ಶೃತಿ ನೀ ಮಿಡಿದಾಗ (ಕೊನೆಯ ಭಾಗ): ವರದೇಂದ್ರ.ಕೆ ಮಸ್ಕಿ

ಇತ್ತ ಮನೆಯಲ್ಲಿ ಅಕ್ಕ ನಳಿನಿ ಕಡೆಯಿಂದ ಒಂದು ವಿಷಯ ಬಂತು. ಭಾವನ ತಮ್ಮ ನಿತಿನ್ ಅಮೇರಿಕಕ್ಕೆ ಹೋಗಿದ್ದ, ಇಂಜಿನಿಯರ್ ಕೆಲಸ, ಕೈತುಂಬಿ ಹಂಚಬಹುದಾದಷ್ಟು ಸಂಬಳ. ವಿದ್ಯಾವಂತ ಬುದ್ಧಿವಂತ. ನೋಡೋಕೆ ಸ್ಫುರದ್ರೂಪಿ, ಒಳ್ಳೆಯ ಮೈಕಟ್ಟು, ಸದಾ ಮುಗುಳ್ನಗೆಯ ಸರದಾರ, ನಿರಹಂಕಾರಿ, ಮಿತ ಮಾತುಗಾರ, ನಿಷ್ಕಲ್ಮಷ ಹೃದಯವಂತ, ಅಪ್ಪಟ ಬಂಗಾರದ ಗುಣವಂತ. ನಮ್ಮ ಶೃತಿಗೆ ತಕ್ಕುದಾದ ಜೋಡಿ; ಎಂದು ಅಕ್ಕ, ನಿತಿನ್ ಗೆ ಶೃತೀನ ತಂದುಕೊಳ್ಳೊ ವಿಚಾರ ಎತ್ತಿಬಿಟ್ಟಳು. ಇದ್ದಕ್ಕಿದ್ದ ಹಾಗೆ ಎರಗಿ ಬಂದ ವಿಷಯ ಶೃತಿ ಮನಸ್ಸಿಗೆ ತಳಮಳ ತಂದಿತು. ಶೃತಿಗೆ ತಡೆಯಲಾಗುತ್ತಿಲ್ಲ. ಶೃತಿ ಮನದಲ್ಲಿ ಆತಂಕ ಶುರುವಾಯಿತು. ಪ್ರೀತಿ ವಿಷಯವನ್ನು ಹೇಳುವ ಧೈರ್ಯವಿಲ್ಲದೆ, ಬಿಡಲೂ ಆಗದೆ ಒದ್ದಾಡತೊಡಗಿದಳು. ಕೂಡಲೆ ಸುಶಾಂತಗೆ ಮೆಸೇಜ್ ಮಾಡಿ ಎಲ್ಲ ವಿಷಯ ತಿಳಿಸಿದಳು. ಸುಶಾಂತನೂ ಗಾಬರಿಯಿಂದ ಏನು ಮಾಡಲೂ ತೋಚದೆ ಕಂಗಾಲಾಗುತ್ತಾನೆ. ಆದರೆ ಶೃತಿ ಮನೆಯಲ್ಲಿ ಸಂಭ್ರಮ, ಅಕ್ಕ ಮಾಡಿದ ಮದುವೆ ಪ್ರಸ್ತಾಪದಿಂದ ಇಡೀ ಕುಟುಂಬವೇ ಸಂತೋಷದಲ್ಲಿತ್ತು. ಅಂತೂ ತನ್ನ ಮೂರು ಮಕ್ಕಳು ಒಳ್ಳೆ ಮನೆ ಸೇರಿದ್ರು.. ತವರಿನಲ್ಲಿ ಆದ ಕೊರತೆಗಳು ಎಂದಿಗೂ ಅತ್ತೆ ಮನೆಯಲ್ಲಿ ಸುಳಿಯೊಲ್ಲ, ಎನ್ನುವ ನಂಬಿಕೆ ಅಪ್ಪಂದು. ಅಕ್ಕ ತಂಗಿ ಒಂದೇ ಮನೆ ಸೇರಿದ್ರೆ ಒಬ್ರಿಗೊಬ್ರು ಆಗ್ತಾರೆ ಅಂತ ಅಮ್ಮನ ನಿಟ್ಟುಸಿರು. ತಂಗಿನೂ ನನ್ನೊಡನೆ ಇದ್ರೆ ಅವರದು ಶಾಶ್ವತವಾಗಿ ಕೂಡು ಕುಟುಂಬ ಆಗಿರುತ್ತೆ ಅಂತ, ಮತ್ತೆ ತಂಗಿನೂ ಸುಖವಾಗಿ ಇರ್ತಾಳೆ ಅನ್ನೋ ಭಾವನೆ ನಳಿನಿದು. ಎಲ್ಲರ ಖುಷಿಗೆ ಕಿಚ್ಚು ಬೀಳೋ ಆತಂಕ ಶೃತಿಗೆ. ಶೃತಿಯ ಮಾನಸಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಕಾಲೇಜು ಇದ್ದಿದ್ರೆ ಸುಶಾಂತನ ಭೇಟಿ ಆಗ್ತಿತ್ತು ಈಗ ಸುಮ್ನೆ ಹೊರ್ಗಡೆ ಹೋಗೋಕೆ ಕಾರಣ ಬೇಕು. ಸುಳ್ಳು ಹೇಳಿ ಹೋದ್ರೆ ಹೇಗೆ ಅಂತ ಎಷ್ಟು ಸಲ ಯೋಚನೆ ಮಾಡಿದ್ರೂ; ಅದರ ಅನುಭವ ಇಲ್ಲದ ಕಾರಣ ಮಾತೇ ಹೊರಡೊಲ್ಲ. ಏನಿದ್ರು ಚಾಟಿಂಗೇ ಗತಿ. ಚಿಕ್ಕ ಮನೆ ಮಾತಾಡೋದು ದುಸ್ತರ. ಏನು ಮಾಡದೆ ಕಂಗಾಲಾಗಿ ಹೋಗಿದಾಳೆ ಶೃತಿ. ಅದೇ ಸಮಯಕ್ಕೆ ನಾಳೆ ಶೃತಿಯ ಅಕ್ಕ ಭಾವ ಊರಿಂದ ಬರುವುದಾಗಿ ತಿಳಿಸುತ್ತಾರೆ. ಅದರಂತೆ ಮರುದಿನ ಅಕ್ಕ ನಳಿನಿ ಮತ್ತು ಭಾವ ಬರ್ತಾರೆ. ಅಕ್ಕಳನ್ನು ಬಿಟ್ಟು ಭಾವ ಮರಳಿ ಹೋಗ್ತಾರೆ. ಅಕ್ಕ ಸಂತೋಷದಿಂದ, “ಶೃತಿ ನನ್ ಮೈದುನ ನಿತಿನ್ ನಿಂಗೆ ಒಳ್ಳೆ ಜೋಡಿ ನಿನ್ನನ್ನು ಪಡೆಯುವ ಅವನು ಅದೃಷ್ಟವಂತನೇ ಸರಿ. ನೀನು ಕೂಡ. ಅವನೂ ಒಳ್ಳೆಯವನು. ನೀನೂ ಸುಖವಾಗಿ ಇರ್ತೀಯ. ನಾವಿಬ್ರೂ ಒಂದೇ ಮನೆಯ ಸೊಸೆಯರಾಗಿ ಚೆನ್ನಾಗಿರ್ತೀವಿ. ನೀ ಏನಂತಿ ಶೃತಿ” ಎಂದು ಅಕ್ಕ ಕೇಳಿದಳು.

