ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಹೆಲ್ಪರ್ ಆಗಿದ್ದ ಇಪ್ಪತ್ತರ ವಯಸ್ಸಿನ ಸ್ವಾಮಿ ತನ್ನ ತಾತ ನಿಂಗಣ್ಣನ ಸಾವಿನ ಸುದ್ದಿ ತಿಳಿದು ಊರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ ಮೂರು ಘಂಟೆಯಾಗಿತ್ತು.
ನೆತ್ತಿಯ ಮೇಲೆ ಕಾರ್ಮೋಡಗಳು ಕವಿಯುತ್ತಿದ್ದವು. ಮೂರು ಮಂದಿ ತುರಾತುರಿಯಲ್ಲಿ ನಿಂಗಣ್ಣನನ್ನು ಎತ್ತಿ ತಂದು ಬಿಳಿಪಲ್ಲಕ್ಕಿಯ ಒಳಗೆ ಕೂರಿಸಿದರು. ಅತ್ತಿತ್ತ ವಾಲಾಡುತ್ತಿದ್ದ ಕುತ್ತಿಗೆಗೆ ಮೆಟರೆಕಡ್ಡಿ ಕೊಟ್ಟು ಸರಿ ಮಾಡಿದರು.
ಸ್ವಾಮಿ ಒಮ್ಮೆ ಕೆಳಗೆ ಬಾಗಿ ತಾತನನ್ನು ಕಣ್ತುಂಬಿಕೊಂಡ.
ತಾತನ ಒಟ್ಟು ಆಕಾರದಲ್ಲಿ ಏನೋ ಒಂದು ಕೊರತೆಯಿದೆ ಅನ್ನಿಸಿತು .
ಯೆಸ್.
ತಾತನ ಕಪ್ಪು ಫ್ರೇಮಿನ ಕನ್ನಡಕ ಮಿಸ್ಸಾಗಿದೆ.
ಇದು ಯಾರ ಗಮನಕ್ಕೂ ಬರಲಿಲ್ಲವೇ.. ಛೇ.. ಎನ್ನುತ್ತಾ ಮನೆಯೊಳಕ್ಕೆ ಓಡಿದ.
ತಾತನ ಮಂಚದ ಮೇಲೆ ಕನ್ನಡಕ ಅನಾಥವಾಗಿ ಬಿದ್ದಿತ್ತು.
ತನ್ನೊಡೆಯನನ್ನು ಕಳೆದುಕೊಂಡು ರೋದಿಸುತ್ತಿರುವಂತೆ ಕಾಣಿಸುತ್ತಿತ್ತು.
ಕನ್ನಡಕವನ್ನು ಕಣ್ಣಿಗೆ ಹಾಕಿಕೊಂಡು ಒಮ್ಮೆ ಕನ್ನಡಿಯಲ್ಲಿ ನೋಡಿದ.
ಸ್ವಾಮಿ ಸಣ್ಣವನಿದ್ದಾಗ ಹೀಗೆ ಹಲವು ಬಾರಿ ಮಾಡಿದ್ದುಂಟು.
ತಾತನ ದಪ್ಪಗಾಜಿನ ಕನ್ನಡಕ ಹಾಕಿಕೊಂಡು ಕನ್ನಡಿಯಲ್ಲಿ ನೋಡಿ ಬೀಗುವುದರಲ್ಲಿ ಏನೋ ಒಂದು ಸುಖ!
ಅದೊಂದು ಅವರ್ಣನೀಯ ಆನಂದ .
ಆವಾಗಲೆಲ್ಲ ಕನ್ನಡ ಹಾಕಿಕೊಂಡ ಒಂದೆರಡು ನಿಮಿಷಗಳಲ್ಲೇ ಕಣ್ಣುರಿ ಬಂದು ಕಣ್ಣು ಮಂಜಾಗಿ ನೀರು ತುಂಬಿಕೊಳ್ಳುತ್ತಿತ್ತು.
ಈಗಲೂ ಸ್ವಾಮಿಯ ಕಣ್ಣಾಲಿಗಳು ತುಂಬಿ ಬಂದಿದ್ದವು;
ಆದರಿದು ಎದೆಯಾಳದಿಂದ ಹೊಮ್ಮಿದ ನೋವಿನ ಕಣ್ಣೀರಾಗಿತ್ತು.
