ಆ ದಿನ ಎಂದಿನಂತಿರಲಿಲ್ಲ. ವಿಜಯ ಪೂರ್ಣ ಆಯಾಸಗೊಂಡಿದ್ದ. ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಇವರ ಆರೋಗ್ಯದ ಕುರಿತು ಚಿಂತೆ ಆರಂಭವಾಗಿತ್ತು. ತಮ್ಮ ಪುಟ್ಟ ಹಳ್ಳಿಯಲ್ಲಿನ ವೈದ್ಯರು ‘ನಿಮೋನಿಯ’ ಆಗಿದೆ ಎಂದು ಮೂರು ದಿನಗಳ ಕಾಲ ಸೈಲಾಯಿನ್ ಹಚ್ಚಿದ್ದರು. ಆರೋಗ್ಯ ಬಿಗಡಾಯಿಸತೊಡಗಿತು. ಪಕ್ಕದ ಶಹರಕ್ಕೆ ಹೋದರೆ ಅವರು ಕೋವಿಡ್ ಟೆಸ್ಟ ಮಾಡಿಸಿಕೊಂಡು ಬರಲು ಸೂಚಿಸಿದರು. ಅಲ್ಲಿ ‘ನೆಗೆಟಿವ್’ ಬಂದರೂ ‘ನ್ಯೂಮೇನಿಯ’ ಇದೆ ಎಂದು ಗೊತ್ತಾದ ಮೇಲೂ ತಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಎಲ್ಲಿಯಾದರೂ ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿದಾಗ ಮನೆಯವರ ಜಂಘಾಬಲವೇ ಉಡುಗಿ ಹೋಗಿತ್ತು.
ಒಂದು ವಾರ ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿಜಯನಿಗೆ ಜೀವನದಲ್ಲಿ ಅಜಾರು ಬಿದ್ದದ್ದೇ ಗೊತ್ತಿಲ್ಲ. ಅದರಲ್ಲೂ ಆಸ್ಪತ್ರೆಯ ಸಹವಾಸದಿಂದ ತುಂಬ ದೂರವಿದ್ದ ವ್ಯಕ್ತಿ. ಆದರೆ ‘ಕೋವಿಡ’ ಬಂದು ಎಂತಹವರನ್ನೂ ಮುಗಿಸಿ ಬಿಡುವ ಸೂಚನೆಗಳನ್ನು ನೋಡಿದ್ದ ಅದರ ಬಗ್ಗೆ ತಿಳಿದುಕೊಂಡಿದ್ದ. ಈಗ ತನಗೂ ತೊಂದರೆ ಎಂದಾಗ ಉಸಿರು ನಿಂತಂತಾಗಿತ್ತು. ಸಹೋದರಿಯ ಗಂಡನಿಗೆ ಪೋನ್ ಮಾಡಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ದಾಖಲಾಗಲು ಹೊರಟ. ತನ್ನ ಪತ್ನಿಯ ಸಹೋದರನೂ. ಸಹೋದರಿಯ ಗಂಡನೂ ಒಬ್ಬರೇ ಇಬ್ಬರೇ ಮಕ್ಕಳೊಂದಿಗೆ ಅವರೆಲ್ಲ ಇವನ ಆರೋಗ್ಯ ಗುಣವಾಗಲೆಂದು ಆಸ್ಪತೆಯವರೆಗೂ ದಾವಿಸಿ ಬಂದಿದ್ದರು.
ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸಾ ಘಟಕಕ್ಕೆ ಒಯ್ದು “ಎಕ್ಸರೇ, ರಕ್ತ” ತಪಾಸಣೆ ಹೀಗೆ ಎಲ್ಲ ತಪಾಸಣೆಗಳ ನಂತರ ಆಕ್ಸಿಜನ್ ಹಚ್ಚುವ ಮೂಲಕ ದಾಖಲಿಸಿಕೊಂಡರು. ಮೂರು ದಿನಗಳ ಕಾಲ ಜೀವ ಹೋದಂತೆ ಮಲಗಿದ್ದ ವಿಜಯನಿಗೆ ನಾಲ್ಕನೆಯ ದಿನ ಆಸ್ಪತ್ರೆಯ ವೈದ್ಯೆಯೊಬ್ಬಳು ಬಂದು ‘ನಿಮಗೆ ಶೀಘ್ರ ಗುಣವಾಗುತ್ತದೆ. ನಿಮಗೆ ಬಿ. ಪಿ. ಶುಗರ್ ಎನೂ ಇಲ್ಲ. ಹೀಗಾಗಿ ಗುಣವಾಗುವಿರಿ. ದಿನ ದಿನಕ್ಕೆ ಆಕ್ಸಿಜನ್ ಪ್ರಮಾಣ ಕಡಿಮೆ ಮಾಡಲಾಗುವುದು’ ಎಂದಾಗ ಮನದಲ್ಲಿ ತಾನು ಪೂಜಿಸುವ ದೇವರನ್ನೆಲ್ಲ ನೆನೆದಿದ್ದ.
ಅದೇ ರಾತ್ರಿ ‘ವೈಷ್ಣೋದೇವಿ’ಯ ಅವತಾರ ಕನಸಿನಲ್ಲಿ ಬಂದು ಎಲ್ಲೆಡೆ ವಿಜಯನನನ್ನು ಕರೆದುಕೊಂಡ ಸಂಚರಿಸಿದಂತೆ ಕನಸು ಕಂಡ. ಬೆಳಿಗ್ಗೆ ಎದ್ದಾಗ ತಾನು ಆಸ್ಪತ್ರೆಯಲ್ಲಿ ಮಲಗಿರೋದನ್ನು ನೆನೆದು ದೇವಿಯ ಅವತಾರ ನನ್ನನ್ನು ಮೊದಲಿನ ಸ್ಥಿತಿಗೆ ಕರೆದುಕೊಂಡು ಹೋಗಬಹುದು ಎಂದುಕೊಂಡ. ಹಾಗೆಯೇ ದಿನದಿನಕ್ಕೆ ಆರೋಗ್ಯದಲ್ಲಿ ಚೇತರಿಕೆಯಾಗತೊಡಗಿತು. ’ನ್ಯೂಮೇನಿಯ’ ಇದ್ದವರಿಗೆ ‘ಕೋರೋನ’ ಸ್ವಲ್ಪವಾದರೂ ಇದ್ದೇ ಇರುತ್ತದೆ ಎಂಬಂತೆ ವಿಜಯನಿಗೂ ‘ಕೋವಿಡ್’ ಇರೋದು ಖಾತ್ರಿಯಾಯಿತು. ನಂತರ ವೈದ್ಯರು ‘ಕೋವಿಡ್ 19’ ಗೆ ಸಂಬಂಧಿಸಿದಂತೆ ಚಿಕಿತ್ಸೆ ಮುಂದುವರೆಸಿದರು.
ಯಾವತ್ತೂ ಆಸ್ಪತ್ರೆಯಲ್ಲಿ ಊಟ ಮಾಡಿರಲಿಲ್ಲ. ಮನೆಯಿಂದ ಗಂಜಿ ತರಿಸಿ ಸೇವಿಸುತ್ತಿದ್ದ ವಿಜಯನಿಗೆ. ಅವನ ಪಕ್ಕದ ಬೆಡ್‍ದಲ್ಲಿ ಮಲಗಿದ್ದ ಮಹಿಳೆಯೋರ್ವಳು ಗದರಿಸಿ ಆಸ್ಪತ್ರೆಯಲ್ಲಿ ನೀಡಿದ ಬೆಳಗಿನ ಉಪಹಾರ ಮದ್ಯಾಹ್ನದ ಊಟ ರಾತ್ರಿ ಊಟ ಸೇವಿಸುವಂತೆ ಒತ್ತಾಯ ಮಾಡಿದಾಗ. ಅವರ ಒತ್ತಾಯಕ್ಕೆ ಮಣಿದು ಆಸ್ಪತ್ರೆಯಲ್ಲಿ ನೀಡುತ್ತಿದ್ದ ಆಹಾರ ಸೇವಿಸತೊಡಗಿದ. ಆಗ ಅಕ್ಕಪಕ್ಕದ ಬೆಡ್‍ನಲ್ಲಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪುವ. ಸತ್ತಿರುವ ವ್ಯಕ್ತಿಯನ್ನು ಬಟ್ಟೆಯಲ್ಲಿ ತಗೆದುಕೊಂಡು ಹೋಗುವುದನ್ನು ಕಣ್ಣಾರೆ ಕಂಡಾಗ ‘ದೇವರೇ ಬೇಗ ಈ ಆಸ್ಪತ್ರೆಯಿಂದ ಮನೆಗೆ ಕಳಿಸುವಂತಾಗಲಿ’ ಎಂದು ದೇವರನ್ನು ಮನದಲ್ಲಿ ನೆನೆಯುತ್ತಿದ್ದ. ಆಗ ಪಕ್ಕದಲ್ಲಿ ಇದ್ದ ಮಹಿಳೆ ಇವನ ಅಧೈರ್ಯ ಕಂಡು ‘ಸರ್ ಯಾಕ್ರಿ ಹೆದರ್ತೀರಿ. ನನ್ನ ಗಂಡ ನಮ್ಮೂರಿನ ಪ್ರಸಿದ್ದ ವೈದ್ಯ. ಹತ್ತು ರೂಪಾಯಿ ಡಾಕ್ಟರ್ ಅವರೂ ರೋಗಿಗಳನ್ನು ನೋಡಿ ನೋಡಿ ಕೊರೋನಾ ಬಂದು ಇದೇ ಆಸ್ಪತ್ರೆಯಲ್ಲಿ ಬೇರೆ ಒಂದು ವಾರ್ಡನಲ್ಲಿ ಇದ್ದಾರೆ. ಅವರ ಉಪಚಾರ ಮಾಡುತ್ತಿದ್ದ ನನಗೂ ಕೊರೋನಾ ಬಂದು ಈ ವಾರ್ಡನಲ್ಲಿ ಇದ್ದೇನೆ. ಒಂದೇ ಆಸ್ಪತ್ರೆಯಲ್ಲಿ ಗಂಡ ಹೆಂಡತಿ ಇದ್ದರೂ ಒಬ್ಬರನ್ನೊಬ್ಬರು ನೋಡುತ್ತಿಲ್ಲ. ಆದರೂ ಪೋನ್ ಮಾಡಿ ನನ್ನ ಗಂಡನ ಆರೋಗ್ಯವನ್ನು ಮಗನ ಬಳಿ ವಿಚಾರಿಸುತ್ತಿರುವೆ. ನಾನೂ ದೈರ್ಯ ತಗೆದುಕೊಳ್ಳುವ ಜೊತೆಗೆ ನನ್ನ ಗಂಡನ ಆರೋಗ್ಯದ ಬಗ್ಗೆಯೂ ದೈರ್ಯ ತಗೆದುಕೊಳ್ಳುವಂತೆ ನನ್ನ ಮಗನಿಗೆ ಹೇಳುತ್ತಿರುವೆ. ಎಲ್ಲರೂ ಸರಿಯಾಗುತ್ತದೆ ಇದಕ್ಕೆ ದೈರ್ಯ ಮುಖ್ಯ’ ಎಂದು ಹೇಳುವುದನ್ನು ಕಂಡಾಗ ಅವರು ಹೇಳುವುದು ಸರಿ “ನಮ್ಮ ಕಣ್ಣ ಮುಂದೆ ಸಾವನ್ನು ನೋಡಿದಾಗ ನೋವು ಆಗುತ್ತಿಲ್ಲವೇ. ?” ಎಂದ
