ಸಂಬಂಧಗಳು ಆರೋಗ್ಯಕರವಾಗಿ ಅರಳಲಿ, ಉಳಿಯಲಿ, ಬೆಳೆಯಲಿ ಎಂಬ ಆಶಯದಿಂದ: ನಟರಾಜು ಎಸ್. ಎಂ.

ಒಬ್ಬ ವ್ಯಕ್ತಿಗೆ ಮದುವೆಯಾಗಿತ್ತು. ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದ. ನೌಕರಿಯ ನಿಮಿತ್ತ ಬೇರೊಂದು ಊರಿಗೆ ವರ್ಗಾವಣೆಯಾಗಿ ಬರುವಾಗ ಹೆಂಡತಿ ಮಕ್ಕಳನ್ನು ತನ್ನೂರಿನಲ್ಲೇ ಬಿಟ್ಟು ಬಂದಿದ್ದ. ಹೊಸ ಊರು, ಹೊಸ ಆಫೀಸ್, ಹೊಸ ಜನಗಳ ನಡುವೆ ಒಂದು ಹುಡುಗಿ ಹೇಗೋ ಈ ಸಂಸಾರಸ್ಥನ ಕಣ್ಣಿಗೆ ಬಿದ್ದಿದ್ದಳು. ಆತನ ವಯಸ್ಸು ಸುಮಾರು 46. ಆಕೆಗೆ ಕೇವಲ 26 ವರ್ಷ ವಯಸ್ಸು. ಒಂದೇ ಆಫೀಸಿನಲ್ಲಿ ಇಬ್ಬರು ನೌಕರರಾಗಿದ್ದ ಕಾರಣ ಇಬ್ಬರಿಗೂ ಸ್ನೇಹವಾಯಿತು. ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಇವರಿಬ್ಬರ ಪ್ರೇಮದ ಕತೆ ಆತನ ಹೆಂಡತಿಯ ಕಿವಿಗೆ ಬಿದ್ದಿದ್ದೇ ಆಕೆ ತನ್ನ ಗಂಡನ ಆಫೀಸಿಗೆ ಬಂದು ರಂಪ ರಾಮಾಯಣ ಮಾಡಿಯಾಗಿತ್ತು. ಒಂದೆರಡು ಬಾರಿ ಈ ಜಗಳ ಪೋಲೀಸ್ ಸ್ಟೇಷನ್ನಿನ ಮೆಟ್ಟಿಲು ಸಹ ಹತ್ತಿತ್ತು ಎನ್ನಬಹುದು.

ಇಷ್ಟೆಲ್ಲಾ ನಡೆದರೂ ಆ ಇಬ್ಬರು ಪ್ರೇಮಿಗಳ ನಡುವೆ ಪ್ರೇಮ ನಿರಾತಂಕವಾಗಿ ಸಾಗಿತ್ತು. ಈ ರಂಪ ರಾಮಾಯಣ ಪ್ರೇಮಾಯಣಗಳು ಆಫೀಸಿಗೆ ಶೋಭೆಯಲ್ಲ ಎಂದು ಭಾವಿಸಿದ ಆ ಆಫೀಸಿನ ಅಧಿಕಾರಿಗಳು ಆ ವ್ಯಕ್ತಿಯನ್ನು ಬೇರೊಂದು ಊರಿಗೆ ವರ್ಗಾಹಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿದ್ದರು. ವರ್ಗಾವಣೆಯ ಪತ್ರ ಸಹ ಆತನ ಕೈ ಸೇರಿತ್ತು. ನಾಳೆ ಅಫಿಸಿಯಲ್ಲಿ ತಾನಿರುವ ಊರಿನಿಂದ ಬೇರೊಂದು ಊರಿಗೆ ಹೋಗುತ್ತಿರುವ ಖುಷಿ ಆತನ ಮುಖದಲ್ಲಿತ್ತು. ಲಗ್ಗೇಜ್ ಎಲ್ಲಾ ಪ್ಯಾಕ್ ಮಾಡಿ ಬೇರೊಂದು ಊರಿಗೆ ಹೋಗಿ ಅಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಖುಷಿಯಲ್ಲಿ ಈ ವ್ಯಕ್ತಿ ಇದ್ದ. ಅಲ್ಲಿ ಹೋಗಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಮೊದಲು ಬಿಟ್ಟು ಬಂದಿದ್ದ ಹೆಂಡತಿ ಮಕ್ಕಳ ಜೊತೆ ದೂರದ ಕಾಶ್ಮೀರಕ್ಕೆ ಹೋಗಿ ಬರುವ ಪ್ಲಾನ್ ಸಹ ಆತ ಮಾಡಿಯಾಗಿತ್ತು.

