ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ ನೆಲೆಯಲ್ಲಿ ಭ್ರಷ್ಟನಾಗಿದ್ದು ಮನೋನಿಗ್ರಹವನ್ನು ತಡೆಯಲಾಗದ ಪತಿತ ವ್ಯಕ್ತಿತ್ವವಾಗಿ ಶಿಕ್ಷೆಗೆ ಗುರಿಯಾದರೂ ಇಸಾಬೆಲ್‍ಳ ಸದಾಚಾರದ ನಡವಳಿಕೆಯಿಂದ ಅವಳಿಂದ ಕ್ಷಮೆಗೆ ಪಾತ್ರನಾಗುತ್ತಾನೆ. ಕ್ರೈಸ್ತ ತತ್ವವಾದ ನಾಯ್ಯ ಕರುಣೆ ಕ್ಷಮೆಯೂ ನಾಟಕದ ಮುಖ್ಯ ಆಶಯವಾಗಿದೆ. ಟಿಟ್ ಫಾರ್ ಟ್ಯಾಟ್ [ ಏಟಿಗೆ ಏಟು] ಎಂಬಂತೆ ನಾಟಕದಲ್ಲಿ ದುಷ್ಠ ಬಳಸಿದ ತಂತ್ರವನ್ನೆ ತಿರುಮಂತ್ರವಾಗಿಸಿ ಗೆಲ್ಲುವ ಕಲೆಯನ್ನು ಪ್ರಸ್ತುತ ಪಡಿಸುತ್ತದೆ ನಾಟಕ.
ವಿಯೆನ್ನಾದ ಡ್ಯೂಕ್ Vincentio ಕಾರಣಾಂತರಗಳಿಂದ ಅಧಿಕಾರದ ಉಸ್ತುವಾರಿಯನ್ನು ಪ್ಯೂರಿಟನ್ ಧರ್ಮ ಸಿದ್ಧಾಂತಗಳನ್ನು ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ, ಸಚ್ಚಾರಿತ್ರ್ಯದ ಸೋಗು ಧರಿಸಿದ ಂಟಿgeಟoನಿಗೆ ವಹಿಸಿ ಸ್ವಲ್ಪಕಾಲ ವಿಶ್ರಮಿಸುತ್ತಾನೆ. ಎಂಜೆಲ್ಲೋ ತನ್ನ ಧರ್ಮಾಚರಣೆಗಳಲ್ಲಿ ನಿಷ್ಠೆಯನ್ನು ಅತೀ ಸೂಕ್ಷ್ಮವಾಗಿ ಪಾಲಿಸುವವನು. ಅದಕ್ಕಾಗಿ ಆತನೇ ತನ್ನ ಅಧಿಕಾರದ ಉಸ್ತುವಾರಿಗೆ ಯೋಗ್ಯನೆಂದು ಬಣ್ಣಿಸುತ್ತಾನೆ ಡ್ಯೂಕ್. ಇದು ಬರಿಯ ಒಂದು ಪರೀಕ್ಷೆಯಾಗಿದ್ದು ಡ್ಯೂಕ್‍ನ ಉದ್ದೇಶ ಎಂಜೆಲ್ಲೋನನ್ನು ಆತನ ಸಾತ್ವಿಕತೆಯ ನೈಜತೆಯನ್ನು ಪರೀಕ್ಷಿಸುವುದೇ ಆಗಿರುತ್ತದೆ. ಶುದ್ಧ ಚಾರಿತ್ರ್ಯದ ಕೊಂಬು ಧರಿಸಿಕೊಂಡ ಮುಖವಾಡದ ಎಂಜೆಲ್ಲೋ ನಮಗಿಲ್ಲಿ ದರ್ಶನವಾಗುತ್ತಾನೆ. ಅಧಿಕಾರ ಆತನನ್ನು ನಿಜಕ್ಕೂ ಭ್ರಷ್ಟಗೊಳಿಸುತ್ತದೆ. ಗದ್ದುಗೆಗೇರಿದ ಎಂಜೆಲ್ಲೋ ರಾಜ್ಯದಲ್ಲಿ ವ್ಯಭಿಚಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಸಲುವಾಗಿ ವ್ಯಭಿಚಾರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಘೋಷಿಸುತ್ತಾನೆ. ಆದರೆ ಆ ಶಿಕ್ಷೆಯ ಮೊದಲ ಅಪರಾಧಿ ಒಬ್ಬ ಸಾಮಾನ್ಯ ಯುವಕ ಕ್ಲಾಡಿಯೋ. ಆತ ತನ್ನ ಪ್ರಿಯತಮೆ ಜ್ಯೂಲಿಯಟ್‍ಳೊಂದಿಗೆ ವಿವಾಹಪೂರ್ವ ದೈಹಿಕ ಸಂಪರ್ಕ ಮಾಡಿದ್ದರಿಂದ ಆಕೆ ಗರ್ಭವತಿಯಾಗುತ್ತಾಳೆ. ಕ್ಲಾಡಿಯಸ್ ಅಪರಾಧಿಯಾಗುತ್ತಾನೆ. ಆಕೆಗೆ ಜೈಲು ಶಿಕ್ಷೆ ವಿಧಿಸಿದ ಎಂಜೆಲ್ಲೋ ಕ್ಲಾಡಿಯೋಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಾನೆ. ಅದರಿಂದ ಬಚಾವಾಗಲು ಕ್ಲಾಡಿಯೋ ತನ್ನ ಸಹೋದರಿ ಇಸಾಬೆಲ್ಲಾಳ ಸಹಾಯ ಕೇಳುತ್ತಾನೆ. ಸಹೋದರನ ಮರಣವನ್ನು ತಪ್ಪಿಸುವ ಸಲುವಾಗಿ ಅದನ್ನು ವಿನಂತಿಸಲು ಎಂಜೆಲ್ಲೋನಲ್ಲಿಗೆ ಬರುವ ನನ್ ಇಸಾಬೆಲ್ಲಾಳ ಸೌಂದರ್ಯ ಆಕೆಯ ವಾಗ್ಚಾತುರ್ಯ, ಬುದ್ಧಿಮತ್ತೆಗಳಿಗೆ ಮರುಳಾಗುವ ಎಂಜೆಲ್ಲೋ ತನ್ನೆಲ್ಲ ತತ್ವಾದರ್ಶಗಳ ಮರೆತು ಬಿಡುತ್ತಾನೆ. ಮನುಷ್ಯನ ನೈತಿಕ ಅಧಃಪತನಕ್ಕೆ ಕಾರಣವಾಗುವ ಅಧಿಕಾರ, ಸೌಂದರ್ಯಗಳ ಮೇಲಾಟವನ್ನು ಶೇಕ್ಸಪಿಯರ ನಾಟಕಗಳಲ್ಲಿ ಕಣ್ಣಕಟ್ಟುವಂತೆ ನಿರೂಪಿಸುತ್ತಾನೆ. ಈಗ ಆತನಲ್ಲಿಯ ನೈಜ ಎಂಜೆಲ್ಲೋ ಪ್ರಕಟಗೊಳ್ಳುತ್ತಾನೆ. ಸಹೋದರನ ಶಿಕ್ಷೆಯನ್ನು ಮನ್ನಿಸಬೇಕಾದಲ್ಲಿ ಆಕೆ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕೆಂದು ಷರತ್ತು ಹಾಕುತ್ತಾನೆ. ಇದರಿಂದ ಸಂದಿಗ್ಧ ಪರಿಸ್ಥಿತಿಯ ಬಲೆಗೆ ಒಳಗಾಗುತ್ತಾಳೆ ಇಸಾಬೆಲ್ಲಾ. ತನ್ನ ಚಾರಿತ್ರ್ಯ ವಧೆಗಿಂತ ಸಹೋದರನ ಶಿಕ್ಷೆಯೇ ಸರಿಯೆಂದು ತೀರ್ಮಾನಿಸಿ ಆತನಿಗೆ ಮರಣದಂಡನೆಗೆ ಮಾನಸಿಕವಾಗಿ ಸಿದ್ಧವಾಗುವಂತೆ ತಿಳಿಸುತ್ತಾಳೆ. ಕ್ಲಾಡಿಯೋ ಕೂಡಾ ಸಹೋದರಿಯ ಶೀಲಹತ್ಯೆಗಿಂತ ತನ್ನ ಮರಣದಂಡನೆ ಸರಿಯೆಂದು ನಿರ್ಧರಿಸುತ್ತಾನೆ.