ಮೊದಲೇ ಚಿಂತೆಯಲ್ಲಿದ್ದ ಶೃತಿ, “ಅಕ್ಕ ನಿಂಗೆ ಒಂದ್ ವಿಷಯ ಕೇಳಬೇಕು. ದಿಢೀರ್ ಅಂತ ಯಾಕೆ ಈ ಪ್ರಸ್ತಾಪ? ಈಗೇನು ಅವಸರ ಇತ್ತು ಅಕ್ಕ ಮದುವೆಗೆ?” “ಅವಸರ ಅಂತ ಅಲ್ಲ ಶೃತಿ ನಿಂದು ಡಿಗ್ರಿ ಆಯ್ತು, ನನ್ ಮೈದುನನು ಓದು ಮುಗಿಸಿ ನೌಕರಿ ಮಾಡ್ಲಿಕತ್ತು ತುಂಬ ವರ್ಷಗಳೇ ಆದ್ವು. ಫಾರೆನ್ಗೂ ಹೋಗ್ ಬಂದಿದಾನೆ. ಇಬ್ಬರದೂ ಮದುವೆಯ ವಯಸ್ಸು ಅದ್ಕೆ ಈ ಪ್ರಸ್ತಾಪ. ಶೃತಿ ನಿಂಗೂ ಈಗ ಮದುವೆ ಆಗೋ ಮನಸಿರುತ್ತೆ ಯಾಕೆ? ನಾಚಿಕೆನಾ ಹೇಳೋಕೆ”!! ಇಲ್ಲ ಅಕ್ಕ ನಂಗೆ ಈ ಮದುವೆ ಇಷ್ಟ ಇಲ್ಲ. ಯಾಕೆ ಶೃತಿ? ಎಂದು ಅವಳಕ್ಕ ಗಾಬರಿಯಿಂದ ಕೇಳುತ್ತಾಳೆ. ಯಾಕೆ ಮದುವೆ ಇಷ್ಟ ಇಲ್ಲ ಅಂತಿ. ನೋಡು ಪುಟಿ ಅಪ್ಪ ಅಮ್ಮಂಗೂ ವಯಸ್ಸಾಯ್ತು ನಿಂದೊಂದು ಮದುವೆ ಅಂತ ಮುಗಿದೋದ್ರೆ ಅವರಿಗೆ ನೆಮ್ಮದಿ. ಹೇಗೂ ನಮ್ಮನೆ ಹುಡುಗ ಆಗಿದ್ದಕ್ಕೆ ಎಲ್ರಿಗೂ ನೀನು ನನ್ನ ಹಾಗೆ ಸುಖವಾಗಿ ಇರ್ತೀಯಾ ಅಂತ ಖುಷಿ. ಅದಕ್ಕೆ ಮದುವೆ ಮಾಡಿಬಿಡೋಣ ಅಂತ ನಿರ್ಧಾರ ಆಗಿದೆ. ನೀನೂ ನನ್ ಮೈದ್ನನ್ನ ನೋಡಿದೀಯ; ರೂಪವಿದೆ, ವಿದ್ಯೆಯಿದೆ, ಗುಣದಲ್ಲಂತೂ ಬಂಗಾರ. ಯಾವ ವಿಷಯದಲ್ಲೂ ತೆಗೆದು ಹಾಕೋಹಾಗಿಲ್ಲಮಿ. ನಿನ್ನನ್ನ ಅವನು ಮೆಚ್ಕೊಂಡಿದಾನೆ. ಅವನಿಗೆ ನೀ ಅಂದ್ರೆ ತುಂಬ ಪ್ರೀತಿ. ಅದ್ಕೆ ಇವತ್ತಲ್ದೆಯಿದ್ರು ಇನ್ನೊಂದ್ ವರ್ಷಕ್ಕಾದ್ರೂ ನೀನು ಮದುವೆ ಆಗ್ಲೇಬೇಕಲ್ವ. ಒಪ್ಕೊಂಡ್‌ ಬಿಡೇ ಬಂಗಾರಿ. ನಿತಿನ್ ನ ಮದುವೆಗೆ ಎಲ್ಲರೂ ಕಾತುರರಾಗಿದ್ದಾರೆ, ಈಗ ನೀನು ಈ ಸಂಬಂಧ ಬಿಟ್ರೆ, ನನ್ ಮೈದುನನಿಗೆ ಬೇರೆ ಕಡೆ ಹುಡುಗೀನ ನೋಡ್ತಾರೆ, ಮದುವೆನೂ ಆಗುತ್ತೆ. ನಿಂಗೆ ಬೇರೆ ಯಾವುದೋ ಹೊರಗಿನ ಸಂಬಂಧ ನೋಡ್ಬೇಕು. ಅಪ್ಪಂಗೆ ತೊಂದ್ರೆ. ಅದ್ಕೇ…… ಅಷ್ಟರಲ್ಲೇ ತಡೆದು ಶೃತಿ ನಿಜ ವಿಷಯವನ್ನು ಹೇಳಬೇಕೆನ್ನುತ್ತಾಳೆ. ಅಕ್ಕ ನಾನು ಒಂದು ವಿಷಯ ಹೇಳ್ಬೇಕು ನಿಂಗೆ ಅದು ಅದು ಎಂದು ತಡವರಿಸುತ್ತಾಳೆ ಶೃತಿ. ಏನೇ ಅದು.. ಅದು.. ಅಂತೀಯ… ! ಯಾರನ್ನಾದ್ರೂ ???? ಹೌದು ಅಕ್ಕ ಎಂದೊಡನೇ ಅಕ್ಕ ಭಯದಿಂದ ಶೃತಿ ಏನ್ ಮಾತಾಡ್ತಾ ಇದೀಯ. ಮಾನಕ್ಕೆ ಹೆಸರಾದ ನಮ್ಮನೆ ಹುಡುಗಿ ಲವ್ ಮಾಡೋದಾ. ನಿಂಗೆ ಮನಸಾದ್ರು ಹೇಗೆ ಬಂತು ಶೃತಿ. ಈ ವಿಷಯ ಅಪ್ಪ ಅಮ್ಮಂಗೆ ಗೊತ್ತಾದ್ರೆ ಎದೆನೇ ಒಡಿತಾರೆ ಶೃತಿ. ನಮ್ಮನೆ, ಅಕ್ಕನ ಮನೆಯವರಿಗೆ ಗೊತ್ತಾದ್ರೆ ನಿನ್ ಬಗ್ಗೆ, ನಮ್ ಬಗ್ಗೆ ಏನ್ ಅನ್ಕೊಳೊಲ್ಲ. ನಮ್ಮನೆ ಮರ್ಯಾದೆ ಏನಾಗ್ಬೇಡ. ನಿಂಗೆ ಇವೆಲ್ಲ ಮುಂಚೆ ಯೋಚನೆಗೆ ಬರ್ಲೇ ಇಲ್ವಾ ಶೃತಿ. “ಅಕ್ಕ ಪ್ಲೀಸ್ ಕಣೆ ಆ ಹುಡುಗನು ನಮ್ಮ ಜಾತಿ ಅವನೆ. ಒಳ್ಳೆ ಕೆಲಸ ಇದೆ. ಮನೆತನನೂ ಚೆನ್ನಾಗಿದೆ ಅಂತೆ. ಅಮೇರಿಕದಲ್ಲಿ ಕೆಲಸ ಮಾಡಿ ಈಗ ಇಲ್ಲೆ ಬಂದಿದಾರೆ. ನೀನೆ ಹೇಗಾದ್ರು ಮಾಡು ಅಕ್ಕ ಪ್ಲೀಸ್. ನನ್ನ.. ನನ್ನ ಪ್ರೀತಿನ ಉಳಿಸು ಅಕ್ಕ ಈ ಮದುವೆಯಿಂದ ನಮ್ಮ ಮನೆಯ ಮರ್ಯಾದೆಗೆ ಯಾವ ಕೆಟ್ಟ ಹೆಸರು ಬರೋದಿಲ್ಲ ಅಕ್ಕ”, ಅಂತ ಗೊಳೋ ಅಂತ ಕಣ್ಣೀರು ಹಾಕುತ್ತಾಳೆ. ಶೃತಿ ಅಳ್ಬೇಡ; ಲವ್ ಮ್ಯರೇಜ್ ಅನ್ನು ಅರೇಂಜ್ ಮಾಡ್ಬೇಕು ಅಂದ್ರೆ ತುಂಬಾ ಬಿರುಸು. ಅಪ್ಪ ಅಮ್ಮಂಗೆ ಹೇಗೋ ಹೇಳ್ತೀನಿ. ಆದ್ರೆ ನಮ್ ಮನೆಯವರಿಗೆ ಹೇಳೋದೇ ನೋಡು ಕಷ್ಟ. ನನ್ ಮೈದ್ನ ಅಂತೂ ನಿನ್ನ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದಾನೆ. ನಿಮ್ ಭಾವಂಗೂ ನಿನ್ನ, ತಮ್ ತಮ್ಮಂಗೆ ಮಾಡ್ಕೋಬೇಕು ಅಂತ ಬಹಳ ಆಸೆ ಇದೆ. ನೀನ್ ನೋಡಿದ್ರೇ ಹೀಗೆ ಮಾಡಿದೀಯಾ! ಆಶ್ಚರ್ಯದ ಜೋತೆ ಭಯಾನೂ ಆಗ್ತಿದೆ ನಂಗೆ. ನಮ್ ಮನೆಯವರು ಏನಂತಾರೋ ಅಂತ ಆತಂಕ ಆಗ್ತಿದೆ ಶೃತಿ.

