ಶಿಕ್ಷಣ (ಭಾಗ 2): ಭಾರ್ಗವ ಎಚ್.ಕೆ.

Bhargav H K

ಇಲ್ಲಿಯವರೆಗೆ

4    ಬೋಧನಾ ಕಲೆ

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಯಾವ ರೀತಿ ಶೈಕ್ಷಣಿಕ ಬೋಧನೆ ಮಾಡಬೇಕೆಂಬ ಹೊಸ ಹೊಸ ಆಲೋಚನೆಗಳ ಮತ್ತು ಜಿಜ್ಞಾಸೆಗಳ ಮಧ್ಯೆ ಬೋಧನಾ ಕಲೆಯ ಮಹತ್ವದ ಮನವರಿಕೆಗೆ ಇದು ಸುಸಂದರ್ಭ. ಶಿಕ್ಷಕನ ಬೋಧನೆ ಮಾಡುವ ಶೈಲಿಯು ಮಕ್ಕಳಿಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳಿಗೆ ಪಾಠದ ವಿವರಣೆ ಸರಳವಾಗಿ ತಿಳಿಯುವಂತಾಗಬೇಕು. ಶಿಕ್ಷಕರಾದ ನಾವುಗಳು ದಿನಾಲು ಅಪಡೇಟ್ ಆಗಿರಬೇಕು. ಅವುಟುಡೇಟೆಡ್ ಆಗಬಾರದು. ಕಲಿಯಲು ನಿರಂತರ ಉತ್ಸಾಹವುಳ್ಳವರು ಮಾತ್ರ್ರ ಕಲಿಸಲು ಯೋಗ್ಯರು ಎಂದರೆ ತಪ್ಪಾಗಲಾರದು. ಒಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವು ಶಿಕ್ಷಕರ ಬೋಧಿಸುವ ಸಾಮಥ್ರ್ಯದ ಅನುಪಾತದಲ್ಲಿರುತ್ತದೆ. ಒಬ್ಬ ಶಿಕ್ಷಕನಲ್ಲಿ ಭಾಷಾ ಪ್ರಭುತ್ವ ಹಾಗೂ ಉತ್ತಮ ಬೋಧನಾ ಕಲೆಯಿದ್ದರೆ ಆತನ ದೇಹ ಮಾತನಾಡುತ್ತದೆ, ಮೈದುಂಬಿ ಪಾಠ ಮಾಡುತ್ತಾನೆ.

“ಅಸಮರ್ಥ ಶಿಕ್ಷಕರು ಆರೋಪದಲ್ಲಿ ದಿನವಿಡಿ ಕಾಲ ಕಳೆಯುತ್ತಾರೆ. ಸಮರ್ಥ ಶಿಕ್ಷಕರು ಪಾಠಗಳನ್ನು ಟಿಪ್ಪಣಿಗಳನ್ನು  ಸುಸೂತ್ರವಾಗಿ ನೀಡುತ್ತಾರೆ. ಶ್ರೇಷ್ಠ ಶಿಕ್ಷಕರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ."
ನಾವು ಶೇ.10% ರಷ್ಟು ಓದುವುದರಿಂದ ಕಲಿಯುತ್ತೇವೆ, ಶೇ. 20% ಕೇಳುವದರಿಂದ, ಶೇ. 30% ರಷ್ಟು ನೋಡುವುದರಿಂದ, ಶೇ.50% ರಷ್ಟು ಕೇಳುವುದರಿಂದ ಹಾಗೂ ನೋಡುವುದರಿಂದ, ಶೇ. 70%ರಷ್ಟು ಇನ್ನೊಬ್ಬರ ಜೊತೆ ಚರ್ಚೆ ಮಾಡುವುದರಿಂದ, ಶೇ. 80%ರಷ್ಟು ನಮ್ಮ ಅನುಭವಕ್ಕೆ ಬಂದುದರಿಂದ, ಶೇ.95%ರಷ್ಟು ನಾವು ಇನ್ನೊಬ್ಬರಿಗೆ ಬೋಧಿಸುವುದರಿಂದ ಕಲಿಯುತ್ತೇವೆ.
ಶಿಕ್ಷಕರಾದವರಿಗೆ ಹೆಚ್ಚು ಜ್ಞಾನ ಸಂಪಾದಿಸಲು ಹಾಗೂ ಕಲಿಸಲು ಹೆಚ್ಚು ಅವಕಾಶಗಳಿವೆ. ಪಾಠ ಮಾಡುತ್ತಾ ಮಕ್ಕಳಿಗೆ ಜ್ಞಾನವನ್ನು ನೀಡುತ್ತೇವೆ. ಜ್ಞಾನವನ್ನು ನೀಡುತ್ತಾ ಮಕ್ಕಳಿಂದ ಪಾಠ ಕಲಿಯುತ್ತೇವೆ. ಶಿಕ್ಷಕ ವೃತ್ತಿಯು ಎಲ್ಲ ವೃತ್ತಿಗಳನ್ನು ಕಲಿಸುತ್ತದೆ.

ಬೀಚಿಯವರು ಹೇಳಿದ ಹಾಗೆ “ನಿನ್ನಂತೆ ನೀನಾಗು ನಿನ್ನನ್ನು ಅರಿ ಮೊದಲು,ಚೆನ್ನೆಂದು ಅವರಿವರನು ಅನುಕರಿಸಬೇಡ".
ಶಿಕ್ಷಕರಾದವರು ತಮ್ಮದೇ ಆದ ಬೋಧನಾ ಶೈಲಿಯೊಂದಿಗೆ ವಿದ್ಯಾರ್ಥಿಗಳಿಗೆ ಪಾಠಗಳು ಅರ್ಥವಾಗುವಂತೆ ಮಾಡಬೇಕು. ಶಿಕ್ಷಕರನ್ನು ಎರಡು ರೀತಿಯಾಗಿ ವಿಂಗಡಿಸಬಹುದು.
*    ಅಧ್ಯಕ್ಷೀಯ ಮಾದರಿಯ ಶಿಕ್ಷಕರು
*    ಪ್ರಜಾಪ್ರಭುತ್ವ ಮಾದರಿಯ ಶಿಕ್ಷಕರು
ಅಧ್ಯಕ್ಷೀಯ ಮಾದರಿಯ ಶಿಕ್ಷಕರು ಯಾರ ಮಾತನ್ನು ಕೇಳುವುದಿಲ್ಲ. ತಮ್ಮದೇ ಮಾತು ಎಲ್ಲ ಕಾಲಕ್ಕೂ ನಡೆಯಬೇಕೆಂಬ ಹಠವಾದಿಗಳು ಹಾಗೂ ನಿಷ್ಠುರವಾದಿಗಳು, ಗಟ್ಟಿ ಧ್ವನಿ ಆದೇಶ ಕೊಡುವ ಗಟ್ಟಿತನ, ಅಧಿಕಾರ ಚಲಾಯಿಸುವಿಕೆ ಹೀಗೆ ಆಗಬೇಕೆಂದು ಸ್ವಪ್ರತಿಷ್ಠೆ, ನಾನು ಹೇಳಿದಂತೆ ನೀವು ಕೇಳಲೇಬೇಕೆಂಬ ಅಭಿಲಾಶೆ, ಎಲ್ಲವನ್ನು ನಾನೊಬ್ಬನೇ ಮಾಡಬಲ್ಲೇ, ನನ್ನಿಂದ ಮಾತ್ರ ಸಾಧ್ಯ ಉಳಿದವರೆಲ್ಲ ನಗಣ್ಯ ಎಂಬ ಭಾವನೆ, ಆಡಳಿತದಲ್ಲಿ ಏಕ ನಿರ್ಧಾರ ಇವೆಲ್ಲಗಳ ಸಮ್ಮಿಳಿತವೇ ಅಧ್ಯಕ್ಷೀಯ ಮಾದರಿಯ ಶಿಕ್ಷಕರು.
 ಪ್ರಜಾಪ್ರಭುತ್ವ ಮಾದರಿಯ ಶಿಕ್ಷಕರು ಉತ್ತಮ ನಾಯಕರು, ಶಿಕ್ಷಣ ಕ್ರಾಂತಿಯ ಹರಿಕಾರರು, ಸರಳ ಹಾಗೂ ಸಜ್ಜನರು, ಸ್ನೇಹಪರರು, ನಿಮ್ಮ ಜೊತೆಗೆ ನಾವಿದ್ದೇವೆ,ಸಲಹೆಗಳಿಗೆ ಮನ್ನಣೆ ಕೊಡುತ್ತೇವೆ, ಸಹಕಾರ ಕೊಡುತ್ತೇವೆಂಬ ಮನೋಭಾವವುಳ್ಳವರು, ಜವಾಬ್ದಾರಿಗಳನ್ನು ವಿಂಗಡನೆ ಮಾಡಿ ಎಲ್ಲರೊಂದಿಗೆ ಬೆರೆತು, ಯಾರ ಬೇಳೆಯೂ ಬೇಯದೇ ಹಾಗೇ ಎಲ್ಲರಿಗೂ ಸಮಾನ  ಅವಕಾಶ ಕಲ್ಪಿಸುವ ಸಹೃದಯರು. ಇಂತವರಲ್ಲಿ ಆತ್ಮಗೌರವ ಸ್ವೀಕರಿಸುವಿಕೆಯ ಮನೋಭಾವ, ಎಲ್ಲರ ಸಾಮಥ್ರ್ಯದ ಮೇಲೆ ನಂಬಿಕೆ, ಸಂತೋಷವನ್ನು ವಿನಿಮಯ ಮಾಡಿಕೊಳ್ಳುವ ಬಗೆ, ಕ್ರಿಯಾಶೀಲತೆ, ಹೊಸತನ, ಶಿಸ್ತು, ಉದ್ಧರಿಸುವಿಕೆಯಂತಹ ಉದಾತ್ತ ಗುಣಗಳು ಇರುತ್ತವೆ.

