ಅನಿ ಹನಿ

ಸಂತೆಯೊಳಗೊಂದು ಸುತ್ತು: ಅನಿತಾ ನರೇಶ್ ಮಂಚಿ


ಸಂತೆ ಅಂದರೆ ಅದೇನೋ ಆಕರ್ಷಣೆ. ನಮಗೆ ಬೇಕಿರಲಿ ಬೇಡದೇ ಇರಲಿ ಸುಮ್ಮನೆ ಸಂತೆ ಸುತ್ತುವುದಿದೆಯಲ್ಲಾ ಅದರಷ್ಟು ಆನಂದ ನೀಡುವ ಕೆಲಸ ಇನ್ನೊಂದಿಲ್ಲ. ಅದೂ ಊರಲ್ಲೇ ನಡೆಯುವ ಉತ್ಸವಕ್ಕೆ ಸೇರುವ ಅಪಾರ ಜನಸ್ತೋಮದ ನಡುವೆ ಕಣ್ಮನ ಸೆಳೆಯುವ ವಸ್ತು ತಿನಿಸುಗಳನ್ನು ಮಾರುವ ಸಂತೆಯ ಅಂಗಡಿಗಳು ಅಂದ ಮೇಲೆ ದೇಹವು ಮನೇಯೊಳಗೇ ನಿಲ್ಲಲು ಅದೇನೂ ಕೊರಡಲ್ಲ ತಾನೆ?! ಚಪ್ಪಲಿ ಮೆಟ್ಟಿಕೊಂಡು ಹೊರಟೇ ಬಿಡುತ್ತದೆ. 

ಸಂತೆಯ ಗಮ್ಮತ್ತು ಏನಿದ್ದರೂ ಹಗಲು ಸರಿದು ಇರುಳಿನ ಅಧಿಪತ್ಯ ತೊಡಗಿದಾಗಲೇ  ಚೆಂದ. 
ಬಗೆ ಬಗೆಯ ದೀಪಾಲಂಕಾರದಲ್ಲಿ ಜಗಮಗಿಸುವ ಅಂಗಡಿಗಳು ಎಷ್ಟು ವಿಜ್ರಂಭಣೆಯಿಂದ ಮೆರೆಯುತ್ತವೋ ಅಷ್ಟೇ ಚೆಂದಕ್ಕೆ ಕಾಣುತ್ತವೆ  ಎಣ್ಣೆ ಬುಡ್ಡಿಯ ಮಸಕು ಬೆಳಕಿನಲ್ಲಿ ರಸ್ತೆಯ ಬದಿಯಲ್ಲಿ ಕುಳಿತು ತಮ್ಮ ಸರಕನ್ನು ಮಾರಾಟ ಮಾಡುವ ಪುಟಾಣಿ ವ್ಯಾಪಾರಿಗಳ ಸಡಗರವೂ. 

ಕಲಾತ್ಮಕವಾಗಿ ಬಿದಿರಿನ ಕೊಳಲುಗಳನ್ನು ಬಂಧಿಸಿದ ಉದ್ದನೆಯ ಕೋಲನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು  ಇನ್ನೊಂದು ಕೈಯಲ್ಲಿ ಕೊಳಲನ್ನು ತುಟಿಗೊತ್ತಿ ಮಧುರವಾಗಿ ನುಡಿಸುತ್ತಾ ನಡೆಯುವ ಹುಡುಗನೊಬ್ಬನ  ಸಾಹಸ ಕಿರುಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿದ  ಶ್ರೀಕೃಷ್ಣನಿಗಿಂತ ಏನೂ ಕಮ್ಮಿ ಎನಿಸುವುದಿಲ್ಲ.

ರಸ್ತೆ ಬದಿಯಲ್ಲೇ  ಒಂದು ಕ್ಷಣದಲ್ಲಿ ಗಸಗಸನೆ ಈರುಳ್ಳಿ ಕತ್ತರಿಸಿ, ಮಾವಿನ ಕಾಯಿ ಕ್ಯಾರೆಟ್ ತುರಿದು, ಉಪ್ಪು ಖಾರ ಬೆರೆಸಿ, ಎತ್ತರದಿಂದ ನಮ್ಮ ಕಣ್ಣಿಗೆ ಕಾಣುವಂತೆ ಎಣ್ಣೆ ಹುಯ್ದು ಚುರ್ ಮುರಿ ಸೇರಿಸಿ ಕವರಿನೊಳಗೆ ತುಂಬಿ ನಮ್ಮ ಕೈಗಳಿಗಿತ್ತಾಗ ಹೈಜಿನ್ ಬಗ್ಗೆ ಪಾಠ ಮಾಡುವ ಮನಸ್ಸು ತೆಪ್ಪಗಾಗಿ ನಾಲಿಗೆ ಸವಿಯುವ ರುಚಿಯಲ್ಲಿ ತನ್ನ ಪಾಲನ್ನು ಬೇಡುತ್ತದೆ. 