ಆಯ್ತು ನೋಡೋಣ ನನ್ ಗಂಡಂಗೆ ಹೇಳಿ ಅವನ ಬಗ್ಗೆ ವಿಚಾರಿಸ್ತೀನಿ. ಫೋನ್ ನಂಬರ್ ಕೊಡು ಅಂತ ನಂಬರ್ ಇಸ್ಕೊಂತಾಳೆ. ಗಂಡಂಗೆ ಫೆÇೀನ್ ಮಾಡಿ ಎಲ್ಲ ವಿಷಯ ತಿಳಿಸಿ ನಂಬರ್ ಕೊಟ್ಟು ವಿಚಾರಿಸಿ. ಯಾರು, ಹೇಗೆ ಅಂತ ಶೃತಿ ಅವನು ತುಂಬ ಪ್ರೀತಿ ಮಾಡ್ತಿದಾರೆ. ಈ ಹುಡುಗನ ಬಗ್ಗೆ ವಿಚಾರಿಸಿ ಪ್ಲೀಸ್. ನೀವು ಬೇಜಾರ್ ಆಗ್ಬೇಡಿ ಸರಿ ನಾ ಎಂದು ಗಂಡಂಗೆ ಮನವೊಲಿಸುತ್ತಾಳೆ. ಗಂಡ ವಿಚಾರಿಸ್ತೀನಿ ಎಂದು ಫೆÇೀನ್ ನಂಬರ್ ತೆಗೆದುಕೊಳ್ತಾನೆ.

ಇತ್ತ ಸುಶಾಂತನ ಮನಸ್ಸು ತುಂಬ ಸಂಕಟ ಪಡ್ತಾ ಇರುತ್ತೆ. ಅದೇ ಸಮಯಕ್ಕೆ ಶೃತಿ ಭಾವ ಸುಶಾಂತಗೆ ಫೆÇೀನ್ ಮಾಡ್ತಾರೆ. ಸುಶಾಂತ ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿರದೆ ಬೇಸರದಿಂದ ಕುಳಿತುಕೊಂಡಿರುತ್ತಾನೆ. 2-3 ಬಾರಿ ಫೆÇೀನ್ ಮಾಡಿದರೊ ಅನ್ನೋನ್ ಕಾಲ್ ಅಂತ ರಿಸೀವ್ ಮಾಡುವುದೇ ಇಲ್ಲ. ಪುನಃ ಪ್ರಯತ್ನ ಮಾಡದೆ ಆಮೇಲೆ ಮಾಡಿದರಾಯ್ತು ಅಂತ ಸುಮ್ನಾಗ್ತಾರೆ.

