ನಗರದಲ್ಲೊಂದು ಚಿಕ್ಕ ಮತ್ತು ಚೊಕ್ಕದಾದ ಕುಟುಂಬ. ಆಧುನಿಕ ಕಾಲದ ಸಕಲೆಂಟು-ಸೌಕರ್ಯಗಳು ಇರುವ ಆ ಕುಟುಂಬದ ಯಜಮಾನ ಸರಕಾರದ ಇಲಾಖೆಯೊಂದರಲ್ಲಿ ಇಂಜನೀಯರ್ ಮತ್ತು ಆತನ ಪತ್ನಿಯೂ ಸಹ ಆಧುನಿಕ ಕಾಲದ ಸುಶಿಕ್ಷಿತೆ ಮತ್ತು ಸರಕಾರಿ ಶಾಲೆಯ ಶಿಕ್ಷಕಿಯಾಗಿ ನೌಕರಿ ಮಾಡುತ್ತಿದ್ದಾಳೆ. ಇಂತಿಪ್ಪ ಕೈತುಂಬ ಸಂಬಳದ ಉದ್ಯೋಗಸ್ಥ ದಂಪತಿಗಳಿಗೆ ಹದಿಹರೆಯದ ಮಗ ಮತ್ತು ಮಗಳು ಇದ್ದಾರೆ. ಮನೆಯಲ್ಲಿಯೂ ಎಲ್ಲವೂ ಇದೆ ಆದರೆ ಶಾಂತಿ-ಸಮಾಧಾನ-ಹೊಂದಾಣಿಕೆ-ಅರ್ಥ ಮಾಡಿಕೊಳ್ಳುವಂತಹ ಸಾಮಾಜಿಕ ಅಂಶಗಳು ಅವಶ್ಯವಾಗಿ ಇರಬೇಕಾದುದೇ ಇಲ್ಲ. ಇರುವ ನಾಲ್ವರಿಗೂ ತಮ್ಮದೇ ಆದ ಅವಸರ, ಉದ್ವೇಗ, ತಳಮಳದ ಹೊಗೆಯಿಂದ ಮನೆಯೆಂಬುದು ಅನುದಿನವೂ ಜಗಳ ಕಾಯುವ ಕೇಂದ್ರವಾಗಿದೆ. ಮನೆಗೆ ಯಾಕಾದರೂ ಬರುತ್ತೇನೋ ಎನ್ನುವ ತಾಯಿ (ಆರತಿ) ಒಂದೇಡೆಯಾದರೆ, ತಾಯಿಯ ಶೀಲಶಂಕೆ ಮಾಡುತ್ತಾ ಮಕ್ಕಳ ಮುಂದೆ ಕೆಟ್ಟದಾಗಿ ಬೈಯ್ಯುವ ಅಪ್ಪನೆಂಬ (ಚಂದುಜಿ) ಮತಿಗೇಡಿ, ಯಾವಾಗಲೂ ಪ್ರಿಯಕರನ ಪೋನ್ ಕರೆಗಾಗಿ ಕಾಯುವ ಮನಸ್ಥಿತಿಯ ಮತ್ತು ಗರ್ಭಪಾತದ ಮಾತ್ರೆಯನ್ನು ಕದ್ದು ನುಂಗಲು ಟಾಯ್ಲೆಟ್ಟಿನಲ್ಲಿ ಮಾತ್ರೆಗಳನ್ನು ಬಚ್ಚಿಟ್ಟಿರುವ ವಯಸ್ಸಿಗೆ ಬಂದ (ರಾಜೇಶ್ವರೀ) ಮಗಳು, ತಾನು ಯಾರಿಗೆ ಹುಟ್ಟಿದ್ದು ಎಂಬುದನರಿಯದೇ ವಿನಾಕಾರಣ ತಂದೆಯಿಂದ ಮಾನಸಿಕ ಹಿಂಸೆ ಅನುಭವಿಸುವ ಮುಗ್ದ ಮಗ (ವೈಭವ್) ಹೀಗೆ ನಾಲ್ವರ ಸುತ್ತಲೂ ಗಿರಕಿ ಹೊಡೆಯುವ ಕೌಟುಂಭಿಕ ಅವಘಡಗಳ ಮುಳ್ಳಿನ ಮಾಲೆಯಂತಿರುವ ತುಮುಲಗಳ, ಕುದಿಯುವ ಕೆಂಡದಂತಾಗಿರುವ ಮನಸ್ಸುಗಳ ಜ್ವಾಲಾಮುಖಿಯಂತಹ ಮನೆಯಲ್ಲಿ ನಡೆಯುವ ಘಟನೆಗಳ ಕಥಾನಕವುಳ್ಳ ’ಬೇರಿಲ್ಲದವರು’ ನಾಟಕ ಇತ್ತೀಚೆಗೆ (೧೭-೦೭-೨೦೧೪) ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ರಂಗಕರ್ಮಿ ಚಂದ್ರಶೇಖರ ಜಿಗಜಿನ್ನಿ ನೇತೃತ್ವದಲ್ಲಿ ಹವ್ಯಾಸಿ ಕಲಾವಿದರು ಅಭಿನಯಿಸಿದರು.