ಶ್ರೀ ಗುರೂಜಿ ಹೇಳಿದ ಕಥೆಗಳು: ಹೊರಾ.ಪರಮೇಶ್ ಹೊಡೇನೂರು


ಅದೊಂದು ಶನಿವಾರದ ಮಧ್ಯಾಹ್ನದ ಬಿಡುವಿನ ಸುದಿನ. ಅರಕಲಗೂಡಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರ ಸಲಹೆ ಮಾರ್ಗದರ್ಶನ ಪಡೆಯಲು, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಹೊಡೇನೂರು ಅವರ ಸಲಹೆಯಂತೆ, ನಿಯೋಜಿತ ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಶಿವಣ್ಣ ಕೆರೆಕೋಡಿ ಮತ್ತು ಆರ್. ಬಿ.ರಂಗನಾಥ್ ಅವರೊಂದಿಗೆ ಶ್ರೀ ಮಠಕ್ಕೆ ಪ್ರವೇಶಿಸಿದೆವು. ಈ ಪವಿತ್ರವಾದ ಮಠದೊಳಗೆ ನನ್ನ ಮೊದಲ ಪ್ರವೇಶವೂ ಅದೇ ಆಗಿತ್ತು. ಪ್ರಶಾಂತವಾದ ಆ ಸ್ಥಳದ ಆವರಣದ ಗುಡಿಯಲ್ಲಿ ವಿರಾಜಮಾನರಾದ ಶ್ರೀ ವಿನಾಯಕನ ದರ್ಶನ ಪಡೆದು, ಆದಿಚುಂಚನಗಿರಿ ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರನಿಗೆ ವಂದಿಸುತ್ತ, ಮಹಾಸಂಸ್ಥಾನದ ಪರಮ ಪೂಜ್ಯ ಸ್ವಾಮೀಜಿಗಳಾದ ಡಾ. ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವಾ ಕೈಂಕರ್ಯಗಳನ್ನು ಮನದಲ್ಲಿ ಸ್ಮರಿಸುತ್ತ ಶಂಭುನಾಥ ಶ್ರೀಗಳ ಬರುವಿಕೆಗಾಗಿ ಭಕ್ತರ ಭೇಟಿಯ ಕೊಠಡಿಯಲ್ಲಿ ಮೆತ್ತನೆಯ ಸೋಫಾಗಳ ಮೇಲೆ ಕುಳಿತಿದ್ದೆವು. ಅಲ್ಲಿನ ಭಕ್ತರೂ, ಭಗವಂತನ ಸೇವಕರೂ ಆದ ರತನ್ ಅವರು ಸ್ವಾಮೀಜಿ ಅವರ ಅಪ್ಪಣೆಯಂತೆ ಮಧ್ಯಾಹ್ನದ ಪ್ರಸಾದ ದಾಸೋಹವನ್ನು ಸ್ವೀಕರಿಸಿಕೊಂಡು ಬರಲು ನಮ್ಮನ್ನು ದಾಸೋಹ ಕೊಠಡಿಗೆ ಕರೆದೊಯ್ದರು. ಭಕ್ತಿಭಾವದಿಂದ ರುಚಿಕಟ್ಟಾದ ದಾಸೋಹವನ್ನು ನಾವೆಲ್ಲರೂ ಸೇವಿಸಿದ ನಂತರ ಪುನಃ ಸ್ವಾಮೀಜಿ ಅವರ ಕೊಠಡಿಗೆ ಸಂತೃಪ್ತಿಯ ಭಾವದೊಂದಿಗೆ ಆಗಮಿಸಿದೆವು. ಕೆಲವೇ ಕ್ಷಣಗಳಲ್ಲಿ ಕಾವಿವಸ್ತ್ರಧಾರಿಯಾಗಿ, ಹಣೆಯಲ್ಲಿನ ವಿಭೂತಿ ಧಾರಣೆಯಿಂದ ಸಾಕ್ಷಾತ್ ದೈವೀಕ ಪ್ರಭೆಯು ಮುಖ ಕಮಲದಲ್ಲಿ ಪಡಿಮೂಡಿದಂತೆ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳು ಪ್ರತ್ಯಕ್ಷವಾದರು.

