ಕಥಾಲೋಕ

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು ಒಪ್ಪಿದರೆ ಮುಂದೆ ಸಿಗುವುದೆಲ್ಲ ಆನಂದದ ಮಧುರ ಕ್ಷಣಗಳು. ಅವನೊಟ್ಟಿಗಿನ ಮಾತು, ಮೊದಲ ಸ್ಪರ್ಶ ಪ್ರೇಮದಾಲಾಪ, ನೆನೆಸಿಕೊಂಡರೆ ಮೈ ಝುಂ ಎನ್ನುತ್ತದೆ. ಆದರೆ ಈ ಪ್ರೇಮ, ಸ್ನೇಹದಂತಲ್ಲ. ಸ್ನೇಹಕ್ಕೆ ಜೀವನ ಪೂರ್ತಿ ಇದ್ದರೂ ಯಾವ ಯಾರ ಅಡಚಣೆಗಳು ಬಾರವು. ಆದರೆ ಈ ಪ್ರೀತಿಯ ಮುಂದಿನ ಹೆಜ್ಜೆಗಳು ಕೇವಲ ಇಬ್ಬರ ಒಪ್ಪಿಗೆ ಮೇಲೆ ಸಾಗುವುದಿಲ್ಲ. ಎರಡೂ ಕಡೆಯ ಮನೆಯವರ ಸಮ್ಮತಿ ಸಿಕ್ಕರೆ, ಬದುಕೆಲ್ಲ ಹಾಲು ಜೇನು. ವಿರುದ್ಧವಾದರೆ ಹಾಲಾಹಲಕ್ಕಿಂತ ಹೆಚ್ಚು ಸಂಕಟ ಇದರಿಂದಾಗುತ್ತದೆ. ಪ್ರೇಮಿಗಳು ಮೊದಲು ಪ್ರೇಮಿಸಿ ನಂತರ ಭವಿಷ್ಯದ ಬಗ್ಗೆ ಮಾತನಾಡುತ್ತಾರೆ. ಬದಲಾಗಿ ಮೊದಲೇ ಭವಿಷ್ಯದ ಕರಾಳತೆ ಅರಿತರೆ ಈಗ ಪ್ರೇಮಿಸಿ ನಂತರ ಪಡುವ ಯಾತನೆ ಪಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತೇನೋ. ನಮ್ಮ ಮನೆಯಲ್ಲಂತು, ಪ್ರೀತಿಸುತ್ತೇನೆ ಅವರ ಜೊತೆ ಮದುವೆ ಮಾಡಿ ಎಂದರೆ ಮುಗುದೇ ಹೋಯ್ತು. ಅಪ್ಪ ಪ್ರಾಣವನ್ನೇ ಬಿಟ್ಟು ಬಿಡುತ್ತಾರೆ. ಇಷ್ಟು ವರ್ಷ ಸಂತೋಷದಿಂದ ಇದ್ದ ಕುಟುಂಬ ನನ್ನನೊಬ್ಬಳ ಪ್ರೇಮದ ವಿಚಾರದಿಂದ ದುಃಖದಲ್ಲಿ ಮುಳುಗಿಹೋಗುತ್ತದೆ. ಮನೆತನದ ಮರ್ಯಾದೆ ಮುರಾಬಟ್ಟೆಯಾಗುತ್ತದೆ. ಸಹಿಸದ ಅಪ್ಪ ಅಮ್ಮ ಅಕ್ಕ ಎಲ್ಲರೂ ನನ್ನನ್ನ ನೋಡುವ ದೃಷ್ಟಿ ಬದಲಾಗುತ್ತದೆ. ನಾನು ಈ ಪ್ರೀತಿಯನ್ನು ಒಪ್ಪದಿದ್ದರೆ ಬಹಳ ಅಂದರೆ ಏನಾಗುತ್ತದೆ. ಆ ಸುಶಾಂತ ಅನ್ನುವವನು ನಾಲ್ಕು ದಿನ ಬೇಸರ ಮಾಡಿಕೊಂಡು ನಂತರ ಸುಮ್ಮನಾಗಿಬಿಡುತ್ತಾನೆ. ನಮ್ಮಿಬ್ಬರ ನಡುವೆ ಬಾಂಧವ್ಯ ಬೆಳೆದು ನಂತರ ದೂರಾದರೆ ಆಗುವ ದುಃಖದ ಪರಿ ನೆನೆದರೆ ಜೀವವೇ ಹೋದಂತಾಗುತ್ತದೆ. ನಾನು