ಶೀಗೀ ಹುಣ್ಣಿಮಿ ಮುಂದಾ | ಸೋಗಿನಾ ಚಂದ್ರಮ: ಸುಮನ್ ದೇಸಾಯಿ ಅಂಕಣ

            

ನಮ್ಮ ಪಾರಂಪರಿಕ ಪಧ್ಧತಿಗೊಳು ಮರಿಯಾಗಿ ಹೋಗಲಿಕತ್ತ ಈ ದಿನಮಾನಗಳೊಳಗ ಎಲ್ಲೋ ಒಂದ ಕಡೆ ಮಿಣುಕ ಮಿಣುಕಾಗಿ ಕಾಣಸಿಗತಾವ ಅಂದ್ರ ಅದು ಹಳ್ಳಿಗಳೊಳಗ ಮಾತ್ರ. ನಮ್ಮ ಉತ್ತರ ಕರ್ನಾಟಕದ ಹಳ್ಳಿಗೊಳೊಳಗ ಇಂಥಾ ಭಾಳಷ್ಟು ಆಚರಣೆಗಳವ. ನೆರೆಹೊರೆಯವರು ಕೂಡಿ ಭಾಳ ಸಂತೋಷದಿಂದ ಆಚರಿಸ್ತಾರ. ವಿಶೇಷತಃ ಹೆಣ್ಣು ಮಕ್ಕಳು ಆಚರಿಸೊ ಪಧ್ಧತಿಗಳೆ ಭಾಳ ಇರತಾವ. ಶಹರದೊಳಗಾದ್ರ ಹೆಣ್ಣು ಮಕ್ಕಳಿಗೆ, ಓದು, ಕಲೆ, ನೌಕರಿ, ಮಹಿಳಾ ಮಂಡಳ, ಸಮಾಜಸೇವೆ, ರಾಜಕೀಯ ಅಂತೆಲ್ಲಾ ತಮ್ಮನ್ನ ತಾವು ತೊಡಗಿಸಿಕೊಂಡಿರತಾರ. ಇನ್ನ ಮನೊರಂಜನೆಗೆ ಅಂತ ಸಿನೇಮಾ, ಪಿಕನಿಕ್, ಕಿಟಿಪಾರ್ಟಿ, ಹೋಟೆಲ್, ಶಾಪಿಂಗ್ ಅಂತೆಲ್ಲಾ ವ್ಯಸ್ತ ಇರತಾರ. ಆದ್ರ ಹಳ್ಳಿಗಳೊಳಗ ಹೆಣ್ಣು ಮಕ್ಕಳ ಜೀವನಾ ಭಾಳ ಸಿಮೀತ ಇರತದ. ಅವರಿಗೆ ಗಂಡ ಮಕ್ಕಳ ಯೋಗಕ್ಷೇಮ, ಮನಿಯೊಳಗ ಹಿರಿಯರಿದ್ದರ ಅವರ ಸೇವಾ ಮಾಡೊದು, ಮನಿ ಕೆಲಸ, ಇದೆಲ್ಲದರಿಂದ ಬಿಡುವು ಸಿಕ್ಕಾಗ ಹೊಲಾ ತ್ವಾಟಕ್ಕ ಹೋಗಿ ಕೆಲಸಕ್ಕ ಕೈಗೂಡಿಸೊದು, ಅದರೊಳಗನ ತೃಪ್ತಿ ಕಾಣೊದನ ಜೀವನ ಆಗಿರತದ. ಒಂದೊಂದ ಸಲಾ ಇವರ ಬಗ್ಗೆ ವಿಚಾರ ಮಾಡಿದ್ರ ವಿಚಿತ್ರ ಅನಿಸ್ತದ. ನಾವು ಒಂದ ವಾರ ಎಲ್ಲೂ ಹೊರಗ ಪ್ಯಾಟಿಗೆ ಹೋಗಲಿಲ್ಲಂದ್ರ ಬ್ಯಾಸರಾಗೇದ ಏನರೆ ಚೆಂಜ್ ಬೇಕು ಅಂತ ಎಷ್ಟ ಪೇಚಾಡತೇವಿ. ಆದ್ರ ಹಳ್ಳಿಯೋಳಗಿನ ಹೆಣ್ಣಮಕ್ಕಳು ಒಬ್ಬೊಬ್ಬರು ತಮ್ಮ ಜೀವಮಾನ ಪರ್ಯಂತ ತಾವು ಹುಟ್ಟಿ ಬೆಳೆದದ್ದ ಊರು ಬಿಟ್ರ ಬ್ಯಾರೆ ಇನ್ನೊಂದ ಊರ ನೋಡಿರುದಿಲ್ಲಾ. ಇಂಥಾ ಸಿಮೀತ ವಲಯದೊಳಗನ ಈ ಹಳ್ಳಿ ಹೆಣ್ಣಮಕ್ಕಳು ಕೆಲವೊಂದು ಪಾರಂಪರಿಕ ಪಧ್ಧತಿಗಳನ್ನ ಮನೆಯವರ ಜೋಡಿ ಮತ್ತ ಆಜುಬಾಜುದವರ ಜೋಡಿ ಭಾಳ ಛಂದ ಆಚರಿಸ್ತಾರ.