ಮನೆಯಲ್ಲಿ ಶೃತಿ ಸಹಜವಾಗಿಲ್ಲ. ಮುಖದಲ್ಲಿನ ಕಾಂತಿ ಕಳೆಗುಂದಿದೆ. ಆ ನಗು ಬೀರುವ ಮಂದಹಾಸ ಕಣ್ಣಲ್ಲಿನ ಕೋಲ್ಮಿಂಚು ಎಲ್ಲವೂ ಈ ದಿನ ಗಂಟು ಮೋರೆಯೊಳಗೆ ಅವಿತುಕೊಂಡಿವೆ. ತನ್ನ ಪ್ರೀತಿ ಎಲ್ಲಿ ಮನೆಯವರ ಸಮ್ಮತಿ ಇಲ್ಲದೆ ನಾಶವಾಗುತ್ತೋ ಅನ್ನುವ ಭಯ ನಲ್ಮೆ ತುಂಬಿದ ಗೂಡೊಳಗೆ ಹೊಕ್ಕು ಮೈ ನಡುಗಿಸುತಿದೆ. ಏನು ಮಾಡಲು ತೋಚದೆ ಕುಳಿತುದುದನ್ನು ಗಮನಿಸಿದ ಅಕ್ಕ “ಏ ಶೃತಿ ನೀನ್ ಪ್ರೀತಿ ಮಾಡೋ ಹುಡುಗನ ಹೆಸರೇನು?” ಅವನು ಫೆÇೀನ್ ಮಾಡಿದ್ರೆ ರಿಸೀವ್ ಮಾಡ್ತಾನೇ ಇಲ್ವಂತೆ ನಿಮ್ ಭಾವ ಈಗ ಫೆÇೀನ್ ಮಾಡಿ ಹೇಳಿದ್ರು. ಹೌದಾ ಸುಶಾಂತ್ ಯಾಕೆ ಫೆÇೀನ್ ರಿಸೀವ್ ಮಾಡ್ಲಿಲ್ಲ ಅಂತ ಶೃತಿಗೆ ತುಂಬ ಭಯ ಆಯ್ತು. ಅವನ್ಹೆಸರು ಸುಶಾಂತ್ ಅಂತ ಅಕ್ಕ. ಫೆÇೀನ್ ಯಾವಾಗ್ಲು ಜೊತೆನೇ ಇಟ್ಕೊಂಡರ್ತಾರೆ. ಯಾಕ್ ರಿಸೀವ್ ಮಾಡ್ಲಿಲ್ಲ ಅನ್ನೋದೆ ಚಿಂತೆ ಆಗಿದೆ ಅಕ್ಕ. ನಾನು ಮೆಸೇಜ್ ಮಾಡ್ತೀನಿ ಅಂತ ಶೃತಿ ಸುಶಾಂತ್ಗೆ, ತನ್ನ ಅಕ್ಕನಿಗೆ ವಿಷಯ ತಿಳಿಸಿದ್ದು, ಭಾವಂಗೆ ನಂಬರ್ ಕೊಟ್ಟದ್ದು, ಅವರು ಫೆÇೀನ್ ಮಾಡಿದ್ದು, ನೀನು ರಿಸೀವ್ ಮಾಡಿಲ್ಲ ಎಂಬುದು ಎಲ್ಲ ವಿಷಯ ಬರೆದು ವಾಟ್ಸಪ್ ಕಳೆಸುತ್ತಾಳೆ. ಚಿಂತಾಕ್ರಾಂತನಾಗಿ ಕುಳಿತ ಸುಶಾಂತ್ ಮೆಸೇಜ್ ಓದಿ ರಿಪ್ಲೈ ಮಾಡ್ತಾನೆ. ಶೃತಿ ನಂಗೆ ನಿನ್ನ ಬಿಟ್ಟಿರೋಕೆ ಆಗ್ತಿಲ್ಲ. ನಿನ್ ಮದುವೆ ವಿಚಾರ ಮಾಡ್ತಿದಾರೆ ಮನೇಲಿ ಅಂತ ಕೇಳಿ ಬಾಳ ಡಿಪ್ರೆಸ್ ಅನಿಸ್ತಿದೆ. ಅದ್ಕೆ ಯಾವ ಅನ್ನೋನ್ ನಂಬರ್ಗಳನ್ನು ರಿಸೀವ್ ಮಾಡಿಲ್ಲ, ಅಂತ ಕಳ್ಸ್ತಾನೆ.

ಶೃತಿ ಭಾವ ಮತ್ತೆ ಕಾಲ್ ಮಾಡ್ತಾರೆ. ಫೋನ್ ರಿಸೀವ್ ಆಗುತ್ತೆ. ಹೆಲೋ ಎಂದೊಡನೆ, ಇದು ಎಲ್ಲೋ ಕೇಳಿದ ಧ್ವನಿ. ಹೌದು ಇದು ನನ್ನ ತಮ್ಮ ನಿತಿನ್ನ ಧ್ವನಿಯೇ. ಇದು ಸುಶಾಂತ್ ಅಲ್ವಾ? ಎಂದೊಡನೆ ನಾನು ಸುಶಾಂತಲ್ಲ, ಅವನ ಗೆಳೆಯ ನಿತಿನ್, ತಾವು.. ನಿತಿನ್.. ನನೋ ನಿಮ್ಮಣ್ಣ ನೀ ಹೇಗೆ ಅಲ್ಲಿ. ಸುಶಾಂತ ನಿಂಗೆ ಹೇಗೆ ಪರಿಚಯ? ನಾನು ಸುಶಾಂತ ಫಾರೆನ್ನಲ್ಲಿ ಫ್ರೆಂಡ್ಸ್ ಅಣ್ಣ. ಅವನನ್ನ ಮಾತಾಡ್ಸೋಕಂತ ಬಂದಿದ್ದೆ. ಹೌದು ನಿಂಗೂ ಸುಶಾಂತ ಪರಿಚಯನಾ ಅಣ್ಣ. ಏಕೆ ಕಾಲ್ ಮಾಡಿದ್ದಿ. ಅದೂ.. ಅದೂ.. ಎನ್ನುವಷ್ಟರಲ್ಲಿ ಸುಶಾಂತ ಬರ್ತಾನೆ. ಯಾರದೋ ಫೋನು, ನನ್ ಮೊಬೈಲ್ಗೆ ಬಂದಿದೆ. ಸುಶಾಂತನ ಧ್ವನಿ ಕೇಳಿ ನಿತಿನ್ ಅಣ್ಣ ಕಾಲ್ ಕಟ್ ಮಾಡ್ತಾನೆ.

ಸುಶಾಂತ್ ನಿಂಗೆ ನನ್ನ ಅಣ್ಣ ಪರಿಚಯನಾ? ನಿಂಗ್ಯಾಕೆ ನನ್ನಣ್ಣ ಕಾಲ್ ಮಾಡಿದ್ದರು. ಇಲ್ವೋ ನಂಗೆ ಗೊತ್ತಿಲ್ಲ. ನಂಗ್ಯಾಕೆ ಅವರು ಕಾಲ್ ಮಾಡ್ತಾರೆ. ಇಬ್ಬರಲ್ಲೂ ಗೊಂದಲ ಉಂಟಾಗುತ್ತದೆ. ಹೋಗ್ಲಿ ಬಿಡು ಸುಶಾಂತ ನಾ ಆಮೇಲೆ ನನ್ನಣ್ಣನ್ನ ಕೇಳಿ ಹೇಳ್ತೀನಿ. ಮತ್ತೆ ನಿನ್ ಲವ್ ಸ್ಟೋರಿ ಎಲ್ಲಿಗೆ ಬಂತಪ್ಪ. ನಿತಿನ್ ನನ್ ಲವ್ ಸ್ಟೋರಿ ಸಕ್ಸಸ್ ಆಗ್ತಿದೆ ಅನ್ನುವಾಗ್ಲೇ ಒಂದು ತೊಂದ್ರೆ ಎದುರಾಗಿದೆ ನೋಡು. ಎನಾಯ್ತೋ… !?

