ಒಂದರ ಅಂತ್ಯ ಇನ್ನೊಂದರ ಆರಂಭ! ಹಗಲಿನ ಅಂತ್ಯ ರಾತ್ರಿಯ ಆರಂಭ! ರಾತ್ರಿಯ ಅಂತ್ಯ ಹಗಲಿನ ಆರಂಭ! ಕಷ್ಟಗಳ ಅಂತ್ಯ ಸುಖದ ಆರಂಭ! ಸುಖದ ಅಂತ್ಯ ಕಷ್ಟದ ಆರಂಭ! ಜೀವನ ಸುಖದ ಸುಪ್ಪತ್ತಿಗೆಯಲ್ಲ, ಕಷ್ಟ ಸುಖಗಳ ಹಾಸು! ಪುರಾಣಗಳು ಘನಘೋರ ಕಷ್ಟಗಳ ಅಂತ್ಯ ಸುಖದ ಸೂಚಕ ಎಂದು ಸಾರಿವೆ! ಭಗವಂತ ಕಷ್ಟಗಳ ಮಳೆಗರೆದು ಭಕ್ತರನ್ನು ಪರೀಕ್ಷಿಸಿ ಕೊನೆಗೆ ಅಪರಿಮಿತ ಸುಖ ನೀಡುತ್ತಾನೆ ಎಂದು ಪುರಾಣಗಳಲ್ಲಿ ಕಥೆಗಳಿವೆ. ಇದಕ್ಕೆ ಸತ್ಯಹರಿಶ್ಚಂದ್ರನ ಕಥೆ ಉತ್ತಮ ಉದಾಹರಣೆಯಾಗಿದೆ. ಹೀಗೆ ಜೀವನದಲ್ಲಿ ಏಳು ಬೀಳಿಗೆ, ಬೀಳು ಏಳಿಗೆಗೆ ಆದಿ ಅಂತ್ಯಗಳಾಗುವುದು ಸಾಮಾನ್ಯ! ಅಥೆನ್ಸ್ ನಗರ ಎಲ್ಲಾ ಜ್ಞಾನಗಳಲ್ಲೂ ಕಲೆಗಾರಿಕೆಯಲ್ಲೂ ಉಚ್ಚ್ರಾಯ ಸ್ಥಿತಿಯನ್ನು ತಲುಪಿತ್ತು ತುರುಷ್ಕರು ಕಾನುಸ್ಟಂಟಿನೋಪಲನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಇಟಲಿ, ರೋಮಿಗೆ ಎಲ್ಲಾ ಸಾಹಿತಿಗಳು ಕಲಾಕಾರರು ಪಲಾಯನಮಾಡಿದರು. ಅಥೆನ್ಸ್ ಅವನತಿಯ ಹಾದಿ ಹಿಡಿಯಿತು. ಇಂದೂ ಬಹುತೇಕ ಎಲ್ಲಾ ಜ್ಞಾನ ಶಾಖೆಗಳೂ ಅಥೆನ್ಸ್ ನಲ್ಲೇ ಉದಯಿಸಿದವೆಂದು ವಿವರಿಸತೊಡಗುತ್ತೇವೆ. ಹೀಗೇ ಜೀವನದಲ್ಲಾಗಲಿ ಪ್ರಕೃತಿಯಲ್ಲಾಗಲಿ ಅತ್ಯುಚ್ಛಸ್ಥಿತಿಗೇರಿದಮೇಲೆ ಅವನತಿ ಹೊಂದುವುದು ಅವನತಿಯ ನಂತರ ಮತ್ತೆ ಉತ್ತುಂಗ ಸ್ಥಿತಿಗೇರುವುದು ನಡೆದೇ ಇರುತ್ತದೆ. ” ಆ ನಿನ್ನ ದಾಯಾದಿ, ಗುರು, ಅಜ್ಜ, ಸಂಬಂಧಿಗಳನ್ನು ನೀನು ನಾಶ ಮಾಡಲಾರೆ! ಅವರ ದೇಹವನ್ನು ಮಾತ್ರ ನಾಶ ಮಾಡಬಹುದು, ಆತ್ಮ ಅವಿನಾಶಿ! ಮಾನವ ಒಂದು ಉಡುಪು ಬಿಟ್ಟು ಇನ್ನೊಂದು