ನಮ್ಮ ಉತ್ತರ ಕರ್ನಾಟಕದ ಹಳ್ಳಿಗೊಳ ಕಡೆ  ಆಷಾಢ ಮಾಸದಾಗ "ಅಳ್ಳಿಕೇರಿ" ಅಂತ ಮಾಡತಾರ. ಅಂದ್ರ ಪ್ರತಿ ಮಂಗಳಾವಾರ ಒಂದೊಂದ ಥರಾ ಗುಳ್ಳವ್ವನ ಮಾಡಿಸಿ ಕೂಡಿಸಿ ಪೂಜಾ ಮಾಡೊದು. ಗುಳ್ಳವ್ವ ಅಂದ್ರ ಗೌರಿ ಅಥವಾ ಪಾರ್ವತಿಯ ರೂಪ ಅಂತ ಇಲ್ಲೆ ಎಲ್ಲಾರ ನಂಬಿಕಿ. ನಮ್ಮ ಕಡೆ ಈ ಗುಳ್ಳವ್ವನ ಮಣ್ಣು ಅಂತ ಹೊಲದಾಗ ಒಂಥರಾ ಕೆಂಪು ಮಣ್ಣ ಸಿಗತದ. ಅದನ್ನ ತಗೊಂದ ಬಂದು ಗುಳ್ಳವ್ವನ ಮಾಡತಾರ. ಮೊದಲನೆ ವಾರಾ " ಫಡಕಿನ ಗುಳ್ಳವ್ವ " ಅಂತ ಮಾಡತಾರ. ಅಂದ್ರ ಮಣ್ಣಿನಿಂದ ಸೂತ್ತುಕಡೆ ಫಡಕಿನಂಘ ಅಂದ್ರ ಒಂಥಾರಾ ಕ್ವಾಟಿ ಹಂಗ ಕಟ್ಟಿ ನಡುವ ಗುಳ್ಳವ್ವನ್ನ ಗೊಂಬಿ ಮಾಡಿ ಕೂಡಸತಾರ. ಎರಡನೆ ವಾರ  " ಕಟ್ಟಿ ಗುಳ್ಳವ್ವ" ಅಂದ್ರ ಐದು ಮೆಟ್ಟಲಧಂಗ ಮಾಡಿ ಕಟ್ಟಿ ಕಟ್ಟಿ ಅದರ ಮ್ಯಾಲೆ ಗುಳ್ಳವ್ವನ್ನ ಕೂಡಿಸಿರತಾರ. ಮೂರನೆವಾರ "ನವಿಲಿನ ಗುಳ್ಳವ್ವ" ಅಂದ್ರ ಮಣ್ಣಿಲೆ ನವಿಲು  ಮಾಡಿ ಅದರ ಮ್ಯಾಲೆ ಗುಳ್ಳವ್ವನ್ನ ಕೂಡಸತಾರ. ಇನ್ನ ನಾಲ್ಕನೇಯ ವಾರ ವಿಶೇಷ ಅಂದ್ರ "ತಿಗರಿ ಗುಳ್ಳವ್ವ" ಅಂದ್ರ ಮನ್ಯಾಗ ಮಾಡುದಿಲ್ಲಾ, ಎಲ್ಲಾರು ಕೂಡೆ ಕುಂಬಾರ ಮನಿತನಕಾ ಹಾಡು ಹಾಡಕೋತ ಹೋಗಿ ಕುಂಬಾರ ಕಡೆಯಿಂದ ಮಾಡಿಸಿಕೊಂಡ ಬರತಾರ. ಕುಂಬಾರ ಚಕ್ರ ತಿರಗಬೆಕಾದ್ರ ಹೆಂಗ ಮುರಗಿ ಮುರಗಿ ಗೋಪರಾ ಏಳತದಲ್ಲಾ ಅದನ್ನ ಗೌರಿ ಅಂತ ತಗೊಂಡ ಬಂದ ಕೂಡಸತಾರ. ಹಿಂಗ ಕೂಡಿಸಿದ ಗುಳ್ಳವ್ವನ್ನ " ಗುಲಗಂಜಿ ಮತ್ತ ಉತ್ತರಾಣಿ ಕಡ್ಡಿ, ಹೊನ್ನಂಬರಿ ಹೂವು, ಮತ್ತ ಅವರಿ ಹೂವು" ಗಳನ್ನ ಗುಳ್ಳವ್ವಗ ಎರಿಸಿ ಪೂಜಾ ಮಾಡತಾರ. " ಜವಿಗೋಧಿ ತೆನಿ, ಕುಶಬಿ ತೆನಿ ,ಜ್ವಾಳದ ಕಾಳನ್ನ  ಗುಳ್ಳವ್ವನ ಫಡಕು ಅಥವಾ ಕಟ್ಟಿಗೆ ಚುಚ್ಚಿ ಅಲಂಕಾರ ಮಾಡಿರತಾರ. ಮನಿಯೋಳಗ ಮಾಡಿದ್ದ ಸಿಹಿ ಅಡಗಿ ನೈವೇದ್ಯ ಮಾಡತಾರ. ಗುಳ್ಳವ್ವನ ಮುಂದ ಮಣ್ಣಿಲೆನ ಕ್ವಾಣದ ಗೊಂಬಿ ಮಾಡಿಟ್ಟಿರತಾರ. ಅದನ್ನ ಗಂಡ ಹುಡುಗುರ ಕಡೆ ಕಡಸತಾರ ಅಂದ್ರ ಗೊಂಬಿ ಮುರಿಸತಾರ. 

