ಅವನೆಂದರೆ ನಮ್ಮೊಳಗಿದ್ದೂ ನಮ್ಮಂತಾಗದ ವಿಸ್ಮಯ. ನಮ್ಮ ಟೀಕೆ, ಅಪಹಾಸ್ಯ, ಚುಚ್ಚು ಮಾತುಗಳಿಗೆ ಎಂದೂ ಪ್ರತಿಕ್ರಿಯಿಸಿದವನಲ್ಲ. ತನ್ನ ಪಾಡಿಗೆ ತಾನು, ತನ್ನ ಜಗತ್ತಿನೊಂದಿಗೆ ಮಾತ್ರ ಬೆರೆತು ತನ್ನತನ ಉಳಿಸಿಕೊಂಡ, ನಿಟ್ಟುಸಿರು ಗಳಿಸಿಕೊಂಡ ಮನುಷ್ಯ ಜೀವಿ.
ಶಿವಯ್ಯ, ಅವನಿಗೆ ಅವನದಲ್ಲದ ಜಗತ್ತು ಅರ್ಥಾಥ್ ನಾವು ಇಟ್ಟ ಹೆಸರು. ಅಪ್ಪ-ಅಮ್ಮ ಹುಟ್ಟಿದ ದಿನ, ನಕ್ಷತ್ರ, ಹಾಳುಮೂಳು ನೋಡಿ ಇಟ್ಟ ಹೆಸರು ಬೇರೆ ಇತ್ತು. ಆದರದು ದಾಖಲೆಗಳಲ್ಲಿ, ಅವನ ಸ್ವಂತದ ಜಗತ್ತಿನಲ್ಲಿ ಮಾತ್ರ ಚಾಲ್ತಿಯಲ್ಲಿತ್ತು.
ಪಲ್ಸರ್ರು, ಕರಿಷ್ಮಾ, ಝಡ್‍ಎಂಆರ್ ಬಂದ ಮೇಲೂ ಅವುಗಳ ಮೇಲೆ ಕಣ್ಣುಹಾಯಿಸದೇ ತನ್ನ ಲಡ್ಕಾಸಿ ಟಿವಿಎಸ್ ಎಕ್ಸೆಲ್ ಅನ್ನೇ ಅಚ್ಚಿಕೊಂಡಿದ್ದ. ಯಾವಾಗಲೂ ತಾನು ಬ್ಯುಸಿ ಎಂದು ಬಾಯಿ ಮಾತಿನಲ್ಲಿ ಬೂಸಿ ಬಿಡದೇ ಇದ್ದರೂ, ಅವಸರ ಅವನೊಳಗಿಳಿದ ಒಂದು ಕ್ರಿಯೆಯಾಗಿತ್ತು.
ಕಾಲೇಜು, ಲೈಬ್ರರಿ, ಮನೆ, ಸುತ್ತಾಟಕ್ಕೆಂದು ಸಿಗುವ ನೂರಾರು ರಸ್ತೆಗಳು ಅವನ ಪ್ರಪಂಚದ ರಾಯಭಾರಿಗಳಾಗಿದ್ದವು. ಆದರೆ ಎಲ್ಲೂ ಹೆಚ್ಚು ಹೊತ್ತು ನಿಲ್ಲುವ ಪೈಕಿ ಅವನಾಗಿರಲಿಲ್ಲ. ಕ್ಲಾಸ್‍ಗೆ ಕಾರಣವೇ ಇಲ್ಲದೇ ಬಂಕ್ ಮಾಡಿ, ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಅಲೆದಾಡುವುದು ಅವನ ಪಾಲಿನ ದೊಡ್ಡ ಕ್ರೇಜ್ ಇದ್ದಿರಬಹುದು. ಎಂದೂ ಬಾಯಿ ಬಿಟ್ಟು ಹೇಳಿಕೊಂಡಿರಲಿಲ್ಲ.
‘ಶಿವಯ್ಯ’ ಎಂದು ಅವನದಲ್ಲದ ಜಗತ್ತು ಅವನಿಗೆ ನಾಮಕರಣ ಮಾಡಿದ್ದರ ಹಿಂದೆ ಒಂದು ಪುಟ್ಟ ತರ್ಕ ಇತ್ತು. ‘ಸ್ವಾತಿ ಮುತ್ತು’ ಎಂಬ ಸಿನಿಮಾದಲ್ಲಿ ನಾಯಕನಿಗಿದ್ದ ಹೆಸರದು. ಆ ಶಿವಯ್ಯ ಮುಗ್ಧ, ಪೆದ್ದ ಮತ್ತು ಶುದ್ಧ ಮನಸ್ಸಿನ ಒಡೆಯ. ಇವನಿಗೂ ಆ ಪಾತ್ರಕ್ಕೂ ಯಾವನೋ ಅನಾಮಿಕ ಪುಣ್ಯಾತ್ಮ ಸಂಬಂಧ ಕಲ್ಪಿಸಿ ಮಡಗಿದ ಹೆಸರೇ ಶಿವಯ್ಯ.
