1 ಶಿಕ್ಷಣದ ಉದ್ದೇಶವಾದರು ಏನು ?
ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವಂತರು ಸಮಾಜದ ಉದ್ಧಾರಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಕ್ಕೂ ಕೈಹಾಕಿದ್ದಾರೆ.
ಉದಾಹರಣೆಗೆ, ಗೂಗಲ್‍ನಲ್ಲಿ ಬಾಂಬ್ ತಯಾರಿಸುವ ಬಗೆಯನ್ನು ಸಾವಿರಾರು ಯುಆರ್‍ಎಲ್‍ಗಳು ಮಾಹಿತಿಗಳನ್ನು ನೀಡುತ್ತಿವೆ. ಅದೇ ರೀತಿಯಾಗಿ ಗೂಗಲ್ ಸರ್ಚ್ ಇಂಜಿನ್ ಒಳ್ಳೆಯದಕ್ಕೂ ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಈ ಜಾಲತಾಣಗಳನ್ನೆಲ್ಲ ಜಾಲಾಡುವ ವರ್ಗ ಮಾತ್ರ ಶಿಕ್ಷಣವಂತರು. ಶಿಕ್ಷಣದ ಮೂಲ ಉದ್ದೇಶವು ಕೆಲವು ಸಮಾಜಘಾತುಕರ ತಲೆಗೆ ಹೊಕ್ಕಿಲ್ಲ. ಪರಿಜ್ಞಾನದ ಪಾರವೇ ಇಲ್ಲದಷ್ಟು ಸಮಾಜಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುವವರನ್ನು ಸುಶಿಕ್ಷಿತರೆನ್ನಲು ಸಾಧ್ಯವೇ ಇಲ್ಲ. ಸಮಾಜಕ್ಕೆ ಉಪಯೋಗವಾಗುವ ಹಾಗೂ ಸಂಸ್ಕøತಿಯನ್ನು ಎತ್ತಿ ಹಿಡಿಯುವವರು ನಿಜವಾದ ಸುಶಿಕ್ಷಿತರು. ನಾವು ಶಿಕ್ಷಣವಂತರಾಗಿ, ಸಮಾಜದಲ್ಲಿ ಕುಟುಂಬದೊಂದಿಗೆ ನೆಮ್ಮದಿಯಿಂದ ವಾಸವಿದ್ದರೆ, ಸಮಾಜವು ತಂತಾನೇ ಸಂತೋಷವನ್ನು ವೃದ್ಧಿಸಿಕೊಳ್ಳುತ್ತದೆ.
ಶಿಕ್ಷಣದ ಮೂಲ ಉದ್ದೇಶಗಳು.
– ಆತ್ಮವಿಶ್ವಾಸ
– ಕ್ರಿಯಾಶೀಲ ಕೊಡುಗೆ
– ಕ್ರಿಯಾಶೀಲ ಶಿಕ್ಷಣಾರ್ಥಿ
– ರಾಷ್ಟ್ರೀಯತೆ
ಆತ್ಮವಿಶ್ವಾಸ
ಕೇವಲ ನಕಾರಾತ್ಮಕ ಅಂಶಗಳೇ ತುಂಬಿರುವವರಿಗೆ, ಯೋಚಿಸುವ ಹಾಗೂ ನಡೆಯುವ ಮಗ್ಗುಲನ್ನೇ ಬದಲಾಯಿಸಿ ಸಕಾರಾತ್ಮಕವಾಗಿ ಮುಂದುವರೆಯಲು ಸಿಗುವ ದಿವ್ಯಶಕ್ತಿಯೇ ಆತ್ಮವಿಶ್ವಾಸ. ಗೆಲ್ಲಲೇಬೇಕೆಂಬ ದೃಢಸಂಕಲ್ಪವಿದ್ದಾಗ ಸೋಲುಗಳು ಎಂದಿಗೂ ನಮ್ಮ ದಾರಿಗೆ ಅಡ್ಡ ಬರುವುದಿಲ್ಲ. ಆತ್ಮವಿಶ್ವಾಸದ ಶಿಕ್ಷಣದಿಂದ ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ಕಲಿಕಾ ಪ್ರಕ್ರಿಯೆಯಲ್ಲಿ ಹಂತಹಂತವಾಗಿ ಜ್ಞಾನದ ಮಟ್ಟ ಹೆಚ್ಚುತ್ತಾ ಹೋದಂತೆ ಏನಾದರೂ ಸಾಧಿಸಬಲ್ಲೆ ಎಂಬ ಆಂತರ್ಯದಿಂದ ಮಿಡಿಯಬಲ್ಲ ಮಾತುಗಳು ಆತ್ಮವಿಶ್ವಾಸಕ್ಕೆ ಹಿಡಿದ ಕೈಗನ್ನಡಿ.
ಕ್ರಿಯಾಶೀಲ ಕೊಡುಗೆ
ಸಮಾಜದಲ್ಲಿ ನಮ್ಮ ಪಾತ್ರ ಹಾಗೂ ಜವಾಬ್ದಾರಿಗಳ ಅರಿವಿನ ಜಾಡು ಇತ್ತೀಚೆಗೆ ಜಿಡ್ಡು ಹಿಡಿದಿದೆ. ಆಧುನಿಕ ಭಯೋತ್ಪಾದಕರು ತಮ್ಮ ಆತಿಯಾದ ಆತ್ಮವಿಶ್ವಾಸದಿಂದ ಸಮಾಜಕ್ಕೆ ಕಂಟಕ ಪ್ರಾಯರಾಗಿದ್ದಾರೆ. ಸಚ್ಚಾರಿತ್ರ್ಯವಂತ ಶಿಕ್ಷಣವಂತರು, ಆತ್ಮವಿಶ್ವಾಸದಿಂದ ಸಮಾಜಕ್ಕೆ ಒಳಿತನ್ನೇ ಬಯಸುತ್ತಾರೆ. ತುಂಬಾ ಸಲ ಈ ಕ್ಲಾಸ್‍ರೂಮ್‍ಗಳು, ವೇದಿಕೆಗಳು ಪಕ್ಷಪಾತವಿಲ್ಲದ ಸತ್ಯಗಳನ್ನೇ ಮರೆಮಾಚಿಬಿಡುತ್ತವೆ. ಶಿಕ್ಷಣದ ಮೂಲ ಉದ್ದೇಶವನ್ನೇ ತಿಳಿಸುವುದಿಲ್ಲ. ಶಿಕ್ಷಣ ನೀಡುವವರಲ್ಲಿ ಹಾಗೂ ಕಲಿಯುವವರಲ್ಲಿ ದೋಷಗಳಿದ್ದಾಗ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಕ್ರಿಯಾಶೀಲ ಶಿಕ್ಷಣಾರ್ಥಿ
ಕಲಿಯಬೇಕೆಂಬ ಉತ್ಸಾಹ ಇಮ್ಮಡಿಗೊಳ್ಳುವಷ್ಟು ನಮ್ಮಷ್ಟಕ್ಕೆ ನಾವೇ ಶಿಕ್ಷಣಾರ್ಥಿಗಳಾಗುವ ಕ್ರಿಯಾಶೀಲತೆಯನ್ನು ರೂಢಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವಹಿಸುತ್ತದೆ. ಹೊಸದನ್ನೂ ಓದುವ, ತಿಳಿದುಕೊಳ್ಳುವ ತವಕವನ್ನು ಸೃಷ್ಟಿಸುವುದು ಶಿಕ್ಷಣದ ಉದ್ದೇಶವಾಗಿದೆ. ಆಳವಾದ ಅಧ್ಯಯನವು ಹಾಗೂ ಪ್ರಾಯೋಗಿಕ ಕೆಲಸಗಳು ಕ್ರಿಯಾಶೀಲ ಶಿಕ್ಷಣಾರ್ಥಿಯನ್ನಾಗಿಸುತ್ತದೆ.