ಉಡುಪು ಧರಿಸಿದಂತೆ ಅ ದೇಹದಲ್ಲಿನ ಆತ್ಮ ಆ ಹಳೆಯ ದೇಹವನ್ನು ಬಿಟ್ಟು ಇನ್ನೊಂದು ಹೊಸ ದೇಹವನ್ನು ಧರಿಸಿ ಬದುಕಿಯೇ ಇರುತ್ತದೆ! ಆದ್ದರಿಂದ ನೀನು ಅವರನ್ನು ಕೊಂದಂತೆ ಹೇಗೆ ಅಗುತ್ತದೆ? ಅವರು ಬೇರೆ ದೇಹ ಧರಿಸಿ ಬದುಕಿಯೇ ಇರುತ್ತಾರೆ. ಆದರೂ ನೀನು ಅವರನ್ನು ಇವರು ನನ್ನ ಅಜ್ಜ, ಗುರು, ದಾಯಾದಿಗಳೆಂದು ಗುರುತಿಸಲಾಗದು! ಈ ಹಿಂದೆ ಯಾವುದೋ ದೇಹದಲ್ಲಿದ್ದರು. ಯಾರೋ ಅಗಿದ್ದರು. ಇಂದು ಈ ದೇಹಧರಿಸಿ ಸಂಬಂಧಿಕರಾಗಿದ್ದಾರೆ. ಆದ್ದರಿಂದ ಅವರು ಅಜ್ಜ, ಗುರು, ದಾಯಾದಿಗಳು, ಬಂಧು – ಬಳಗ ಎಂಬ ವ್ಯಾಮೋಹ ತೊರೆದು ಶಸ್ತ್ರಧಾರಿಯಾಗಿ ಯುದ್ದ ಮಾಡು. ಜತೆಗೆ ಅದು ಕ್ಷತ್ರಿಯರ ಧರ್ಮ ಮತ್ತು ಕರ್ಮವೂ ಹೌದು ಅದನ್ನು ಪಾಲಿಸು. ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಎಂದು ಭಗವಂತ ಅರ್ಜುನನಿಗೆ ಬೋಧಿಸಿ ವ್ಯಾಮೋಹರಹಿತನನ್ನಾಗಿಸುತ್ತಾನೆ. ಇಲ್ಲಿ ಭಗವಂತ ಒಂದು ದೇಹದ ಅಂತ್ಯ ಇನ್ನೊಂದು ದೇಹದ ಹುಟ್ಟಿಗೆ ಆದಿಯಾಗುತ್ತದೆ! ಅದು ಹೊಸದಾಗಿರುತ್ತದೆ ಎಂಬ ಸತ್ಯವನ್ನು ತಿಳಿಸುತ್ತಾನೆ!
ಸಂಡೆ ಮಂಡೆ … , ಜನವರಿ ಫೆಬ್ರವರಿ … , ಸಮ್ಮರ್, ವಿಂಟರ್ … ಎಂಬ ನೀರು ಭಾರತವೆಂಬ ಬಾಟಲಿಯನ್ನು ಪ್ರವೇಷಿಸುತ್ತಿದ್ದಂತೆ ಸೋಮವಾರ ಮಂಗಳವಾರ .., ಚೈತ್ರ ವೈಶಾಖ .., ವಸಂತ, ಹೇಮಂತ … ಗಳು ದೂರ ರೆಕ್ಕೆ ಇರುವ ಪಕ್ಷಿಗಳಂತೆ ಹಾರಿಹೋಗಿವೆ! ಮದುವೆ ಮುಂಜಿ ಮುಂತಾದ ಶುಭ ಸಂದರ್ಭಗಳಲ್ಲಿ ಮಾತ್ರ ಪ್ರತ್ಯಕ್ಷವಾಗುತ್ತವೆ. ಎಲ್ಲೋ ಒಂದನೇ ಎರಡನೇ .. ತರಗತಿಯಲ್ಲಿ ಇವುಗಳ ಸಾಮ್ರಾಜ್ಯ ಇನ್ನಿಲ್ಲದೆ ವಿಸ್ತರಿಸಿದ್ದೂ ಇಂದು ಅವನತಿ ಹೊಂದಿ ಸ್ಮಾರಕಗಳಂತೆ ಹಳೆಯ ಕೃತಿಗಳಲ್ಲಿ ಅವಿತಿರುವುದು ಕಾಣುವಂತಾಗಿದೆ. ಯಾವುದು ಏನೇ ಆಗಲಿ ಯುಗಾದಿ ಮಾತ್ರ ಮರೆಯದೆ ಅಚರಿಸಲಾಗುತ್ತದೆ. ಚೈತ್ತಮಾಸದ ಆರಂಭದ ದಿನವೇ ಯುಗಾದಿ! ಯುಗ + ಆದಿ ಎಂಬ ಎರಡು ಪದಗಳು ಸೇರಿ ‘ ಯುಗಾದಿ ‘ ಯಾಗಿದೆ. ಯುಗ ಎಂದರೆ ಒಂದು ವರ್ಷ! ನೂರು ವರ್ಷ? ಒಂದು ಕಲ್ಪ … ! ಆದಿ ಎಂದರೆ ಆರಂಭ! ಯುಗಾದಿ ಎಂದರೆ ಯುಗದ ಆರಂಭ. ಒಂದು ಕಾಲದ ಅವಧಿ ಮುಗಿದು ಇನ್ನೊಂದು ಕಾಲದ ಅವಧಿ ಆರಂಭದ ದಿನ. ಅವೆಲ್ಲದರ ಜತೆಗೆ ನಾವು ಆಚರಿಸುವ ಯುಗಾದಿಯ ಬಗ್ಗೆ ಹೇಳಬೇಕೆಂದರೆ ಹಳೆಯ ವರ್ಷ ಮುಗಿದು ಹೊಸ ವರ್ಷ ಆರಂಭವಾಗುವ ದಿನ! ಭಾರತದಲ್ಲಿ ಚೈತ್ರಮಾಸದ ಆರಂಭದ ದಿನವೇ ಯುಗಾದಿ! ಅದು ಹೇಗೆ ಹಳೆ ವರುಷ ಮುಗಿದು ಹೊಸ ವರುಷ ಆರಂಭದ ದಿನ ಅಗುತ್ತದೆ?
ಭೂಮಿ ತನ್ನ ಸುತ್ತ ತಿರುಗುತ್ತಾ ಸೂರ್ಯನನ್ನು ಸುತ್ತುತ್ತದೆ ಎಂದು ತಿಳಿದಿದ್ದೇವೆ. ತನ್ನ ಸುತ್ತ ಒಂದು ಸಲ ತಿರುಗಿದರೆ ಒಂದು ದಿನವೆಂದು, ಹೀಗೆ ೩೬೫ ಸಲ ತಿರುಗಿದರೆ ಸೂರ್ಯನನ್ನು ಭೂಮಿ ಒಂದು ಸುತ್ತು ಸುತ್ತಿದಂತೆ ಆಗುತ್ತದೆ. ಅದನ್ನೇ ಒಂದು ವರುಷ ಎನ್ನುವರು. ಭೂಮಿ ತನ್ನ ಸುತ್ತ ತಿರುಗುತ್ತಾ ಸೂರ್ಯನ ಸುತ್ತ ಸುತ್ತವುದನ್ನು ನಿಲ್ಲಿಸುವುದೇ ಇಲ್ಲ. ಎಲ್ಲಿಯಾದರೂ ನಿಂತು ಮತ್ತೆ ಆರಂಭಿಸಿದ್ದರೆ ನಿಂತದ್ದು ಅಂತ್ಯ ಅಂತಲೂ ಮತ್ತೆ ತಿರುಗಲು ಆರಂಭಿಸಿದ್ದನ್ನು ಅರಂಭ ಅಂತಲೂ ಹೇಳಬಹುದಿತ್ತು. ಹಾಗೆ ಅದು ನಿಂತದ್ದೇ ಅಂತ್ಯವಾದರೆ ಮತ್ತೆ ಚಲಿಸಲು ಅರಂಭಿಸಿದ್ದನ್ನು ಆದಿ ಎಂದು ಹೇಳಬಹುದಿತ್ತು. ಹಾಗಾದಾಗಲೂ ಅಂತ್ಯವೇ ಆದಿ! ಅದಿಯೇ ಅಂತ್ಯವಾಗುತ್ತದಲ್ಲವೆ? ಹಾಗೆ ನಾವು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತೇವೆ. ಅದನ್ನು ಚಂದ್ರ ಭೂಮಿಯನ್ನು ಸುತ್ತುವುದನ್ನು ಲೆಕ್ಕಹಾಕಿ ನಿರ್ಧರಿಸಲಾಗುವುದು! ಚಂದ್ರ ಭೂಮಿಯನ್ನು ತನ್ನನ್ನು ತಿರುಗುತ್ತಾ ಭೂಮಿಯನ್ನು ಸುತ್ತುವುದನ್ನು ಎಂದೂ ನಿಲ್ಲಿಸುವುದಿಲ್ಲ! ನಿಲ್ಲಿಸಿ ಆರಂಭಿಸಿದ್ದರೆ ನಿಲ್ಲಿಸಿದ್ದು ಅಂತ್ಯ ಎಂದು ಆರಂಭಿಸಿದ್ದನ್ನು ಆದಿ ಎಂದು ಹೇಳಬಹುದಿತ್ತು! ಚಂದ್ರನಾಗಲಿ ಭೂಮಿಯಾಗಲಿ ಎಲ್ಲೂ ಎಂದೂ ತಮ್ಮ ಚಲನೆಯನ್ನು ನಿಲ್ಲಿಸದಿರುವುದರಿಂದ ಯಾವುದು ಅಂತ್ಯ ಯಾವುದು ಅರಂಭ ಎಂದು ಹೇಳುವುದುಕಷ್ಟ! ನಾವು ಯಾವುದನ್ನು ಅಂತ್ಯ ಎನ್ನುವೆವೋ ಅದೇ ಆರಂಭವವೂ ಅಗಿರುತ್ತದೆ! ಅಂತಹದರಲ್ಲಿ ಇಲ್ಲಿಂದಲೇ ಆರಂಭವೆಂದು ಹೇಳುವುದು ಕಷ್ಟ! ಭೂಮಿ ಎಲ್ಲೂ ಎಂದೂ ತನ್ನ ದೈನಂದಿನ ಚಲನೆಯನ್ನಾಗಲಿ ವಾರ್ಷಿಕ ಚಲನೆಯನ್ನಾಗಲಿ ನಿಲ್ಲಿಸದು. ಅದ್ದರಿಂದ ಯಾವುದು ಆರಂಭ ಯಾವುದು ಅಂತ್ಯ ಎಂದು ಹೇಳುವುದು ಸಾಧ್ಯವಿಲ್ಲ! ಅಂದಮೇಲೆ ಇದೇ ಯುಗಾದಿ ಎಂದು ಗುರುತಿಸುವುದು ಅಸಾಧ್ಯ! ಆದರೂ ಭಾರತದ ಕೆಲವು ರಾಜ್ಯಗಳು ಪ್ರಕೃತಿಯಲ್ಲಿನ ಗಿಡ ಮರಗಳು ಹೊಸ ರಂಗುರಂಗಿನ ಉಡುಪು ಧರಿಸಿ ಸಂಭ್ರಮಿಸುವ ಕಾಲ ಆರಂಭವಾಗುವುದನ್ನು ಹೊಸ ವರುಷವೆಂದೂ ಯುಗಾದಿ ಎಂದೂ ತೀರ್ಮಾನಿಸಿದ್ದಾರೆ. ಅದೇನೂ ಯುಗದ ಆದಿಯಲ್ಲದಿದ್ದರೂ ಅದನ್ನು ಯುಗಾದಿ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಶಿಶಿರ ವರುಷದ ಕೊನೆಯ ಋತು. ಶಿಶಿರ ಋತುವಿನ ನಂತರ ವಸಂತನ ಆಗಮನವಾಗುತ್ತದೆ. ಶಿಶಿರ ಋತು ಇಡೀ ಪ್ರಕೃತಿಯ ಅಂದಗೆಡಿಸಿ ವಿಕಾರವಾಗಿ ಕಾಣುವಂತೆ ಮಾಡಿದರೆ ವಸಂತ ಮೋಡಿಗಾರನಂತೆ ಪ್ರಕೃತಿಯ ಮೇಲೆ ತನ್ನ ಬೆರಳಾಡಿಸಿ ಮೋಡಿ ಮಾಡಿ ಸುಂದರಗೊಳಿಸಿ ಇಡೀ ಪ್ರಕೃತಿಯನ್ನೇ ಹೊಸದಾಗಿ ಕಾಣುವಂತೆ ಮಾಡುವುದರಿಂದ ಯುಗಾದಿ ಎಂದು ಕರೆದಿರುವುದು ಅರ್ಥಪೂರ್ಣ! ಅದು ಚೈತ್ರ ಎಂಬ ಮೊದಲನೆಯ ಮಾಸದ ಆರಂಭದ ದಿನವೇ ಆಗಿದೆ! ಭೂಮಿ ಓರೆಯಾಗಿ ಸೂರ್ಯನನ್ನು ಸುತ್ತುವುದರಿಂದ ಮಳೆ, ಚಳಿ, ಬೇಸಗೆ ಎಂದು ಕಾಲ ಬದಲಾವಣೆ ಅಗುತ್ತದೆ. ಈ ಬದಲಾವಣೆ ಚಕ್ರ ನಿರಂತರ. ಒಂದರ ಅಂತ್ಯ ಇನ್ನೊಂದರ ಆರಂಭ, ಇನ್ನೊಂದರ ಅಂತ್ಯ ಮತ್ತೊಂದರ ಆರಂಭ! ಯಾವುವೂ ಶಾಶ್ವತವಾಗಿ ಆರಂಭವಲ್ಲ! ಅಂತ್ಯವಲ್ಲ!
ವರುಷದಲ್ಲಿ ಎರಡು ತಿಂಗಳಿಗೆ ಒಂದು ಋತುವಿನಂತೆ ಒಟ್ಟು ಆರು ಋತುಗಳು ಚಕ್ರಗಳಂತೆ ತಿರುಗುತ್ತಿರುತ್ತವೆ. ಋತುಗಳು ಉಂಟಾಗುವುದರಿಂದನೆ ಪ್ರಕೃತಿಯಲ್ಲಿ ಅಗಾಧ ಬದಲಾವಣೆಗಳಾಗುವುದು. ಸೂರ್ಯನ ಸುತ್ತಲೂ ಭೂಮಿ ಓರೆಯಾಗಿ ಸುತ್ತುವುದರಿಂದನೇ ಋತುಗಳು ಉಂಟಾಗುವುದು. ವರುಷದಲ್ಲಿ ಅಂತ್ಯದ ಋತುವನ್ನೇ ಶಿಶಿರ ಎಂದು ಆರಂಭದ ಋತುವನ್ನೇ ವಸಂತ ಎಂದು ಕರೆದಿದ್ದೇವೆ! ಶಿಶಿರ ಚಳಿಯಿಂದ ಆರಂಭವಾಗಿ ದಿನದಿಂದ ದಿನಕ್ಕೆ ಅಪರಿಮಿತವಾಗಿ ಚಳಿಯನ್ನು ಹೆಚ್ಚಿಸುತ್ತಾ ಹೋಗುತ್ತಾನೆ. ಗಾಳಿಯೂ ಕೈ ಜೋಡಿಸುವುದರಿಂದ ಇಡೀ ಪ್ರಕೃತಿ ಶಿಶಿರದ ಪದ ಗತಿಗೆ ಸಿಲುಕಿ ಜರ್ಝರಿತವಾಗುತ್ತದೆ! ಚಳಿಯ ಧಾಳಿಗೆ ಸಿಲುಕಿ ಮಾನವ ಕುಲ ಗಡಗಡ ನಡುಗುತ ರಗ್ಗು, ಕಂಬಳಿ, ಷಟ್ಟರುಗಳಲಿ ಅವಿತುಕೊಳ್ಳುವುದು! ನೀರನು