ಮನುಷ್ಯಮಾತ್ರದವರು ಇಂದ್ರಿಯ ನಿಗ್ರಹವಿಲ್ಲದೆಯೂ ಇದೆಯೆಂದು ಭ್ರಮಿಸಿ ವಿಚಿತ್ರವಾದ ಮಾನಸಿಕ ಹಿರಿಮೆಯಲ್ಲಿ ಬಳಲುವ ಅದೆಷ್ಟೋ ವ್ಯಕ್ತಿಗಳು ಕೊನೆಗೊಮ್ಮೆ ಅದು ಸಾಧ್ಯವಾಗದೇ ಜಗತ್ತಿನ ಕಣ್ಣಿನಲ್ಲಿ ವಿಕೃತ ಸ್ವಾಮಿಕಾಮಿಗಳಾಗುವ ಪರಂಪರೆ ಇಂದು ನಿನ್ನೆಯದಲ್ಲ. ಅದೂ ಶತಶತಮಾನಗಳ ಸರ್ವಸಂಗತ್ಯಾಗಿಗಳ ವೇಷ ಕಟ್ಟಿದ ವ್ಯಕ್ತಿತ್ವಗಳ ಪರಂಪರೆಯ ಸಾಲನ್ನೇ ಹೊಂದಿದೆ. ಎಂಜೆಲ್ಲೋ ಇದಕ್ಕೆ ಹೊರತಾಗುವುದಿಲ್ಲ. ಧರ್ಮದ ನಾಮ ಧರಿಸಿದ ಭಂಡನಾಗಿ ಕಂಡುಬರುತ್ತಾನೆ. ಕಟ್ಟುನಿಟ್ಟಿನ ಪ್ಯೂರಿಟನ್ ತತ್ವಾದರ್ಶಗಳ ಪರಿಪಾಲಕನೆಂಬ ಹಣೆಪಟ್ಟಿಯನ್ನು ತೊಟ್ಟುಕೊಳ್ಳಬಯಸುವ ಆತನ ಪೂರ್ವಾಪರವೂ ಸ್ವಚ್ಛ ಇತಿಹಾಸ ಹೊಂದಿಲ್ಲದೇ ಇರುವುದನ್ನು ಈ ಹಿಂದೆಯೇ ತಿಳಿದ ಡ್ಯೂಕ್ ಆತನ ಬಣ್ಣಬಯಲಿಗೆಳೆಯಲೆಂದೇ ಈ ನಾಟಕವಾಡುತ್ತಾನೆ. ಹಾಗಾಗಿ ನಾಟಕದಲ್ಲಿ ಉದ್ದಕ್ಕೂ ಡ್ಯೂಕ್‍ನ ಕೈಚಳಕವೇ ಹಾಸುಹೊಕ್ಕಾಗಿದೆ.
ಆಗಲೇ ವೇಷಾಂತರದಲ್ಲಿದ್ದ ಡ್ಯೂಕ್ ಜ್ಯೂಲಿಯಟ್‍ಳ ಭೇಟಿಯಾಗಿ ಆಕೆಯೊಂದಿಗೆ ಕ್ಲಾಡಿಯೋನಿಗಿದ್ದ ಸಂಬಂಧವನ್ನು ತಿಳಿದುಕೊಳ್ಳುತ್ತಾನೆ. ಮತ್ತು ಇಸಾಬೆಲ್ಲಳ ಭೇಟಿಯಾಗಿ ಈ ಹಿಂದೆ ಎಂಜೆಲ್ಲೋ ಮರಿಯಾನ ಎಂಬ ಹೆಣ್ಣಿನ ಬದುಕನ್ನು ಪ್ರವೇಶಿಸಿದ್ದಾಗಿಯೂ ಆಕೆಯಲ್ಲಿ ಹಣವಿಲ್ಲವೆಂಬ ಕಾರಣದಿಂದ ಆಕೆಯನ್ನು ತೊರೆದು ಹೋಗಿರುವದಾಗಿಯೂ ಹೇಳಿ ಬೆಡ್ ಟ್ರಿಕ್ ಉಪಾಯದಿಂದ ಆಕೆಯ ಸಹೋದರನ ಪ್ರಾಣವನ್ನು ಕಾಪಾಡಬಹುದೆಂದು, ಈಗಲೂ ಎಂಜೆಲೋನನ್ನು ಪ್ರೀತಿಸುತ್ತಿರುವ ಮೇರಿಯಾನಳ ಬದುಕನ್ನು ಸರಿಪಡಿಸಬಹುದೆಂದು ಸಲಹೆ ನೀಡುತ್ತಾನೆ. ಹಾಗೆ ಮರಿಯಾನ ಕೂಡಾ ಈ ಸಂಚಿಗೆ ಕೈ ಬೆಸೆಯುತ್ತಾಳೆ. ಮರಿಯಾನ ಇಸಾಬೆಲ್ಲಳ ವೇಷತೊಟ್ಟು ಎಂಜೆಲ್ಲೋನ ಆಸೆಯಂತೆ ಆತನ ಜೊತೆಗೆ ಕಾಲಕಳೆಯುತ್ತಾಳೆ. ಆದರೆ ದುಷ್ಟ ಎಂಜೆಲ್ಲೋ ಮರಿಯಾನಳೇ ಇಸಾಬೆಲ್ಲಳೆಂದು ಬಗೆದು ತನ್ನ ಬಯಕೆ ಪೂರೈಸಿಕೊಳ್ಳುತ್ತಾನೆ. ನಿಜವಾಗಿ ಮರಿಯಾನ ಆತನ ಹಳೆಯ ಪ್ರೇಯಸಿ. ಈ ಮೂಲಕ ಶೇಕ್ಸಪಿಯರ ನಾಟಕ ನೈತಿಕ ಗೆಲ್ಮೆಯನ್ನು ಎತ್ತಿಹಿಡಿಯುತ್ತದೆ.
