತ್ರ ಬರೆದರೆ ಬರುತ್ತಿದ್ದ ಪ್ರತಿ ಪತ್ರಗಳೂ ಕಮ್ಮಿಯಾಗುತ್ತಾ ಬಂತು. "ಪತ್ರ ಸಂಸ್ಕೃತಿಗೆ ಜೈ" ಅನ್ನೋ ಘೋಷವಾಕ್ಯ ಪ್ರತೀ ಪತ್ರದ ಕೊನೆಯಲ್ಲಿ ಕಾಯಂ ಆಯ್ತು. ಸಿಕ್ಕಾಗ ಕೇಳಿದರೆ, ನಮಗೆ ವಯಸ್ಸಾಯಿತು. ನಿನ್ನ ಪ್ರತೀ ಪತ್ರ ಓದಿದಾಗ ಖುಷಿ ಆಗುತ್ತೆ. ಆದ್ರೆ ಬರೆಯಲು ಆಗುತ್ತಿಲ್ಲ ಅನ್ನೋ ಉತ್ತರಗಳು ಸಿಗತೊಡಗಿದವು. ಈಗಾದರೆ ಪತ್ರ ಬರೆಯುವಷ್ಟು ಟೈಮಿಲ್ಲ, ತಾಳ್ಮೆ ಇಲ್ಲ ಅನ್ನೋ ಉತ್ತರಗಳೂ ಸಿಗುತ್ತಿದ್ದವೇನೋ.

ಆಮೇಲೇ ಕಾಲೇಜಿನ ಕೊನೆಯ ವರ್ಷದಲ್ಲಿ ಗೆಳೆಯನಿಂದ ಪರಿಚಯವಾಗಿದ್ದು ಮಿಂಚಂಚೆ(ಈ ಮೇಲು). ಅಮೇರಿಕದಲ್ಲಿದ್ದ ಅಣ್ಣಂದಿರಿಗೆ ೪೫ ರೂಪಾಯಿ ಪತ್ರ ಬರೆದು ೨೦ ದಿನ ಕಾಯೋದಕ್ಕಿಂತ ಈಮೇಲೇ ಮೇಲು ಅನಿಸತೊಡಗಿತು. ಕ್ಷಣದಲ್ಲೇ ರವಾನೆಯಾಗುತ್ತಿದ್ದ ಈಮೇಲಲ್ಲೂ ೨-೩ ಪ್ಯಾರಾ ಬರೆಯದೇ ಇರದಷ್ಟು ಅಭ್ಯಾಸವನ್ನು ಪತ್ರ ಸಂಸ್ಕೃತಿ ಉಳಿಸಿತ್ತು. ಈ ಮೇಲಾದರೇನು, ಹಳೆಯ ಆ ಮೇಲಾದರೇನು ಮಾಧ್ಯವ ಬೇರೆಯಾದರೇನಂತೆ, ಪತ್ರಗಳು ಪತ್ರಗಳೇ ಅಲ್ಲವೇ ಅನ್ನೋ ಭಾವ. ಹಳೆಯ ಪತ್ರಗಳಲ್ಲಿರುತ್ತಿದ್ದ ಭಾವ ಪ್ರಭಾವ ಈಮೇಲುಗಳಲ್ಲಿ ದಕ್ಕವುದಿಲ್ಲ, ಈಮೇಲುಗಳಲ್ಲಿ ಎಲ್ಲಾ ಮೇಲುಮೇಲಿನ ವ್ಯವಹಾರ ಎಂಬ ಸಂಗತಿ ಆಮೇಲೆ ತಿಳಿದಿದ್ದು ಬಿಡಿ. ಆ ವಿಷಯ ಮತ್ತೆ ಮಾತನಾಡೊಣ.