“ನನ್ ಪ್ರೇಯಸಿ ಅಕ್ಕಳಿಗೆ ಒಬ್ಬ ಮೈದುನ ಇದಾನಂತೆ, ಅವನಿಗೆ ಇವಳನ್ನು ಕೊಟ್ಟು ಮದುವೆ ಮಾಡೋ ಯೋಚನೆ. ನನ್ ಲವ್ವರ್ ಮೆಸೇಜ್ ಮಾಡಿದ್ಲು. ತುಂಬಾ ಗಾಬರಿಯಲ್ಲಿದಾಳೆ. ಪರಿಸ್ಥಿತಿ ಹೇಗೆ ನಿಭಾಯಿಸೋದು ಅಂತ ಚಿಂತೆ ಆಗಿದೆ ಕಣೋ. ನಂಗಂತೂ ಅವಳನ್ನ ಬಿಟ್ಟು ಬದುಕೋ ಶಕ್ತಿ ಇಲ್ಲ. ಅವಳಿಗೂ ಕೂಡ”.

ನಿತಿನ್ ಗೆ ಮನದಲ್ಲೇ ಅನುಮಾನ ಶುರು ಆಗುತ್ತೆ. ಅತ್ತಿಗೆ ಶೃತಿನ ನಂಗೆ ಕೇಳೋಕೆ ತವರಿಗೆ ಹೋಗಿದ್ದು, ಈಗ ಅಣ್ಣ ಸುಶಾಂತ್ಗೆ ಕಾಲ್ ಮಾಡಿದ್ದು, ಶೃತಿಯ ಅಕ್ಕನ ಮೈದುನ ಅಂದ್ರೆ ನಾನೇ. ಇದೆಲ್ಲದಕ್ಕೂ ಎನೋ ಸಂಬಂಧ ಇದೆ ಎಂದು ನಿತಿನ್ ಯೋಚನೆಯಲ್ಲಿ ಮುಳುಗುತ್ತಾನೆ. ಅಷ್ಟರಲ್ಲಿ ಸುಶಾಂತ್, ಏನ್ ಯೋಚನೆ ಮಾಡ್ತಾ ಇದೀಯಾ ನಿತಿನ್? ಎಂದು ಮುಟ್ಟುತ್ತಾನೆ. ನಿತಿನ್ ಗಡಿಬಿಡಿಯಿಂದ, ಸುಶಾಂತ್ ನಿನ್ನ ಪ್ರೇಯಸಿಯ ಹೆಸರೇನು? ಎಂದು ಕೇಳುತ್ತಾನೆ. ಇಗ್ಯಾಕೋ ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ. ಪ್ಲೀಸ್ ಹೇಳೋ ಸುಶಾಂತ್. ಆಯ್ತಪಾ ಹೇಳ್ತೀನಿ ಅವಳ ನನ್ನ ಪ್ರೀತಿಗೆ ಮಿಡಿದ, ನನ್ನ ಹೃದಯ ರಾಗಕ್ಕೆ ಮಿಡಿದ ಶೃತಿ ಕಣೋ. ಶೃತಿ ಅವಳ ಹೆಸರು. ಹೆಸರು ಕೇಳಿದೊಡನೇ ತನ್ನ ಹೃದಯದೊಳಗೆ ಕಟ್ಟಿದ ಆಶಾಗೋಪುರ ಕಳಚಿ ಬಿದ್ದಂತಾಗಿ, ಖಿನ್ನನಾಗಿ ನಿಲ್ಲುತ್ತಾನೆ. ಮುಖದ ಭಾವವನ್ನು ಗಮನಿಸಿದ ಸುಶಾಂತ್, ಯಾಕೋ ನಿತಿನ್ ಏನಾಯ್ತೋ ಎಂದು ಕೇಳುತ್ತಾನೆ. ಸುಶಾಂತ್ ಆ ನಿನ್ನ ಪ್ರೀತಿಯ ಶೃತಿಯ ಅಕ್ಕನ ಮೈದುನ ನಾನೇ ಕಣೋ… ಎನ್ನುತ್ತಾನೆ. ಸುಶಾಂತ್ ಮನಸು ಅಲ್ಲೋಲ ಕಲ್ಲೋಲವಾಗುತ್ತದೆ. ಹೌದೇನೋ ನಿತಿನ್ ..! ಎಂದು ಸುಮ್ಮನೆ ನಿಲ್ಲುತ್ತಾನೆ ಸುಶಾಂತ್.

