ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್



ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು.
ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು ತಲುಪಿತು. ಗೂಳೂರು ಸಹ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿನ ಗಣೇಶ ರಾಜ್ಯದಲ್ಲಿಯೇ ಪ್ರಸಿದ್ಧವಾದುದು. ಮೊದಲು ಗಣೇಶನ ದರ್ಶನ ಪಡೆದ ನಾವು ಅಲ್ಲಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಕೈದಾಳ ತಲುಪಿದೆವು.

 


ಜಕಣಾಚಾರಿಯ ಹುಟ್ಟೂರು:
ತುಮಕೂರು ಜಿಲ್ಲೆಯ ಕೈದಾಳ ಇತಿಹಾಸ ಪ್ರಸಿದ್ಧವಾದ ಸ್ಥಳವಾಗಿದೆ. ಜೊತೆಗೆ ಅಮರಶಿಲ್ಪಿ ಜಕಣಾಚಾರಿಗೆ ಜನ್ಮ ನೀಡಿದ ಪುಣ್ಯದೂರು. ಬೇಲೂರಿನಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಓರ್ವ ಯುವಕ ಬಂದು ಈ ದೇವಾಲಯದ ವಿಗ್ರಹವೊಂದರಲ್ಲಿ ಲೋಪವಿದೆ ಎಂದಾಗ ಅಲ್ಲಿದ್ದ ಶಿಲ್ಪಿ ಜಕಣಾಚಾರಿಯು ಕೋಪಗೊಂಡು ದೋಷವನ್ನು ತೋರಿಸಿದರೆ ನನ್ನ ಬಲಗೈಯನ್ನು ಕತ್ತರಿಸಿಕೊಳ್ಳುವೆನೆಂದು ಯುವಕನಿಗೆ ಸವಾಲೆಸೆಯುತ್ತಾರೆ.
ಆಗ ಯುವಕ ಹುಳಿಯನ್ನು ಹಿಡಿದು ಒಂದು ವಿಗ್ರಹದ ಹೊಟ್ಟೆಯ ಭಾಗಕ್ಕೆ ಹೊಡೆದಾಗ ಅದರಲ್ಲಿ ಒಂದು ಕಪ್ಪೆ , ಮರಳು, ನೀರು ಹೊರ ಬಂತು. ತಕ್ಷಣ ಶಿಲ್ಪಿ ಜಕಣಾಚಾರಿ ತನ್ನ ಕೈಯನ್ನು ಕತ್ತರಿಸಿಕೊಂಡರು. ಆನಂತರ ಆ ಶಿಲ್ಪಿಗೆ ಈ ಯುವಕ ತನ್ನ ಮಗ ಡಂಕಣಾಚಾರಿ ಎಂದು ತಿಳಿದಾಗ ಅಚ್ಚರಿಯಾಗಿತು.
ಕೊನೆಗೆ ಮಗನ ಜೊತೆ ತನ್ನ ಹುಟ್ಟೂರು ಕೈದಾಳಕ್ಕೆ ಬಂದು ಇಲ್ಲಿ ಇಬ್ಬರೂ ಸೇರಿ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದಾಗ ಕತ್ತರಿಸಿದ್ದ ಕೈ ಮತ್ತೆ ಬೆಳೆಯಿತು. ಆದ್ದರಿಂದ ಈ ಹಿಂದೆ ಕ್ರೀಡಾಪುರವೆಂದು ಕರೆಯುತ್ತಿದ್ದ ಈ ಊರಿಗೆ ಕೈದಾಳ ಎಂಬ ಹೆಸರು ಬಂತೆಂದು ಪ್ರತೀತಿ ಇದೆ.
ಇಲ್ಲಿನ ದೇವಾಲಯದ ಹೊರಗಡೆಯ ಮೇಲೆ ಇಬ್ಬರು ವ್ಯಕ್ತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಇದು ಆ ತಂದೆ ಮಗನ ಚಿತ್ರಗಳೆಂದು ಊರಿನ ಹಿರಿಯರು ಅನಾದಿಕಾಲದಿಂದ ಹೇಳುತ್ತಾರೆ ಎಂದು ಅರ್ಚಕರಾದ ಜಯಸಿಂಹ ಭಟ್ಟರ್ ನಮಗೆ ಮಾಹಿತಿ ನೀಡಿದರು.