ಆದರೆ ಯಾವಾಗ ತನ್ನ ಕೆಲಸವಾಯಿತೋ ದುರುಳ ಎಂಜೆಲ್ಲೋ ತನ್ನ ಮಾತಿಗೆ ತಪ್ಪಿ ಕ್ಲಾಡಿಯೋನ ತಲೆಕಡಿಯಲು ಆಜ್ಞಾಪಿಸುತ್ತಾನೆ. ಈಗ ಭಿಕ್ಷುವಿನ ವೇಷದಲ್ಲಿಯ ಡ್ಯೂಕ್‍ನ ಸಲಹೆಯಂತೆ ಕ್ಲಾಡಿಯೋನ ಬದಲಿಗೆ ಬೇರೊಬ್ಬ ಮೃತವ್ಯಕ್ತಿಯ ಶಿರವನ್ನು ಛೇಧಿಸಿ ಎಂಜೆಲ್ಲೋ ನಂಬುವಂತೆ ಮಾಡಲಾಗುತ್ತದೆ. ಅದೇ ಸಮಯಕ್ಕೆ ಡ್ಯೂಕ್ ತನ್ನ ನಿಜವೇಷದಲ್ಲಿ ವಾಪಾಸಾಗುತ್ತಾನೆ. ಈಗ ಇಸಾಬೆಲ್ಲಾ ಎಂಜೆಲ್ಲೋನ ವಿರುದ್ಧ ಆತನ ಬೂಟಾಟಿಕೆಯನ್ನು ,ವ್ಯಭಿಚಾರವನ್ನು ಕೊಲೆಗಡುಕತನವನ್ನು ಡ್ಯೂಕ್‍ನಲ್ಲಿ ನಿವೇದಿಸಿ ನ್ಯಾಯಕ್ಕಾಗಿ ಮೊರೆಯಿಡುತ್ತಾಳೆ. ಡ್ಯೂಕ್ ಎಂಜೆಲ್ಲೋನ ತಪ್ಪುಗಳನ್ನು ಅನುಲಕ್ಷಿಸಿ ಆತನಿಗೆ ಮರಣದಂಡನೆ ವಿಧಿಸುತ್ತಾನೆ.
ಆದರೆ ಮಾನವೀಯತೆಯನ್ನು ಸ್ತ್ರೀ ಕ್ಷಮಾಗುಣವನ್ನು ಪ್ರದರ್ಶಿಸುವ ಇಸಾಬೆಲ್ಲಾ ಮತ್ತು ಮರಿಯಾನ ಆತನ ಮೇಲೆ ಕರುಣೆ ತೋರುವಂತೆ ಪ್ರಾರ್ಥಿಸುತ್ತಾರೆ. ನಾಟಕ ಕ್ಲಾಡಿಯೋ ಮತ್ತು ಜ್ಯೂಲಿಯಟ್ ಹಾಗೂ ಎಂಜಲ್ಲೋ ಮತ್ತು ಮರಿಯಾನರ ವಿವಾಹದೊಂದಿಗೆ ಸುಖಾಂತವಾಗುತ್ತದೆ. ಕಾರುಣ್ಯ ನಾಟಕವನ್ನು ಬೆಳಗುತ್ತದೆ. ಡ್ಯೂಕ್ ನಾಟಕದ ಎಲ್ಲ ಪಾತ್ರಗಳಿಗೆ ಮಾರ್ಗದರ್ಶಕನಾಗಿ ದೈವಿಕ ನ್ಯಾಯಾಧೀಶನಾಗಿ ಕಂಡುಬರುತ್ತಾನೆ. ನೈಜತೆ ಮತ್ತು ಡಂಭ ಚಹರೆಗಳ ನಡುವಿನ ಭಿನ್ನತೆಯನ್ನು, ಸೈದ್ಧಾಂತಿಕ ನೀತಿಗಳನ್ನು ಮತ್ತು ಕಟುಸತ್ಯಗಳನ್ನು ನಡುವಿನ ವ್ಯತ್ಯಾಸವನ್ನು ನಾಟಕ ತೆರೆದಿಡುತ್ತದೆ.