ರಾಷ್ಟ್ರೀಯತೆ
ಎಷ್ಟು ಜ್ಞಾನವಿದ್ದರೇನು? ತಾಯ್ನೆಲದ ಅಭಿಮಾನವಿಲ್ಲದ ಶಿಕ್ಷಣವಂತ ಕೃತಘ್ನರನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ? ಇಂತಹ ದೇಶದ ಋಣದ ಅರಿವಿಲ್ಲದವರನ್ನು, ಹೃದಯ ಹೀನರನ್ನು ದೇಶಾಭಿಮಾನಿಗಳಾಗಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಇವತ್ತಿನ ಶಿಕ್ಷಣವಂತರ ಮನಸ್ಥಿತಿ ಹೇಗಿದೆಯೆಂದರೆ, ಅವಿದ್ಯಾವಂತರು ಊರಲ್ಲಿ ಜಾತಿ ಮತ್ತು ಪಕ್ಷದ ಪರವಾಗಿ ಕೊಡ್ಲಿ ಕುಡುಗೋಲು ತಗೊಂಡು ಹೊಡೆದಾಡುತ್ತಿದ್ದಾರೆ. ಕೆಟ್ಟದಾಗಿ ಮಾತಾಡ್ತಾರೆ. ವಿದ್ಯಾವಂತರಾದ ನಾವುಗಳು ವಾಟ್ಸಪ್ ಫೇಸ್‍ಬುಕ್ ತಗೊಂಡ ಹೊಡೆದಾಡ್ತಾ ಇದ್ದೀವಿ, ಕೆಟ್ಟದಾಗಿ ಬರೀತಿದ್ದೀವಿ.ದಿನವಿಡೀ ಕೆಟ್ಟದರ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುವ ಚರ್ಚೆಗಳಲ್ಲೇ ಮುಳುಗಿಹೋಗುತ್ತಿದ್ದೇವೆ. ಅಷ್ಟೇ ವ್ಯತ್ಯಾಸ! ಒಬ್ಬರ ಮನವ ನೋಯಿಸದೆ, ಒಬ್ಬರ ಮನೆಯ ಘಾತವ ಮಾಡದೇ, ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಮಾಡುವುದು ಶಿಕ್ಷಣದ ಉದ್ದೇಶ. ಶಿಕ್ಷಣದ ಉದ್ದೇಶ ಕೇವಲ ಕೆಲಸ ಕೊಡಿಸುವುದಲ್ಲ, ಕೆಲಸ ಗಿಟ್ಟಿಸುವಂತೆ ಮಾಡುವುದು. ಶಿಕ್ಷಣವು ಎಂದೂ ಪ್ರಮಾಣ ಮಾಡಿ ಕೆಲಸ ಕೊಡಿಸುವ ಭರವಸೆ ನೀಡಿಲ್ಲ. ಕೆಲಸವನ್ನು ಪಡೆಯಲು ಅದೊಂದು ಭರವಸೆಯ ಬೆಳಕು. ಬರೀ ಜಾಣತನವಿದ್ದರೆ ಸಾಲದು, ಜೊತೆಗೆ ಸುಗುಣಗಳು ಗೌಣವಾಗದಂತಿರಬೇಕು. ಅದು ನಿಜವಾದ ಶಿಕ್ಷಣ. ತೋಚಿದ್ದನ್ನು ಇಲ್ಲಿ ಗೀಚಿ ಬರೆದದ್ದು conclusion ಅಂತೂ ಅಲ್ಲವೇ ಅಲ್ಲ, ಇದು ನನ್ನ perception.
********
2 ಭಾರತದ ಶಿಕ್ಷಣ ವ್ಯವಸ್ಥೆ
ಭಾರತದ ಶಿಕ್ಷಣ ವ್ಯವಸ್ಥೆಯನ್ನು ವಿವಿಧ ಹಂತಗಳನ್ನಾಗಿ ವಿಭಾಗಿಸಬಹುದು. ಹೇಗೆಂದರೆ ಪೂರ್ವ ಪ್ರಾಥಮಿಕ ಹಂತ, ಪ್ರಾಥಮಿಕ ಹಂತ, ಮಾಧ್ಯಮಿಕ ಹಂತ, ಪ್ರೌಢಶಿಕ್ಷಣ, ಪದವಿ ಪೂರ್ವ ಹಂತ, ಸ್ನಾತಕ ಹಂತ, ಸ್ನಾತಕೋತ್ತರ ಹಂತ. ಭಾರತದಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣದಲ್ಲಿ NCERT(NATIONAL COUNCIL OF EDUCATIONAL RESEARCH AND TRAINING ) ಅತ್ಯುನ್ನತ ಸಂಸ್ಥೆಯು ತಾಂತ್ರಿಕ ಸಹಾಯ ಹಾಗೂ ಬೆಂಬಲವನ್ನು ಭಾರತದಲ್ಲಿನ ಹಲವಾರು ಶಾಲೆಗಳಿಗೆ ನೀಡುತ್ತದೆ. ಶಿಕ್ಷಣ ನೀತಿಗಳನ್ನು ಜಾರಿಗೆ ತರುವಾಗ ಅವುಗಳ ವಿವಿಧ ಅಂಶಗಳನ್ನು ಅವಲೋಕಿಸುತ್ತದೆ. ಭಾರತದಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆಯ ಆಳ್ವಿಕೆ ನಡೆಸುವ ವಿವಿಧ ಸಂಸ್ಥೆಗಳೆಂದರೆ.
CBSE(CENTRAL BOARD OF SECONDARY EDUCATION)
ಇದು ಎರಡು ರೀತಿಯ ಪರೀಕ್ಷೆಯನ್ನು ನಡೆಸುತ್ತದೆ
- AISSE(ALL INDIA SECONDARY SCHOOL EXAMINATION)(10TH STD)
- AISSCE(ALL INDIA SENIOR SCHOOL CERTIFICATION EXAMINATION)(12TH STD)
CISCE(COUNCIL FOR THE INDIAN SCHOOL CERTIFICATE EXAMINATION)
ಇದು 3 ರೀತಿಯ ಪರೀಕ್ಷೆ ನಡೆಸುತ್ತದೆ.
- ICSE(INDIAN CERTIFICATION OF SECONDARY EDUCATION)(10TH STD)
- ISC(INDIAN SCHOOL CERTIFICATE)(12TH STD)
- CVE(CERTIFICATE IN VACATIONAL EDUCATION)(12TH STD)
NIOS(NATIONAL INSTITUTE OF OPEN SCHOOLING)
ಇದು 2 ರೀತಿಯ ಪರೀಕ್ಷೆ ನಡೆಸುತ್ತದೆ.
- SECONDARY EDUCATION
- SENIOR SECONDARY EDUCATION
ಅಂತರಾಷ್ಟ್ರೀಯ ಶಾಲೆಗಳು ಕೆಂಬ್ರಿಡ್ಜ್ ಅಂತರಾಷ್ಟ್ರೀಯ ಪರೀಕ್ಷೆಗೆ ಒಳಪಟ್ಟಿರುತ್ತದೆ.
ಇಸ್ಲಾಮಿಕ್ ಮದರಸಾ ಶಾಲೆಗಳ ನಿಗಮವನ್ನು ಸ್ಥಳೀಯ ರಾಜ್ಯ ಸರ್ಕಾರವು ನಿಯಂತ್ರಿಸುತ್ತದೆ.ಇದಲ್ಲದೇ ಎನ್,ಯು,ಈ,ಪಿ,ಎ ಮತ್ತು ಎನ್,ಸಿ.ಟಿ.ಈ. ಶಿಕ್ಷಣ ವ್ಯವಸ್ಥೆಯ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.
10+2+3 ಮಾದರಿಯು ಭಾರತದಲ್ಲಿ ಜಾರಿಯಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವತ್ರಿಕವಾಗಿ 10+2+3 ಶಿಕ್ಷಣ ಮಾದರಿಯನ್ನು ಅನುಸರಿಸುತ್ತವೆ. ಈ ನಮೂನೆಯಲ್ಲಿ 3 ವರ್ಷದ ಪದವಿ ಶಿಕ್ಷಣ ಮತ್ತು 2 ವರ್ಷದ ಪದವಿಪೂರ್ವ ಶಿಕ್ಷಣ, ಹತ್ತು ವರ್ಷದ ಶಾಲಾ ಶಿಕ್ಷಣವನ್ನು ಈ ರೀತಿ ವಿಭಾಗಿಸಬಹುದು.
1. 5 ವರ್ಷದ ಪ್ರಾಥಮಿಕ ಶಿಕ್ಷಣ
2. 3 ವರ್ಷದ ಮಾಧ್ಯಮಿಕ ಶಿಕ್ಷಣ
3. 2 ವರ್ಷದ ಪ್ರೌಢ ಶಿಕ್ಷಣ
ಮಾತೃಭಾಷೆಯಲ್ಲೇ ಹತ್ತು ವರ್ಷದ ಶಾಲಾ ಶಿಕ್ಷಣವನ್ನು ಕೆಲವೊಂದು ರಾಜ್ಯಗಳು ಕಡ್ಡಾಯಗೊಳಿಸಿವೆ. ಆದರೆ ಅದು ವಿವಾದದಲ್ಲಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ಭಾಷಾಮಾಧ್ಯಮವನ್ನು ನಿರ್ಧರಿಸುವ ಹಕ್ಕನ್ನು ರಾಜ್ಯಗಳು ಕಸಿದುಕೊಳ್ಳಬಾರದೆಂಬ ಎಚ್ಚರಿಕೆಯನ್ನು ಎಲ್ಲ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
********
3 ಕರ್ನಾಟಕದಲ್ಲಿ ಶಿಕ್ಷಣ
ಕರ್ನಾಟಕದ ಶಿಕ್ಷಣವನ್ನು ಪ್ರಾಚೀನಕಾಲ, ಮಧ್ಯಯುಗ ಹಾಗೂ ಆಧುನಿಕ ಯುಗಗಳ ಶಿಕ್ಷಣವೆಂದು ವಿಂಗಡಿಸಬಹುದು. ಪ್ರಾಚೀನಕಾಲ ಕರ್ನಾಟಕದ ರಾಜಕೀಯ ಇತಿಹಾಸ ಶಾತವಾಹನ ಅರಸರ ಕಾಲದಿಂದ ಆರಂಭವಾಗಿದ್ದರೂ ಅದಕ್ಕಿಂತ ಮೊದಲೇ ಶಿಕ್ಷಣ ಪದ್ದತಿಯಿತ್ತೆಂದು ಭಾವಿಸಲಾಗಿದೆ. ಚಂದ್ರಗುಪ್ತ ಮೌರ್ಯ ತನ್ನ ಗುರು ಭದ್ರ ಬಾಹುವಿನೊಂದಿಗೆ ಕ್ರಿ.ಪೂ. 4ನೇ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದನೆಂದು, ಅವರೊಂದಿಗೆ ಜೈನ ಸಂಪ್ರದಾಯವೂ ಆಗಮಿಸಿತು. ಆ ಜೈನ ಧರ್ಮದ ಪ್ರಸಾರಕ್ಕಾಗಿ ಜೈನಬಸದಿಗಳು ಅಸ್ತಿತ್ವಕ್ಕೆ ಬಂದವು. ಶಿಕ್ಷಣಕ್ಕೆ ನಾಂದಿ ಹಾಡಿದವು. ಹಿಂದೂ ಧರ್ಮದಲ್ಲಿರುವ ಭಕ್ತಿ, ನಂಬಿಕೆ, ಆರಾಧನೆಗಳ ಜೊತೆಗೆ ಸುಜ್ಞಾನದ ಅವಶ್ಯಕತೆಯಿದೆಯೆಂದು ಎತ್ತಿ ಹಿಡಿದವು. ಕೆಲವು ಕಂದಾಚಾರ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಸಂಸ್ಕಾರವಂತರಾಗಲು ಸಹಾಯವಾದವು. ಇವುಗಳೆಲ್ಲ ಉದ್ದೇಶವು ಜೈನ ಧರ್ಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯು ವುದಾಗಿತ್ತು. ನಂತರದಲ್ಲಿ ಚಂದ್ರಗುಪ್ತ ಮೌರ್ಯ ಮೊಮ್ಮಗನಾದ ಅಶೋಕನು ಬೌದ್ಧ ಧರ್ಮವನ್ನು ಅವಲಂಬಿಸಿ ಕರ್ನಾಟಕದಲ್ಲಿ ಶಾಸನಗಳಿಂದ ಪ್ರಚಾರ ಮಾಡಿದನು. ಬ್ರಾಹ್ಮೀ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಈ ಶಾಸನಗಳು ರಾಯಚೂರು ಜಿಲ್ಲೆಯ ಕೊಪ್ಪಳ, ಮಸ್ಕಿ, ಬ್ರಹ್ಮಗಿರಿ, ಸಿದ್ದಾಪೂರ ಮುಂತಾದೆಡೆ ದೊರಕಿವೆ. ಇವೆಲ್ಲವುಗಳು ದೇಶೀಯ ಭಾಷೆಯ ಪ್ರಚಾರಕ್ಕೆ ನಾಂದಿಯಾದವು. ಈ ಶಾಸನಗಳನ್ನು ಅರಿಯಲು ಶಿಕ್ಷಣದ ಅವಶ್ಯಕತೆಯೆನಿಸಿತು. ಶಿಕ್ಷಣ ಸಂಸ್ಥೆಗಳು ಅಗತ್ಯವೆನಿಸಿದವು.
ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧ ಬಿಕ್ಷುಗಳು ಶಿಕ್ಷಣ ಪಡೆದು ಸಜ್ಜಾದರು. ವೈದಿಕ ಧರ್ಮದ ಶಿಕ್ಷಣವು ಒಂದು ವರ್ಗಕ್ಕೆ ಸೀಮಿತವಾಗಿತ್ತು. ಬೌದ್ಧರು ಶಿಕ್ಷಣವು ಯಾರ ಸ್ವತ್ತಲ್ಲವೆಂಬ ತತ್ವವನ್ನು ಎತ್ತಿ ಹಿಡಿದು, ಕೆಳವರ್ಗದಿಂದ ಮೇಲ್ವರ್ಗದತನಕ ಎಲ್ಲರೂ ಶಿಕ್ಷಣ ಪಡೆಯಬೇಕು, ಎಲ್ಲರಿಗೂ ಶಿಕ್ಷಣವು ಸಿಗಬೇಕೆಂಬ ದೃಷ್ಟಿಯಿಂದ ವಿಹಾರಗಳನ್ನು, ಮಠಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದರು. ರಾಜ ಮಹಾರಾಜರುಗಳು ವಿಹಾರಗಳನ್ನು, ಮಠಗಳನ್ನು ಸ್ಥಾಪಿಸಲು ಆರ್ಥಿಕವಾಗಿ ಸಹಾಯ ಮಾಡಿದರು. `ವಿದ್ಯಾದಾನಂ ಮಹಾದಾನಂ' ಎಂಬಂತೆ ಎಲ್ಲ ಸಮಾಜದ ಜನರನ್ನು ಶಿಕ್ಷಣವಂತರನ್ನಾಗಿ ಮಾಡಲು ಬೌದ್ಧಬಿಕ್ಷುಗಳು ಹಗಲಿರುಳು ಶ್ರಮಿಸಿದರು. ಕ್ರಿ.ಶ 3ನೇಯ ಶತಮಾನದ ಬನವಾಸಿಯ ಒಂದು ಶಾಸನದಂತೆ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿ ವಿದ್ಯಾದಾನಕ್ಕಾಗಿ ಒಂದು ಬೌದ್ದವಿಹಾರವನ್ನು ನಿರ್ಮಿಸಿದ್ದಳು. ಇದು ಪ್ರಪ್ರಥಮ ಬೌದ್ದ ವಿಹಾರದ ಪರಿಚಯ. ತದನಂತರದಲ್ಲಿ 2 ನೇ ಶತಮಾನದ ಎರಡನೇ ಪುಲಿಕೇಶಿಯ ಆಳ್ವಿಕೆಯ ಹೊತ್ತಿಗೆ ನೂರಕ್ಕೆ ಏರಿತ್ತು. ಅಲ್ಲಿ ನೂರಾರು ಬೌದ್ಧಬಿಕ್ಷುಗಳಿದ್ದರೆಂದು ಯುವಾನ್ ಚಾಂಗನ ವರದಿಯಿಂದ ತಿಳಿದುಬರುತ್ತದೆ. ಜನಸಾಮಾನ್ಯರೆಲ್ಲ ಶಿಕ್ಷಣವಂತರಾಗಲು ಬೌದ್ಧ ಧರ್ಮದ ಕೊಡುಗೆ ಅಪಾರವಾದುದು. ಮೌರ್ಯ ಕಾಲದಿಂದ ರಾಷ್ಟ್ರಕೂಟರ ಕಾಲದವರೆಗೆ ಅಂದರೆ, 8-9ನೇ ಶತಮಾನಗಳ ತನಕ ವೈದಿಕ ಹಾಗೂ ಜೈನ ಶಿಕ್ಷಣಗಳೊಡನೆ ಬೌದ್ಧ ಶಿಕ್ಷಣವು ಸಾಕಷ್ಟು ಪ್ರಚಲಿತದಲ್ಲಿತ್ತು. ಆದರೆ ಬಾದಾಮಿ ಚಾಲುಕ್ಯರ ಆಳ್ವಿಕೆಯ ಕೊನೆಯ ವೇಳೆಗೆ ಬೌದ್ಧ ಶಿಕ್ಷಣ ವ್ಯವಸ್ಥೆಯು ನಿಧಾನವಾಗಿ ಅವನತಿಯತ್ತ ಸಾಗಿತು. ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕೊನೆಯ ಬೌದ್ಧ ವಿಹಾರಗಳಲ್ಲಿ 1095 ರ ಸುಮಾರಿನಲ್ಲಿ ಸಂಗಮದ ಶೆಟ್ಟಿ ಧಾರವಾಡ ಜಿಲ್ಲೆಯ ಡಂಬಳದಲ್ಲಿ (ಧರ್ಮವೊಳಲ್) ಕಟ್ಟಿಸಿದ್ದು ಒಂದೆಂದು ಹೇಳುತ್ತಾರೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾಮೆಯಲ್ಲಿ 12 ನೇ ಶತಮಾನದವರೆಗೂ ಬೌದ್ಧಧರ್ಮವನ್ನು ಅಧ್ಯಯನ ವಿಷಯವನ್ನಾಗಿ ಮಾಡಿಕೊಡಲಾಗಿತ್ತು.
ಒಂದು ವರ್ಗಕ್ಕೆ ಸೀಮಿತವಾಗಿದ್ದ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ವರ್ಗದವರಿಗೂ ವಿಸ್ತರಿಸಿದ ಕೀರ್ತಿಯು ಬೌದ್ಧಧರ್ಮಕ್ಕೆ ಸಲ್ಲುತ್ತದೆ. ಉಚ್ಛ ಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ಅಗ್ರಹಾರ, ಬ್ರಹ್ಮಪುರಿಗಳಲ್ಲೂ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶವಿತ್ತು. ಅಲ್ಲಿ ಉಚ್ಚ ಶಿಕ್ಷಣದ ಪಂಡಿತರಿಗೆ ಹೆಚ್ಚು ಸಂಭಾವನೆಯು, ಪ್ರಾಥಮಿಕ ಶಿಕ್ಷಣದ ಪಂಡಿತರಿಗೆ ಕಡಿಮೆ ಸಂಭಾವನೆಯು ಬರುತ್ತಿದ್ದವೆಂದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಬೊಂಬಾಯಿ ಶಾಖೆಯ ಪತ್ರಿಕೆಯ 9 ನೇಯ ಸಂಪುಟದಲ್ಲಿ ಹೇಳಲಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರಾಭ್ಯಾಸ, ಕಾಗುಣಿತ, ಕನ್ನಡ ಭಾಷೆಯ ಓದು, ಬರಹ ಒಳಗೊಂಡಿತ್ತು. ಕಲಿಸುವ ಪದ್ಧತಿಯು ಈಗಿನಂತೆ ಇದ್ದಿರಬೇಕು. ಮಕ್ಕಳು ಬೆರಳಿನಿಂದ ಮರಳಿನ ಮೇಲೆ ಅಕ್ಷರ ಬರೆದು ಅದನ್ನು ಗಟ್ಟಿಯಾಗಿ ಪಠಿಸುತ್ತಾ ಕಲಿಯುತ್ತಿದ್ದರು. ಸಾಮೂಹಿಕವಾಗಿ ಮಗ್ಗಿಯನ್ನು ಕಂಠಪಾಠ ಮಾಡುತ್ತಿದ್ದರು. ಈಗಿನ ಅಧ್ಯಾಪಕರಂತೆಯೇ ಬೌದ್ಧ ಬಿಕ್ಷುಗಳು ವಿದ್ಯಾರ್ಥಿಗಳಿಗೆ ಕಂಠಪಾಠ ಹೇಳಿಕೊಡುತ್ತಿದ್ದರು. ಊರಿನ ದೇವಾಲಯ, ಚಾವಡಿಯಲ್ಲಿ, ಧನಿಕರ ಪಡಸಾಲೆಗಳಲ್ಲೂ ಮಕ್ಕಳಿಗೆ ಅಕ್ಷರಭ್ಯಾಸ ತರಗತಿಗಳು ನಡೆಯುತ್ತಿದ್ದಿರಬೇಕು.