ಒಪ್ಪಬಾರದು ಎಂದು ಯೋಚಿಸುತ್ತ ಹಾಗೆಯೇ ನಿದ್ರೆಗೆ ಜಾರುತ್ತಾಳೆ. ಶೃತೀ ಓದಿದ್ದು ಸಾಕು ಊಟ ಮಾಡು ಬಾ ಎಂದು ತಾಯಿ ಕೂಗಿದ ಮೇಲೆಯೇ ಅವಳಿಗೆ ಎಚ್ಚರವಾಗಿ ಫ್ರೆಶ್ ಆಗಿ ಊಟ ಮಾಡುತ್ತಾಳೆ. ಶೃತಿ ರಾತ್ರಿ ಬಹಳ ಹೊತ್ತು ಎದ್ದಿರಬೇಡ. ಬೇಗ ಮಲಗು ಎಂದು ಹೇಳಿದ ತಾಯಿ ಮಾತಿಗೆ ಹೂಂಗುಟ್ಟಿ ಮತ್ತೆ ಕೋಣೆ ಸೇರುತ್ತಾಳೆ. ಆಗ ಮಧುಮತಿಯ ಫೋನ್ ಕಾಲ್ ಬರುತ್ತದೆ. ಶೃತಿ ಲವ್ ಲೆಟರ್ ಓದಿದೇನೆ? ಏನ್ ಬರ್ದಿದಾನೆ ಸುಶಾಂತ. ಅದೆಲ್ಲ ಬಿಡು ಮಧು ಅವನ ಬಗ್ಗೆ ನಿಮ್ಮಣ್ಣಗೆ ಕೇಳಿದ್ಯಾ. ಏನ್ ವಿಚಾರ ಗೊತ್ತಾಯ್ತು?ಹೇಳೇ… ಹೇಳ್ತೀನ್ ತಾಳೆ ಎಷ್ಟು ಆತುರ ನಿಂಗೆ. ಶೃತಿ ಅವನ ಬಗ್ಗೆ ಒಂದು ಗುಡ್ ನ್ಯೂಸ್ ಗೊತ್ತಾಯ್ತು. ನೀನೇದರೂ ಅವನನ್ನ ಪ್ರೇಮಿಸಿದರೆ ಇದು ನಿಂಗೆ ಪ್ಲಸ್ ಪಾಯಿಂಟ್ ಆಗುತ್ತೆ. ಏನೆ ಅದು ಹೇಳೇ ಪ್ಲೀಸ್ ಬೇಗ ಹೇಳು.

ಮೊದಲಿನಿಂದಲೂ ಸಂಪ್ರದಾಯಬದ್ಧವಾದ ಮನೆ. ಯಾರ ಬಾಯಿಗೂ ಸಿಗದೆ ಗೌರವದಿಂದ ಬಾಳಿದ ಮನೆ. ಪ್ರೀತಿ, ಪ್ರೇಮ ಎಂದು ಅನ್ಯ ಜಾತಿ ವಿವಾಹವೆಂದರೆ ಒಪ್ಪುವುದೇ ಇಲ್ಲ. ಶೃತಿಗೂ ಅದು ಬೇಕಿರಲಿಲ್ಲ. ಅನ್ಯ ಜಾತಿಯವರನ್ನ ಪ್ರೀತಿಸಿ ಮನೆಯವರನ್ನ ಬಿಟ್ಟು ಮದುವೆ ಆಗಲು ಆಗದೆ, ಅವನನ್ನು ಬಿಡಲೂ ಆಗದೆ ನೋವು ತಿನ್ನಬೇಕಾಗುತ್ತದೆ. ಅದಕ್ಕೆ ಏನು ಮಾಡಬೇಕೆಂದು ಯೋಚಿಸುತ್ತಿರುವಾಗ, ಮಧುಮತಿ ಶೃತಿ ಗುಡ್ ನ್ಯೂಸ್ ಏನಪ ಅಂದ್ರೆ. ಸುಶಾಂತ ಒಳ್ಳೆ ಹುಡುಗ ಸದ್ಗುಣ ಸಂಪನ್ನ ಒಳ್ಳೆ ಕೆಲಸ ಕೈತುಂಬ ಸಂಬಳ ಅನ್ನುತ್ತಿರುವಾಗ , ಲೇ ಮಧು ಸತಾಯ್ಸಬೇಡ ಇದೆಲ್ಲ ಮೊದ್ಲೆ ಗೊತ್ತು ಬೇರೆ ಏನು ಗುಡ್ ನ್ಯೂಸ್ ಹೇಳೆ? ಅದು ಸುಶಾಂತ ಕೂಡ ನಿಮ್ಮ ಜಾತಿಯವನೆ ಕಣೆ. ಅವನು ಕೂಡ ನಿನ್ನ ನೋಡಿದ ಮೇಲೆ, ನೀನು ಯಾರು, ನಿಮ್ಮ ಜಾತಿ ಮನೆತನ ಎಲ್ಲ ತಿಳ್ಕೊಂಡು ನಿನ್ನ ಪ್ರೀತಿ ಮಾಡಿದಾನಂತೆ. ಅವನ ಮನೆಯವರು ಎಲ್ಲ ನಿಮ್ಥರನೆ ಅಂತೆ. ಈ ವಿಷಯ ನಿಂಗೆ ಪ್ಲಸ್ ಪಾಯಿಂಟ್ ಕಣೆ. ನೀನು ಅವನ ಪ್ರೀತಿಯನ್ನು ಒಪ್ಪಿದರೆ ಮುಂದೆ ಮನೆಯಲ್ಲಿ ಜಾತಿ ಸಂಬಂಧವಾಗಿ ಯಾವ ತೊಂದರೆ ಆಗೊಲ್ಲ. ಎರಡೂ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರಬಹುದು ಕಣೆ. ಯೋಚನೆ ಮಾಡು ಶೃತಿ ನಾಳೆ ಸಿಗೋಣ. ನಿನ್ನ ನರ್ಧಾರದ ಮೇಲೆ ನಿನ್ನ ಪ್ರೀತಿ ಪಯಣ ಎಂದು ಫೋನಿಟ್ಟಳು. ಇತ್ತ ಪ್ರೇಮದೋಲೆಗೆ ಮನಸೋತ ಹೃದಯ ತನ್ನ ಅನುಮತಿಯನ್ನು ರವಾನಿಸುತ್ತ ಶೃತಿಯನ್ನು ತನ್ನ ಮಾತಿಗೆ ಸಮ್ಮತಿಸುವಂತೆ ಒತ್ತಾಯಿಸುತ್ತಿತ್ತು. ಸುಶಾಂತ ನಮ್ಮ ಜಾತಿಯವನೇ ಎಂದು ತಿಳಿದ ಶೃತಿಗೆ ಅರ್ಧ ತೊಂದರೆ ಕಡಿಮೆಯಾದ ಖುಷಿ ಇತ್ತು. ಪ್ರೀತಿಗೆ ಜಾತಿ ಇಲ್ಲ ಆದರೆ ಬದುಕಲು ಜಾತಿಯ ಚೌಕಟ್ಟನ್ನು ಮೀರಲು ಸಾಧ್ಯವಿಲ್ಲ ಎನ್ನುವ ವಾಸ್ತವ ಶೃತಿಯ ಅರಿವಿಗಿತ್ತು. ಸದ್ಯ ಈ ಕಾರಣದಿಂದ ಈಗ ಶೃತಿಗೆ ಇದ್ದ ಚಿಂತೆ ದೂರವಾಯಿತು. ಸುಶಾಂತನ ಪ್ರೇಮ ನಿವೇದನೆಯನ್ನು ಸ್ವೀಕಾರ ಮಾಡಬೇಕು. ಅವನ ಪ್ರೇಮದ ಮಾಧುರ್ಯತೆಯನ್ನು ಅನುಭವಿಸಬೇಕು. ಅವನು ಪ್ರೇಮದ ದೋಣಿಯಲ್ಲಿ ಜೊತೆಗಾರ್ತಿಯಾಗಿ ಅದರ ಸೊಗಸನ್ನು ಸವಿಯಬೇಕು. ಅವನ ಅಂದದ ಚಂದದ ಮನಸಿಗೆ ಮುದವನು ನೀಡಿ ಸಿಹಿ ಮಧುವನು ಹೀರಬೇಕು. ನೋಟದಿ ಹಾರಿಸಿದ ಕಣ್ಣ ಕಿರಣ ಬಾಣಕೆ ಹೃದಯವ ನೀಡಬೇಕು. ಅವನುಸಿರಿನ ಗಾಳಿಗೆ ಮೈಮರೆತು ಸುಖಿಸಬೇಕು. ಅವನ ಕೈ ಹಿಡಿದು ತಂಗಾಳಿಯಲಿ ತೇಲಿ ಹೋಗಬೇಕು. ಅವನನ್ನು ಒಪ್ಪಿ ಪ್ರೀತಿಯನ್ನು ಅಪ್ಪಿಕೊಳ್ಳಬೇಕು. ನಾಳೆ ಅವನಿಗೆ ನನ್ನ ಪ್ರೇಮದ ಉತ್ತರವನ್ನು ಹೇಳಬೇಕು. ಎಂದು ಕನಸಿನ ಕಲ್ಪನಾ ಲೋಕದಲ್ಲಿ ಹಾರಿ ನಿದ್ರೆಗೆ ಜಾರಿದಳು. ಮರುದಿನ ….

ಸುಶಾಂತನ ನೆನಪಿನಲ್ಲಿ ನಿದ್ರೆಗೆ ಜಾರಿದಳೋ ಪ್ರೀತಿಯ ಹಳ್ಳಕೆ ಜಾರಿದಳೋ ರಾತ್ರಿ ಪೂರ ಅವನದೇ ಗುಂಗು, ಕಣ್ಣು ಮುಚ್ಚಿದರೂ ಪ್ರೇಮ ಪತ್ರ, ಅವನ ಪ್ರೇಮದ ಪರಿ ಪರಿಯಾದ ಬೇಡಿಕೆ ಮನದ ಕಣ್ಣಿಗೆ ಗೋಚರಿಸುತ್ತಲೇ ಇದೆ. ತನ್ಮಯಳಾಗಿ ನಿದಿರೆಯಲ್ಲಿಯೇ ಅವನನ್ನು ಒಪ್ಪಿಕೊಂಡಿದ್ದಾಳೆ. ಸುಶಾಂತನ ಅನುರಾಗದಲೆಗಳು ಅವಳೆದೆಗೆ ತಾಕಿವೆ. ಕನಸು ಆವರಿಸಿ ಅವನ ಮಂಪರಿನಲ್ಲೇ ಇರುಳು ಕಳೆದಳು. ಮರುದಿನದ ಬೆಳಗು ಪ್ರತಿದಿನದಂತಿಲ್ಲ. ಮೊದಲೇ ಅಪ್ಸರೆ ಇವತ್ತಂತು ಪ್ರೇಮದ ಬೆಳಕಿಗೆ ನೂರು ಪಟ್ಟು ಹೊಳಪು ಹೆಚ್ಚಾಗಿದೆ. ನಗುವಂತೂ ದುಃಖದಲ್ಲಿದ್ದವರ ಮನಸನ್ನೂ ಉಲ್ಲಾಸಕ್ಕೆ ಕರೆದೊಯ್ಯುವಷ್ಟು ಪ್ರಬಲವಾಗಿದೆ. ಅವಳ ಮನಸು ಕೂಡ ಈ ದಿನ ಹುರುಪಾಗಿದೆ. ಅಮಲೇರಿದ ಹೃದಯ ಸುಶಾಂತನ ಸನಿಹ ಬಯಸಿ ತನ್ನ ಬಡಿತ ಹೆಚ್ಚಿಸಿಕೊಂಡಿದೆ. ಬೇಗ ರೆಡಿಯಾಗಬೇಕೆಂದು, ಸ್ನಾನಕ್ಕೆ ಹೋದಳು. ಇವತ್ತು ಎರೆದುಕೊಂಡು, ಕೂದಲು ಹಾರಾಡಿಸಿಕೊಂಡು ಹೋಗಬೇಕು ಕಂಡರೆ ಸೋತುಬಿಡಬೇಕು ಸುಶಾಂತ ಮೈಮರೆತುಬಿಡಬೇಕೆಂದು ಯೋಚಿಸಿ ತಲೆ ಮೇಲೆ ನೀರು ಹಾಕಿಕೊಂಡಳು. ಅದು ಕೇವಲ ನೀರಲ್ಲ ಶೃತಿಯ ಹೊಸ ಪಯಣದ ನಾಂದಿಗೆ ಸುರಿದ ಪನ್ನೀರ ಮಳೆ. ಒಂದೊಂದು ಹನಿಯು ಶೃತಿಯ ಮನದಲ್ಲಿ ಹೊಸ ಭಾವ ಚಿಗುರಿಸಿದವು. ಸ್ನಾನವಾಗಿ ದೇವರಿಗೆ ನಮಿಸಿ ” ದೇವರೆ ಪ್ರೀತಿ ಹುಟ್ಟಿಸಿದವನು ನೀನೆ, ಅದನ್ನು ಎಲ್ಲರೂ ಒಪ್ಪಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕಾದವನು ನೀನೆ” ಎಂದು ಪ್ರಾರ್ಥಿಸಿದಳು. ನಂತರ ಲಗುಬಗೆಯಿಂದ ನಾಷ್ಟ ಮಾಡಿ ಕಾಲೇಜಿಗೆ ಹೊರಡುತ್ತಾಳೆ. ದಾರಿಯಲ್ಲಿ ಎಂದಿನಂತೆ ಮಧುಮತಿ ಜೊತೆಯಾಗುತ್ತಾಳೆ. ಏನೇ ಶೃತಿ ತುಂಬ ಖುಷಿಯಾಗಿದ್ದೀಯ ಸುಶಾಂತನ ಪ್ರೇಮ ನಿವೇದನೆಗೆ ಅಸ್ತುನಾ? ಎನ್ನುತ್ತಾಳೆ. ಶೃತಿ ಹೌದು ಮಧು