ವಾಲಗದ ಸದ್ದು ಕೇಳಿ ಬಿರಬಿರನೆ ಆಚೆಗೆ ಬಂದ .
ತಾತನಿಗೆ ಕನ್ನಡಕ ಹಾಕಿದ ನಂತರ ರೂಪಿನಲ್ಲಿ ಪರಿಪೂರ್ಣತೆ ಕಂಡು ತುಸು ಸಮಾಧಾನವಾಯಿತು.
ಕಣ್ಣೊರೆಸಿಕೊಂಡು ಪಲ್ಲಕ್ಕಿಗೆ ಹೆಗಲು ಕೊಟ್ಟ .
ಒಂದಿಷ್ಟು ದೂರ ಮುಂದೆ ಸಾಗಿ ಬಸಪ್ಪನಗುಡಿಯ ಎದುರು ಪಲ್ಲಕ್ಕಿಯನ್ನು ಇಳಿಸಿ ಕಾಯಿ ಹೊಡೆದು ಯಥಾಪ್ರಕಾರ ಪಲ್ಲಕ್ಕಿ ಹೊತ್ತು ಮುಂದಕ್ಕೆ ಹೊರಟರು.
ಸ್ವಾಮಿ ಒಮ್ಮೆ ಎಡಕ್ಕೆ ತಿರುಗಿ ನೋಡಿದ .
ಅರೆ!
ಮನೆ ಎದುರು ಪಲ್ಲಕ್ಕಿ ಎತ್ತುವಾಗ ಹೆಗಲು ಕೊಟ್ಟಿದ್ದವನೇ ಬೇರೆ ,
ಆದರೀಗ ರಾಮಣ್ಣ ಹೆಗಲು ಕೊಟ್ಟು ನಡೆಯುತ್ತಿದ್ದಾನೆ!
ರಾಮಣ್ಣನನ್ನು ಐದು ವರ್ಷಗಳ ನಂತರ ಇದೇ ಮೊದಲ ಬಾರಿ ನೋಡುತ್ತಿರುವುದು.
*****
ಐದು ವರ್ಷಗಳ ಹಿಂದೆ ಒಂದು ದಿನ ತಾತ ನಿಂಗಣ್ಣ ಹುಷಾರು ತಪ್ಪಿ ಮಲಗಿದ್ದಾಗ ರಾಮಣ್ಣ ನೋಡಲು ಬಂದಿದ್ದ.
ಆವತ್ತು ಒಳಮನೆಯೊಳಗೆ ತಿಂಡಿ ತಿನ್ನುತ್ತಾ ಕುಳಿತಿದ್ದ ಸ್ವಾಮಿಗೆ ಅಜ್ಜಿ ಪಿಸುದನಿಯಲ್ಲಿ ಹೇಳಿದಳು.
''ನಿಮ್ ಚಿಕ್ಕಪ್ನೋರು ಅಪ್ಪನ ಯೇಕ್ಸಮ ಇಚಾರ್ಸಕೆ ಬಂದವ್ರೆ ನೋಡು ಕೂಸು''
''ಯಾರಜ್ಜಿ ?''
''ಆಚ ನಿಮ್ ತಾತಯ್ಯನ ಮಂಚದ ಕೆಳಗೆ ಕೂತವ್ನಲ್ಲ ಅವನ್ನ ಯಾರಾ ಅಂದ್ಕಂಡಿದ್ದೈ, ಅಂವ ನಿಮ್ ತಾತನ ಮಿಂಡ್ಗಾತಿ ಮಗ, ನಿಮ್ ತಾತನಿಗ್ ಹುಟ್ದಂವ''
ಪಕ್ಕದಲ್ಲಿ ತಿಂಡಿ ತಿನ್ನುತ್ತಾ ಕುಳಿತಿದ್ದ ಸ್ವಾಮಿಯ ಚಿಕ್ಕಪ್ಪ ,
''ಥೂ ಬಾಯ್ಮುಚ್ಚವ್ವ, ಮಸಾಣ್ಕ್ ಹೋಗೋ ವಯ್ಸಾಗಿದ್ರೂ ಇನ್ನೂ ಬುದ್ಧಿ ಬರ್ಲಿಲ್ಲ ನಿನ್ಗ''
ಎಂದು ಗದರಿದ.
