
ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ ಮಧುರ ಭಾವ ವ್ಯಕ್ತಡಿಸುವ ಕುಡಿ ನೋಟದಲ್ಲೇ ಹೃದಯ ಅಪಹರಿಸುವ ಚಾಣಾಕ್ಷ ಸುಶಾಂತ, ” ಶೃತಿ ನೀನೆಂದರೆ ನನ್ನ ಹೃದಯ ರಂಗೇರುವುದು ನೀ ಸನಿಹ ಬರಲು ನಾಡಿಯಲ್ಲಿ ಮಿಂಚು ಸಂಚಾರವಾದಂತೆ, ಖುಷಿಯ ಪರಿಚಯವೇ ನಿನ್ನಿಂದ ಆದಂತಿದೆ ಎನಗೆ, ಎಂದು ಸದಾ ಅವಳ ಗುಂಗಲ್ಲೆ ಇರುವ ಹುಡುಗ ಅವಳಿಗಾಗಿ ಅಲೆಯದ ದಿನಗಳೇ ಇಲ್ಲ, ಅವಳನ್ನು ನೆನೆಯದ ಕ್ಷಣಗಳೇ ಇಲ್ಲ. ಅವಳ ಮುಂದೆ ತನ್ನ ಒಲವನ್ನು ಹೇಳಿಕೊಳ್ಳಬೇಕು ಆ ಸಮಯಕ್ಕಾಗಿ ಕಾಯುತ್ತ, ಕಾದರೆ ಬರದು ನಾನೇ ಸಮಯವನ್ನು ಮಾಡಿಕೊಳ್ಳಬೇಕು ಇಂದ ಅವಳು ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ತನ್ನ ಪ್ರೀತಿಯ ದಾರಿಗೆ ಜೊತೆಯಾಗಿಬಿಡು, ನನ್ನ ಒಲವಿನ ರಾಗಕ್ಕೆ ಶೃತಿ ಸೇರಿಸಿಬಿಡು ಎಂದುಹೇಳಬೇಕೆಂದು ಆತುರಾತುರವಾಗಿ ಹೊರಟ ಸುಶಾಂತ.
ಆತುರಾತುರವಾಗಿ ಹೊರಟ ಸುಶಾಂತನ ಮನದಲ್ಲಿ ನಡುಕ, ಶೃತಿಯು ಅವನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿಬಿಟ್ಟರೆ, ಅವನ ಒಲವಿನ ಕೋರಿಕೆಗೆ ಕಲ್ಲೆಸೆದರೆ ತನ್ನ ಹೃದಯದ ಪ್ರೇಮ ನೌಕೆ ಯಾವ ಮಟ್ಟಕ್ಕೆ ಕುಸಿಯುತ್ತದೆಂದರೆ ಬಿರುಗಾಳಿಗೆ ಹಡಗು ಸಿಕ್ಕು ಹೊಯ್ದಾಡಿ ಸಮುದ್ರಪಾಲಾದಂತೆ. ಒಮ್ಮಿಂದೊಮ್ಮೆ ಗಾಳಿ ತುಂಬಿದ ಬಲೂನಿಗೆ ಊದಿನಕಡ್ಡಿ ಇಟ್ಟಂತೆ. ಅಬ್ಬಾ, ಈ ಪ್ರೀತಿಯ ಅಮಲು ಹೇಗೆಂದರೆ, ಒಂದು ಹೊತ್ತು ಹೊಟ್ಟೆಗೆ ಊಟ ಇಲ್ಲದಿದ್ದರೂ ತಡೆದುಕೊಳ್ಳಬಹುದು ಆದರೆ ಈ ಪ್ರೀತಿಯನ್ನೊ ಸಿಹಿ ಊಟವನ್ನು ದಿನ ಪೂರ್ತಿ ಉಂಡರೂ ಸಾಲದು. ಸವಿದಷ್ಟೂ ಸಿಹಿ ಜಾಸ್ತಿ. ಒರತೆ ನೀರಂತೆ ಬತ್ತದ ಪನ್ನೀರು. ಇದೆಲ್ಲ ಅವಳ ಸಮ್ಮತಿ ಸಿಕ್ಕರೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಹಸಿದವನ ಮುಂದೆ ವಿವಿಧ ಭಕ್ಷಗಳನ್ನಿಟ್ಟು ಊಟ ಮಾಡದ ಹಾಗೆ ಬಾಯಿ ಕಟ್ಟಿದಂತೆ. ಏನಾಗುತ್ತೆ ನೋಡೋಣ ಎಂದು ತರಾತುರಿಯಾಗಿ ಶೃತಿ ಕಾಲೇಜಿಗೆ ಬಂದ ಸುಶಾಂತ. ಇತ್ತ ಕಾಲೇಜು ಬಿಟ್ಟಿತು ಅವಳು ನವಿಲ ನಡಿಗೆಯಿಂದ ಹೊರ ಬರುತ್ತಿದ್ದಳು. ನವಿಲು ಕುಣಿದರೆ ಸುಂದರ, ಆದರೆ ಇವಳ ಹೆಜ್ಜೆಯೇ ಕಣ್ಣಿಗೆ ಆನಂದದ ಔತಣದಂತೆ. ಆ ನಯನಗಳೋ ನವರತ್ನದ ಹೊಳಪನ್ನು ಕರಗಿಸಿಕೊಂಡು ಕಣ್ಣಲ್ಲಿ ತುಂಬಿಕೊಂಡಂತಿವೆ. ಅವಳ ಒಂದು ನೋಟ ಮನಸಿನ ಬಾಧೆಗಳಿಗೆಲ್ಲ ದಿವ್ಯೌಷಧಿ. ಆ ಪ್ರಶಾಂತವಾದ ನಯನಗಳು ಹೃದಯವನ್ನು ಪ್ರಸನ್ನಗೊಳಿಸುತ್ತವೆ. ಅವುಗಳ ಮುಂದೆ ಆ ಗುಂಗುರು ಮುಂಗುರುಗಳು ವಯ್ಯಾರದಿ ಹೊಯ್ದಾಡುತ್ತಿದ್ದರೆ ಇತ್ತ ನೋಡುವ ಗಂಡೈಕ್ಳ ನೋಟ ಕೊಂಚವೂ ಅಲುಗಾಡುತ್ತಿರಲಿಲ್ಲ. ಅವಳ ಕೆನ್ನೆಯಂತೂ {ಶೃತಿ, ವರ್ಣನೆಗೂ ಮೀರಿದ ಅಂದಗಾತಿ ಆದರೂ ನೋಡಿದ ಹೃದಯಗಳು ಹೊಗಳದೇ ಇದ್ದರೆ ಅಸಮಾಧಾನಿಗಳಾಗಿಯೇ ಉಳಿಯುತ್ತಾರೆ. ಅಂತಹ ಸುಂದರಿ}
ಅದೇ ತಾನೆ ಮಾಸ(ತಿಂಗಳ)ದ ಮಗುವಿಗೆ ಎರೆದಾಗ ಹೇಗೆ ಗಲ್ಲಗಳು ಫಳಫಳ ಎಂದು ಮಿನುಗುತ್ತಿರುತ್ತವೋ, ಥಟ್ಟನೆ ಬಳಿ ಯಾರಿದ್ದರೂ ಸರಿ ಗಲ್ಲ ಸವರಿ ಅಧರಕ್ಕೆ ಸೋಕಿಸುವ ಹಾಗೆ ಹಾಲು ಗಲ್ಲದವಳು ಶೃತಿ. ನಕ್ಕರೆ ಮಲ್ಲಿಗೆ ಅರಳಿದಂತೆ ಹಾಲು ಬಣ್ಣದ ಹಲ್ಲುಗಳ ದರ್ಶನ, ಬೆಳ್ಳಕ್ಕಿ ಹಿಂಡಿನ ದಂಡು ಬಾಯೊಳಗೆ. ಅಧರ ಕಿತ್ತಳೆ ಬಣ್ಣ ಸೂರ್ಯ ಕಾಂತಿ, ನೇರವಾದ ನಾಸಿಕದಿಂದ ಅಂದ ಹೆಚ್ಚಿಸಿಕೊಂಡು ಬೀಗುವ ಮೂಗುತಿ, ಹುಬ್ಬುಗಳಂತು ಜಕ್ಕಣಾಚಾರಿ ಕೆತ್ತಿದಂತಿವೆ. ಸೌಂರ್ಯದ ಜೊತೆಗೆ ಎಲ್ಲದರಲ್ಲೂ ಅಚ್ಚುಕಟ್ಟುತನದಿಂದ ಬೆಳೆದಿದ್ದ ಶೃತಿ ಸಭ್ಯಸ್ಥ ಮಧ್ಯಮ ವರ್ಗದ ಸಂಸ್ಕಾರ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವಳು. ಇಬ್ಬರು