ಪವಿತ್ರ ಪೀಠದಲ್ಲಿ ಅಲಂಕೃತರಾದ ಅವರಿಗೆ ಶಿಷ್ಟಾಚಾರದ ಭಾಗವಾಗಿ ಫಲಗಳನ್ನು ಸಮರ್ಪಿಸಿ, ನಾವೆಲ್ಲರೂ ಶಿರಬಾಗಿ ನಮಸ್ಕರಿಸಿ ಅವರ ಆಶೀರ್ವಾದ ಪಡೆದುಕೊಂಡೆವು. ನಮ್ಮ ಉಭಯ ಕುಶಲೋಪರಿ ವಿಚಾರಿಸಿದ ನಂತರ ನಾವು ಆಗಮಿಸಿದ ಉದ್ದೇಶವನ್ನು ಕೇಳಿದರು. ಆಗ ಗಂಗೇಶ್ ಅವರು ವಿವರವಾಗಿ ಎಲ್ಲಾ ವಿಚಾರಗಳನ್ನು ತಿಳಿಸಿದರು. ಬಹಳ ಖುಷಿಪಟ್ಟ ಶ್ರೀಗಳು “ಇಂತಹ ಸಮಾಜೋಪಯೋಗಿ ಕಾರ್ಯಗಳಿಗೆ ಶ್ರೀ ಮಹಾ ‌ಸಂಸ್ಥಾನದ ಸಹಕಾರವು ಸದಾ ಇರುತ್ತದೆ, ಧೈರ್ಯವಾಗಿ ಮುನ್ನಡೆಯುವ ಮೂಲಕ ಈಗಿನ ದಿಕ್ಕು ತಪ್ಪಿದಂತೆ ವರ್ತಿಸುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರಲು ಪ್ರೇರೇಪಿಸುವ ಅರ್ಥಗರ್ಭಿತ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ. ಇವುಗಳ ಯಶಸ್ಸಿಗೆ ಅಗತ್ಯವಾದ ನೆರವು ಶ್ರೀ ಮಠದಿಂದ ಖಂಡಿತಾ ದೊರೆಯುತ್ತದೆ” ಎಂದು ನುಡಿದರು.

ಕೊನೆಯಲ್ಲಿ ಎಲ್ಲರಿಗೂ ಅಕ್ಷತೆಯೊಂದಿಗೆ ಫಲಗಳನ್ನು ಮತ್ತು ‘ಶ್ರೀ ಗುರೂಜಿ ಹೇಳಿದ ಕಥೆಗಳು’ ಎಂಬ ಪುಸ್ತಕಗಳನ್ನು ಕೊಟ್ಟು ‘ದೊಡ್ಡವರು ಹೇಳಿದ ಈ ಆಣಿಮುತ್ತುಗಳು ನಮ್ಮ ನಿಮ್ಮೆಲ್ಲರ ಬದುಕಿಗೆ ನೆಮ್ಮದಿ,  ಜೀವನ ಪ್ರೀತಿ, ದೈವಿಕ ಪ್ರಜ್ಞೆ, ಸಾಮಾಜಿಕ ಸಾಮರಸ್ಯ, ಆಧ್ಯಾತ್ಮಿಕ ತಿಳುವಳಿಕೆ ಮುಂತಾದ ಮೌಲ್ಯಗಳನ್ನು ತಿಳಿಸುತ್ತವೆ” ಎಂದು ನುಡಿದು, ಹಸನ್ಮುಖ ಭಾವಮುದ್ರೆಯೊಂದಿಗೆ ಬೀಳ್ಕೊಟ್ಟರು.