ಮಂಜುಗಡ್ಡೆಯಾಗುವಂತೆ ಪ್ರಹಾರವ ಮಾಡುವನೆಂದರೆ ಚೇತನವನದೆಷ್ಟು ಕಾಡುವ ಚಿಂತಿಸಿ! ಶಿಶಿರನಿಂದಾಗಿ ಪ್ರಕೃತಿಯ ಎಲ್ಲಾ ವಸ್ತುಗಳು ಪರಿಪರಿ ತಾಪವ ತೋರುತ ವಿರೂಪ ಹೊಂದುವುವು! ಕೈ ಪಾದ ಬಿರಿದು ರಕ್ತ ಸುರಿಸಿ ಮುಖ ಬಿರಿದು ತುಟಿ ಒಡೆದು ವಿರೂಪವಾಗುವುದು. ಮೈಯಲಿ ನವೆ, ಸುಮ್ಮನೆ ಕೆರೆತದ ಕೊಡುಗೆಯ ನೀಡುವನು. ಕೂಗಿದರೂ ಕೋಳಿ ಏಳದಂತೆ ತನ್ನ ದೇಹವ ದಪ್ಪ ಹೊದಿಕೆಯಲ್ಲಿ ಅಡಗಿಸುವನು! ಗಿಡ ಮರ ಬಳ್ಳಿ ಎಲೆಗಳು ಬಣ್ಣಗೆಟ್ಟು ವರಟಾಗಿ ಸೀಳಿ ಉದುರಿ ಬೋಳಾಗುವುವು. ಬಿರುಗಾಳಿ ಸುಂಟರಗಾಳಿ ಧೂಳನು ತರಗೆಲೆಗಳನು ಗಗನಕು ಒಯ್ದು ಬೆಂಗಾಡಿನ ಸಾಮ್ರಾಜ್ಯವ ಅಲ್ಲಿಗು ವಿಸ್ತರಿಸುವನು! ಹಸಿರಿನ ಹೆಸರಿಲ್ಲದಂತೆ ಮಾಡಿ ಬೋಳು ಬೆಂಗಾಡಾದ ಪ್ರಕೃತಿಯ ಸಾಮ್ರಾಜ್ಯ ಸೃಜಿಸಿ ಅದಕೆ ಚಕ್ರವರ್ತಿಯಾಗಿ ಎಲ್ಲೂ ಹಸಿರಿನ ಉಸಿರೆತ್ತದಂತೆ ತನ್ನ ಸಾಮ್ರಾಜ್ಯ ಸ್ಥಾಪಿಸುವ! ಸುಂಟರ ಗಾಳಿಯ ಅಸ್ತ್ರವ ಸೃಜಿಸಿ ತರಗೆಲೆ ಧೂಳ ಬಾನೆತ್ತರಕ್ಕೂ ಒಯ್ದು ಬಾನನೂ ಚಂದಗೆಡಿಸುವ, ಮನೆ ಮಠ ಮಂದಿರಗಳ ಮೇಲೆ ಧೂಳು ತರಗೆಲೆ ಹರಿದ ಕಾಗದ ಬಟ್ಟೆ ಬರೆ ಹೊಲಸ ಸುರಿಸುತ ಮಲಿನ ಮಾಡುತ ಪ್ರಕೃತಿಯ ಅಂದಗೆಡಿಸುವನು! ಹೀಗೆ ಶಿಶಿರ ಪ್ರಕೃತಿಯನ್ನು ವಿರೂಪಗೊಳಿಸಿ ಬೆತ್ತಲೆಗೊಳಿಸುತ ಬೆತ್ತಲೆ ಬೆಂಗಾಡಿನ ಲೋಕವ ಸೃಜಿಸುವನು. ಹಳೆಯ ಉಡುಪಿಗೆ ಅಂತ್ಯವನಾಡುತ ಜೀವಿಗಳು ಬೆಚ್ಚನೆ ಜಾಗವ ಹುಡುಕುತ ನೆಲವನು ಕೆದರುತ ಕುಯ್ ಕುಯ್ ಗುಟ್ಟುತ ಮತ್ತೆ ಮತ್ತೆ ಮುದುರಿ ಮುದುರಿ ಮಲಗುವಂತೆ ಮಾಡುವನು! ಚರ್ಮದ ಮೇಲೆ ಧಾಳಿಯಮಾಡಿ ಹಳೆ ಚರ್ಮಕೆ ಅಂತ್ಯವನಾಡುವನು!