ಆತ ಆ ಆಫೀಸಿನ್ನು ಬಿಟ್ಟು ಹೋಗುವ ಸುದ್ದಿ ಸ್ವಾಭಾವಿಕವಾಗಿ ಆತನ ಪ್ರೇಯಸಿಯು ಗರಂ ಆಗುವಂತೆ ಮಾಡಿತ್ತು. ಮದುವೆಯಾಗದ ಹೆಣ್ಣು ಸಂಸಾರಸ್ಥನನ್ನು ಯಾಕಾದರು ಪ್ರೀತಿಸಿದಳೋ ದೇವರೆ ಬಲ್ಲ. ಆಕೆ ಬರೀ ಗರಂ ಆಗಲಿಲ್ಲ ಆ ರಾತ್ರಿ ಲಗೇಜ್ ಪ್ಯಾಕ್ ಮಾಡುವುದರಲ್ಲಿ ಬ್ಯುಸಿ ಇದ್ದವನ ರೂಮಿಗೆ ಬಂದವಳೇ ಅವನಿಲ್ಲದಿದ್ದರೆ ತಾನು ಸಾಯುವೆ ಎಂಬಂತಹ ಮಾತನಾಡಿದ್ದಳು. ಮಾತು ಜಗಳಕ್ಕೆ ತಿರುಗಿ ಜಗಳ ಸಹಿಸಲಸಾಧ್ಯವಾದಾಗ ಆತ ಸೀದಾ ಪೋಲೀಸ್ ಸ್ಟೇಷನ್ ಗೆ ಹೋಗಿ “ಈ ಹುಡುಗಿ ತನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೆದರಿಸುತ್ತಿದ್ದಾಳೆ ಎಂದು ಕಂಪ್ಲೇಂಟ್ ನೀಡಿಬಿಟ್ಟ. ಅವನನ್ನು ಹಿಂಬಾಲಿಸುತ್ತಲೇ ಬಂದಿದ್ದ ಆಕೆ “ಈತ ತನಗೆ ಮಾನಭಂಗ ಮಾಡಿದ” ಎಂದು ಆಕೆಯೂ ಸಹ ಕಂಪ್ಲೇಂಟ್ ನೀಡಿಬಿಟ್ಟಳು.

ಅವಳ ಹೇಳಿಕೆಗೆ ಜಗಳ ಮಾಡುವಾಗ ಹರಿದ ಬಟ್ಟೆ ಪ್ರಾಥಮಿಕ ಸಾಕ್ಷಿಯಾಗಿತ್ತು. ಆ ರಾತ್ರಿ ಅವರಿಬ್ಬರನ್ನೂ ಪೋಲೀಸ್ ಠಾಣೆಯಲ್ಲೇ ಕುಳ್ಳರಿಸಿದ ಪೋಲೀಸರು ಆಕೆ ನೀಡಿದ ಕಂಪ್ಲೇಂಟ್ ನ ಆಧಾರದ ಮೇಲೆ ಬೆಳಿಗ್ಗೆ ಇಬ್ಬರನ್ನು ಕೋರ್ಟ್ ನಲ್ಲಿ ಹಾಜರುಪಡಿಸಿದರು. ನಂತರ ಮೆಡಿಕಲ್ ಚೆಕ್ ಅಪ್ ಸಹ ನಡೆದು ಹೋಯಿತು. ಹುಡುಗಿ ನೀಡಿದ ಸಾಕ್ಷಿ ಆಧಾರಗಳ ಮೇಲೆ ಆತ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಬೇಕಾಯಿತು. ಮಾನಭಂಗ ಜಾಮೀನು ರಹಿತ ಕೇಸ್ ಆಗಿದ್ದುದರಿಂದ ಆತನನ್ನು ಸೀದಾ ಜೈಲಿಗೆ ಕಳುಹಿಸಲಾಯಿತು. ಆಕೆಯದು ಯಾವುದೇ ತಪ್ಪುಗಳಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬಿಟ್ಟುಬಿಡಲಾಯಿತು. ಆಕೆ ಮಾರನೆಯ ದಿನದಿಂದಲೇ ತನ್ನ ಪಾಡಿಗೆ ತಾನು ಕೆಲಸಕ್ಕೆ ಹಾಜರಾಗಿದ್ದಳು.