ತಮ್ಮ ಸೇವಾ ಕೈಂಕರ್ಯಗಳ ಮೂಲಕವೇ ಸುವಿಖ್ಯಾತಿ ಪಡೆದು ವಿಶ್ವ ಮಟ್ಟದಲ್ಲಿ ಹೆಸರುವಾಸಿ ಆಗಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠದ ಸ್ವಾಮೀಜಿ ಅವರ ದರ್ಶನ ಭಾಗ್ಯ, ಮಾತನಾಡಿಸುವ ಸುಯೋಗ ಲಭಿಸಿದುದಕ್ಕಾಗಿ ನಾವು ತುಂಬಾ ಖುಷಿಪಟ್ಟೆವು. ಊರಿಗೆ ಮರಳಿದ ದಾರಿಯುದ್ದಕ್ಕೂ ಪರಸ್ಪರ ಮಾತನಾಡುತ್ತಾ ಭೈರವೈಕ್ಯರಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಕಾಲದಲ್ಲಿ ಆದಿಚುಂಚನಗಿರಿ ಸಂಸ್ಥಾನವು ಉಚ್ಛ್ರಾಯ ಸ್ಥಿತಿಯಲ್ಲಿ ಬೆಳೆದ ಪರಿಯನ್ನು ಚರ್ಚಿಸಿಕೊಂಡು ಇಂತಹದ್ದೊಂದು ಮಹಾಸಂಸ್ಥಾನವು ನಮ್ಮ ನಾಡಿನಲ್ಲಿದೆ ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದುಕೊಂಡು ಊರು ಸೇರಿದೆವು. ಅಂದು ರಾತ್ರಿಯೇ “ಶ್ರೀ ಗುರೂಜಿ ಹೇಳಿದ ಕಥೆಗಳು” ಕೃತಿಯನ್ನು ಕುರಿತು ಬರೆಯಬೇಕು ಅನ್ನಿಸಿತು. ಆ ಸಂಕಲ್ಪದ ಫಲಶ್ರುತಿಯೇ ಈ ಲೇಖನ…..

◆ಕೃತಿಯ ಪರಿಚಯ◆

 “ಪರಮಪೂಜ್ಯ ಶ್ರೀ ಗುರೂಜಿ ಅವರು ಸಾವಿರಾರು ಸಭೆ ಸಮಾರಂಭಗಳಲ್ಲಿ ನೀಡುತ್ತಿದ್ದ ನೀತಿ ಬೋಧಕ ದೃಷ್ಟಾಂತಗಳೊಂದಿಗೆ ಕೂಡಿದ ಆಶೀರ್ವಚನಗಳು ಮನುಷ್ಯ ತನ್ನಲ್ಲಿರುವ ಪಶುತ್ವವನ್ನು ನೀಗಿಕೊಂಡು, ಮಾನವೀಯತೆಯನ್ನು ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದವು. ನಿಯಮಬದ್ಧ ಜೀವನವನ್ನು ರೂಢಿಸಿಕೊಂಡು ಹೃದಯದಲ್ಲಿ ದೈವಭಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದ್ದವು. ಅಂತಹ ನಲವತ್ತು ಅಮೂಲ್ಯ ನೀತಿಬೋಧಕ ದೃಷ್ಟಾಂತಗಳಿರುವ ಈ ಕೃತಿಯ ಸಾರವನ್ನು ಜನತೆ ಗ್ರಹಿಸಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಂತಾಗಲೀ…..”  ಎಂಬ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಸಂದೇಶವಾಣಿಯೊಂದಿಗೆ ಪುಟ ತೆರೆದುಕೊಳ್ಳುವ “ಶ್ರೀ ಗುರೂಜಿ ಹೇಳಿದ ಕಥೆಗಳು”ನ್ನು ಮೇಲುಕೋಟೆಯ ಸಾಹಿತಿ ವಿ.ಎನ್. ಗೌಡ ಸಂಗ್ರಹಿಸಿ, ತುಂಬಾ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಜೊತೆಗೆ “ಪದ್ಮಭೂಷಣ ಪರಮಪೂಜ್ಯ ಯುಗಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಪಾದಾರವಿಂದಗಳಿಗೆ ಭಕ್ತಿ ಪೂರ್ವಕವಾಗಿ ಸಮರ್ಪಿಸಿ ಕೃತಾರ್ಥರಾಗಿದ್ದಾರೆ. ಒಟ್ಟು 88 ಉತ್ತಮ ಗುಣಮಟ್ಟದ ಪುಟಗಳ ಹೂರಣದಲ್ಲಿ ಅಡಕವಾಗಿರುವ ನೀತಿ ದೃಷ್ಟಾಂತಗಳನ್ನು ಶ್ರದ್ಧಾ ಭಕ್ತಿಯಿಂದ ಓದುತ್ತಾ ಹೋದಂತೆ ನಿಜಕ್ಕೂ ದಿವ್ಯಾನಂದದ ಅನುಭೂತಿ ಉಂಟಾಗುತ್ತದೆ.