ಚನ್ನಕೇಶವ ದೇವಾಲಯ:
ಕೈದಾಳದ ಚನ್ನಕೇಶವ ದೇವಾಲಯ ಕ್ರಿ.ಶ. 1150 ರಲ್ಲಿ ಸ್ಥಾಪನೆಯಾಗಿದೆ. ಹೊಯ್ಸಳರ ನರಸಿಂಹನ ಸಾಮಂತ ಗೂಳೆಬಾಚಿ ದೇವನ ಕಾಲದಲ್ಲಿ ನಿರ್ಮಾಣಗೊಂಡಿದೆ. ಹಾಗಾಗಿ ಮಹಾದ್ವಾರದ ಕಲ್ಲಿನ ಕಂಬದಲ್ಲಿ ಬಾಚಿದೇವನ ವಿಗ್ರಹ ಕೆತ್ತಲಾಗಿದೆ.
ವಿಶಾಲವಾದ ಸ್ಥಳದಲ್ಲಿರುವ ಈ ದೇವಾಲಯ ದ್ರಾವಿಢ ಶೈಲಿಯಲ್ಲಿದೆ. ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಪ್ರವೇಶದ್ವಾರಗಳಿವೆ. ನವರಂಗದಲ್ಲಿ ಕೆತ್ತನೆಯಿಂದ ಕೂಡಿರುವ ಕಂಬಗಳಿವೆ. ಗರ್ಭಗೃಹದಲ್ಲಿರುವ ಚನ್ನಕೇಶವ ವಿಗ್ರಹ ಸುಮಾರು ಐದು ಅಡಿ ಎತ್ತರವಿದ್ದು ಕುಸುರಿ ಕೆಲಸಗಳಿಂದ ಕೂಡಿದೆ. ಎಡಭಾಗಗಳಲ್ಲಿ ಶ್ರೀದೇವಿ, ಭೂದೇವಿಯರ ವಿಗ್ರಹಗಳ ಕೆತ್ತನೆಯಿದೆ. ಈ ಸುಂದರ ಮೂರ್ತಿ ಬೇಲೂರಿನ ಚನ್ನಕೇಶವನನ್ನು ಹೋಲುತ್ತದೆ.
ಪ್ರಕೃತಿ ದತ್ತವಾದ ಸೂರ್ಯನ ಕಿರಣಗಳು ಈ ವಿಗ್ರಹದ ಮೇಲೆ ಬೀಳುವಂತೆ ಪ್ರಾಂಗಣವನ್ನು ಅಂದಿನ ಕಾಲದಲ್ಲಿಯೇ ನಿರ್ಮಿಸಿರುವುದು ಇಲ್ಲಿನ ಅಚ್ಚರಿಯ ಸಂಗತಿಯಾಗಿದೆ.
ಗರ್ಭಗೃಹದ ಎದುರಿನ ಸಣ್ಣ ದೇವಾಲಯದಲ್ಲಿ ಗರುಡಮೂರ್ತಿಯ ಸುಂದರ ವಿಗ್ರಹವಿದ್ದು ಚನ್ನಕೇಶವನ ನೇರದಲ್ಲಿ ಪ್ರತಿಷ್ಟಾಪಿಸಲಾಗಿದೆ.
ಈ ದೇವಾಲಯದ ಪಕ್ಕದಲ್ಲಿಯೇ ಗಂಗಾಧರೇಶ್ವರನ ಮತ್ತೊಂದು ದೇವಾಲಯವನ್ನು ನೋಡಬಹುದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Kempegowda
Kempegowda
8 years ago

E lekhana tumba chennagide intha barahagalu deshada pravashidyamvannu uthamagolisuthade. 

By.naruganhalli kempegowda (lic)

1
0
Would love your thoughts, please comment.x
()
x