ಹಿಂಗ ಮಂಗಳವಾರ ಗುಳ್ಳವ್ವನ್ನ ಪೂಜಾ ಮಾಡಿ ಮರುದಿನಾ ಬುಧವಾರ ಎಲ್ಲ ಥರದ್ದ ಅಡಿಗಿ ಅಂದ್ರ " ಜ್ವಾಳದ ಭಕ್ರಿ( ರೊಟ್ಟಿ), ಸಜ್ಜಿ ಭಕ್ರಿ, ಶೆಂಗಾ ಹೋಳಿಗಿ, ಕೆನಿ ಕೆನಿ  ಮೊಸರು, ಗುರೆಳ್ಳ ಹಿಂಡಿ, ಅಗಸಿ ಹಿಂಡಿ, ಕೆಂಪ ಚಟ್ನಿ, ಮೊಸರು ಬುತ್ತಿ. ಹಿಂಗ ಎಲ್ಲಾ ಅಡಗಿ ಕಟಗೊಂಡ ಎಲ್ಲಾರು ಕೂಡೆ ಹೊಲಕ್ಕರ ಇಲ್ಲಾ ಯಾವದರ ತ್ವಾಟಕ್ಕರ "ಅಳ್ಳಿಕೇರಿ" ಅಂತ ಹೋಗಿ ಊಟಾ ಮಾಡಿ , ಸಂಜಿ ತನಕಾ ನಕ್ಕು ನಲಿದು ಆಟಾ ಆಡಿ ಮನಿಗೆ ಬರತಾರ. ಹಳ್ಳಿ ಮಂದಿಗೆ ವಿಶೇಷತಃ ಹೆಣ್ಣು ಮಕ್ಕಳಿಗೆ ಇಂಥಾ ಆಚರಣೆಗಳನ ಮನರಂಜನೆಯ ಸಾಧನಗಳಾಗಿರತಾವ. ತಮ್ಮ ಅವಿರತ ದುಡಿಮೆಯ ನಡುವ ಜೀವನದ ಜೊಂಜಾಟಗಳನ್ನ, ನೋವು ನಿರಾಸೆಗಳನ್ನ, ಮರೆತು ಎಲ್ಲರ ಜೋಡಿ ಖುಷಿಯಿಂದ ಇಂಥಾ ಆಚರಣೆಗಳನ್ನ ಆಚರಿಸಿ ತಮ್ಮ ಮುಂದಿನ ದಿನಗಳನ್ನ ಉತ್ಸಾಹಮಯವನ್ನಾಗಿ ಮಾಡಿಕೊಳ್ಳತಾರ. ಮತ್ತ ಹಳ್ಳಿ ಕಡೆ ಶಾಲೆಗಳೊಳಗ ಮಕ್ಕಳನ ಪ್ರತಿ ವಾರ ಊಟಾ ಅಥವಾ ನಾಷ್ಟಾ ಕಟ್ಟಿಕೊಂಡು ಅಳ್ಳಿಕೇರಿಗಂತ ಸಮೀಪದ ತೋಟಗೊಳಿಗೆ ಅಥವಾ ಗುಡಿಗೆ ಕರಕೊಂಡ ಹೋಗತಾರ. ಮಕ್ಕಳು ಸಂಜಿ ತನಕಾ ತಮ್ಮ ಸಹಪಾಠಿಗೊಳ ಜೊತಿಗೆ ಆಟಾ ಆಡಿ, ತಾವು ತಂದಿದ್ದನ್ನ ಒಬ್ಬರಿಗೊಬ್ಬರು ಹಂಚಿ ತಿಂದು ನಕ್ಕು ನಲಿದು ಬರತಾರ. ಇದರಿಂದ ಮಕ್ಕಳಿಗೆ ಸಹಜೀವನ, ಪರಸ್ಪರ ಸಹಕರಿಸಿಕೊಂಡು ಜೀವನ ಮಾಡುವಲ್ಲೆ ಉಪಯೋಗವಾಗತದ.