ಕುಪಿತಳಾದ ಸುಬ್ಬವ್ವ,''ನಾ ಯಾಕ್ ಬಾಯ್ಮುಚ್ಲಿ.. ನಿಮ್ಮಪ್ಪ ದೊಡ್ ಘನಂದಾರಿ ಕೆಲ್ಸ ಮಾಡವ್ನೆ ನೋಡು.. ಅದಕ್ ಬಾಯ್ಮುಲ್ಯಾ?''
ಮಗನನ್ನು ತಡವಿಕೊಂಡಳು.
ಚಿಕ್ಕಪ್ಪ ಹಣೆಚಚ್ಚಿಕೊಂಡು ಎದ್ದು ಹೋದ.
ಸುಬ್ಬವ್ವ ಮೊಮ್ಮಗನೊಂದಿಗೆ ಮಾತು ಮುಂದುವರೆಸಿದಳು.
'' ಮ್ಯಾಗಲ್ಕೇರಿ ಚೆನ್ನಿ ಲೌಡಿ ಕಟ್ಗಂಡು ವಾಲಾಡ್ತಿದ್ದಕಪ್ಪ ನಿಮ್ ತಾತಯ್ಯ..ಅವಳ ಆಟು ನೆಲಕ್ ಬೀಳದೇ ತಡ ನೆಕ್ಕತ್ತಿದ್ದ .. (ರಾಮಣ್ಣನ ಕಡೆಗೆ ತಿರುಗಿ )ಮುಂಡೆತ್ತದ್ರ ಮೂಗ್ ನೋಡು ನಿಮ್ ಕರಿ ತಾತನ ಅಚ್ಚು''
ಎಂದಳು ವ್ಯಂಗ್ಯದ ದನಿಯಲ್ಲಿ .
ಸ್ವಾಮಿ ಕುತೂಹಲದಿಂದ ಹೊರಗೆ ಇಣುಕಿ ರಾಮಣ್ಣ ತನ್ನ ತಾತನನ್ನು ಹೋಲುವುದನ್ನು ಖಾತ್ರಿಪಡಿಸಿಕೊಂಡ.
ಮರುಕ್ಷಣವೇ ಕೇಳಿದ,
''ಯಾಕಜ್ಜಿ ನಮ್ ತಾತನ್ನ ಮಾತ್ ಮಾತ್ಗೂ ಕರಿಯ ಅಂದೈ?''
''ಇನ್ನೇನ್ ಪಳಾರಂತ ಹೊಳ್ದನಾ ನಿಮ್ ತಾತ..ಅದೆಷ್ಟ್ ರಂಡೇರ್ನ ಕೇದಿದ್ದಾನೋ ನಿಮ್ ಕರಿತಾತ..ಆಗ ಆರ್ಕಾಸು ಮೂರ್ಕಾಸ್ಗೆಲ್ಲಾ ಸೆರಗ್ಹಾಸ್ತಿದ್ರು ಲೌಡೀರು ''
ಅಜ್ಜಿಯ ಫಿಲ್ಟರ್'ಲೆಸ್ ಮಾತುಗಳು ಸ್ವಾಮಿಯನ್ನೇನೂ ಕಸಿವಿಸಿಗೊಳಿಸಲಿಲ್ಲ.
ಇದು ಅವನಿಗೆ ಹೊಸದೇನಲ್ಲ.
ಸುಬ್ಬವ್ವ ಬೀಡಿ ಎಳೆಯುತ್ತಾ ಶುರು ಹಚ್ಚಿಕೊಂಡಳು.
