ಲಾಕ್ ಡೌನ್, ಸೀಲ್ ಡೌನ್, ಕ್ವಾರಂಟೈನ್, ಕಂಟೈ ನ್ಮೆಂಟ್ ಝೋನ್, ರೆಡ್, ಗ್ರೀನ್, ಆರೇಂಜ್ ಝೋನ್ ಇವೆಲ್ಲ ಈ ಎರಡೂವರೆ ತಿಂಗಳಿಂದ ಪ್ರತಿದಿನ ಕೇಳಿ ಬರುತ್ತಿರುವ ಪದಗಳು. ಬಹುಶಃ ಹಿಂದೆಂದೂ ಕಂಡಿರದಂತಹ ನಿಗೂಢತೆ ಬೆಚ್ಚಿಬೀಳಿಸುವ ಭಯ ಜನರಲ್ಲಿ ಆವರಿಸಿದೆ. ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ಮಾರಿಯಿಂದ ತತ್ತರಿಸಿದೆ. ಒಂದು ಕಡೆ ಜನರ ಜೀವದ ಪ್ರಶ್ನೆಯಾದರೆ ಮತ್ತೊಂದು ಕಡೆ ಜೀವನದ ಪ್ರಶ್ನೆ. ನಮಗೆ ಎರಡೂ ಮುಖ್ಯವಾದುದೆ. ಜೀವ ಜೀವನದ ಮಧ್ಯೆ ತೂಗುಗತ್ತಿಯ ಮೇಲೆ ನೇತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಜೀವವನ್ನು ಮುಡುಪಿಟ್ಟು ಹೋರಾಡುತ್ತಿದ್ದರೆ ಇನ್ನೂ ಕೆಲವರು ಜೀವನದ ತಳಹದಿಯ ಬೇಗೆಯಲ್ಲಿ ಬೇಯುತ್ತಿದ್ದಾರೆ.
ಕೊರೋನ ಬಂದ ಆರಂಭದಲ್ಲಿ ಇದ್ದ ಭಯ ಭೀತಿ ಈಗಿಲ್ಲ. ಅದರೊಂದಿಗೆ ಜೀವನ ಸಾಗಿಸಬೇಕಾಗಿದೆ ವಾಸ್ತವತೆಯ ದಿಕ್ಕಿನತ್ತ ನಮ್ಮನ್ನು ತಳ್ಳಿದೆ. ನಿರ್ಭೀತಿಯಿಂದ ಓಡುತ್ತಿದ್ದ ನಮ್ಮ ಜೀವನ ಶೈಲಿ ಒಮ್ಮೆಗೆ ದಶಕಗಳಷ್ಟು ಹಿಂದೆ ಸರಿಯುವಂತೆ ಆಗಿದ್ದು ನಿಜಕ್ಕೂ ಕಣ್ಣಿಗೆ ಕಟ್ಟುವ ಸಂಗತಿ. ನಿಶ್ಚಿತವಾಗಿ ಹರಿಯುತ್ತಿದ್ದ ನದಿಯ ದಿಕ್ಕು ತಪ್ಪಿಸಿದಾಗ ಆಗುವ ಅನಿಶ್ಚಿತತೆಯ ಹಾದಿ ನಮ್ಮ ಬದುಕಲ್ಲಿ ಗೋಚರಿಸಿದೆ. ಯಾವುದೇ ವರ್ಗಗಳೆಂಬ ಅರಿವಿಲ್ಲದೆ ಎಲ್ಲ ಜನಾಂಗಕ್ಕೂ ವರೈಸ್ ನ ಬಿಸಿ ಮುಟ್ಟಿದೆ. ಕಷ್ಟ ಕೋಟಲೆಗಳ ನಿಜವಾದ ಅರ್ಥ ದ ಅರಿವಾಗಿದೆ.
ನಾನು ಹೇಳ ಹೊರಟಿರುವುದು ಸಂತೆ ಮಾರುಕಟ್ಟೆಯ ವಿಚಾರ.
ತಾಲೂಕು , ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗಳು ರೈತರ ನೇರ ಮಾರುಕಟ್ಟೆಯ ಜಾಗವೂ ಹೌದು.ರೈತರು ತರಕಾರಿ ಹಣ್ಣುಗಳನ್ನು ಬೆಳೆದು ವಾರಕ್ಕೊಮ್ಮೆ ಈ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಸಂತೆಗಳೆಂದರೆ ಒಂದಷ್ಟು ಊರಿಗೆ ಹತ್ತಿರದ ನಿರ್ದಿಷ್ಟ ಜಾಗದಲ್ಲಿ ನಡೆಸಲಾಗುತ್ತದೆ. ಇಲ್ಲಿ ಮಾರಾಟಕ್ಕಾಗಿ ಜಾಗವನ್ನು ನಿಗದಿಗೊಳಿಸಲಾಗುತ್ತದೆ. ಎಲ್ಲಾ ರೈತರೂ ತಮ್ಮದೇ ಬೆಳೆಯನ್ನು ತರದಿದ್ದರು ಕೆಲ ದಲ್ಲಾಳಿಗಳು ಅವರ ಬೆಳೆಯನ್ನು ಖರೀದಿಸಿ ಸಂತೆಗಳಲ್ಲಿ ಮಾರುತ್ತಾರೆ. ಕೊರೋನ ಕಾರಣದಿಂದಾಗಿ ಸದ್ಯ ಸಂತೆಗಳು ನಡೆಯುತ್ತಿಲ್ಲ. ತರಕಾರಿಗಳನ್ನು ಬೆಳೆದ ರೈತರ ಪಾಡು ಏನೂ ಎಂಬುದು ಯೋಚಿಸಬೇಕಾದ ಸಂಗತಿ.ಬೆಳೆದ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ.ಅಂಗಡಿಗಳು ಖರೀದಿಸಿದರು ಸರಿಯಾದ ಬೆಲೆ ಸಿಗುತ್ತಿಲ್ಲ. ಅಲ್ಲದೆ ಕೆಲವೊಬ್ಬರು ಬಾಡಿಗೆ ವಾಹನದ ಮೂಲಕ ಮನೆ ಬಾಗಿಲಿಗೆ ಹೋಗಿ ತರಕಾರಿ ಮಾರುತ್ತಿದ್ದಾರೆ.ಇವೆಲ್ಲ ಎಷ್ಟು ದಿನ ನಡಯುತ್ತದೆ ಎಂಬುದು ಅನಿಶ್ಚಿತ.
ನಿಜವಾಗಿ ಹೇಳಬೇಕೆಂದರೆ ಸಂತೆಗಳಲ್ಲಿ ಈ ಸಾಮಾಜಿಕ ಅಂತರ ಎಂಬುದು ಬಹು ಕಷ್ಟದ ಕೆಲಸ. ಏಕೆಂದರೆ ಒಂದಿಷ್ಟು ಜಾಗದ ಮಿತಿಯಲ್ಲಿ ಸಂತೆ ನಡೆಯುತ್ತದೆ.ಅಲ್ಲದೆ ಜನರೂ ಸಾಕಷ್ಟು ಪ್ರಮಾಣದಲ್ಲಿ ಸೇರುವುದರಿಂದ ಇವೆಲ್ಲ ಅಸಾಧ್ಯದ ಮಾತು.ಆದರೂ ಅವೆಲ್ಲ ಮೀರಿ ಶುರುವಾದರೂ ಕೊರೋನ ಭೀತಿಯಿಂದ ಎಷ್ಟು ಜನ ಬರುತ್ತಾರೆಂಬುದು ಅನಿರೀಕ್ಷಿತ.