ಅಕ್ಕಂದಿರು ಅಪ್ಪ ಅಮ್ಮನ ಮುದ್ದಿನ ಅರಗಿಣಿ. ಇಬ್ಬರು ಅಕ್ಕಂದಿರು ಚೆನ್ನಾಗಿ ಓದಿಕೊಂಡಿದ್ದರು. ಅದೃಷ್ಟ ಒಲಿದು ಬಂದಾಗಿತ್ತು. ಶ್ರೀಮಂತ ಕುಟುಂಬದವರು ಅಕ್ಕಂದಿರನ್ನು ತಮ್ಮ ಮನೆ ತುಂಬಿಕೊಳ್ಳಲು ಸಂಬಂಧ ಅರಸಿ ಬಂದಿದ್ದರು. ವರದಕ್ಷಿಣೆಯ ಆಸೆ ಇರದವರಾದರೂ ಅದ್ಧೂರಿಯಾಗಿ ಮದುವೆಮಾಡಿಕೊಡುವ ಬೇಡಿಕೆಯಿತ್ತು. ಉತ್ತಮ ಸಂಬಂಧ ಕಡಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ ಅವರ ಅಪ್ಪ. ಕಡಿಮೆ ಸಂಬಳ ಸಿಟಿ ಜೀವನ ಬದುಕು ದುಸ್ತರವಾಗಿದ್ದರೂ, ಯಾವ ಕೊರತೆ ಇಲ್ಲದೆ ಅವರ ಖಾಲಿ ಜೇಬಿನ ತೊಂದರೆಯನ್ನು ಯಾವತ್ತೂ ಮಕ್ಕಳ ಅರಿವಿಗೆ ಬರದಂತೆ ಬೆಳೆಸಿದ್ದರು. ಮದುವೆ ಕೂಡ ಹಾಗೆ ಬೀಗರ ನಿರೀಕ್ಷೆಗೂ ಮೀರಿದ ಅದ್ಧೂರತೆಯಿಂದ ಮುಗಿಸಿ ಸಂಭ್ರಮಿಸಿದ್ದರು. ಬಳಿಕ ತಮ್ಮ ಸಾಲದ ಬವಣೆಗೆ ಕುಗ್ಗಿ ಹೋದದ್ದು ಮಾತ್ರ ಬೇಡವೆಂದರೂ ಶೃತಿಗೆ ತಿಳಿಯುವಂತಿತ್ತು. ಅಕ್ಕಂದಿರು ಮದುವೆ ಆಗಿ ವರುಷಕ್ಕೊಂದರಂತೆ ಬಾಣಂತನಗಳನ್ನೂ ಮುಗಿಸಿಕೊಂಡಿದ್ದರು. ಈಗ ಶೃತಿ ಅಪ್ಪ ಅಮ್ಮ ಮೂವರು ತುಸು ಕಷ್ಟದಿಂದಲೇ ಬದುಕಿನ ಪಯಣ ಸಾಗಿಸುತ್ತಿದ್ದರೂ ಯಾರಿಗೂ ತೋರ್ಪಡಿಸದಂತೆ ಇದ್ದರು. ಶೃತಿ ಮದುವೆಗಾಗಿ ವರಗಳ ದಂಡು ಬೇಕಾದಷ್ಟಿದ್ದರೂ ಓದಿನ ಕಾರಣ ಹೇಳಿ ಮುಂದೂಡುತ್ತಿದ್ದರು.
ಇತ್ತ ತನ್ನ ಓದಿನತ್ತವೇ ತನ್ನ ಎಲ್ಲ ಚಿತ್ತವನ್ನಿಟ್ಟ ಶೃತಿ ತಾನು ತನ್ನ ಓದು ಅಂತಲೇ ಇದ್ದಳು. ಕಾಲೇಜಿಗೆ ಬಂದವಳು ತನ್ನ ಕೆಲವೇ ಸ್ನೇಹಿತೆಯರೊಂದಿಗೆ ಕಾಲ ಕಳೆಯುತ್ತಿದ್ದಳು. ಆ ದಿನವೂ ಎಂದಿನಂತೆ ಕಾಲೇಜು ಮುಗಿಸಿ ಹೊರ ನಡೆದಿದ್ದಳು. ಅವಳು ಬರುವುದನ್ನೇ ಕಾಯುತ್ತಿದ್ದ ಸುಶಾಂತ ಅವಳನ್ನು ಕಂಡು ಅವಳ ಸ್ಫುರದ್ರೂಪಕ್ಕೆ ಸೋತಂತೆ ಮೈಮರೆತು ನಿಂತೇ ಬಿಟ್ಟಿದ್ದ. ಇನ್ನೇನು ಅವಳು ಇವನ ಬಳಿ ಹಾದು ಮುಂದಾಗಬೇಕು, ಎಚ್ಚರಗೊಂಡವನೆ ಹಲೋ ಶೃತಿ ನಾನು ಸುಶಾಂತ, ಇಂಜಿನಿಯರ್. ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು ಅದ್ಕೇ, ಸುಶಾಂತ ಒಮ್ಮೆಲೆ ಶೃತಿ ನಿಮ್ಮೊಡನೆ ಸ್ವಲ್ಪ ಮಾತಾಡ್ಬೇಕು ಅಂದ, ಅದನ್ನು ಕೇಳಿಯೇ ಶೃತಿಯಲ್ಲಿ ನಡುಕ ಶುರು ಆಯ್ತು. ಬೆವತೋದ್ಲು. ಏನು ಮಾತಾಡದೆ, ಹೆಜ್ಜೆ ಜೋರು ಮಾಡಿದ್ಲು ಸುಶಾಂತನ ಕಡೆಗೆ ತಿರುಗಿಯೂ ನೋಡದೆ ಗೆಳೆತಿಯರ ಕೈ ಹಿಡಿದು ಮುಂದೆ ಸಾಗಿದ್ಲು. ಗೆಳತಿ ಮಧುಮಿತಾ, ಶೃತಿ ಅವನು ನನ್ನಣ್ಣನ ಗೆಳೆಯ ಕಣೆ ಒಂದೆರಡು ಬಾರಿ ಮನೆಗೆ ಬಂದಿದ್ದ. ಮಾತಾಡ್ಸೆ, ಏನೋ ಮಾತಾಡ್ಬೇಕಂತೆ ಏನು ಅಂತಾದ್ರು ಕೇಳೇ ಅಂದ್ರು ಶೃತಿಗೆ ಧೈರ್ಯ ಬರಲಿಲ್ಲ. ಅಪರಿಚಿತರೊಂದಿಗೆ ಏನಿರುತ್ತೆ ಮಾತು. ಅವರ್ಯಾರೋ ಗೊತ್ತೇ ಇಲ್ಲ, ನನ್ ಜೊತೆ ಏನು ಕಣೆ ಮಾತು. ನಂಗೆ ಭಯ ಆಗುತ್ತೆ, ಅವರ ಜೊತೆ ಮಾತಾಡೋದನ್ನ ಯಾರಾದ್ರು ನೋಡಿದ್ರೆ ನನ್ ಬಗ್ಗೆ ಏನ್ ಅನ್ಕೊಬೋದು? ಬೇಡ ಹೋಗೋಣ ನಡಿರಿ ಅಂತ ಹೊರಟೇ ಹೋದ್ಲು. ಗೆಳತಿಯರು ನೀ ಒಳ್ಳೆ ಹಳ್ಳಿ ಹುಡುಗಿ ಹಂಗ್ ಮಾಡ್ತಿ ನೋಡು ಶೃತಿ. ಮಾತಾಡ್ಸೋಕೆ ಇಷ್ಟೊಂದು ಅಂಜಿಕೆನಾ? ಹೋಗ್ಲಿ ಬಿಡು ಆದ್ರೂ ಆ ಹುಡುಗನ ಮುಖ ನೋಡಿದ್ರೆ ಒಳ್ಳೆಯವನ್ಥರಾ ಕಾಣ್ತಾನೆ. ನೋಡೋಕೂ ವೆರಿ ಸ್ಮಾರ್ಟ್ ಆಗಿದಾನೆ. ಇಂಜಿನಿಯರ್ ಅಂತ ಬೇರೆ ಅಂದ. ಎಜುಕೇಟೆಡ್, ಸ್ಮಾರ್ಟ್, ಡೀಸೆಂಟ್ ಗಾಯ್ ಮಾತಾಡ್ಸ್ಬೇಕಿತ್ತು ಅಂತ ಗೊಣಗಿದ್ರು. ಶೃತಿಗೆ ಮಾತ್ರ ಎದೆ ಬಡಕೊಳ್ತಾನೇ ಇತ್ತು. ಇದುವರೆಗೂ ಕಾಲೇಜಲ್ಲಿ ಯಾವ ಹುಡುಗನೊಂದಿಗೂ ಮಾತಾಡಿದ್ದಿಲ್ಲ. ಸಡನ್ನಾಗಿ ಸುಶಾಂತ್ ಮಾತಾಡ್ಸಿದ್ದು ಇವಳ ನಡುಕಕ್ಕೆ ಕಾರಣವಾಯ್ತು. ಅಂತೂ ಮನೆ ಸೇರಿದ್ಲು.