ಇದಾದ ಮ್ಯಾಲೆ ಶ್ರಾವಣದ ಪಂಚಮಿ, ಭಾದ್ರಪದದ ಗಣೇಶನ, ಮತ್ತ ಮಹಾ ನವಮಿ ದಸರಾದ ಸಂಭ್ರಮ ಮುಗದಮ್ಯಾಲೆ ಬರೊ ಶೀಗೀ ಹುಣ್ಣಿಮಿ ಸಂಭ್ರಮ ಇನ್ನು ಜೋರಾಗಿರತದ. ನಮ್ಮ ಕಡೆ ಹೋಲದಾಗ ಚರಗಾ ಚೆಲ್ಲೊದ ಅಂತ ಮಾಡತಾರ. ಹುಣ್ಣಿವಿ ದಿನಾ ಚರಗಾ ಚಲ್ಲಲಿಕ್ಕೆ ಹೋಗೊ ಅಡಗಿಯ ತಯಾರಿ ಹಿಂದಿನ ದಿನಾ ರಾತ್ರಿಬೆಳತನಕಾ ಮಾಡತಾರ. ಸಜ್ಜಿರೊಟ್ಟಿ, ಚವಳಿಕಾಯಿ ಪಲ್ಯಾ, ಸಜ್ಜಿ ಕಡಬು, ಗೊಧಿ ಹುಗ್ಗಿ, ಹೋಳಿಗಿ ಹಿಂಗ ಥಂಡಾ ಥಂಡದ ಅಡಗಿ ಮಾಡಿ ಕಟಗೊಂಡ ಹೋಲಕ್ಕ ಹೋಗಿ ಬನ್ನಿಗಿಡದ್ದ ಕೆಳಗ ಐದು ಕಲ್ಲ ಇಟ್ಟು ಪಾಂಡವರ ಪೂಜಾ ಮಾಡಿ ಮಾಡಿದ್ದ ಅಡಗಿ ಎಲ್ಲ ನೈವೇದ್ಯ ಮಾಡಿ, ಹೊಲಾದಾಗ ನಾಲ್ಕು ದಿಕ್ಕಿಗೆ ಸಿಹಿ ಅಡಿಗಿ ಪ್ರಸಾದನ ಚರಗಾ ಚೆಲ್ಲತಾರ. ಬಳಗದವರ, ಸ್ನೇಹಿತರ ಜೋಡಿ ಕೂಡಿ ಹೊಲದಾಗ ಊಟಾ ಮಾಡಿ ಸಂಜಿಕೆ ಮನಿಗೆ ಬರತಾರ.  