ಅವನ ಪ್ರೀತಿ ಮಾತುಗಳು ನನ್ನನ್ನು ಸೆಳಿತಾ ಇವೆ. ಅವನ ಒಳ್ಳೆಯ ಮನಸು, ಅವನ ನಡೆ, ನುಡಿ ಎಲ್ಲ ಸದ್ಗುಣಗಳಿಂದ ಕೂಡಿವೆ ಎಂಬುದು, ಅದಕ್ಕಿಂತ ಅವನು ನಮ್ಮ ಜಾತಿಯವನು ಎಂದು ತಿಳಿದದ್ದು ಅವನನ್ನು ಒಪ್ಪಿಕೊಳ್ಳುವಂತೆ ಮಾಡಿವೆ. ನೀ ಏನಂತಿಯೇ ಮಧು? ಶೃತಿ ನೀನು ಯಾವ ಯೋಚನೆ ಇಲ್ದೆ ಒಪ್ಕೊಬೋದು. ಖಂಡಿತ ಅವನ ಜೊತೆ ಚೆನ್ನಾಗಿ ರ್ತೀಯ ಎಂದು ಶೃತಿಯ ಮನಸಿನ ಭಾವಕ್ಕೆ ಪೂರಕವಾದಳು. ಇನ್ನು ಕಾಲೇಜು ಬಂತು ಸುಶಾಂತನ ಭೇಟಿಗೆ ಸಂಜೆವರೆಗೂ ಕಾಯಬೇಕು. ಕಾಲೇಜಿನಲ್ಲಿ ಪಾಠಗಳು ಹಿಡಿಸುತ್ತಿಲ್ಲ. ಮನಸು ಹಿಡಿತಕ್ಕಿಲ್ಲ. ಹೇಗೆ ಹೇಳುವುದು, ದುಗುಡ ಜಾಸ್ತಿ ಆಗಿದೆ. ಆ ಮನಸಿನ ಏದುಸಿರಿಗೆ ಸಮಯ ಜಾರಿದ್ದು ಗೊತ್ತಾಗಲಿಲ್ಲ. ಸಂಜೆ ಆಯಿತು ಕಾಲೇಜು ಬಿಟ್ಟು ಹೊರ ಬರುವಾಗ ಶೃತಿ ಮಧುಗೆ “ಏ ಮಧು ಪ್ಲೀಸ್ ನೀನು ನನ್ನ ಜೊತೆ ಇರು ನನಗೇಕೊ ಭಯವಾಗ್ತಿದೆ. ಪ್ಲೀಸ್ ಕಣೆ” ಎಂದಳು. ಮಧು “ಹೇ ಶೃತಿ ಹೆದರಬೇಡ ಇಬ್ಬರ ಮಧ್ಯ ನಾನ್ಯಾಕೆ, ನಿನಗನಿಸಿದ್ದನ್ನು ನೇರವಾಗಿ ಹೇಳು. ನಿನ್ನ ಪ್ರೀತಿಯನ್ನು ಹಂಚಿಕೊ. ಸುಶಾಂತ ತುಂಬ ಖುಷಿ ಪಡ್ತಾನೆ. ನಿನ್ನನ್ನು ಪ್ರೇಮ ಪಲ್ಲಕ್ಕಿಯಲ್ಲಿ ಹೊತ್ತು ತಿರುಗಿಸುತ್ತಾನೆ. ಅವನ ಹೃದಯ ಗೂಡಿನ ಅರಗಿಣಿ ನೀನಾಗ್ತೀಯ. ಅವನ ಪ್ರತಿ ಹೃದಯ ಬಡಿತವೂ ನಿನಗಾಗಿ ಮಿಡಿಯುತ್ತದೆ. ನಿನ್ನ ಮನದಲ್ಲಿ ಅವನಿಗಿರುವ ಅವಕಾಶ ಕೊಟ್ಟಿದ್ದಕ್ಕೆ ಅವನು ನಿನ್ನ ಎಂದಿಗೂ ನೋಯಿಸುವುದಿಲ್ಲ. ಅಣ್ಣ ಅವನು ತುಂಬ ಮೃದು, ತುಂಬ ಸಭ್ಯ ಎಂದು ಹೇಳಿದ್ದಾನೆ. ಹೋಗು ಆಲ್ ದಿ ಬೆಸ್ಟ್” ಎಂದು ಧೈರ್ಯ ತುಂಬಿ ಮಧು ಹೊರಡುತ್ತಾಳೆ. ಅಷ್ಟರೊಳಗೆ ಸುಶಾಂತ ಬಂದು ಕಾಯುತ್ತಿರುತ್ತಾನೆ. ಶೃತಿ ಹೇಗೆ ರಿಯಾಕ್ಟ್ ಮಾಡುತ್ತಾಳೋ ಎಂಬ ಕಾತುರ ಭಯದಿಂದ ನಿಂತಿರುತ್ತಾನೆ. ಅವನ ಬಳಿ ನಿಧಾನವಾಗಿ ಹೊರಡುತ್ತಾಳೆ.