ಒಂದೊಂದು ದೃಷ್ಟಾಂತವೂ ಮಾನವ  ಜೀವನದ ಜಂಜಾಟಗಳಿಂದ ಜರ್ಜರಿತವಾಗುವ ದುರ್ಬಲ ಮನಸ್ಸುಗಳಿಗೆ ಸಂಜೀವಿನಿಯಂತೆ ಉಪಶಮನ ನೀಡುತ್ತದೆ, ಧೈರ್ಯ ತುಂಬುತ್ತದೆ, ನೊಂದ ಜೀವಗಳಿಗೆ ಸಾಂತ್ವನ ಹೇಳುತ್ತದೆ, ದೈವಿಕ ಮಹತ್ವವನ್ನು ತಿಳಿಸಿ ಇಹಲೋಕದ ಬದುಕಿನ ಕೃತಕೃತ್ಯತೆಯನ್ನು ಸಾರುತ್ತದೆ. ಭಗವಂತನ ಕಡೆಗಿನ ನಮ್ಮ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುತ್ತದೆ. ಸಾರ್ಥಕ ಬದುಕಿನೆಡೆಗಿನ ದಾರಿಯನ್ನು ಸುಲಭಗೊಳಿಸುತ್ತದೆ. ಸಂಸ್ಕಾರಯುತ ಬಾಳಿನ ಪಾವಿತ್ರ್ಯತೆಯನ್ನು ಬಿಂಬಿಸುತ್ತದೆ. ಇಂತಹ ಸಾರ್ವಕಾಲಿಕ ಮೌಲ್ಯಗಳನ್ನು ಸಾರುವ ಮಹೋನ್ನತ ಕೃತಿಯನ್ನು ಸಾಮಾಜಿಕ ಕಾಳಜಿಯ ಸದುದ್ದೇಶದಿಂದ ಶ್ರೀ ಮಠದ ವತಿಯಿಂದಲೇ ಪ್ರಕಟಿಸಲಾಗಿದ್ದು ಕೊಳ್ಳುವ ಬೆಲೆಯನ್ನು ಕೇವಲ 20  ರೂ.ಗಳೆಂದು ನಮೂದಿಸಿದ್ದರೂ, ಶ್ರೀ ಮಹಾಸಂಸ್ಥಾನಕ್ಕೆ, ಶಾಖಾ ಮಠಕ್ಕೆ ಬೇಟಿ ನೀಡುವ ಭಕ್ತಾದಿಗಳಿಗೆ ಆಶೀರ್ವಾದಪೂರ್ವಕವಾಗಿ ನೀಡುವ ಮೂಲಕ ವಿಮುಖವಾಗುತ್ತಿರುವ ‘ಪುಸ್ತಕ ಓದು’ ಸಂಸ್ಕೃತಿಯನ್ನು ಪ್ರೇರೇಪಿಸಲಾಗುತ್ತಿದೆ‌. ವಿಶೇಷವೆಂದರೆ ಯಾವುದೇ ಜಾತಿ ಮತ ಧರ್ಮಗಳ ಭೇದವಿಲ್ಲದೆ ಸರ್ವಧರ್ಮೀಯ ಸುಜನ ಭಕ್ತರಿಗೆ ಸಾಮರಸ್ಯದ ಬದುಕಿನ ಪಾಠವನ್ನು ಹೇಳಿಕೊಡುತ್ತಾ, ಸ್ವತಃ ತಾವೂ ನುಡಿದಂತೆ ನಡೆಯುತ್ತಿದ್ದ ಮಹಾಸ್ವಾಮಿಗಳು ಹಾಕಿಕೊಟ್ಟ ಮೇಲ್ಪಂಕ್ತಿಯ ಚೌಕಟ್ಟಿನಲ್ಲಿಯೇ ಈಗಿನ ಪೀಠಾಧಿಪತಿಗಳೂ ಸಾಗುತ್ತಿರುವುದು ಶ್ರೀ ಮಠದ ಘನತೆಯನ್ನು ಕಾಪಾಡಿಕೊಂಡಿದೆ. ಆದ್ದರಿಂದಲೇ ಆದಿಚುಂಚನಗಿರಿ ಮಹಾ ಸಂಸ್ಥಾನವು ಇಂದಿಗೂ “ಸರ್ವೇಜನಾ ಸುಖಿನೋಭವಂತು” ತತ್ವವನ್ನು ಪಾಲಿ‌ಸುತ್ತಾ ಇತರೆ ಶ್ರೇಷ್ಠ ಮಠ ಮಾನ್ಯಗಳ ಸಾಲಿನಲ್ಲಿ ಪ್ರಮುಖವೆನಿಸಿದೆ.