 ತಮ್ಮ ಬ್ರಾಂಡನ್ನೇ ಅತ್ಯುತ್ತಮ ಎಂದು ಝಂಡಾ ಹಾರಿಸುವ ಕಂಪೆನಿಗಳ ಜೊತೆ ಸವಲೊಡ್ಡಿ ನಿಲ್ಲುವ ಲೋಕಲ್ ಐಸ್ ಕ್ಯಾಂಡಿ, ಲಾಲಿ, ಗೋಲಿಯ ಪೆಟ್ಟಿಗೆಗಳು, ಹೊತ್ತು ಕಳೆಯಲು ಮಸಾಲೆ ಹಚ್ಚಿದ ಕಡಲೆಯೋ, ಪರ ಪರನೆ ಶಬ್ದ ಮಾಡುತ್ತಾ ಹೂವಿನಂತೆ ಅರಳಿ ನಿಲ್ಲುವ ಪಾಪ್ ಕಾರ್ನಿನ ಜೊತೆಗೆ ಹೆಚ್ಚಿಟ್ಟ ಹಣ್ಣಿನ ತುಂಡುಗಳು, ಕಣ್ಣೆದುರೇ ತಯಾರಾಗಿ ಬಾಯಲ್ಲಿ ನೀರೂರಿಸುವ ದೋಸೆ ಕ್ಯಾಂಪಿನ ಪರಿಮಳದ ಜೊತೆ, ತಿಂಡಿ ಮಾಡುವುದನ್ನು ಯುದ್ಧ ರಂಗವೋ ಎಂಬಂತೆ ಕಾಣಿಸುವ, ಬಾಣಲೆಗಳ ಮೇಲೆಯೇ ಬೆಂಕಿಯನ್ನುಕ್ಕಿಸಿ ಕೋಲಾಹಲವೆಬ್ಬಿಸುವ  ಚೈನೀಸ್ ಅಡುಗೆಗಳ ನೋಟ.  ಆದರೆ ಈ ಆಚಾರವಿಲ್ಲದ ನಾಲಿಗೆಗೆ ಎಲ್ಲವೂ ಒಂದೇ..  ಹೊಟ್ಟೆ ತುಂಬಿದ್ದರೂ ಜೊಲ್ಲು ಸುರಿಸುತ್ತಲೇ ಇರುತ್ತದೆ. 

 ತಿಂಡಿ ಅಂಗಡಿಗಳ ನಂತರ ಬರುವುದು ಕಣ್ಮನ ಸೆಳೆಯುವ ಚಿನ್ನದ ಆಭರಣಗಳನ್ನು ನಾಚಿಸುವ ಗಿಲೀಟಿನ ಒಡವೆಗಳ ಅಂಗಡಿಗಳು. ಇದರೆದುರು ಜನರ  ಸಾಲು ಸಾಲೇ ನಿಂತಿರುತ್ತದೆ. ಮ್ಯಾಚಿಂಗ್ ಮಂತ್ರವನ್ನು ಉಚ್ಚರಿಸುತ್ತಲೇ ಇರುವ ಕಾಲೇಜು ಕುವರಿಯರ ಜೊತೆಗೆ ಅವರಮ್ಮಂದಿರೂ ಸ್ಪರ್ಧೆಗಿಳಿದಂತೆ ಖರೀದಿ ಮಾಡುತ್ತಿರುತ್ತಾರೆ. ಪ್ರಿಯತಮೆ ಒಪ್ಪುತ್ತಾಳೋ ಇಲ್ಲವೋ, ಎಂಬ ಗೊಂದಲದಲ್ಲೇ ಕಣ್ಣಿಗೆ ಚೆಂದ ಕಾಣಿಸಿದ್ದನ್ನು ಕೇಳಿದ ಕ್ರಯ ಕೊಟ್ಟು ಕೊಂಡುಕೊಳ್ಳುವ ಹುಡುಗರೂ ಕೂಡಾ ವ್ಯಾಪಾರದಲ್ಲಿ ಹಿಂದೆ ಬೀಳುವುದಿಲ್ಲ.  

ಮನೆಗೆ ಬೇಕಾದ ಅಗತ್ಯ ವಸ್ತುಗಳ ಅಂಗಡಿಯಲ್ಲಿ ಹೆಂಗಳೆಯರ ಸಂಭ್ರಮವೂ. ಹೊರಗೇ ಠಳಾಯಿಸುತ್ತಾ ’ಮುಗೀಲಿಲ್ವಾ ನಿಂದು’ ಎಂದು ಗೊಣಗಿದಂತೆ ನಟಿಸುತ್ತಾ  ಪರ್ಸ್ ತೆಗೆದು ಕಾಯುವ ಗಂಡಂದಿರು .. ಇದನ್ನು ನೋಡಿಯಾದರೂ ಸಂಸಾರದ ಗಾಡಿಯ ಎರಡು ಚಕ್ರಗಳು ಹೆಣ್ಣು ಗಂಡು ಎಂದು ಯಾರಾದರೂ ಒಪ್ಪಲೇ ಬೇಕು. 

ಮನುಷ್ಯ ಆಧುನಿಕವಾಗುತ್ತಾ ಸಾಗಿದಂತೆ. ತಂತ್ರಜ್ಞಾನಗಳು ಮುಂದುವರಿಯುತ್ತಾ ಹೋದಂತೆ ಕೆಲವೊಂದು ನಂಬಿಕೆಗಳ ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿಟ್ಟು ಮಾರಲಾಗುತ್ತದೆ. ಒಂದು ಕಡೆಯಲ್ಲಿ ಕವಡೆ ಶಾಸ್ತ್ರದವರು ನೆಲದಲ್ಲಿ ಕುಳಿತು ಕೈ ನೋಡಿ ಶಾಸ್ತ್ರ ಹೇಳುತ್ತಾ ಕುಳಿತಿದ್ದರೆ, ಇನ್ನೊಂದೆಡೆ ಕೆಂಬಣ್ಣದ ರಾಕ್ಷಸನಂತೆ ತೋರುವ  ಕಂಪ್ಯೂಟರುಗಳು ಬಟನ್ ಒತ್ತಿದ ಕೂಡಲೇ ನಿಮ್ಮ ಹಣೇ ಬರಹವನ್ನು ಹೇಳುತ್ತವೆ. ಭವಿಷ್ಯ ತಿಳಿಯುತ್ತದೋ ಇಲ್ಲವೋ..ವರ್ತಮಾನದಲ್ಲಿ ಕಿಸೆ ಖಾಲಿಯಾಗುವುದಂತೂ ಸತ್ಯ.

ಥ್ರಿಲ್ ಎಂಬುದನ್ನೇ  ಕ್ಯಾಶ್ ಮಾಡಿಕೊಳ್ಳುವ ಜೈಂಟ್ ವ್ಹೀಲ್ ಗಳು, ಟೊರಟೊರಾ, ವೇಗವಾಗಿ ಸುತ್ತುವ, ಓರೆ ಕೊರೆಯಾಗಿ ಸಾಗುವ, ಒಂದು ನಿಮಿಷದಲ್ಲಿ ಹೊಟ್ಟೆಯೊಳಗೆ ಚಳುಕು ಮೂಡಿಸಿ ಇದರಿಂದ ಜೀವ ಸಹಿತ ಇಳಿದಿದ್ದೇ ಪವಾಡ ಎಂಬಂತೆ ತೋರುವ ಹಲವಾರು ಆಟಗಳು ಸಂತೆಯಲ್ಲಿ ಸಾಮಾನ್ಯ. ಮರಣ ಬಾವಿ ಎಂಬ ಹೃದಯ ಬಿಗಿ ಹಿಡಿದು ನೋಡುವ ಬೈಕ್ ಕಾರುಗಳ ಸುತ್ತಾಟ.. ಬದುಕು ಕೂಡಾ ಇಲ್ಲಿ ಬಿಕರಿಗಿಟ್ಟಂತೆ ಕಂಡರೆ ಆಶ್ಚರ್ಯವಿಲ್ಲ. 

ಕಂಡದ್ದಕ್ಕೆಲ್ಲಾ ಸಾವಿರ ಕೊಂಕು ಹೇಳುತ್ತಾ, ಬೇಕು ಎನ್ನಿಸಿದ್ದನ್ನು ಸಂತೆಯಲ್ಲಿ ಕೊಂಡರೆ ಅಂತಸ್ತಿಗೆ ಕಡಿಮೆ ಎನಿಸೀತೇನೋ ಎಂಬ ಒಣ ಜಂಭವನ್ನು ಹಿಂದಕ್ಕೆ ತಳ್ಳಲು ಮನಸ್ಸಿಲ್ಲದೇ, ಆಸೆಗಣ್ಣುಗಳನ್ನು ಬಲವಂತವಾಗಿಯೇ ಸರಿಸುತ್ತಾ ಸುಮ್ಮನೆ ಕುರುಡು ನಾಯಿಯಂತೆ ಸಂತೆ ಸುತ್ತುವ ಮಂದಿಯೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿಯೇ ಇರುತ್ತಾರೆ. 