ಡಿಗ್ರಿಗೆ ಬರುವ ಹೊತ್ತಿಗೆ ಎಲ್ಲೆಲ್ಲೂ ಮೊಬೈಲ್ ರಿಂಗಣ. ಮೆಸೇಜ್ ಕ್ರೇಜು ಶುರುವಾಯ್ತು. ದಿನಕ್ಕೆ ನೂರು- ಇನ್ನೂರರಿಂದ ತಿಂಗಳಿಗೆ ೨೦೦೦ , ಅನಿಯಮಿತ ಎಸ್ಸೆಮ್ಮೆಸ್ಸು ಅನ್ನೋ ಹಲತರದ ಪ್ಲಾನುಗಳು ಯುವಜನರ ಮನ ಸೆಳೆಯುತ್ತಿದ್ದವು. ದಿನಕ್ಕೆ ನೂರು ಮೆಸೇಜುಗಳೂ ಸಾಕಾಗದೆ ಮೆಸೇಜಿಗೆ ಅಂತಲೇ ಎರಡು, ಮೂರು ಸಿಮ್ ಇಟ್ಟುಕೊಂಡವರು ಕಾಮನ್ ಆಗತೊಡಗಿದರು ! ಪತ್ರಗಳಲ್ಲಿ ವಿನಿಮಯವಾಗುತ್ತಿದ್ದ ಹಬ್ಬದ ಶುಭಾಶಯ ಮೆಸೇಜುಗಳಲ್ಲಿ , ಚಿತ್ರಸಂದೇಶ (ಪಿಕ್ಚರ್ ಮೆಸೇಜು)ಗಳ ರೂಪ ತಾಳಿತಾ ? ಗೊತ್ತಿಲ್ಲ 🙂 ಆದರೆ ನೂರಾರು ಜನರಿಗೆ ಹೋಗುತ್ತಿದ್ದ ಸಂದೇಶಗಳು ಪತ್ರಗಳಿಗಿಂತ ಕೊಂಚ ಬೇಗನೇ ಹೆಚ್ಚು ಪ್ರೀತಿ ,ವಿಶ್ವಾಸ ಹಂಚಿದವಾ ? ಹುಟ್ಟಿದಬ್ಬಕ್ಕೆ, ಹಬ್ಬಕ್ಕೆ ಯಾರಾದರೂ ಗೆಳೆಯ ಮೆಸೇಜ್ ಕಳಿಸಿಲ್ಲ ಅಂದರೆ ಅವನ ಮೇಲೆ ಅಸಾಧ್ಯ ಕೋಪ ತರಿಸುವಷ್ಟು, ಇನ್ನೆಂದೂ ಆತನಿಗೆ ಮೆಸೇಜೇ ಕಳಿಸದಷ್ಟೂ ಹುಚ್ಚಂತೂ ಹಚ್ಚಿದ್ದವು ಈ ಮೆಸೇಜುಗಳು 🙂 ಮೆಸೇಜುಗಳಲ್ಲೇ ಶುರುವಾದ ಚಾಟಿಂಗು. ಅದರಲ್ಲೇ ಶುರುವಾದ ಪ್ರೇಮ.. ಯಾವುದೇ ಕಾರ್ಯಕ್ರಮದಲ್ಲಿ ಸಿಕ್ಕಾಗ ಬದಲಾಯಿಸಿಕೊಂಡ ನಂಬರಿಗೆ ಕಳುಹಿಸಿದ ಫಾರ್ವರ್ಡ್ ಮೆಸೇಜಿನಿಂದ ಸ್ನೇಹ, ಯಾರಿಂದಲೂ ಸಿಕ್ಕ ಸೀನಿಯರ್ ಒಬ್ಬನ ಮೊಬೈಲ್ ನಂಬರಿನಿಂದ ಬೆಳೆದ ಪರಿಚಯ.. ಹೀಗೇ ಅನೇಕಾನೇಕ ಸ್ನೇಹ ಸಂಬಂಧಗಳು ಚುರುಕಾಗೇ ಚಿಗುರುತ್ತಿದ್ದವು ಈ ಮೆಸೇಜುಗಳಿಂದ. ಎಲ್ಲೋ ಮರೆಯಾದ ಸ್ನೇಹಿತನಿಗೆ ಕಳುಹಿಸಿದ ಮೆಸೇಜುಗಳು, ಕಾಲೇಜು ವಿದಾಯದ ದಿನ ಬರುತ್ತಿದ್ದ, ಕಳುಹಿಸುತ್ತಿದ್ದ ಮೆಸೇಜುಗಳು ಕರುಳು ಚುರುಕ್ ಅನಿಸುತ್ತಿದ್ದವು 🙁