ಎಲ್ಲಾರ ಮನ್ಯಾಗನು ಶೀಗಿ ಗೌರವ್ವನ್ನ ಕೂಡಸತಾರ. ಮತ್ತ  ದೈವದವತಿಯಿಂದ ಸಾಮೂಹಿಕವಾಗಿ ಓಣಿಯೊಳಗ ಗೌರಿಕಟ್ಟಿ ಮ್ಯಾಲೆ ಶೀಗೀ ಗೌರವ್ವನ್ನ ಕೂಡಿಸಿರತಾರ. ಸಂಜಿಮುಂದ ಗೌರವ್ವನ್ನ ಪೂಜಾ ಮಾಡಿ ಸಕ್ಕರಿಯ ಬಣ್ಣ ಬಣ್ಣದ ಸಕ್ಕರಿ ಅಚ್ಚುಗಳನ್ನ(ಗೊಂಬೆಗಳನ್ನ) ಆರತಿ ತಟ್ಟಿಯೋಳಗ ಇಟ್ಟು ಮನಿ ಮನಿಗೆ ಸಕ್ಕರಿ ಆರತಿ ತಗೊಂಡ ಹೋಗಿ ಗೌರಿಗೆ ಆರತಿ ಮಾಡಿ ಬರತಾರ. ಗಂಡು ಹುಡುಗುರೆಲ್ಲಾ ಜ್ವಾಳದ ದಂಟಿಗೆ ಅರವಿ ಸುತ್ತಿ ಎಣ್ಣೆಯೊಳಗೆ ಎದ್ದಿ, ಊರಿ ಹಚ್ಚಿ ಪಂಜು ಆಡತಿರತಾರ. ಮತ್ತ ಗೌರಿ ಕಟ್ಟಿ ಕಡೆ ಅಡಗಿಕೊಂಡ ನಿಂತು ಆರತಿ ಮಾಡಲಿಕ್ಕೆ ಬರೊ ಹೆಣ್ಣು ಮಕಳಿಗೆಲ್ಲಾ ಪಂಜು ತೋರಿಸಿ ಹೆದರಿಸಿ ಸಕ್ಕರಿ ಆರತಿ ಕೊಡ್ರಿ ಅಂತ ಕಾಡತಿರತಾರ. ಈ ಶೀಗೀ ಹುಣ್ನಿಮಿ ಮತ್ತ ಗೌರಿ ಹುಣ್ಣಿಮಿ ಮುಂದ ಹೊಸದಾಗಿ ಮದುವೆ ನಿಶ್ಚಯವಾಗಿದ್ದ ಹೆಣ್ಣುಮಕ್ಕಳಿಗೆ ಅತ್ತಿ ಮನಿಯಿಂದ ಹೊಸಾ ಸೀರಿ, ಹೂವು ,ಹಣ್ಣು ಊಡಿ, ಕೇಜಿಗಟ್ಟಲೆ ಸಕ್ಕರಿ ಅಚ್ಚಿನ ಆರತಿ ತಗೊಂಡು ಬಂದು ತಮ್ಮ ಮನಿ ಸೊಸಿ ಆಗೊವಾಕಿಗೆ ಊಡಿ ತುಂಬೊ ಮೂಲಕ ತಮ್ಮ ಪ್ರೀತಿ ಅಕ್ಕರೆ ತೊರಸತಾರ.