ಇನ್ನೂ ಹೆಚ್ಚಿನ ಶಿಕ್ಷಣಕ್ಕಾಗಿ, ವಿಹಾರಗಳಲ್ಲದೇ ಘಟಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಹಾಗೂ ದೇಗುಲದ ವಿದ್ಯಾಲಯಗಳು ಬಳಕೆಯಾಗುತ್ತಿದ್ದವು. ಈ ಘಟಕಗಳು ಸಂಖ್ಯೆಯಲ್ಲಿ ವಿರಳವಾಗಿದ್ದರೂ ಕೂಡ ಕದಂಬರ ಕಾಲದಿಂದಲೂ ಇವುಗಳ ಉಲ್ಲೇಖವುಂಟು. ಕದಂಬ ವಂಶದ ಮೂಲ ಪುರುಷನಾದ ಮಯೂರವರ್ಮನು ಕಂಚಿಯ ಒಂದು ಘಟಕದಲ್ಲಿ ಶಿಕ್ಷಣ ಪಡೆಯಲು ಯತ್ನಿಸಿದ್ದ. ಈ ಕಂಚಿಯ ಘಟಕವು ಉತ್ತರದಲ್ಲಿದ್ದ ನಲಂದಾ ವಿಶ್ವವಿದ್ಯಾಲಯದಂತಿರಬಹುದು. ಅದು ವೇದ ಶಿಕ್ಷಣ ವ್ಯವಸ್ಥೆಯಲ್ಲಿ ಅಗ್ರಸ್ಥಾನ ಪಡೆದಿತ್ತು. ಮಹಾಜನರೆಂಬ ಸಂರಕ್ಷರ ಮಂಡಲಿ ಅದರ ಕಾರ್ಯ ನಿರ್ವಹಿಸುತ್ತಿತ್ತು. ಕರ್ನಾಟಕದ ಘಟಕಗಳಲ್ಲಿ ಪ್ರಸಿದ್ಧವಾದದ್ದು ಕಲಬುರ್ಗಿ ಬಳಿಯ ನಾಗೈಯಲ್ಲಿತ್ತು. ಅಲ್ಲಿ ಒಂದು ಆವರಣದಲ್ಲಿ 257 ವಿದ್ಯಾರ್ಥಿಗಳು, ಮತ್ತೊಂದು ಆವರಣದಲ್ಲಿ 400 ವಿದ್ಯಾರ್ಥಿಗಳೂ ಇದ್ದರು. ಅಲ್ಲಿ ವೇಳಾ ನಿಗದಿಕಾರರೂ, ಕಾವಲುಗಾರರೂ ಇದ್ದರು. 200 ಮಂದಿ ವೇದಗಳನ್ನು, 52 ಮಂದಿ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದರು. ವೇದಪಾಠಕ್ಕೆ ಮೂವರೂ, ಶಾಸ್ತ್ರಪಾಠಕ್ಕೆ ಮೂವರೂ ಪಂಡಿತರಿದ್ದರು. ಅವರು ಭಟ್ಟದರ್ಶನ, ವ್ಯಾಕರಣ ಹಾಗೂ ಪ್ರಭಾಕರಗಳನ್ನು ಬೋಧಿಸುತ್ತಿದ್ದರು. ಅಲ್ಲಿ ಒಂದು ದೊಡ್ಡ ಗ್ರಂಥಾಲಯವೂ, ಅದನ್ನು ನೋಡಿಕೊಳ್ಳಲು ಆರು ಜನ ಅಧಿಕಾರಿಗಳೂ (ಸರಸ್ವತಿ ಭಂಡಾರಿ) ಇದ್ದರು. ಆ ಘಟಕಕ್ಕೆ ಸಂಬಂಧಿಸಿದ ದೇವಾಲಯವೊಂದನ್ನು ನೋಡಿಕೊಳ್ಳುವುದಕ್ಕೂ ಅಧ್ಯಾಪಕರು ಮತ್ತು ಇತರರೆ ರಕ್ಷಣೆಗೂ ಪ್ರತ್ಯೇಕವಾಗಿ ಭೂ ಕೊಡುಗೆಯಿತ್ತು. ಹೀಗೆಯೇ ಇತರ ಕಡೆಗಳಲ್ಲೂ ಘಟಕಗಳಿದ್ದವು. ಅವುಗಳಲ್ಲಿ ಕಡ್ಡಿಯೂರ, ಕುಕ್ಕೂರ್, ಹೆಂಜೇರು (ತುಮಕೂರು ಜಿಲ್ಲೆ), ಮೊರಿಗೆರೆ, ರಾಯಬಾಗ್ – ಇವು ಮುಖ್ಯವಾದವು. ಘಟಕದಲ್ಲಿ ಶಿಕ್ಷಣವನ್ನು ಮುಗಿಸಿದವರಿಗೆ “ಘಟಕ ಸಾಹಸ" ಎಂಬ ಪದವಿ ಸಿಗುತ್ತಿತ್ತು. ಇದನ್ನು ಘನವಿದ್ವಾಂಸರಿಗೆ ಒಂದು ಗೌರವ ಪದವಿಯಾಗಿಯೂ ಕೊಡಲಾಗುತ್ತಿತ್ತು.
ಶಿವಮೊಗ್ಗದ ತಾಳಗುಂದದ ಅಗ್ರಹಾರವು ಅತ್ಯಂತ ಪ್ರಾಚೀನವಾದದ್ದು. ಇದನ್ನು ಮಯೂರ ವರ್ಮನ ಪೂರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ. ಅವನು ಉತ್ತರದ ಅಹಿಚ್ಛತ್ರ ಎಂಬ ಸ್ಥಳದಿಂದ 29 ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಅಲ್ಲಿ ನೆಲೆಸುವಂತೆ ಮಾಡಿದನು. ಅವರು ವೇದ, ವೇದಾಂಗ ಉಪಾಂಗ, ಮೀಮಾಂಸೆ, ತರ್ಕಪದ್ದತಿ, ಸ್ಮೃತಿ, ಪುರಾಣ, ನಾಟಕ ಇತ್ಯಾದಿಗಳಲ್ಲಿ ಪರಿಣತರಾಗಿದ್ದರು. (1091 ರ ಶಾಸನ) ಮೊದಲ ಕದಂಬರು ತಾಳಗುಂದದ ಸ್ಥಾಪನೆಗೆ ಹೆಸರಾಗಿದ್ದಂತೆ, ಬಾದಾಮಿ ಚಾಲುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು. 966 ಒಂದು ಆನದಂತೆ ವಾತಾಪಿ ಅಥವಾ ಬಾದಾಮಿಯ ಒಂದು ಅಧಿಷ್ಠಾನವೆಂದು ಹೆಸರಿಸಿದ್ದರೂ ಅದರ ವರ್ಣನೆಯಿಂದ ಅದೊಂದು ಅಗ್ರಹಾರವಾಗಿತ್ತೆಂಬುದು ದೃಢಪಟ್ಟಿದೆ. ಅಲ್ಲಿ ಚತುರ್ದಶಶಾಸ್ತ್ರ ವಿದ್ಯೆಗಳಲ್ಲಿ ಪರಿಣತರಿದ್ದರು. 2000 ಮಂದಿ ವಿದ್ವಾಂಸರಿದ್ದರು. ಅದು ಧಾರ್ಮಿಕ ಹಾಗೂ ವೈದಿಕ ಶಿಕ್ಷಣದ ಕೇಂದ್ರವಾಗಿತ್ತೆಂದು ಅದರ ಹೆಸರು ಸೂಚಿಸುವುದಾದರೂ ಅಲ್ಲಿ ಲೌಕಿಕ ವಿದ್ಯೆಗೂ ಪ್ರಾಶಸ್ತ್ಯವಿತ್ತು.