ಶಿಶಿರ ಪ್ರಕೃತಿಯ ಸಂಪೂರ್ಣ ವಿರೂಪಗೊಳಿಸಿ ತನ್ನ ಕರ್ಮ ಪೂರ್ಣವಾದುದಕೆ ಸಂತುಷ್ಟನಾಗುತ್ತಿದ್ದಂತೆ ವಸಂತನ ಆಗಮನವಾಗುವುದು! ಇವನ ದರುಶನದ ಮುನ್ಸೂಚನೆ ಅರಿತ ಶಿಶಿರ ತನ್ನ ಅಟ್ಟಹಾಸ ಮೆರೆಯಲು ವಿರೂಪಗೊಳಿಸಲು ಏನೂ ಇಲ್ಲವೆಂದು ಎಲ್ಲಾ ಕುರೂಪಗೊಳಿಸಿರುವೆನೆಂದು ತಾನು ವಿರೂಪಗೊಳಿಸಿದ ಸಾಮ್ರಾಜ್ಯಕ್ಕೆ ದಕ್ಕೆಯಾದರೆ ಮತ್ತೆ ಬೆಂಗಾಡಾಗಿಸಲು ಚಳಿಯ ಅಸ್ತ್ರಧಾರಿಯಾಗಿ ದಂಡೆತ್ತಿ ಬರುವೆನೆಂದು ಹೋಗುವಾಗೊಮ್ಮೆ ಸುಂಟರ ಗಾಳಿಯ ಗೂಳಿಯ ಏರಿ ಪ್ರಕೃತಿಯ ಗಡಗಡ ನಡುಗಿಸಿ ಹೋಗುವನು! ಇಡೀ ಪ್ರಕೃತಿಯನ್ನೆಲ್ಲಾ ವಿರೂಪಗೊಳಿಸಿ ಗೊಳಿಸಿ ಧಣಿದುದಕ್ಕಾಗಿ ವಿಶ್ರಮಿಸಲು ದಶಾನನ ಸಹೋದರ ಕುಂಭಕರ್ಣನಿಗಿಂತ ತುಸು ಹೆಚ್ಚೆಂಬಂತೆ ದಶ ಮಾಸಗಳು ವಿಶ್ರಾಂತಿಯ ಪಡೆಯಲು ಗಾಢ ನಿದ್ರೆಗೆ ಜಾರುವನು!
ಶಿಶಿರ ಅತ್ತ ಗಾಢ ನಿದ್ದೆಗೆ ಜಾರುತ್ತಿದ್ದಂತೆ ಇತ್ತ ವಸಂತ ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತ ಹಸಿರು ಫಲಪುಷ್ಪ ಪರಿಮಳದ ಮಂತ್ರದಂಡವಿಡಿದು ಆಗಮಿಸುವನು! ಕಿರಿಯ ಸಹೋದರ ಮಾಡಿದ ಕುರೂಪವ ಸುರೂಪವ ಮಾಡಿ ಪ್ರಕೃತಿಯ ಕ್ಷಮೆಕೋರಲೆಂಬಂತೆ ಮಂತ್ರದಂಡವ ಗಿಡಮರಬಳ್ಳಿಗೆ ಸ್ಪರ್ಷಿಸಲು ಬೋಳು ಗಿಡ ಮರ ಬಳ್ಳಿಗಳೊಡಲಿಂದ ಕೆಂಚ ಹಸಿರಿನ ಚಿಗುರನು ಚಿಮ್ಮಿಸಲು ಎಲ್ಲ ಗಿಡಮರಬಳ್ಳಿಗು ಹಚ್ಚಹಸಿರ ಹೊಚ್ಚ ಹೊಸ ಉಡುಪ ಉಡಿಸಲು ಫಲ ಪುಷ್ಪಗಳ ಆಭರಣವ ತೊಡಿಸಲು ಚೈತ್ರಳ ಜತೆಗೆ ಮೈದೋರುವ!