ನಿತಿನ್ ಶೃತಿ ನಾನು ತುಂಬಾ ಪ್ರೀತಿ ಮಾಡ್ತಿದೀವಿ. ನಂಗೆ ನಿಜಕ್ಕು ಅವಳು ನಿನ್ನ ಅತ್ತಿಗೆ ತಂಗಿ ಅಂತ ಗೊತ್ತಿರ್ಲಿಲ್ಲ. ನಿಂಜತೆ ಅವಳನ್ನ ಮದುವೆ ಮಾಡೋಕೆ ನಿರ್ಧರಿಸಿದಾರೆ ಎಲ್ರೂ. ನಿಂಗೂ ಅವಳ ಮೇಲೇ….. ಅಷ್ಟರಲ್ಲೇ ತಡೆದು ಹೇ ಸುಶಾಂತ್, ನಿನ್ ಬಳಿ ನಾನೇನು ಮುಚ್ಚಿಡೋದಿಲ್ಲ. ಶೃತಿ ದಂತದ ಗೊಂಬೆ, ನಡೆ ನುಡಿಗೆ ಸರಿಸಾಟಿ ಆದವರು ಯಾರೂ ಇಲ್ಲ. ಅವಳನ್ನ ಹತ್ತಿರದಿಂದ ನೋಡಿದ ಯಾವುದೇ ಹುಡುಗ ಕೂಡ ಪ್ರೀತಿಸದೆ ಇರಲಾರ. ಹಾಗೆ ನಾನು ಅದಕ್ಕೆ ಹೊರತಾಗಿಲ್ಲ ಕಣೋ. ನನ್ನ ಅಣ್ಣಂಗೆ ಶೃತಿ ಅಕ್ಕನ್ನ ನೋಡೋಕೆ ಹೋದಾಗ್ಲೇ ನಾನು ಶೃತಿಗೆ ಮನಸೋತಿದ್ದೆ. ನಂತರ ಅಣ್ಣನ ಮದುವೆ ಆದ್ಮೇಲಂತೂ ಅವಳನ್ನು ಪ್ರೀತಿಸಲು ಶುರುಮಾಡಿದೆ. ಆದರೆ ಅವಳಿಗೆ ಹೇಳ್ಬೇಕು ಅನ್ನುವಷ್ಟರಲ್ಲಿ ಫಾರೇನ್ಗೆ ಹೋದೆ. ಅವಳನ್ನ ನೆನೆಯದ ದಿನಗಳಿಲ್ಲ ಸುಶಾಂತ್. ನಾನು ಫಾರೆನ್ ನಿಂದ ಬಂದಕೂಡ್ಲೆ ಮದುವೆ ಪ್ರಸ್ತಾಪ ಬಂತು. ರೋಗಿ ಬಯಸಿದ್ದು, ವೈದ್ಯ ಹೇಳಿದ್ದು ಒಂದೇ ಅನ್ನೋ ಹಾಗೆ, ಶೃತೀನ ನಂಗೆ ತಂದ್ಕಳೋ ಮಾತು ಬಂತು. ನನ್ ಅತ್ತಿಗೆ ನನ್ನ ಕೇಳಿದ್ರು. ನಂಗೂ ಇಷ್ಟ ಅಂತ ಹೇಳಿ ಸುಮ್ನಾದೆ. ಮನದಲ್ಲೇ ಖುಷಿ, ನನ್ನೊಲವು ನನಗೆ ಸಿಗುತ್ತದೆಂಬ ಉಲ್ಲಾಸ ತುಂಬಿಕೊಂಡಿದ್ದೆ. ಆದರೇ…. ಶೃತಿ ಹೀಗೆ…. ನಂಗೆ ಊಹೆನೂ ಮಾಡ್ಕೋಳೋಕೆ ಆಗ್ತಿಲ್ಲ. ಮುಗ್ಧೆಯಂತಿದ್ದೋಳು…. ನಿತಿನ್! ಶೃತಿ ಈಗಲೂ ಅಪರಂಜಿ. ಯಾರನ್ನು ಕಣ್ಣೆತ್ತಿಯೂ ನೋಡದ ಸುಗುಣಿ. ನಾನೇ ಅವಳ ಬೆನ್ನು ಬಿದ್ದು ಒಲಿಸಿಕೊಂಡಿರುವೆ. ನಿತಿನ್ ನಿನ್ನ ಸ್ನೇಹ, ಅವಳ ಪ್ರೇಮ ಎರಡೂ ನನಗೆ ಪ್ರಮುಖ. ಎರಡನ್ನೂ ನಾ ಉಳಿಸಿಕೊಳ್ಳಬಯಸುತ್ತೇನೆ. ನಿತಿನ್ ಈಗ ನಿನ್ನ ನಿರ್ಧಾರ ಪ್ರಮುಖ ಪಾತ್ರವಹಿಸುತ್ತದೆ.

ಸುಶಾಂತ್ ನಿನ್ನ ಗೆಳೆಯನ್ನ ನೀನು ಇಷ್ಟೆನಾ ಅರ್ಥ ಮಾಡ್ಕಂಡಿರೋದು. ನಂದು ಏಕ ಮುಖದ ಪ್ರೀತಿ. ಆದ್ರೆ ನೀನು ಶೃತಿ ಇಬ್ರು ಪ್ರಾಣಕ್ಕಿಂತ ಹೆಚ್ಚು ಒಬ್ಬರಿಗೊಬ್ಬರುಪ್ರೀತಿ ಮಾಡ್ತಾ ಇದೀರಿ. ಅಲ್ದೆ ನೀನು, ನನಗಿಂತ ಎಲ್ಲ ರೀತಿಯಿಂದಲೂ ಶೃತಿಗೆ ತಕ್ಕದಾದ ಹುಡುಗ. ನಿಮ್ ಪ್ರೀತೀಗೆ ನನ್ ಬೆಂಬಲ ಇದೆ. ನಾ ಮಾತಾಡ್ತೀನಿ. ನಿಮ್ ಮದುವೆ ಮಾಡ್ಸೋ ಜವಾಬ್ದಾರಿ ನಂದು ಸುಶಾಂತ್. ನಿತಿನು ಥ್ಯಾಂಕ್ಯು ಸೋ ಮಚ್. ಸರಿ ನಾ ಇನ್ ಬರ್ತೀನೋ, ಕೆಲಸ ಇದೆ. ಎಂದು ನಿತಿನ್ ಮನೆಗೆ ಹೊರಡ್ತಾನೆ. ಇತ್ತ ಶೃತಿ ಭಾವ ಹೆಂಡತಿಗೆ ಸುಶಾಂತ್ ಗೆ ಕಾಲ್ ಮಾಡಿದ್ದು, ಸುಶಾಂತ್ ನಿತಿನ್ ಗೆಳೆಯ ಎಂದು ಗೊತ್ತಾದದ್ದನ್ನ ಹೇಳ್ತಾನೆ. ಅಷ್ಟರಲ್ಲೇ ನಿತಿನ್ ಮನೆಗೆ ಬಂದು, ಅಣ್ಣಂಗೆ ಎಲ್ಲ ವಿಷಯ ಹೇಳಿ, “ಸುಶಾಂತ ಒಳ್ಳೆ ಹುಡುಗ, ನನ್ನ ಆಪ್ತ ಸ್ನೇಹಿತ. ನನಗಿಂತಲೂ ಒಳ್ಳೆಯ ಹುಡುಗ. ಶೃತಿ ಅವನನ್ನು ಮದುವೆ ಆದರೆ ಖಂಡಿತ ಸುಖವಾಗಿ ಇರ್ತಾಳೆ”. ಎಂದು ಹೇಳುತ್ತಾ ಮನದಲ್ಲೆ ದುಃಖಿಸುತ್ತಾನೆ. ಕಳೆದುಕೊಂಡ ಪ್ರೀತಿಯ ಬಗೆಗೆ ವ್ಯಥೆಪಡುತ್ತಾನೆ. ಆದರೆ ಶೃತಿ ತನ್ನ ಸ್ನೇಹಿತನನ್ನು ಒರಿಸಲು ಹೊರಟಿರುವುದಕ್ಕೆ ತುಸು ನೆಮ್ಮದಿ, ನಿಟ್ಟುಸಿರು ಬಿಡುತ್ತಾನೆ.