ಚಾಲುಕ್ಯರ ಮತ್ತೊಂದು ಅಗ್ರಹಾರ ಐಹೊಳೆಯಲ್ಲಿತ್ತು. ಸೋಮಯಾಜಿ ಎಂಬುವನು ಐಹೊಳೆಯ (ಆರ್ಯಪುರ) 500ಮಂದಿ ಚತುರ್ವೇದಿಗಳ ತಂಡಕ್ಕೆ ದತ್ತಿ ನೀಡಿರುವುದು 8-9 ನೇಯ ಶತಮಾನದ ಶಾಸನವೊಂದರಲ್ಲಿ ಉಲ್ಲೇಖವಾಗಿದೆ. ಆ ಅಗ್ರಹಾರ ಅನಂತರವೂ 2-3 ಶತಮಾನಗಳ ತನಕ ಪ್ರಸಿದ್ದಿ ಉಳಿಸಿಕೊಂಡು ಬಂತೆಂದು 1191 ರ ಶಾಸನದಿಂದ ತಿಳಿದುಬರುತ್ತಿದೆ. ರಾಷ್ಟ್ರಕೂಟರ ಕಾಲದಲ್ಲಿ ವಿಜಯಪುರ ಜಿಲ್ಲೆಯ ಸಾಲೊಟಗಿ ಒಂದು ಪ್ರಮುಖ ಅಗ್ರಹಾರವಾಗಿತ್ತು. ಇದನ್ನು ಕೆಲವು ಇತಿಹಾಸಕಾರರು, “ದೇಗುಲ ವಿದ್ಯಾಲಯ” ಎಂದೂ ಪರಿಗಣಿಸುತ್ತಾರೆ. ಇದರ ಹಿಂದಿನ ಹೆಸರು “ಪಾವಿಟ್ಟಿಗೆ" ಇದರೊಡನೆ “ಶಾಲೆ" ಏರಿ “ಸಾಲೊಟಿಗೆ" ಎಂದಾಯಿತು. 3 ನೇಯ ಕೃಷ್ಣರಾಜನ ಮುಖ್ಯಮಂತ್ರಿ ನಾರಾಯಣ ಅಲ್ಲಿ 945 ರಲ್ಲಿ ಭವ್ಯ ಮಂದಿರವೊಂದನ್ನು ಕಟ್ಟಿಸಿದನು. ಅಲ್ಲಿ ವಿವಿಧ ಭಾಗಗಳಿಂದ ಅಗಮಿಸಿದ್ದ ವಿದ್ವಾಂಸರಿದ್ದರು. ಅವರ ರಕ್ಷಣೆಗಾಗಿ ಸಾಕಷ್ಟು ಭೂಮಿಕಾಣಿಕೆಗಳನ್ನು ಒದಗಿಸಲಾಗಿತ್ತು. ಅವರ ವಾಸಕ್ಕೆ ಗೃಹವನ್ನು,ಅಗ್ರಹಾರದ ಕಾರ್ಯಕ್ರಮಗಳ ನಿರ್ವಹಣೆಗಾಗಿ ಭೂಮಿಯನ್ನು, ಕೊಡುಗೆಯಾಗಿ ಅಲ್ಲಿನ ಅಧಿಕಾರಿಗಳು ಕೊಟ್ಟರು. ಈ ದಾನಗಳ ಮೇಲೆ ತೆರಿಗೆ ಎತ್ತುತ್ತಿರಲಿಲ್ಲ. ಗ್ರಾಮಸ್ಥರು ವಿದ್ವಾಂಸರಿಗೆ ಮದುವೆ,ಮುಂಜಿ,ಚೌಲ ಮುಂತಾದ ದಿನಗಳಲ್ಲಿ ಕಾಣಿಕೆ ಕೊಟ್ಟು ಗೌರವಿಸುತ್ತಿದ್ದರು.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಗದಗಿನ ಬಳಿಯ ಉಮ್ಮಜಿಗೆಯಲ್ಲಿ ಒಂದು ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಒಂದು ಮಹಾವಿದ್ಯಾಲಯವೂ, ಛಾತ್ರಾಲಯವೂ ಇದ್ದವು. ಅಲ್ಲಿ ಅಧ್ಯಾಪಕರಿಗೆ ವಾಸದ ಮನೆಯನ್ನೂ, ಜೀವನೋಪಾಯಕ್ಕಾಗಿ ಭೂಮಿಯ ಕೊಡುಗೆಯನ್ನೂ ನೀಡಲಾಗಿತ್ತು. ಅಲ್ಲಿ ಶಿಕ್ಷಣ ನೀಡುತ್ತಿದ್ದವರು ಅಕ್ಕರಿಗರು (ಅಕ್ಷರ ಭೋಧಕ). ಇವರು ಗಣಿತ, ಖಗೋಳ ವಿe್ಞÁನ, ಛಂದಸ್ಸು ವ್ಯಾಕರಣ, ಕಾವ್ಯಶಾಸ್ತ್ರ ಮುಂತಾದವುಗಳ ರಚನಕಾರರೂ, ಬೋಧಕರೂ ಆಗಿದ್ದರು. ಇವರಿಗೆ ಬೇಕಾದ ಹಾಗೆ ಭೂಮಿಯನ್ನು ದಾನವಾಗಿ ಕೊಡಲಾಗಿತ್ತು. ಅದರಿಂದ ಬಂದ ಆದಾಯದಲ್ಲಿ ತಾವು ಜೀವಿಸುವುದಲ್ಲದೆ, ತಮ್ಮ ಶಿಷ್ಯರಿಗೆ ದಿನಕ್ಕೆ ಒಂದು ಊಟವನ್ನೂ, ವರ್ಷಕ್ಕೊಮ್ಮೆ ಬಟ್ಟೆಯನ್ನೂ ಒದಗಿಸಬೇಕಾಗಿತ್ತು.
ಈ ಅಗ್ರಹಾರಗಳ ಜೊತೆಗೆ ಇನ್ನೂ ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿದ್ದುದು ತಿಳಿದು ಬಂದಿದೆ. ಕದಂಬ ರಾಜ್ಯದ ಅರಸನಾದ ಶಿವಚಿತ್ತನ ರಾಣಿ ಕಮಲಾದೇವಿ ಬೆಳಗಾವಿ ಜಿಲ್ಲೆಯ ವಡಗಾಂವಿಯಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸಿದ್ದಳು. ಅದಕ್ಕಾಗಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿದ್ವಾಂಸರನ್ನು ಕರೆಸಿ ಅವರ ಸಂರಕ್ಷಣೆಗಾಗಿ ದತ್ತಿಯನ್ನು ಹಾಕಿಸಿಕೊಟ್ಟಳು. ಅಲ್ಲಿ ವೇದ, ವೇದಾಂಗ, ನ್ಯಾಯ, ಮೀಮಾಂಸೆ, ಸಾಂಖ್ಯ, ಯೋಗ, ವೇದಾಂತ, ಸ್ಮೃತಿ, ಇತಿಹಾಸ, ಪುರಾಣ, ಖಗೋಳಶಾಸ್ತ್ರ ಇವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಅಧ್ಯಾಪಕರ ವಿಷಯ ಪಾಂಡಿತ್ಯಕ್ಕೂ ಕಾರ್ಯ ಮಹತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು. ಹೀಗೆಯೇ ಕರ್ನಾಟಕದ ಇತರೆಡೆಗಳಲ್ಲೂ ಅಗ್ರಹಾರಗಳು ಸ್ಥಾಪನೆಯಾಗಿದ್ದವು.
