ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/
ಒಂದೂ ಪಾತ್ರೆಯಿಲ್ಲದೇ
ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/
ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/
ಒಂದು ಹನಿ ಬಿದ್ದಿರದೇ ಕಾಮೋಡಿನ ಗೋಲದ ಮೇಲೆ/
ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು………..
ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/
ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ.ಎನ್ನುತ್ತಾರೆ ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ.
ಆಧುನಿಕತೆಯಲ್ಲಿ ದೈನಂದಿನ ಜೀವನ ಇಂದಿಗೆ ಯಾಂತ್ರಿಕವಾಗುತ್ತಿದೆ. ಹೊಸ ಜೀವನ ಶೈಲಿ ಹಳೆಯ ಬದುಕಿನ ವಿನ್ಯಾಸಕ್ಕೆ ಸಡ್ಡು ಹೊಡೆದು ನಿಂತಿದೆ. ಬದಲಾವಣೆಯ ಗಾಳಿ ಎಲ್ಲ ಕಡೆಯೂ ಇರುವಾಗಲೂ ಹೆಂಗಸಿನ ಮನೆಗೆಲಸದ ಹೊಣೆ ಮಾತ್ರ ಬದಲಾಗಿಲ್ಲ. ಅದೊಮ್ಮೆ ಅದಲು ಬದಲಾಗಬಾರದೇಕೆ? ಹೀಗೆಲ್ಲ ಯೋಚಿಸುವ ಎಳೆ ಹೆಣ್ಮನಗಳು ಆ ಕನಸು ಹೊತ್ತು ನಿಂತಿವೆ. ಹೊರ ದುಡಿಮೆಯಿಂದ ಸಂಜೆ ಹೈರಾಣಾಗಿ ಮನೆಗೆ ಬರುತ್ತಲೂ ಬೆಳಿಗ್ಗೆ ಕೆಲಸಕ್ಕೆ ಹೋಗುವ ತುರಾತುರಿಯಲ್ಲಿ ಬಿಟ್ಟು ಬಿಸಾಡಿ ಹೋದ ಪಾತ್ರೆ ಪಗಡ ಕಸ ರಾಶಿಗಳು ಕಣ್ಣುಕುಕ್ಕುತ್ತವೆ. ತೊಳೆಯದೇ ಹೋದ ಸಿಂಕು ಕೆಂಪಗಾಗಿರುತ್ತದೆ. ಅಲ್ಲಿ ಇಲ್ಲಿ ಮಂಚ ಹಾಸಿಗೆ ಮೇಲೆ ಹಾಗೇ ಬಿಟ್ಟು ಹೋದ ಬಟ್ಟೆಗಳು ಅಣಕಿಸುತ್ತವೆ. ತೊಳೆಯಲಿಟ್ಟ ಬಟ್ಟೆ, ಮಲೀನಗೊಂಡ ಒರೆಸದ ನೆಲ ಬಿಡಿಸಿಡದ ತರಕಾರಿ ಎಲ್ಲವೂ ಹೆಣ್ಣಿನದೇ ಕೆಲಸ ಎಂಬ ಗಂಡಿನ ಉದಾಸೀನಕ್ಕೆ ಮೈ ಕೆರಳುತ್ತದೆ. ಆದಾಗ್ಯೂ ಒಂದು ಆಶಾವಾದದಿಂದಲೆ ಬದುಕು ಸಹ್ಯವಾಗುತ್ತದೆ. ಎಂದಾದರೊಂದು ದಿನ ಇವೆಲ್ಲವನ್ನು ಗಂಡು ಮಾಡಿಟ್ಟರೆ ಹೆಣ್ಣಿನ ಸಂಪೂರ್ಣ ಪ್ರೀತಿಯೂಟ ಪತಿಯಾದವಗೆ ಸಲ್ಲುವುದು.