ಶೃತಿಗೆ ಅಕ್ಕ ನಡೆದ ಸಂಗತಿ ತಿಳಿಸುತ್ತಾಳೆ. ಶೃತಿ ಇನ್ನು ನಿನ್ನ ಪ್ರೀತಿಗೆ ವಿಘ್ನವಿಲ್ಲ. ಅಪ್ಪ ಅಮ್ಮನೊಂದಿಗೆ ನಾವೆಲ್ಲ ಮಾತಾಡ್ತೀವಿ. ನಿಮ್ ಭಾವಗೆ ಬರಲು ಹೇಳ್ತೀನಿ. ನೀನು ಸಂತೋಷವಾಗಿರು. ನನ್ನ ಮುದ್ದು ತಂಗಿ ಎಂದು ಹಣೆಗೆ ಮುತ್ತಿಟ್ಟು, ನಿನ್ನ ಪ್ರೇಮಿಗೆ ವಿಷಯ ತಿಳಿಸು ಎನ್ನತ್ತಾಳೆ. ಶೃತಿ ಆನಂದಕೆ ಪಾರವೇ ಇಲ್ಲ. ತನ್ನ ಪ್ರೀತಿ ಉಳಿಯುವ ಭರವಸೆ ಮೂಡಿ ನೆಮ್ಮದಿ ತಂದಿದೆ. ಸುಶಾಂತಗೆ ಮೆಸೇಜ್ ಮಾಡಿ ವಿಷಯ ತಿಳಿಸ್ತಾಳೆ. ಆಯ್ ಲವ್ ಯು ಸುಶಾಂತ್, ನಮ್ ಪ್ರೀತಿ ಉಳೀತು. ನಮ್ ಪ್ರೀತಿ ಗೆದ್ದಿದೆ ಒಲವೇ ಎಂದು ಸಿಹಿ ಮುತ್ತಿಡುತ್ತಾಳೆ.

ಮರುದಿನ ಭಾವ, ನಿತಿನ್ ಬರುತ್ತಾರೆ. ಎಲ್ಲರೂ ಸುಶಾಂತನ ಬಗೆಗೆ ಶೃತಿ ತಂದೆ ತಾಯಿಗೆ ಹೇಳುತ್ತಾರೆ. ಒಳ್ಳೆಯ ಹುಡುಗ, ನಿತಿನ್ ಗೆಳೆಯ. ವಿದ್ಯಾವಂತ, ಕೈತುಂಬ ಸಂಬಳ ಬರುತ್ತದೆ, ಒಳ್ಳೆಯ ಮನೆತನ. ಶೃತಿ ಸುಶಾಂತ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಯಾವ ಅನುಮಾನ, ಬಿಗುಮಾನ ಇಲ್ಲದೆ ಒಪ್ಪಿಕೊಳ್ಳಬಹುದು ಎಂದು ಹೇಳುತ್ತಾರೆ. ಶೃತಿ ತಂದೆ, ನನ್ನ ಮಗಳು ಪ್ರೀತಿಸುತ್ತಿದ್ದಾಳೆಯೇ? ಎಂದು ಆಶ್ಚರ್ಯಚಕಿತರಾದರೂ ಹುಡುಗ ಒಳ್ಳೆಯವ, ಗುಣವಂತ ಎಂದು ಕೇಳಿ ತುಸು ಸಂಕೋಚದಿಂದಲೇ ಒಪ್ಪುತ್ತಾರೆ. ತಾಯಿ ಕೂಡ ನೀವೆಲ್ಲ ಹೇಳಿದ್ಮೇಲೆ ಆಯ್ತು. ನಮ್ ಶೃತಿ ಅವರ ಅಕ್ಕಂದಿರ ಹಾಗೆ ಒಳ್ಳೆ ಮನೆ ಸೇರಿದ್ರೆ ಆಯ್ತು ಎಂದು ತಲೆದೂಗುತ್ತಾರೆ.

ನಿತಿನ್ ಸುಶಾಂತ್ಗೆ ಫೆÇೀನ್ ಮಾಡಿ ವಿಷಯ ತಿಳಿಸಿ, ಅವರಪ್ಪ ಅಮ್ಮನ್ನ ಕರೆದುಕೊಂಡು ಬರಲು ಹೇಳುತ್ತಾನೆ. ಮಗನ ಮನಸಿಗೆ ವಿರೋಧಿಸದ ಸುಶಾಂತನ ಅಪ್ಪ ಅಮ್ಮ ಖುಷಿಯಿಂದಲೇ ಹೆಣ್ಣು ಕೇಳೋಕೆ ಬರ್ತಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ. ನಿಶ್ಚಿತಾರ್ಥ, ಪ್ರೇಮಿಗಳ ನಿನಾದ. ಕದ್ದು ಮುಚ್ಚಿ ಮಾಡುತ್ತಿದ್ದ ಚಾಟಿಂಗು, ಟಾಕಿಂಗಿಗೆ ಈಗ ಹಿರಿಯರ ಅನುಮತಿ ಇದೆ. ಸಂತೋಷದ ದಿನಗಳನ್ನ ಕಳೆಯುತ್ತಿದ್ದರೂ, ಸುಶಾಂತನ ಮನದಲ್ಲಿ ಒಂದು ಅಳುಕು. ಗೆಳೆಯ ನಿತಿನ್ ನನಗಾಗಿ ತನ್ನ ಪ್ರೇಮವನ್ನು ಮನದಲ್ಲೇ ಅಂತ್ಯಗೊಳಿಸಿದ. ಅವನಿಗಾಗಿ ನಾನು ಏನಾದರೂ ಮಾಡಲೇಬೇಕು ಎಂದು ಚಿಂತಿಸುತ್ತಿರುವಾಗಲೇ ಒಂದು ಆಲೋಚನೆ ಬರುತ್ತದೆ. ನನ್ನ ಗೆಳೆಯ ನನ್ನ ಭಾವನಾದರೆ ಹೇಗೆ? ಹೌದು ನನ್ನ ಗೆಳೆಯ ನನ್ನ ಭಾವ. ಹೌದು ಹೌದು ಎಂದು ತಂದೆ ತಾಯಿಗೆ ಹೇಳಿದ. ಒಪ್ಪಿಕೊಂಡರು. ತಂಗಿ ನಾಚಿಕೆಯಿಂದ ಶೀಘ್ರದಲ್ಲೆ ನಿನ್ನಿಷ್ಟ ಅಣ್ಣ. ಎಂದು ಸಮ್ಮತಿ ಸೂಚಿಸಿದಳು. ಸುಶಾಂತನ ಖುಷಿಗೆ ಪಾರವೇ ಇಲ್ಲ. ತಂಗಿಗೆ ಒಪ್ಪುವ ಹುಡುಗ. ಸುಖವಾಗಿರ್ತಾಳೆ ನನ್ತಂಗಿ. ನಿತಿನ್ ಗೂ ಕೂಡ ನನ್ ತಂಗಿ ಸರಿಯಾದ ಜೋಡಿ. ನಿತಿನ್ ಗೆ ಕೇಳಬೇಕೆಂದು ಅವನನ್ನು ಭೇಟಿ ಆಗುತ್ತಾನೆ.