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಧನಸಹಾಯದಿಂದ ಪ್ರದರ್ಶನಗೊಂಡ ಈ ನಾಟಕ ಮೂರು ದಶಕಗಳ ಹಿಂದೆ ಹಿರಿಯ ನಾಟಕಕಾರ ಹುಬ್ಬಳ್ಳಿಯ ಅನಿಲ ಠಕ್ಕರ್ ಅವರಿಂದ ಉರ್ದು ಭಾಷೆಯಲ್ಲಿ ರಚಿತಗೊಂಡು ಹಲವಾರು ಕಡೆಗಳಲ್ಲಿ ಪ್ರದರ್ಶನಗೊಂಡಿತ್ತು. ಕೃತಿಯ ಜನಪ್ರಿಯತೆಯನ್ನು ಗಮನಿಸಿ ಆಗಿನ ಕಾಲಮಾನದಲ್ಲಿ ಕನ್ನಡಕ್ಕೆ ರೂಪಾಂತರ ಮಾಡಿದವರು ಕನ್ನಡದ ಹಿರಿಯ ಸಾಹಿತಿಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು. ಅವರು ಮೊನ್ನೆ ನಡೆದ ಪ್ರದರ್ಶನದಲ್ಲಿ ಮುಂದಿನ ಸಾಲಿನ ಗೌರವಾನ್ವಿತ ಪ್ರೇಕ್ಷಕರಾಗಿ ನಾಟಕ ನೋಡುತ್ತಾ, ತಾವು ಅನುವಾದ ಮಾಡಿದ ಸಂದರ್ಭದಲ್ಲಿಯ ಘಟನೆಗಳನ್ನು ನಾಟಕ ಪ್ರದರ್ಶನ ನಂತರ ಪ್ರೇಕ್ಷಕರೆದುರು ವಿವರಿಸಿದರು. ಹುಬ್ಬಳ್ಳಿಯಲ್ಲಿ ನಡೆದಿರುವ ನೈಜ ಘಟನೆಯಾಧಾರಿತ ಈ ನಾಟಕ ರಾಷ್ಟ್ರ ಮಟ್ಟದಲ್ಲಿ ಆಗಿನ ಸಂದರ್ಭದಲ್ಲಿಯೇ ಸದ್ದು ಮಾಡಿದ್ದನ್ನು ಸ್ಮರಿಸಿಕೊಂಡರು. ನಾಟಕದಲ್ಲಿ ಬರುವ ಕಥೆಯಲ್ಲಿ ಕೇವಲ ಗಂಡನ ಪ್ರೋಮೋಶನ್ ಸಲುವಾಗಿ ಮೇಲಾಧಿಕಾರಿ ಮತ್ತು ರಾಜಕಾರಣಿ ಮುಂತಾದ ಮೂವರೊಂದಿಗೆ ರಾತ್ರಿ ಇದ್ದು, ಗಂಡನಿಗಾಗಿ ತನ್ನ ಹೆಣ್ತನವನ್ನು ಕಳೆದುಕೊಂಡರೂ ಕೆಟ್ಟದಾಗಿ ಮಾತಾಡುವ ಗಂಡನಿಗೆ ಚಾಟಿ ಏಟು ಬೀಸುವ ಪತ್ನಿಯು ವಿವಾಹ ವಿಚ್ಚೇಧನ ಕೇಳಿದರೂ ಕೊಡಲೊಪ್ಪದ ಗಂಡನಿಗೆ ಷಂಡನೆಂದು ಬೈಯ್ಯುತ್ತಾಳೆ. ಇದರ ನಡುವೆ ಮನೆಗೆ ಆಗಮಿಸುವ ಕಂಟ್ರಾಕ್ಟರ್ (ಫಕ್ಕೀರಪ್ಪ) ಮನೆ ಬಾಗಿಲಲ್ಲಿ ಮಗಳೊಂದಿಗೆ ಸಂಶಯಾಸ್ಪದವಾಗಿ ನಡೆದುಕೊಳ್ಳುವುದು. ಮಾತಿಗೊಮ್ಮೆ ತನ್ನ ಮಗನನ್ನು ’ಕತ್ತಿ ಮಗನೇ’ ಎಂದು ಹೀಯಾಳಿಸುವುದು ಹೀಗೆಯೇ ಮುಂದುವರೆಯುವ ನಾಟಕ ಯಾವುದೇ ಸುಖಾಂತ್ಯವಾಗಲೀ, ದುರಂತವನ್ನಾಗಲಿ ತೋರಿಸಿದ ನಾಟಕಕಾರರ ಉದ್ದೇಶವೆನೆಂಬುದನ್ನು ಪ್ರೇಕ್ಷಕರು ಪ್ರಶ್ನಿಸುತ್ತಿದ್ದುದು ಗಮನಕ್ಕೆ ಬಂತು.