ಕವಯತ್ರಿ ಆಧುನಿಕ ಪ್ರಜ್ಞೆಯುಳ್ಳವಳು. ಹೊರಪ್ರಪಂಚದಲ್ಲೂ ಗಂಡಿಗೆ ಸಮನಾಗಿ ದುಡಿವ ಹೆಣ್ಣು ಮನೆಗೆ ಬರುತ್ತಲೂ ರಾಶಿರಾಶಿಯಾಗಿ ಬಿದ್ದಿರುವ ಮನೆಗೆಲಸಗಳ ನೆನೆದು ಹೈರಾಣಾಗುತ್ತಾಳೆ. ಮುಂಜಾನೆಯ ಪಾತ್ರಪಗಡಗಳೆಲ್ಲ ಇವಳಿಗಾಗೇ ಕಾಯುತ್ತಿರುತ್ತವೆ. ವಿವಾಹದೊಂದಿಗೆ ತಾಳಿ ಕುತ್ತಿಗೆಗೆ ಬೀಳುತ್ತಲೂ ಮನೆವಾಳ್ತೆಯ ಹೊಣೆಯೂ ಹೆಗಲೇರುತ್ತದೆ. ಆಗ ಹೆಣ್ಣಿನ ಮನಸ್ಸು ಈ ರೀತಿಯನ್ನು ಆಶಿಸುವುದು ತಪ್ಪಲ್ಲ. ಹಾಗಿದ್ದೂ ಸಮಾಜ ವ್ಯವಸ್ಥೆಯಲ್ಲಿ ಈಗಾಗಲೇ ಬೇರು ಬಿಟ್ಟಿರುವ ಮನೆಯ ದೇಖರೇಖಿಯ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಒಂದೊಮ್ಮೆ ಪತಿಯಾದವ ತಾನು ಬರುವವರೆಗೆ ಮನೆಯ ಒಪ್ಪ ಓರಣಗೊಳಿಸಿ ಮನೆ ನಳನಳಿಸುತ್ತಿರುವಂತೆ ಮಾಡಿ ಸಹಕರಿಸಿದರೆ ಎಂಬ ಗಾಳಿಗೋಪುರ ಕಟ್ಟುತ್ತಾರೆ ಕವಯತ್ರಿ. ತನ್ನ ಪ್ರೀತಿಯ ಜೊತೆ ರುಚಿಯಡುಗೆಯ ಮಾಡಿ ಬಡಿಸುವ ಹಂಬಲವನ್ನು ಹೊಂದಾಣಿಕೆಯ ಬದುಕಿನ ತತ್ವವನ್ನು ಕವನ ಬಿಂಬಿಸುತ್ತದೆ.
ಹೌದು. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನೌಕರಿ ಮಾಡುವ ಇಂದಿನ ಹೆಣ್ಣಿನ ಬದುಕು ಸದಾ ಜವಾಬ್ದಾರಿಗಳ ಕಾಲುವೆಯಲ್ಲಿಯೇ ಹರಿಯುತ್ತಿರುತ್ತದೆ. ಹೊರ ದುಡಿಮೆಯಲ್ಲಿ ಬಸವಳಿದು ಬರುವ ಉದ್ಯೋಗಸ್ಥ ಮಹಿಳೆಯ ಅಂತರ್ಗತ ಅಭಿಲಾಷೆಗೆ ಈ ಮೇಲಿನ ಕವನ ಒಂದು ಉದಾಹರಣೆ. ಆಧುನಿಕ ಜಗತ್ತಿನಲ್ಲಿ ಕುಟುಂಬದ ಸುಸ್ಥಿರ ಆರ್ಥಿಕತೆಗೆ ಗಂಡ ಹೆಂಡಿರಿಬ್ಬರೂ ದುಡಿಯುವ ಅನಿವಾರ್ಯತೆ ಬೆಳೆಯುತ್ತಿದೆ. ಹಿಂದೆಲ್ಲಾ ಬರೀಯ ಪಟ್ಟಣಗಳಲ್ಲಿ ಈ ಪರಿಸ್ಥಿತಿ ಇದ್ದರೆ ಇಂದು ಅದು ಬಹುಮಟ್ಟಿಗೆ ಹಳ್ಳಿಗಳಲ್ಲೂ ಕಾಣುವ ಸಹಜ ಸಂಗತಿ. ಆದರೆ ಹೊರಗೆ ದುಡಿವ ಗಂಡಿಗೆ ಮನೆಯ ಮೇಲುಸ್ತುವಾರಿಯ ಕೆಲಸ ಬಿಟ್ಟರೆ, ಉಳಿದ ಅ ದಿಂದ ಳ ವರೆಗಿನ ಎಲ್ಲ ಕೆಲಸಗಳು ಜವಾಬ್ದಾರಿಗಳು ಮನೆಯ ಹೆಂಗಸಿನ ಹೆಗಲ ಮೇಲೆ ಬಿದ್ದಿರುತ್ತವೆ. ಮನೆ ಗೆಲಸಕ್ಕೆ ಆಳು ಕಾಳುಗಳಿದ್ದಾಗಲೂ ಇದು ಕಡಿಮೆ ಏನೂ ಇರುವುದಿಲ್ಲ. ಕೆಲಸದವರಿಗೆ ಹೇಳಿ ಮಾಡಿಸುವ ಇಲ್ಲ ತಾನೇ ಮಾಡುವ ಅನಿವಾರ್ಯತೆ ಆಕೆಯದು.
ಮನೆಯ ಸ್ವಚ್ಛತೆಯ ವಿಚಾರ ಬಂದಾಗಲೂ ಸಮಾಜದ ಕಣ್ಣು ಹೆಣ್ಣನ್ನೆ ಬೊಟ್ಟು ಮಾಡಿ ತೋರುವುದು. ಮನೆಯ ಒಪ್ಪ ಓರಣಗೊಳಿಸುವ ಜವಾಬ್ದಾರಿ ಆಕೆಯದ್ದು ಎಂಬುದು ಅಲಿಖಿತ ಕಾನೂನು ಇದ್ದಂತೆ. ಅದೇ ಮನೆಯ ಸದಸ್ಯ ನಾದ ಗಂಡು ತನ್ನ ಬಟ್ಟೆ ಬರೆಗಳ ಮನಬಂದಂತೆ ಎಸೆದು ಹೋದರೂ ಅವೆಲ್ಲವನ್ನೂ ನೀಟಾಗಿ ತೊಳೆದು, ಇಲ್ಲ ತೊಳೆಯಿಸಿ, ಜೋಡಿಸಿ ಇಡುವ ಕೆಲಸ ಹೆಣ್ಣು ಮಾಡಬೇಕು. ಇರುವ ಮನೆ ಕಂಗೊಳಿಸಬೇಕೆಂದಾದಲ್ಲಿ ಆಕೆ ತನ್ನ ತನ್ನ ದೈಹಿಕ ನೋವು ದೌರ್ಬಲ್ಯಗಳ ಜೊತೆ ರಾಜಿ ಮಾಡಿಕೊಳ್ಳುತ್ತಲೇ ಹೊರ ದುಡಿಮೆಯನ್ನು ನಿಭಾಯಿಸುತ್ತಿರಬೇಕು.
ಹಾಗಾದರೆ ಇವುಗಳನ್ನೆಲ್ಲಾ ಗಂಡು ಮಾಡಿದರೆ ತಪ್ಪೇ? ಇಂದಿಗೆ ಈ ಪ್ರಶ್ನೆ ಕೇಳಿದರೆ ಉತ್ತರ ಇಲ್ಲ ಎನ್ನುವ ಪುರುಷರೂ ಮನೆಯಲ್ಲಿ ಆ ಕೆಲಸ ಮಾಡಲು ಒಪ್ಪಲಾರರು. ತಮ್ಮಿಂದಾಗದ ಕೆಲಸವೆಂದು ಕೈಚೆಲ್ಲಿ ಕೂತು ಜಾಣತನ ಮೆರೆವರು. ಮನೆಯ ಮುಂದಿನ ಅಂಗಳ ಗುಡಿಸಿ ನೀರು ಚಿಮುಕಿಸಿ ರಂಗೋಲಿಯಿಡುವುದು ಸುಂದರವಾದ ಸಾಂಪ್ರದಾಯಿಕ ಬದುಕಿನ ಚಿತ್ರಣ. ಆದರೆ ಅದನ್ನು ಹೆಣ್ಣೆ ಮಾಡಬೇಕೆಂಬ ಕಟ್ಟಳೆ ಎಷ್ಟು ಸರಿ? ಪುರುಷನೆಂಬ ಭಾವ ಈ ಕೆಲಸ ಮಾಡಲು ಪ್ರೇರೆಪಿಸಲಾರದು.