ಇಂತಹ ಶಿಕ್ಷಕರು ಮಂಕುತಿಮ್ಮನ ಕೊನೆಯ ಉಕ್ತಿಯಂತೆ “ಎಲ್ಲರೊಳಗೊಂದಾಗು" ಎಂಬ ನುಡಿಯನ್ನು ಪುಷ್ಠೀಕರಿಸುತ್ತಾರೆ. ಕ್ರಿಯೆ-ಪ್ರತಿಕ್ರಿಯೆ ಮಧ್ಯೆ ಒಂದು ಪುಟ್ಟ ಸಲಹೆ ಅಥವಾ ಮೌನವಿದ್ದರೆ ಕೊಠಡಿಯಲ್ಲಿ ಶಾಲಾ ಮಕ್ಕಳ ಅತ್ಯುತ್ತಮ ನಿರ್ವಾಹಕ ಶಿಕ್ಷಕನಾಗುವುದರಲ್ಲಿ ಸಂಶಯವಿಲ್ಲ. ಶಿಕ್ಷಕರಿಗೆ ಯಾರ್ಯಾರೋ ಕೀ ಕೊಟ್ಟು ಹೋಗುತ್ತಾರೆ, ಇನ್ಯಾರೋ ಆಟ ಆಡಿಸುತ್ತಾರೆ, ಮತ್ಯಾರೊ ಹೀಗಳಿಯುತ್ತಾರೆ, ಒಂದೇ ಮಾತಿನಲ್ಲಿ ಹೇಳುವುದಾದರೆ ಬಾಡಿಗೆರಹಿತ ಜಾಗವನ್ನು ನಮ್ಮ ಮನಸ್ಸಿನಲ್ಲಿ ಕೊಡಬಾರದು. ಹೊಸ ಬೋಧನಾ ಶೈಲಿಗಳನ್ನು, ವಿಧಾನಶಾಸ್ತ್ರಗಳನ್ನು ಕಾಲಕ್ಕೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು.

“ಒಬ್ಬ ಸಾಮಾನ್ಯ ಶಿಕ್ಷಕ ತನ್ನನ್ನು ತಾನೇ ಉದ್ದರಿಸಿಕೊಳ್ಳುತ್ತಾನೆ. ಒಬ್ಬ ಆದರ್ಶ ಶ್ರೇಷ್ಠ ಶಿಕ್ಷಕ ಎಲ್ಲರನ್ನೂ ಉದ್ಧರಿಸುತ್ತಾನೆ.ಆರು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಪಾಠ ಮಾಡುವಾಗ ಪಠ್ಯಪುಸ್ತಕ ತೆಗೆದುಕೊಂಡು ಹೋಗಿ ಪಾಠ ಮಾಡುತ್ತಿದ್ದೆ.“ಚಲತಾ ಹೈ” ಅಂದುಕೊಂಡಿದ್ದೆ. ಇಂಜನಿಯರಿಂಗ್ ವಿದ್ಯಾರ್ಥಿಗಳು ಮೊದಲ ದಿನ ನನ್ನ ಪಾಠ ಕೇಳಿ ಹೀಯಾಳಿಸಿದ್ದರು, ಗಹಗಹಿಸಿ ನಕ್ಕಿದ್ದರು. ಜೋರಾಗಿ ಚೀರಿದ್ದರು. ಅಂದು ದಿನವಿಡೀ ಅತ್ತಿದ್ದೆ. ಹಠ ನನ್ನನ್ನು ಬಡಿದೆಬ್ಬಿಸಿತು. ಅವಮಾನಗಳೇ ಯಶಸ್ಸಿನ ಅಧ್ಯಾಯಗಳೆಂದು ತಿಳಿಯಲು ಒಂದೇ ದಿನದ ಅವಮಾನ ಸಾಕಾಗಿತ್ತು. ಮರುದಿನದಿಂದ ಇಂದಿನವರೆಗೆ ನಾನು ಪುಸ್ತಕವನ್ನು ಅಥವಾ ನೋಟ್ಸನ್ನು ಅವಶ್ಯಕತೆ ಇದ್ದರೆ ಮಾತ್ರ ಒಯ್ಯತ್ತೇನೆ. ಪುಸ್ತಕವನ್ನು ಒಯ್ಯದೇ ಇರೋರಷ್ಟೇ ಚೆನ್ನಾಗಿ ಪಾಠ ಮಾಡುತ್ತಾರೆಂಬ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತೆ,ಆದರೆ ಪುಸ್ತಕವಿಲ್ಲದೆ ಪಾಠ ಮಾಡುವ ಅಭ್ಯಾಸವು ಹೊಸ ಅನುಭವ ನೀಡುತ್ತದೆ.

“ನಮ್ಮ ಬೋಧನಾ ಶೈಲಿಯು ಕಲಿಸಿದ ಗುರುಗಳ ಬೋಧನಾ ಶೈಲಿಯ ಸಮ್ಮಿಳಿತ”, ಹೊಸದನ್ನು ಕಲಿಯಬೇಕೆಂಬ ಉತ್ಸಾಹ ನನ್ನನ್ನು 4000ಕ್ಕೂ ಹೆಚ್ಚು ಶಿಕ್ಷಕರಿಗೆ ಹಾಗು ಬಿ.ಎಡ್,ಡಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ “ಬೋಧನಾ ಕೌಶಲ”ದ ತರಬೇತಿದಾರರನ್ನಾಗಿ ಮಾಡಿದೆ.“ಇದಂ ಇತ್ಯಂ" ಎನ್ನದೇ ಎಲ್ಲ ಶಿಕ್ಷಕರ ಸಲಹೆಗಳನ್ನು ಸ್ವೀಕರಿಸಿದ್ದೇನೆ. ನಾವು ಏನು ಹೇಳುತ್ತೇವೆ ಎನ್ನುವುದಕ್ಕಿಂತ ನಾವು ಏನಿದ್ದೇವೆ ಅನ್ನೋದನ್ನೇ ಬಹಳವಾಗಿ ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸುತ್ತೇವೆ. ನಮ್ಮ ನಡತೆಗಳು ನಮ್ಮನ್ನು ನಿರ್ಧರಿಸುತ್ತವೆ.ಕಾಲುಭಾಗ ಅಧ್ಯಯನ ಮಾಡಿದರೆ ಮುಕ್ಕಾಲು ಭಾಗ ವಿವರಣೆಯ ಕಲೆ ಕರಗತ ಮಾಡಿಕೊಂಡರೆ ಸಾಕೆನಿಸುತ್ತದೆ.

ಎಲ್ಲ ಭಾಷೆಗಳನ್ನು ಪ್ರೀತಿಸಿದಾಗ ಹೆಚ್ಚಿನ ಜ್ಞಾನವನ್ನು ಪಡೆಯುತ್ತೇವೆಂಬ ಭಾವನೆ ನನ್ನದು.ಪ್ರಾದೇಶಿಕ ಭಾಷೆಗಳಲ್ಲಿ ಒಂದು ಸೊಗಡಿದೆ,ಸತ್ವವಾದ ಸಾಹಿತ್ಯವಿದೆ.ಉದಾಹರಣೆಗೆ, ತೆಲುಗಿನಲ್ಲಿ ಓದಿದ್ದು ನೆನಪಾಗುತ್ತಿದೆ.“ನಾಡಿನಿಂಚಿ ಮನಂ ಏಮ್ ತೀಸ್ಕುನ್ನಾವೊ, ತಿರುಗಿ ಮನಂ ನಾಡಿಕಿ ಚೇಯಾಲಿ, ಲೆಕ್ಕಪೋತೆ ಮನಂ ಪಾಪಿಷ್ಟಂ” (ನಾಡಿನಿಂದ ನಾವು ಏನು ತೆಗೆದುಕೊಂಡಿದ್ದೇವೋ ಮತ್ತೆ ನಾವು ನಾಡಿಗೆ ಕೊಡಬೇಕು, ಲೆಕ್ಕ ತಪ್ಪಿದರೆ ನಾವು ಪಾಪಿಗಳು)