''ಈ ಮುಂಡೆತ್ತದು ಹುಟ್ದಾಗ ನಿಮ್ ತಾತ ಅವಳ ಅಟ್ಟೀಲಿ ಇವನ ತೊಟ್ಲು ತೂಗ್ತಾ ಕೂತಿರ್ತಿದ್ದ ''
'' ಸಂತಯಿಂದ ಎರಡು ಪೊಟ್ಣ ಮಿಠಾಯ್ ತಂದ್ರೆ, ನನ್ನ ನಾಕ್ ಜನ ಮಕ್ಕಳಿಗೆ ಒಂದಾದ್ರೆ , ಇವನೊಬ್ಬನ್ಗೇ ಇನ್ನೊಂದು ''
ಮತ್ತೆ ಒಳಗೆ ಬಂದ ಚಿಕ್ಕಪ್ಪ,
''ಮುಚ್ಚವ್ವ ಸಾಕು, ಹುಟ್ಟಿಸ್ದಂವ ಅನ್ನೋ ಕಿಚ್ಚು ಅವನ್ಗೂ ಇರುತ್ತೆ , ಒಂದ್ ಘಳಿಗೆ ಕೂತಿದ್ದು ಹೋಗ್ಲಿ''
ಅಂದ.
''ಈಗ ನಾನೇನು ಅವನ ಎದ ಮ್ಯಾಲ್ ನಿಂತ್ಕಂಡು ತುಳುದ್ನಾ?'
ಅಂದಳು ಸುಬ್ಬವ್ವ.
''ಅಂವ ಯಾವತ್ತೂ ನಮ್ ತಂಟೆಗ್ ಬಂದವ್ನಲ್ಲ. ಅಷ್ಟಕ್ಕೂ ಅಂವ ಪಾಲ್ ಕೇಳಿದ್ರ ನಾವ್ ಕೊಡ್ಲೇಬೇಕಾಯ್ತಿತ್ತು .. ಕೇಳ್ಲಿಲ್ಲ, ದೇವ್ರಂತ ಮನ್ಸ''
''ನಿನ್ಗ ಮೂರೆಕ್ರ ಜಾಸ್ತಿ ಬಂದದಲ್ಲ ಅದ್ನೇ ಬರದ್ಬುಡಯ್ಯ , ಎಷ್ಟೇ ಆದ್ರೂ ನಿಮ್ಮಣ್ಣಯ್ನಲ್ವಾ''
ಎಂದ್ಲು ಸುಬ್ಬವ್ವ ವ್ಯಂಗ್ಯ ಬೆರೆತ ದನಿಯಲ್ಲಿ.
ಇದರಿಂದ ಕೆರಳಿದ ಚಿಕ್ಕಪ್ಪ,
''ಸಣ್ ಬುದ್ಧಿ ಎಲ್ ಬುಟ್ಟೈ ನೀನು ''
ಎಂದ.
ಸುಬ್ಬವ್ವಳಿಗೆ ಅದೆಲ್ಲಿತ್ತೋ ಕೋಪ!
''ಹೆಡ್ತಿ ಕೈ ಕೆಳ್ಗ್ ಬಿದ್ದಿರೋ ದಾಸ ನೀನು, ನನಗ್ ಬುದ್ಧಿ ಹೇಳ್ಬೇಡ ಹೋಗುಡ'' ಎಂದುಬಿಟ್ಟಳು.
ತಾನು ಇಲ್ಲೇ ಕೂತಿದ್ದರೆ ಇನ್ನೂ ಏನೇನು ಕೇಳಬೇಕಾತ್ತೋ ಎಂದುಕೊಂಡು ಸ್ವಾಮಿ ಮೆಲ್ಲಗೆ ಬೀದಿಯ ಕಡೆಗೆ ಕಾಲು ಕಿತ್ತ.
*****
ಆವತ್ತೇ ಕೊನೆ .
ಐದು ವರ್ಷಗಳ ನಂತರ ರಾಮಣ್ಣನನ್ನು ಇವತ್ತೇ ನೋಡುತ್ತಿರುವುದು.
ಮೂರು ವರ್ಷಗಳ ಹಿಂದೆ ಅವ್ವ ಸತ್ತ ಮೇಲೆ ಸಂಸಾರ ಸಮೇತ ಊರು ಬಿಟ್ಟು ಊಟಿ ಕಡೆಯ ಯಾವುದೋ ತೋಟಕ್ಕೆ ಸೇರಿಕೊಂಡಿದ್ದ.
ಆಮೇಲೆ ಒಂದೋ ಎರಡೋ ಬಾರಿ ಊರಿಗೆ ಬಂದಿದ್ದನಂತೆ.
ಇವತ್ತು ತಾತ ಸತ್ತ ದಿನವೇ ಬಂದಿದ್ದಾನೆ.
ಇದು ಕಾಕತಾಳೀಯವಾ?