ಅಗ್ರಹಾರಗಳಂತೆ ಬ್ರಹ್ಮಪುರಿಗಳೂ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಉನ್ನತ ಶಿಕ್ಷಣ ಸಂಸ್ಥೆಗಳು. ಅಗ್ರಹಾರ ಶಿಕ್ಷಣಕ್ಕಾಗಿ ಏರ್ಪಟ್ಟ ವಿಶಿಷ್ಟ ಗ್ರಾಮವಾಗಿದ್ದರೆ, ಬ್ರಹ್ಮಪುರಿ ನಗರದ ಒಂದು ಭಾಗ ಮಾತ್ರವಾಗಿತ್ತು. ಬೆಳಗಾಂವಿಯಲ್ಲಿ ಬನವಾಸಿಯ ಪ್ರಾಂತ್ಯ ಅಧಿಕಾರಿಯಾದ ಕೇಶವದೇವ ಬ್ರಹ್ಮಪುರಿಯೊಂದನ್ನು ಸ್ಥಾಪಿಸಿದ್ದ. ಅಲ್ಲಿ 38 ಮಂದಿ ಕೀರ್ತಿವೆತ್ತ ವಿದ್ವಾಂಸರಿದ್ದರು. ಅವರು ಪುರಾಣ, ಸ್ಮೃತಿ, ಭಾಷ್ಯ, ಕಾವ್ಯ, ನಾಟಕ ಇತ್ಯಾದಿ e್ಞÁನಕ್ಷೇತ್ರಗಳಲ್ಲಿ ಪಂಡಿತರೆನಿಸಿದ್ದರು. ಆಯಾ e್ಞÁನವನ್ನು ಬೋಧಿಸುತ್ತಿದ್ದರು. ಆ ನಗರದ ದಕ್ಷಿಣದ ಫಲವತ್ತಾದ ನೆಲವನ್ನು ಅವರ ವಸತಿಗೂ, ಜೀವನೋಪಾಯಕ್ಕೂ ಕೇಶವದೇವ ದಾನವಾಗಿ ಕೊಟ್ಟಿದ್ದ. ಅಲ್ಲಿ ಒಂದು ಸುಂದರವಾದ ದೇಗುಲ ಕಟ್ಟಿಸಿ, ಅದರ ಮುಂದೆ ವೀರಕೇಶವಪುರ ಎಂಬ ನಗರವನ್ನು ನಿರ್ಮಿಸಿದ್ದ. ಅನೇಕ ವಸತಿಗಳನ್ನು ಕಟ್ಟಿಸಿ ಅವುಗಳನ್ನು ಪೀಠೋಪಕರಣಾದಿಗಳಿಂದ ಸಜ್ಜುಗೊಳಿಸಿ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದ. ಅಧ್ಯಾಪಕರ ವಸತಿಗೃಹಗಳನ್ನು ಕಟ್ಟಿಸಿ ವಾಸಕ್ಕೆ ಸಜ್ಜುಗೊಳಿಸಿ ಕೊಡಲಾಗಿತ್ತು. ಬ್ರಹ್ಮಪುರಿಗಳು ಸೂಡಿ, ಅರಸೀಬೀದಿ (ವಿಕ್ರಮಪುರ), ತಲಕಾಡು ಮುಂತಾದ ಕರ್ನಾಟಕದ ಇತರ ಕೆಲವು ನಗರಗಳಲ್ಲೂ ಇದ್ದವು.
ಅಗ್ರಹಾರಗಳೂ ಬ್ರಹ್ಮಪುರಿಗಳೂ ಕರ್ನಾಟಕದ ವಿಶಿಷ್ಟ ಉನ್ನತ ಶಿಕ್ಷಣ ಕೇಂದ್ರಗಳೆನಿಸಿದ್ದರೂ ಇವು ಆ ಕಾಲದಲ್ಲಿ ಉತ್ತರ ಭಾರತದಲ್ಲಿ ಪ್ರಚಾರದಲ್ಲಿದ್ದ ಟೋಲ್ ಎಂಬ ಶಿಕ್ಷಣ ಸಂಸ್ಥೆಗಳನ್ನು ಹೋಲುತ್ತಿದ್ದುವು. ಇವನ್ನೇ ಕೆಲವು ದೇವಾಲಯದ ವಿದ್ಯಾಲಯಗಳೆಂದು ಕರೆದಿರುವರು. ದೇವಾಲಯ ವಿದ್ಯಾಲಯಗಳಲ್ಲಿ ಕೆಲವು ಪ್ರಾಥಮಿಕ ಶಿಕ್ಷಣವನ್ನು ಬೋಧಿಸುತ್ತಿದ್ದರು. ಮತೆ ಕೆಲವು ಉನ್ನತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದ್ದವು. ಹರಿಹರದ ಹರಿಹರೇಶ್ವರ ದೇವಾಲಯವೂ ತಾಳಗುಂದದ ಪ್ರಣವೇಶ್ವರ ದೇವಾಲಯವೂ ಅಂಥ ಉನ್ನತ ಶಿಕ್ಷಣ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು. ಹರಿಹರೇಶ್ವರ ದೇವಾಲಯದ ಶಿಕ್ಷಣ ಕೇಂದ್ರದಲ್ಲಿ ಋಗ್ವೇದ, ಯಜುರ್ವೇದ, ವ್ಯಾಕರಣ, ಮೀಮಾಂಸೆ ಇತ್ಯಾದಿ ವಿಷಯಗಳ ಬೋಧನೆಗೆ ಪಂಡಿತರಿದ್ದುದಲ್ಲದೆ. ಪ್ರಾಥಮಿಕ ಶಿಕ್ಷಣದ ಅಧ್ಯಾಪಕರೂ ಇದ್ದರು. ತಾಳಗುಂದದ ಪ್ರಾಣವೇಶ್ವರ ದೇವಾಲಯ ಕೇಂದ್ರದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಪದಪಾಠ, ಕಲ್ಪ, ವ್ಯಾಕರಣ, ವ್ಯಾಸ, ಪ್ರಭಾಕರ, ಕಲ್ಪವತಾರ ಮತ್ತು ವೇದಾಂತಗಳನ್ನು ಹೇಳಿಕೊಡುತ್ತಿದ್ದರಲ್ಲದೆ, ಪ್ರಾಥಮಿಕ ಶಿಕ್ಷಣಕ್ಕೂ ವ್ಯವಸ್ಥೆಗೊಳಿಸಲಾಗಿತ್ತು. ಒಬ್ಬೊಬ್ಬ ಪಂಡಿತರೂ ಎಂಟು ಮಂದಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರೆಂದು ತಿಳಿದು ಬರುತ್ತದೆ.
ಮಧ್ಯಯುಗ ಶಿಕ್ಷಣ
ಮಧ್ಯಯುಗದಲ್ಲಿ ಮುಸಲ್ಮಾನರ ಆಕ್ರಮಣದಿಂದ ಜೈನ, ಬೌದ್ದ ಹಾಗೂ ವೈದಿಕ ಶಿಕ್ಷಣ ಪದ್ದತಿಗಳು ಅವಸಾನದಂಚಿಗೆ ಇನ್ನೇನು ಬಂದವೆನ್ನುವಷ್ಟರಲ್ಲಿ ಹಿಂದೂ ರಾಷ್ಟ್ರದ ನಿರ್ಮಾಣದ ಕನಸಿಗೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯು ನನಸಾಗಿಸಿತು. ಕರ್ನಾಟಕಕ್ಕೆ ಶಿಕ್ಷಣದ ಪ್ರಾಮುಖ್ಯತೆ ಮತ್ತೆ ಒದಗಿತು. ರಾಜಕೀಯ ಕಾರಣಗಳನ್ನು ಬದಿಗೊತ್ತಿ, ಹಾಲುಮತದ ಹಕ್ಕ ಬುಕ್ಕರು ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅನೇಕ ಕವಿಗಳಿಗೆ ಆಶ್ರಯದಾತರಾಗಿದ್ದರು. ದಾಸ ಸಾಹಿತ್ಯಕ್ಕೆ ಪೆÇ್ರೀತ್ಸಾಹ ಸಿಕ್ಕಿತು. 17 ನೇಯ ಶತಮಾನದಲ್ಲಿ ಭಾರತ ಪ್ರವಾಸ ಮಾಡಿದ ಪಿರಾರ್ದ್ ದೆಲವಲ್‍ನು ಇಲ್ಲಿಯ ಬೋಧನಾಕ್ರಮವನ್ನು ವಿವರಿಸುತ್ತಾ, “ಬುದ್ದಿವಂತನಾದ ವಿದ್ಯಾರ್ಥಿ ಒಂದು ಪಾಠವನ್ನು ಪಠಿಸುತ್ತಿದ್ದ, ಉಳಿದವರು ಅದನ್ನು ಪುನರಾವರ್ತಿಸುತ್ತಿದ್ದರು”ಎಂದು ಹೇಳಿದ್ದ. ಕಾಗದ, ಮನೆ ಇವ್ಯಾವುವೂ ವ್ಯರ್ಥವಾಗದೆ ಸರಾಗವಾಗಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದ ಈ ಕ್ರಮವು ತುಂಬಾ ಪರಿಣಾಮಕಾರಿಯೂ. ಸರಳವೂ ಆದದ್ದು ಎಂದು ಹೊಗಳಿದ್ದಾನೆ. ಮಾನಿಟರ ಪದ್ದತಿಯ ಬಗ್ಗೆ ಮೊಟ್ಟಮೊದಲನೆಯದಾಗಿ ಪಿರಾರ್ದ್ ದೆಲವಲ್ ವರದಿಯಲ್ಲಿ ಉಲ್ಲೇಖವಾಗಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಜೈಮಿನಿ ಭಾರತ, ವಿದುರ ನೀತಿ, ಸೋಮೇಶ್ವರ ಶತಕ, ಅಮರಕೋಶ, ಪಂಚತಂತ್ರ ಇತ್ಯಾದಿಗಳನ್ನು ಬೋಧಿಸಲಾಗುತ್ತಿತ್ತು. ಪ್ರಾಚೀನ ಕಾಲದ ಉನ್ನತ ಶಿಕ್ಷಣ ಸಂಸ್ಥೆಗಳು ಮಧ್ಯಯುಗದಲ್ಲೂ ಮುಂದುವರೆದವು. ತದನಂತರದಲ್ಲಿ ವಿಜಯನಗರ ಸಾಮ್ರಾಜ್ಯವು ಪತನವಾಯಿತು. ಸಾಕಷ್ಟು ಅಗ್ರಹಾರಗಳು ನಿಂತು ಹೋದವು. ಬೆರಳೆಣಿಕೆಯಷ್ಟು ಅಗ್ರಹಾರಗಳು ಉನ್ನತ ಶಿಕ್ಷಣ ನೀಡಿದವು.