ಶೃತಿ ಪ್ರೇಮದ ಅಂಬೆಗಾಲಿಡುತ್ತ ಸುಶಾಂತನ ಸನಿಹ ಬರುತ್ತಾಳೆ. ಶೃತಿ ಅಂತರಂಗ ಸುಶಾಂತನ ಪ್ರೇಮಕೆ ಮಿಡಿಯುತಿದೆ. ಅವಳ ಎದೆಯೊಳಗೆ ಎದ್ದ ಪ್ರೇಮದ ಗಾಳಿಗೆ ಮುಂಗುರುಳು ಹಾರುತಿವೆ. ಅವುಗಳನ್ನು ಹಿಮ್ಮಿಕ್ಕಲು ಆ ಬೆರೆಳುಗಳು ನಲಿದಾಡುತಿವೆ. ಅವಳ ಆ ಕೇಶರಾಶಿ ಕಂಡು ಸುಶಾಂತ ಮೈಮರೆಯುತ್ತಿದ್ದಾನೆ. ಒಳಒಳಗೆ ಅವಳ ಅಭಿಪ್ರಾಯ ಏನಾಗಿದೆಯೋ ಎಂಬ ಆತಂಕ. ಶೃತಿ ಅವನ ಹತ್ತಿರ ಬಂದು ತುಟಿ ಅಂಚಲಿ ನಗುತ್ತಾಳೆ. ನಗು ಕಂಡವನೆ ಸುಶಾಂತನಿಗೆ ತನ್ನಾಸೆ ಫಲಿಸಿದಂತೆನಿಸಿ ಪ್ರತಿಯಾಗಿ ತಾನು ನಗುತ್ತಾನೆ. ಶೃತಿ, “ಸುಶಾಂತ್ ನಿಮ್ಮ ಪ್ರೇಮದೋಲೆ ಓದಿ ಮನ ನಿಮಗಾಗಿ ಒಲವಿನ ಸವಿ ಹರಿಸುತಿದೆ, ನಿಮ್ಮ ಪ್ರೀತಿಯ ಪ್ರತಿ ನುಡಿಗಳೂ ನನ್ನ ಎದೆಯ ಗೂಡಲಿ ಭದ್ರವಾಗಿವೆ. ಬರಡು ಹೃದಯದಿ ಪ್ರೇಮರಾಗ ನುಡಿಸಿದ ನಿಮ್ಮ ಒಲವಿನ ಚಿಲುಮೆಗೆ ನಾ ಏನು ಹೇಳಲಿ. ನಿಮ್ಮ ಬಾಳಿಗೆ ಬೆಳದಿಂಗಳಾಗುವ ಹಂಬಲ ಮೂಡಿದೆ. ನನ್ನ ಬದುಕಿನಲಿ ರಂಗು ರಂಗಾದ ರಂಗೋಲಿ ನೀವು. ಜೀವ ಇರುವವರೆಗೆ ನಿಮ್ಮ ಪ್ರೀತಿಗೆ ದಾಸಿಯಾಗುವೆ. ನಿಮ್ಮ ಹೃದಯದ ಪ್ರೇಮದ ಗೂಡಿಗೆ ರಾಣಿಯಾಗುವೆ. ಪ್ರತಿ ಹೆಜ್ಜೆಗಳಲ್ಲೂ ನನ್ನ ಗೆಜ್ಜೆಕಾಲ್ಗಳು ಜೊತೆಯಾಗಿರುತ್ತವೆ. ನೋವಿಗೆ ತಾಯಾಗಿ ಮರೆಸಿ ನಗುವಿಗೆ ಕಾರಣಳಾಗುವೆ. ಒಲವೆಂಬುದು ಕೇವಲ ಸುಖವಲ್ಲ ಸಾವಿರ ಕಷ್ಟಗಳ ಗಂಟೆಂಬ ಅರಿವಿದೆ ನನಗೆ. ಒಪ್ಪಿ ಬಂದಿದ್ದೇನೆ. ತಪ್ಪಾಗದಂತೆ ಇದ್ದು ಎಲ್ಲರ ಮನ ಗೆದ್ದು ನಂತರ ಅಪ್ಪಿಕೊಳ್ಳೋಣ. ನಿಮ್ಮ ಬಗ್ಗೆ ಮಧು ಎಲ್ಲ ಹೇಳಿದ್ದಾಳೆ. ನನ್ನ ಬಗೆಗೆ ನೀವು ಸಂಶೋಧನೆಯನ್ನೇ ಮಾಡಿ ತಿಳಿದುಕೊಂಡಿದ್ದೀರಿ ಎಂಬುದು ಗೊತ್ತಿದೆ”. ಮತ್ತೆ…. ಅಷ್ಟರಲ್ಲಿ ಸುಶಾಂತ ತಡೆದು .. ನನಗೀಗ ಸಮಾಧಾನವಾಯಿತು ಶೃತಿ. ನೀನು ನನ್ನ ಪ್ರೇಮವನ್ನು ಅಂಗೀಕರಿಸಿದ್ದು; ನನ್ನ ಪಾಲಿನ ಭಾಗ್ಯ. ಕಾದು ಕಾದು ತತ್ತರಿಸಿದ ಭೂಮಿಗೆ ಮಳೆ ನೀರ ಸಿಂಚನವಾದಂತಾಗಿದೆ. ಈ ಸಂತೋಷವನ್ನು ಅರಗಿಸಿಕೊಳ್ಳದಷ್ಟು ಭಾವುಕತೆ ತುಂಬಿದೆ. ತುಂಬ ಥ್ಯಾಂಕ್ಸ್ ಶೃತಿ. ನೀನು ಈ ಪರಿಯಾಗಿ ಮಾತನಾಡುವುದನ್ನು ಮಾತ್ರ ನಾನೀಗಲೇ ಕಂಡಿದ್ದು. ಎಷ್ಟು ಒಪ್ಪವಾದ ಮಾತು ನಿನವು. ನಾ ಧನ್ಯ ನಾ ಧನ್ಯ ಎಂದು ಸುಶಾಂತ ಶೃತಿಯನ್ನು ಮನಸಿನಲ್ಲೇ ಆಲಿಂಗಿಸಿಕೊಳ್ಳುತ್ತಾನೆ. ಶೃತಿ, ಸುಶಾಂತ್ ನಿಮ್ಮ ಮನೆ ಎಲ್ಲಿದೆ? ನೀವು ಕೆಲಸ ಮಾಡೋದು ಎಲ್ಲಿ? ಮನೆಯಲ್ಲಿ ಯಾರ್ಯಾರು ಇರ್ತೀರಿ? ಎಲ್ಲವನ್ನು ಕೇಳುತ್ತಾಳೆ. ಆಗ ಸುಶಾಂತ ಬಾ ಶೃತಿ ಕಾಫಿ ಡೇನಲ್ಲಿ ಕುಳಿತು ಮಾತನಾಡೋಣ ಎನ್ನುತ್ತಾನೆ. ಎಲ್ಲಿ ಮನೆಗೆ ತಡವಾಗುತ್ತೋ ಅಂತ ಯೋಚಿಸಿ ಇಲ್ಲ ನನ್ ಫೋನ್ ನಂಬರ್ ತಗೋಳಿ ಆಮೇಲೆ ಮೆಸೇಜ್ ಮಾಡಿ ತಡವಾಗ್ತಿದೆ ನಂಗೆ ಎಂದು ಮನಸಿಲ್ಲದಿದ್ದರೂ ಮನೆಗೆ ಹೊರಡುತ್ತಾಳೆ. ಇನ್ನೂ ಸ್ವಲ್ಪ ಹೊತ್ತು ಅವಳ ಜೊತೆ ಇರಲು ಆಗಲಿಲ್ಲವಲ್ಲ ಏಕೆ ಇಷ್ಟು ಅರ್ಜೆಂಟಾಗಿ ಹೋದ್ಲು ಎಂದು ಯೋಚಿಸಿ ಅವಳು ಹಾಗೆಯೇ ಮನೆಗೆ ಎಂದೂ ತಡ ಮಾಡಿ ಹೋದವಳಲ್ಲ ಅವಳೆಂದರೆ ಹಾಗೆ ಶಿಸ್ತು ಸಂಯಮ ನಂಬಿಕೆ ಪ್ರಾಮಾಣಿಕತೆಯ ಸೂಕ್ಷ್ಮ ಮನಸಿನವಳು ಎಂದು ಅವಳ ನಂಬರ್ ಸೇವ್ ಮಾಡಿಕೊಂಡವನೆ ಅವಳನ್ನೇ ನೆನೆಯುತ್ತ ಮನೆಗೆ ಹೊರಡುತ್ತಾನೆ. ಮುಂದೆ ಅವನ ಬಗ್ಗೆ ಎಲ್ಲವನ್ನೂ ಬರೆದು. ಕೊನೆಯಲ್ಲಿ ಲವ್ ಯು ಶೃತಿ ಯುವರ್ಸ್ ಸುಶಾಂತ್ ಎಂದು ಕಳಿಸುತ್ತಾನೆ. ಶೃತಿ ಅದನ್ನು ಓದಿ ಅವನ ನಂಬರ್ ಸೇವ್ ಮಾಡಿಕೊಳ್ಳುತ್ತಾಳೆ. ಲವ್ ಯು ಟೂ ಸುಶಾಂತ್ ಎಂದು ಕಳಿಸುತ್ತಾಳೆ. ನಂತರ ಅವರಿಬ್ಬರ ನಡುವೆ ಪ್ರೇಮದ ರಸಮಯ ಕ್ಷಣಗಳು ಪ್ರಾರಂಭವಾಗುತ್ತವೆ. ಶೃತಿ ಮಿಡಿದಾಗಿದೆ ಇನ್ನೇನು ಮಿಡಿದ ಹೃದಯಗಳ ಪ್ರೇಮದ ದಿನಗಳನ್ನು ಕಾಣಬೇಕಿದೆ.

