ಸ್ಕಾಟ್‍ಲ್ಯಾಂಡಿನ ರಾಜ ಡಂಕನ್. ಆತನಿಗೆ ಇಬ್ಬರು ಪುತ್ರರು. (Malcolm and Donalbain)ಮಾಲ್‍ಕಮ್ ಮತ್ತು ಡೊನಾಲಬೇನ್. ವಯಸ್ಸಾದ ಡಂಕನ್ ರಾಜ್ಯಭಾರವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರುವ ಸಮಯದಲ್ಲೇ ಆತನ ಥೇನ್ಸ್ ಆಫ್ ಕೌಡರ್ ಎಂಬ ಪ್ರಾಂತಾಧಿಕಾರಿ ನಾರ್ವೆಯ ರಾಜನ ಜೊತೆಗೂಡಿ ಸ್ಕಾಟ್‍ಲ್ಯಾಂಡಿನ ಮೇಲೆ ಆಕ್ರಮಣ ಮಾಡುತ್ತಾನೆ. [ಥೇನ್ಸ್ ಎಂದರೆ ಗವರ್ನರ ಎಂದರ್ಥ] ಆ ಸಮಯದಲ್ಲಿ ಡಂಕನ್ ತನ್ನ ಸಹೋದರ ಸಂಬಂಧಿಗಳಾದ ಮ್ಯಾಕಬೆತ್ ಮತ್ತು (Banquo) ಬ್ಯಾಂಕೊ ಸಹಾಯದಿಂದ ಆ ಸೈನ್ಯವನ್ನು ಸದೆಬಡಿದು ಕೌಡರನ್ನು ವಶಪಡಿಸಿಕೊಳ್ಳುತ್ತಾರೆ. ವಿಜಯಿಶಾಲಿಗಳಾದ ಅವರನ್ನು ಮಾರ್ಗ ಮಧ್ಯದಲ್ಲಿ ಮೂರು ಮಾಟಗಾತಿಯರು ನಿಲ್ಲಿಸಿ ಪ್ರಲೋಭಿಸುವುದರೊಂದಿಗೆ ಅಧಿಕಾರ ಲಾಲಸೆ, ಮಹತ್ವಾಕಾಂಕ್ಷೆ ಹಾಗೂ ಲೋಭದಿಂದ ಕೂಡಿದ ಮಾನವ ಜಗತ್ತಿನ ಮೇಲಾಟಗಳಿಗೆ ಶೇಕ್ಸಪಿಯರನ ಮ್ಯಾಕ್‍ಬೆತ್ ನಾಟಕ ವಿಫುಲವಾದ ಪದಾರ್ಥಗಳನ್ನು ಮೇಳೈಸುತ್ತ ಸಾಕ್ಷಿಯಾಗುತ್ತ ಹೋಗುತ್ತದೆ.
ಸ್ಕಾಂಟಲ್ಯಾಂಡಿನ ಅಧೀನದಲ್ಲಿರುವ ಮ್ಯಾಕಬೆತ್ ಗ್ಲಾಮಿಸ್‍ನ ಗವರ್ನರ ಫೈನೆಲ್‍ನ ಮಗ. ಫೈನೆಲ್ ಡಂಕನ್‍ನ ಸಾಮಂತ ರಾಜ. ಆತ ಡಂಕನ್‍ನ ಸಹೋದರ ಸಂಬಂಧಿಯೂ ಕೂಡ. ಮ್ಯಾಕ್‍ಬೆತ್ ವೈರಿಗಳನ್ನು ಗೆದ್ದು ವಾಪಸ್ಸು ಬರುವಾಗ ಎದುರಾದ ಮೂರು ಮಾಟಗಾತಿಯರು ಆತನಲ್ಲಿ ದುರಾಸೆಯ ಬೀಜವನ್ನು ಬಿತ್ತಿ ಹೋಗುತ್ತಾರೆ. ‘Fair is Foul, Foul is Fair’ ನಾಟಕದ ಮೊದಲ ಅಂಕದ ಮೊದಲ ದೃಶ್ಯದಲ್ಲಿಯೇ ಇದ್ದು ಇಡೀ ನಾಟಕದ ಸಾರವನ್ನು ಹುರುಳನ್ನು ತೋರಿಸುತ್ತದೆ. ಸಾಮಾನ್ಯ ಜನರಿಗೆ ಒಳ್ಳೆಯದೆಂಬುದು ದುಷ್ಟರಿಗೆ ಕೆಟ್ಟದಾಗಿಯೂ, ಸಾಮಾನ್ಯರಿಗೆ ಕೆಟ್ಟದೆಂಬುದು ದುಷ್ಟರಿಗೆ ಒಳ್ಳೆಯದಾಗಿಯೂ ಇರುವುದೆಂಬ ಪ್ರಾತಿನಿಧಿಕ ಸತ್ಯವನ್ನು ನಾಟಕ ಒಡಮೂಡಿಸುತ್ತದೆ.
ಮೊದಲ ಮಾಟಗಾತಿ ಆತನನ್ನು ‘ಥೇನ್ಸ್ ಆಫ್ ಗ್ಲಾಮಿಸ್’ ಎಂದು ಭವಿಷ್ಯ ನುಡಿದರೆ, ಎರಡನೇ ಮಾಟಗಾತಿ ಆತನನ್ನು ‘ಥೇನ್ಸ್ ಆಫ್ ಕೌಡರ’ ಎಂದು ಕರೆಯುತ್ತಾಳೆ. ಮೂರನೇ ಮಾಟಗಾತಿ ಆತನಿಗೆ ಇನ್ನು ಹೆಚ್ಚಿನ ಸಾಮಥ್ರ್ಯದ ಬಲ ನೀಡಿ ‘ಕಿಂಗ್ ಆಫ್ ಸ್ಕಾಟಲ್ಯಾಂಡ್’ ಎಂದು ಭವಿಷ್ಯವಾಣಿ ನುಡಿಯುತ್ತಲೇ ಮ್ಯಾಕ್‍ಬೆತ್‍ನಲ್ಲಿ ಅದಮ್ಯವಾದ ಆಶೆ ಬೆಳೆಯಲಾರಂಭಿಸುತ್ತದೆ. ಅಷ್ಟಕ್ಕೆ ನಿಲ್ಲದೇ ಆದೇ ಮಾಟಗಾತಿಯರು ಮ್ಯಾಕ್‍ಬೆತ್‍ನ ಜೊತೆಗಿರುವ ಬೆಂಕೊನ ಉತ್ತರಾಧಿಕಾರಿಗಳು ಮುಂದೆ ಸ್ಕಾಟಲ್ಯಾಂಡಿನ ರಾಜರಾಗುವರೆಂದು ನುಡಿಯುತ್ತಲೂ ಮ್ಯಾಕ್‍ಬೆತ್ ಆ ಕ್ಷಣಕ್ಕೆ ವಿಚಲಿತನಾಗುತ್ತಾನೆ. ಬೆಂಕೋ ಇದೆಲ್ಲವನ್ನೂ ನಂಬದಿರುವಂತೆ ಹೇಳಿದರೂ ಕೇಳದ ಮ್ಯಾಕಬೆತ್ ಆಕಾಂಕ್ಷೆಯ ಹುತ್ತವನ್ನು ತನ್ನ ಮೈತುಂಬಾ ಹೊದ್ದುಕೊಳ್ಳುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸಂದೇಶಕಾರನೊಬ್ಬ ಮ್ಯಾಕ್‍ಬೆತ್‍ನ ತಂದೆ ಫೈನೆಲ್ ತೀರಿಕೊಂಡಿರುವುದಾಗಿಯೂ ಆತನ ಉತ್ತರಾಧಿಕಾರಿ ಮ್ಯಾಕ್‍ಬೆತ್‍ನೇ ಥೇನ್ಸ್ ಆಫ್ ಗ್ಲಾಮಿಸ್ ಆಗಿರುವುದಾಗಿ ವಿಷಯ ತರುತ್ತಾನೆ. ರಾಜನ ಅರಮನೆಗೆ ಹಿಂತಿರುಗುತ್ತಲೇ ಮ್ಯಾಕ್‍ಬೆತ್‍ನ ವಿಜಯೋತ್ಸವದಿಂದ ಖುಷಿಗೊಂಡ ಡಂಕನ್ ಆತನನ್ನು ‘ಥೇನ್ಸ್ ಆಪ್ ಕೌಡರ’ ಎಂದೂ ನೇಮಕಮಾಡುತ್ತಾನೆ. ಮೊದಲೆರಡು ಮಾಟಗಾತಿಯರ ಭವಿಷ್ಯವಾಣಿಗಳು ಸತ್ಯವಾಗುತ್ತಲೂ ಮ್ಯಾಕ್ ಬೆತ್ ಸಂಭ್ರಮಕ್ಕೆ ಒಳಗಾಗುತ್ತಾನೆ. ಮನದಲ್ಲಿ ಕಪಟತೆಯ ಪೊರೆ ಕಟ್ಟಿಕೊಳ್ಳಲಾರಂಭಿಸುತ್ತದೆ. ಇದು ಮನುಷ್ಯ ಅತಿ ಆಕಾಂಕ್ಷೆ, ಲೋಭ ಪ್ರಲೋಭನೆಗೆ ಹೇಗೆ ಒಳಗಾಗುತ್ತಾನೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾ ಸಾಗುತ್ತದೆ ನಾಟಕ. ಪತ್ನಿ ಲೇಡಿ ಮ್ಯಾಕ್‍ಬೆತ್ ಕೂಡ ಪತಿಯ ಇಚ್ಛೆಗೆ ಆತನಿಗಿಂತ ಹೆಚ್ಚೆ ಉತ್ಸುಕಳಾಗಿದ್ದು, ಆತನಿಗೆ ಮೀರಿದ ಮಹತ್ವಾಕಾಂಕ್ಷೆಯ ಹೆಣ್ಣಾಗಿ ಚಿತ್ರಿಸಲ್ಪಟ್ಟಿದ್ದಾಳೆ. ಪತಿಯಿಂದ ಮಾಟಗಾತಿಯರ ಭವಿಷ್ಯವಾಣಿಯನ್ನು ಕೇಳಿದ ಆಕೆ ಡಂಕನ್‍ನನ್ನು ಕೊಲೆಗೈಯುವಂತೆ ಸಲಹೆ ನೀಡುತ್ತಾಳೆ. ಆದರೆ ಡಂಕನ್ ತನ್ನ ಕುಲಬಂಧುವೆಂದೂ, ತನ್ನ ಬಗ್ಗೆ ಅಪಾರ ಪ್ರೀತಿಯುಳ್ಳವನೆಂದೂ ಸಮರ್ಥ ಆಡಳಿತಗಾರನೆಂದೂ ಮ್ಯಾಕಬೆತ್ ಸಮರ್ಥಿಸುತ್ತಲೂ ಆಕೆ ಮ್ಯಾಕಬೆತ್‍ನನ್ನು ಹೇಡಿ ಎಂದು ಕರೆದು, ಅತನಲ್ಲಿ ದುಷ್ಟತನದ ಪ್ರಭಾವವನ್ನು ನೆಲೆಗೊಳಿಸುತ್ತಾಳೆ.
ಸ್ತ್ರೀ ಬುದ್ಧಿ ಪ್ರಳಯಾಂತಕ ಎಂಬ ಮಾತಿಗೆ ಕೆಲವೊಮ್ಮೆ ಇಂತಹ ಸ್ತ್ರೀ ವರ್ತನೆಗಳೇ ಕಾರಣವಿರಬಹುದು. ಅಲ್ಲದೇ ಸ್ತ್ರೀ ಸಹಜ ಗುಣ ಅದೇ ಇರಬಹುದು ಎಂಬಂತೆ ಆಕೆಯ ಚಿತ್ರಣವನ್ನು ಶೇಕ್ಸಪಿಯರ ಕಟ್ಟುತ್ತಾನೆ. ಆಕೆ ಆದರ್ಶ ವಾದಿನಿಯಲ್ಲ. ಬದಲಿಗೆ ಅತಿಯಾದ ಮಹತ್ವಾಕಾಂಕ್ಷೆಯ, ಹುಚ್ಚುಗುದುರೆಯ ಲಂಗುಲಗಾಮಿಲ್ಲದ ವ್ಯಕ್ತಿತ್ವದ ಹಿಂದೆಮುಂದೆ ಯೋಚಿಸದ, ಅಪ್ರಬುದ್ಧ ಹೆಣ್ಣು. ಮುಂದೆ ತನ್ನ ಪಾಪಕ್ಕೆ ತಾನೇ ಪ್ರಾಯಶ್ಚಿತದ ಹೊಳೆಯಲ್ಲಿ ಕೊಳೆವ ಪಾತ್ರ ಆಕೆಯದು.
ಇವರ ಕುತಂತ್ರಕ್ಕೆ ಸಹಕಾರಿ ಎಂಬಂತೆ ಮ್ಯಾಕ್‍ಬೆತ್‍ನ ಗೆಲುವಿನಿಂದ ಸಂತಸಗೊಂಡ ರಾಜ ಡಂಕನ್ ಆ ದಿನ ಮ್ಯಾಕ್‍ಬೆತ್‍ನ ಅರಮನೆಯಲ್ಲಿಯೇ ಔತಣವನ್ನು ಸ್ವೀಕರಿಸುವ ಇಚ್ಛೆ ವ್ಯಕ್ತಪಡಿಸುತ್ತಾನೆ. ತನ್ನ ಪುತ್ರ ಹಾಗೂ ಪರಿವಾರದೊಂದಿಗೆ ಮ್ಯಾಕ್‍ಬೆತ್‍ನ ಔತಣ ಸ್ವೀಕರಿಸಿದ ರಾಜ ಡಂಕನ್ ತನ್ನ ಅತಿಥಿ ಶಯ್ಯಾಗೃಹದಲ್ಲಿ ವಿಶ್ರಮಿಸುತ್ತಾನೆ. ಆ ಸಮಯದಲ್ಲಿ ಡಂಕನ್‍ನನ್ನು ಕೊಂದು ಸ್ಕಾಟ್‍ಲ್ಯಾಂಡಿನ ರಾಜನಾಗುವ ಮ್ಯಾಕ್‍ಬೆತ್‍ನ ಇರಾದೆಗೆ ಬಣ್ಣ ಬರುತ್ತದೆ. ರಾತ್ರಿ ಡಂಕನ್‍ನ ಕೊಂದು ಆ ಕೊಲೆಯ ಅಪರಾಧವನ್ನು ಕಾವಲುಗಾರರ ಮೇಲೆ ಹಾಕಲಾಗುತ್ತದೆ. ತಂದೆಯ ಕೊಲೆಯ ಕಂಡು ಹೆದರಿದ ಮಕ್ಕಳಾದ Malcolm and Donalbain ಸ್ಕಾಟ್‍ಲ್ಯಾಂಡಿನಿಂದಲೇ ಓಡಿಹೋಗುತ್ತಾರೆ.