ಆಧುನಿಕ ಯುಗದ ಶಿಕ್ಷಣ
ಆಧುನಿಕ ಯುಗದಲ್ಲಿ ಇಂಗ್ಲೀಷ್‍ನಲ್ಲಿ ಶಿಕ್ಷಣ ನೀಡಬೇಕೆಂಬ ಪ್ರಸ್ತಾವನೆಯು ಹಾಗೂ ಪ್ರತಿಪಾದನೆಯು ಹೆಚ್ಚಾಯಿತು. ಮೆಕಾಲೆ ಹಾಗೂ ರಾಜಾರಾಮ ಮೋಹನರಾಯರು ಇಂಗ್ಲೀಷ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. 1840-1850 ರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೆಲವು ಕಡೆಗಳಲ್ಲಿ ಕ್ರೈಸ್ತ ಪಾದ್ರಿಗಳು ಇಂಗ್ಲೀಷ್ ಶಾಲೆಗಳನ್ನು ತೆರೆದರು.
ಭಾರತ ಸರ್ಕಾರಕ್ಕೆ 1854 ರಲ್ಲಿ ಬ್ರಿಟಿಷ್ ಸರ್ಕಾರ ಕಳಿಸಿದ ವೂಡ್ಸ್ ಡೆಸ್ಪ್ಯಾಚ್ ಪತ್ರದ ಅಂಗವಾಗಿ ಶಿಕ್ಷಣ ವ್ಯವಸ್ಥೆ ರಚಿತವಾಯಿತು. ಜೂನ್ 1857 ರಲ್ಲಿ ವಿದ್ಯಾಇಲಾಖೆಯನ್ನು ಬ್ರಿಟಿಷ್ ಇಲಾಖೆಯು ಸ್ಥಾಪಿಸಿತು. ಬ್ರಿಟೀಷರಿಗೊಂದು ಕನಸಿತ್ತು. ಪ್ರಪಂಚದ ಭಾಷೆಯು ಇಂಗ್ಲೀಷ್ ಆಗಬೇಕೆಂಬ ಮಹಾದಾಸೆಯಿಂದ, ಬಹಳಷ್ಟು ವಸಾಹತು ರಾಷ್ಟ್ರಗಳಲ್ಲಿ ಇಂಗ್ಲೀಷ ಭಾಷಾಭಿವೃದ್ದಿಗೆ ಪೆÇ್ರೀತ್ಸಾಹವನ್ನು ನೀಡಿ ಯಶಸ್ವಿಯಾಯಿತು. ಬ್ರಿಟೀಷರು ಆಳಿದ ಎಲ್ಲ ರಾಷ್ಟ್ರಗಳಲ್ಲಿ ಇಂಗ್ಲೀಷ್‍ನ ಪ್ರಭಾವವನ್ನು ಇಂದಿಗೂ ಕಾಣಬಹುದಾಗಿದೆ. ದುರ್ದೈವವೆಂದರೆ ಎಲ್ಲ ರಾಷ್ಟ್ರಗಳು, ತಮ್ಮ ತಮ್ಮ ಮಾತ್ರ ಭಾಷೆಗಳನ್ನು ಅವನತಿ ಅಂಚಿಗೆ ತಳ್ಳಿವೆ. ಏನೇ ಆಗಲಿ, ಬ್ರಿಟಿಷರು ಇಂಗ್ಲೀಷನ್ನು ಬಹಳಷ್ಟು ರಾಷ್ಟ್ರಗಳಲ್ಲಿ ಪ್ರಚಾರಗೊಳಿಸಿದ್ದರಿಂದ ಪ್ರಪಂಚದ ಎಲ್ಲ ಜನರು ಒಗ್ಗೂಡುವಿಕೆಗೆ ಹಾಗೂ ಮಾತುಕತೆಗೆ ಅನುಕೂಲವಾಗಿದೆ. ಎಲ್ಲ ರಾಷ್ಟ್ರಗಳಿಗೂ ಒಂದೇ ಭಾಷೆಯಿಂದ ವ್ಯವಹಾರಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನುಕೂಲವಾಗಿದೆ.
(ಮುಂದುವರೆಯುವುದು)
ಲೇಖಕರ ಪರಿಚಯ
ಭಾರ್ಗವ ಎಚ್.ಕೆ.ಯವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದವರಾಗಿದ್ದು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಗದಗ ಜಿಲ್ಲೆಯ, ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಶಾಲಾ ಹಂತದಲ್ಲೇ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮುಂದೆ ಬಿ.ಇ.ಕಂಪ್ಯೂಟರ್ ಸೈನ್ಸ್ ಹಾಗೂ ಎಂ.ಟೆಕ್ ಕಂಪ್ಯೂಟರ್ ಸೈನ್ಸ್ ಪದವಿಗಳನ್ನು ಪಡೆದರು. ಸದ್ಯ ಶ್ರೀಮತಿ ಕಮಲಾ ಹಾಗೂ ಶ್ರೀ ವೆಂಕಪ್ಪ ಎಂ. ಅಗಡಿ ಇಂಜನಿಯರಿಂಗ್ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಂ.ಟೆಕ್. ಪದವಿಯ ಅಂತಿಮ ವರ್ಷದ ಪೆÇ್ರಜೆಕ್ಟ್‍ನ್ನು ಹುಬ್ಬಳ್ಳಿಯ ಕೆ.ಎಲ್.ಇ. ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ ಅನಾಮಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ. ಬಾಗಲಕೋಟೆಯ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದಂತಹ ಡಾ. ವೀರಪ್ಪ ಪಾಗಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ.ಯನ್ನು ಅಭ್ಯಸಿಸುತ್ತಿದ್ದಾರೆ.
ಇವರು ಕ್ರಿಯಾಶೀಲ ಹವ್ಯಾಸವೆಂಬಂತೆ ಶಿಕ್ಷಕರ ಹಾಗೂ ಪ್ರಶಿಕ್ಷಣಾರ್ಥಿಗಳ ತರಬೇತಿಯಲ್ಲಿಯೂ ನಿರತರಾಗಿದ್ದಾರೆ. ಇಲ್ಲಿಯವರೆಗೆ 4000ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ “ಬೋಧನಾ ಕೌಶಲ”ದ ವಿಷಯದ ಬಗ್ಗೆ ತರಬೇತಿ ನೀಡಿದ್ದಾರೆ.