ಶೇಕ್ಸಪಿಯರ ನಾಟಕಗಳಲ್ಲಿ ಹೆಚ್ಚು ಹೆಚ್ಚಾಗಿ ಸ್ತ್ರೀ ಪಾತ್ರಗಳು ಸಚ್ಚಾರಿತ್ರ್ಯದ, ದೌರ್ಜನ್ಯಕ್ಕೆ ಒಳಗಾಗುವ ಆದಾಗ್ಯೂ ಕ್ಷಮಾಗುಣ ತೋರುವ ಉದಾತ್ತ ಪಾತ್ರಗಳು. ಅದೂ ಅಲ್ಲದೇ ಶ್ರೇಷ್ಟ ಬೌದ್ಧಿಕತೆಯನ್ನು ಸ್ತ್ರೀಯರಲ್ಲಿ ಆರೋಪಿಸಿ ಅವರನ್ನು ಅಮರಗೊಳಿಸುತ್ತಾನೆ ಶೇಕ್ಸಪಿಯರ.ಅದಕ್ಕೆ ಹಲವು ಉದಾಹರಣೆಗಳು ಟೆಂಪೆಸ್ಟನ ಮಿರಿಂಡಾ, ಯ್ಯಾಸ್ ಯು ಲೈಕ್ ಇಟ್‍ನ ರೊಸಾಲಿಂಡಾ, ಇಲ್ಲಿನ ಇಸಾಬೆಲ್ಲಾ ಇವರೆಲ್ಲ ಅಂದಿನ ಬುದ್ಧಿವಂತ ಸಂಭಾವಿತ ಮಹಿಳಾವರ್ಗವನ್ನು ಪ್ರತಿನಿಧಿಸುತ್ತಾರೆ
ಈ ನಾಟಕದ ಮೂಲ ಇಟಾಲಿಯನ್ ಬರಹಗಾರ ಗಿರಾಲ್ಡ ಸಿಂಥಿಯೋ ಬರೆದ ಸಣ್ಣ ಕಥೆ ಶೇಕ್ಸಪಿಯರನ ಈ ನಾಟಕದ ಮೂಲ ಕಥಾ ವಸ್ತು. ವೆಟ್ ಸ್ಟೋನ್ ನಿಂದ ಇಂಗ್ಲೀಷಗೆ ಅನುವಾದಿಸಲ್ಪಟ್ಟ ಸಿಂಥಿಯೋನ ನಾಟಕದ ಈ ಹಳೆಯ ಕಥಾಹಂದರ ಶೇಕ್ಸಪಿಯರನ ಕೈಯಲ್ಲಿ ವಿಶಿಷ್ಟವಾದ ನೈತಿಕ ಪ್ರಶ್ನೆಗಳನ್ನು ಎತ್ತಿ ಹೊಸ ರಕ್ತಮಾಂಸಗಳನ್ನು ಹೊತ್ತು ಮೂಡಿಬಂದಿತು. ನಾಟಕದ ಧ್ವನಿ ಮತ್ತು ವಸ್ತುಗಳು ಕ್ರೈಸ್ತ ತತ್ವಗಳನ್ನು ಬೆಳಗಿಸಿದರೂ ಶೇಕ್ಸಪಿಯರನ್ ಒಳನೋಟ ಸಾಮಾಜಿಕ ಜೀವನದಲ್ಲಿ ಅಧಿಕಾರದ ದುರುಪಯೋಗ ಹಾಗೂ ಮುಖವಾಡದ ವ್ಯಕ್ತಿತ್ವವನ್ನು ಬಯಲಿಗೆಳೆಯುವುದು ಆಗಿತ್ತು.
–ನಾಗರೇಖ ಗಾಂವಕರ