ಸಂಜಯಂತಿಯಲ್ಲೊಂದು ಸುತ್ತು:ಪ್ರಶಸ್ತಿ ಪಿ

 

ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ.ಮೀ ಅಂತ. ಅರೆ! ಬನವಾಸಿ ಇಷ್ಟು ಹತ್ರವಾ.. ಹಾಗಾದ್ರೆ ಇವತ್ತು ಅಲ್ಲಿಗೆ ಹೋಗೇ ಊರಿಗೆ ಮರಳ್ಬೇಕು ಅಂದ್ಕೊಂಡೆ. ಆದ್ರೆ  ಮದುವೆ ಊಟ ಮುಗಿಸಿದ ಮೇಲೆ ಸೀದಾ ಸಾಗರದ ಬಸ್ಸು ಹತ್ತಿದ್ದಾಯ್ತು, ಬನವಾಸಿ ಮಿಸ್ಸಾಯ್ತು. ಆದರೆ ಸಿಗಬೇಕೆಂದಿದ್ದದ್ದು ಸಿಕ್ಕೇ ಸಿಗುತ್ತೆ ಅಂತಾರೆ ಹಲವರು. ಅವತ್ತು ಸಂಜೆ ನಾಳೆ ಸಿರಸಿ-ಸಿದ್ದಾಪುರದ ಹತ್ರವಿರೋ ನಾಣಿಕಟ್ಟಕ್ಕೆ ಬಾರೋ ಅಂತ ಅಣ್ಣನ ಬುಲಾವ್ ಬಂತು. ಸರಿ ಅಂತ ಶನಿವಾರ ಹೊರಟ ನನಗೆ ನಾಣೀಕಟ್ಟದಲ್ಲಿ ಇಳೀತಿದ್ದಾಗೆ ಕಂಡ ಬೋರ್ಡು ಬನವಾಸಿ-೨೧ ಕಿ.ಮೀ !! ಯಾಕೋ ಈ ಸಂಜಯಂತಿ ಅತ್ವಾ ಬನವಾಸಿ ತನ್ನ ಬಳಿ ಬಾ ಅಂತ ನನ್ನೇ ಈ ರೀತಿ ಕರೀತಿದ್ಯಾ ಅನುಸ್ತು. ಅಂತೂ ಅವತ್ತು ಮಧ್ಯಾಹ್ನದೊತ್ತಿಗೆ ಬನವಾಸಿಗೆ ಹೋದ್ವಿ, ನಾನು ನನ್ನಣ್ಣ.

ಹನ್ನೊಂದೂವರೆಗೆ ದೇವಸ್ಥಾನ ಬಾಗಿಲು ಅಂದರೊಬ್ರು. ಗರ್ಭಗೃಹ ಬಾಗ್ಲು ಹಾಕಿದ್ರೂ ಹೊರಗಡೆ ಇಂದನಾದ್ರೂ ನೋಡಿ ಬರೋಣ,ಇಷ್ಟು ಹತ್ರ ಬಂದೂ ಬನವಾಸಿ ನೋಡದೇ ಇದ್ರೆ ಸರಿ ಇರಲ್ಲ ಅಂತ ದೇವಸ್ಥಾನದ ಕಡೆ ಹೊರಟ್ವಿ.

ಇತಿಹಾಸ:

ಈಗಿನ ಬನವಾಸಿಯ ಮುಂಚಿನ ಹೆಸರೇ ಸಂಜಯಂತಿ. ಹನ್ನೆರಡನೇ ಶತಮಾನದಲ್ಲಿ ಈಗಿರೋ ಮಧುಕೇಶ್ವರ ದೇವಸ್ಥಾನವನ್ನು ಮೂಲತ: ಮಾಧವನಿಗೆ ಚಾಲುಕ್ಯ ರಾಜ ಕಟ್ಟಿಸಿದನಂತೆ.

ಚಾಲುಕ್ಯರಿಂದ ಸೋಂದಾ ಅರಸರ ತನಕ ಈ ದೇವಸ್ಥಾನ ಮಾರ್ಪಾಟುಗೊಳ್ಳುತ್ತಾ ಬಂದು ಈಗಿನ ಸ್ಥಿತಿಯಲ್ಲಿ ನಿಂತಿದೆಯಂತೆ. ಈ ದೇವಾಲಯದ ಬಗೆಗಿನ ಹೆಚ್ಚಿನ ಇತಿಹಾಸ ಇದೇ ದೇವಸ್ಥಾನದ ಸುತ್ತಮುತ್ತ ಸಿಕ್ಕಿರೋ ೧೨ ಶಾಸನಗಳಿಂದ ಪಡೆಯಬಹುದಂತೆ. ಆರನೇ ಶತಮಾನದಲ್ಲೇ ಬನವಾಸಿಗೆ ಭೇಟಿ ನೀಡಿದ್ದ ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ (630-644) ಬನವಾಸಿಯನ್ನು ಕೊಂಕನಪುಲೋ ಎಂದು ಕರೆದು ಬನವಾಸಿಗೆ ಕೊಂಕಣಪುರ ಎಂದೂ ಹೆಸರು ಬಂದಿತ್ತಂತೆ.

ದೇವಸ್ಥಾನದ ಪ್ರವೇಶಿಸುತ್ತಿದ್ದ ನಮಗೆ ಮೆಟ್ಟಿಲುಗಳ ಇಕ್ಕೆಲಗಳಲ್ಲಿದ್ದ ಆನೆಗಳು ಸ್ವಾಗತಿಸಿದವು. ಆನೆಗಳ ಸೊಂಡಿಲಗಳು ಸಾಮಾನ್ಯವಾಗಿರದೇ ಅಪ್ಸರೆಯರಿಂದ ಸುತ್ತುವರಿದು ಮತ್ತೊಮ್ಮೆ ಆ ಆನೆಗಳತ್ತಲೇ ನಮ್ಮ ದೃಷ್ಟಿಯನ್ನು ಸೆಳೆದವು. ಅಲ್ಲಿಂದ ಒಳಬರುತ್ತಲೇ ಪೂರ್ವಾಭಿಮುಖವಾಗಿರುವ ದೇಗುಲಕ್ಕೆ ಅಡ್ಡ ನಿಂತ ಧ್ವಜ ಸ್ಥಂಬ ಎದುರಾಯಿತು. ಧ್ವಜ ಸ್ಥಂಭದ ಮೇಲೆ ಎಲ್ಲೆಡೆ ಇರುವಂತೆ ಕೂತಿರೋ ನಂದಿಗೊಮ್ಮೆ ಮನಸ್ಸಲ್ಲೇ ವಂದಿಸಿ ಮುಂದೆ ಬರುವಾಗ ದೇಗುಲಕ್ಕೆ ಅಭಿಮುಖನಾಗಿರೋ ಸ್ವರ್ಗಾಧಿಪತಿ ಇಂದ್ರನೂ ಕಂಡನು.  ಧ್ವಜಸ್ಥಂಭದ ಎಲ್ಲೆಡೆ ಸಾಮಾನ್ಯ. ಆದರೆ ಅದರ ಮುಂದೆ ಕೆಳದಿ,ಇಕ್ಕೇರಿ ಇತ್ಯಾದಿ ದೇವಸ್ಥಾನಗಳಲ್ಲಿ ಇಲ್ಲದ ಇಂದ್ರ ಇಲ್ಲಿ ಇರುವುದರಲ್ಲಿ ಏನೋ ವೈಶಿಷ್ಟ್ಯವಿದೆ ಅನಿಸಿದರೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.

ಹಾಗೇ ಮುಂದೆ ಬಂದ ನಾವು ಮೊದಲು ಪ್ರವೇಶಿಸಿದ್ದು ಮಧುಕೇಶ್ವರನ ಸನ್ನಿಧಿಗೆ.ದೇಗುಲ ಪ್ರವೇಶಿಸುವವರನ್ನು ನಮಗಿಂತಲೂ ಎತ್ತರದ ನಂದಿ ಬಾಗಿಲಲ್ಲೇ ಸ್ವಾಗತಿಸುತ್ತಾನೆ. ಹಾಗೇ ಅಕ್ಕಪಕ್ಕದಲ್ಲಿ ಹಲವಾರು ಕುಸುರಿ ಕೆತ್ತನೆಯ ಕಂಬಗಳು. ಪ್ರತೀ ಕಂಬದಲ್ಲಿ , ಸುತ್ತಮುತ್ತಲ ನೆಲದಲ್ಲಿ ಅಲ್ಲಲ್ಲಿ ಬ್ರಾಹ್ಮಿ ಲಿಪಿಯ ಬರಹಗಳನ್ನು ಕಾಣಬಹುದು.ಕೂಲಂಕುಷವಾಗಿ ಪರಿಶೀಲಿಸಿದರೆ ಇಲ್ಲಿರೋ ಹಲವಾರು ಬರಹಗಳು ಬ್ರಾಹ್ಮೀ ಬಲ್ಲವರಿಗೆ, ಇತಿಹಾಸ ಪ್ರಿಯರಿಗೆ  ಕುತೂಹಲಕಾರಿ ಮಾಹಿತಿಗಳನ್ನೊದಗಿಸಬಹುದೇನೋ. 