ತಾತ ನಿಂಗಣ್ಣನ ರಕ್ತ ಅವನನ್ನು ಎಳೆದು ತಂದಿತಾ?
ಸ್ವಾಮಿಗೆ ಒಂದೂ ತಿಳಿಯಲಿಲ್ಲ.
ನಿಂಗಣ್ಣನ ಹಿರೀ ಮಗನಾದ ಸ್ವಾಮಿಯ ಅಪ್ಪ ಪಲ್ಲಕ್ಕಿಯ ಮುಂದೆ ಕಳಸ ಹಿಡಿದು ನಡೆಯುತ್ತಿದ್ದ .
ರಾಮಣ್ಣನ ಚೂಪು ಮೂಗು, ಬಟ್ಟಲುಗಣ್ಣುಗಳು, ಮೊರದಗಲ ಕಿವಿಗಳು ಥೇಟು ತನ್ನ ಅಪ್ಪನನ್ನೇ
ಹೋಲುತ್ತಿದ್ದುದನ್ನು ನೋಡಿ ಸ್ವಾಮಿ ಬೆರಗಾದ.
ರಾಮಣ್ಣ ಇದ್ದಬದ್ದ ನೋವನ್ನೆಲ್ಲ ಕಣ್ಣೊಳಗೆ ಕ್ರೋಢೀಕರಿಸಿಕೊಂಡು ಮೂಕನಂತೆ ನಡೆಯುತ್ತಿದ್ದ.
ಅವನ ಎದೆಯೊಳಗೆ ಅದೆಂಥ ಬಿರುಗಾಳಿಯೆದ್ದಿದೆಯೋ, ಪಾಪ ಅನ್ನಿಸಿತು .
*****
ನಿಂಗಣ್ಣ ಊರಿಗೆ ಯಜಮಾನನಾಗಿದ್ದಂತಹವನು.
ಆಳುಗಳನ್ನು ಬೆರಳಲ್ಲಿ ಕುಣಿಸುತ್ತಾ ನಲವತ್ತು ಎಕರೆಯ ಬೇಸಾಯವನ್ನು ಒಬ್ಬನೇ ಜಮಾಯಿಸಿದಂತವನು.
ಅವನು ಶೋಕಿಗೆ ಸಾಕಿದ್ದ ಜೋಡಿ ಕುದುರೆಗಳಿಗೆ ಸುತ್ತಲಿನ ಊರುಗಳಲ್ಲಿ ಬೆಲೆಕಟ್ಟುವವರಿರಲಿಲ್ಲ.
ಜಾತಿ ಭೇದ ಮಾಡದೇ ಊರಿನ ಬಡಬಗ್ಗರಿಗೆಲ್ಲ ಅನ್ನ ಬಟ್ಟೆಗೆ ಆಸರೆಯಾಗಿದ್ದ ಕರುಣಾಮಯಿ.
ಇಂತಿಪ್ಪ ನಿಂಗಣ್ಣನಿಗೆ ವಯಸ್ಸಾಗಿ ನಾಲ್ವರು ಮಕ್ಕಳಿಗೆ ಪಾಲು ಕೊಟ್ಟ ನಂತರ ಹಳೆಯ ವೈಭವ ಕಣ್ಮರೆಯಾಯಿತು.
ಒಬ್ಬನನ್ನು ಜೂಜು ಕೆಡಿಸಿತು.
ಇಬ್ಬರನ್ನು ಜೂಜಿನ ಜೊತೆ ಕುಡಿತ ಸೇರಿಕೊಂಡು ಹಳ್ಳ ಹಿಡಿಸಿತು.
ಇನ್ನೊಬ್ಬ ಹೇಗೋ ಸುಮಾರಾಗಿ ಬಡಿದಾಡುತ್ತಿದ್ದ , ಆದರೂ ಅವನಿಗೇನೂ ಕೈ ಹತ್ತುತ್ತಿರಲಿಲ್ಲ.