ಹೇಳಲಾಗದ, ಧೈರ್ಯ ಸಾಕಾಗದ ಅದೆಷ್ಟೋ ಭಾವಗಳಿಗೆ ಸಾಕ್ಷಿಯಾದದ್ದು ಈ ಮೆಸೇಜ್ಗಳು. ಚೆನ್ನಾಗಿ ಕಿತ್ತಾಡಿಕೊಂಡ ಗೆಳೆಯನೆದುರು ಮುಖ ಕೊಟ್ಟು ಮಾತಾಡಲಾಗದಿದ್ದರೂ "ಸೋರಿ ಲೇ.. ಆಗಿದ್ದಾಗೋಯ್ತು. ಎಲ್ಲಾ ಮರೆತ್ಬಿಡೋಣ.. " ಅಂತ ರಾತ್ರೆ ಕಳಿಸಿದ ಒಂದು ಮೆಸೇಜು ಮತ್ತೆ ಅವರನ್ನ ಪ್ರಾಣ ಸ್ನೇಹಿತರನ್ನಾಗಿಸಿದ್ದಿದೆ. ಸಿಕ್ಕಾಪಟ್ಟೆ ಗಲಾಟೆ ಮಾಡಿಯೋ, ಬೇಜಾರು ಮಾಡ್ಕೊಂಡು ಹೋದ, ಕಾಲನ್ನು ರಿಸೀವ್ ಮಾಡದ ಗೆಳತಿಗೆ ದಿನಾ ಕಳುಹಿಸುತ್ತಿದ್ದ ಫಾರ್ವರ್ಡ್ ಮೆಸೇಜುಗಳು ಕೊನೆಗೊಂದಿನ ಅವಳ ಮನಸ್ಸು ತಿರುಗಿಸುವಲ್ಲಿ ಸಹಾಯಕವಾಗಿದ್ದೂ ಇದೆ. ಮೆಸೇಜುಗಳ ಸಮಕಾಲೀನವೇ ಆದರೂ ಈ ಮೇಲುಗಳು ಯಾಕೋ ಅಂದು ಅಷ್ಟು ಲೈಕಾಗುತ್ತಿರಲಿಲ್ಲ ಯುವಮನಗಳಿಗೆ. ಹದಿನೈದು ದಿನಕ್ಕೋ , ತಿಂಗಳಿಗೋ ಒಮ್ಮೆ ಬ್ರೌಸಿಂಗ್ ಸೆಂಟರ್ ಕಡೆ ಹೋದಾಗ ಮೈಲ್ ಚೆಕ್ ಮಾಡಿ ಬಂದದ್ದಕ್ಕೆಲ್ಲಾ ಉತ್ತರ ಕಳಿಸೋದು ಇಲ್ಲಾ ನೆಂಟರು, ಗೆಳೆಯರನ್ನೆಲ್ಲಾ ಒಂದು ಗ್ರೂಪ್ ಮಾಡಿ ಯಾವುದೋ ಇಷ್ಟವಾದ ಮೇಲ್ ಫಾರ್ವರ್ಡ್ ಮಾಡೋದು ಬಿಟ್ಟರೆ ಊಟ ತಿಂಡಿ ಆದರೂ ಬಿಟ್ಟೇನು, ಮೊಬೈಲ್ ಬಿಡಕ್ಕಾಗಲ್ಲ ಅನ್ನೋ ತರದ ಬೆಸುಗೆಯನ್ನೇನೂ  ಈ ಮೇಲು ಬೆಸೆದಿರಲಿಲ್ಲ. ಕೊನೆಗೆ ಕಾಲೇಜಲ್ಲೇ ಬ್ರೌಸಿಂಗ್ ಸೆಂಟರ್ಗಳು ಇದ್ದರೂ ಈಮೇಲುಗಳು ಮೊಬೈಲಿನ ಹಾಯ್ ಡೂಡ್ ಶೈಲಿಗೂ ಹೊಂದದೇ ಪತ್ರಗಳ ಶ್ರೀ, ಕ್ಷೇಮ ಶೈಲಿಗೂ ಹೊಂದದೇ  ತೀರಾ ಔಪಚಾರಿಕ ಸಂದೇಶಗಳಿಗಷ್ಟೇ ಸೀಮಿತವಾದವು.