ಆಶ್ಚರ್ಯವೋ , ನಮ್ಮ ಭಾಗ್ಯವೋ ಎನ್ನುವಂತೆ ಅಂದು (೧೬-೨-೨೦೧೩) ಅಲ್ಲಿ ಶತರುದ್ರ ಸೇವೆ ನಡೆಯುತ್ತಿತ್ತು. ಅದು ಮುಗಿಯೋ ಹೊತ್ತಿಗೆ ನಾವು ದೇವಸ್ಥಾನ ತಲುಪಿದ್ವಿ ! ಚೌಕಾಕಾರದ ಗರ್ಭಗೃಹದಲ್ಲಿ ಬೆಳ್ಳಿಯ ಮುಖವಾಡದಿಂದ ಅಲಂಕೃತನಾದ ಮಧುಕೇಶ್ವರನಿಗೆ ನಮಸ್ಕರಿಸಿದೆವು. ಅಡ್ಡಬಿದ್ದ ನಾವು ಹಾಗೇ ತಲೆಯೆತ್ತಿದಾಗ ಕಂಡಿದ್ದು ಮಧುಕೇಶ್ವರನ ಎದುರಿಗೆ, ಬಲಭಾಗದಲ್ಲಿ(ನಮ್ಮ ಎಡಭಾಗದಲ್ಲಿದ್ದ) ಆಳೇತ್ತರದ ಮಂಟಪ. ಅದಕ್ಕೆ ತ್ರಿಲೋಕ ಮಂಟಪ ಎಂದೂ ಹೆಸರಿದೆಯಂತೆ.  ಇದನ್ನು ೧೬೧೮ ರಲ್ಲಿ ಸ್ಥಾಪಿಸಲಾಯಿತಂತೆ. ಕೆಳಗಡೆ ಮಹಾವಿಷ್ಣುವಿನ ಆಸನ ಆದಿಶೇಷ ಮಂಟಪವನ್ನೂ ಹೊತ್ತಂತೆ ಚಿತ್ರಿಸಲಾಗಿದೆ. ಕೆಳಗಿರುವ ಮತ್ಸ್ಯ, ಅದರ ಮೇಲ್ಗಣ ಆದಿಶೇಷ ಪಾತಾಳಲೋಕವನ್ನು ಪ್ರತಿನಿಧಿಸುತ್ತದೆಯಂತೆ. ಕೆಳಗಡೆ ಎಂಟು ದಿಕ್ಕುಗಳಿಗೆ ಒಂದೆಂಬಂತೆ ಅಷ್ಟಗಜಗಳಿವೆ.ಮಧ್ಯದ್ದು ಭೂಲೋಕ. ಇದರಲ್ಲಿ ಅನೇಕ ರಾಜರ ಚಿತ್ರಗಳು ಭೂಲೋಕವನ್ನು ಪ್ರತಿನಿಧಿಸುತ್ತವೆ.  ಅದರ ಮೇಲಿನದು ಸ್ವರ್ಗಲೋಕ. ಸಪತ್ನೀಕನಾದ ದೇವರಾಜ ಇಂದ್ರ ಇದನ್ನು ಧ್ವನಿಸುತ್ತಾನೆ. ಮಂಟಪದ ಮೇಲ್ಭಾಗದಲ್ಲಿ ಅಷ್ಟದಿಕ್ಪಾಲಕರಾದ ಇಂದ್ರ(ಪೂರ್ವ), ವರುಣ(ಪಶ್ಚಿಮ), ಕುಬೇರ, ಯಮ, ಅಗ್ನಿ(ಆಗ್ನೇಯ),ನಿರುತಿ, ಈಶಾನ, ವಾಯು ಗಳೂ ವಿರಾಜಮಾನರಾಗಿದ್ದಾರೆ. ಈ ಮಂಟಪಕ್ಕೆ ಪ್ರತೀ ಹುಣ್ಣಿಮೆಯ ದಿನ ಪೂಜೆಯಂತೆ.

ಆ ಮಂಟಪದ ವೈಶಿಷ್ಟ್ಯತೆಯನ್ನು ಕೇಳುತ್ತಿದ್ದಂತೆಯೇ ಅಲ್ಲಿನ ಅರ್ಚಕರು ನಮ್ಮನ್ನು ಇಲ್ಲಿನ ವಿಶೇಷತೆಗಳ ಬಗ್ಗೆ ಹೇಳುತ್ತೇನೆ ಬನ್ನಿ ಎಂದು ಮಧುಕೇಶ್ವರನ ಎಡಭಾಗದಲ್ಲಿದ್ದ ಪಾರ್ವತಿ ದೇವಿಯ ಗುಡಿಗೆ ಕರೆದುಕೊಂಡು ಹೋದರು. ತಾಯಿ ಪಾರ್ವತಿಗೆ ನಮಸ್ಕರಿಸುತ್ತಿದ್ದಂತೆಯೇ ಅಲ್ಲಿಂದ ನಂದಿಯನ್ನು ನೋಡಿ ಎಂದರು. ಮಧುಕೇಶ್ವರನ ಎದುರಿಗಿರುವ ನಂದಿಯ ಒಂದು ಕಣ್ಣು ಪಾರ್ವತಿ ದೇವಿಯ ಎದುರಿಗೆ ನಿಂತರೆ ಕಾಣುತ್ತದೆ ! ಹಾಗಾಗಿ ನಂದಿಯ ಒಂದು ಕಣ್ಣಿನಿಂದ ದೇವಿಯನ್ನೂ ಕಾಯುತ್ತಿರುತ್ತಾನೆ ಎಂಬ ಪ್ರತೀತಿಯಂತೆ !. ಕೈಮುಗಿದು ಮಧುಕೇಶ್ವರನ ದೇಗುಲದತ್ತ ಹೆಜ್ಜೆ ಹಾಕುವಾಗ ಒಂದು ಶಿವಲಿಂಗ ಸಿಗುತ್ತದೆ. ಇದಕ್ಕೆ ಚಂಡಿಕೇಶ್ವರ ಎಂದು ಹೆಸರು. ಚಂಡಿಕೇಶ್ವರನಿಗೆ ಹಾಗೇ ನಮಸ್ಕರಿಸಿದರೆ ಮುಟ್ಟುವುದಿಲ್ಲವಂತೆ!. ಆ ದೇವನಿಗೆ ಚಪ್ಪಾಳೆ ಹೊಡೆದು ನಮಸ್ಕರಿಸಬೇಕು. ಚಪ್ಪಾಳೆ ಹೊಡೆದು ಚಂಡಿಕೇಶ್ವರನಿಗೆ ನಮಸ್ಕರಿಸಿ ಹಾಗೇ ಮಧುಕೇಶ್ವರನ ಗುಡಿಯ ಎಡಭಾಗದಲ್ಲಿನ ಗುಡಿಯತ್ತ ಬಂದೆವು.

ಹಾಗೇ ಬರುವಾಗ ಅಲ್ಲಿನ ಗೋಡೆಯ ಮೇಲೆ ಗಂಧವನ್ನು ಲೇಪಿಸಿದ್ದ ಕಡಲೆಯನ್ನು ತಿನ್ನುತ್ತಿರೋ ಕಡಲೆಮಾರುತಿ ಮತ್ತು ಕಬ್ಬು ತಿನ್ನೋ ಮಾರುತಿಯನ್ನು ತೋರಿಸಿದರು. ಅವು ಎಷ್ಟು ಸಣ್ಣ ಇದೆಯೆಂದರೆ ಉಳಿದಿರೋ ದೊಡ್ಡ ವಿಗ್ರಹಗಳ ಮಧ್ಯ ಅವು ಗೊತ್ತಾಗುವುದೇ ಇಲ್ಲ. ಭಟ್ಟರು ತೋರಿಸದಿದ್ದರೆ ಹಾಗೆರಡು ಮಾರುತಿಗಳು ಬನವಾಸಿಯಲ್ಲಿ ಇವೆ ಎಂಬುದೇ ನಮಗೆ ತಿಳಿಯುತ್ತಿರಲಿಲ್ಲ. ಹಾಗೆಯೇ ಮುಂದೆ ಬಂದಾಗ ಪಾಳುಬಿದ್ದ ವೀರಭದ್ರನ ಗುಡಿಯನ್ನು ಹೊಕ್ಕೆವು. ಅಲ್ಲಿ ಒಂದು ಶಿವಲಿಂಗವಿದೆಯಷ್ಟೆ.

ಅಲ್ಲೇ ೧೬೦೮ರಲ್ಲಿ ತಯಾರಾದ ರಥದ ಬಗ್ಗೆ ಮತ್ತು ಅದನ್ನು ಎಳೆಯುವ ಹಗ್ಗದ ಬಗ್ಗೆ ತಿಳಿದೆವು. ಆ ರಥ ಸುಮಾರಷ್ಟು ದೊಡ್ಡದೇ ಇದೆ. ಬನವಾಸಿಯ ಸುತ್ತಮುತ್ತಲ ಊರುಗಳಲ್ಲಿ ಕಷ್ಟದ ಕೆಲಸ ಅನ್ನುವುದಕ್ಕೆ ಬನವಾಸಿ ರಥ ಎಳೆದಂಗೆ ಅನ್ನೋ ಮಾತೇ ಇದೆಯಂತೆ ! ಆದರೆ ಆ ದಪ್ಪನೇ ರಥದ ಹಗ್ಗ ೪೦೦೦ ಜನ ಎಳೆಯುವಷ್ಟು ದಪ್ಪಗಿದೆ ಎಂಬುದು ಸ್ವಲ್ಪ ಅತಿರಂಜಿತ ಎನಿಸಿದರೂ ಅದರ ದಪ್ಪ ೪೦೦೦ ಅಲ್ಲದಿದ್ದರೂ ೪೦೦ ಜನ ಎಳೆದರೂ ತುಂಡಾಗದಂತೆ ಕಂಡಿದ್ದು ನಿಜ. ಪ್ರಪಂಚದಲ್ಲಿ ಎಲ್ಲೂ ಇಲ್ಲದ ಒಂದು ಕಲ್ಲಿನ ಕಲ್ಲು ಮಂಟಪ ಇಲ್ಲೇ ಹತ್ತಿರದಲ್ಲಿ ಇದೆ ಅಂದರು ಭಟ್ಟರು.ಅದೆಲ್ಲಿದೆ ಎಂದು ಕೇಳುವಷ್ಟರಲ್ಲಿ ಅದು ಇಲ್ಲಿಂದ ಒಂದು ಕಿಲೋಮೀಟರ್ ದೂರ ಎಂದಷ್ಟೇ ಹೇಳಿ ಹೊರಟುಹೋದರು. ಅದೆಲ್ಲಿದೆ ಎಂದು ತಿಳಿಯುವ ಆಸೆಗೆ ಸ್ಥಳೀಯರನ್ನು ಕೇಳಬೇಕಷ್ಟೆ.