ಶೃತಿಯ ಪ್ರೇಮದೊಪ್ಪಿಗೆ ಸುಶಾಂತನ ಮನದಲ್ಲಿದ್ದ ಮಹದಾಸೆ ಕೈಗೂಡಿದಂತಾಗಿತ್ತು. ಪ್ರೇಮದ ಕ್ಷಣಗಳಿಗೆ ಸಾಕ್ಷಿಯಾಗಿ ಶೃತಿ ದಿನಗಳು ಕಳೆದಂತೆ ತನ್ನಲ್ಲಿರುವ ಸಂಕೋಚ ಸ್ವಭಾವವನ್ನು ಬದಿಗಿಟ್ಟು ಸುಶಾಂತಗೆ ಹತ್ತಿರವಾಗುತ್ತಾಳೆ. ಸಹಜವಾಗಿ ಎಲ್ಲ ಪ್ರೇಮಿಗಳಂತೆ ಸುಖಾ ಸುಮ್ಮನೆ ಎಲ್ಲಿಯೂ ಸುತ್ತದೆ, ಮನದಲ್ಲಿ ಬೆಟ್ಟದಷ್ಟು ಪ್ರೀತಿ ವಯೋಸಹಜ ಆಕಾಂಕ್ಷೆಗಳಿದ್ದರೂ ಮನಸಿನ ಸ್ಥಿಮಿತವನ್ನು ಕಳೆದುಕೊಳ್ಳದೆ ಕೇವಲ ಚಾಟಿಂಗ್ ಟಾಕಿಂಗ್ ನಲ್ಲಿಯೇ ಪ್ರೀತಿ ವಿನಿಮಯ ಮಾಡಿಕೊಳ್ಳುತ್ತಾರೆ. ಒಂದೊಮ್ಮೆ ಸುಶಾಂತ್ ಏ ಶೃತಿ ಪ್ಲೀಸ್ ಒಮ್ಮೆ ಆದರೂ ನನ್ನ ಜೊತೆ ಬಾ. ಹೊರಗೆ ಕೈ ಕೈ ಹಿಡಿದು ಸುತ್ತಾಡಿ ಒಲವಿನ ಪಲ್ಲವಿಗೆ ಹೃದಯಾನುರಾಗದ ಗೀತೆಗೆ ಶೃತಿ ಸೇರಿಸು ಬಾ. ಕೂಡಿ ಹಾಡೋಣ, ಒಂದು ಹೆಜ್ಜೆ ಮುಂದೆ ಜಿಗಿಯೋಣ ಬಾ ಶೃತಿ ಎಂದು ಒತ್ತಾಯಿಸುತ್ತಾನೆ. ಬೇಡ ಎನ್ನುವ ಹೊರಮನಸು. ನಲ್ಮೆಯ ಗೆಳೆಯ ಮನಸಿನ ಒಡೆಯ. ಮುಂದೆ ನನ್ನ ಸರ್ವಸ್ವವೂ ಇವನೆ. ಇವನೊಟ್ಟಿಗೆ ಜೀವನ ಪೂರ್ತಿ ಸುತ್ತಾಡ್ತೀನಿ. ಅವನಿಗೇನೋ ಮದುವೆ ಮುನ್ನ ಎಲ್ಲ ಪ್ರೇಮಿಗಳ ಹಾಗೆ ಸುತ್ತಾಡೋ ಆಸೆ, ಯಾಕೆ ನಿರಾಸೆ ಮಾಡಬೇಕೆಂದು ಶೃತಿ ಸುಶಾಂತನೊಡನೆ ಒಂದು ದಿನ ಹೋದಳು. ಪಾರ್ಕು, ಸಿನೆಮಾ, ಗುಡ್ಡದಲ್ಲಿ ಸುತ್ತಾಡಿ ಬಂದಳು. ಮನಸಿಗೇನೋ ಸಂತೋಷ. ಹೊರಗೆ ಹೋದಾಗಿಂದ ಬರುವವರೆಗೂ ಸುಶಾಂತ ಶೃತಿಯ ಕೈ ಹಿಡಿದೇ ಇದ್ದ. ಆ ಸ್ಪರ್ಶ ಸುಖ ಮೈ ಪುಳಕ ಮನದ ಹಿತ ವರ್ಣಿಸಲು ಸಾಧ್ಯವೇ ಇಲ್ಲ. ಅನುಭವಿಸಿದ ಪ್ರೇಮಿಗಳಿಗೇ, ಅದರ ಆನಂದ ಗೊತ್ತು.

ಆಯ್ತು ಪರಿಚಯ, ಪ್ರೇಮ, ಸುತ್ತಾಟವೂ ಆಯ್ತು. ಮನದಲ್ಲಿ ಸಂತೋಷದ ಹೊನಲು ಹರಿದಿತ್ತು. ಪ್ರೇಮಿಗಳ ಬಾಳಲ್ಲಿ ಕೇವಲ ಸುಖ ಇರುವುದಿಲ್ಲ. ಪ್ರೇಮಕ್ಕೆ ಅಡ್ಡಿ ಬಂದೇ ಬರುತ್ತವೆ, ಇದಕ್ಕೆ ಇವರೂ ಹೊರತಾಗಿಲ್ಲ ಎಂಬಂತೆ, ಶೃತಿ ಪ್ರೇಮದ ದಾರಿಗೂ ಒಂದು ಕಷ್ಟ ಎದುರಾಯಿತು ನೋಡಿ. ಶೃತಿ ಪದವಿ ಶಿಕ್ಷಣ ಮುಗೀತು ಮುಂದೇನು ಮನೆಯಲ್ಲಿ ಓದು ಸಾಕು ಅನ್ನುತ್ತಾರೆ, ಬಿಡಬಹುದು, ತೊಂದರೆಯಿಲ್ಲ ಆದರೆ?? ಸುಶಾಂತನ ಭೇಟಿ ಹೇಗೆ, ನೋಡದೆ ಇರಲು ಸಾಧ್ಯವಿಲ್ಲ, ಏನು ಮಾಡಬೇಕೆಂಬ ಚಿಂತೆಯಲ್ಲಿ ಶೃತಿ ಇರುತ್ತಾಳೆ.

ವರದೇಂದ್ರ.ಕೆ ಮಸ್ಕಿ


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *