ರಜೆಯ ಮಜ…
ಬೇಸಿಗೆ ರಜೆಯಲು ಪಾಠವಂತೆ
ಯಾರಿಗೆ ಬೇಕಮ್ಮಾ ?
ಅಜ್ಜಿಯ ಮನೆಯಲಿ ಆಡಿ ನಲಿವೆ
ಊರಿಗೆ ಕಳಿಸಮ್ಮಾ..!!
ಹತ್ತು ತಿಂಗಳು ಶಾಲೆಯ ಕಾಟ
ಸಾಲದು ಏನಮ್ಮಾ ?
ಎರಡು ತಿಂಗಳು ನಮ್ಮಯ ಆಟ
ಆಡಲು ಬಿಡಿರಮ್ಮಾ..!!
ಗೆಳೆಯರ ಜೊತೆಗೆ ಜೋಕಾಲಿಯಾಟ
ಆಡುವೆ ಕಾಣಮ್ಮಾ !
ಹೊಂಗೆಯ ನೆರಳಲಿ ದುಂಬಿಯ ನಾನು
ನೋಡಿ ನಲಿವೆನಮ್ಮಾ..!!
ದನಕರುಗಳಾ ಜೊತೆ ಕಾಡು ಮೇಡನು
ಅಲೆದು ಬರುವೆನಮ್ಮಾ !
ಹಳ್ಳಿಯ ಸೊಭಗ ಪ್ರಕೃತಿ ಸವಿಯ
ಸವಿದು ಬರುವೆನಮ್ಮಾ..!!
ಅಜ್ಜಿಯ ಜೊತೆಗೆ ಪ್ಯಾಟೆಯ ನಾನು
ಸುತ್ತಿ ಬರುವೆನಮ್ಮಾ !
ಬಣ್ಣ ಬಣ್ಣದಾ ಬೊಂಬೆಯ ನಾನು
ಕೊಂಡು ತರುವೆನಮ್ಮಾ..!!
ಅಜ್ಜನ ಜೊತೆಗೆ ಜಾತ್ರೆಗೆ ನಾನು
ಹೋಗಿ ಬರುವೆನಮ್ಮಾ !
ಬೆಂಡು ಬತ್ತಾಸು ಕಡ್ಲೆಪುರಿಯನು
ಕೊಂಡು ತರುವೆನಮ್ಮಾ..!!
ರಜೆಯ ಮಜವನು ಅನುಭವಿಸಿ ನಾ
ಮರಳಿ ಬರುವೆನಮ್ಮಾ !
ಅನುಭವ ಪಾಠವ ಮರೆಯದೆ ನಾ
ಹಂಚಿಕೊಳುವೆನಮ್ಮಾ..!!
ದೇವರಾಜ್ ನಿಸರ್ಗತನಯ
ಎಲ್ಲಿರುವೆ ಎಂಟಾಣೆ
ಬಂತು ಬಂತು ರೂಪಾಯಿ
ಹೋಯ್ತು ಹೋಯ್ತು ಎಂಟಾಣೆ
ಎಂಟಾಣೆಗೊಂದು ಬಿಸ್ಕತ್ತು
ಸಿಗ್ತಾ ಇತ್ತು ಆವತ್ತು.
ಕೊಟ್ಟರೆ ಇವತ್ತು ರೂಪಾಯಿ
ಸಿಗ್ತಾ ಇಲ್ಲಾ ಬಿಸ್ಕತ್ತು.
ಲಿಂಬಿಹುಳಿ ಲಿಂಬಿಹುಳಿ
ಎಂಟಾಣೆಗೆರಡು ಲಿಂಬಿಹುಳಿ
ಕೊಡ್ತೇನಂದ್ರು ರೂಪಾಯಿ
ಕಾಣವಲ್ದು ಲಿಂಬಿಹುಳಿ
ಸಿಗ್ತಾ ಇತ್ತು ಪೇರಲ
ರೂಪಾಯಿಗೆರಡು ಪೇರಲ
ಇಂದು ಕೊಡ್ತಾರೆ ಪೇರಲ
ಹಣ್ಣಿನ ಲೆಕ್ಕ ಇಲ್ಲ. ಕೆ.ಜಿ.ಗೆ ಎಲ್ಲ
ಅಪ್ಪನ ಪ್ಯಾಂಟಿನ ಜೋಬು
ಅಮ್ಮನ ಅಡುಗೆ ಡಬ್ಬ
ಇರ್ತಾ ಇತ್ತು ಚಿಲ್ಲರೆ
ಕೊಡ್ತಾ ಇದ್ದರು ಆಗಾಗ
ಪೈಸಾ ಪೈಸಾ ಕೂಡಿಸಿ
ಕುಡಿಕೆಯಲ್ಲಿ ಹಾಕಿ
ತಗೋತಿದ್ದೆ ಕಾರು
ಮಿಂಚುತ್ತಾ ಇತ್ತು ಕಾರು
ಜಾತ್ರೆಯಲ್ಲಿ ನಂದೇ ಜೋರು.
-ನಾಗರಾಜನಾಯಕ ಡಿ.ಡೊಳ್ಳಿನ