ಅಲ್ಲಿಂದ ಹೊರಬರುತ್ತಿದ್ದಂತೆ ಇಡೀ ದೇಶದಲ್ಲಿನ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿಕ್ಕಾಗದಿದ್ದವರು ಬನವಾಸಿಗೆ ಬಂದರೆ ಸಾಕೆಂಬ ಪ್ರತೀತಿ ಇದೆ. ಇಲ್ಲೇ ಸುತ್ತ ಒಂದು ಪ್ರದಕ್ಷಿಣೆ ಹಾಕಿ, ದೇಶದೆಲ್ಲೆಡೆಯ ಈಶ್ವರರು, ದೇವರು ಸಿಗುತ್ತಾರೆ ಅಂದರು ಭಟ್ಟರು. ಹಾಗೇ ಪ್ರದಕ್ಷಿಣೆ ಹಾಕಿದೆವು. ಅಲ್ಲೆಲ್ಲಾ ಮೂರ್ತಿಗಳು, ಅವುಗಳಿಗೊಂದು ಗೂಡಂತ ಮಂಟಪ, ಕೆಲವು ಚಿಕ್ಕ ಗುಡಿಗಳೂ ಕಂಡವು. ಮೊದಲು ಕಂಡದ್ದು 

ಅಮೃತೇಶ್ವರ.ಆಮೇಲೆ ಯಮ, ಕೇದಾರೇಶ್ವರ, ಚಿಂತಾಮಣಿ ಗಣಪತಿ, ನಿರರುತಿ ಮುನಿ(ಇದರ ಬಗ್ಗೆ ವಿವರಣೆ ಗೊತ್ತಿಲ್ಲ), ಲಕ್ಷ್ಮಿ ನರಸಿಂಹ(ಉಗ್ರ ನರಸಿಂಹನ ಶಾಂತರೂಪ), ದುಂಡಿರಾಜ ಗಣಪತಿ, ರಾಮೇಶ್ವರ, ವರುಣ, ವೆಂಕಟರಮಣ, ಈ ಭಾಗಕ್ಕೆ ಅಪರೂಪವೆನಿಸೋ ಅಮೃತಶಿಲೆಯ ಶ್ರೀರಾಮ,ಉಮಾಮಹೇಶ್ವರ, ಬಸವಲಿಂಗೇಶ್ವರ,ವಾಯು, ಸೂರ್ಯನಾರಾಯಣ, ಅರ್ಧಗಣಪತಿಗೆ ನಮಸ್ಕರಿಸಿದೆವು. ಅರ್ಧಗಣಪತಿ ಇಲ್ಲಿನ ಮತ್ತೊಂದು ವಿಶೇಷತೆ. ಹೆಸರೇ ಹೇಳುವಂತೆ ಗಣಪತಿಯನ್ನು ಸೀದಾ ಮಧ್ಯಕ್ಕೆ ಸೀಳಿದಂತೆ ಬಲಭಾಗ ಮಾತ್ರ ಇಲ್ಲಿದೆ ! ಎಡಭಾಗ ಗೋಕರ್ಣದಲ್ಲಿದೆಯಂತೆ. 