ಹೀಗಾಗಿ ಮುಂದೆ ಮ್ಯಾಕ್‍ಬೆತ್ ಸ್ಕಾಟ್‍ಲ್ಯಾಂಡಿನ ರಾಜನಾಗುತ್ತಾನೆ. ಅದರೆ ಡಂಕನ್‍ನ ಬಂಧುವಾದ Macduff ಮಾತ್ರ ಈ ಕೊಲೆಯ ಸಂಚಿನ ಹಿಂದಿನ ಸತ್ಯವನ್ನು ಗೃಹಿಸಿ ಮ್ಯಾಕ್‍ಬೆತ್‍ನನ್ನು ಸಂದೇಹಿಸುತ್ತಾನೆ.ರಾಜನಾದ ಮ್ಯಾಕಬೆತ್ ಕ್ಷಣಕ್ಷಣವೂ ಅಸಹನೀಯವಾದ ಮಾನಸಿಕ ವಿಚಲತೆಯಿಂದ ಬಳಲುತ್ತಲೇ ಹೋಗುತ್ತಾನೆ. ಬೆಂಕೊನ ಉತ್ತರಾಧಿಕಾರಿಗಳು ಸ್ಕಾಟಲ್ಯಾಂಡಿನ ಮುಂದಿನ ರಾಜರಾಗುವರೆಂಬ ಮಾಟಗಾತಿಯರ ಮಾತು ಆತನ ಮನಶ್ಯಾಂತಿಯನ್ನು ಕಸಿದುಕೊಳ್ಳುತ್ತದೆ.
ಶೇಕ್ಸಪಿಯರ ಹೇಗೆ ಮನುಷ್ಯ ಒಂದಾದ ಮೇಲೊಂದು ಅಪರಾಧ ಕೊಲೆಗಳಿಗೆ ದಾಸನಾಗುವನೆಂಬ ಸಂಗತಿಯನ್ನು ವಾಸ್ತವಿಕತೆಯ ಸೀಮೆಯೊಳಗೆ ಕಾಲ್ಪನಿಕ ಚೌಕಟ್ಟಿನಲ್ಲಿ ಅಮೋಘವಾಗಿ ಸೃಷ್ಟಿಸುತ್ತಾನೆ. ಮಾಟಗಾತಿಯರ ವಾಸ್ತವಕ್ಕೆ ದೂರವಾದ ಭವಿಷ್ಯವಾಣಿಗಳು ಮಾನವ ಜಾತಿಯ ದುರಾಸೆಯ ವಾಸ್ತವಕ್ಕೆ ಇಂಬುಕೊಡುತ್ತಾ ಹೋಗುತ್ತವೆ.
ಸೋದರ ಸಂಬಂಧಿಯೂ ಗೆಳೆಯನೂ ಆದ Banquo [ಬೆಂಕೊ] ಈಗ ಮ್ಯಾಕ್‍ಬೆತ್‍ನಿಗೆ ವೈರಿಯಾಗಿ ಕಾಣಲಾರಂಭಿಸುತ್ತಾನೆ. ಆತನ ಕೊಲೆಗೆ ಸಂಚು ಸಿದ್ಧವಾಗುತ್ತದೆ. ಪುನಃ ಔತಣಕೂಟ ಏರ್ಪಡಿಸುವ ಮ್ಯಾಕ್‍ಬೆತ್ ಕೂಟಕ್ಕೆ ಆಗಮಿಸುತ್ತಿರುವ Banquo ಮತ್ತಾತನ ಪುತ್ರ Fleance ಮೇಲೆ ಕೊಲೆಗಡುಕರನ್ನು ನೇಮಿಸುತ್ತಾನೆ. ಬೆಂಕೊ ಕೊಲೆಯಾದರೆ ಪುತ್ರ ಈಟeಚಿಟಿಛಿe ತಪ್ಪಿಸಿಕೊಳ್ಳುತ್ತಾನೆ. ಮುಖವಾಡ ಧರಿಸಿದ ಮ್ಯಾಕ್‍ಬೆತ್ ಬೆಂಕೋ ಔತಣಕೂಟಕ್ಕೆ ಬರದುದರ ಬಗ್ಗೆ ವಿಷಾದ ತೋರ್ಪಡಿಸುತ್ತಾನೆ. ಆದರೆ ದುರ್ವಿಧಿ ಆತನ ತಲೆಯ ಮೇಲೆ ಕುಳಿತುಕೊಂಡಂತೆ ಸತ್ತ ಬೆಂಕೋನ ಆತ್ಮ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಮ್ಯಾಕ್‍ಬೆತ್‍ನ ಸ್ಥಾನದಲ್ಲಿ ವಿರಾಜಮಾನವಾಗುತ್ತದೆ. ಮ್ಯಾಕ್‍ಬತ್ ತಲ್ಲಣಿಸಿ ಹೋಗುತ್ತಾನೆ. ಮಾನಸಿಕ ಕ್ಷೋಭೆಗೊಳಗಾಗುತ್ತಾನೆ. ಗೊಂದಲಗೊಂಡು ಪುನಃ ಮಾಟಗಾತಿಯರ ಸಲಹೆಗಾಗಿ ಹೋಗುತ್ತಲೇ ಅವರು (Macduff) ನಿಂದ ಗಂಡಾಂತರವಿದೆಯೆಂದು ಹೇಳುತ್ತಾರೆ. ಆದರೆ ಸಹಜ ಜನನದಿಂದ ಹುಟ್ಟಿದ ಮನುಷ್ಯರಿಂದ ಅವನನ್ನು ಕೊಲ್ಲಲಾಗದೆಂದು ಅಲ್ಲದೇ ಅಗಾಧವಾದ ಬಿರನಾಮ್ (Birnam) ಗಿಡಗಳ ಹೊತ್ತ ಕಾಡು ಮ್ಯಾಕ್‍ಬೆತ್ ವಾಸಿಸುವ ಪ್ರದೇಶ (Dunsinane hill) ಡನ್‍ಶಿನೇನ್ ಹಿಲ್‍ಗೆ ಬರುವುದೋ ಅಂದು ಮಾತ್ರ ಆತನ ಸೋಲು ಎಂದು ನುಡಿಯುತ್ತಾರೆ, ಇದರಿಂದ ಮ್ಯಾಕ್‍ಬೆತ್‍ನಲ್ಲಿ ಪುನಃ ಧೈರ್ಯ ಮೂಡುತ್ತದೆ. ಭದ್ರತೆಯ ಭಾವ ಮೂಡುತ್ತದೆ. ಕಾರಣ ಅಗಾಧವಾದ ಬಿರನಮ್ ಗಿಡಗಳ ಕಾಡು ಡನ್‍ಶಿನೇನ ಹಿಲ್‍ವರೆಗೂ ಬರದೆಂದೂ, ಅಲ್ಲದೇ ಮನುಷ್ಯರೆಲ್ಲರೂ ತಾಯಿಯ ಸಹಜ ಪ್ರಸವದಿಂದಲೆ ಜನಿಸಿರತಕ್ಕಂತವರೆಂದು ಇದರಿಂದ ತನ್ನ ಸಾವು ಅಸಾಧ್ಯವೆಂದೂ ಊಹಿಸುತ್ತಾನೆ. ಆದರೆ ಆತ ಊಹಿಸಿದ್ದು ಒಂದಾದರೆ ನಡೆದು ಹೋಗುತ್ತದೆ ಇನ್ನೊಂದು. ತನ್ನ ಪಾಪದ ಪ್ರಾಯಶ್ಚಿತ್ತವಾಗಿ ಲೇಡಿ ಮ್ಯಾಕ್‍ಬೆತ್ ಮಾನಸಿಕ ಕ್ಷೇಶಕ್ಕೆ ಒಳಗಾಗಿ ಹುಚ್ಚಿಯಾಗುತ್ತಾಳೆ. ನಿದ್ದೆಗಣ್ಣಿನಲ್ಲಿ ನಡೆವ ರೋಗಕ್ಕೆ ಬಲಿಯಾಗುತ್ತಾಳೆ.ಕತ್ತಲೆಯ ಕನಸುಗಳು ಅವಳನ್ನು ಕೊಲ್ಲತೊಡಗುತ್ತವೆ. ಹೀಗಾಗಿ ಮ್ಯಾಕ್‍ಬೆತ್ ಅರಮನೆಯ ಮೇಲೆ Malcolm ಧಾಳಿ ಮಾಡುವ ಮುನ್ನಾದಿನವೇ ಆಕೆ ಮರಣಹೊಂದುತ್ತಾಳೆ.