ಈಗ ಮತ್ತೇಕೋ ಪರಿವರ್ತನೆಯ ಹಾದಿಯಂತೆ ಕಾಣುತ್ತಿದೆ. ಮೊಬೈಲ್ ಕಂಪನಿಗಳು ಒಂದೊಂದಾಗಿ ಫ್ರೀ ಮೆಸೇಜು ಅನ್ನೋ ಕಾನ್ಸೆಪ್ಟು ತೆಗೆಯುತ್ತಾ ಬರುತ್ತಿವೆ 🙁

ಸಂದೇಶ ಕಳುಹಿಸಬೇಕಾ, ಇಂತಿಷ್ಟು ದುಡ್ಡು ಕೊಡಿ ಅನ್ನೋಕೆ ಶುರು ಮಾಡಿವೆ. ಕಳುಹಿಸುತ್ತಿದ್ದ ಪಾರ್ವರ್ಡ್ ಮೆಸೇಜುಗಳ, ಸಂಭಾಷಣೆಯ ಖುಷಿ ಎಲ್ಲೋ ಅಪರೂಪಕ್ಕೋ, ಅನಿವಾರ್ಯಕ್ಕೋ ಮಾಡೋ ಕಾಲುಗಳಲ್ಲಿಲ್ಲ. ಮಾಧ್ಯಮಗಳು ಬದಲಾಗಬಹುದು. ಆದರೆ ಭಾವಪ್ರವಾಹವನ್ನು ಎಷ್ಟು ಸಮಯ ಅಂತ ತಡೆದಿಡೋಕೆ ಸಾಧ್ಯ. ಮುಂಚೆ ಬಂದ ಆರ್ಕುಟ್ಟಿನಲ್ಲಿ , ಈಗಿನ ಫೇಸ್ಬುಕ್ಕಿನ ಸಮುದ್ರದಲ್ಲಿ ನಾವೆಲ್ಲಾ ಮುಳುಗೋಗಿದ್ದೇವೆ. ಇಡೀ ದಿನಾ ಅಲ್ಲೇ ಇರುವ ಜನರ ಮಧ್ಯೆ ದಿನಕ್ಕೊಮ್ಮೆಯಾದರೂ ಅದನ್ನು ತೆಗೆಯದಿದ್ದರೆ ಏನೋ ಕಳೆದುಕೊಂಡಷ್ಟು ಹುಚ್ಚು ಹಬ್ಬಿಸಿದೆ ಅದೀಗ. ಮೆಸೇಜು, ಮೊಬೈಲೆಂದರೆ ಜೀವ ಅನ್ನುತ್ತಿದ್ದ ಯುವಜನತೆ ಈಗ ಕಂಪ್ಯೂಟರ್ ಫೇಸ್ಬುಕ್ ಮುಂದೆ ಕೂತರೆ ಬಂದಿರೋ ಮೆಸೇಜುಗಳಿಗೆ ಕ್ಯಾರೆ ಅನ್ನದಂತಾಗಿದೆ. ಫ್ರೀ ಮೆಸೇಜ್ ಕಸಿದ ಮೊಬೈಲ್ ಕಂಪೆನಿಗಳ ಮೇಲಿನ ಕೋಪವೆಂತೂ ಇದ್ದೇ ಇದೆ. ಮೆಸೇಜುಗಳಿಗೆ ಪರ್ಯಾಯವೆಂಬತೆ ಫೇಸ್ಬುಕ್ಕಲ್ಲೇ ಚಾಟಿಂಗು, ಹುಟ್ಟಿದಬ್ಬದ ಶುಭಾಶಯ, ಗೆದ್ದಿದ್ದಕ್ಕೆ,ಸೋತಿದ್ದಕ್ಕೂ ಕಂಗ್ರಾಟ್ಸಗಳ ವಿನಿಮಯವಾಗುತ್ತಿದೆ ! ಕೊನೆಗೂ ಕುಂಭಕರ್ಣನ ನಿದ್ರೆಯಿಂದ ಎಚ್ಚೆತ್ತ ಈ ಮೇಲ್ ಕಂಪೆನಿಗಳು ಮುಚ್ಚಿ ಹೋಗೋ ಭಯದಿಂದ ಮೆಸೆಂಜರ್ಗಳನ್ನ, ಚಾಟಿಂಗ್ ತಂತ್ರಾಂಶಗಳನ್ನ ಹೆಚ್ಚೆಚ್ಚು ಅಭಿವೃದ್ದಿಪಡಿಸಿ ಜನಪ್ರಿಯಗೊಳಿಸುತ್ತಿವೆ. ಫೇಸ್ಬುಕ್ಕಲ್ಲೇ ಪರಿಚಿತರಾದ ಸಮಾನ ಮನಸ್ಕರು ಗೆಳೆಯರಾಗಿ. ಗೆಳೆಯರ ಗೆಳೆಯರು ಪರಿಚಿತರಾಗಿ, ಜೂನಿಯರ್ ಸೀನಿಯರ್, ಲೆಕ್ಚರ್ಗಳೆಂಬ ಭಾವ ಕಾಲೇಜಲ್ಲೇ ಕೊನೆಯಾಗಿ ಫೇಸ್ಭುಕ್ ಸಮುದ್ರದಲ್ಲಿ ಒಂದೇ ದೋಣಿಯ ಪಯಣಿಗರಾಗಿ ಗೆಳೆಯರ, ಪರಿಚಿತರ ಬಳಗ ಬೆಳೆಯುತ್ತಿದೆ ! ಸ್ನೇಹದ ನಂಟುಗಳು ವೃದ್ದಿಸುತ್ತಿವೆ. ಮೊಬೈಲಿಗೂ ಕಾಲಿಟ್ಟಿರೂ ಇಂಟರ್ನೆಟ್ಟಿನಿಂದ ಸದ್ಯಕ್ಕಂತೂ ಈ ಫೇಸ್ಬುಕ್ ಗೆಳೆಯರ ಬಳಗಕ್ಕೆ ಸಾವಿಲ್ಲವೇನೋ ಅನಿಸುತ್ತಿದೆ.. 