ಅದಾದ ನಂತರ ಪರಶುರಾಮ, ಆದಿಶೇಷ, ಕೇಶವ, ಕುಬೇರರನ್ನೂ ಕಂಡೆವು. ಕುಬೇರನ ದಿಕ್ಕಾದ ಉತ್ತರಕ್ಕಿರುವ ಪ್ರವೇಶದ್ವಾರವನ್ನು ಈಗ ಮುಚ್ಚಲಾಗಿದೆ. ದೇಗುಲದ ಒಂದು ಸುತ್ತಿನ ಪ್ರದಕ್ಷಿಣೆಯ ನಂತರ ಅದರ ಹೊರಭಾಗದ ವಾಸ್ತುಶಿಲ್ಪದ ಬಗ್ಗೆ ಕಣ್ಣಾಡಿಸಿದೆವು. ಈ ಮಧುಕೇಶ್ವರನ ದೇಗುಲಕ್ಕೆ ಒಂದು ನವರಂಗವಿದೆ. ಅದಕ್ಕೆ ಮೂರು ಪ್ರವೇಶದ್ವಾರಗಳು. ಎದುರಿನ ದ್ವಾರದಲ್ಲಿ ನಂದಿ ಸಿಕ್ಕರೆ ಪಕ್ಕದ ದ್ವಾರಗಳು ಮಹಿಷಮರ್ಧಿನಿ,ಗಣೇಶ, ವೀರಭದ್ರರ ಗುಡಿಗಳಿಂದ ಬರುವಂತವು. ಇಲ್ಲಿನ ಶಿಲ್ಪಗಳು ಕಲ್ಯಾಣರ ಚಾಲುಕ್ಯ್ರರ ಶೈಲಿಯಲ್ಲಿದೆಯಂತೆ. ನವರಂಗದ ಮುಂಭಾಗದ ಪ್ರವೇಶದ್ವಾರದಲ್ಲಿ ಆದಿಮಾಧವ ಮತ್ತು ಕಾರ್ತೀಕೇಯರೂ ಇದ್ದಾರೆ. ಈದೇಗುಲದ ಶಿಖರ ವಿಜಯನಗರ-ಸೋಂದಾ ಶೈಲಿಯದು.ಸುಖನಾಸಿ ಕದಂಬ-ನಾಗರ ಶೈಲಿಯಲ್ಲಿದ್ದು ಪಿರಮಿಡ್ ತರ ಮೇಲಕ್ಕೇಳುತ್ತದೆ. ಇಲ್ಲೆಲ್ಲಾ ನಂದಿ, ದಶಾವತಾರ, ದ್ವಾದಶಾದಿತ್ಯರು, ದಿಕ್ಪಾಲಕರು, ನಾಗಬಂಧಗಳನ್ನು ಕಾಣಬಹುದು.

ದೇವಾಲಯದಿಂದ ಹೊರಬಂದ ಮೇಲೆ ಹತ್ತಿರದಲ್ಲೇ ಆದಿ ಮಧುಕೇಶ್ವರ, ಆದಿ ಕದಂಬೇಶ್ವರ, ಅಲ್ಲಮ ಪ್ರಭು ದೇವಾಲಯಗಳಿವೆ ಅಂತ ತಿಳಿದೆವು. ಸರಿ, ಇಲ್ಲಿಯವರೆಗೆ ಬಂದ ಮೇಲೆ ಅದನ್ನೂ ನೋಡಿದರಾಯ್ತೆಂದು ಹೊರಟೆವು. ಹತ್ತಿರದಲ್ಲೇ ಪಂಪವನ ಎಂಬುದಿದೆ. ದೇವಸ್ಥಾನದ ಹಿಂದಿನಿಂದ ಹೋಗೋ ರಸ್ತೆಯಲ್ಲಿ ಹೋಗಿ ಮೊದಲ ತಿರುವಿನಲ್ಲಿ ಕೆಳಕ್ಕಿಳಿದು ಸಾಗಿದರೆ ಸಿಗುವುದೇ ಆದಿಕವಿ ಪಂಪ ಉದ್ಯಾನವನ. ಇಲ್ಲಿ ನವಗ್ರಹ ಸಸ್ಯಗಳನ್ನು, ಅನೇಕ ಔಷಧೀಯ ಮರಗಳನ್ನೂ ಬೆಳೆಸಲಾಗಿದೆ. ಅಲ್ಲಿರೋ ಸಿಮೆಂಟ್ ದಾರಿಯಲ್ಲಿ ಸಾಗಿದರೆ ಮೊದಲು ಸಿಗುವುದು ಆದಿ ಮಧುಕೇಶ್ವರ. ಅದಕ್ಕೆ ಸುತ್ತ ಬೇಲಿ ಹಾಕಿ ಸುಭದ್ರ ವ್ಯವಸ್ಥೆ ಮಾಡಿದ್ದರೂ ಕಲ್ಲಿನ ದೇಗುಲಕ್ಕೆ ಸುಣ್ಣ ಬಳಿದ ಪರಿ ಯಾಕೋ ಇಷ್ಟವಾಗಲಿಲ್ಲ. ಪಕ್ಕದಲ್ಲೇ ದುರ್ಗಾದೇವಿಯ ಗುಡಿಯಿದೆ. ಪಾಳುಬಿದ್ದಂತಿರೋ  ಪಂಪವನ, ಪಾಚಿಗಟ್ಟಿದ ಕೆರೆ ಅನಾಥ ಭಾವ ಸಾರುವಂತಿತ್ತು. ಅಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜಿ, ಪೇರಲೆ ಹಣ್ಣು ಕೊಯ್ಯಲು ಬಂದಿದ್ದ ಹುಡುಗನನ್ನು ಬಿಟ್ಟರೆ ನಾನು ಮತ್ತು ನನ್ನಣ್ಣ ಇಬ್ಬರೆ. ಈ ಉದ್ಯಾನ ಪಾಳು ಬಿದ್ದಿರುವುದರಿಂದ ಜನ ಬರುತ್ತಿಲ್ಲವೋ ಅಥವಾ ಜನ ಬರುತ್ತಿಲ್ಲವೆಂದು ಇದು ಪಾಳುಬಿದ್ದಿದೆಯೋ ತಿಳಿಯಲಿಲ್ಲ 🙁 

ಪಂಪವನದಿಂದ ಹೊರಬಂದಾಗ ಅದರ ಎಡಭಾಗದಲ್ಲಿ  ಪಂಪವನದ ಬಲಭಾಗದಲ್ಲಿ ಪೇಟೆ ಕಡೆ ಹೋಗೋ ರಸ್ತೆ ಕಂಡಿತು.ಅದರಲ್ಲಿ ಹೋದಾಗ ವಸ್ತು ಸಂಗ್ರಹಾಲಯ ಎಂಬೋ ಬೋರ್ಡು ಕಂಡಿತು. ಆದರೆ ಹತ್ತಿರ ಹೋದಾಗ ಅದರ ಗೇಟಿಗೇ ಬಾಗಿಲು.  ಅಲ್ಲೇ ಪಕ್ಕದಲ್ಲಿ ಜೀರ್ಣೋದ್ದಾರಕ್ಕೆ ರೆಡಿಯಾದಂತೆ ಪ್ಲಾಸ್ಟಿಕ್ ಕೊಟ್ಟೆಗಳನ್ನು ಹೊದ್ದ ದೇಗುಲವೊಂದಿತ್ತು. ಅದು ಆದಿ ಕದಂಬೇಶ್ವರನೋ, ಅಲ್ಲಮ ಪ್ರಭುವೋ ಅಥವಾ ಈಗಷ್ಟೇ ತಲೆ ಎತ್ತುತ್ತಿರೋ ಹೊಸ ದೇವರೋ ಎಂಬ ವಿಷಯ ಅದನ್ನು ಮುಚ್ಚಿದ್ದ ಪ್ಲಾಸ್ಟಿಕ್ ಕವರುಗಳ ಒಳಗೇ ಮುಚ್ಚಿಹೋಗಿತ್ತು. ನೀವು ಮುಂದಿನ ಬಾರಿ ಹೋದಾಗ ಇವುಗಳನ್ನೂ ನೋಡಲು ಪ್ರಯತ್ನಿಸಬಹುದು.

ಬನವಾಸಿಯ ಬಗ್ಗೆ: ದೇಗುಲದ ಎದುರಿಗೆ ೧೫ ರೂ ಪಾರ್ಕಿಂಗ್ ಚಾರ್ಜು, ಇಲ್ಲಿ ೨ ಪೆಟ್ರೋಲ್ ಪಂಪುಗಳು, ವಸತಿಗೃಹಗಳು ಇವೆ. ಹಾಗಾಗಿ ವಾಹನ್ದಲ್ಲಿ ಹೋಗೋರಿಗೆ ಸಮಸ್ಯೆಯಾಗದು. ಸಿರಸಿಯಿಂದ ಬೇಕಷ್ಟು ಬಸ್ಸುಗಳೂ ಇವೆ.

ತಲುಪುವ ಬಗೆ: ಸಿರಸಿಯಿಂದ : ೨೩ ಕಿ.ಮೀ. ಅರ್ಧಘಂಟೆಯ ಪಯಣ. ಸಾಗರದಿಂದ: ಸಿರಸಿ-ಬನವಾಸಿ.ಒಂದೂಮುಕ್ಕಾಲು ಘಂಟೆ ಪಯಣ.   ಸಿರಸಿಯ ಮಾರ್ಗದಲ್ಲೇ ಸಿಗುವ ನಾಣಿಕಟ್ಟಾದಲ್ಲೆ ಬಲಕ್ಕೆ ತಿರುಗಿದರೆ ಹರೀಶಿಯವರೆಗೆ ಹೋಗುವುದು.(ನಾಣಿಕಟ್ಟಾ-ಹರೀಶಿ ೮ ಕಿ.ಮೀ). ಅಲ್ಲಿಂದ ಬಲಕ್ಕೆ ಹೋದರೆ ಗುಡ್ನಾಪುರ, ಚಿಕ್ಕ ದ್ಯಾವಸಿ, ದ್ಯಾವಸಿ, ಬನವಾಸಿ. ಆದರೆ ಈ ಮಾರ್ಗದಲ್ಲಿ ಒಂದೋ ಎರಡೋ ಬಸ್ಸುಗಳಿವೆ. ವಾಹನದಲ್ಲಿ ಹೋಗೋರಾದರೆ ಹೋಗಬಹುದು. ಈ ಮಾರ್ಗದಲ್ಲಿ ಹೋದರೆ ಇಲ್ಲಿನ ಪ್ರಸಿದ್ದ ಗುಡ್ನಾಪುರದ ಈಶ್ವರ ದೇಗುಲವನ್ನೂ ನೋಡಬಹುದು. ಸಾಗರದಿಂದ ಸೊರಬದ ಮೂಲಕವೂ ಬನವಾಸಿಗೆ ಹೋಗಬಹುದು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ರುಕ್ಮಿಣಿ ನಾಗಣ್ಣವರ