ವಸಂತನ ಕಂಡು ಸಂತಸಗೊಂಡು ಕೆಂಬಣ್ಣದ ಕಿರು ನಗೆ ನಕ್ಕು, ಹಸಿರನು ಉಟ್ಟು ಬಗೆಬಗೆ ಬಣ್ಣದ ಹೂಗಳ ಮುಡಿದು ಫಲಗಳ ಹೊತ್ತು ಸೌಗಂಧದ ಪರಿಮಳ ಪಸರಿಸುತ, ಕೊನೆಯುತ, ತೊನೆಯುತ, ಫಲ್ಲವಿಸುತ, ಪ್ರಕೃತಿ ಮದುವಣಗಿತ್ತಿಯಂತೆ ಸಂಭ್ರಮಿಸುವುದು. ದುಂಬಿಯ ಕರೆದು ಮಧು ಹೀರಿ ಝೇಂಕರಿಸೆನ್ನುತ, ಚಿಟ್ಟೆಗಳಾಕರ್ಷಿಸುತ ಹೂವಲಿ ಕೂತು ರಂಗನು ಹೆಚ್ಚಿಸು ಎನ್ನುತ, ಬೋರಾದ ಜಗ ಸಂತಸಗೊಳ್ಳಲು ಕೋಗಿಲೆಯ ಕರೆದು ಇಂಪು ದನಿಯನು ಕೊಟ್ಟು ಹಾಡಲು ಹೇಳುತ, ಜನ ಜಾನುವಾರಗಳಿಗೆ ಹೊಸ ಚರ್ಮದ ಉಡುಪನು ತೊಡಿಸುತ ತುಂಪನು ನೀಡುತ, ಸಂತಸ ತುಂಬುತ ನವಿಲಿಗೆ ನರ್ತನ ಕಲಿಸುತ ಹಿಗ್ಗುವುದು! ವಸುಂಧರೆ ಹಿಗ್ಗುವುದು! ವಸಂತನ ಕಂಡು ಹಿಗ್ಗುವುದು!
ಹಳೆ ಕೊಳೆ ತೊಳೆದು ಹೊಸ ಉಡುಗೆ ತೊಡಿಸಲು ಸಿದ್ದವಾಗಿಸುವುದು ಪವಿತ್ರ ಕಾರ್ಯವಲ್ಲವೆ? ಭಗವಂತನಿಗೆ ಬಗೆ ಬಗೆ ಅಭಿಷೇಕ ಮಾಡಿ ಬೆತ್ತಲೆಗೊಳಿಸಿದ ಮೇಲಲ್ಲವೆ ಅಲಂಕಾರ ಮಾಡುವುದು? ಬೆತ್ತಲೆಯಂತ್ಯವೆ ಅಮೂಲ್ಯ ವಸ್ತ್ರಾಭರಣ ಧಾರಣೆ! ಕುರೂಪದ ಅಂತ್ಯವೇ ಸುರೂಪದ ಆದಿ! ಶಿಶಿರದ ಅಂತ್ಯವೆ ವಸಂತದ ಆರಂಭ! ಶಿಶಿರದ ನಂತರ ವಸಂತ ಬರುವುದು ನಿರಂತರ! ಯಾವುದು ಆದಿ ಯಾವುದು ಅಂತ್ಯ? ಇರಲಿ ಬಗೆಹರಿಯದ ಅದಿ ಅಂತ್ಯಗಳ ಪುರಾಣ ಪ್ರಕೃತಿ ಹಸಿರಾಗಿ ಫಲಪುಷ್ಪ ಪರಿಮಳ ಪಸರಿಸಿ ಕಣ್ಣಿಗೌತಣ ನೀಡುವ ಮನಕೆ ಮುದ ನೀಡುವ ಸಕಲಚರಾಚರಕೂ ಹಿತದ ಭಾವವ ತುಂಬುವ ವಸಂತನ ” ವಸಂತ ಬಂದ ಋತುಗಳ ರಾಜ ತಾ ಬಂದ ” ನೆನುತ ಸಂಭ್ರಮಿಸುವ!
* ಕೆ ಟಿ ಸೋಮಶೇಖರ ಹೊಳಲ್ಕೆರೆ