ಕೊನೆಯ ದಿನಗಳಲ್ಲಿ ನಿಂಗಣ್ಣನಿಗೆ ಕಣ್ಣು ಕಾಣದಾಯಿತು. ಹೀಗೇ ಒಂದು ದಿನ ಪಡಸಾಲೆಯ ಮೇಲೆ ಗುಬ್ಬಚ್ಚಿಯಂತೆ ಮುದುರಿ ಕುಳಿತಿದ್ದ. ಒಂದು ಕಾಲದಲ್ಲಿ ನಿಂಗಣ್ಣನ ನಂಬಿಕಸ್ಥ ಆಳಾಗಿದ್ದ ಹೊಲಗೇರಿಯ ಗುಜ್ಜ ಮೆಟ್ಟಿಲುಗಳ ಮೇಲೆ ಕುಳಿತಿದ್ದ .
ಆಗ ಎದುರಿಗೆ ಬಂದ ಹಿರೀ ಮಗನನ್ನು ನಿಂಗಣ್ಣ ಒಂದು ಬೀಡಿ ಕೇಳಿದ.
ಕುಡಿದು ಚಿತ್ತಾಗಿದ್ದ ಸ್ವಾಮಿಯ ಅಪ್ಪ ಸಿಡಿಮಿಡಿಗೊಳ್ಳುತ್ತಾ,
''ಬೀಡಿ ಬೀಡಿ ಅಂತ ಸಾಯ್ತನ ಬಡ್ಡೈದ, ಇವನಿಗೆ ಯಾವತ್ ಸಾವ್ ಬತ್ತದೋ''
ಎನ್ನುತ್ತಾ ಬೀಡಿ ಕಟ್ಟನ್ನೇ ಎಸೆದು ಹೊರಟು ಹೋದ.
ಇದನ್ನು ನೋಡಿದ ಗುಜ್ಜ ಅಳು ತಡೆಯಲಾಗದೇ ,
''ಅಯ್ಯೋ ನನ್ ಧಣಿ!…ರಾಜ್ನಂಗ್ ಬಾಳ್ದವ್ನಿಗೆ ಯಾಕಪ್ಪಾ ಇಂಥಾ ದುರ್ಗತಿ ಬಂತು ..
ನೀನು ಕಾಲಲ್ ತೋರ್ಸಿದ್ನ, ನಾವ್ ಕೈಲ್ ಮಾಡ್ಕಂಡ್ ಹೋಗ್ತಿದ್ವಲ್ಲ ನನ್ನೊಡೆಯ, ಆಪಾಟಿ ಊರ್ನೇ ನಡುಗುಸ್ತಿದ್ಯಲ್ಲ ನನ್ನೊಡೆಯಾ..
ನೂರಾರ್ ಜನಕ್ಕ ಹಿಟ್ಟು-ಬಟ್ಟ ಹಾಕ್ದ್ಯಲ್ಲ ನನ್ ಧಣೀ..ನಿನಗ್ಯಾಕಪ್ಪ ಈ ದುರ್ಗತಿ ಬಂತು'' ಎಂದು ಶೋಕಿಸತೊಡಗಿದ.
ಹೊಲಗೇರಿಯ ಗುಜ್ಜನ ಮಾತುಗಳನ್ನು ಕೇಳಿ ನಿಂಗಣ್ಣನ ಕಣ್ಣುಗಳು ಒದ್ದೆಯಾದವು. ನಿಂಗಣ್ಣನ ಕಣ್ಣಿಗೆ ಗುಜ್ಜ ಒಬ್ಬ ಆಳಿನಂತೆ ಕಾಣಲಿಲ್ಲ. ಮಾತೃಹೃದಯದ ತಮ್ಮನಂತೆ ಕಂಡ .
ಎಂದೂ ಮುಟ್ಟದ ಗುಜ್ಜನ ಕೈ ಹಿಡಿದು ಶೋಕಿಸತೊಡಗಿದ.
ಆ ಸ್ಪರ್ಶದಲ್ಲಿ ಏನಿತ್ತೋ , ನಿಂಗಣ್ಣನ ಮುಖದಲ್ಲಿ ಒಂದು ಬಗೆಯ ನೆಮ್ಮದಿ ಆವರಿಸಿತು.
ಇದನ್ನೆಲ್ಲ ನೋಡುತ್ತಾ ಕುಳಿತಿದ್ದ ಸ್ವಾಮಿಗೆ ಆ ದೇವರು ತನ್ನ ತಾತನನ್ನು ಬೇಗ ಕರೆದುಕೊಳ್ಳಬಾರದೇ ಎನ್ನಿಸಿಬಿಟ್ಟಿತು.