ಚಂದದ ಬರಹ ಸರ್

sharada moleyar
sharada moleyar
11 years ago

ಚಂದದ ಬರಹ ಸರ್

prashasti
11 years ago

ಧನ್ಯವಾದಗಳು ಶಾರದಾ ಮತ್ತು ರುಕ್ಮಿಣಿ ಅವ್ರೆ 🙂
ಸರ್ ಎಲ್ಲಾ ಬೇಡ್ರಿ !

Ganesh
11 years ago

ನಮ್ಮೂರ ವರ್ಣನೆ ಚೆನ್ನಾಗಿದೆ ಸರ್.ಬನವಾಸಿಯ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಇದೆ. ನೃತ್ಯಮಂಟಪ (ನಂದಿಯ ಎದುರಿಗಿರುವ ಮಂಟಪ) ಮತ್ತು ಸುತ್ತಲಿರುವ ನಾಲ್ಕು ಕಂಭಗಳ ವಿಶೇಷ ಅಂದರೆ ಆ ಕಂಭಗಳಲ್ಲಿ ಮೇಲ್ಗಡೆ ಸರಿಯಾಗಿ ಕೆಳಗಡೆ ಉಲ್ಟಾ ಪ್ರತಿಬಿಂಬಗಳು ಕಾಣುತ್ತೆ.ಅಂದಂತೆ "ಕಲ್ಲು ಮಂಟಪ" ದೇವಾಲಯದ ಆವರಣದಲ್ಲಿಯೇ ಇದೆ, ಸರಿಯಾಗಿ ಉತ್ತರ ದ್ವಾರದ ವಿರುದ್ಧ ದಿಶೆಯಲ್ಲಿ. ಇನ್ನು ಪ್ಲಾಸ್ಟಿಕ್ ಮುಚ್ಚಿದ್ದ ಈಗಷ್ಟೇ ತಲೆ ಎತ್ತುತ್ತಿರುವ ದೇವಸ್ಥಾನ ಅಂದರೆ  ಅದು ಪರಶುರಾಮ ದೇವಸ್ಥಾನ. ದೇವಾಲಯದ ಆವರಣದಲ್ಲಿರುವ ಪರಶುರಾಮ ದೇವಸ್ಥಾನ ಹಾಳಾಗಿದೆ, ರಿಪೇರಿ ಮಾಡೋಕೆ archaeological department ಅವರು ಬಿಡುತ್ತಿಲ್ಲ. ಅದಕ್ಕಾಗಿ ಹೊಸದಾಗಿ ದೇವಸ್ಥಾನ ನಿರ್ಮಾಣ ನಡೆಯುತ್ತಿದೆ. ನಮ್ಮ ತಂದೆಯವರು ದೇವಾಲಯದಲ್ಲೇ ಕೆಲಸ ಮಾಡ್ತಾ ಇದ್ದಾರೆ.ಪ್ರಾಚೀನ ಕಾಲದ ಈ ದೇವಾಲಯದ ಕಡೆಗೆ ದುರ್ಲಕ್ಷ್ಯ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ನಮ್ಮೂರಿನ ಬಗ್ಗೆ ಓದಿ ಖುಷಿಯಾಯಿತು. ಈ ತಿಂಗಳ ೨೦.೨೧ ಕ್ಕೆ ಬನವಾಸಿಯಲ್ಲಿ ರಥೋತ್ಸವ ಇದೆ ಬಂದುಬಿಡಿ ಎಲ್ಲರೂ.

ತ್ರಿಲೋಚನ ರಾಜಪ್ಪ
ತ್ರಿಲೋಚನ ರಾಜಪ್ಪ
11 years ago

ತುಂಬಾ ಚೆನ್ನಾಗಿದೆ! ಕನ್ನಡ ವಿಕಿ ಪೀಡಿಯಾದಲ್ಲೂ ಈ ಸ್ಥಳದ ಬಗ್ಗೆ ಈ ವಿಷಯವನ್ನೇ ನಮೂದಿಸಿ! http://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F

5
0
Would love your thoughts, please comment.x
()
x