◆ಶ್ರೀ ಗುರೂಜಿ ಹೇಳಿದ ಕೆಲವು ಕಥೆಗಳ ಸಾರ◆

ಕೃತಿಯ ಮೊದಲಿನ ‘ಮಾನವ ಜನ್ಮ’ ದೃಷ್ಟಾಂತದಲ್ಲಿ ಸಾಮ್ರಾಟ ಅಶೋಕನು ಸಾಧು ಒಬ್ಬರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದಾಗ ಅವನ ಮಂತ್ರಿ ಮತ್ತು ಸಿಬ್ಬಂದಿಯವರು ಸಹಿಸದೆ ‘ಒಬ್ಬ ಸಾಮ್ರಾಟರು ಸಾಮಾನ್ಯ ಸಾಧುವಿಗೆ ಶಿರಬಾಗಿ ವಂದಿಸುವುದು ಅಸಹನೀಯ’ ಎಂದು ಭಾವಿಸುತ್ತಾರೆ. ಇವರಿಗೆ ಅರಿವು ಮೂಡಿಸಲು ಅಶೋಕನು ಒಂದು ಪರೀಕ್ಷೆಯನ್ನು ನಡೆಸುವ ಮೂಲಕ ‘ಮಾನವ ಬದುಕಿದ್ದಾಗ ಮಾತ್ರವೇ ಅವನ ತಲೆಗೆ ಬೆಲೆ, ಸತ್ತಾಗ ಮೂರು ಕಾಸಿಗೂ ಬಾಳುವುದಿಲ್ಲ’ ಎಂಬ ಸತ್ಯವನ್ನು ತಿಳಿಸುತ್ತಾನೆ.