ತಮಿಳಿನಲ್ಲಿ ತಿರುವಳ್ಳುವರ್ ತನ್ನ ಹೆಂಡತಿಯ ಪ್ರೇಮವನ್ನು ದ್ವಿಪದಿಯಲ್ಲಿ ಹೀಗೆ ವ್ಯಕ್ತಪಡಿಸುತ್ತಾನೆ.-
“ಪ್ರಿಯೆ, ನಾನು ನಿನ್ನನ್ನು ಏಳೇಳು ಜನ್ಮ ಪ್ರೀತಿಸುತ್ತೇನೆ.
ತಕ್ಷಣ ಹೆಂಡತಿ ಕಣ್ಣೀರಿಡುತ್ತಾ ಇಷ್ಟೇನಾ ನಿನ್ನ ಪ್ರೀತಿ ತಿರುವಳ್ಳುವರ್" ಎನ್ನುತ್ತಾಳೆ.
ಈ ಉದಾಹರಣೆಗಳು ಯಾಕೆ ಪ್ರಸ್ತುತವಾಗುತ್ತವೆಂದರೆ ಸಾಹಿತ್ಯ ಮತ್ತು ಶಿಕ್ಷಕ ಒಂದು ನಾಣ್ಯದ ಎರಡು ಮುಖಗಳು. ಸಾಹಿತ್ಯದ ಝಲಕುಗಳು ಭಾಷಾ ಶಿಕ್ಷಕರಿಗೆ ಹೇಗೆ ನೆರವಾಗುತ್ತವೆಂಬುದು ಎಲ್ಲರಿಗೂ ತಿಳಿಸಬೇಕೆಂಬ ಹಂಬಲವಷ್ಟೆ. ತಿಳಿದವರು ತಿವಿಯಬೇಡಿ, ತಿಳಿಯದವರು ತಡಕಾಡಲಾರರೆಂದು ಪರಿಭಾವಿಸಿದ್ದೇನೆ.

*************

5 ಮಾತುಗಾರಿಕೆ ಹಾಗೂ ಬರವಣಿಗೆ

ಶಾಲಾ ಆವರಣದಲ್ಲಿ ಮಾತನಾಡುವಾಗ ತುಂಬಾ ಜಾಗೃತರಾಗಿ ಮಾತನಾಡಬೇಕಾಗುತ್ತದೆ. ನಮ್ಮ ಭಾಷೆಯ ಅನುಕರಣೆ ಹಾಗೂ ಪ್ರಭಾವ ವಿದ್ಯಾರ್ಥಿ ಸಮೂಹದ ಮೇಲೆ ಪರಿಣಾಮ ಬೀರುತ್ತಿರುತ್ತದೆ. ನಮ್ಮ ಭಾಷಾ ಪಾಂಡಿತ್ಯವು ಎತ್ತರಕ್ಕೆ ಕೊಂಡೊಯ್ಯುತ್ತದೆ. ವೃತ್ತಿಯಲ್ಲಿ ಇಂಜನಿಯರಿಂಗ್ ಕಾಲೇಜು ಪ್ರಾಧ್ಯಾಪಕ. ಪ್ರವೃತ್ತಿಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿದಾರ. ಶಿಕ್ಷಕರಿಗೆ ತರಬೇತಿಯನ್ನು ನೀಡುವಾಗ ಕೆಲವೊಂದು ಕನ್ನಡದಲ್ಲಿ ಬರೆದ ಝಲಕುಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಯಮಕಾಲಂಕಾರವನು ಕೇಳಿದ್ದೆ. ಅದೇ ರೀತಿ ಯಮಕಿನಿಂದ ಬರೆದೆ. ಇದರಲ್ಲಿ ಪ್ರಾರಂಭದಲ್ಲಿ ಸ-ವರ್ಣ ಬಳಕೆಯಾಗಿದೆ, ಹೀಗೆ “ಸುಂದರ ಸುಶಿಕ್ಷಿತ ಸಹೋದ್ಯೋಗಿಗಳ ಸಾಜದ ಸವಿಗನ್ನಡದಲ್ಲೇ, ಸುಸಂದರ್ಭದಲ್ಲಿ ಸಿದ್ಧಪಡಿಸಿದ ಸುಬೋಧನಾ ಕಲೆಯನ್ನು ಸರ್ವರಿಗೂ ಸಾದರಪಡಿಸಲು ಸಂಪನ್ಮೂಲ ಸಲಹೆಗಾರನಾಗಿ ಸಿದ್ದಿಸಿ ಸಾಧಿಸಬೇಕೆಂದು ಸನ್ನದ್ಧವಾಗಿರುವ ಸನ್ಮಾನ್ಯರ ಸಾಗರದಷ್ಟು ಸಿಹಿಕನಸುಗಳ ಸಿಹಿ-ನನಸುಗಳಿಗೆ ನೀವೇ ಸೂತ್ರಧಾರರು”

ಹೀಗೆ ಮತ್ತೊಂದು ಯಮಕು, ಅದು `ಕ' ವರ್ಣದ ಝಲಕು. ಶಂಭು ಬಳಿಗಾರರು ಕನ್ನಡ ಸಂಘದ ಉದ್ಘಾಟನೆಗೆ ನಮ್ಮ ಕಾಲೇಜಿಗೆ ಬಂದಾಗ ಬರೆದಿದ್ದು. ಇಲ್ಲಿ ಕರಾಲ ಎಂದರೆ ಶಂಭು, ಕೆರಿಮನಿಯವರು ನನ್ನ ಸಹೋದ್ಯೋಗಿಗಳು. ಹಾಗೂ ಕಮಲಾ ಕಾಲೇಜೆಂದರೆ ನಾನು ಕೆಲಸ ಮಾಡುತ್ತಿರುವ ಇಂಜನಿಯರಿಂಗ್ ಕಾಲೇಜು.

“ಕನ್ನಡ ಕೂಟ ಕಟ್ಟುವ ಕನಕನ ಕೋರಿಕೆಯ ಕಾತುರವ ಖಾತರಿಪಡಿಸಿದ ಕವಿ ಕೆರಿಮನಿಯವರ ಕೌತುಕದ ಕಮಾ¯ ಕರೆಗೆ ಕಿವಿಗೊಟ್ಟು, ಕಮಲಾ ಕಾಲೇಜಿಗೆ ಕಾಲಿಟ್ಟ ಕರ್ತೃ ಕರಾಲನಂತೆ ಕರಂಡಿಕೆಯಲ್ಲಿನ ಕರುನಾಡ ಕಸ್ತೂರಿಯನ್ನು, ಕಲೋಪಾಸಕ ಕುಡಿಮಿಂಚಿನ ಕರ್ಣಗಳಿಗೆ ಕಂಪಸೂಸಲು ಕರುನಾಡ ಕಣ್ಮಣಿ ಕಂಗಳೆದುರಿಗೆ ಕಾಣುತ್ತಿರುವುದು ಕಪೆÇೀಲಕಲ್ಪಿತ ಕಥೆಯೂ ಅಲ್ಲ, ಕವನ ಕಾವ್ಯ ಕಥಾಹಂದರಗಳ ಕತೆಗಾರ, ಕಥಾನಾಯಕ ಕವಿಯೂ ಅಲ್ಲ, ಕಣ್ಣಿಗೆಟುಕದೆ ಕಿವಿಗಿಂಪು ಕೇಳುವಂತೆ ಕಂಚಿನ ಕಂಠದಿಂದ ಕೋಲ್ಮಿಂಚಿನ ಕೋಲಾಟದ ಕವನಗಳ ಕುಸುರಿಯನ್ನು ಕಾಪಿಡುವ, ಕಲೆಹಾಕುವ, ಕೂಡಿಸುವ ಕಲಾಕಾರ ಕೇಶಿರಾಜನೇ ನಿಮಗಿದೋ ಈ ಕೈರಹದ ಕುಸುಮಮಾಲೆ ಕನ್ನಡದ ಕ-ವರ್ಣದ ಅಕ್ಷರಮಾಲೆ”.  