ಕಾಲವನ್ನು ಅರಿತೋರು, ಹಿಡಿಯೋರು ಯಾರೂ ಇಲ್ಲ ಅನ್ನುತ್ತಾರೆ. ಆದರೆ ಈ ಕಾಲದ ಘಟ್ಟಗಳು ಕೆಲ ಸಮಯ ಪತ್ರಗಳಲ್ಲಿ  ಬಂಧಿಯಾಗಿದ್ದೆಂತೂ ಹಳೆಯ ಪತ್ರಗಳನ್ನೋದುವಾಗ ಮರುಕಳಿಸೋ ಭಾವಗಳಷ್ಟೇ ಸತ್ಯ. ಅಂಚೆ, ಮಿಂಚಂಚೆ, ಜಂಗಮ ಅಂಚೆ(ಮೊಬೈಲ್ ಮೆಸೇಜು), ಮುಖವಾಹಿನಿ ಅಂಚೆ(ಫೇಸ್ಬುಕ್ ಮೆಸೇಜ್) .. ಹೀಗೆ ಮಾಧ್ಯಮಗಳು ಬದಲಾದರೂ ಬದಲಾಗೋ ಕಾಲಕ್ಕೆ ಅನುಗುಣವಾಗಿ ಸ್ನೇಹ, ಸಂಬಂಧಗಳೂ ತಮ್ಮ ನಡುವಿನ ಸಂಪರ್ಕವಾಹಿನಿಯನ್ನು ಬದಲಾಯಿಸುತ್ತಿವೆ. ಕಾಲ ಹಳೆಯದಾದರೇನು, ಭಾವ ನವನವೀನ.. ಅನ್ನೋ ಹಾಡು ಮತ್ತಾಕೋ ನೆನಪಾಗುತ್ತಿದೆ.ನೀವು ಏನೇ ಅನ್ನಿ.ಈ ಮೇಲಿನ ಅಂಚೆಗಳ, ಸಂದೇಶಗಳ ಬೆಸುಗೆಯಿಲ್ಲದ ಯಾವ ಸಂಬಂಧಗಳನ್ನೂ ಕಲ್ಪಿಸಲಾಗುತ್ತಿಲ್ಲ….ಸಧ್ಯಕ್ಕಂತೂ  ನನಗೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Badarinath Palavalli
11 years ago