*****
ಇತ್ತ ವಾಲಗದವರು,'' ಈ ದೇಹದಿಂದ ದೂರವಾದೆ ಏಕೆ ಆತ್ಮನೇ ಈ ಸಾವು ನ್ಯಾವು ನ್ಯಾಯವೇ''
ಎಂದು ಮನಮಿಡಿಯುವಂತೆ ನುಡಿಸುತ್ತಿದ್ದರು .
ಇದನ್ನು ಕೇಳಿ ಜವರಾಯನೇ ಕರಗುತ್ತಿದ್ದಾನೇನೋ ಎಂಬಂತೆ ತುಂತುರು ಹನಿಗಳು ಬೀಳತೊಡಗಿದವು.
ತುಂತುರು ಹನಿಗಳ ನಡುವೆ ಎರಚಲಾಗುತ್ತಿದ್ದ ಚಿಲ್ಲರೆ ಕಾಸುಗಳನ್ನು ಹೈಕಳು ಮೆಲ್ಲಗೆ ಸಾವಧಾನದಿಂದ ಶಿಸ್ತಿನಿಂದ ಆರಿಸಿಕೊಳ್ಳುತ್ತಿದ್ದವು.
ಹಬ್ಬಗಳಲ್ಲಿ ಈಡುಗಾಯಿ ಹೊಡೆವಾಗ ತೋರುವ ಅವಸರಕ್ಕೂ , ಈಗ ಅವರು ನಡೆದುಕೊಳ್ಳುತ್ತಿರುವುಕ್ಕೂ ವ್ಯತ್ಯಾಸ ಕಾಣುತ್ತಿತ್ತು .
ಇನ್ನೊಂದು ಬದಿಯಿಂದ ಎರಚುತ್ತಿದ್ದ ಪುರಿಯ ಕಾಳುಗಳು ಪಲ್ಲಕ್ಕಿಯ ಮೇಲಿನ ಕಳಸಕ್ಕೆ ಬಡಿದು ಟಣ್ ಟಣ್ ಸದ್ದು ಮಾಡುತ್ತಾ ಸ್ವಾಮಿಯ ತಲೆ ಮೇಲೆ ಉದುರುತ್ತಿದ್ದವು.
*****
ತನ್ನ ಬಲತೋಳಿನ ಸನಿಹದಲ್ಲಿ ನಡೆದು ಬರುತ್ತಿದ್ದ ಸಾಬರ ಸಿರಾಜನನ್ನು ಸ್ವಾಮಿ ಕೇಳಿದ,
'' ಸಿರಾಜ ಗ್ಯಾಪ್ನ ಇದ್ದದುಡ ಆವತ್ತು ನನ್ಗ ಕಚ್ಬುಟ್ಟಿದ್ಯಲ್ಲ ಆಗ ನಮ್ ತಾತ ಸ್ಕೂಲಗ್ ಬಂದು…….''
''ಒಹೋಹೋ ಸಾಕು ನಿಲ್ಸು ಗುರು ಅದನ್ಯಾಕ್ ಗ್ಯಾಪಿಸ್ತೀಯಾ… ಆಗ ಚೆಡ್ಡಿಗ ಉಚ್ಚೆ ಹುಯ್ಕಬುಟ್ಟಿದ್ದಿ ನಾನು !''
ಎಂದು ನಕ್ಕ ಸಿರಾಜ.
ಸ್ವಾಮಿಯ ಮೊಗದಲ್ಲಿ ನಗು ಅರಳಿತು.
ಕಣ್ಣುಗಳಲ್ಲಿ ತೊಟ್ಟು ನೀರೂ ಇಣುಕಿತು.
*****
ಇತ್ತ ಮಳೆ ಬಿರುಸಾಗುತ್ತಿದ್ದಂತೆ
ಪಲ್ಲಕ್ಕಿ ಹೊತ್ತವರ ನಡಿಗೆಯೂ ಬಿರುಸಾಯಿತು.