ಇತ್ತ ಸುಶಾಂತನಿಗೆ ನಿರಾಸೆ, ಜೊತೆಗೆ ತಾನು ಒಮ್ಮಿಂದೊಮ್ಮೆಗೆ ನಿಮ್ ಜೊತೆ ಮಾತಾಡ್ಬೇಕು ಅಂದ್ರೆ ನನ್ ಶೃತಿಗೆ ಹೇಗಾಗಿರ್ಬೇಡ. ನನ್ ಪರಿಚಯನೇ ಇಲ್ಲ ಅವಳಿಗೆ, ಬೇರೆ ರೀತಿ ಮೊದಲು ಪರಿಚಯವಾಗ್ಬೇಕು ಹೇಗೆ ಎಂದು ಯೋಚಿಸತೊಡಗಿದ. ಅವಳ ನಂಬರ್ ಪತ್ತೆ ಹಚ್ಚಿ ಮೆಸೇಜ್ ಮಾಡಿದ್ರೆ…. ಅಯ್ಯೋ ಅವರ ಮನೇಲಿ ಯಾರಾದ್ರು ನೋಡಿದ್ರೆ ! ಬೇಡ ಎಂದವನೇ ಅವಳ ಗೆಳತಿಯರ ಮುಖೇನ ಏನಾದ್ರು ಮಾಡಬೇಕು, ಹೇಗಾದ್ರು ಒಂದು ಪ್ರೇಮದೋಲೆ ಬರೆದು ಅವಳು ಓದುವಂತೆ ಮಾಡಬೇಕು. ನನ್ನೋಲೆ ಓದಿದ್ರೆ ಖಂಡಿತ ಅವಳು ನನ್ನ ಮಾತಾಡಿಸ್ತಾಳೆ ಎಂದು ಮೊದಲ ಪ್ರೇಮ ಪತ್ರ ಬರೆದ. ಮರುದಿನ ತನ್ನ ಗೆಳೆಯನ ಸಹಾಯದಿಂದ ಅವನ ತಂಗಿ ಶೃತಿಯ ಆಪ್ತ ಗೆಳತಿ ಮಧುಮಿತಾಳ ಪರಿಚಯ ಮಾಡಿಕೊಂಡು ತಾನು ಶೃತಿನ ತುಂಬ ಪ್ರೀತಿ ಮಾಡ್ತಾ ಇರೋದನ್ನ ಹೇಳಿದ. ಮಧುಮಿತಾಳ ಅಣ್ಣ ಕೂಡ ತಂಗಿಗೆ, ಮಧು ಸುಶಾಂತ ತುಂಬ ಒಳ್ಳೆ ಹುಡುಗ ಅವನಿಗೆ ಸಹಾಯ ಮಾಡು ಪ್ಲೀಸ್ ಎಂದು ಹೇಳಿದ. ಸುಶಾಂತ ತಾನು ಬರೆದ ಒಲವಿನೋಲೆಯನ್ನು ಮಧುಗೆ ನೀಡಿ ದಯವಿಟ್ಟು ಶೃತಿಗೆ ಇದನ್ನು ಕೊಡಿ. ನನ್ನ ಮನದ ಒಲವಿನ ಸಂದೇಶ ಇದು. ಇದನ್ನು ಓದಲು ತಿಳಿಸಿ ಪ್ಲೀಸ್ ಎಂದು ಕೇಳಿಕೊಂಡ. ಮಧುಮಿತ ಆಯ್ತು ಕೊಡ್ತೀನಿ. ನೀವು ನಿಜವಾಗಲು ಅವಳನ್ನು ಇಷ್ಟ ಪಡ್ತಿದೀರಾ? ಹೌದು ರಿ ಮಧುಮಿತಾ ನೀವೇ ಹೇಗಾದ್ರು ನಮ್ಮಿಬ್ಬರನ್ನ ಒಂದು ಮಾಡ್ಬೇಕು ಎಂದು ಅಂಗಲಾಚಿಕೊಂಡ. ಸರಿ ಆದ್ರೆ ಅವಳು ತುಂಬ ಸೂಕ್ಷ್ಮ ಸ್ವಭಾವದ ಹುಡುಗಿ, ಅವಳು ಒಪ್ಪದೇ ಇದ್ರೆ ನೀವು ಅವಳಿಗೆ ತೊಂದ್ರೆ ಕೊಡಬಾರ್ದು. ನನ್ನ ಆತ್ಮೀಯ ಗೆಳತಿಗೆ ಏನಾದ್ರು ತೊಂದ್ರೆ ಆದ್ರೆ ನಾನು ಸುಮ್ನೆ ಇರೊಲ್ಲ. ನೀವು ಒಳ್ಳೆ ಹುಡುಗ ಅಂತ ಅಣ್ಣ ಹೇಳಿದ್ರಿಂದ ನಾನು ಒಪ್ಕೊಂಡಿದೀನಿ. ಇವತ್ ಕಾಲೇಜ್ನಲ್ಲಿ ಕೊಡ್ತೀನಿ ಅಂತ ಹೇಳಿ ಹೋದ್ಲು. ಆ ದಿನ ಕಾಲೇಜಲ್ಲಿ ಶೃತಿ ಎಂದಿಗಿಂತ ಮಂಕಾಗಿದ್ಲು. ಏನಾಯ್ತೇ ಶೃತಿ ಇನ್ನೂ ನೀನು ನಿನ್ನೆ ಮಾತಾಡ್ಸಲು ಬಂದ ಆ ಹುಡುಗನ ಬಗ್ಗೆ ಯೋಚಿಸ್ತಾ ಇದೀಯಾ ಹೇಗೆ? ಎಂದು ಮಧು ಕೇಳಿದ್ಲು. ಇಲ್ಲ ಮಧು ಅದೂ… ಅದೂ… ಆಯ್ತು ಬಿಡೇ ಶೃತಿ, ಅವನು ನನ್ನಣ್ಣನ ಗೆಳೆಯ ಕಣೆ ನಮ್ಮನೆಗೆ ಬಂದಿದ್ದ. ಅವನು ನಿನ್ನನ್ನು ತುಂಬ ಪ್ರೀತಿ ಮಾಡ್ತಾನಂತೆ. ಅದ್ಕೆ ಈ ಪ್ರೇಮ ಸಂದೇಶವನ್ನು ನಿಂಗೆ ಮುಟ್ಟಿಸು ಅಂತ ಕೊಟ್ಪಿದಾನೆ. ಒಳ್ಳೆ ಹುಡುಗ ಅಂತ ಅಣ್ಣ ಹೇಳಿದ. ತಗೋ ಈ ಲೆಟರ್ ಎಂದಳು. ಶೃತಿ ಬೇಡ ಕಣೆ ನಂಗೆ. ನಂಗಿದೆಲ್ಲ ಇಷ್ಟ ಇಲ್ಲ. ಅಯ್ಯೋ ಸುಮ್ನೆ ತಗೋಳೆ. ಓದು ನಾಳೆ ನಿನ್ನ ಅಭಿಪ್ರಾಯ ಹೇಳು ಡಿಯರ್. ನಿಂಗಿಷ್ಟ ಇಲ್ಲ ಅಂದ್ರೆ ಒತ್ತಾಯಮಾಡೋಹಾಗಿಲ್ಲ ಅಂತ ವಾರ್ನ್ ಮಾಡಿದೀನಿ. ನೀನು ಅಂಜಬೇಡ ಅವನ ಬಗ್ಗೆ ಪೂರ್ತಿ ತಿಳ್ಕೋತೀನಿ ನಾನು, ನೀ ಓದು ಅಷ್ಟೇ. ತಗೋ ಇದು ಅಂತ ಶೃತಿ ಬ್ಯಾಗಲ್ಲಿ ಇಟ್ಟೇ ಬಿಟ್ಲು ಮಧುಮಿತ…..
ಯವ್ವನದಲ್ಲಿ ಯಾವಾಗ ಪ್ರೇಮಾಂಕುರ ಯಾರ ಮೇಲಾಗುತ್ತೋ ಗೊತ್ತೇ ಆಗೊಲ್ಲ. ಸುಶಾಂತ ಅಂತೂ ಒಳ್ಳೆ ಸಭ್ಯಸ್ಥ. ಅವನ ಪ್ರೇಮ ಒಪ್ಪಿಕೊಂಡರೆ ಶೃತಿ, ಜೀವನದಲ್ಲಿ ಸಂತೋಷವಾಗಿರೋದಂತು ಗ್ಯಾರಂಟಿ. ಸುಶಾಂತ ಹೇಗೆ ಅಂತ ನಮ್ ಶೃತಿಗೆ ಗೊತ್ತಿಲ್ಲ. ಮಧುಮಿತ, ಶೃತಿ ಬ್ಯಾಗಲ್ಲಿ ಲವ್ ಲೆಟರ್ ಇಟ್ಟಾಗಿದೆ. ಹೃದಯದ ಬಾಕ್ಸ್ ಗೆ ಸುಶಾಂತನ ಒಲವಿನ ಸಂದೇಶ ತಲುಪಿದೆ. ಅದನ್ನ ಶೃತಿ ದುಗುಡದಿಂದ ಮನೆಗೆ ಒಯ್ಯುತ್ತಾಳೆ. ಶೃತಿ ಮನೆಗೆ ಹೋಗಿ ನೆಮ್ಮದಿಯಾಗಿ ಓದು. ಮನಸು ನಿರ್ಮಲವಾಗಿರಲಿ ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿ ಅನ್ನೊ ಮಧುರವಾದ ಅನುಭವ ಆಗ್ಲೇಬೇಕು. ನಿನ್ನ ಜೀವನದಲ್ಲಿ ಸುಶಾಂತನ ಆಗಮನ ಆಗಿದೆ. ಅವನು ಏನು ಬರ್ದಿದಾನೆ ಅಂತ ಓದು. ಆಮೇಲ್ ಒಂದ್ ನಿರ್ಧಾರಕ್ಕೆ ಬಾ ಅಂತ ಮಧುಮಿತ ಹೇಳಿದ್ದು