ಜೈಲು ಸೇರಿದ ಗಂಡನ ನೋಡಲು ಆತನ ಹೆಂಡತಿ ಬಂದು ಆತನನ್ನು ಹೇಗಾದರು ಮಾಡಿ ಜೈಲಿನಲ್ಲಿ ಬಿಡುಗಡೆಯಾಗುವಂತೆ ಮಾಡಬೇಕು ಎಂದು ಹರ ಸಾಹಸ ಮಾಡುತ್ತಿದ್ದಳು. ಆತನ ತಪ್ಪುಗಳನ್ನು ಆಕೆ ಕ್ಷಮಿಸಿದ್ದಳಾ? ಗೊತ್ತಿಲ್ಲ. ಆಕೆಯ ಜಾಮೀನು ಕೊಡಿಸುವ ಪ್ರಯತ್ನಗಳು ಫೇಲ್ ಆಗಲು ಒಂದು ಕಾರಣವೂ ಇತ್ತು. ಆ ಕಾರಣ ಏನೆಂದರೆ ಆ ಹುಡುಗಿ ಆತನ ಜೊತೆಗಿನ ಅತ್ಯಂತ ಖಾಸಗಿ ಘಳಿಗೆಗಳನ್ನು ವಿಡಿಯೋ ಮಾಡಿ ಅವುಗಳನ್ನು ನ್ಯಾಯಾಧೀಶರ ಎದುರಿಗಿಟ್ಟಿದ್ದಳಂತೆ. ವಿಧಿಯಿಲ್ಲದೆ ಆತ ಒಂದಷ್ಟು ದಿನ ಜೈಲಿನಲ್ಲಿ ಕಳೆಯಲೇಬೇಕಿತ್ತು. ಜೈಲಿನಲ್ಲಿ ಒಂದೆರಡು ವಾರ ಕಳೆದ ಮೇಲೆ ಮೆಡಿಕಲ್ ಗ್ರೌಂಡ್ಸ್ ಆಧಾರದ ಮೇಲೆ ಆತನನ್ನು ಜೈಲಿನಿಂದ ಕರೆ ತಂದು ಆಸ್ಪತ್ರೆಯಲ್ಲಿರುವ ಸೆಲ್ ನಲ್ಲಿ ಚಿಕಿತ್ಸೆಗಾಗಿ ಇಡಲಾಗಿತ್ತು. ಅದೇ ಆಸ್ಪತ್ರೆಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಆ ಆಸ್ಪತ್ರೆಯ ಕಿಟಕಿಗಳಿಲ್ಲದ ಸೊಳ್ಳೆಗಳೇ ತುಂಬಿದ ಕತ್ತಲ ಕೋಣೆಯೊಂದರಲ್ಲಿ ಆ ರೀತಿ ದಿನ ಕಳೆಯಬೇಕಾದುದು ವಿಪರ್ಯಾಸವೇ ಸರಿ.