ಆಗವರು ‘ಅವರಿಗೆ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ ಅದಕ್ಕೆ ಸಾವು ಖಚಿತ. ನಮಗೆ ಚಿಕಿತ್ಸೆ ಫಲಕಾರಿಯಾಗುತ್ತಿರುವುದರಿಂದ ದಿನದಿನಕ್ಕೆ ಚೇತರಿಕೆ ಆಗುತ್ತಿದೆ. ಮತ್ತೆ ಹೆದರಿಕೆ ಯಾಕ್ರಿ. ?’ ಎಂದರು. ”ಸರಿ” ಎಂದ ಮಲಗಿದ್ದ. ಮದ್ಯಾಹ್ನ ವೈದರು ಬಂದಾಗ ‘ಸರ್ ನನ್ನನ್ನು ಡಿಸ್‍ಚಾರ್ಝ ಯಾವಾಗ ಮಾಡ್ತೀರಿ’ ಎಂದು ಕೇಳಿದ್ದ. ಆಗವರು ‘ಇನ್ನು ಎರಡು ದಿನ. ’ ಎಂದು ಹೇಳಿದ್ದರು. ಆಗ ಪಕ್ಕದ ಬೆಡ್‍ನಲ್ಲಿದ್ದ ಆ ಮಹಿಳೆ “ ಸರ್. ನನಗೆ ಎರಡು ಮಕ್ಕಳು ಮನೆಯಲ್ಲಿ ಒಬ್ಬಳೇ ಹೆಣ್ಣು ಮಗಳು. ಮನೆ ನೋಡಿಕೊಳ್ಳುವವರು ದಿಕ್ಕು ಇಲ್ಲ. ಗಂಡ ಹೆಂಡತಿ ಇಬ್ಬರೂ ಆಸ್ಪತ್ರೆಯಲ್ಲಿ. ನಾನು ಪ್ರತಿ ದಿನ ನಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮಾಡಿ ಆರೋಗ್ಯದಿಂದಲೇ ಬದುಕಿದ್ದೆ. ಗಂಡ ವೈದ್ಯ ಯಾವ ರೋಗಿಯಿಂದ ಈ ಕೋರೋನ ಬಂದಿತೋ ಗೊತ್ತಿಲ್ಲ. ಗಂಡನ ಆರೈಕೆ ಮಾಡುತ್ತಿದ್ದ ನನಗೂ ಬಂದಿತು. ಇಂತಹ ರೋಗ ಯಾರಿಗೂ ಬರಬಾರದು. ನಮ್ಮ ಜೀವನದಲ್ಲಿ ಎಂದೂ ಉಸಿರಾಟದ ತೊಂದರೆ ಬಂದಿರಲಿಲ್ಲ. ಈಗ ಬಂತು. ಆದರೂ ದೇವರು ದೊಡ್ಡವನು. ಬದುಕಿ ಉಳಿದಿದ್ದೇವೆ. ಇನ್ನು ಎರಡು ದಿನ ಬೇಗ ಕಳೆಯುತ್ತದೆ. ಹೆದರಬೇಡಿ. ನಾನಂತೂ ಇಲ್ಲಿಂದ ಹೊರ ಹೋಗುವುದಷ್ಟೇ ತಡ ನಮ್ಮ ಊರಿಗೆ ಹೋಗಿ ಮನೆಗೆ ಹೋಗದೇ ನನ್ನ ಭೂ ತಾಯಿಗೆ ಹೋಗಿ ಅಲ್ಲಿ ನಮಿಸಿ ನಂತರ ಮನೆಗೆ ಹೋಗುವೆ. ನಮ್ಮ ಕೃಷಿ ಜಮೀನು ಅಲ್ಲಿನ ಬೆಳೆ ಯಾವಾಗ ನೋಡುವೆನೋ. ಮತ್ತೆ ಭೂ ತಾಯಿಯ ಸೇವೆ ಯಾವಾಗ ಮಾಡುವೆನೋ ಎನಿಸುತ್ತದೆ”ಎಂದು ತನ್ನ ಕೃಷಿ ಚಟುವಟಿಕೆಗಳನ್ನು ನೆನಪಿಸಿದಳು. ಎರಡು ದಿನ ಹೇಗೋ ಕಾಲ ಕಳೆದ. ಆಸ್ಪತ್ರೆಯಿಂದ ಡಿಸ್‍ಚಾರ್ಜ ಆಗುವುದಷ್ಟೇ ತಡ ತಮ್ಮ ಮನೆ ಮಕ್ಕಳು ಎಲ್ಲರನ್ನು ಕಾಣುವ ಮಹದಾಸೆಯಿಂದ ಮರಳಿದ್ದ.