ಕ್ಲಾಸಿಗೆ ಒಂದು ವೇಳೆ ಹಾಜರಾಗದೆ ಚಕ್ಕರ್ ಹೊಡೆಯುತ್ತಿದ್ದ. ಆದರೆ ಕಾಲೇಜಿನ ಲೈಬ್ರರಿಗೆ ಅವನ ದರ್ಶನ ಮಾತ್ರ ಮಿಸ್ ಆಗುತ್ತಿರಲಿಲ್ಲ. ಹಾಗಂತ ಅವನು ಪುಸ್ತಕದ ಹುಳು ಆಗಿರಲಿಲ್ಲ. ಅಷ್ಟಕ್ಕೂ ಅವನು ತನ್ನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಏನನ್ನೂ ಅಲ್ಲಿ ಓದುತ್ತಿರಲಿಲ್ಲ. ಲೈಬ್ರರಿಗೆ ತರಿಸುತ್ತಿದ್ದ ಅರ್ಧ ಡಜನ್ ಕನ್ನಡ, ಕಾಲು ಡಜನ್ ಇಂಗ್ಲಿಷ್ ಪೇಪರ್‍ಗಳ ಮೇಲೊಮ್ಮೆ ಕಣ್ಣು ಹಾಯಿಸಲು ಅವನು ತಪ್ಪದೇ ಎಂಟ್ರಿ ಕೊಡುತ್ತಿದ್ದ.
ಕ್ಲಾಸ್ ರೂಮಿನ ಜೀವವಿದ್ದೂ ನಿರ್ಜೀವದ ವಸ್ತುವಂತಿದ್ದ ಕ್ಲಾಸ್‍ಮೇಟುಗಳಿಗೆ ಅವನೆಂದರೆ ಅಲರ್ಜಿ. ಅವನ ಪಕ್ಕ ಕೂರದಿರಲು ಸರ್ಕಸ್ ನಡೆಸುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಅವನ ಬಾಯಿನಿಂದ ಹೊರಡುವ ಅಸಹನೀಯ ದುರ್ವಾಸನೆ ಸಹಿಸುವ ಮೂಲಕ ಗಾಂಧಿಗಿರಿ ನಡೆಸಲು ಅಲ್ಲಿ ಯಾವ ಮುನ್ನಾಭಾಯಿಯೂ ಇರಲಿಲ್ಲ.
ಅವನು ಎಂಜಿನಿಯರಿಂಗ್ ಓದುತ್ತಿದ್ದದ್ದು ಖಂಡಿತ ಎಂಜಿನಿಯರ್ ಆಗಲೆಂದೇ. ಏನೋ ಕಾಟಾಚಾರಕ್ಕೆ ಪಾಸು ಮಾಡುವ ಅಥವಾ ಉರು ಹೊಡೆದು ನೂರಕ್ಕೆ ನೂರು ಅಂಕ ಪಡೆದು ಬೀಗುವ ಜಾಯಮಾನ ಅವನದಾಗಿರಲಿಲ್ಲ.
ಕೆಲವೊಮ್ಮೆ ತನ್ನ ಭಯಾನಕ ತರ್ಕ ಮಂಡಿಸುವ ಮೂಲಕ ಲೆಕ್ಚರರ್‍ಗಳ ಜೊತೆ ಕಿರಿಕ್ಕು ಮಾಡಿಕೊಂಡಿದ್ದೂ ಇದೆ. ಕ್ಲಾಸ್‍ರೂಮ್‍ನಲ್ಲಿ ಅಧ್ಯಾಪಕರು ಹೇಳುವ ಮಾತನ್ನು ಚಾಚೂ ತಪ್ಪದೇ ಪಾಲಿಸುವವರ ಪೈಕಿ ಅವನಾಗಿರಲಿಲ್ಲ. ತಾನಿರುವುದೇ ಸಿದ್ಧ ಮಾದರಿಗಳನ್ನು ಮೂಲೆಗೆಸೆದು ಮನ್ನುಗ್ಗಲು ಎಂದು ಭಾವಿಸಿದಂತೆ ತೋರುತ್ತಿದ್ದ. ಇದನ್ನು ಕಾರ್ಯರೂಪಕ್ಕೆ ತರಲು ಅವಕಾಶ ಸಿಕ್ಕಾಗಲೆಲ್ಲ ಮುಂದಾಗುತ್ತಿದ್ದ.
-ಎಚ್.ಕೆ.ಶರತ್