ಜೈಲಿನಲ್ಲಿ ಇರಬೇಕಾದ ವ್ಯಕ್ತಿ ಆಸ್ಪತ್ರೆಯ ಸೆಲ್ ನಲ್ಲಾದರೂ ಒಂಚೂರು ನೆಮ್ಮದಿಯಾಗಿ ಇದ್ದನೇನೋ. ಆದರೆ ನೆಮ್ಮದಿ ಒಂದೆರಡು ದಿನಕ್ಕಿಂತ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ, ಆಸ್ಪತ್ರೆಯ ಆ ಸೆಲ್ ನಲ್ಲಿ ತನ್ನನ್ನು ನೋಡಲು ಬಂದ ವ್ಯಕ್ತಿಯೊಬ್ಬನ ಮೊಬೈಲ್ ತೆಗೆದುಕೊಂಡು ಆ ಹುಡುಗಿಗೆ ಕರೆ ಮಾಡಿ “ನೀನು ಮಾಡಿದ್ದು ಸರಿಯಾ?” ಎಂದು ಕೇಳಿಬಿಟ್ಟಿದ್ದ. ಆ ಕರೆಯಿಂದ ಕೆಂಡಾಮಂಡಲವಾದ ಹುಡುಗಿ ಅದೇ ದಿನ ಆ ಮೊಬೈಲ್ ಸಮೇತ ಪೋಲೀಸ್ ಸ್ಟೇಷನ್ ಗೆ ಹೋಗಿ ಈ ನಂಬರ್ ನಿಂದ ನನಗೆ ಜೀವ ಬೆದರಿಕೆ ಬರುತ್ತಿದೆ ಎಂದು ಹೇಳಿ ಆಸ್ಪತ್ರೆಯ ಸೆಲ್ ನಿಂದ ತನ್ನ ಪ್ರಿಯಕರನನ್ನು ಮತ್ತೆ ಜೈಲಿಗೆ ಪೋಲೀಸರು ಹೊತ್ತೊಯ್ಯುವಂತೆ ಮಾಡಿದ್ದಳು.

ಒಬ್ಬ ಉನ್ನತ ಮಟ್ಟದ ಅಧಿಕಾರಿ ಹೀಗೆ ಯಾವುದೋ ಪ್ರೇಮದಲ್ಲಿ ಬಿದ್ದು ಜೈಲು ಪಾಲಾದುದು ವಿಪರ್ಯಾಸವೇನೋ ಸರಿ. ಆತನ ವೈವಾಹಿಕ ಜೀವನ ಅಷ್ಟು ಸುಖಕರವಾಗಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುವಾಗ ಒಮ್ಮೆ ಆತನೇ ತನ್ನ ಸಂಸಾರದ ಕುರಿತು ಮಾತನಾಡಿದ್ದ. “ನನಗೆ ಮದುವೆಯಾಗಿ 16 ವರ್ಷವಾಯಿತು. ಹೆಂಡತಿ ತುಂಬಾ ಒಳ್ಳೆಯವಳು. ಆದರೆ ಯಾಕೋ ಆಕೆಗೂ ನನಗೂ ಆಗಿಬರಲಿಲ್ಲ. ಮಗನೊಬ್ಬ ಹುಟ್ಟಿದ ಖುಷಿ ಬಿಟ್ಟರೆ ವೈವಾಹಿಕ ಜೀವನ ಬೇಸರದಿಂದಲೇ ಕೂಡಿತ್ತು” ಎಂಬ ಆತನ ಮಾತು ಕೇಳಿದಾಗ ತನಗೆ ಸಿಗದೆ ಪ್ರೇಮವನ್ನು ಆತ ಆ ಹುಡುಗಿಯಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದ ಎನಿಸಿತು. “ಈ ಪ್ರಪಂಚದಲ್ಲಿ ವಿವಾಹದಾಚೆಗಿನ ಸಂಬಂಧಗಳು ಎಷ್ಟಿಲ್ಲ ಹೇಳಿ. ತನ್ನ ಪ್ರೇಯಸಿ ಮತ್ತು ಹೆಂಡತಿಯನ್ನು ಸರಿದೂಗಿಸಿಕೊಂಡು ಬದುಕುತ್ತಿರುವವರಿಗೇನು ಈ ಪ್ರಪಂಚದಲ್ಲಿ ಕಡಿಮೆಯೇ? ಈತನ ಅದೃಷ್ಟ ಚೆನ್ನಾಗಿರಲಿಲ್ಲ. ಮೂರ್ಖನಾದ ಅಷ್ಟೆ.” ಎಂಬಂತೆ ಜನ ತಲೆಗೆ ಒಂದೊಂದು ಮಾತನಾಡುವುದ ಕೇಳಿದಾಗಲೆಲ್ಲಾ ಹೌದಲ್ಲ ಪ್ರೇಮ ಮನುಷ್ಯನನ್ನು ಮೂರ್ಖನನ್ನಾಗಿ ಮಾಡುತ್ತದೆ ಎನಿಸಿತು.

ಮದುವೆಯಾಗದ ಒಂದು ಹುಡುಗಿ ತನ್ನ ಭವಿಷ್ಯದ ಕುರಿತು ಯಾವತ್ತೂ ಯಾಕೆ ಚಿಂತಿಸಲಿಲ್ಲ. ತನಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯನಾದ ಸಂಸಾರಸ್ಥನೊಬ್ಬನ ಜೊತೆ ಸಂಬಂಧಕ್ಕೆ ಸುಮ್ಮನಾದರು ಯಾಕೆ ಬಿದ್ದಳು ಎಂದು ಯೋಚಿಸುತ್ತಾ ಕುಳಿತರೆ ಉತ್ತರಗಳು ಸಿಗುವುದಿಲ್ಲ. ಆದರೆ ಒಬ್ಬ ಮದುವೆಯಾದಾತ ಇಂತಹ ಪ್ರೇಮದಲ್ಲಿ ಯಾಕೆ ಬಿದ್ದ ಎಂದು ನನ್ನನ್ನು ನಾನೇ ಪ್ರಶ್ನಿಸುತ್ತಾ ಕುಳಿತಾಗ ಎಂದೋ ಎಲ್ಲೋ ಓದಿದ್ದ “ಎದೆಯ ಮೇಲಿಹಳು ತೊಡೆಗೆ ಬಾರಳು. ತೊಡೆಯ ಮೇಲಿಹಳು ಎದೆಗೆ ಬಾರಳು” ಎಂಬ ಸಾಲುಗಳು ನೆನಪಾಗುತ್ತವೆ. ಆ ಸಾಲಿನೊಳಗಿರುವ ಒಳ ಅರ್ಥಗಳು ಪ್ರೇಮ ಮತ್ತು ಕಾಮದ ಆಕರ್ಷಣೆಯ ಅವಾಂತರಗಳನ್ನು ಹೀಗೆ ನಮ್ಮೆದುರಿಗೆ ತೆರೆದಿಡುತ್ತವೆ ಎನ್ನಬಹುದು.

ಈ ತರಹ ವಿವಾಹೇತರ ಸಂಬಂಧಗಳ ಕಾರಣಕ್ಕೆ ಬದುಕು ಮೂರಾಬಟ್ಟೆ ಮಾಡಿಕೊಂಡವರ ಸಂಖ್ಯೆ ತುಂಬಾ ಇದೆ. ಹಲವು ಸಲ ಸೆಲೆಬ್ರಿಟಿಗಳ ಬದುಕಿನ ಇಂತಹ ಗೋಜಲುಗಳು ಮಾಧ್ಯಮಗಳ ಕೈಗೆ ಸಿಕ್ಕರೆ ಸೆಲೆಬ್ರೆಟಿಗಳ ಮಾನ ಮರ್ಯಾದೆ ಪ್ರತಿ ಮನೆಯ ಟಿವಿಗಳಲ್ಲಿ ಪೇಪರ್ ಗಳಲ್ಲಿ ಬಿತ್ತರವಾಗಿಬಿಡುತ್ತದೆ. ಟಿವಿ ನೋಡುವಾಗ ಪೇಪರ್ ನೋಡುವಾಗ ಸೆಲೆಬ್ರೆಟಿಗಳ ಬದುಕಿನಲ್ಲಿ ನಡೆಯುವ ಈ ತರಹದ ಘಟನೆಗಳು ಸಾಮಾನ್ಯರಿಗೆ ಪಾಠದಂತೆ ಎಂದಿಗೂ ಕಾಣುವುದಿಲ್ಲ. ಯಾಕೆಂದರೆ ಅವು ಕೇವಲ ಸುದ್ದಿಗಳಾಗಿರುತ್ತವೆ. ಆದರೆ ಎಲ್ಲಿಯೂ ಬಿತ್ತರವಾಗದ ಯಾರ್ ಯಾರ್ಯಾರದೋ ಬದುಕಿನ ಪುಟಗಳು ಹೀಗೆ ನಮ್ಮ ಕಣ್ಣಿಗೆ ನಿತ್ಯ ಬೀಳುತ್ತಲೇ ಇರುತ್ತವೆ. ನಿಜ ಹೇಳಬೇಕೆಂದರೆ ನಮಗೆ ಪಾಠಗಳನ್ನು ಕಲಿಸಿ ಕೊಡುವುದೇ ಇಂತಹ ನಾವೇ ಕಾಣುವ ನಮ್ಮ ನಡುವಿನ ಜನರ ಬದುಕಿನಲ್ಲಿ ನಡೆದ ನೈಜ ಘಟನೆಗಳು.

ಹೀಗೊಂದು ಸತ್ಯ ಘಟನೆಯಾದರಿಸಿದ ಬೇರೊಬ್ಬರ ಬದುಕನ್ನು ಇಲ್ಲಿ ಬರೆಯುವುದು ಎಷ್ಟು ಸಮಂಜಸವೋ ತಿಳಿಯದು. ಆದರೆ ಸಂಬಂಧಗಳು ಹೊಸ ರೂಪ ಪಡೆಯುವ ಭರದಲ್ಲಿ ಅರಳುವ ಬದಲು ಹಳಸುತ್ತಾ ಹೋಗಿ ಕ್ರಮೇಣ ಹೀಗೆ ಸಂಕೀರ್ಣವಾಗುತ್ತಿವೆ. ಯಾರ ಕಾರಣಕ್ಕೋ ಯಾವ ಕಾರಣಕ್ಕೋ ತಮ್ಮೊಳಗೆ ನೋವು ನುಂಗಿ ಬದುಕು ಸವೆಯುವ ಜನಗಳ ಸಂಖ್ಯೆ ನಮ್ಮ ನಡುವೆ ಹೆಚ್ಚುತ್ತಾ ಹೋಗುತ್ತಿರುವ ಈ ದಿನಗಳಲ್ಲಿ ಈ ತರಹದ ಘಟನೆಗಳ ಕುರಿತು ಬರೆಯಬೇಕಾದ ಅವಶ್ಯಕತೆ ಇದೆ ಎನಿಸಿತು. ಆ ಕಾರಣಕ್ಕೆ ಈ ಲೇಖನ ಬರೆದೆ. ಅನ್ಯತಾ ಭಾವಿಸದಿರಿ.

ಪ್ರೀತಿ ಇರಲಿ

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
Rudrappa
Rudrappa
11 years ago

ಸಂಭಂಧಗಳ ಸಮೀಕರಣದಲ್ಲಿ ಸ್ಥಿರ ಮತ್ತು ಅಸ್ಥಿರ ಅಂಶಗಳ ನಾಮೇಲು ತಾ ಮೇಲು ಎನ್ನುವ ಗುದ್ದಾಟ ಸರ್ವೇಸಾಮಾನ್ಯ. ಅವುಗಳ ಸರಿ ವಿಂಗಡಣೆ ಮಾಡದೆ ಅವುಗಳನ್ನ ಅರ್ಥೈಸಿಕೊಳ್ಳಲು ಮತ್ತು ಸರಿ ಮಾರ್ಗ ಹುಡುಕುವದು ಕಷ್ಟ ಸಾಧ್ಯ. 