ಮುಳಗುಂದದ ಮಹಾಂತಸ್ವಾಮಿಗಳವರ ಕಾಲೇಜಿಗೆ ಅತಿಥಿಯಾಗಿ ಹೋಗಿದ್ದಾಗ ಮ-ಕಾರದಲ್ಲೇ ಮಾತಾಡಿದ್ದು “ಮೈಸೂರು ಮಹಾರಾಜರ ಮಾರಣಾಂತಿಕ ಮಹಾಮಾರಿಗೆ ಮುಳಗುಂದದ ಮುನಿಗಳಾದ ಮಹಾಂತಸ್ವಾಮಿಗಳು ಮದ್ದ ನೀಡಿ ಮಂದಹಾಸ ಮುಖವ ಮಾಡಿದ್ದಕ್ಕಾಗಿ ಮಂತ್ರಿ ಮಹೋದಯರು ಮಹಾಧನದ ಮುಖೇನ ಮುಂಬಂದಾಗ ಮುಟ್ಟದೇ ಮಹತ್ವನೀಡದೇ ಮುತ್ತಿನಂತಹ ಮಾತುಗಳಲ್ಲೇ ಮನಸೂರೆಗೊಂಡ ಮರೆಯಲಾಗದ ಮಹನೀಯರ ಮನದಂಗಳದಲ್ಲಿ ಮನಸ್ಸು ಬಿಚ್ಚಿ ಮೋದಕದ ಮೆಲುಮಾತುಗಳನ್ನಾಡುವ ಮುನ್ನೋಟಕ್ಕೆ ಮನಸ್ಸು ಮಾಡಿದ್ದೇನೆ”

ಹೀಗೆಯೇ ಪ್ರತಿ ಸಮಾರಂಭಗಳಲ್ಲಿ ಸಂದರ್ಭೋಚಿತವಾಗಿ ಮಾತನಾಡುವ ಹವ್ಯಾಸವಿದೆ.
ನಮ್ಮ ಕಾಲೇಜಿನ “ಹಾಸ್ಟೆಲ್ ಡೇ" ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನನ್ನ ಗುರುಗಳಾದ ಅನಿಲ ವೈದ್ಯ, ಉಪನ್ಯಾಸಕರು ಕೆ.ವಿ.ಎಸ್.ಆರ್ ಕಾಲೇಜು ಗದಗ, ಭಾಗವಹಿಸಿದ್ದರು. ಅವರ ಪರಿಚಯವನ್ನು ಹೀಗೆ ಮಾಡಿದ್ದೆ “ಪರಿಚಯಂ ಪೇಳುವ ಈ ಪರಿಯ ಬಯಕೆ, ಗುರುವಿಗಾಗಿ ಬಲ್ಲೆನು, ನನ್ನೀ ಪದಸಾಲ್ಗಳ ಕಟ್ಟ ಕಳಚದೆ ಎತ್ತ ಓಡಿ ಹೋಗಲಿ ಗುರುವೇ, ನಿಮ್ಮೀ ಹಾಸ್ಯದ ನಿನಾದ ತಾಕದ ಜಾಗವಿಲ್ಲ, ಆಲಿಸದ ಕಿವಿಗಳಿಲ್ಲ, ನಮ್ಮ್ಬಿರ ಖಾಸ್‍ಬಾತ್ ಎಂದೂ ಕಸುವು ಕಳೆದುಕೊಳ್ಳುವುದಿಲ್ಲ”. ನಗೆ ಸೃಷ್ಠಿಕರ್ತನ ಶ್ರೇಷ್ಠ ಜೇನ್ನುಡಿಯಿಂದ ಪುಷ್ಠಿ ಪಡೆಯಲು ನಿಬ್ಬರಗೆನಿಪ, ಕಾತುರದಿ ಆಲಿಸಲು ನೆರೆದಿರುವ ಸಮೂಹ ಸಂಭ್ರಮಕೆ ಸಾಟಿಯಾದ ಪುಷ್ಪಹಾರವನ್ನು ದಿನವೆಲ್ಲ ಹುಡುಕಾಡಿದೆ, ಆದರೆ ಸಿಗಲೇ ಇಲ್ಲ ಆದರೂ “ವ" ಕಾರದ ಹಾರವನ್ನು ಹಾಕುತ್ತಿದ್ದೇನೆ.

“ವೈಭವದ ವಿದ್ಯಾರ್ಥಿನಿಲಯ ವಿನೋದೋತ್ಸವಕೆ ವಿನೂತನ ವಿಶೇಷ ವಿದೂಷಕನಾಗಿ ವಿಪರ್ಯಾಸವಿಲ್ಲದೆ , ವಿಶಿಷ್ಟವಾದ ವಿಹಂಗಮ ವಿಶಾಲ ವೆಂಕಪ್ಪನ ವಿಹಾರದಲ್ಲಿ ವಿರಮಿಸದೇ ವಾಕ್ಚಾತುರ್ಯದಿಂದ ವಿಡಂಬನೆಗಳೊಂದಿಗೆ ವಿಜ್ರಂಭಿಸಲು, ವಿರಾಜಮಾನವಾಗಿರುವ ವಿಶ್ವಕ್ಕೇ ವಾಯುವಾಗಿರುವ (ಅನಿಲ) ವಿನೋದಪ್ರಿಯ ವೈದ್ಯರಿಗೆ ಧನ್ಯವಾದಗಳು." 

ನಾನೊಮ್ಮೆ ಕನಕದಾಸ ಜಯಂತಿಯ ಪ್ರಯುಕ್ತ ಅತಿಥಿಯಾಗಿ ಹೋದಾಗ ಮಾತನಾಡಿದ್ದು 
“ಕುರಿ ಕಾಯುವ ಕುರುಗೌಡನ್ಬೊ ಕೇಶವನ ಕೃಪೆಯಿಂದ ಕನ್ನಡದಲ್ಲಿ ಕೈರಹವಿಲ್ಲದ ಕೀರ್ತನೆಗಳ ಕರ್ತೃನಾಗಿ, ಕಂಚಿನ ಕಂಠತ್ರಾಣದಿಂದ ಕಿವಿಗಿಂಪು ಕೇಳುವಂತೆ ಕಾವ್ಯ ಭಜಿಸುತ, ಕೃಷ್ಣನ ಕರ್ಣಗಳಿಗೆ ಕಂಪಸೂಸಿ, ಕಣ್ಮುಂದೆ ಕೈಲಾಸ ಕಾಣುವ ಕೋರಿಕೆಯ ಕನಸಿಗೆ, ಕರುಣೆಗೊಂಡು ಕಂಡವರಿಗೆಲ್ಲ ಕಣ್ಣಿಗೆಟುಕದೆ, ಕನಕದಾಸರಿಗೆ ಕಣ್ತೆರೆದ ಕರಾವಳಿ ಕೃಷ್ಣನ ಕಸುವಿನ ಕೃಪಾಕಟಾಕ್ಷ ಕಪೋಲ ಕಲ್ಪಿತ ಕಥೆಯಲ್ಲ”
ರವಿ ಭಜಂತ್ರಿಯವರು ನಮ್ಮ ಕಾಲೇಜಿನಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವದ ಸಮಾರಂಭಕ್ಕೆ ಅತಿಥಿಗಳಾಗಿ ಬಂದಾಗ ಅವರ ಪರಿಚಯವನ್ನು `ಬ' ಅಕ್ಷರದಿಂದ ವರ್ಣಿಸಿದ ಬಗೆ ಹೀಗಿದೆ-

“ಬೆಳಗಾವಿಯಿಂದ ಬಾನಿನಿಂದ ಬರದ ಬೇಗೆಯಲಿ ಬೆಂದಿರುವ ಬೆಳವಲ ಭೂಮಿ ಬೇಸಾಯಗಾರರ ಬಾನಗುಡಿಕೆ ಬಂದಿಳಿದು, ಬಿರುನಗೆಯನು ಬಿತ್ತಿ ಬೆಳೆದು ಬನವಾಗಿಸುವ ಭಾರ್ಗವನ ಬೇಡಿಕೆಯ ಬಯಕೆಯನು ಬೆಳೆಸಿದ ಬಾಳೇಶ್ವರಮಠರನು ಬೆಸೆದುಕೊಂಡು ಬನ್ನೀರಿನ ಬುಗ್ಗೆಯನು ಬಳಸಿಕೊಂಡು ಭಾರತದ ಭಾಷೆಗಳ ಭಾವಾವೇಶಗಳ ಭರಾಟೆಯಲ್ಲಿಯೂ ಬಿಗುಮಾನವಿರದೆ, ಬಿಡೆಯಿಲ್ಲದ, ಬಂಗಾರನಗುವನು ಭಾನು ಭಜಂತ್ರಿಯವರು ಬಿಡುವಿಟ್ಟುಕೊಂಡು ಬಂದು ಬಿಡುವಿಲ್ಲದೆ  ಬಸವಳಿದವರಿಗೆ ಬಡವರ-ಬಾದಾಮಿಯೊಂದಿಗೆ ಬೆಲ್ಲವನು ಬೆರೆಸಿದಂತೆ ಭರ್ಜರಿ ಭಾಷಣ ಬಿಗಿಯಲು ಭಾಷ್ಯ ಬರೆಯಲು ಬಂದವರಿಗೆ ಭಾರ್ಗವನಿಂದ `ಬ' ಅಕ್ಷರದ ಅಕ್ಷರಮಾಲೆ."