ನೆನಪಾಯಿತು. ಮನೆಗೆ ಹೋಗಿ ಫ್ರೆಶ್ ಆಗಿ ಒಲ್ಲದ ಮನದಿಂದ ಅಪ್ಪ ಅಮ್ಮ ನೋಡಿದ್ರೆ ಹೇಗೆ ಎಂಬ ಭಯದಿಂದ ಕೋಣೆಯೊಳಗೆ ಸೇರುತ್ತಾಳೆ. ಸುಶಾಂತನ ಪ್ರೇಮದೋಲೆಯ ಓದು ಎಂತಹ ಅನುಭವ ಆಗುತ್ತೋ ಗೊತ್ತಿಲ್ಲ ಶೃತಿಗೆ. ಅವಳ ಮನಸ್ಸು ಪ್ರಫುಲ್ಲವಾಗಿದೆ, ಹೃದಯದ ಸದ್ದು ಜೋರಾಗಿದೆ, ಪ್ರೇಮದ ನಾದ ಚಿಗುರುತಿದೆ; ನಡುಗುವ ಕೈ, ಚಿತ್ತ ಶೂನ್ಯಸ್ಥಾನ ತಲುಪಿದಂತಿದೆ. ಓದುವ ಆಸೆ ಒಂದು ಕಡೆ, ವಯೋಸಹಜವಾದುದು. ಮುಂದಿನ ಆಗುಹೋಗುಗಳು ಸ್ಮೃತಿ ಪಟಲದಲ್ಲಿಲ್ಲ. ಹೃದಯ ತನ್ನಾಟ ಶುರು ಮಾಡಿದರೆ; ಬುದ್ಧಿಯದು ಏನು ನಡೆಯೊಲ್ಲ. ಅಂತೂ ಪತ್ರ ಕೈಗೆ ಬಂದಾಯ್ತು. ಒಲವಿನ ಪುಟ ತೆರೆದಿದ್ದಾಳೆ. ಮನಸಿನ ಬಾಗಿಲಿಗೆ ಹೂವಿನ ಪ್ರೇಮ ಸ್ಪರ್ಶ. ಓದಲು ಪ್ರಾರಂಭಿಸಿದ್ದಾಳೆ.
ನನ್ನ ಪ್ರೀತಿಯ, ನಲ್ಮೆಯ, ನೆಚ್ಚಿನ, ಮೆಚ್ಚಿನ ಶೃತಿ
ನೀ ಬಂದರೆ ನನ ಬಾಳಲಿ
ಹಾಲು ಸಕ್ಕರೆ ಜೇನಿನ ಸವಿ
ಜೊತೆಯಿರೆ ಪ್ರೇಮ ಒರತೆ ಉಕ್ಕುವುದು
ನಾ ಶರಣಾಗಿಹೆ ನಿನಗೆ
ಒಪ್ಪಿಬಿಡು ಕರುಣೆ ತೋರಿ
ಹರಿಸಿ ಪ್ರೇಮದ ಝರಿ…
ಶೃತಿ ನಾನು ನಿನ್ನನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದೇನೆ. ನಿನ್ನ ರೂಪ ಲಾವಣ್ಯ ನನ್ನನ್ನು ಅದೆಷ್ಟು ಮೋಹಿತನನ್ನಾಗಿ ಮಾಡಿದೆಯೋ, ಅದಕ್ಕೂ ಹೆಚ್ಚು ನಿನ್ನ ಗುಣ ನನ್ನ ಪ್ರಭಾವಿತನನ್ನಾಗಿಸಿದೆ. ಸಹಜವಾಗಿಯೇ ನಿನ್ನ ಅಂದಕ್ಕೆ ಮರುಳಾಗಿಯೇ ನನ್ನ ನಯನಗಳು ನಿನ್ನನ್ನು ನೋಡುತ್ತವೆ ಆದರೂ ಮನಸಿನಾಳದಲ್ಲಿ ನಿನ್ನೊಲವಿನ ಸಾಗರ ಹರಿಯುತ್ತಿದೆ. ಶೃತಿ ನೇರವಾಗಿ ನನ್ನ ಪ್ರೀತಿಯನ್ನು ನಿನಗೆ ಹೇಳುವ ಧೈರ್ಯ ತುಡಿತ ನನಗಿದೆ. ಆದರೆ ಅದನ್ನು ನೇರಾನೇರ ಆಲಿಸುವಷ್ಟು ಹೃದಯವಂತಿಕೆ ನಿನಗಿದೆ ಆದರೂ ಎದುರು ನಿಂತು ಮಾತಾಡುವ ಗಟ್ಟಿತನ ಇಲ್ಲದ ಮೃದು ಮನಸು ನಿಂದು. ಯಾವುದೋ ಅಪರಿಚಿತನ ಮುಂದೆ ನಿಲ್ಲದ ಸಂಸ್ಕಾರ ನಿಂದು. ರೂಪಸಿ ಆದರೂ ನಿರಹಂಕಾರಿಣಿ. ಅಷ್ಟೇ ಸ್ವಾಭಿಮಾನಿ ಕೂಡ. ಸಭ್ಯವಾದ ಉಡುಗೆ, ಸಹಜವಾದ ಮಾತು ನನ್ನನ್ನು ನಿನ್ನ ವಶವಾಗುವಂತೆ ಮಾಡಿವೆ. ನಿನ್ನ ನಗುವ ನೋಡಲೆಂದೇ ನಾ ನಿತ್ಯ ಪರದಾಡುತ್ತೇನೆ. ಶೃತಿ ನೀ ನನ್ನ ಪ್ರಾಣವಾಗಿದ್ದೀಯ. ನಿನಗಾಗಿ ಕಾಯುತ್ತಿದೆ ನನ್ನ ಪ್ರಾಣ. ಒಂದು ವರ್ಷದಿಂದಲೂ ನಾನು ನಿನಗೆ ಅರಿವಿಲ್ಲದಂತೆ ನಿನ್ನ ಹಿಂದೆ ಬಿದ್ದಿದ್ದೇನೆ. ನಿನ್ನ ಪೂರ್ಣ ಪರಿಚಯ ನನಗಿದೆ ಶೃತಿ. ಅಂದಕ್ಕೆ ಸೋತು ಬಂದವನಲ್ಲ ನಾನು ನಿನ್ನ ಅಂದವನ್ನು ಆರಾಧಿಸುವವನು ನಾನು. ನಿನ್ನ ಮುಗ್ಧ ಮಗುವಿನ ಮನಸಿಗೆ ಬಿದ್ದವನು. ನೀ ಓಬೇರಾಯನ ಕುಟುಂಬದವಳಂತೆ ಇರುತ್ತೀಯ. ಹಣೆಗೆ ಟಿಕ್ಕಿಯೂ ಬೇಡವೆನ್ನುವ ಹುಡುಗಿಯರ ಮಧ್ಯೆ ಉದ್ದ ಕುಂಕುಮ ಶೋಭಿತಳಾಗಿ ನಗು ಮೊಗದಿಂದ ಇರ್ತೀಯ ನೀನು. ಆದಕ್ಕೆ ನೀನು ನಂಗಿಷ್ಟ. ನೀನು ನನ್ನೆದೆಯ ಚಿಕ್ಕ ಪ್ರೇಮದೋಣಿಯಲಿ ಕಾಲಿಟ್ಟರೆ ಸಾಕು. ವಿಹಂಗಮವಾದ ಪಯಣ ನನ್ನ ಬದುಕಿನದ್ದು. ದಯವಿಟ್ಟು ನನ್ನ ಪ್ರೇಮವನ್ನು ಅಂಗೀಕರಿಸು.
ನಾನು ವೃತ್ತಿಯಿಂದ ಇಂಜಿನಿಯರ್ ಇದಕ್ಕಿಂತ ಹೆಚ್ಚು ಮೆಚ್ಚುವಂತೆ ಬರೆಯಲು ಸಾಧ್ಯವಿಲ್ಲ. ಬರವಣಿಗೆ ಚಿಕ್ಕದು. ಭಾವದ ಮೆರವಣಿಗೆಯನ್ನು ಅಕ್ಷರ ಲೋಕದಲ್ಲಿ ಕಟ್ಟಲು ಸಾಧ್ಯವಿಲ್ಲ. ಒಂದಂತು ಸತ್ಯ ಶೃತಿ. ನನ್ನ ಪ್ರಾಣಪಕ್ಷಿ ನೀನಿಲ್ಲದೆ ಇರಲಾರದು. ನೀ ನನ್ನವಳಾಗಬೇಕೆಂಬ ಮಹದಾಸೆ ನನ್ನದು.
ಆಯ್ ಆಯ್ ಆಯ್ ಲವ್ ಯು ಶೃತಿ
ನಿನಗಿಂತ ಸವಿ ಬೇರಿಲ್ಲ ಎನಗೆ
ನಿನಗಿಂತ ಸನಿಹ ಬೇರೆ ಬೇಕಿಲ್ಲ ಎನಗೆ
ನಿನಗಿಂತ ಮಧುರ ಯಾವುದಿಲ್ಲ ಕೊನೆಗೆ
ನೀನಿಲ್ಲದ ಬದುಕಿಗಿಂತ ಮರಣವೇ ಲೇಸೆನಗೆ.
ನೀ ನನ್ನೊಲವಿಗೆ ಮಿಡಿದರೆ ಸಾಕೆನಗೆ
ಆಯ್ ಲವ್ ಯು ಆಯ್ ಲವ್ ಯು
ನಿನ್ನ ಒಲವಿನ ಆಕಾಂಕ್ಷಿ. ನಿನ್ನ ಪ್ರೇಮದ
ನಿರೀಕ್ಷೆಯಿಂದ ಕಾಯುತ್ತಿರುವ ಸುಶಾಂತ.
–ವರದೇಂದ್ರ. ಕೆ ಮಸ್ಕಿ
ಮುಂದುವರೆಯುವುದು…