ಹೃದಯಶಿವ
ಹೃದಯಶಿವ
11 years ago

ಒಳ್ಳೆ ಬರಹ…

ಪ್ರಶಾಂತ್ ಪರಶುರಾಮ್ ಖಟಾವಕರ್
ಪ್ರಶಾಂತ್ ಪರಶುರಾಮ್ ಖಟಾವಕರ್
11 years ago

ಒಂದು ಬಗೆಯ ಅಂಟು ರೋಗದಂತೆ ಬೆಳೆಯುವ ಈ ತರಹದ ಹಲವಾರು ಘಟನೆಗಳು , ಒಬ್ಬರಿಂದ ಮತ್ತೊಬ್ಬರ ಪ್ರೀತಿಯನ್ನು ಬಯಸುತ್ತಲೇ ಇರುತ್ತದೆ.. ಆದರೆ ಅದು ಪ್ರೀತಿಯಲ್ಲ ಎಂಬುದು ನಮ್ಮ ಅಭಿಪ್ರಾಯ .. ಆತ್ಮೀಯತೆಯನ್ನು ಅಕ್ಕಪಕ್ಕದವರು ಅಪ್ಪಿ ತಪ್ಪಿ ವಿಷಯಾಂತರ ಮಾಡಿ ಸಂಬಂಧಗಳ ದಾರಿ ತಪ್ಪಿಸುವ ಕೆಲ ನಿದರ್ಶನಗಳು ಸಿಗುತ್ತವೆ .. ಪರಸ್ಪರ ಒಪ್ಪಿಗೆಯಷ್ಟೇ ಅಲ್ಲದೆ ಪರಿಚಿತರ , ಸ್ನೇಹಿತರ ಮಾತುಗಳು ಸಹ ಈ ಬಗೆಯ ವಿವಾದಾಸ್ಪದ ಸಂಬಂಧಗಳಿಗೆ ಕಾರಣವಾಗಿರುತ್ತವೆ .. ಪ್ರೀತಿ ಮಾಡುವುದು ಒಂದು ರೀತಿ ಅಂತೆಯೇ ಮಾಡಿಸುವುದು ಅಥವಾ ಹುಟ್ಟುವಂತೆ ಮಾಡುವುದು ಸಹ ಮತ್ತೊಂದು ರೀತಿ .. ಒಂದಷ್ಟು ಹಣಕ್ಕಾಗಿ , ಮತ್ತಷ್ಟು ಕಾಲಹರಣಕ್ಕಾಗಿ ಹಾಗೂ ಇನ್ನೂ ಕೆಲವು ನೋಡಿ ಕಲಿ ಮಾಡಿ ನಲಿ ಎಂಬಂತೆ ಅವರಿವರ ಬದುಕಿನ ಬಗೆಯನ್ನು ಕಂಡು ಆಕರ್ಷಿತರಾಗಿ … ಪ್ರೀತಿ ಇಲ್ಲದಿದ್ದರೂ ಜಗತ್ತಿನ ದೃಷ್ಟಿಕೋನದಲ್ಲಿ ಇವರು ಕೂಡ ಪ್ರೇಮಿಗಳು (ಕಥೆಯಾಗಲು ಮತ್ತೊಬ್ಬರ ಮಾತಿನ ವಿಷಯವಾಗಲು).. .. !!
 
ಬರಹದಲ್ಲಿ ಅನ್ಯತಾ ಭಾವಿಸುವಂತೆ ಬೇರೇನೂ ಇಲ್ಲಾ … ಇಬ್ಬರ ನಡುವೆ ಮತ್ತೊಬ್ಬರು ಅಥವಾ ಇಬ್ಬರು ಎಂಬುದು ಸುಮಾರು ವರ್ಷಗಳ ಇತಿಹಾಸ .. ಜಗತ್ತಿನ ಹಲವಾರು ಭಾಷೆಗಳ ಸಿನಿಮಾ ನಾಟಕಗಳ ಕಥಾ ವಸ್ತು … ಅದೆಲ್ಲವನ್ನೂ ಒಂದು ಬದಿಗಿಟ್ಟು ನೋಡಿದರೆ ಬರಹದಲ್ಲಿನ ಸಂದೇಹ ಮತ್ತು ಸಂದೇಶಗಳು ಉತ್ತಮವಾಗಿದೆ ಸರ್… ಮುಂದುವರೆಸಿರಿ … ಶುಭಾಶಯಗಳು … 🙂

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
11 years ago

ಚೆನ್ನಾಗಿದೆ ಸರ್…

Suman Desai
Suman Desai
11 years ago

ಛಂದ ಬರೆದಿರಿ… ಇಷ್ಟಾ ಆತು….

sharada.m
sharada.m
11 years ago

ಚೆನ್ನಾಗಿದೆ ಸರ್…
some happening situation in office and internet  connected relation. is described in a readable way

srinivasa
srinivasa
11 years ago

its truenijavada pritilimathusambhadha dalimosa kalmasaha erodila  alva sir ?

Santhoshkumar LM
Santhoshkumar LM
11 years ago

Superb Nattu….Nice article with a beautiful message!!

Lokesh
Lokesh
11 years ago

thumba olleya lakhani…dhanyavadagalu!

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಚೆನ್ನಾಗಿದೆ ಸರ್ 🙂

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
11 years ago

ಜನ್ನನ ಅಮ್ರತಮತಿ ಮತ್ತು ಅಷ್ಠಾವಂಕನ ನೆನಪಾಯ್ತು!

Utham Danihalli
11 years ago

Estavaythu lekana
Prema kamagalla sangarshadali adhestu moggugalu(makallu) naralutheve

Raghunandan K
11 years ago

Nice Editorial… 

Rajendra B. Shetty
11 years ago

ಒಂದು ಕಡೆ "ತನಗೆ ಸಿಗದೆ ಪ್ರೇಮವನ್ನು ಆತ ಆ ಹುಡುಗಿಯಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದ" ಎಂದು ಬರೆದಿದ್ದೀರಿ(ನಿಮಗೆ ಅನಿಸಿದ್ದು). ಇದನ್ನು ಒಪ್ಪುವದಿಲ್ಲ. ಇದನ್ನು ಪ್ರೇಮವೆಂದು ಕರೆಯುವುದು ತಪ್ಪು. ಇದು ಕಾಮದ ಆಟ. ಮನುಷ್ಯ ಕಾಮದಿಂದ ತೃಪ್ತಿ ಹೊಂದುವುದು ಕಷ್ಟ ಇದಕ್ಕೆ ಕೊನೆಯೇ ಇಲ್ಲ. (ಯಯಾತಿ). ನಾನು ಯೋಚಿಸುತ್ತಿರುವುದು ಆ ಹೆಣ್ಣಿನ ಬಗ್ಗೆ. ಮದುವೆಯಾದ, ತನಗಿಂತ ಇಪ್ಪತ್ತು ವರ್ಷ ಹೆಚ್ಚು ವಯಸ್ಸಿನ ಗಂಡಿನೊಡನೆ ಆಕೆ ಅನೈತಿಕ ಸಂಬಂಧ ಇರಿಸುವಾಗ ಏನೂ ಅನಿಸಲಿಲ್ಲವೇ?  ಆತನನ್ನು ಜೈಲಿಗೆ ಕಳುಹಿಸುವಾಗ ಆಕೆಗೆ ಯಾವ ತಪ್ಪಿನ ಭಾವನೆಯೂ ಬರಲಿಲ್ಲವೇ? ಮನುಷ್ಯ ಇಷ್ಟೊಂದು ಕಟುಕನಾಗಬಹುದೇ? ಹೆಂಡತಿ ಇರುವಾಗ ಚಿಕ್ಕ ಪ್ರಾಯದ ಹೆಣ್ಣಿನೊಡನೆ ನಿತ್ಯ ಅನೈತಿಕ ಸಂಬಂಧ ಇರಿಸಿಕೊಂಡ ಆ ಗಂಡಸೂ ಎಂತಹ ಮನುಷ್ಯ.
ಅರ್ಥವಾಗದ್ದು – ಗಂಡು ಹೆಣ್ಣಿನ ಸಂಬಂಧ ಬರೇ ಮೈಗೆ ಸಂಬಂದಿಸಿದ್ದೇ? ಪ್ರೇಮವೆಂಬುದು ಕಾಮವೇ? ಆಧುನಿಕತೆಯ ಹೆಸರಿನಲ್ಲಿ, ಸ್ವಾತಂತ್ರ್ಯದ ಹೆಸರಲ್ಲಿ ನಾವಿಂದು "ನಾಯಿ"ಯ ಬದುಕನ್ನು ಅನಿಸರಿಸುತ್ತಿದ್ದೇವೆಯೇ? ನಮ್ಮ ಮನಸ್ಸು ದಿನ ದಿನಕ್ಕೂ ಸಾಯುತ್ತಿದೆಯೇ?
ಈ ಎಲ್ಲ ಪ್ರಶ್ನೆಗಳಿಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ ಅಥವಾ ಈಗಿನ ಕಾಲಕ್ಕೆ ನಾನಿನ್ನೂ ಒಗ್ಗಿಕೊಂಡಿಲ್ಲವೇ?
ವಿಚಾರ ಮಾಡುವಂತಹ ಲೇಖನ ಬರೆದಿದ್ದೀರಿ, ನಟರಾಜು ರವರೆ.

14
0
Would love your thoughts, please comment.x
()
x