ಈ ಶೀಗಿ ಹುಣ್ಣಿಮಿ, ಗೌರಿ ಹುಣ್ಣಿಮಿ ಮುಂದಿನ ಬೆಳದಿಂಗಳು ಭಾಳ ಛಂದ ಇರತದ. ಒಬ್ಬರ ಮಾರಿ ಇನ್ನೊಬ್ಬರಿಗೆ ಕಾಣೊಅಷ್ಟು ಪ್ರಖರ ಬೆಳಕಿರತದ. ತುಂಬಿದ ಬೆಳದಿಂದಳು ಚುಮು ಚುಮು ಥಂಡಿಯ ಸೂಸು ಗಾಳಿಯ ಮಾಗಿಯ ದಿನಗೊಳು ಕಾಲಿಡೊ ಸೂಚನೆ ಶೂರುವಾಗಿರೊ ಹುಣ್ಣಿಮೆಯ ದಿನಗಳೊಳಗ ವಾತಾವರಣ ಒಂಥರಾ ಮನಸ್ಸಿಗೆ ಮುದ ಕೊಡತಿರತದ. ಒಂಥರಾ ಮಾದಕತೆ ಆ ಬೆಳದಿಂಗಳ ರಾತ್ರಿಗಳೊಳಗಿರತದ. ಇದನ್ನೆಲ್ಲಾ ನೋಡತಿದ್ರ ಶ್ರೀ. ದ.ರಾ. ಬೇಂದ್ರೆಯವರ ಹಾಡು ನೆನಪಾಗತದ ……