ಮರುದಿನ ಮನೆಯಲ್ಲಿ ತಮ್ಮ ಗಲ್ಲಿಯ ಜನ ಇವನನ್ನು ಆಸ್ಪತ್ರೆಗೆ ತಗೆದುಕೊಂಡು ಹೋಗಿರುವ ಸುದ್ದಿಯನ್ನು ಊರಲ್ಲೆಲ್ಲ ಕೋರೋನಾದಿಂದ ಬದುಕುವ ಸಾಧ್ಯತೆ ಕಡಿಮೆ ಎಂದೆಲ್ಲ ಸುದ್ದಿ ಮಾಡಿದ್ದನ್ನು ನೆನೆದು ತಾಯಿ ಕಣ್ಣೀರು ತಗೆದಾಗ ಆಸ್ಪತ್ರೆಯಲ್ಲಿ ಆ ಅಪರಿಚಿತ ಮಹಿಳೆ ಹೇಳಿದ ದೈರ್ಯದ ಮಾತುಗಳನ್ನು ತನ್ನ ತಾಯಿಯ ಮುಂದೆ ಹೇಳಿದ್ದ. ಅಷ್ಟೇ ಏಕೆ ಇವರ ಮನೆಗೆ ರೊಟ್ಟಿ ಮಾಡಿಕೊಡುತ್ತಿದ್ದ ಮಹಿಳೆ ಇವರಿಗೆ ಕೊರೋನ ಬಂದಿದೆ ಎಂದು ಸುದ್ದಿ ತಿಳಿದದ್ದೇ ತಡ ಇವರ ಮನೆಗೆ ಬರುವುದನ್ನೇ ನಿಲ್ಲಿಸಿದ್ದಳು. ಪೋನ್ ಮಾಡಿದರೂ ಕೂಡ ಪೋನ್ ಹಿಡಿಯುತ್ತಿರಲಿಲ್ಲ. ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ ಎಂದು ವಿಜಯ ಕೋರೋನದಿಂದ ತಿಳಿದುಕೊಂಡಿದ್ದ.
ಅತಿ ಆತ್ಮೀಯರು ಮಾತ್ರ ಮನೆಗೆ ಬರುವುದು. ಸಾಂತ್ವನ ಹೇಳಿ ದೈರ್ಯ ಹೇಳುವುದು. ಆತ್ಮೀಯ ಸ್ನೇಹಿತರು ಪೋನ್ ಮೂಲಕ ವಿಷಯ ಕೇಳಿ ಮಾತಾಡುವುದನ್ನು ಕಂಡಾಗ ಅಕ್ಕ ಪಕ್ಕದ ಮನೆಯವರಿಗೆ ಈ ಪ್ರೀತಿ ವಿಶ್ವಾಸವಿಲ್ಲವೇ. ? ಎಂದು ಒಂದು ಕ್ಷಣ ಚಿಂತಿಸಿದ್ದ. ದೂರದಲ್ಲಿರುವ ಸ್ನೇಹಿತರು ಪೋನ್ ಮಾಡಿ ಮಾತಾಡಿ ಆರೋಗ್ಯದ ಯೋಗಕ್ಷೇಮ ವಿಚಾರಿಸುತ್ತಿದ್ದರೆ. ಊರಿನಲ್ಲಿ ಸ್ನೇಹಜೀವಿಗಳೆನಿಸಿಕೊಂಡವರು ತಮ್ಮ ಕಾರ್ಯಕ್ರಮ ಇದ್ದಾಗ ಇವನನ್ನು ನೆನಪು ಮಾಡಿ ಕರೆಯುತ್ತಿದ್ದವರು ಒಬ್ಬರೂ ಇವನ ಬಳಿ ಸುಳಿದಿರಲಿಲ್ಲ. ಹೋಗಲಿ ಪೋನ್ ಮಾಡಿಯಾದರೂ ಇವರ ಯೋಗಕ್ಷೇಮ ವಿಚಾರಿಸಿರಲಿಲ್ಲ ಎಂದಾಗ ಹೇಗಾಗಿರಬೇಡ. ಅವರೆಂತಹ ಸ್ನೇಹಜೀವಿಗಳು ಎಂದು ತನ್ನ ಮನದಲ್ಲಿ ಅಂದುಕೊಂಡಿದ್ದ.