ನಾನು ಶಿವಮೊಗ್ಗ ಜಿಲ್ಲೆಯವನು. ನಾನು ಕಾಲೇಜಿಗೆ ಹೋಗುವ ಸಮಯದಲ್ಲಿ ಪ್ರತಿ ಗುರುವಾರ ಬೆಳಗ್ಗಿನ ಎಲ್ಲಾ ಬಸ್ಸುಗಳು ತುಂಬಿರುತ್ತಿತ್ತು. ಸಾಗರದಲ್ಲಿ ಗುರುವಾರದ ದಿನ ಸಂತೆ ಹಾಗಾಗಿ ಬಸ್ಸಿನಲ್ಲೇ ತರಕಾರಿಗಳನ್ನೆಲ್ಲಾ ಸಂತೆಗೆ ಕೆಲವರು ಸಾಗಿಸುತ್ತಿದ್ದರು. ಬಸ್ಸಿನ ತುಂಬಾ ಸೊಪ್ಪುಗಳ ಘಮ ತುಂಬಿರುತ್ತಿತ್ತು. ರಜೆಯ ದಿನಗಳಲ್ಲಿ ನಾನೂ ಅಪ್ಪನ ಜೊತೆ ಸಂತೆಗಳಿಗೆ ಹೋಗುತ್ತಿದ್ದೆ. ಅಲ್ಲಿಯ ಗಿಜಿಗಿಜಿ, ಗಲಾಟೆಗಳೆಲ್ಲ ನೋಡಿದಾಗ ನನಗೆ ಏನೋ ಖುಷಿ ಸಿಗುತ್ತಿತ್ತು. ಪುಟ್ಟ ಹದಿಹರೆಯದ ಹುಡುಗನಿಂದ ಹಿಡಿದು ಇಳಿ ವಯಸ್ಸಿನ ಅಜ್ಜಿಯೂ ಕೂಡ ಬಿಸಿಲಲ್ಲಿ ಕುಳಿತು ತರಕಾರಿ ಮಾರುವುದು ನೋಡಿದರೆ ನಿಜಕ್ಕೂ ಅವರ ಉತ್ಸಾಹ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅವರೆಲ್ಲ ಪ್ರತಿದಿನ ಒಂದೊಂದು ಊರಿಗೆ ಹೋಗಿ ಸಂತೆಯ ಮಾರಾಟದಲ್ಲಿ ತೊಡಗುತ್ತಾರೆ.
ಸಂತೆಯಲ್ಲಿ ಬರಿ ತರಕಾರಿಯೊಂದೇ ಅಲ್ಲ ಬೇಕಾದಷ್ಟು ಸಾಮಾಗ್ರಿಗಳು ದೊರೆಯುತ್ತದೆ. ಮನೆಗೆ ಬೇಕಾದ ಬಹುಪಾಲು ಅವಶ್ಯಕತೆಗಳು ಈ ಸಂತೆಯಲ್ಲೇ ದೊರೆಯುತ್ತದೆ. ಈ ಆಧುನಿಕ ಯುಗದಲ್ಲೂ ಸಂತೆಗಳ ಪ್ರಾಮುಖ್ಯತೆಗೆ ಕುಂದು ಬಂದಿಲ್ಲ. ಇವರೆಲ್ಲ ಈಗೇನು ಮಾಡುತ್ತಿದ್ದಾರೆ ಸಂತೆಯಿಲ್ಲದ ವೇಳೆಯಲ್ಲಿ. ಮನೆಬಾಗಿಲಿಗೆ ವಸ್ತುಗಳು ದೊರಕಿದರೂ ಸಂತೆಯಲ್ಲಿ ಕೊಳ್ಳುವುದೇ ತೃಪಿಯ ಭಾವ. ಈ ಕೊರೋನ ಭಯವೆಲ್ಲ ದೂರವಾಗಿ ಆದಷ್ಟು ಬೇಗ ಸಂತೆ ಮತ್ತೆ ತುಂಬಿ ತುಳುಕಲಿ. ಇಳಿ ವಯಸ್ಸಿನ ಅಜ್ಜಿಗೂ ಹದಿಹರೆಯದ ಪುಟ್ಟನಿಗೂ ಆಧಾರವಾಗಿದ್ದ ಸಂತೆ ಮಾರುಕಟ್ಟೆ ಮತ್ತೊಮ್ಮೆ ಶುರುವಾಗಲಿ ಅದೇ ಗಿಜಿಗಿಜಿಯೊಂದಿಗೆ.
-ವಿಜೇತ ಮಳಲಗದ್ದೆ