ಸಂಬಂಧ ಸಂದೇಶಗಳು ಅನವಾಯಿತಿಯಿಂದ ಇಂದಿನವರೆಗೂ ಹರೆಡುಬಂದ ರೀತಿಯನ್ನು ಚೆನ್ನಾಗಿ ಗುರ್ತಿಸಿದ್ದೀರಾ. ಬಹುಶಃ ಕಾಗದ ತುಂಡಲ್ಲಿ 143 ಅಂತ ಬರೆದು ಯಾವುದಕ್ಕೂ ಇರಲಿ ಎಂದು ಎಚ್ಚರಿಕೆಯಿಂದ ಹೆಸರು ಮಾತ್ರ ಬರೆಯದೆ ಆಕೆ ನಡೆದು ಬರುವ ಹಾರಿಯಲ್ಲಿ ಬೀಳಿಸಿ ಮರೆಯಿಂದ ಆಕೆಯ ಮುಖಚರಿಯನ್ನು ನೋಡುವ ಪುಳಕ ಬಹುಶಃ ಇಂದಿನ ಎಸ್.ಎಂ.ಎಸ್ ಯುಗದಲ್ಲಿ ಇಲ್ಲವೇನೋ?

ಮುಂದೆ ತಾವು ತಮ್ಮ ಲೇಖನಗಳ ಸಂಕಲನ ಹೊರತಂದಾಗ ಇದನ್ನೇ ಮೊದಲ ಲೇಖನವಾಗಿ ಇರಿಸಿಕೊಳ್ಳಿ.

sharada moleyar
sharada moleyar
11 years ago

chennagide
sambanda preetiyannu hanchikolluva reeti sagida dari

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಮನಸ್ಸು ಹಿಂದೆ ಓಡಿತು. ಪತ್ರ ಬರೆಯುತ್ತಿದ್ದಾಗ ಸಿಗುತ್ತಿದ್ದ ಆನಂದ, ಮೆಸೇಜ್ ಮಾಡುವಾಗ ಸಿಗುವುದಿಲ್ಲ. ಆವಾಗ ವಾರಗಟ್ಟಲೆ ಉತ್ತರಕ್ಕಾಗಿ ಕಾಯುವುದರಲ್ಲೂ ಮಜಾ ಇತ್ತು. ಒಂದು ವರ್ಷ ನೂರು ಪತ್ರ ಬರೆದು, ಯಾರಿಗೆಲ್ಲಾ ಯಾವಾಗ ಪತ್ರ ಬರೆದೆ ಅನ್ನುವ "ರೆಕಾರ್ಡ್" ಸಹ ಇತ್ತು.
ನಿಮ್ಮ ಲೇಖನ ಹಳೆ ನೆನಪುಗಳನ್ನು ಪುನಹ ಕೆದಕಿತು. ಲೇಖನ ಚೆನ್ನಾಗಿದೆ.

3
0
Would love your thoughts, please comment.x
()
x