ಊರಾಚೆಗಿನ ಮಾಳದಲ್ಲಿ ಸ್ವತಃ ನಿಂಗಣ್ಣನ ಅಪ್ಪನೇ ನೆಟ್ಟು ಬೆಳೆಸಿದ್ದ ಮರಗಳ ತೋಪಿಗೆ ನಿಂಗಣ್ಣನನ್ನು ತರಲಾಯಿತು.
ಅಪ್ಪನ ಸಮಾಧಿಯ ಪಕ್ಕದಲ್ಲೇ ನಿಂಗಣ್ಣನ ಸಮಾಧಿಯನ್ನೂ ತೆಗೆಯಲಾಗಿತ್ತು.
ನಿಂಗಣ್ಣನನ್ನು ಸಮಾಧಿಯೊಳಗೆ ಕೂರಿಸಿ ಪೂಜೆ ಪುನಸ್ಕಾರಗಳನ್ನೆಲ್ಲ ನೆರವೇರಿಸಿ ನಂತರ ಮಣ್ಣೆಳೆಯುವಾಗ ಸ್ವಾಮಿ ಆ ಕಪ್ಪು ಫ್ರೇಮಿನ ಕನ್ನಡಕವನ್ನು ಕಳೆದು ಜೇಬಿಗೆ ಹಾಕಿಕೊಂಡ.
ಅಪ್ಪ -ಚಿಕ್ಕಪ್ಪಂದಿರೆಲ್ಲರೂ ಪುಟ್ಟ ಮಕ್ಕಳಂತೆ ಬಿಕ್ಕಳಿಸಿ ಅಳುತ್ತಿದ್ದರು. ಅವರೀಗ ಮನುಷ್ಯರಂತೆ ಕಾಣುತ್ತಿದ್ದರು.
ಇದನ್ನು ನೋಡಿ ಕರುಳು ಹಿಂಡಿದಂತಾಗಿ ಸ್ವಾಮಿಯೂ ರೋದಿಸಲಾರಂಬಿಸಿದ.
ತಾತನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡು ಹೊರಡುವಾಗ ಸ್ವಾಮಿಗೆ ರಾಮಣ್ಣನ ನೆನಪಾಯಿತು.
ಅವನೊಂದಿಗೆ ಕಷ್ಟಸುಖ ಮಾತಾಡಬೇಕೆನಿಸಿತು.
ಅವನೊಂದಿಗೆ ಒಂದು ಘಳಿಗೆ ಅತ್ತು ಹಗುರಾಗಬೇಕೆನಿಸಿತು.
ಊರಿಗೆ ಹಿಂತಿರುಗುತ್ತಿದ್ದ ಒಬ್ಬೊಬ್ಬರ ಮುಖವನ್ನೂ ತಲಾಷು ಮಾಡಿದ .
ಆ ಗುಂಪಿನಲ್ಲಿ ಅವನಿರಲಿಲ್ಲ .
ಅವನು ಅದಾಗಲೇ ಬಸ್ಸು ಹತ್ತಿ ಹೊರಟಾಗಿತ್ತು.
*****
ಗವಿಸ್ವಾಮಿ, ಚೆನ್ನಾಗಿದೆ! ಮಾನವ ಸಂಬಂಧಗಳನ್ನು ಸೂಕ್ಷ್ಮವಾಗಿ ಹೆಣೆದಿದ್ದು ಇಷ್ಟವಾಯ್ತು.
ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು , ಗುರುಪ್ರಸಾದ್ ಕುರ್ತಕೋಟಿ ಸರ್.
ಸೊಗಸಾದ ಕತೆ. ಸಂಬಂಧಗಳ ಸೂಕ್ಷ್ಮಗಳನ್ನು ಸೊಗಸಾಗಿ ಸೆರೆಹಿಡಿದೆ. ಸ್ವಾಮಿ ಮತ್ತು ರಾಮಣ್ಣನ ಪಾತ್ರ ಬಹಳ ಇಷ್ಟವಾಯಿತು, ಅದರಲ್ಲೂ ಕತೆಯಲ್ಲೆಲ್ಲೂ ಮಾತೇ ಆಡದಿದ್ದರೂ ಒಂದು ಪಾತ್ರವಾಗಿ ರಾಮಣ್ಣ ಗಟ್ಟಿಯಾಗಿ ನಿಲ್ಲುತ್ತಾನೆ.
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು , ಮಂಜುನಾಥ್ ಸರ್