ಶೀಗೀ ಹುಣ್ಣಿಮಿ ಮುಂದ | ಸೋಗಿನ ಚಂದ್ರಮ|

ಸಾಗಿ ಬರವೊಲು| ಬರುವ ಬಳಿಯಾಕೆ ||

ಹೊನ್ನ ಸೇವಂತಿಗೆಯ | ಹೇರಳು ಬಂಗಾರದ|  

ಬೆಳ್ಳಿ ಸೇವಂತಿಗೆಯ   | ಬಳಿಯಾಕೆ..||

ಮುಗಿಲಲ್ಲಾಡುವ | ಬಾನಿಲಿ ಮಲ್ಲಿಗಿ|              

ಕಿವಿಗೊಪ್ಪ ಓಲೆಗೊಪ್ಪ| ಚಳತುಂಬ||

ಹೊಳೆಹುಂಡದುಸಿರೆನ್ನ | ನಯವಾಗಿಸಿಯ್ದಂಥ|

ಮಂಜಿನ ಮೇಲ್ಸರಗು ಮೈತುಂಬ ||

ಹೊಂಗಡಲು ಹೊಯ್ದಾಡಿ | ದೊಲುನೆಲ್ಲು ತಲೆದೂಗಿ|

ಅದರಲ್ಲಿ ಬಾ ಸುಮ್ಮನಿಸಾಡಿ||

ತೆನೆ ಹಾಲು ದಕ್ಕಲಿ | ಕಕ್ಕಿಸ ಬೇಡದವನು|

ನಿನ್ನನಯನ ಸೆರಗ ಬಿಸಾಡಿ||

ಕಣ್ಣಿಗೆ ಕಾಳಾದೆ | ತುಟಿ ಮುಟ್ಟಿ ಮೈ ಮುಟ್ಟಿ|

ಮೆಲ್ಲನೆ ಮುಸುಕಿಗೆ ಹೋಗುವಾಕಿ||

ಅಡಿಗೊಮ್ಮೆ ನಡು ನಡುಗಿ | ಇರುಳ ಬೆಳದಿಂಗಳಲಿ|

ಬಿಳಿಮೋಡ ನಗುವಂತೆ  ನಗುವಾಕಿ||

ಉಸುರುಸುರಿಗೆ ಮರುಕ | ಹೆಜ್ಜೆ ಹೆಜ್ಜೆಗೆ ಬೆಡಗು| 

ಮೆಲ್ಲನೆ ಮುಂಗೈಯ ಹಿಡಿವಾಕಿ||

ಯಾವ ಜಾತಿಯ ಹೆಣ್ಣೊ ಹಾವ ಭಾವನೆ ಬೇರೆ|

ಅಪ್ಪಿದ ಅಪ್ಪುಗೆ ಬಿಡದಾಕಿ ||……..

ಶೀಗೀ ಹುಣ್ಣಿಮಿ ಮುಂದ | ಸೋಗಿನ ಚಂದ್ರಮ…

ಎಂಥಾ ಛಂದನೆಯ ಹಾಡು. ಈ ಹಾಡಿನೊಳಗಿನ ಮಧುರ ಭಾವನೆ ಬೆಳದಿಂಗಳ ರಾತ್ರಿಯ ಸೊಬಗನ್ನ ಇನ್ನು ಹೆಚ್ಚು ಮಾಡತದ. ರಾತ್ರಿ ಊಟ ಆದಮ್ಯಾಲೆ ಎಲ್ಲಾ ಹೆಣ್ಣು ಮಕ್ಕಳು ಗೌರಿ ಕಟ್ಟಿ ಕಡೆ ಸೇರಿ ಇಂಥಾ ಹಾಡುಗಳನ್ನ ಹಾಡಿ, ಕೋಲಾಟ ಆಡತಾರ. ಹೆಣ್ಣು ಮಕ್ಕಳೆ ಗಂಡಿನ ವೇಷಗಳನ್ನ ಹಾಕಿ ಇಡಿ ರಾತ್ರಿ ನಾಟಕಗಳನ್ನ ಆಡತಾರ. ಚರಗ ಚೆಲ್ಲುವ ಕಾರ್ಯಕ್ರಮದ ಸಲುವಾಗಿ ಹಿಂದಿನ ರಾತ್ರಿ ನಿದ್ದೆಗೆಟ್ಟಿದ್ದರು ಸುಧ್ಧಾ ಆ ಹಳ್ಳಿ ಹೆಣ್ಣು ಮಕ್ಕಳ ಉತ್ಸಾಹ ಎನು ಕಮ್ಮಿ ಆಗಿರಂಗಿಲ್ಲಾ. ಇಡಿ ರಾತ್ರಿ ಹಾಡು, ಕುಣಿತ, ಕೋಲಾಟ, ನಾಟಕ ಅಂಥೇಳಿ ಜಾಗರಣಿ ಮಾಡತಾರ. ತಮಗ ಸಿಕ್ಕ ಮನರಂಜನೆಯ ಈ ಅವಕಾಶವನ್ನ ತಮ್ಮ ತಮ್ಮ ಆತ್ಮೀಯರೊಂದಿಗೆ ಭಾಳ ಖುಷಿಯಿಂದ ಅನುಭವಿಸ್ತಾರ.