ಹೊಸಪೇಟೆಯಲ್ಲಿರುವ ತೆಗ್ಗಿನಮಠದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಬೋಧನಾ ಕೌಶಲ” ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕ ವೃಂದವನ್ನು `ತ' ಅಕ್ಷರದಲ್ಲಿ ಹೀಗೆ ಬಣ್ಣಿಸಿದ್ದು.
“ತುಂಗಭದ್ರೆಯ ತಣ್ಣನೆಯ ತಂಗಾಳಿಯ ತಟದಲ್ಲಿ ತೆಗ್ಗಿನಮಠದ ತನುವಿನ ತಿಳುವಳಿಕೆಯ ತಕ್ಕಶ್ರಮದ ತಂತ್ರಜ್ಞಾನದ ತಾಂತ್ರಿಕ ತುಡಿತವು ತಿಳಿಯದವರಿಗೆ ತೀಕ್ಷ್ಣವಾಗಿ ತೀಡಿ, ತುದಿಗಾಲಿನಲಿನಿಂತು ತಿಳಿಯಬೇಕೆನ್ನುವಷ್ಟು ತವಕಿಸುವ ತರ್ಕಬದ್ಧವಾದ ತಾಕಲಾಟಕ್ಕೆ ತಮ್ಮೆಲ್ಲರನ್ನು ತಳ್ಳಿದ ತನ್ಮಯ ತಾತನವರ ತವರಿನ ತುಂಬುಹೃದಯಿಗಳೇ!!"

ಬಾಲ್ಯದಲ್ಲಿ ನನಗೆ ಯಾರೋ ಹೇಳಿದ್ದರು ಹೀಗೆ 
“ಕುರಿ ಕಾಯುವ ಕುರುಬನೊಬ್ಬ ಕಾಳಿಮಾತೆಯ ಕೃಪೆಯಿಂದ ಕಾಳಿದಾಸನಾದದ್ದು ಕಪೆÇೀಲ ಕಲ್ಪಿತ ಕಥೆಯಲ್ಲ”.ಈ ಸಾಲುಗಳೇ ನನ್ನ ಜೀವನದಲ್ಲಿ ಪ್ರಾಸಬದ್ಧವಾಗಿ ಬರೆಯಲು ಸ್ಪೂರ್ತಿಯಾಯಿತು.

ಸಂಜೆಯ ಸಮಾರಂಭದ ಆರಂಭದಲ್ಲಿ ಹೀಗೆ ಒಮ್ಮೆ ಮಾತಾಡಿದ್ದೆ. 
“ಸಣ್ಣನೆಯ ಸವಿಗಾಳಿಯ ಸಂಜೆಯ ಸಂಗೀತಕೆ ಹಿನ್ನೆಲೆಗಾಯನದಂತಾಗಲಿ, ಮೇಘರಾಜನ ಹರುಷದ ಚೆಲುವು ನಮ್ಮೀ ಕನಸಿನ ಹೊನಲು ಕದಡದಿರದಂತಾಗಲಿ, ನಾ ಪೇಳುವ ಸವಿಗನ್ನಡ ಸಿಹಿಮೆಲುನುಡಿಯು ಮುನ್ನೆಲೆಯ ಹರ್ಷೋದ್ಘಾರಕೆ ನಾಂದಿಯಾಗಲಿ”.
“ಕನ್ನಡತಿಯ ಕಮಲಮುಖಕೆ ಕಾಡಿಗೆಯ ಕಿಬ್ಬೊಟ್ಟು
 ಕಣ್ಮನ ಸೆಳೆಯುವಂತಿರಬೇಕು.
ಕಣ್ಣೆಂಬ ಕ್ಯಾಮರಾಗಳು ಕ್ಲಿಕ್ಕಿಸುತ್ತಿರಬೇಕು
ಕರತಾಡನವು ಕನ್ನಡಡಿಂಡಿಮ ಮೊಳಗಿಸುತ್ತಿರಬೇಕು
ಕಡೇಸಾಲಿನ ಕರ್ಕಶ ಕಿರುಚಾಟ ಸ್ಪೂರ್ತಿಯಾಗಲೇಬೇಕು
ನಾನೀಗ ವೇದಿಕೆಯಿಂದ ನಿರ್ಗಮಿಸಲೇಬೇಕು”.

ಭಾಷಣ ರಸವತ್ತಾಗಿ ಮಾಡಲು ಕನ್ನಡ ಸಾಹಿತಿಗಳ ಬರವಣಿಗೆಯು ಬಹಳ ಉಪಯುಕ್ತ ಹಾಗು ಓದು ಇನ್ನಷ್ಟು ಪ್ರಬುದ್ಧರನ್ನಾಗಿಸುತ್ತದೆ.ಉದಾಹರಣೆಗೆ,ಚನ್ನವೀರ ಕಣವಿಯವರ “ಮೌನಮೊಗ್ಗೆಯನೊಡೆದು ಮಾತರಳಿ ಬರಲಿ" ಎಂಬ ಸಾಲು ನನ್ನನ್ನು ತುಂಬಾ ಆಕರ್ಷಿಸಿತು. ಆ ಸಾಲುಗಳನ್ನು ಭಾಷಣದಲ್ಲಿ ಹೀಗೆ ವ್ಯಕ್ತಪಡಿಸಿದೆ.

“ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ವಿಸ್ಮಯಿಸುವ ಆಲಂಪಿನ ಇಂಪು ಹೊರಹೊಮ್ಮಲಿ
ನಾನಾಡುವ ಸಿಹಿಮಾತುಗಳು, ಮೃದುವಚನದಂತಿರುವ 
ನಿಮ್ಮ ಮಾತುಗಳನ್ನೇ ಸಾದರಪಡಿಸಿದಂತಾಗಲಿ"
ಕುಮಾರವ್ಯಾಸರ ಈ ಎರಡು ಸಾಲುಗಳಿಂದ ಪ್ರಭಾವಿತನಾಗಿ ಹೀಗೆ ಬರೆದೆನು.

“ಹಲಗೆ ಬಳಪವ ಪಿಡಿಯದಿದೊಂದಗ್ಗಳಿಕೆ 
ಬರೆದುದನಳಿಪುದಿದೊಂದಗ್ಗಳಿಕೆ
ರವಿ ಭಜಂತ್ರಿಯವರು ರಾಜ್ಯೋತ್ಸವಕ್ಕೆ ಬಂದಿರುವುದೇ ಒಂದು ಹೆಗ್ಗಳಿಕೆ
ಈ ಸಮಾರಂಭವ ನೆನೆದು ಆಗಲಿ ಆ ದೇವರಿಗೆ ಬಿಕ್ಕಳಿಕೆ
ಹಳೆಗನ್ನಡ ಕವಿಗಳ ಸಾಲುಗಳು ಹೀಗೆ ಆಗಲಿ ಸದ್ಬಳಕೆ"

ಮಾತುಗಳಲ್ಲಿ ತೂಕವಿರಬೇಕಾದರೆ ಓದು ಅತ್ಯವಶ್ಯ.ಒಮ್ಮೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಮಹದಾಯಿ ನದಿ ಯೋಜನೆಯ ವಿವಾದವನ್ನು ದಿನಪತ್ರಿಕೆಯಲ್ಲಿ ಓದುತ್ತಿದ್ದಾಗ ಈ ವಿಷಯದ ಬಗ್ಗೆ ಬರೆಯಬೇಕೆನ್ನಿಸುತ್ತದೆ.ತಕ್ಷಣವೇ ಬರೆದುಬಿಟ್ಟೆ.  

ಈ ಕವನವನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಹ್ವಾನವಿತ್ತಾಗ  ವಾಚಿಸಿದ್ದೆ.
“ಬಿತ್ತುವೆವು ಧಾತ್ರಿಗೆ ಕನಸುಗಳನು
ಒಮ್ಮೆ ಅರಳುವವು, ಮತ್ತೊಮ್ಮೆ ಬಾಡುವವು
ನೋವುಗಳು ಹೊಸವಲ್ಲ, ಹರುಷಗಳು ಹಳತಲ್ಲ
ಧರೆಗೆ ಜಲದ ಚುಂಬಕಗಳಲ್ಲವೇ, ಮುತ್ತುಗಳ ಆವಿಷ್ಕಾರಕೆ ||

ಧರೆಗಿಳಿಯಲು ಮಳೆರಾಯನಿಗೆ ಮುಂಗಾರಾದರೇನು
ಹಿಂಗಾರಾದರೇನು, ತಡವೇಕೆ? ಮುನಿಸೇಕೆ?
ಹದವಾದೊಡೆ ನೆಲವು ಹಿತವಾಗಲು ಬಹಳ ಬೇಕಿಲ್ಲ ಸುಸಮಯ
ಬಗೆದು ಬಿಗಿದಪ್ಪಲು ಅಣಿಯಾಗಿದೆ ಸಾವಯವ ಕೊಟ್ಟಿಗೆ ಗೊಬ್ಬರ!!