ಮತ್ತೊಂದು ದೃಷ್ಟಾಂತದಲ್ಲಿ ಎಂತಹ ಸಜ್ಜನರಾದರೂ ಅಗತ್ಯ ಬಿದ್ದಾಗ ಬೇರೆಯವರ ವಸ್ತುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಆನಂತರ ಅವರಿಗೆ ಜೋಪಾನವಾಗಿ ಹಿಂದಿರುಗಿಸಿ ಕೊಡುತ್ತಾರೆ. ಆದರೆ ಯಾರೋ ಮಹಾತ್ಮರು, ಪ್ರಧಾನಿಗಳು, ಜಗದ್ಗುರು, ಅಥವಾ ಆಗರ್ಭ ಶ್ರೀಮಂತರ ಶವವನ್ನು ಮೆರವಣಿಗೆ ಮಾಡುವ ಸಮಯದಲ್ಲಿ ಮಳೆ ಬಂದರೆ ಒಂದು ಸ್ವಲ್ಪ ಹೊತ್ತು ಈ ಶವವನ್ನು ಮನೆಯಲ್ಲಿ ಇಡುತ್ತೇವೆ ಎಂದು ಅವಕಾಶ ಕೇಳಿದರೆ ಯಾರಾದರೂ ಒಪ್ಪುವರೇ? ಖಂಡಿತಾ ಇಲ್ಲ. ಏಕೆಂದರೆ ಉಸಿರು ನಿಂತ ಮೇಲೆ ನಮ್ಮ ದೇಹಕ್ಕೆ ತೃಣಮಾತ್ರದಷ್ಟೂ ಬೆಲೆಯಿರದು. ಆದ್ದರಿಂದ ಭಗವಂತ ನೀಡಿರುವ ಈ ದೇಹವನ್ನು ಸತ್ಕಾರ್ಯಕ್ಕೆ, ಮತ್ತೊಬ್ಬರ ಸಹಾಯಕ್ಕೆ, ದೇವರ ಸೇವೆಗೆ ಬಳಸುವುದರಿಂದ ಭವ್ಯತೆ, ದಿವ್ಯತೆ, ಪಾವಿತ್ರ್ಯತೆಯನ್ನು ಪಡೆಯಬಹುದು. ಅದಕ್ಕಾಗಿಯೇ “ಧರ್ಮೋ ರಕ್ಷತಿ ರಕ್ಷಿತಃ”  ಎಂಬ ನೀತಿಯನ್ನು ಪಾಲಿಸಬೇಕೆಂದು ಈ ‘ದೇಹದ ಬೆಲೆ’ ಕಥೆಯು ತಿಳಿಸುತ್ತದೆ.

‘ಅನ್ನದಾತ ಸುಖೀಭವ’ ಕಥೆಯಲ್ಲಿ ಓರ್ವನು ಸೊಂಪಾಗಿ ಬೆಳೆದು ನಳನಳಿಸುತ್ತಿದ್ದ ಮರವೊಂದನ್ನು ಕಂಡು ಹೊಗಳುತ್ತಾನೆ. ಇದರಿಂದ ಬೇಸರಗೊಂಡ ಎಲೆಗಳು ನಮ್ಮಿಂದಾಗಿ ಮರವು ಸುಂದರವಾಗಿ ಕಂಡರೂ ಅವನು ನಮ್ಮನ್ನು ಬಿಟ್ಟು ಮರವನ್ನು ಹೊಗಳುತ್ತಿರುವುದು ಸರಿಯಲ್ಲ ಎಂದು ಭಾವಿಸುತ್ತವೆ. ಎಲೆಗಳ ಈ ಅಸೂಯೆ ಗಮನಿಸಿದ ಬೇರುಗಳು ‘ನಾವು ನೀರು, ಗೊಬ್ಬರ, ಆಧಾರ ನೀಡುವುದರಿಂದ ಮಾತ್ರವೇ ಎಲೆಗಳು ನಳನಳಿಸುವುದು’ ಎಂಬ ಎಚ್ಚರಿಕೆ ನೀಡುತ್ತವೆ. ಅದರಂತೆ ನಮ್ಮ ನಾಗರೀಕ ಜನರು ಎಷ್ಟೇ ವೈಭವದಿಂದ, ಎಂಥದ್ದೇ ಸ್ಥಾನ ಮಾನದಿಂದ ಬದುಕಿ ಬೀಗಿದರೂ, ಅವರಿಗೆಲ್ಲ ದುಡಿದು ಅನ್ನ ನೀಡುವ ರೈತರೇ ನಿಜವಾದ ದೇವರು. ಅವರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು, ಸದಾ ಅವರ ಒಳಿತಿಗಾಗಿ ಪ್ರಾರ್ಥಿಸಬೇಕು ಎಂಬ ಸಂದೇಶವಿದೆ.