ಅಲ್ಲೊಬ್ಬ ಇಲ್ಲೊಬ್ಬ ಮುಂಜಾನೆ ಎದ್ದು ಮನೆಯಂಗಳದ ಕಸ ಗುಡಿಸುವ ಪುರುಷ ಮಹಾನುಭಾವರ ನಾನು ಕಂಡಿದ್ದಿದೆ. ಆದರೆ ಅವರ ಕೆಲಸವನ್ನು ನೋಡಿ ಆಡಿಕೊಳ್ಳುವ ಅಲ್ಪಮತಿ ಹೆಣ್ಣುಗಳನ್ನು ಕಂಡಿದ್ದಿದೆ. ಇವರಾದರೋ ಸವi ಬದುಕಿನ ಸಹ ಬಾಂಧವ್ಯದ ಅರ್ಥ ತಿಳಿಯದ ಗಾವಿಲೆಯರು. ತುಳಿಸಿಕೊಳ್ಳುವುದರಲ್ಲಿಯೇ ಖುಷಿಪಡುವ ಸಾದ್ವಿಗಳು. ಈ ಬದುಕಿನ ಕಟ್ಟಳೆಗಳೆ ಆಭರಣವೆಂದು ತಿಳಿದು ಅಲಂಕರಿಸಿಕೊಳ್ಳುವವರು, ಕಣ್ಣೀರಿನ್ನು ಕುಡಿದು ಬದುಕುತ್ತಲೇ ಸೋಗಿನ ನಗುವನ್ನು ತೋರುವ ಸೋಗಲಾತಿಯರು.
ಇನ್ನು ಪತಿಪತ್ನಿಯರ ಬದುಕಿನ ರಸನಿಮಿಷಗಳಿಗೆ ಸಾಕ್ಷಿಯಾಗಿ ಬಂದ ಕುಡಿಗಳು ತಂದೆಯ ಹೆಸರು ಹೊತ್ತೆ ಗುರುತಿಸಲ್ಪಡುತ್ತವೆ. ಮನೆಯ ಸಜ್ಜುಗೊಳಿಸಿ ಕುಡಿಗೆ ತನ್ನ ಗರ್ಭವ ಸಜ್ಜುಗೊಳಿಸಿ ಎಲ್ಲಕ್ಕೂ ತನ್ನ ಶ್ರಮ, ಸಮಯ, ಬದುಕನ್ನೆ ತ್ಯಾಗ ಮಾಡುವ ಸ್ತ್ರೀಗೆ ಸಮಾಜ ನೀಡುವ ಬಳುವಳಿ ಏನು? ತ್ಯಾಗ ಶ್ರಮ ಸಹನೆ ಮುಂತಾದವುಗಳಿಗೆ ಹೆಣ್ಣನ್ನು ಸಂಕೇತವಾಗಿಸಿ, ಅಧಿಕಾರ ಹೆಸರು ಗದ್ದುಗೆಗಳಿಗೆ ಭಾದ್ಯಸ್ಥನಾಗುವ ಯಜಮಾನನಾಗುವ ಪುರುಷನ ಗುಣ ತಾರತಮ್ಯದ ಸ್ವಭಾವ ಇಂದಿನ ಯುವ ಸ್ತ್ರೀ ಮನಸ್ಸುಗಳನ್ನು ಜಾಗೃತಗೊಳಿಸುತ್ತಿದೆ. ಹಾಗಾಗಿ ಯುವ ಪೀಳಿಗೆ ಕಾವ್ಯಾರಂತೆ ಯೋಚಿಸುವುದು ತಪ್ಪಲ್ಲ.
ಇನ್ನು ಇದೆಲ್ಲ ಬದಲಾಗಬೇಕೆಂದರೆ ಸಹಚರರ ಬೆಂಬಲಬೇಕು. ಅವರಲ್ಲಿ ಮಾನವ್ಯದ ಗುಣ ಮಿಳಿತವಾಗಿರಬೇಕು. ಪುರುಷನೆಂಬ ಕೊಂಬು ಚೂರಿಯಂತಿರಬಾರದು. ಬದುಕು ಹೊಂದಾಣಿಕೆ. ಬದಲಾವಣೆ ಜಗದ ನಿಯಮ. ಸಹಕಾರ ಸಹಾಯ ಸಹಧರ್ಮತೆ ಸಮವರ್ತತೆ ಸುಂದರ ಕುಟುಂಬ ಹಾಗೂ ಸಮಾಜವನ್ನು ಕಟ್ಟಬಲ್ಲದು.
-ನಾಗರೇಖಾ ಗಾಂವಕರ