ಅತ್ತ ಸಮೃದ್ಧಿ, ಇತ್ತ ಹನಿ ನೀರಿಗೂ ಹಾಹಾಕಾರ
ಗೋಳು ಕೇಳುವವರಿಲ್ಲ, ಅವಳೋ? ಮಹದಾಯಿ
ಅಳುತಾ ಹೋಗುವಳು ಗಂಡ ಗೋವನ ಕಡೆಗೆ
ತವರಿಗೆ ಬರುವಾಸೆ, ಇಲ್ಲಿಯೋ ಎಡಬಿಡಂಗಿ ಸಹೋದರರು||

ನಾಡಿನೊಡೆಯನಿಗೋ, ಮೈಸೂರು ರಾಜರ ಠೀವಿ
ದೇಶದೊಡೆಯನಿಗೋ, ಹೂಡಿಕೆಯ ಸ್ಮಾರ್ಟ್ ಚಿಂತೆ
ಕೇಳುವವರಿಲ್ಲ ಬಯಲು ಸೀಮೆಯ ಅಳಲು
ಮಡುಗಟ್ಟಿದೆ ನಮ್ಮ ನೋವಿನ ಒಡಲು ”
ಹೀಗೆ ಕನ್ನಡ ಬರವಣಿಗೆ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದ್ದೆ. ಅದರಂತೆಯೇ ನಮ್ಮ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಪೂಜಾ ಪಟ್ಟಣರವರು ಕನ್ನಡದ ಬಗ್ಗೆ ಬರೆದಿದ್ದು ಹೀಗಿದೆ. 

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು
“ಆಯುಷ್ಯ ತೀರದೆ ಮರಣವಿಲ್ಲ,ಭಾಷೆ ತೀರದೆ ದಾರಿದ್ರ್ಯವಿಲ್ಲ” ಎನ್ನುವಂತೆ ಮಾತೃಭಾಷೆ ಹೀಗೆ ಹೆತ್ತ ತಾಯಿ ತನ್ನ ಮಕ್ಕಳನ್ನು ಸಾಕುವಂತೆ ಅನ್ನನೀಡುವ ಭಾಷೆಯಾಗಿದೆ ಆದರೆ  ನಾವು ಮಾತೃಭಾಷೆಯನ್ನು ಎಷ್ಟು ಪ್ರೀತಿಸುತ್ತಿದ್ದೇವೆ, ಕನ್ನಡ ಭಾಷೆಯನ್ನು ಎಷ್ಟು ತಿಳಿದುಕೊಂಡಿದ್ದೇವೆ? ಕನ್ನಡಿಗರಾಗಿ ಕನ್ನಡವನ್ನು ಉಳಿಸಿ, ಬೆಳೆಸಲು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ? ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

“ಕೂಹು ಕುಹೂ ಎಂದು ಕೂಗುವ ಕನ್ನಡದ ಕೋಗಿಲೆಯೇ ನಿನ್ನನ್ನು ಆಂಗ್ಲಕ್ಕೆ ತರ್ಜುಮೆ ಮಾಡಿದರೆ ನಿನಗೆ ನೊಬೆಲ್ ಪಾರಿತೋಷಕ ಸಿಕ್ಕಿತು” ಎಂದು ರಾಷ್ಟ್ರಕವಿ ಕುವೆಂಪು ಹೇಳಿರುವುದರಲ್ಲಿ ಸತ್ಯಾಂಶವಿದೆ. ಜಗತ್ತಿನ ಹಲವು ದೇಶಗಳಲ್ಲಿ ನಿರ್ದಿಷ್ಟವಾದ ಸಾಹಿತ್ಯದ ಪ್ರಕಾರವನ್ನು ಕಾಣಹುದು. ಆದರೆ ಜಗತ್ತಿನ ಎಲ್ಲಾ ಬಗೆಯ ಸಾಹಿತ್ಯದ ಪ್ರಕಾರಗಳನ್ನು ನಾವು ಕನ್ನಡ ಭಾಷೆಯಲ್ಲಿ ಕಾಣಬಹುದು. ಆದ್ದರಿಂದ ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಹೆಮ್ಮೆಯಿಂದ ಹೇಳಹುದು. ವಿಶ್ವಸಾಹಿತ್ಯಕ್ಕೆ ಕನ್ನಡದ ಏಕೈಕ ಕೊಡುಗೆ ಎಂದರೆ 12ನೇ ಶತಮಾನದ `ವಚನ ಸಾಹಿತ್ಯ'. ಹಾಗೇ ವಿಶ್ವಕ್ಕೆ ಪ್ರಪ್ರಥಮವಾಗಿ ವರ್ಗ-ವರ್ಣ-ಲಿಂಗಭೇದವಿಲ್ಲದೆ  ಪ್ರಜಾಪ್ರಭುತ್ವದ ಕಲ್ಪನೆ ನೀಡಿ ಪಾರ್ಲಿಮೆಂಟನ್ನು ಅಸ್ತಿತ್ವಕ್ಕೆ ತಂದ ಬಸವಾದಿ ಪ್ರಮಥರ ಅನುಭವ ಮಂಟಪ ವಿಶ್ವಕ್ಕೆ ಮಾದರಿಯಾಗಿದೆ. ಆದ್ದರಿಂದಲೇ ಇಂದು ಕನ್ನಡಿಗ ನೀರಜ್ ಪಾಟೀಲರ ಪರಿಶ್ರಮದಿಂದ ಇಂಗ್ಲೆಂಡಿನ ಥೇಮ್ಸ್ ನದಿಯ ತಟದಲ್ಲಿ ವಿಶ್ವಮಾನವ ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿದೆ. ಜಗತ್ತಿನ ಎಲ್ಲಾ ಸಂಗೀತದ ಪರಿಕರಗಳಿಂದ ಬರುವ ಸ್ವರನಿನಾದಗಳನ್ನು ನಮ್ಮ ಹಂಪೆಯ ಕಲ್ಲಿನ ಕಂಬಗಳು ಹೊರಸೂಸುತ್ತವೆ. ಕ್ರಿಸ್ತಪೂರ್ವದಲ್ಲಿಯೇ ಕನ್ನಡ ಭಾಷೆ ಪ್ರಬುದ್ಧಾವಸ್ಥೆಯಲ್ಲಿತ್ತು. ಕನ್ನಡ ಭಾಷೆಯಲ್ಲಿ ಬೃಹತ್‍ಗ್ರಂಥ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಇಂಗ್ಲೆಂಡ್,ಅಮೇರಿಕಾ ರಾಷ್ಟ್ರಗಳು ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಿದ್ದವು. ಕನ್ನಡ ನಾಡಿನ ಬಗೆಗೆ  ರಾಮಾಯಣ ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಹನುಮ-ಕಿಷ್ಕಿಂದದವನಾದರೆ,ದ್ರೋಣ-ರೋಣದವ, ಜನಮೇಜಯ ಸರ್ಪಯಾಗ ಮಾಡಿದ್ದು ಇಂದಿನ ಗದಗ (ಕರ್ದುಗ)ದಲ್ಲಿ.

ಐತಿಹಾಸಿಕ ಪುಟಗಳನ್ನು ಅವಲೋಕಿಸಿದಾಗ `ಸೂರ್ಯ ಮುಳುಗದ ಸಾಮ್ರಾಜ್ಯ' ಎಂದು ಮೆರೆದಾಡಿದ ಬ್ರಿಟಿಷರನ್ನು ಸೋಲಿಸಿದ ಪ್ರಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ, ಸಾವಿರಾರು ಮಹಿಳಾ ಸೈನಿಕರನ್ನು ಹೊಂದಿದ ಜಗತ್ತಿನ ಏಕೈಕ ರಾಣಿ ಬೆಳವಡಿ ಮಲ್ಲಮ್ಮ ಕನ್ನಡಿಗರು. ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗ, ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ, ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನರ ಕಲೆ ಸಾಹಿತ್ಯ ಸಂಸ್ಕøತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಕನ್ನಡ ನಾಡಿನ ಪ್ರತಿಯೊಬ್ಬ ಅರಸನ ಕಾಲದಲ್ಲಿ ಶಿಲೆಯಲ್ಲಿ ಕಲೆ ಅರಳಿದುದನ್ನು ಕಾಣಹುದು. ಮಹಾರಾಷ್ಟ್ರದ ಆರಾಧ್ಯದೈವ ಹಿಂದೂ ಧರ್ಮ ಉದ್ಧಾರಕ ಅರಸನೆಂದೇ ಪ್ರಖ್ಯಾತಿ ಪಡೆದ ಶಿವಾಜಿ ಮಹಾರಾಜ ಬೆಳವಡಿ ಮಲ್ಲಮ್ಮನ ಆಶ್ರಯ ಬಯಸಿದ್ದಲ್ಲದೇ ಪ್ರತಿವರ್ಷ ರಕ್ಷಾಬಂಧನವನ್ನು ಸ್ವೀಕರಿಸುತ್ತಿದ್ದ. ಇನ್ನೊಂದು ವಿಶೇಷವೆಂದರೆ ಶಿವಾಜಿಯ ಪೂರ್ವಜರು ಗದಗ ಜಿಲ್ಲೆಯ ಸೊರಟೂರದವರು ಎನ್ನಬಹುದು.