ಹರಕಲು ಬಟ್ಟೆ ಹಾಕಿಕೊಂಡರೂ ತನ್ನ ಬೆನ್ನ ಮೇಲೆ ಹೊಸ ಅರಿವೆಗಳ ಗಂಟು ಹೊತ್ತ ಮುದುಕ, ಕೈಕಾಲು ಗಟ್ಟಿ ಇದ್ದರೂ ಸುಮ್ಮ ಸುಮ್ಮನೇ ಭಿಕ್ಷೆಗಾಗಿ ಕೈ ಚಾಚುವ ಯುವಕ, ಅಲ್ಲಲ್ಲಿ ಕಿಸೆ ಕತ್ತರಿಸುವ ಕಳ್ಳರ ನಡುವೆ, ನಿಮ್ಮ ವಸ್ತು ಬೀಳಿಸಿ ಬಿಟ್ಟಿದ್ದೀರಿ ಎಂದು ಎಚ್ಚರಿಸುವ ಪ್ರಾಮಾಣಿಕ ಸ್ವರಗಳು, ಗುರುತು ಪರಿಚಯವಿಲ್ಲದಿದ್ದರೂ ಜನರ ಗುಂಪಿನಲ್ಲಿ ಮುಖಾಮುಖಿಯಾದಾಗ ಸುಮ್ಮನೆ ನಗು ಅರಳಿಸುವ ಮುಖಗಳು, ಒಂದೇ ಎರಡೆ…  ಬದುಕಿನ ನಾಟಕದ ಎಲ್ಲಾ ನಮೂನೆಯ ಪಾತ್ರಗಳು ಒಂದೇ ರಂಗದಲ್ಲಿ ನಿಂತ ಅನುಭವ. 

ಒಂದು ಹೊತ್ತಿನ ಸಂತೆಯ ಸುತ್ತಾಟ ವರ್ಷಕ್ಕಾಗುವಷ್ಟು ಜೀವನಾನುಭವಗಳನ್ನು, ಮಧುರ ಅನುಭೂತಿಯನ್ನು, ಏನೋ ಸಾರ್ಥಕತೆಯ ಭಾವವನ್ನು ಕಟ್ಟಿಕೊಡುತ್ತದಲ್ಲಾ  ಇದನ್ನು ಮತ್ತೆ ಮತ್ತೆ ಸವಿಯುವ ಅಮಲೇರಿಸಿಕೊಂಡ ಮನಸ್ಸನ್ನು ಸೋತ ಹೆಜ್ಜೆಗಳು ಮನೆಯ ಕಡೆಗೆ ಎಳೆದೇ ತರಬೇಕಾಗುತ್ತದೆ. 
-ಅನಿತಾ ನರೇಶ್ ಮಂಚಿ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಸಂತೆಯೊಳಗೊಂದು ಸುತ್ತು: ಅನಿತಾ ನರೇಶ್ ಮಂಚಿ

  1. ಹಾ ಹಾ… ಚೆನ್ನಾಗಿದೆ. ನಮ್ಮೂರಿನ ಸಂತೆಯ ಅನುಭವ ಇನ್ನೂ ಚೆನ್ನಾಗಿರುತ್ತೆ.. ಮಧ್ಯದಲ್ಲೇ ದನ ಕರುಗಳು ಬಂದು ಜನರನ್ನ ದಿಕ್ಕಾಪಾಲಾಗಿಸುತ್ತವೆ.

  2. ಜೀವನದ ಮೊದಲ ೨೦ ವರ್ಷಗಳಲ್ಲಿ ನಮ್ಮೂರ ಸಂತೆಗೆ ಹೋಗುತ್ತಿದ್ದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಕ್ಕೆ ಧನ್ಯವಾದಗಳು

  3. ಸಂತೆಯೊಳಗೆ ನಾನೂ ಒಂದು ಸುತ್ತು ಹಾಕಿ ಬಂದಂತಾಯಿತು……..ಚೆನ್ನಾಗಿದೆ ಮೇಡಂ…

  4. ಇದ್ದದ್ದನ್ನು ಇದ್ದ ಹಾಗೆ ಬರೆದಿರುವಿರಿ. ಚೆನ್ನಾಗಿದೆ. ಮೊನ್ನೆ ಮೊನ್ನೆ ಉಡುಪಿಯ ದೀಪೋತ್ಸವಕ್ಕೆ ಹೋಗಿದ್ದೆ. ನಿಮ್ಮ ಲೇಖನದಲ್ಲಿರುವ ಕೆಲವು ಫೋಟೊ ಕ್ಲಿಕ್ಕಿಸಿಟ್ಟದ್ದು ನೆನಪಾಯಿತು.

Leave a Reply

Your email address will not be published. Required fields are marked *