ಇಂತಹ ಉತ್ತಮ ಸಂದೇಶ, ನೀತಿಯನ್ನು ಸಾರುವ ನಲವತ್ತು ಕಥೆಗಳು ಈ ಸಂಗ್ರಹ ಯೋಗ್ಯವಾದ ಕೃತಿಯಲ್ಲಿ ಚಿಪ್ಪಿನೊಳಗಿನ ಮುತ್ತುಗಳಂತೆ ಅಡಕವಾಗಿವೆ. ಅಂತರಂಗದ ಅಜ್ಞಾನ, ಸ್ನೇಹ-ಅಪಹರಿಸಲಾಗದ ಸಂಪತ್ತು, ದುರಾಸೆಯ ಫಲ, ಪೂರ್ವಾರ್ಜಿತ ಪುಣ್ಯ ಫಲ, ಋಣಮುಕ್ತ, ಸಹಕಾರವೇ ಸ್ವರ್ಗ, ಜಾಗೃತರಾದರೆ ಭವಿಷ್ಯ ಉಜ್ವಲ, ಹಣವಿದ್ದರೇನು ಸಂಸ್ಕಾರವಿಲ್ಲದೊಡೆ, ಸಚ್ಚಿಂತನೆ-ಸತ್ಫಲ, ಮಾತಿನ ಮಹತ್ವ, ಮನಸ್ಸಿನ ಕಲ್ಮಶ, ಸುಖವೆಂಬ ಮಾಯೆ….  ಹೀಗೆ ಪ್ರತಿಯೊಂದು ದೃಷ್ಟಾಂತವೂ ಶೀರ್ಷಿಕೆಯಿಂದಲೇ ಸಂದೇಶವನ್ನು ಬಿಂಬಿಸುವ ರೀತಿಯಲ್ಲಿವೆ. ಇಂತಹ ಮೌಲಿಕ ಕೃತಿಯನ್ನು ಭಕ್ತಾದಿಗಳಿಗೆ ನೀಡುವ ಸತ್ಸಂಪ್ರದಾಯವನ್ನು ಪಾಲಿಸುತ್ತಿರುವ ಶ್ರೀ ಮಠದ ಕೈಂಕರ್ಯವು ಸಮಾಜದ ಸ್ವಾಸ್ಥ್ಯ ಕಾಪಾಡುವ ಸೇತುವಾಗಿದೆ.

◆ಶ್ರೀ ಗುರು ವಾಣಿಗಳು◆
ಅಷ್ಟೇ ಅಲ್ಲದೆ ಪ್ರತಿಯೊಂದು ಕಥೆಯ ಕೊನೆಯಲ್ಲಿ ಓದುಗರ ವೈಚಾರಿಕ ಶಕ್ತಿಗೆ ಒರೆಗಲ್ಲು ಹಚ್ಚುವಂತಹ ಶ್ರೀ ಗುರು ವಾಣಿಗಳನ್ನೂ ನೀಡಲಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ…

●ಧರ್ಮ ಮಾನವನನ್ನು ಉದ್ಧರಿಸುವ ಶಕ್ತಿ
ಧರ್ಮದ ಆಚರಣೆಯಿಂದ ಮನುಷ್ಯನ ಬದುಕು
ಸುಂದರವಾಗುತ್ತದೆ ಮತ್ತು ಪವಿತ್ರವಾಗುತ್ತದೆ.