ತನ್ನ ತಂದೆಯ ಕೊಲೆಗೆ ಸೇಡು ತೀರಿಸಕೊಳ್ಳುವ ಇಚ್ಛೆ ಹೊಂದಿದ, ಇಂಗ್ಲಂಡಿನಲ್ಲಿ ತಲೆಮರೆಸಿಕೊಂಡಿರುವ ಡಂಕನ್‍ನ ಪುತ್ರ Malcolmನಿಗೆ ಮ್ಯಾಕ್‍ಬೆತ್‍ನ ವಿರುದ್ಧ ಸೈನ್ಯ ಕಟ್ಟಲು Macduff ಸಹಾಯ ಮಾಡುತ್ತಾನೆ.ಲೇಡಿ ಮ್ಯಾಕ್‍ಬೆತ್ ಮರಣಿಸಿದ ಮರುದಿನವೇ ಬೃಹತ್ ಇಂಗ್ಲೀಷ ಸೈನ್ಯದೊಂದಿಗೆ ಡಂಕನ್ ಪುತ್ರ ಮಾಲ್ಕಾಮ್ Macduffನ ಸಹಾಯದೊಂದಿಗೆ ಡನ್‍ಶಿನೇನ್ ಮೇಲೆ ಆಕ್ರಮಣ ಮಾಡುತ್ತಾನೆ. ಅದರೊಂದಿಗೆ ಬಿರನಾಮ್ ಕಾಡು ಕೂಡ ಆ ಕಡೆ ಚಲಿಸುತ್ತಿರುವ ಸುದ್ದಿಯೂ ಬರುತ್ತದೆ. ತನ್ನನ್ನು ಮನುಷ್ಯರು ಸಾಯಿಸಲಾರರೆಂದು ಮಾಟಗಾತಿಯರ ಮಾತು ನಂಬಿದ ಮ್ಯಾಕ್‍ಬೆತ್ ಹುಂಬ ಧೈರ್ಯದಿಂದ Macduffನಿಗೆ ಎದುರಾಗುತ್ತಾನೆ. ಆಗ ತಾನು ತನ್ನ ತಾಯಿಯ ಗರ್ಭದಿಂದ ಹೊಟ್ಟೆ ಸೀಳಿ ಜೀವಂತವಾಗಿ ಹೊರಬಂದಿರುವೆನೆಂದು ಸಹಜ ಜನನದಿಂದಲ್ಲವೆಂದೂ Macduff ನುಡಿಯುತ್ತ ಮ್ಯಾಕ್‍ಬೆತ್‍ನನ್ನು ಸಂಹರಿಸುತ್ತಾನೆ. ಇಲ್ಲಿಗೆ ಮಾಟಗಾತಿಯರ ಭವಿಷ್ಯವಾಣಿಯೂ ಸತ್ಯವಾಗುತ್ತದೆ.