ಸಮಕಾಲೀನ ಸಂದರ್ಭದ ಸಾಮಾಜಿಕ ಮತ್ತು ಕೌಟುಂಭಿಕ ಸಮಸ್ಯೆಯೊಂದನ್ನು ರಂಗದಲ್ಲಿ ಪ್ರದರ್ಶನ ಮಾಡಿದ್ದೇ ಬಂತು. ಅದರ ಮುಂದಿನ ನಡೆಯೇನು, ಪರಿಹಾರವೇನು ಮುಂತಾದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವು. ರಂಗಪ್ರಯೋಗದಲ್ಲಿ ಮುದ್ರಿತ ಧ್ವನಿ ತುಣುಕುಗಳನ್ನು ಬಳಸಿಕೊಂಡಿರುವುದು ಗಮನ ಸೆಳೆಯಿತು. ರಂಗವಿನ್ಯಾಸ ಗಮನ ಸೆಳೆಯಿತಾದರೂ ಆರಂಭದಿಂದಲೂ ಮನೆಯೊಳಗೆ ನಡೆಯುವ ದೃಶ್ಯವಿದ್ದುದರಿಂದ ರಂಗಪರಿಕರಗಳ ಯಾವುದೇ ಬದಲಾವಣೆಗೆ ಅವಕಾಶವಿರಲಿಲ್ಲ. ಪ್ರಸಾಧನದಿಂದ ಕಲಾವಿದರು ಅತ್ಯಾಧುನಿಕರಂತೆ ಢಾಳವಾಗಿ ಬಣ್ಣ ಬಳಿದುಕೊಂಡ ಹೊಸ ಕಟ್ಟಡದಂತೆ ಕಂಡು ಬಂದ ಈ ಪ್ರಯೋಗದಲ್ಲಿ ಕೆಲವೆಡೆ ಸಂಭಾಷಣೆಗಳ ಪರಿಷ್ಕರಣೆ ಅವಶ್ಯವಿರುವುದು ಕಂಡು ಬಂತು. ಮೂರು ದಶಕಗಳ ಹಿಂದಿನ ಗಂಭೀರ ಸಂಭಾಷಣೆಗಳು ಈಗಿನ ಕಾಲದ ಪ್ರೇಕ್ಷಕರಿಗೆ ತಮಾಷೆಯಂತೆ ಕಂಡು ಬಂದುದು ಬದಲಾದ ಪ್ರೇಕ್ಷಕರ ಅಭಿರುಚಿಯನ್ನು ಗಮನಿಸುವಂತಾಯಿತು. ಐಟಿ-ಬಿಟಿಯಂತಹ ಗೋಳಿಕರಣೋತ್ತರ ಆಧುನಿಕ ಕಾಲದಲ್ಲಿಯೂ ಇಂತಹ ಸಮಸ್ಯೆಗಳು ಜೀವಂತವಾಗಿರುವುದು ಸಮಸ್ಯೆಯ ಆಳ-ಅಗಲವನ್ನು ಪರಿಚಯಿಸುವಿಕೆಯ ಮೂಲಕ ತಮ್ಮ ಶಕ್ತಿ-ಅನುಭವಗಳ ಮೂಲಕ ರಂಗದಲ್ಲಿ ’ಬೇರಿಲ್ಲದವರು’ ನಾಟಕವನ್ನು ಚಂದುಜಿ, ಆರತಿ, ರಾಜೇಶ್ವರಿ, ವೈಭವ, ಪಕೀರಪ್ಪ, ಶಂಕರ, ಪ್ರಮೋದ ಇತರ ಕಲಾವಿದರು ಅಭಿನಯಿಸಿದರು.
****