●ಕಣ್ಗಳಿಗೆ ಕವಿದ ಕತ್ತಲೆಯನ್ನು, ಮನಸ್ಸಿಗೆ ಮೆತ್ತಿದ ಮಲವನ್ನು
ನಿರ್ಮೂಲಗೊಳಿಸಿ ಅಸಂಸ್ಕೃತ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ
ಪರಿವರ್ತಿಸಿ, ಸನ್ಮಾರ್ಗ ತೋರಿಸುವವನೇ ಗುರು

●ಮೂರ್ತಿಯನ್ನು ಪೂಜಿಸುವುದು ನಮ್ಮ
ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ. ಕಲ್ಲನ್ನು ಗೌರವಿಸುವುದಕ್ಕಲ್ಲ. ಮೂರ್ತಿ ನೆಪ, ಶಿವನಿಗೆ ಪೂಜೆ.

●ಶುದ್ಧವಾದ ಬುದ್ಧಿ ಅಥವಾ ವಿದ್ಯೆಯು ಕಾಮಧೇನುವಿನಂತೆ, ನಾನಾ ವಿಧವಾದ ಸಂಪತ್ತುಗಳನ್ನು ನೀಡುತ್ತದೆ. ಅಂದರೆ ಎಲ್ಲಾ ವಿಧವಾದ ಐಶ್ವರ್ಯಗಳು ವಿದ್ಯೆಯಿಂದ ದೊರೆಯುತ್ತವೆ.

ಹೀಗೆ ಶ್ರೀ ಗುರೂಜಿ ಹೇಳಿದ ಕಥೆಗಳು ಮತ್ತು ಅಮೃತವಾಣಿಗಳ ಬಂಗಾರದ ಭಂಡಾರವೇ ತುಂಬಿರುವ ಈ ಕೃತಿಯು ನಾಡಿನ ಪ್ರತಿಯೊಂದು ಮನೆಯಲ್ಲಿಯೂ ಇರಬೇಕಾದ ಔಚಿತ್ಯತೆಯನ್ನು ಒಳಗೊಂಡಿದೆ. ಎಲ್ಲಾ ಶಾಲಾ ಕಾಲೇಜು, ವಿದ್ಯಾ ಸಂಸ್ಥೆಗಳಲ್ಲೂ ಇರಲೇಬೇಕಾದ ಅಗತ್ಯತೆಯನ್ನು ಹೊಂದಿದೆ. ಪ್ರತಿಯೊಬ್ಬ ನಾಗರಿಕನು ಓದಿ ಅರ್ಥೈಸಿಕೊಂಡು ತಮ್ಮ ಮನೆಯಲ್ಲಿನ ಮಕ್ಕಳು, ಯುವಕರಿಗೆ ದಾರಿದೀಪದಂತೆ ಬಳಸಿಕೊಳ್ಳಲು ತಿಳಿಸಬೇಕಾಗಿದೆ. ಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್, ಫೇಸ್ಬುಕ್, ವಾಟ್ಸಾಪ್ ಮುಂತಾದ ವಿವಿಧ ಬಗೆಯ ಆಧುನಿಕ ಸವಲತ್ತುಗಳ ಅಡಿಯಾಳಾಗಿ, ಪುಸ್ತಕ ಓದುವ ಅಭಿರುಚಿಯಿಂದ ವಿಮುಖರಾಗಿ, ವೈಚಾರಿಕ ದಾರಿದ್ರ್ಯ, ಸಂಸ್ಕಾರದ ಕೊರತೆ, ಮಾನಸಿಕ ಮಾಲಿನ್ಯದಂತಹ ಸ್ವಯಂಕೃತ ರೋಗಪೀಡಿತರಾಗಿ ಸಮಾಜದ ಅಶಾಂತಿಗೆ ಕಾರಣವಾಗುತ್ತಿರುವ ಪ್ರಸ್ತುತ ಯುವಜನಾಂಗಕ್ಕೆ ಈ ಅಮೂಲ್ಯ ಕೃತಿಯು ಉಪಶಮನ ನೀಡಬಲ್ಲದು.

~ಹೊರಾ.ಪರಮೇಶ್ ಹೊಡೇನೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x