ನಿತಿನ್ ನಿನ್ನಲ್ಲಿ ನನ್ನದೊಂದು ಬೇಡಿಕೆ ನೀನು ನನ್ ತಂಗೀನ ನೋಡಿದಿಯಲ್ವಾ ಅವಳನ್ನ ಮದುವೆ ಆಗ್ತೀಯಾ? ಎಂದು ನೇರವಾಗಿ ಗೆಳೆಯ ಎಂಬ ಸಲುಗೆಯಿಂದ ಕೇಳ್ತಾನೆ. ನಿತಿನ್ ಗೆ ಏನು ಹೇಳಬೇಕೆಂದು ತೋಚದೆ ಸುಮ್ಮನೆ ನಿಲ್ಲುತ್ತಾನೆ. ನಿತಿನ್ ನಿನ್ನ ಮನಸ್ಥಿತಿ ಹೇಗಿರುತ್ತೆ ಎಂದು ನನಗೆ ಗೊತ್ತು. ಪ್ಲೀಸ್ ನೀನು ನನಗಾಗಿ ಕಳೆದುಕೊಂಡ ಪ್ರೀತಿಯನ್ನು, ನನ್ನ ತಂಗಿ ಮೂಲಕ ನಿನಗೆ ನೀಡುವ ಆಸೆ ಎನಗೆ. ನನ್ನ ತಂಗಿ ಗುಣವಂತೆ, ಚತುರೆ, ಸುಂದರಿ ಕೂಡ. ನಿತಿನ್, ಅವಳಿಗೆ ನಿನಗಿಂತ ಒಳ್ಳೆ ಹುಡುಗ ಸಿಗೋದಿಲ್ಲ ಕಣೋ. ನನ್ ತಂಗೀಯೂ ಖುಷಿಯಿಂದ ಒಪ್ಪಿದಾಳೆ. ಅಪ್ಪ ಅಮ್ಮಂಗೂ ನಿ ಒಪ್ಪಿಗೆ ಆಗಿದೀಯಾ. ಪ್ಲೀಸ್ ಒಪ್ಕಳೋ…

ಸುಶಾಂತ್, ನೀನು ಇಷ್ಟೆಲ್ಲಾ ಹೇಳ್ಬೇಕಾ! ನನ್ನ ಗೆಳೆಯನಾಗಿ ನೀನು ನನ್ನ ಒಳಿತನ್ನೇ ಬಯಸ್ಥೀಯಾ ಅಂತ ಗೊತ್ತು. ಆಯ್ತು ಸುಶಾಂತ್, ನಾನು ನಿನ್ ತಂಗೀನ ಮದುವೆ ಆಗ್ತೀನಿ. ನಾವು ಗೆಳೆಯರಿಂದ, ಭಾವ ಭಾಮೈದ ಆಗ್ತೀವಿ. ನಮ್ಮ ಸ್ನೇಹವೂ ಶಾಶ್ವತವಾಗಿರುತ್ತೆ. ಸರಿ ನಾನು ನಮ್ಮನೆಯವರನ್ನೆಲ್ಲ ಕರೆದುಕೊಂಡು ನಿಮ್ಮನೇಗೆ ಬರ್ತೀನ್ ಕಣೋ. ಬಾಯ್ ಎಂದು ಹೋಗುತ್ತಾನೆ.
ಅದೇ ದಿನ ಸುಶಾಂತ್ ಮನೆಯವರನ್ನೆಲ್ಲ ಕರೆದುಕೊಂಡು ನಿತಿನ್ ಮನೆಗೆ ಹೊರಟ. ಶೃತಿಗೆ ಆಗಲೇ ವಿಷಯ ತಿಳಿಸಿದ್ದ. ಶೃತಿಗೆ ಎಲ್ಲಿಲ್ಲದ ಆನಂದ. ಖುಷಿಯ ವಿಚಾರ, ಶೃತಿ ಅಕ್ಕಗೆ ಹೇಳಿದ್ಲು. ಅಕ್ಕ ಭಾವಂಗೆ. ಭಾವ ಅವರಪ್ಪ ಅಮ್ಮಂಗೆ ಹೀಗೆ ಎಲ್ಲರಿಗೂ ವಿಷಯ ತಿಳಿದಿತ್ತು. ನಿತಿನ್ ಗೆ ಒಳ್ಳೆ ಹುಡುಗಿಯೇ ಸಿಕ್ಕಳೆಂಬ ಸಂತೋಷ ಎಲ್ಲರಿಗೂ. ಬಯಸದೇ ಬಂದ ಭಾಗ್ಯ ಎಂದುಕೊಂಡು ಎಲ್ಲರೂ ಇದರ ಬಗ್ಗೆ ಮಾತಾಡುತ್ತಿದ್ದರು. ನಿತಿನ್ ಕಂಗ್ರ್ಯಾಟ್ಸ್, ಬಹಳ ಅಂದಗಾತಿ ನಿನಗೆ ಸಿಗುತ್ತಿದ್ದಾಳೆ, ಎಂದು ಅತ್ತಿಗೆ ಅಂದರೆ, ಏನೋ ನಮಗೂ ಹೇಳದೆ ಒಪ್ಪಿಗೆ ಕೊಟ್ಟೀಯಾ ಅಂತ ಅಣ್ಣ. ಎಲ್ಲರೂ ನಗುವಿನಲೆಯಲ್ಲಿರುವಗಲೇ, ಸುಶಾಂತ, ಅವನ ತಂಗಿ, ತಂದೆ ತಾಯಿಯೊಡನೆ ಬಂದರು. ಶಾಸ್ತ್ರಕ್ಕೆ ಮಾತಾಡಿ ಸಂತೋಷದಿಂದ ಸಮ್ಮತಿ ಸೂಚಿಸಿದರು. ಎರಡೂ ಮದುವೆ ಒಟ್ಟಿಗೆ ಮಾಡೋದಾಗಿ ತೀರ್ಮಾನಿಸಿದರು. ಸುಮುಹೂರ್ತದಲ್ಲಿ ಗಟ್ಟಿಮೇಳದೊಂದಿಗೆ ಎರಡು ಜೋಡಿಗಳು ಒಂದಾದವು. ಶೃತಿ ನೀ ಮಿಡಿದರೆ ಎಲ್ಲೆಲ್ಲೂ ಹರುಷ, ಮನೆಯೇ ನಂದಗೋಕುಲ. ಜೀವನವೆಂಬುದು ನಾದಮಯ ನಾದಮಯ.

-ವರದೇಂದ್ರ.ಕೆ ಮಸ್ಕಿ


ಮುಗಿಯಿತು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x