ಈಗೆಲ್ಲಾ ಇಂಥಾ ಆಚರಣೆಗಳು ಕಣ್ಮರಿಯಾಗಿ ಹೊಂಟಾವ. ಹಳ್ಳಿಗಳೊಳಗು ಆಧುನಿಕತೆಯ ಗಾಳಿ ಬೀಸೆದ. ರಾತ್ರಿ ಹನ್ನೊಂದರ ತನಕಾ ಟಿವ್ಹಿ ಸಿರಿಯಲ್ ಗಳ ಸೆಳೆತನ ಇರತದ. ನಾಲ್ಕು ಗ್ವಾಡಿ ನಡುವ ಕೂತು ಬಣ್ಣದ ಪೆಟ್ಟಿಗೆ ನೋಡದಕ್ಕಿಂತ ಬಯಲೊಳಗ ಬೆಳ್ದಿಂಗಳಿನ್ಯಾಗ ನಮ್ಮವರ ಜೊತಿ ಬೆರೆತು  ಖುಷಿಯಿಂದ ನಕ್ಕು ನಲಿಯೊದ್ರೊಳಗನ ಹಿತಾ ಇರತದ. ಆಧುನಿಕತೆಯ ಮಾಯಾಜಾಲ ತನ್ನ ಬಲೆ ಬಿಸಿ ಮನುಷ್ಯರನ್ನ ಏಕಾಂಗಿಯನ್ನಾಗಿ ಮಾಡಲಿಕತ್ತದ. ನಮ್ಮ ದೇಶದ ಹಳ್ಳಿಗಳೊಳಗ  " ಶೀಗಿ ಹುಣ್ಣಿಮಿ, ಗೌರಿ ಹುಣ್ಣಿಮಿ "ಅಳ್ಳಿಕೇರಿ" ಯಂಥಾ, ಮನುಷ್ಯನನ್ನ ಸಂಘಜೀವಿಯಾಗಿರಿಸುವಂಥಾ ಭಾಳಷ್ಟು ಆಚರಣೆಗಳವ. ನಮ್ಮ ಮುಂದಿನ ಪೀಳಿಗೆಯವರಿಗೆ ಪಾರಂಪರಿಕ ಆಚರಣೆಗಳ ಬಗ್ಗೆ ಅರಿವು ಮುಡಬೇಕು. ಇವೆಲ್ಲಾ ತಮ್ಮ ಅಸ್ತಿತ್ವವನ್ನ ಕಳೆದುಕೊಳ್ಳದಿರಲಿ ಅನ್ನೋದೆ ನನ್ನ ಆಶಯ.

" ಪಂಜು" ಪತ್ರಿಕೆಯ ಸಮಸ್ತ ಓದುಗರಿಗೆ ಮತ್ತ ಸಂಪಾದಕೀಯ ವರ್ಗದವರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ನವ ದುರ್ಗಿಯರು ಸಕಲರಿಗೂ ಅಖಂಡ ಯಶಸ್ಸನ್ನ ಕೊಡಲಿ……

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

ಚೆನ್ನಾಗಿದೆ ಮೇಡಮ್ ಈ ವಾರದ ಲೇಖನ…. ಹೆಸರು ಮಾತ್ರ "ಸುಮ್  ಸುಮನಾ ಅನ್ತಿದ್ರೂ ನೀವು ಬರೆಯೋದು ಸುಮ್ನಾ ಅಲ್ಲ. ಅದರಲ್ಲಿ ಉತ್ತರ ಕನ್ನಡ ಭಾಗದ ಆಚರಣೆ, ಬರಹದ ಶೈಲಿ, ಭಾಷೆಯ ಬಳಕೆ ಬಹಳ ಇಷ್ಟವಾಗುತ್ತದೆ ….

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಸೊಗಸಾಗಿದೆ….

2
0
Would love your thoughts, please comment.x
()
x