ಇನ್ನೂ ಎರಡನೆಯದಾಗಿ ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಮಹಾನ್ ಇಂಜನಿಯರ್ ಎಂ.ವಿಶ್ವೇಶ್ವರಯ್ಯನವರ ಜನ್ಮಭೂಮಿಯಾದರೆ, ಭಾರತರತ್ನ ನೋಬೆಲ್ ಪಾರಿತೋಷಕ ವಿಜೇತ ಸರ್.ಸಿ.ವ್ಹಿ.ರಾಮನ್‍ರ ಕರ್ಮಭೂಮಿ ಈ ಕರ್ನಾಟಕ.ಇಡೀ ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಕಾರ್ಯಾಗಾರ ಪ್ರಾರಂಭವಾದದ್ದು ಕ್ರಿ.ಶ. 1880ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಖಗೋಳಶಾಸ್ತ್ರದಲ್ಲಿ ಜಗತ್ತಿಗೆ ಕಾಲಚಕ್ರ (ಟೈಮ್ ಕ್ಲಾಕ್)ವನ್ನು ಪ್ರಥಮವಾಗಿ ಪರಿಚಯಿಸಿದವರು ವಿಜಯಪುರದ ಭಾಸ್ಕರ-2. ಸಂಗೀತ-ಲಲಿತಕಲೆಯಲ್ಲಿ ಕನ್ನಡವೆಂದು ನೋಡಲಾಗಿ ಹುಟ್ಟು ಕುರುಡರಾದರೂ ಸಂಗೀತ ಸಾಮ್ರಾಜ್ಯದ ಆರಾಧ್ಯ ದೈವರಾದವರು ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಪುಟ್ಟರಾಜ ಕವಿಗವಾಯಿಗಳು,ಬಸವರಾಜ ಮನ್ಸೂರ, ಗಂಗುಬಾಯಿ ಹಾನಗಲ್, ಭಾರತರತ್ನ ಭೀಮಸೇನ ಜೋಶಿ, ಸವಾಯಿ ಗಂಧರ್ವ ಮುಂತಾದವರು  ಕನ್ನಡಿಗರೆ. ಚಂದ್ರಶೇಖರ ಕಂಬಾರರ “ಸಾವಿರದ ಶರಣಮ್ಮಾ ಕನ್ನಡದ ತಾಯೆ” ಪದ್ಯದಲ್ಲಿ “ಬಾಗಿ ಬಂದವರಿಗೆ ಹೃದಯ ಭಾಗ ಕೊಡುವವಳೇ" ಎನ್ನುವುದು ಕಟುಸತ್ಯ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಂದಿವೆ. ಅವರಲ್ಲಿ 3ಜನರು ಮಾತೃಭಾಷೆ ಕನ್ನಡ ಅಲ್ಲದವರು,ಬೇಂದ್ರೆ, ಮಾಸ್ತಿ, ಕಾರ್ನಾಡ. ಕನ್ನಡ ನೆಲದ್ದೇ ಎಂದು ಪ್ರಖ್ಯಾತಿ ಪಡೆದ ಜಲಕನ್ನಿಕಾ, ದಿಕನ್ನಿಕಾ ಎಂಬ ನೃತ್ಯಗಳು ಇಂದು ಇಲ್ಲವಾಗಿ ಇಂಗ್ಲೆಂಡಿನ ಖ್ಯಾತ ನೃತ್ಯಗಳಾಗಿ ಪ್ರಸಿದ್ಧಿ ಪಡೆದಿವೆ.

ತಮಿಳಿನ ಶಬ್ದಕೋಶ(ನಿಘಂಟು)ದಲ್ಲಿ `ಕನ್ನಡ' ಪದದ ಅರ್ಥ ಶುದ್ಧ, ಪರಿಪೂರ್ಣ ಶಾಸ್ತ್ರೀಯ 
ಬದ್ಧ ಎಂಬ ಅರ್ಥವಿದೆ. ಆದರೆ ವಿಪರ್ಯಾಸವೆಂಬಂತೆ ಇಂದು ಕನ್ನಡ ಭಾಷೆ ಇತರೆ ಭಾಷೆಗಳ ಪ್ರಭಾವದಿಂದ ನಲುಗಿ ಹೋಗಿದೆ. ಆದ್ದರಿಂದಲೇ ಬೇಂದ್ರೆಯವರು “ಹರಗೋಣ ಬಾ ಹೊಲವ ಹಸನಾಗಿ ಹ್ಯಾಂಗ್ಯಾಂಗೋ ಬಿದ್ದದ ಕಾಲಕಸವಾಗಿ” ಎಂದಿದ್ದಾರೆ. ಕವಿರಾಜಮಾರ್ಗದಲ್ಲಿ “ಕಾವೇರಿ ಯಿಂದ ಗೋದಾವರಿವರೆಗೆ ಮಿಂದರ್ಪನಾಡು ಎನಿಸಿಕೊಂಡಿದ್ದು ಈಗ ಸೊರಗಿ ಹೋಗಿದೆ. ಇದಕ್ಕೆ ಕಾರಣ ಕನ್ನಡಿಗರ ನಿರ್ಲಕ್ಷ ಭಾವ ಕನ್ನಡದ ಭಾಷಾ ಪ್ರೇಮಕ್ಕಾಗಿ ನಾವು ಕನ್ನಡದ ಕಣ್ವ ಬಿ.ಎಂ.ಶ್ರೀ,  ಚಂಪಾ, ಸಿ.ಪಿ.ಕೆ., ಯು.ಆರ್.ಅನಂತಮೂರ್ತಿ, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ, ಸಿದ್ಧಲಿಂಗ ಪಟ್ಟಣಶೆಟ್ಟಿ ಅವರನ್ನು ಕಂಡು ಕಲಿಯಬೇಕು. ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯದ ಕೃಷಿ ಮಾಡಿದ್ದಾರೆ. ಯು.ಆರ್. ಅನಂತಮೂರ್ತಿ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಆಂಗ್ಲಭಾಷಾ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ವಿದ್ವತ್ತವನ್ನು ಪ್ರದರ್ಶಿಸಿದರೂ ಕನ್ನಡ ನೆಲದಲ್ಲಿ ಯಾವುದೇ ಸಭೆ ಸಮಾರಂಭಗಳಲ್ಲಿ ಅಪ್ಪಿತಪ್ಪಿಯೂ ಆಂಗ್ಲ ಪದಗಳನ್ನು ಬಳಸಲಿಲ್ಲ. ಹಾಗೇ ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದ ರೆವರೆಂಡ್ ಜಾರ್ಜ ಫರ್ಡಿನಾಂಡ್ ಕಿಟೆಲ್ ಜರ್ಮನ್‍ದಲ್ಲಿ ತಮ್ಮ ಕೊನೆಯುಸಿರು ಬಿಡುವ ಮುನ್ನ ನಾಲ್ಕು ಕನ್ನಡ ಪದಗಳನ್ನು ನನ್ನ ಕಿವಿಯ ಮೇಲೆ ಹಾಕಿ ಎಂದು ಬೇಡಿಕೊಂಡರು. ಇಂತಹ ಮಹನೀಯರನ್ನು ಚಿರಕಾಲ ಸ್ಮರಿಸಬೇಕು. ಅಮೇರಿಕಾದ ಪ್ರತಿಷ್ಠಿತ ಪ್ರಶಸ್ತಿಯಾದ ಕಿಂಟಕಿ ಕರ್ನಲ್‍ನ್ನು ಪಡೆದ ಭಾರತದ ಏಕೈಕ ವ್ಯಕ್ತಿ ಡಾ. ರಾಜಕುಮಾರ.ತಮ್ಮ ಜೀವಿತಾವಧಿಯಲ್ಲಿ ಎಂದೂ ಅನ್ಯಭಾಷೆಗಳಲ್ಲಿ ನಟಿಸಲಿಲ್ಲ. “ಕನ್ನಡ, ಕನ್ನಡ ಹಾ ಸವಿಗನ್ನಡ, ಕನ್ನಡ ಎನೆ ಕಿವಿ ನಿಮಿರುವುದು", “ಸಿರಿವಂತನಾದರೂ ಕನ್ನಡನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ” ಎಂಬ ಆತ್ಮಾಭಿಮಾನ ಎಲ್ಲರಲ್ಲೂ ಮೂಡಬೇಕಾಗಿದೆ. ಕನ್ನಡ ಲಿಪಿಯನ್ನು ಡಾ|| ಡಿ.ಎಸ್.ಕರ್ಕಿಯವರು “ಎಂತಹ ಚೆಂದದ ಬಳ್ಳಿ ಚೆಲ್ವರಿಹುದಿಲ್ಲಿ ಚೆಲುವನರಸುವ ಜಾಣ ಬಂದು ನೋಡು, ಕನ್ನಡದ ಲಿಪಿಯಲ್ಲಿ ಕನ್ನಡ ಕಲೆಯಲ್ಲಿ ಎಲ್ಲನೆ ನಿಲುಕಿನಿಂದಿರುವುದು ನೋಡಿ ಹಾಡು” ಕನ್ನಡ ನೆಲ ಶ್ರೀಗಂಧದ ಗುಡಿಯಾಗಿದ್ದು ತನ್ನ ಒಡಲಾಳದಲ್ಲಿ ಹಲವು ಐತಿಹ್ಯಗಳನ್ನು ಇಟ್ಟುಕೊಂಡಿದೆ. ಬೇಲೂರು, ಹಳೇಬೀಡಿನ ಶಿಲ್ಪ ಕಲಾಕೃತಿಗಳು ಭವಿಷ್ಯತ್ತಿನ ಸಾವಿರ ವರ್ಷಗಳ ಅಧ್ಯಯನಕ್ಕೆ ಪೂರಕವಾಗಿವೆ. ಆದರೊಂದೆ ಕೊರಗು ಕನ್ನಡಿಗರು ತಮ್ಮ ನೆಲ-ಜಲ-ಭಾಷೆಯ ಮಹತ್ವ ಅರಿಯದೆ ಒಣ ಪ್ರತಿಷ್ಠೆಗಾಗಿ ಅನ್ಯ ಭಾಷಾ ವ್ಯಾಮೋಹಕ್ಕೆ ಒಳಗಾಗಿರುವುದು ವಿಷಾದನೀಯ. ಮಹಾರಾಷ್ಟ್ರದಷ್ಟಿರುವ ಇಂಗ್ಲೆಂಡ ದೇಶದ ಭಾಷೆ ಇಂದು ಇಡೀ ವಿಶ್ವದಲ್ಲಿ ಮಾತನಾಡುವ ಭಾಷೆಯಾಗಿದೆ. ಅವರಲ್ಲಿ ಭಾಷಾ ಪ್ರೇಮವಿದೆ. ಅದನ್ನು ನಾವೂ ಗೌರವಿಸೋಣ, ಹಾಗೇ ನಮ್ಮ ಭಾಷೆಯನ್ನು ಅವರ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸೋಣ. 
ಸಿರಿಗನ್ನಡಂ ಗೆಲ್ಗೆ | ಸಿರಿಗನ್ನಡಂ ಬಾಳ್ಗೆ.

ಭಾಷಾಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಭಾಷಾಭಿಮಾನ, ಬರವಣಿಗೆ ಶೈಲಿಗಳನ್ನು ಕಲಿಯುತ್ತೇವೆಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಂದ ಬಹಳಷ್ಟು ಭಾಷಾಭಿಮಾನ ಹಾಗೂ ಭಾಷಾಜ್ಞಾನವನ್ನು ಕಲಿತಿದ್ದೇನೆ. ಅವರೆಲ್ಲರಿಗೂ ಧನ್ಯವಾದಗಳು. 
ಕನ್ನಡ ಸಾಹಿತ್ಯಕ್ಕೆ ಹಲವರ ಕೊಡುಗೆ ಇದೆ. ಭಾಷಾಭಿಮಾನಿಗಳಾಗಿರುವ ನಮ್ಮ ಟಂ ಟಂ, ಆಟೋ ಡ್ರೈವರ್‍ಗಳೆಲ್ಲ ತಮ್ಮ ವಾಹನಗಳಿಗೆ ಪಂಚಿಂಗ್ ನುಡಿಗಳನ್ನು ಬರೆಸಿರುತ್ತಾರೆ. ಉದಾಹರಣೆಗೆ “ಗುಡ್ಡದ ಒಡೆಯ”, “ಹಾಲುಮತದ ಹುಲಿ”, “ಭಂಡಾರದ ಒಡೆಯ”, “ಹಠವಾದಿ”, “ಕನಸುಗಾರ” ಹೀಗೆ  ಅಂತರಾಳದ ಕನ್ನಡತನವನ್ನು ಹೊರಹಾಕಿರುತ್ತಾರೆ. ಅದರಲ್ಲಿಯೂ ಕೆಲವೊಬ್ಬರು ಹಾಸ್ಯವನ್ನು ಪರಿಗಣಿಸಿ ಹೀಗೆ ಬರೆಸಿರುತ್ತಾರೆ.

“ಮಲ್ಲಿಗೆ, ನೀ ಎಲ್ಲಿಗೆ, ಹತ್ತು ಬಾ ನನ್ನ ಪಲ್ಲಕ್ಕಿಯನು”
“ಮಲ್ಲಿಗೆ, ನೀ ಎಲ್ಲಿಗೆ ಹತ್ತು ಬಾ ನನ್ನ ಅಂಬಾರಿಯನು”
“ಅವಳ ನಗೆ, ಈಗ ನನ್ನ ಬಾಳಿನಲ್ಲೇ ಹೊಗೆ”
“ಈಕೆ ಓಕೆ, ಆಕೆ ಜೋಕೆ"
“ತುಮಕೂರು ತಂಗಾಳಿ, ಬೆಂಗಳೂರು ಬಿರುಗಾಳಿ”
“ಅವಳು ನನ್ನ ನೋಡಿ ನಕ್ಕಳು, ನಮಗೀಗ ಇಬ್ಬರು ಮಕ್ಕಳು"
ಮೊನ್ನೆ ಬೆಂಗಳೂರಿನಲ್ಲಿದ್ದಾಗ, ಆಟೋ ಡ್ರೈವರ್ ಈ ಕೆಳಗಿನಂತೆ ತನ್ನ ಆಟೋ ಮೇಲೆ ಬರೆಸಿದ್ದನು.
“ನನ್ ಮಗಂದ್, ಮೀಟರ್ ಇದ್ರೆ ನನ್ನ ಆಟೋ ಹತ್ತು, ಮೀಟರ್ ಬಿಲ್ಲೇ ತಗೊಳ್ಳಲ್ಲ"
ಕೆಳಗಡೆ ಸಣ್ಣದಾಗಿ – ಹುಚ್ಚು ನಾಗ್ಯಾ, ನಖರ ಮಾಡಿದ್ರೆ ಹೆಡೆ ಎತ್ತಿಬಿಡ್ತೀನಿ. ಹೀಗೆ ಕನ್ನಡತನವನ್ನು ಉಳಿಸುವ, ಬೆಳೆಸುವ ಕೆಲಸವು ಸದ್ದಿಲ್ಲದೆ ನಡೆಯುತ್ತಿದೆ. 

ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕನ್ನಡತನದ ಕಿಚ್ಚು ಹಬ್ಬಿದ ಕೆಲವು ಕವಿಗಳ ಸಾಲುಗಳು.
ಸಂ.ಶಿ. ಭೂಸನೂರಮಠರವರ “ಮನದ ಇಳೆಯ ಹಸುರಿನಲ್ಲಿ ಗುಣದ ಬೆಳೆಯ ಸುಳಿಯ ತೆಗೆದು ಒಳಗೆ ದೀಪ ಹಚ್ಚಿನಲಿದು, ಬೆಳಕಿನೊಳಗೆ ಬೆಳಕು ಕಾಣೆ ಎಂದಿಗೂ ದೀಪೆÇೀತ್ಸವ”
ಕುಮಾರವ್ಯಾಸರು ಕನ್ನಡಿಗರ ಬಗ್ಗೆ ಹೀಗೆ ಅಭಿಮಾನದಿಂದ ಹೇಳಿದ್ದಾರೆ. 
“ಹಲಗೆ ಬಳಪವ ಪಿಡಿಯದಿದೊಂದಗ್ಗಳಿಕೆ
ಬರೆದುದನಳಿಪುದಿದೊಂದಗ್ಗಳಿಕೆ
ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಿಮತಿಗಳ್”
ಕವಿರಾಜಮಾರ್ಗದಲ್ಲಿ “ಶ್ರೀ ವಿಜಯ”ನು ಕನ್ನಡಿಗರ ಬಗ್ಗೆ ಎಲ್ಲರಿಗಿಂತ ಮುಂಚೆಯೇ ಈ ರೀತಿ ಹೇಳಿದ್ದಾನೆ.
“ಪದನರಿದು ನುಡಿಯಲುಂ ನುಡಿದುದನರಿಯಲುಮಾರ್ಪರಾ
ನಾಡವರ್ಗಳ್, ಚದುರರ್ ನಿಜದಿಂ ಕುರಿತೋದದೆಯುಂ
ಕಾವ್ಯಪ್ರಯೋಗ ಪರಿಣತಮತಿಗಳ್”

ಮುಂದುವರೆಯುವುದು….


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x