ಕೋರೋನ ಆಗಿದೆ ಎಂದು ಗೊತ್ತಾದ ಮೇಲೆ ಒಂದು ಕುಟುಂಬದ ಬಗ್ಗೆ ಸಮಾಜ ಅರಿಯುವ ಸಂಬಂಧಗಳು. ಸ್ನೇಹಿತರ ಪ್ರತಿಕ್ರಿಯೆಗಳು. ಜೊತೆಗೆ ಕೆಲಸ ಮಾಡುವವರ ಪ್ರತಿಕ್ರಿಯೆಗಳು ನಿಜವಾದ ಸಂಬಂಧ ಏನು ಎಂಬುದನ್ನು ವಿಜಯನಿಗೆ ಅರ್ಥೈಸಿತ್ತು. ಅಷ್ಟೇ ಅಲ್ಲ ಸಂಬಂಧಗಳ ನಿಜವಾದ ಮೌಲ್ಯವನ್ನು ವಿಜಯ ಈ ಸಂದರ್ಭದಲ್ಲಿ ತಿಳಿದುಕೊಂಡಿದ್ದ. ಜಾಗತಿಕ ಮಟ್ಟದಲ್ಲಿ ರೋಗವೊಂದು ಹೆಸರು ಮಾಡಿ ಅದು ಜನಸಾಮಾನ್ಯರ ಬದುಕಿನಲ್ಲಿ ತನ್ನ ಪಾತ್ರ ವಹಿಸಿದಾಗುವ ಅನಾಹುತ ತಲ್ಲಣಗಳನ್ನು ಕಣ್ಣಾರೆ ಕಂಡಿದ್ದ. ಅನುಭವಿಸಿದ್ದ. ಇಂತಹ ಸಂದಿಗ್ದತೆಯಲ್ಲಿ ಪೋಲಿಸ್ ಇಲಾಖೆ. ವೈದ್ಯರು. ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯ ಸಿಬ್ಬಂಧಿಗಳು ಹಗಲು ಇರುಳು ದುಡಿಯುತ್ತಿರುವುದನ್ನು ಕಂಡು ಕೃತಜ್ಞತೆ ಅರ್ಪಿಸಿದ್ದ. ತನ್ನ ಈ ಸಂದರ್ಭ ಹತ್ತಿರದ ಸಂಬಂಧಿಗಳು ಸಹೋದರಿಯ ಗಂಡ ಅವನ ಸಹೋದರ. ಪತ್ನಿಯ ಸಹೋದರ. ಮಕ್ಕಳು. ತಾಯಿ ಪತ್ನಿ. ಇವರ ಉಪಚಾರದ ಬಗೆಯನ್ನು ನೆನೆದಿದ್ದ. ರೈತ ಮಹಿಳೆಯ ದೈರ್ಯದ ಮಾತುಗಳನ್ನು ನೆನಪು ಮಾಡಿಕೊಂಡಿದ್ದ. ಅವರೂ ಈ ಸಂಬಂಧ ಇದ್ದವರು ಇಲ್ಲದವರಂತೆ ನಟಿಸಿ ದೂರವಾದವರಂತೆ ಆಗಿ ಬಿಟ್ಟಿದ್ದರೆ ರೋಗಿಗಳ ಗತಿಯೇನು ಎಂದು ಒಂದು ಕ್ಷಣ ಚಿಂತಿಸಿದ್ದ. ದೇವರು ಎಲ್ಲರಲ್ಲೂ ಕೆಟ್ಟ ಗುಣಗಳನ್ನು ಹಾಕಿರಲಾರ ಅಂತೆಯೇ ಭೂಮಿ ಮೇಲೆ ಮಳೆ ಬೆಳೆ ಸರಿಯಾಗಿ ಸಾಗುತ್ತಿರುವುದು ಎಂಬುದನ್ನು ಮನದಲ್ಲಿ ನೆನೆದಿದ್ದ. ಅಷ್ಟರಲ್ಲಿ ಅವನ ತಾಯಿ ತಿನ್ನಲು ಏನಾದರೂ ಮಾಡಿಕೊಡಲೇ ಎಂದು ಕೇಳಿದ್ದಳು. ಹಿರಿಯ ಜೀವ ತನಗೋಸ್ಕರ ಬದುಕನ್ನು ಸವೆಸುತ್ತಿರುವುದನ್ನು ಕಂಡಾಗ ಕಣ್ಣಂಚಲ್ಲಿ ನೀರು ಜಿನುಗಿತ್ತು.
–ವೈ. ಬಿ. ಕಡಕೋಳ