ಪ್ರಾರಂಭದಲ್ಲಿ ಸಜ್ಜನನಾದ ಸೈನ್ಯದ ಜನರಲ್‍ನಾಗಿ ಸುಗುಣಭರಿತನಾದ ಮ್ಯಾಕ್‍ಬೆತ್ ಅಧಿಕಾರದ ಲಾಲಸೆಯ ಕೂಪಕ್ಕೆ ಬೀಳುತ್ತಲೇ ಎದ್ದು ಬರಲಾಗದಷ್ಟು ತನ್ನ ನೈತಿಕನೆಲೆಯನ್ನು ಕೊಚ್ಚುತ್ತ ಹೋಗುತ್ತಾನೆ. ನಾಟಕದಲ್ಲಿ ಬರುವ ಆತನ ಸ್ವಗತ ಆತನ ವ್ಯಕ್ತಿತ್ವವನ್ನು ವೀಕ್ಷಕನಿಗೆ ದರ್ಶಿಸುತ್ತಾ ಹೋಗುತ್ತದೆ. ಡಂಕನ್‍ನನ್ನು ಕೊಂದ ಮ್ಯಾಕ್‍ಬೆತ್ ಅಪರಾಧಕ್ಕೆ ದೊರೆಯಬಹುದಾದ ಶಿಕ್ಷೆಯನ್ನು ನೆನಪಿಸಿ ಭಯಗೊಳ್ಳುತ್ತಾನೆ. ತನ್ನ ಅಪರಾಧದ ಮೋಸ ವಂಚನೆಯನ್ನು ನೆನೆಯುತ್ತಾನೆ. ಅಪರಾಧಕ್ಕಿರುವ ಸಾರ್ವಜನಿಕ ಖಂಡನೆಯನ್ನು ಆತ ನೆನಪಿಸಿಕೊಳ್ಳುತ್ತಾನೆ. ಆದಾಗ್ಯೂ ಆಸೆಯ ಭಯಂಕರವಾದ ಇಚ್ಛೆ ಆತನ ವ್ಯಕ್ತಿತ್ವವನ್ನು ಕೊಂದುಹಾಕುತ್ತದೆ. ಬಹುಶಃ ಈ ವ್ಯಕ್ತಿತ್ವ ಇಂದಿನ ಅಧಿಕಾರದ ಗದ್ದುಗೆಯಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ. ಮಾನವ ಬಯಕೆಗಳು ಕಾಲ ದೇಶಗಳಿಗೆ ಹೊರತಾಗಿಲ್ಲ. ಸರ್ವಕಾಲಕ್ಕೂ ಶೇಕ್ಸಪಿರಿಯನ್ ನಾಟಕಗಳು ಪ್ರಸ್ತುತವೆನಿಸುವುದು ಈ ಕಾರಣದಿಂದ.
ವಿಲಿಯಂ ಶೇಕ್ಸಪಿಯರ್‍ನ ಮ್ಯಾಕ್‍ಬೆತ್ ನಾಟಕ ಆತನ ಎಲ್ಲ ಪ್ರಮುಖ ಟ್ರಾಜಡಿಗಳಲ್ಲಿ ವಿಶೇಷವಾದದ್ದು. ಅದು ಮಹತ್ವಾಕಾಂಕ್ಷೆಯ ನೆಲೆಯಲ್ಲಿ ತನ್ನ ನೆಮ್ಮದಿಯನ್ನು, ಸಂತೋಷವನ್ನು ಕೊನೆಗೆ ಬದುಕನ್ನೂ ನಾಶಮಾಡಿಕೊಂಡ ಮ್ಯಾಕ್‍ಬೆತ್‍ನ ಕಥೆ. ಅದರೊಂದಿಗೆ ಆ ಕಾಲದಲ್ಲಿ ಮಾಟ ಯಕ್ಷಿಣಿ ವಿದ್ಯೆಯಲ್ಲಿ ಜನರ ಅತಿಯಾದ ನಂಬಿಕೆ ಇದ್ದು, ಅದು ಅವರನ್ನು ದುರ್ಮಾರ್ಗದತ್ತ ಕೊಂಡ್ಯೊಯ್ಯುವ ಸತ್ಯವನ್ನು ಮನಗಾಣಿಸುವ ಪ್ರಯತ್ನದಂತಿದೆ ನಾಟಕ.
–ನಾಗರೇಖ ಗಾಂವಕರ